ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಇ) ಆತ್ಮನಿವೇದನೆ ಏನು ಮಾಡಲಿ ವೆಂಕಟೇಶ ಈ ಬೆಳೆಯು ಸೋನೆಯಿಲ್ಲದೆ ಉರಿದುದು ಪ ನಾನಾ ಪ್ರಕಾರದೊಳು ಹಾನಿಯಾಯಿತು ಇರವು ಹೀನರಾದೆವು ನಾವು ಶ್ರೀನಿವಾಸನೆ ಕೇಳು ಅ.ಪ ಮೂಡದೆಸೆಯಳು ಬಂದುದು, ಆ ಮಳೆಯು ಬಡಗದೆಸೆಯಳು ಸುರಿದುದು ಎಡಬಿಡದೆ ತೆಂಕ ಕಡೆಯಲಿ ಹೊಡೆದ ಮಳೆಯು ತಾ ನಡುವೆ ಬಿಡುವುದು ಯಾತಕೆ 1 ಕಟ್ಟುಕಡು ಮದಗ ಸಹಿತ, ಈ ಊರ ತಲೆ ಗಟ್ಟಿನೊಳು ನಾ ಕಾಣೆನು ಕೆಟ್ಟು ಹೋಯಿತು ಮಳೆಯು ಹೊಟ್ಟೆಯನು ಉರಿಸುತ್ತ ದೃಷ್ಟಿಯಲಿ ನೋಡು ನೀನು 2 ಮಳೆಯಿಲ್ಲದಿಳೆಯಾರಿತು, ನಟ್ಟಿರ್ದ ಫಲವೆಲ್ಲ ಬೆಳೆ ಕೆಟ್ಟಿತು ಸ್ಥಳದ ತೆರಿಗೆಯ ಬಿಟ್ಟು ಕಳುಹುವನೆ ದೊರೆ ತಾನು ಎಳೆದೆಳೆದು ಕೊಲುವನಲ್ಲ 3 ಕಷ್ಟ ಬಂದುದು ನಮ್ಮ ಕಡೆಗೆ, ಈ ವೃಷ್ಟಿ ಬಿಟ್ಟು ಪೋದುದು ಇಳೆಯನು ಸುಟ್ಟ ಊರೆಲ್ಲವನು ತಟ್ಟಿನಾರಿದ ಮೇಲೆ ಮುಟ್ಟಿ ನೋಡುವರಿಲ್ಲವೊ 4 ಹದಿನಾಲ್ಕು ಲೋಕವನು ನೀ ನಿನ್ನ ಉದರದೊಳಗಳವಟ್ಟಿಹೆ ಬೆದರುತಿದೆ ಈ ಲೋಕ ಒದರುವುದು ಜನರೆಲ್ಲ ಉದುರದೇತಕೆ ಇಳೆಗೆ ಮಳೆಯು 5 ಎಲ್ಲ ಬೇಡಿಯೆ ಕೊಂಬರು, ಈ ಹರಕೆ ಯಲ್ಲಿ ಅಂತರಬಾರದು ಹಲ್ಲು ಬಾಯಾರಿರ್ದ ಮಕ್ಕಳಿಗೆ ಎಳೆನೀರು ಬೆಲ್ಲವಾಗಿಹ ಮಳೆಯನೆರೆಯೊ 6 ನೀಲಮೇಘಶಾಮ ವರ್ಣ, ಕಾಣಲಾ ಮೂಲೋಕದೊಡೆಯಾ ನಿನ್ನ ಕಾಲಮೇಘವು ನಿನಗೆ ದೂರವಾಗುವುದುಂಟೆ ಆಲಸ್ಯ ಮಾಡಬೇಡ 7 ಬಡವರೆಲ್ಲರು ಕೂಡಿಯೇ, ಒಪ್ಪು ಕೈ ವಿಡಿದು ಬೇಡಿಯೇ ಕೊಂಡೆವು ಸಿಡಿಲು ಮಳೆ ಮಿಂಚುಗಳು ಹೊಡಕರಿಸಿ ಬರುವಂತೆ ಒಡೆಯ ದಯದೋರೊ ನೀನು 8 ಸ್ವಾಮಿ ನಿನ್ನಯ ನಾಮವು, ಜನರಿಂಗೆ ಕಾಮಿತಾರ್ಥವನೀವುದು ಪ್ರೇಮವಾಗಿಹ ಮಳೆಯ ಭೂಮಿಯಲಿ ಇಳಿಬಿಟ್ಟು ನಾಮವಾಗೆವು ಸ್ವಾಮಿ ವರಾಹತಿಮ್ಮಪ್ಪ 9
