ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಥನಾತ್ಮಕ ಹಾಡುಗಳು ಉದ್ಭವಿಸಿದ ಕಂಬದಿ | ಶ್ರೀ ನಾರಸಿಂಹ ಉದ್ಭವಿಸಿದ ಕಂಬದಿ ಪ. ಉದ್ಭವಿಸಿದ ಬೇಗ ಪದ್ಮಸಂಭವಪಿತ ಮುದ್ದು ಬಾಲಕನ ಉದ್ಧರಿಸುವೆನೆಂದು ಅ.ಪ. ದುರುಳನು ಪ್ರಹಲ್ಲಾದನು | ಪರಿಪರಿಯಿಂದ ಕರಕರಪಡಿಸೆ ಕುವರನ ನರಹರಿ ಎನ್ನನು ಪೊರೆ ಎಂದು ಮೊರೆಯಿಡೆ ಸುರರು ನೋಡುತಿರೆ ಭೋರ್ಗರೆಯುತ ಆ ಕ್ಷಣ 1 ಎಲ್ಲಿರುವನು ಹರಿ ಎಂದು | ದೈತ್ಯನು ಮಗನ ಇಲ್ಲಿ ಸ್ಥಂಭದಿ ತೋರೆಂದು ಖುಲ್ಲನು ಹಿಂಸಿಸೆ ಸರ್ವತ್ರದಿ ಶ್ರೀ- ನಲ್ಲನಿರುವನೆಂದು ಸಾಧಿಸೆ ಭಕ್ತನು 2 ತನಯನ ನುಡಿ ಉಳಿಸಲು | ನರಹರಿ ಹೊಸಲೊಳ್ ಇನನು ತಾ ಮುಳುಗುತ್ತಿರಲು ದನುಜನ ತೊಡೆಯ ಮೇಲಿಟ್ಟು ನಖದಲಿ ಕನಲಿ ಸೀಳಿ ಕರುಳ್ಮಾಲೆ ಧರಿಸುತ 3 ಸುರರು ಜಯ ಜಯವೆನ್ನುತ | ಪೊಗಳುತ್ತಲಿರೆ ನರಹರಿ ಉಗ್ರ ತಾಳುತ ಸುರರು ಬೆದರಿ ಪ್ರಹ್ಲಾದನ ಕಳುಹಲು ಕರಿಗಿರಿ ನರಹರಿ ಶಾಂತನೆನಿಸಿದ 4 ತಾಪವಡಗಿತು ಜಗದಲಿ | ವರ ಭಕ್ತನಿಂದ ಶ್ರೀಪತಿ ಲಕುಮಿ ಸಹಿತಲಿ ಗೋಪಾಲಕೃಷ್ಣವಿಠ್ಠಲ ಗುರುವರದ ಈ ಪರಿಯಿಂದ ಭಕ್ತರ ಪೊರೆಯಲು5
--------------
ಅಂಬಾಬಾಯಿ
ರಕ್ಷಿಸು ಗುರುನಾಥಾ ಕೇಶವ ನೀನೇ ರಕ್ಷಿಸು ಸಿರಿನಾಥಾ ಪ ಅಕ್ಷಯ ದ್ರೌಪದಿಗಿತ್ತ ಶ್ರೀಕಾಂತನೇ ಶಿಕ್ಷಕ ನೀನೇ ಕನಕ ವಂದಿತನೇ ಅ.