ಪೋಗಿ ಬರುವೆನು ಎನ್ನ ಮನೆಗೆ ಜಗದೀಶ
ಭಾಗವತಪ್ರಿಯ ಭಾಗೀರಥೀಜನಕ ಪ.
ವರುಷವರುಷಕೆ ನಿನ್ನ ದರುಶನವನಿತ್ತೆನ್ನ
ಕರುಣಿಸೈ ಶೇಷಾದ್ರಿವರ ಶ್ರೀನಿವಾಸ
ವರ ಪ್ರಸಾದವನೀಯೊ ಜನ ಮೆಚ್ಚುವಂತೆ 1
ಜಯ ಹೊಂದಿಸುತ ಮನದ ಭಯವೆಲ್ಲ ಪರಿಹರಿಸಿ
ನಿಯಮತಿಯೀಯೊ ನೀರಜನಾಭನೆ
ದಯಮಾಡೊ ತವ ಪಾದಸೇವೆಯನ್ನಿತ್ತೆನಗೆ
ಪ್ರಿಯನಾಗು ಶ್ರೀಹರಿಯೆ ಭಯನಿವಾರಣನೆ2
ನೀನೆ ಗತಿಯೆನಗೆ ಶ್ರೀನಿವಾಸನೆ ಭಕ್ತಾ
ಧೀನ ನೀನೆಂಬ ಬಿರುದುಂಟಾದಡೆ
ಮಾನಿಸೈ ಶ್ರೀಲಕ್ಷ್ಮೀನಾರಾಯಣನೆ ನಿನ್ನ
ಧ್ಯಾನ ಸೌಭಾಗ್ಯಗಳನಿತ್ತೆನ್ನ ಸಲಹೊ 3