--------------
ವರಹತಿಮ್ಮಪ್ಪ
ಒಂದು ಪ್ರಾರ್ಥಿಸಲು ನೂರೊಂದು ಕೊಟ್ಟಿಯೊ ದೇವ ತಂದೆ ನಿನ್ನಯ ಕರುಣವೆಂದಿಗೂ ಇರಲಿ ಪ ಇಂದು ನೀನಿತ್ತ ನೂರೊಂದು ನಿನ್ನಯ ಪಾದ ದ್ವಂದ್ವಕರ್ಪಿಸುವೆ ನಿನ್ನಯ ಸೇವೆ ಎಂದೆನುತ ಅ.ಪ ನಿನ್ನ ಮೂರ್ತಿಯ ನೋಡಿ ನಿನ್ನ ಸ್ತುತಿಯನೆ ಮಾಡಿ ನಿನ್ನ ಕರದಲಿ ಪಿಡಿದು ಪುಣ್ಯಗಳಿಸಿದೆನೊ ನಿನ್ನ ಸುಂದರ ರೂಪ ಸತತ ಹೃದಯದಿ ಪೊತ್ತು ಧನ್ಯನಾಗಿರುವೆನಿನ್ನೇನು ಬೇಕಿಹುದೆನಗೆ 1 ನಿಟ್ಟುಸಿರು ಬಿಡಿಸಿದೆಯೊ ಹೊಟ್ಟೆಯನು ಸುಡಿಸಿದೆಯೊ ಕಟ್ಟಕಡೆಯಲಿ ಕರವನಿತ್ತು ಮೇಲೆತ್ತಿದೆಯೊ ಕಟ್ಟುಬಣ್ಣವಿದಲ್ಲ ಸುಟ್ಟರಿದು ಪೋಗದೊ ಘಟ್ಟಿಯಾಯಿತು ಎನ್ನ ಪ್ರೇಮ ನಿನ್ನೊಳಗೆ 2 ಕೆಸರಿನಲಿ ಕಂಬದಂತಿದ್ದ ಎನ್ನಯ ಸ್ಥಿತಿಯು ಕುಸಿಯಲಿಲ್ಲವೊ ದೇವ ಶಶಿಕುಲ ಪ್ರಸನ್ನ ಹೊಸದಾದ ಚೈತನ್ಯವೆನಗೆ ವಿಕಸಿತವಾಯ್ತು ಉಸಿರಿರುವ ತನಕ ನಾ ಮರೆವುದಿಲ್ಲವೊ ನಿನ್ನ 3
--------------
ವಿದ್ಯಾಪ್ರಸನ್ನತೀರ್ಥರು
ಕಲಿರಾಯ ಬಂದಿಹನು ಕಾಣಿಕೆಯ ಪಿಡಿದು ಚೆಲುವಿನಿಂದನುಸರಿಸಿ ಕುಲವನುದ್ಧರಿಸಿ ಪ ಮೂರು ಯುಗದೊಳು ತಾನು ಸೇರಿಕೊಂಡನು ವನವ ಚೋರರಾಯರ ಸಂಗ ಬೇಡವೆನುತ ವೀರನಾಗಿಯೆ ಬಂದ ನಾಲ್ಕನೆಯ ಯುಗದೊಳಗೆ ಸಾರಿ ಬನ್ನಿರೊ ನಮ್ಮ ದೊರೆಯ ಮನ್ನಿಸಲು 1 ಮದಮುಖರ ಕಾಣುತಲೆ ಮುದದಿಂದ ಮನ್ನಿಸುತ ಕದನಕರ್ಕಶರನ್ನು ಕಾಮಿಸುವನು ಒದಗಿದನ್ಯಾಯಗಳನೊಲಿಸಿಕೊಂಬನು ತಾನು ಬೆದರಿಕೆಯು ಬೇಡ ನೀವಿದಿರುಗೊಳ ಬನ್ನಿ 2 ಸತ್ಯವೆಂಬುದನೆಲ್ಲ ಹತ್ತಿಸಿದ ಬೆಟ್ಟವನು ಮಿಥ್ಯ ನಿರ್ಮಳಕೆಲ್ಲ ಕುತ್ತಿಗೆಗೆ ಬಂತು ಒತ್ತಿಯಾಳುವ ಧರ್ಮ ಸತ್ತು ಹೋದನು ಹಿಂದೆ ಮೃತ್ಯು ಭಯ ನಮಗಿಲ್ಲ ಹತ್ತಿರಕೆ ಬನ್ನಿ 3 ತಪ್ಪಿ ಹೋಯಿತು ಶಾಸ್ತ್ರ ತಪ್ಪಾಯ್ತು ಪೌರಾಣ ಮುಪ್ಪು ಬಂದುದು ವೇದ ಕಪ್ಪಾದನಗ್ನಿ ತುಪ್ಪನ್ನ ಬೇಡವಗೆ ಇಪ್ಪ ಭಯಗಳು ಹೋಯ್ತು ಒಪ್ಪಿ ಕಾಣಿಸಿಕೊಂಡು ಸುಖಿಯಪ್ಪ ಬನ್ನಿ 4 ಸ್ನಾನವೆಂಬುದು ಯೆಲ್ಲ ಮಾನಿನಿಯ ಅಡಿಗೆಯೊಳು ಮೌನ ಜಪಗಳನೆಲ್ಲ ಕೃಷಿಕೊಂಡನು ಹಾನಿಯಾದರು ಯಜ್ಞಹೀನರಾದರು ಪಿತೃಗ ಳೇನ ಮಾಡುವರಿವರು ಅನುಮಾನ ಬೇಡೆನುತ 5 ದಯಯೆನಿಪವನು ಹೋಗಿ ಕೊಯ್ಸಿಕೊಂಡನು ಕೊರಳ ಭಯವಿಲ್ಲ ಹಿರಿಯರೂ ವ್ಯಯವ ಸೇರಿದರು ನಯನೀತಿ ಹೇಳುತಿಹ ಗುರುವಿನೊಳು ಕಣ್ಣಿಲ ್ಲ ಜಯವಾಯ್ತು ದೇಶದೊಳು ಹೊಯ್ಸಿ ಡಂಗುರುವ 6 ಶಿವನು ದುರ್ಗವ ಬಲಿದ ಜವನು ದಂಡವನಿಟ್ಟ ಬವಣೆಬಡುವನು ಕಮಲಭವನು ತನ್ನೊಳಗೆ ಹವಣನರಿಯದೆ ವಿಷ್ಣು ತವಕಿಸುವ ಮನದೊಳಗೆ ಕವಲು ಮನ ಬೇಡಿರಲು ಬಹುದು ಇವನೊಳಗೆ 7 ಪತಿಯ ಮರೆತಳು ಸತಿಯು ಸುತ ಮತಿಯ ತಪ್ಪಿದನು ಯತಿ ಸತತ ಮನದೊಳಗೆ ಖತಿಗೊಂಬನು ಚತುರವರ್ಣಾಶ್ರಮವ ಜೊತೆಯಾಗಿ ನಡೆಸುತಿಹ ಮತಿಯುತನು ದೃಢವೆಂದು ಕಾಯವನುಸರಿಸಿ8 ತಾಯಿ ತಂದೆಯ ಕೊಂದು ಜೀವ ಹಾನಿಯ ಮಾಡಿ ಬಾಯ ಹೊಯ್ದರು ಕೇಳ ಬಡವರನ್ನು ಮಾಯವಾದಿಯ ಮಾತು ಕೂಡಿಸುವ ಜೀವವನು ರಾಯರಾಯರ ಮುಂದೆ ನಡೆಸುತ್ತಲಿಹರು 9 ಆಡಿಗಾರರ ತಂದು ನಾಡ ಊಳಿಗಕಿಡುವ ನೋಡಿದನ್ಯಾಯ ಮಾತುಗಳ ಹಿಡಿತರುವನು ಕೂಡಿಸುವ ಜೀವವನು ಎಳೆನೀರು