ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

* ಮುತ್ತೈದೆಯಾದೆ ನಾ ಮುರವೈರಿ ದಯದಿ ನಿತ್ಯತೃಪ್ತನು ಎನ್ನ ನಿಜಕರವ ಪಿಡಿಯೆ ಪ. ಗುರುಗಳುಪದೇಶಾಂಬುಧಿಯಲಿ ಪುಟ್ಟಿದ ಎನ್ನ ಕರೆದರು ಕಮಲಾಭಿದಾನದಿಂದ ವರುಷವೆಂಟಾಗೆ ಗುರುಜನಕ ಎನ್ನನುದಯದಿ ಸಿರಿವರನೆ ಪೊರೆ ಎಂದು ಒಪ್ಪಸಿದ ಕತದಿಂ1 ಗುರು ಕೊಟ್ಟ ಅಂಕಿತವೆ ಮಾಂಗಲ್ಯವಾಯ್ತೆನಗೆ ಗುರುವಿಟ್ಟ ನಾಮವೆ ತಿಲುಕವಾಯ್ತು ಗುರುಕರುಣವೆಂಬ ಕವಚವ ತೊಟ್ಟೆ ಹರುಷದಲಿ ಗುರು ಪ್ರೀತಿ ಎಂಬ ವಸನವನುಟ್ಟು ಮುದದಿ 2 ಗುರುವು ಬೋಧಿಸಿದ ಭಕ್ತಿ ಜ್ಞಾನ ವೈರಾಗ್ಯ ಸರಿ ಮಾಡಿ ಮೂರು ಕಾಲಿನ ಜಡೆಯನು ಪರಿಪರಿಯ ತತ್ವಗಳೆ ಚೌರಿ ರಾಗುಟಿ ಗೊಂಡ್ಯ ಗುರುವಾಜ್ಞೆ ಎಂಬ ಪುಷ್ಪವ ಧರಿಸಿ ಶಿರದಿ3 ಗುರುವಾಕ್ಯ ಶ್ರವಣವೇ ಕರ್ಣಕುಂಡಲವಾಯ್ತು ಗುರುವಿನ ನಿರ್ಮಾಲ್ಯವೇ ನಾಸಿಕಾಭರಣ ಗುರುನಾಮಗಳೆ ರತ್ನ ಪರಿಪರಿಯ ಹಾರಗಳು ಗುರುಭಕ್ತಿ ಎಂಬ ನಡು ಒಡ್ಯಾಣ ಧರಿಸಿ 4 ಗುರುವು ಪೇಳಿದ ಸದ್ಗುಣಗಳೆ ಪಾದಾಭರಣ ಗುರುವಿನ್ವಾತ್ಸಲ್ಯವೆ ಪರಿಮಳ ದ್ರವ್ಯ ಗುರು ಅನುಗ್ರಹವೆಂಬೊ ಮಂಗಳ ದ್ರವ್ಯಗಳು ಗುರು ಮಾತೆ ಎನ್ನ ಪೋಷಿಸಿ ಹರಿಗೆ ಕೊಡಲು 5 ಹೃದಯವೆ ಲಗ್ನ ಮಂಟಪ ದಿವ್ಯ ಶೃಂಗಾರ ಪದುಮಭವ ಸುರರೆ ನೆರದಿಹ ಬಂಧು ಬಳಗ ಒದಗಿ ಬಹ ಸುಜ್ಞಾನ ಸಂಬಾರ ಸಲಕರಣೆ ಮದನ ಪಿತನೆದುರಿಗೆ ನಿಲಿಸಿ ಧಾರೆಯನೆರೆಯೆ 6 ಗುರುವೆ ಜನನಿ ಜನಕ ಗುರುವೆ ಪುರೋಹಿತರು ಗುರುವಚನವೆಂಬ ಅಕ್ಷತೆ ಎರಚುತಿರಲು ಪರಮ ಜೀವಚ್ಛಾದಿ ಕದ ಪರದೆ ತೆಗೆಯುತಿರೆ ಹರಿಗೆ ಗುಣನಾಮ ಜೀರಿಗೆ ಬೆಲ್ಲ ಎರಚೆ 7 