ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವಗಂಗೆಯು ಹರಿಯುತಿರಲು ತೀರದಲ್ಲಿ ನಾ ಬಾವಿಯನು ತೋಡುತಲಿ ಬಲು ಬಳಲಿದೆ ಪ ಗೋವು ಕರೆಯುವ ಕ್ಷೀರ ಕೊಡಕೊಡದಿ ತುಂಬಿರಲು ಬೇವಿನೆಣ್ಣೆಯ ಬಯಸಿ ಬಳಲಿ ಬೆಂದೆ ಅ.ಪ ಅರಸುತನದಲಿ ಆಳುತಿರುವ ಸ್ಥಾನವನು ನಾ ಮರೆತು ಕಡು ಹೇಡಿಯಂದದಿ ನಡೆದೆನೊ ದುರಿತರಾಶಿಗಳನ್ನು ತರಿವ ಮಂತ್ರಗಳರಿತು ಕುರುಬ ಹೊದ್ದಿರುವ ಕಂಬಳಿ ಬಯಸಿದೆ 1 ವೇದಾಂತ ಸಾಮ್ರಾಜ್ಯದಧಿಕಾರದಲಿ ಕುಳಿತು ಕಾದ ಮರುಭೂಮಿ ರಾಜ್ಯವ ಬಯಸಿದೆ ಆದರದಿ ಕರೆದು ಬಡಿಸುವರ ಭೋಜನ ತೊರೆದು ಮೂದಲಿಸುವರನು ಬೇಡಿದೆನನ್ನವ 2 ನೀಗಿ ಪುಣ್ಯವು ನಿನ್ನ ದಯವು ತಪ್ಪಿದ ಮೇಲೆ ಕೈಗೊಂಬೆ ಕರಡಿಯಾಗುವುದು ಕ್ಷಣದಿ ರಾಗಗಳ ಕಳೆದು ಮನವಚನ ಕಾಯಗಳನ್ನು ಬೇಗ ನಿನ್ನಡಿಗಳಿಗೆ ಸೆಳೆಯಲೋ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು
ನಂಬಿ ನೆಚ್ಚದಿರು ನರಲೋಕ ಸುಖವೆಂಬ, ಅಂಬಲಿ ಪರಮಾನ್ನ ಪ ಹಂಬಲಿಸುವುದು ಹರಿಲೋಕಾನಂದವೆಂಬ ಪೀಯೂಷಪಾನ ಅ.ಪ ನೊಣ ಬೆರಸಿದ ಊಟ ಪರಮಭಾಗವತರ ಪದಸಂಗವೆಂಬುದು ಮಸ್ತಕದ ಮಕುಟ ಕೇವಲ ಯಮಕಾಟ ಪರತತ್ವವಾದ ಶ್ರೀಹರಿಯ ತಿಳಿವುದೆ ವೈಕುಂಠಕೆ ಓಟ 1 ಹಾರಿ ಹೋಗುವ ಹೊಟ್ಟು ಇದ್ದಾಗ ದಾನ ಧರ್ಮಂಗಳ ಮಾಡೋಡು ಕೈವಲ್ಯಕೆ ಮೆಟ್ಟು ಹೊದ್ದಿರುವರ ಕಂಡಾಸೆಯಪಟ್ಟರೆ ಹೋಗುವಿ ನೀ ಕೆಟ್ಟು ಬುದ್ಧಿಹೀನರಿಗೆ ಪೇಳದಿರೆಲೊ ತತ್ವಸಾರ ಸುಂದರ ಗುಟ್ಟು 2 ಅಲ್ಪಾವಕಾಶವು ಈ ಶರೀರವು ಗಾಳಿಗೊಡ್ಡಿದ ದೀಪ ನೋಡು ಹಾಲುಸಕ್ಕರೆ ತುಪ್ಪ ಬಲ್ಪಂಥ ಮಾಡದಿರು ಜನ್ಮಜನ್ಮದಲಿ ಬಿಡದೆಲೊ ಸಂತಾಪ ಸ್ವಲ್ಪಕಾಲಾದರೂ ಮಧ್ವಮತವೊಂದು ಭವವೇ ನಿರ್ಲೇಪ3 ಕರ್ಮ ಆವುದಾದರು ಸೂಳೆಗಿಕ್ಕ್ಕಿದ ವಿತ್ತ ಹರಿಗೆ ವಿಶ್ವಾಸದಿ ಅಣುಮಾತ್ರ ಅರ್ಪಿಸೆ ಅವನೆ ನಿರ್ಮಲ ಚಿತ್ತ ನಿರುತಗ್ರಾಸಕೆ ಚಿಂತೆಮಾಡಲು ಒದಗದು ಪುಣ್ಯವು ನಿನಗೆತ್ತ ಅರೆಮನವಿಲ್ಲದೆ ದೃಢಮನದಿಪ್ಪುದೆ ಸಂಪಾದನೆ ಭತ್ಯ4 ಭಾವವಿರಕ್ತಿಯ ವಹಿಸದಿದ್ದರೆ ನಿನಗಾಗುವುದು ಖೇದ ಪರಿಪರಿಯಾಸ್ವಾದ ದೇವಕಿಸುತ ನಮ್ಮ ವಿಜಯವಿಠ್ಠಲನಂಘ್ರಿ ತೀರುಥ ಪ್ರಾಸಾದ ನಿತ್ಯ ನರಕವಾಸ ಎನ್ನತಲಿದೆ ವೇದ 5
--------------
ವಿಜಯದಾಸ
ಮಾಯದೂರನೆ ಎನ್ನ ಮಾಯ ಬಿಡಿಸಯ್ಯ ಮಾಯದಲಿ ಸಿಲ್ಕಿ ಬಲು ಬಳಲುವೆನಭವ ಪ ಮಾಯದಿಂ ಜನಿಸಿ ನಾ ಮಾಯದಿಂ ಬೆಳೆದಿರುವೆ ಮಾಯವನೆ ಉಟ್ಟು ನಾ ಮಾಯ ತೊಟ್ಟಿರುವೆ ಮಾಯವನೆ ಹಾಸಿ ನಾ ಮಾಯವನೆ ಹೊದ್ದಿರುವೆ ಮಾಯದಲಿ ಬಿದ್ದು ಬಲು ಒದ್ದಾಡುತಿರುವೆ 1 ಮಾಯಕ್ಕೆ ಸತಿಯೆಂದು ಮಾಯಕ್ಕೆ ಸುತರೆಂದು ಮಾಯಕ್ಕೆ ಬಂಧೆಂದು ಮಾಯದ್ಹಿಗ್ಗಿದೆನೋ ಮಾಯಸಂಸಾರದ ಮಾಯನರಿಯದೆ ನಾನು ಮಾಯ ಮೋಹಿತನಾಗಿ ಬಾಯ್ಬಿಡುವೆ ಸತತ 2 ಮಾಯವನು ಕಲ್ಪಿಸಿ ಮಾಯವನೆ ಕುಣಿಸಾಡಿ ಮಾಯದಾಟಾಡುವಿಯೊ ಮಾಯವನು ತುಂಬಿ ಮಾಯಮಹಿಮನೆ ನಿನ್ನ ಮಾಯ ಬಲ್ಲವರಾರು ಮಾಯದಿಂದುಳಿಸೆನ್ನ ಕಾಯೊ ಶ್ರೀರಾಮ 3
--------------
ರಾಮದಾಸರು
ಕಾಗೆ ಕಾಕಾ ಎನಲು ಹಕ್ಕಿ ಚಿಲಿಪಿಲಿ ಎನಲು |ಕೋಗಿಲೆಯು ಸ್ವರಗೈಯ್ಯಲು-ಕೃಷ್ಣ-|ನಾಗಸಂಪಿಗೆ ಅರಳಲು ಪಎದ್ದು ಮುಖ ತೊಳೆಯೇಳು ತಿದ್ದು ಕಸ್ತುರಿ ತಿಲಕ |ಮುದ್ದೆಬೆಣ್ಣೆಯ ನಿನಗೆ ನಾನು ಕೊಡುವೆ ||ಹೊದ್ದಿರುವ ಕತ್ತಲದು ಹರಿದು ಬೆಳಗಾಯಿತೊ |ನಿದ್ದೆ ತಿಳಿದೇಳಯ್ಯ ಕೃಷ್ಣ 1ಬಿಸಿಯ ದೋಸೆಯ ಹೊಯ್ದು ಮೊಸರುಗಡ್ಡೆಯ ತೆಗೆದು |ಹೊಸದಾದ ಹಸುವಿನೀ ತುಪ್ಪವನ್ನು ||ಹಸನಾದ ಕಲಸನ್ನ ಹೆಸರು ಬೇಳೆಯ ಹುಗ್ಗಿ |ಹಸುಳೆ ನಿನಗಾರೋಗಣೆಗೆ ಮಾಡುವೆ 2ಎಂದಿಲ್ಲದಾ ಹಟವನಿಂದೇಕೆ ಮಾಡುತಿಹೆ |ಕಂದರೊಳಗತಿ ನೀನು ಹಟಿಯಾದೆಯ ||ಇಂದುನೀನತ್ತರೇ ಎತ್ತಿಕೊಳ್ಳುವರಿಲ್ಲ |ಕಂದ ಅಳಬೇಡವೊ ಪುರಂದರವಿಠಲ 3
--------------
ಪುರಂದರದಾಸರು