ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಧ್ವಾಂತರ್ಯಾಮಿ ಶ್ರೀ ಗುರು ಬಿಂಬ ಕಾಯೊ ಪ. ಹೃದ್ವನಜದಲಿ ನೆಲಸಿ ಆಜ್ಞಾನ ಹರಿಸಿ ಅ. ಸಾಟಿ ರಹಿತನೆ ನಿನ್ನ ಮುಖ ದರ್ಶನಾ ಹಾಟಕೋದರ ಮುಖರು ಅರಿಯದಂತವನನ್ನು ಕೋಟಲೆಯಭವ ಜನರು ಅರಿವದೆಂತಯ್ಯಾ 1 ತ್ರಿವಿಧ ಜೀವರ ತೆಗೆದು ಜನ್ಮದಲಿ ತೊಡಕಿಸೀ ಕರ್ಮ ಬಲೆ ಬೀಸಿ ಪವನನೈಯ್ಯನೆ ನಿನ್ನ ಮಾಯ ಮೋಡವ ಕವಿಸಿ ಭವಣಪಡಿಸಲು ಇನ್ನು ಬಿಡುಗಡೆಯದೆಂತೋ 2 ನೀನಾಗೆ ವಲಿದು ನಿನ್ನ ಭಕ್ತರನು ಕಾಯುತಿಯೊ ಮಾನಾಭಿಮಾನದೊಡೆಯನೆ ಆರ್ತಪಾಲ ಗಾನಲೋಲನೆ ನಿನ್ನ ಧ್ಯಾನ ಮೌನವನಿತ್ತು ಮಾನಸದಿ ನಿನ್ನ ತೋರೊ ದೀನ ರಕ್ಷಕನೇ3 ಅಂಗುಟದಿ ಗಂಗೆಯನು ಪೆತ್ತ ಪಾವನಪಾದ ಶೃಂಗಾರ ವಸನ ವಡ್ಯಾಣ್ಯನಡುವೂ ಅಂಗನೆಯು ವಕ್ಷದಲಿ ಹಾರಪದಕಗಳುಲಿಯೆ ಉಂಗುರದ ಬೆರಳು ಕಂಕಣ ಕಡಗ ಪಾಣೀ 4 ಕರ್ಣಕುಂಡಲ ಕಾಂತಿ ಮುಗುಳುನಗೆ ಕುಡಿನೋಟ ರನ್ನ ತಿಲಕದ ಫಣಿಯ ಮುಂಗುರುಳ ಸೊಬಗೊ ಸ್ವರ್ಣಕಾಂತಿಯ ತೇಜ ಕಡಗೋಲ ಕೈ ಸೊಬಗು ಚನ್ನಗೊಪಾಲಕೃಷ್ಣವಿಠಲ ಉಡುಪೀಶಾ 5
--------------
ಅಂಬಾಬಾಯಿ
ಲಾಲಿ ರಂಗನ ರಾಣಿ ಪರಮಕಲ್ಯಾಣಿ ಲಾಲಿ ಕೀರವಾಣಿ ಪಂಕಜಪಾಣಿ ಲಾಲಿ ಪ. ಕ್ಷೀರಸಾಗರದಲಿ ಜನಿಸಿ ತಾ ಬಂದು ವಾರಿಜಾಕ್ಷನ ವಕ್ಷಸ್ಥಳದಿ ತಾ ನಿಂದು ಘೋರ ಪಾತಕಿಗಳನು ಪೊರೆವೆನೆಂತೆಂದು ಶ್ರೀರಂಗಕ್ಷೇತ್ರದಲಿ ಬಂದು ತಾ ನಿಂದು 1 ಶುದ್ಧ ಪಾಡ್ಯ ತುಲಾ ಕಾರ್ತೀಕದಲಿ ಮುದ್ದು ಶ್ರೀರಂಗನ ರಾಣಿ ಹರುಷದಲಿ ದಂತದ ಉಯ್ಯಾಲೆಮಂಟಪದಲ್ಲಿ ಕಂತುಪಿತನರಸಿಯಾಡಿದಳೆ ಉಯ್ಯಾಲೆ 2 ಕಸ್ತೂರಿಯನಿಟ್ಟು ಮುತ್ತಿನ ಮೂಗುಬಟ್ಟು ಹಾರಪದಕಗಳು ಪೀತಾಂಬ್ರವನೆ ಉಟ್ಟು ಕುಂದಣದ ಒಡ್ಯಾಣವನ್ನು ಅಳವಟ್ಟು ಇಂದಿರಾದೇವಿ ಆಡಿದಳೆ ಉಯ್ಯಾಲೆ 3 ರತ್ನದಾ ಕಿರೀಟವನ್ನು ತಾ ಧರಿಸಿ ಕಮಲ ಸರಗಳಳವಡಿಸಿ ಮುತ್ತು ಸುತ್ತಿದ ರತ್ನದಸುಲಿಯನು ಧರಿಸಿ ಅ ಚ್ಚುತನರಾಣಿ ಆಡಿದಳೆ ಉಯ್ಯಾಲೆ 4 ದೋಸೆ ವಡೆ ನೈವೇದ್ಯ ಮೀಸಲನು ಸವಿದು ದಾಸರೆತ್ತಿದ ಪಿಷ್ಟದಾರತಿಯಲಿ ನಲಿದು ಲೇಸಾದ ಕರ್ಪೂರ ವೀಳ್ಯವನು ಸವಿದು ವಾಸುದೇವನರಾಣಿ ಆಡಿದಳೆ ಉಯ್ಯಾಲೆ 5 ವರರಂಗವಂಶದವರು ವರದಿಂದ ಪಾಡೆ ಕರುಣಾಕಟಾಕ್ಷದಿಂ ದೇವಿ ತಾ ನೋಡೆ ಪ್ರಜೆಗಳೆಲ್ಲರು ಬಂದು ವರಗಳನು ಬೇಡೆ ವಜ್ರದಭಯಹಸ್ತಗಳಿಂದ ವರಗಳನು ನೀಡೆ 6 ಕರ್ತ ಶ್ರೀ ಶ್ರೀನಿವಾಸ ರಂಗನಾರಾಣಿ ಸಪ್ತದಿನದುಯ್ಯಾಲೆಯನು ತಾ ರಚಿಸಿ ಭಕ್ತರಿಗೆ ತೀರ್ಥ ಪ್ರಸಾದಗಳನಿತ್ತು ಅರ್ಥಿಯಿಂ ತೆರಳಿದಳು ತನ್ನರಮನೆಗೆ 7
--------------
ಯದುಗಿರಿಯಮ್ಮ