ಸುಮನೊ ವೃತ್ತಿಗಳೆಂಬ ಕಮಲದ್ಹಾರವನ್ಹಾಕಿ ಕಮಲನಾಭನ ಪದಕೆರಗಿ ನಿಲಲೂ ಕಮಲಹಸ್ತವ ಶಿರದ ಮೇಲಿಟ್ಟು ಶ್ರೀ ಕೃಷ್ಣ ಕಮಲೆ ನಿನ್ನನು ಪೊರೆವೆನೆಂಬ ಅಭಯ ಕೊಡಲು 8 ಸೂತ್ರ ಬಂಧಿಸಲು ಮುಕ್ತರಾರಾಧ್ಯ ಲಕ್ಷ್ಮೀಕಾಂತನು ಮುಕ್ತರಾರಾಧ್ಯ ಜಗದ್ಭರ್ತೃ ಮುನಿಜನವಂದ್ಯ ವ್ಯಕ್ತನಾಗಲು ಮನದಿ ಗುರು ಕಟಾಕ್ಷದಲಿ 9 ಗುರು ತಿಳಿಸಿದಂಥ ಸ್ವರೂಪದರ್ಪಣ ನೋಡಿ ಪರಮ ಸೌಭಾಗ್ಯ ಆನಂದಪಡುವೆ ಗುರುಗಳಂತರ್ಯಾಮಿ ಗೋಪಾಲಕೃಷ್ಣವಿಠ್ಠಲ ಗುರುಬಿಂಬನೇ ಎನಗೆ ಸುಖವ ಪಾಲಿಸಲಿ 10
--------------
ಅಂಬಾಬಾಯಿ
ಕಂಡೆ ಕನಸಿನಲಿ ನಾ ಪಾಂಡುರಂಗನ ಮಂಡೆ ಇಡುತಲಿ ಪುಂಡಲೀಕ ಚರಣದಲೀ ಪ. ಪಂಡರೀಕ್ಷೇತ್ರದಲಿ ವಿಠ್ಠಲನ ದರ್ಶನಕೆ ದಂಡೆ ಹಾರ ಕೊಂಡು ಪೋಗುತಿರಲೂ ಹಿಂಡು ಜನ ಊಟಕೆಡೆ ಅಣಿಮಾಡುತಿರಲಲ್ಲಿ ಕಂಡು ಸಾಗುತ ಮುಂದೆ ದ್ವಾರದೆಡೆ ಬಂದು 1 ನಂತರದಿ ದ್ವಾರಗಳು ಮುಚ್ಚಿರಲು ಕಂಡು ಬಹು ಚಿಂತಿಸಲು ಅಲ್ಲೊಬ್ಬ ಬರಲು ಅವಗೇ ಅಂತರಂಗವನುಸುರೆ ಕದ ತೆರೆದು ನೋಡೆನಲು ಸಂತೋಷದಿಂದೆರಡು ದ್ವಾರಗಳ ತೆರೆದೇ 2 ರತಿಪತಿಯ ಬಿಂಬ ಶ್ರೀ ಪ್ರದ್ಯುಮ್ನವಿಠ್ಠಲನ ಮೂರ್ತಿಯನೆ ಕಂಡು ಹಾರವನ್ಹಾಕಿ ನಮಿಸಿ ಅತಿ ಪ್ರೀತಿ ಭಕ್ತಿಯಲಿ ಅಪ್ಪಿ ನಾ ಮೈ ಮರತೆ ಸ್ತುತಿಸುತಲಿ ಗೋಪಾಲಕೃಷ್ಣವಿಠ್ಠಲನನಾ 3
--------------
ಅಂಬಾಬಾಯಿ
ಧನ್ಯರಾದರು ಗುರುಗಳನು ಪೂಜಿಸುತ ಇನ್ನಿವರ ಪಾತಕವು ತೊಲಗಿತು ಜಗದಿ ಪ. ತಂದೆ ಮುದ್ದುಮೋಹನದಾಸ ರಾಯರನು ಚಂದದಿಂ ಸತಿಸಹಿತ ಕರೆತಂದು ಮನೆಗೆ ಮಂದರೋದ್ಧರನ ಪದಸೇವೆ ಇದು ಎಂದರಿತು ಮಂದಹಾಸದಲಿ ನಸುನಗುತ ಸದ್ಭಕ್ತರು 1 ಮಂಗಳೋದಕದಿಂದ ಮಜ್ಜನವಗೈಸುತಲಿ ಅಂಗಗಳನೊರೆಸುತಲಿ ನಾಮಗಳನ್ಹಚ್ಚಿ ರಂಗನಾಥನಿಗರ್ಪಿಸುತ ಪುಷ್ಪಹಾರವನ್ಹಾಕಿ ಶೃಂಗಾರವನೆಗೈದು ಶ್ರೀ ಗುರುಗಳನ್ನು 2 ಪಚ್ಚೆಕರ್ಪೂರ ಕೇಸರಿಯಿಂದ ಕೂಡಿದ ಅಚ್ಚ ಗಂಧವನ್ಹಚ್ಚಿ ಅಕ್ಷತೆಯನಿಟ್ಟು ಮಚ್ಛರೂಪಿಯ ನೆನೆದು ಪಾದಕಮಲವ ತೊಳೆದು ನಿಚ್ಚಳದ ಭಕ್ತಿಯಲಿ ನಿಜ ಭಕ್ತರೆಲ್ಲ 3 ಸತಿಸಹಿತ ಕುಳ್ಳಿರಿಸಿ ಗುರುಗಳನು ಪೀಠದಲ್ಲಿ ಅತಿಶಯದಿ ಕುಡಿಬಾಳೆ ಎಲೆಗಳನೆ ಹಾಕಿ ಮತಿಯಿಂದ ರಂಗೋಲೆಗಳನ್ಹಾಕಿ ಲವಣ ಸ- ಪರಿಯಂತ ಬಡಿಸುತಲಿ 4 ಅನ್ನಾದಿ ಸಕಲ ಷಡ್ರಸಗಳನೆ ಬಡಿಸುತ್ತ ಘನ್ನ ಮಹಿಮರಿಗೆ ಭಕ್ಷಾದಿಗಳ ಬಡಿಸಿ ಸನ್ನುತಿಸುತಲಿ ತೀರ್ಥ ಆಪೋಷನವನ್ಹಾಕಿ ಪನ್ನಗಶಯನನಿಗೆ ಅರ್ಪಿಸುತ ಮುದದಿ 5 ಘೃತಶರ್ಕರಾದಿಗಳನಡಿಗಡಿಗೆ ಬಡಿಸುತಲಿ ನುತಿಸಿ ಗಾನಗಳಿಂದ ಗುರುಮಹಿಮೆಯ ದಧಿ ಕ್ಷೀರದನ್ನಗಳನುಣಿಸುತಲಿ ಘೃತ ಕ್ಷೀರದಿಂದ ಕೈ ತೊಳೆದು ಸಂಭ್ರಮದಿ 6 ಯಾಲಕ್ಕಿ ಕರ್ಪೂರ ಮಿಳಿತ ವೀಳೆಯವನಿತ್ತು ವೇಳೆವೇಳೆಗೆ ತಪ್ಪು ಕ್ಷಮೆಯ ಬೇಡುತಲಿ ವ್ಯಾಳಶಯನಗರ್ಪಿಸುತ ಉಡಿಗೆ ತೊಡಿಗೆಗಳನಿತ್ತು ಮಾಲೆಹಾಕುತ ಆರತಿಯನೆತ್ತಿ ಮುದದಿ 7 ಹರಿಪ್ರೀತನಾಗುವನು ಗುರು ಹೃದಯದಲಿ ನಿಂತು ಕರ್ಮ ತೊಡಕುಗಳು ಸರಸಿಜಾಕ್ಷನು ತಾನು ಹರುಷಪಡುವನು ದಯದಿ ಕರಕರೆಯ ಸಂಸಾರ ಕಡಿದು ಗತಿ ಈವ 8 ಗುರುದ್ವಾರ ಒಲಿಯುವನು ಹರಿಯು ಮೋಕ್ಷಾರ್ಥಿಗಳ ಅರಘಳಿಗೆಯಗಲದಲೆ ಕಾಯುವನು ಸತತ ಗುರು ಅಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ ತ್ವರಿತದಿಂ ಹೃದಯದಲಿ ತೋರ್ವನು ತನ್ನ9
--------------
ಅಂಬಾಬಾಯಿ