ಸಕ್ಕರೆಯು ಬೇಡಿದಿಷ್ಟಾರ್ಥದೊಳು ನೋಡಿ ನಡೆಸುವನು 10 ಕೆಟ್ಟನೀತಿಯ ಒಳಗೆಯಿಟ್ಟುಕೊಂಡರೆ ನಿಮ್ಮ ಗಟ್ಟಿಬಡಿಸುವ ದೊರೆಯು ದೃಷ್ಟಿಯಲಿ ನೋಡ ಕಷ್ಟವಿಲ್ಲದೆ ಸುಖದಿ ಹೊಟ್ಟೆಯನು ಹೊರಕೊಂಡು ಸೃಷ್ಟಿಯೊಳು ವರಪತಿಯ ಮುಟ್ಟಿ ಸೇವಿಪುದು 11 ಕಾಲದರಸಿನ ನೋಡಿ ಮೂಲ ಪಡಕೊಂಬುವರು ಆಲಸ್ಯವನು ಬಿಟ್ಟು ಸೇವಿಸುವುದು ಶಾಲು ಸಕಲಾಭರಣ ತೋಲಾಗಿ ಬರುತಿಹುದು ಜಾಲರೂಪವದಾಗಿ ಮನಕೆ ತೋರುವುದು 12 ತಾಯಿ ತಂಗಿಯರನ್ನು ಮೋಹಿಸಲು ದೊರೆರಾಯ ಬಾಯಹೊಯಿಯೆಂದೆನುತ ನೋಯನುಡಿ ಪೇಳ ಆಯವಾಗಿಹ ಪುರುಷ ಸಾಯಲಾಕ್ಷಣ ಬಂದು ಕಾಯವನು ಬಳಸುವನು ಮೋಹವನು ತೋರಿ13 ಹೀಗೆಂದು ಚರನೋರ್ವ ಕೂಗಿ ಕರೆಯಲು ಬಂದು ಅಗಲೇ ಎದ್ದು ಇದಿರಾಗಿ ಪರಿಜನವು ಬೇಗದೊಳಗನುಸರಿಸಿ ಭೋಗವನು ಕೈಕೊಂಡು ರಾಗದೊಳಗಿದ್ದರಾ ಭವಜಲದ ನಡುವೆ 14 ಹೇಡಿಗಳು ಬರಬೇಡಿ ಮೂಡ ಗುಡ್ಡೆಯ ಸೇರಿ ಕಾಡಫಲವನು ಮೆದ್ದು ಕೋಡಗಲ್ಲಿನೊಳು ಆಡುತಿಹ ವರಾಹತಿಮ್ಮಪ್ಪನ್ಹತ್ತಿರದಿ ಬೇಡಿಕೊಳ್ಳಿರೊ ಎನುತ ನೋಡಿ ನಗುತಿಹರು 15
--------------
ವರಹತಿಮ್ಮಪ್ಪ
ತೀರ್ಥ ಪಿಡಿದವರೆಲ್ಲ ತಿರುನಾಮಧಾರಿಗಳೆ - ಜನ್ಮ ಪ ಸಾರ್ಥಕವಿಲ್ಲದವರೆಲ್ಲ ಭಾಗವತರೆ ಅ ಮೂಗ್ಹಿಡಿದು ನೀರೊಳಗೆ ಮುಳುಗಿ ಜಪತಪ ಮಾಡಿನಿಗಮಾಗಮ ಪುರಾಣಗಳನೋದಿ ತಿಳಿದುಬಾಗಿ ಪರಸ್ತ್ರೀಯರನು ಬಯಸಿ ಕಣ್ಣಿಡುವಂಥಯೋಗ ಭ್ರಷ್ಟರೆಲ್ಲ ದೇವ ಬ್ರಾಹ್ಮಣರೆ ? 1 ಪಟ್ಟೆ ನಾಮವ ಬಳಿದು ಪಾತ್ರೆ ಕೈಯಲಿ ಹಿಡಿದು ಗುಟ್ಟಿನಲಿ ಜಪಿಸುವ ಗುರುತರಿಯದೆಕೆಟ್ಟ ಕೂಗನು ಕೂಗಿ ಹೊಟ್ಟೆಯನು ಹೊರೆವಂಥಪೊಟ್ಟೆಗುಡುಮಗಳೆಲ್ಲ ಪರಮ ವೈಷ್ಣವರೆ ? 