ಪ. ತರಳ ಪ್ರಲ್ಹಾದನಿಗೊಲಿದು ಧಾರುಣಿಯಲ್ಲಿ ಮೆರೆದ ಕಶ್ಯಪುವನ್ನು ಕೆಡಹಿದ ಹರಿಯೇ ದುರುಳ ಕಂಸನು ತನ್ನ ಪ್ರಜೆಗಳ ಹಿಂಸಿಸೆ ತರಿದು ಸಜ್ಜನರನ್ನು ಪೊರೆದ ಶ್ರೀಧರನೇ 1 ಭಜಿಸಲು ಕನಕನು ಉಡುಪಿ ಗ್ರಾಮದಲಾಗ ರಜನಿ ಮಧ್ಯದಿ ದಾಸಗೊಲಿದ ಶ್ರೀ ಹರಿಯೇ ಗಜವನ್ನು ರಕ್ಷಿಸಿ ಬಿರುದನು ತೋರಿದ ಭಜಕರ ಲೋಲನೆ ನೆರೆ ನಾರಾಯಣನೇ2 ಕಷ್ಟವ ನೀಗಿ ತಾ ಶಿಷ್ಟರ ಸಲಹಲು ಶ್ರೇಷ್ಠ ಮೂರುತಿ ರಂಗ ಬಹರೂಪವೆತ್ತೀ ಶಿಷ್ಟರ ರಕ್ಷಿಸಿ ಭ್ರಷ್ಟರ ಕೆಡಹಿದ ಸೃಷ್ಟಿಗೀಶನೆ ರಂಗ ಚನ್ನಕೇಶವನೇ 3
--------------
ಕರ್ಕಿ ಕೇಶವದಾಸ
ಶ್ರೀ ನರಸಿಂಹದೇವ ಶರಣ ರಕ್ಷಕನೆ ದಾನವಾರಿ ಸುಭಕ್ತಾಧೀನ ಮೂರುತಿಯೆ ಪ. ಹರಿ ತನ್ನ ದೈವವೆಂದು ಸ್ಮರಿಸುತಿರಲು ಬಾಲ ನಿರವ ಕಾಣದೆ ದುಷ್ಟಹಿರಣ್ಯಕಾಸುರನು ಪರಿ ಹಿಂಸಿಸೆ ಮೊರೆದು ಕೋಪದೊಳೆದ್ದು ತರಳಗೊಲಿದೆ ಬಹು ಕರುಣಾನಿಧಿಯೆ 1 ಛಿಟಿ ಛಿಟಿಲೆಂದಾರ್ಭಟಿಸಿ ಕಂಬವು ಸಿಡಿಯೆ ಕಟಿ ಮಸಿದಗ್ನಿ ನಿಟ್ಟುಸಿರಿನಿಂ ಹಲ್ಗಳ ಕಟಿ ಕಡಿವುತುಬ್ಬಸ ತೋರಿ ನಿಂದ ಕಠಿಣ ಮೂರುತಿಯೆ 2 ಕೊಬ್ಬಿದ ಹಿರಣ್ಯಕನುಬ್ಬ ಮುರಿವೆನೆಂದು ಹೆಬ್ಬಾಗಿಲೊಳು ಸಂಜೆ ಮಬ್ಬಿನಲಿ ಧನುಜನ ಗರ್ಭವ ನಖದಿಂದ ಇಬ್ಭಾಗವನು ಮಾಡಿ ಹಬ್ಬಿದ ಕರುಳನು ಹರುಷದಿ ಧರಿಸಿದೆ 3 ಭೀತರಾದ ಸುರವ್ರಾತ ಪ್ರಾರ್ಥಿಸೆ ಬಹು ಶಾಂತನಾಗಿ ಸಂತೋಷಪಡಿಸಿದ ಅ- ನಾಥ ರಕ್ಷಕನೆ ಕಾತರವಳಿದೆ 4 ಖಳನ ಮರ್ದಿಸಿ ಬಹು ಇಳೆಯ ಪಾಲಿಸಿದೆ ನಳಿನ ಸಂಭವಗೆ ಬಲು ಹರುಷವನಿತ್ತೆ ಹೆಳವನಕಟ್ಟೆ ಶ್ರೀ ರಂಗ ದಾಗಿನಕಟ್ಟೆನೆಲೆವಾಸ ಕಂಬದ ನರಸಿಂಹದೇವ 5
--------------
ಹೆಳವನಕಟ್ಟೆ ಗಿರಿಯಮ್ಮ