ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಗದಯ್ಯಾ ಜಗದಯ್ಯಾ ಜಗತ್ರಾಣ ಜಗಜೀವನ ಪಾವನ ಪ ಸಾವು ಹುಟ್ಟುಯೆಂಬ ಹೇಯಕುಣಿಯೊಳು ಬಿದ್ದು ನೋಯಲಾರದೆ ಬಲು ಬಾಯಬಿಡುತ ನಿಮ್ಮ ಪಾವನ ಪಾದಕ್ಕೆ ಮರೆಯಬಿದ್ದೆನಯ್ಯ ಸೇವಕಜನರಯ್ಯಾ ಕಾಯೋ ಎನ್ನಾರ್ಯ 1 ಪರಿಭವಶರಧೆಂಬ ಉರಿವಕಿಚ್ಚಿನೊಳು ಪರಿಪರಿಮರುಗುತ ಕರುಣಾಂಬುಧಿ ನಿನ್ನ ಅರಿವಿಟ್ಟರಿದೆ ವರ ಪರಮ ಬಿರುದುಗಳು ಶರಣಾಗತರ ಪ್ರಿಯಕರ ಪಿಡಿದೆತ್ತಯ್ಯ 2 ವಿಷಯಲಂಪಟವೆಂಬ ವ್ಯಸನಕೂಪದಿ ಬಿದ್ದು ಬಸವಳಿದನುಪಮ ದೆಸೆಗೆಟ್ಟೆ ಕುಸುಮಾಕ್ಷ ಶಿಶುವಿನ ತವಪಾದ ಅಸಮದಾಸಜನ ರೊಶದಿ ಇಟ್ಟು ಪೊರೆ ಕುಶಲಮತಿಯ ನೀಡಿ3 ಭವಭವದಲಿ ಬೇಡುವೆನಭವನೆ ಬಾಗಿ ದಯಪಾಲಿಸಿ ಸ್ಥಿರಜ್ಞಾನಸುಪದವ ಭವಗುಣಹಿಂಗಿಸಿ ದಿವನಿಶೆನ್ನುವುದಕೆ ಸವಿನಾಮವಿತ್ತು ಕಾಯೋ ಭವರೋಗವೈದ್ಯನೆ 4 ಮೂರರಿಂ ಗೆಲುವಿತ್ತು ಮೂರರಿಂದಾಂಟಿಸಿ ಮೂರರ ಮೋಹನಿವಾರಿಸು ದೇವ ಮೂರು ನಿನಗರ್ಪಿಸಿ ಸಾರಿಬೇಡುವೆ ನೀಡ ಪಾರಮೋಕ್ಷಪದ ಧೀರ ಶ್ರೀರಾಮಯ್ಯ 5
--------------
ರಾಮದಾಸರು
ಡೌಲಿನ ಡೌಲ್ಯಾಕೆ ಮಾಡ್ತೀ ಕಾಲತೀರದ ಮೇಲೇನೆಂದು ಹೇಳ್ತೀ ಪ ಹೊಯ್ಮಾಲಿತನದ್ಹೊಲೆಕೆಲಸ ಮಾಡಿಕೂತಿ ಸೈಮಾಡಿ ಬರಕೊಟ್ಟದೆಲ್ಲ ಮರೆತಿ ಅ.ಪ ಕಾಯವೆಂಬ ಹೊಲ ಕೌಲಿಗೆ ಹಿಡಿದಿ ಮಾಯ ಮರವೆಯೆಂಬ ಮುಳ್ಳು ಬೆಳೆಸಿದಿ ಹೇಯವಿಷಯವೆಂಬ ಸೆದೆಯ ಕೆಡವಿದಿ ಸಾವು ಹುಟ್ಟುಯೆಂಬ ಕೊರಡಗಿದ್ಹೋದಿ ಕಾವಲಾದೆಲೆ ಮೂಳಿ ನಿನ್ನ ಎಡಬಲದಿ ವಾಯಿದೆ ಸಮೀಪಬಂತು ಮುಂದೇನು ಹಾದಿ 1 ಕ್ರೋಧ ಎಂದೆಂಬ ಅಲಬು ಕಿತ್ತದೆ ಭೇದ ಎಂದೆಂಬುವ ಜೇಕು ತೋಡದೆ ವಾದವೆಂಬ ಬೋರೆ ಜಡ್ಡು ಕಡಿಯದೆ ಖೇದಯೆಂದೆಂಬ ಕರಿಕೆದಡ್ಡ ನಳಿಯದೆ ಶೋಧವಿನಿತಿಲ್ಲದೆ ಮುಸುಕಿಟ್ಟು ಮಲಗಿದಿ ಕಾದುವ ಒಡೆಯನಿಗೀಡೇನು ಮಾಡ್ದೀ 2 ಚಿತ್ತಶುದ್ಧಿಯೆಂಬ ಬದುವು ಕೆಡಿಸಿದಿ ನಿತ್ಯ ನಿರ್ಮಲತೆಯೆಂಬ ಬಾಂದು ಒಡೆಸಿದಿ ಸತ್ಯ ಸನ್ಮಾರ್ಗೆಂಬ ಸೀಮೆಯ ಮುರಿದಿ ತತ್ವ ವಿಚಾರವೆಂಬ ಒಡ್ಡ್ಹರೆಗಡಿದೀದಿ ಕರ್ತು ಶ್ರೀರಾಮನ ಅರ್ತು ಭಜಿಸಿದೆ ಯಮಗ್ವ್ಯೆರ್ಥ ತುತ್ತಾದಿ3
--------------
ರಾಮದಾಸರು