2 ಲಿಂಗಾಂಗದೊಳಗಿರುವ ಚಿನ್ಮಯವ ತಿಳಿಯದೆಅಂಗಲಿಂಗದ ನೆಲೆಯ ಗುರುತರಿಯದೆಜಂಗಮ ಸ್ಥಾವರದ ಹೊಲಬನರಿಯದ ಇಂಥಭಂಗಿಮುಕ್ಕಗಳೆಲ್ಲ ನಿಜ ಲಿಂಗವಂತರೆ ? 3 ಅಲ್ಲಾ ಖುದಾ ಎಂಬ ಅರ್ಥವನು ತಿಳಿಯದೆಮುಲ್ಲ ಶಾಸ್ತ್ರದ ನೆಲೆಯ ಮುನ್ನರಿಯದೆಪೊಳ್ಳು ಕೂಗನು ಕೂಗಿ ಬಗುಳಿ ಬಾಯಾರುವಂಥಕಳ್ಳ ಸುಳ್ಳರಿಗೆಲ್ಲ ವೀರ ಸ್ವರ್ಗವುಂಟೆ ?4 ವೇಷ ಭಾಷೆಯ ಕಲಿತು ಗೋಸಾಯಿ ಉಡೆದೊಟ್ಟುಆಸೆಯನು ತೊರೆಯದೆಯೆ ತಪಕೆ ಕುಳಿತುವಾಸನೆಯ ಗುರುತಿನಾ ಹೊಲಬನರಿಯದ ಇಂಥವೇಷಧಾರಿಗಳೆಲ್ಲ ಸಂನ್ಯಾಸಿಗಳೆ ? 5 ಆರು ಚಕ್ರದ ನೆಲೆಯ ಅಷ್ಟಾಂಗ ಯೋಗದಲಿಮೂರು ಮೂರ್ತಿಯ ಮೂರು ಕಡೆಯೊಳಿರಿಸಿಮಾರ ಪಿತನಹ ಕಾಗಿನೆಲೆಯಾದಿ ಕೇಶವನಸಾರಿ ಭಜಿಸಿದವರಿಗೆ ಕೊರೆವ ಕೊರತೆಯುಂಟೆ ? 6
--------------
ಕನಕದಾಸ
ಮಾಡಬಾರದು ನೋಡಿ ಕೇಡಿಗರ ಸಂಗ ಭಂಗ ಧ್ರುವ ಹೊಟ್ಟೆಯನು ಹೊಕ್ಕು ಕಟ್ಟಿಗೆ ತಂದು ನಿಲಿಸ ುವರು ಗುಟ್ಟಲೀಹ ಮಾತು ತುಟ್ಟಿಗೆ ತಾಹರು ಕೊಟ್ಟಿದೆನೆ ಬಾಯಾರಿ ಬಟ್ಟೆಗೆಳ ತಾಹರು ನಟ್ಟಸ್ನೇಹದ ಬಳಕಿ ತುಟ್ಟಿಸುವರು 1 ಬೆಲ್ಲ ಬಾಯಲಿ ಸುರಿಸಿ ಎಲ್ಲರನು ಮೋಹಿಸುತ ಅಲ್ಲಹುದು ಮಾಡಿ ಗೆಲವಿಸಿಕೊಂಬರು ಸಲ್ಲದರ ಕೈವಿಡಿದು ಇಲ್ಲದನೆ ಸ್ಥಾಪಿಸುತ ಬಲ್ಲಿದರ ಭ್ರಮೆಗೆಡಿಸಿ ಅಣಕವಾಡುವರೋ 2 ಏನನಾದರೆ ಕೊಟ್ಟು ಹೀನಮನುಜರ ಸಂಗ ಮಾನ್ನಣೆಯಲಿದ್ದು ತಾಂ ತ್ಯಜಿಸಿ ಬ್ಯಾಗೆ ದೀನಮಹಿಪತಿ ಪ್ರಾಣದೊಡೆಯ ಶ್ರೀನಿಧಿಚರಣ ನೆನವರ ನೆರೆಲಿದ್ದು ಸುಖಿಸುವುದು ಲೇಸು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು