ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಮಿತಾರ್ಥದಾಯಿನೇ | ತುಳಸಿ ಕಲ್ಯಾಣಿ ಶ್ಯಾಮಾ ವಿಶಾಲನಯನೇ ಪ ಹಸುರು ಕಂಚುಕಧರೆ ಆನಂದ ರಸಿಕೇ ಶಶಿ ಬಿಂಬಸಮ ಸುಂದರಮುಖೇ ಉಸಿರುಬಿಡದೆ ನಿನ್ನ ಕೊಸರುವೆ ವರಗಳ ಹಸನಾಗಿ ಕೊಡುವೆನೀ ಅತಿಶಯದಿಂದಲಿ 1 ಬಣ್ಣಾದ ಸರಪಳಿ ಹಾಕಿದ ಕೊರಳೇ ಬಟ್ಟ ಮುತ್ತಿನ ಹರಳೇ ಹುಣ್ಣಿಮೆ ಚಂದ್ರನಂತೆ ಸುಂದರಮುಖದವಳೇ ಪನ್ನಂಗ ಶಯನಗೆ ಮಾಡಿದೆ ಮರುಳೇ 2 ಬಡನಡುವಿಗೆ ಒಡ್ಯಾಣಾ | ರುಳಿ ಪೈಜಣ ಕಡಗಾ ಕಂಕಣ ಹೊಳಿಯುವ ಜಾಣೆ | ನಡೆದು ಬಾರೆ ಶ್ರೀ ನರಸಿಂಹವಿಠಲನ ಪಾದ ಬಿಡದೆ ಭಜಿಪೆನಮ್ಮ 3
--------------
ಓರಬಾಯಿ ಲಕ್ಷ್ಮೀದೇವಮ್ಮ
ತಲ್ಲಣಿಸದಿರು ಕಂಡ್ಯ ತಾಳು ಮನವೆ ಪ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ ಅ ಬೆಟ್ಟದಾ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆಕಟ್ಟೆಯನು ಕಟ್ಟಿ ನೀರೆರೆದವರು ಯಾರೊಪುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾಗಿರಲುಗಟ್ಯಾಗಿ ಸಲಹುವನು ಇದಕೆ ಸಂಶಯವಿಲ್ಲ 1 ಅಡವಿಯೊಳಗಾಡುವ ಮೃಗಪಕ್ಷಿಗಳಿಗೆಲ್ಲಅಡಿಗಡಿಗೆ ಆಹಾರವಿತ್ತವರು ಯಾರೊ ಪಡೆದ ಜನನಿಯ ತೆರದಿ ಸ್ವಾಮಿ ಹೊಣೆಗೀಡಾಗಿಬಿಡದೆ ರಕ್ಷಿಪನು ಇದಕೆ ಸಂಶಯವಿಲ್ಲ 2 ನವಿಲಿಗೆ ಚಿತ್ರ ಬರೆದವರು ಯಾರುಪವಳದ ಲತೆಗೆ ಕೆಂಪಿಟ್ಟವರು ಯಾರುಸವಿಮಾತಿನರಗಿಳಿಗೆ ಹಸುರು ಬರೆದವರು ಯಾರುಅವನೆ ಸಲಹುವನು ಇದಕೆ ಸಂಶಯವಿಲ್ಲ3 ಕಲ್ಲಿನಲಿ ಹುಟ್ಟಿ ಕೂಗುವ ಕಪ್ಪೆಗಳಿಗೆಲ್ಲಅಲ್ಲಲ್ಲಿಗಾಹಾರ ತಂದೀವರಾರುಬಲ್ಲಿದನು ಕಾಗಿನೆಲೆಯಾದಿಕೇಶವರಾಯಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ 4
--------------
ಕನಕದಾಸ
ದೇವೇಂದ್ರನ ಸೊಸೆ ದೇವಕ್ಕಿ ತನಯಳು ಏನೇನು ಬಯಸಿದಳು ಪ ಒಂದು ತಿಂಗಳು ತುಂಬಲು ಸುಭದ್ರ ಅಂಜೂರಿ ದ್ರಾಕ್ಷಿ ಕಿತ್ತಳೆ ಜಂಬುನೇರಳು ಬಯಸಿದಳು ಅಂಬುಜಾಕ್ಷನ ತಂಗಿ ಪೈಜಣ ರುಳಿ ಗೆಜ್ಜೆ ಕಾ- ಲುಂಗುರ ಕಿರುಪಿಲ್ಯ ಇಟ್ಟೇನೆಂಬುವಳು 1 ಎರಡು ತಿಂಗಳು ತುಂಬಲು ಸುಭದ್ರ ಪರಡಿ ಮಾಲತಿ ಸಣ್ಣ ಶ್ಯಾವಿಗೆ ಬಯಸಿದಳು ಪರಿವೇಶನ ತಂಗಿ ಹರಡಿ ಕಂಕಣ ಹಸ್ತ ಕಡಗ ಹಿಂಬಳೆ ದ್ವಾರ್ಯ ಇಟ್ಟೇನೆಂಬುವಳು 2 ಮೂರುತಿಂಗಳು ತುಂಬಲು ಸುಭದ್ರ ವಾಲ್ಯ ಪಚ್ಚದ ಚಂದ್ರ ಬಾಳ್ಯವ ಬಯಸಿದಳು ಮಾರನಯ್ಯನ ತಂಗಿ ತೋಳಿಗ್ವಜ್ರದ ವಂಕಿ ಮಾಣಿಕ್ಯದ್ವೊಡ್ಯಾಣ ಇಟ್ಟೇನೆಂಬುವಳು 3 ನಾಲ್ಕು ತಿಂಗಳು ತುಂಬಲು ಸುಭದ್ರ ಆಕಳ ತುಪ್ಪ ಅನಾರಸ ಬಯಸಿದಳು ಶ್ರೀಕಾಂತನ ತಂಗಿ ತೂಕದ ಸರಿಗೆಯಿಟ್ಟು ಏಕಾವಳಿಯ ಸರ ಹಾಕೇನೆಂಬುವಳು 4 ಐದು ತಿಂಗಳು ತುಂಬಲು ಸುಭದ್ರ ಕೆನೆಮೊಸರ್ಹಾಕಿದ ಬುತ್ತಿ ಚಿತ್ರಾನ್ನವ ಬಯಸಿದಳು ಅಸುರಾಂತಕನ ತಂಗಿ ಹಸುರುಪತ್ತಲನುಟ್ಟು ಕುಸುಮ ಮಲ್ಲಿಗೆಮೊಗ್ಗು ಮುಡಿದೇನೆಂಬುವಳು 5 ಆರು ತಿಂಗಳು ತುಂಬಲು ಸುಭದ್ರ ಚೌರಿ ರಾಗಟೆ ಜಡೆಬಂಗಾರ ಬಯಸಿದಳು ಮಾರನಯ್ಯನ ತಂಗಿ ನಾಗಮುರಿಗೆನಿಟ್ಟು ಜಾಜಿ ಮಲ್ಲಿಗೆಮೊಗ್ಗು ಮುಡಿದೇನೆಂಬುವಳು 6 ಏಳು ತಿಂಗಳು ತುಂಬಲು ಸುಭದ್ರ ಕ್ಷೀರ ಮಂಡಿಗೆ ಬುಂದ್ಯ ಫೇಣಿಯ ಬಯಸಿದಳು ಕಮಲ ಕ್ಯಾದಿಗೆ ಮುಡಿಯ ನಿಂಬಾವಳಿ ಪತ್ತಲ ನಿರಿದುಟ್ಟೇನೆಂಬುವಳು7 ಎಂಟು ತಿಂಗಳು ತುಂಬಲು ಸುಭದ್ರ ಚಿಂತಾಕು ಪದಕ ಕಟ್ಟಾಣಿಯ ಬಯಸಿದಳು ವೈಕುಂಠಪತಿಯ ತಂಗಿ ಇಂಟರ್ ಪಪ್ಪುಳಿನುಟ್ಟು ಸೀಮಂತದುತ್ಸವ ಮಾಡೆ ಸುಖದಿಂದಿರುವಳು 8 ಒಂಬತ್ತು ತಿಂಗಳು ತುಂಬಲು ಸುಭದ್ರೆಗೆ ಬಂಗಾರದ್ಹೊರಸಿನಲ್ಲಿರಿಸಿ ಆರತಿ ಮಾಡಲು ಮಂಗಳಮಹಿಮ ಭೀಮೇಶಕೃಷ್ಣನ ತಂಗಿ ಕಂದ ಅಭಿಮನ್ಯು ಎಂಬುವನ ಪಡೆದಳು 9
--------------
ಹರಪನಹಳ್ಳಿಭೀಮವ್ವ
ಸೀತಾ ಕಲ್ಯಾಣ ಪಾಕ ಶೇಷಾದ್ರಿ ಬ್ರಹ್ಮಕೆ ಶರಣು ಲೋಕನಾಯಕ ಹೆಳವನಕಟ್ಟೆ ವೆಂಕಟ ನೀ ಕರುಣಿಸಿ ಸಲಹುವುದೆನಗೆ ಜಯ ಜಯ ಪ. ಮದುವೆಯ ನಾಲ್ಕು ದಿವಸದಲ್ಲಿ ಮದುವಣಿಗನು ರಾಮ ಜಾನಕಿಗೆ ಪದನ ಹೇಳುವೆ ಸುಜನರು ಕೇಳಿ ಜಯ ಜಯ 1 ಚಿತ್ತಜಪಿತ ಶ್ರೀರಾಮರಿಗೆ ಅರ್ತಿಯಿಂದರಿಷಿಣೆಣ್ಣೆಯ ಮಾಡ್ವ ಮಿತ್ರೆ ಕೌಸಲ್ಯದೇವಿ ಕೇರಿ ಕೇರಿಯ ಗುಂಟ ಮುತ್ತೈದೇರನು ಕರೆಸಿದಳು ಜಯ ಜಯ 2 ಪೀತಾಂಬರದುಡುಗೆಯನುಟ್ಟು ಜ್ಯೋತಿಯಂದದಿ ಥಳಥಳಿಸುತಲಿ ಜಾತಿಮಾಣಿಕದಾಭರಣವಿಟ್ಟು ರಾಮರ ಮಾತೆಯರೆಲ್ಲ ಶೃಂಗಾರವಾಗಿ ಜಯ ಜಯ 3 ಚೀಣ ಚೀಣಾಂಬರಗಳನುಟ್ಟು ವೇಣಿ ಕಸ್ತೂರಿಯ ಪಣೆಗಿಟ್ಟು ಜಾಣೆಯರೆಲ್ಲ ಶೃಂಗಾರವಾಗಿ ಮಲ್ಲಿಗೆ ಬಾಣನ ಪಟ್ಟದಾನೆಗಳಂತೆ ಜಯ ಜಯ 4 ಪೊಂಬಣ್ಣದ ಹಳದಿಯ ಕಲೆಸಿ ತುಂಬಿದ ಹರಿವಾಣದೊಳಗೆ ಅಂಬುಜನಾಭಗೆ ಅರಿಷಿಣೆಣ್ಣೆಯ ಮಾಡ್ವ ಸಂಭ್ರಮಕೆ ನಡೆತಂದರಾಗ ಜಯ ಜಯ 5 ಗರುಡನ್ವಲ್ಲಭ ಸೌಂದರದೇವಿ ವರುಣನ್ವಲ್ಲಭೆ ಕಾಳಕದೇವಿ ಹರನ್ವಲ್ಲಭೆ ಪಾಪ[ನಾ] ಶಿಗಂಗೆ ಸಹಿತಲಿ ಅರಿಷಿಣೆಣ್ಣೆಯ ಮಾಡಬಂದರಾಗ ಜಯ ಜಯ 6 ಬ್ರಹ್ಮವಲ್ಲಭೆ ಶಾರದಾದೇವಿ ವಾ- ಯುರಮಣಿ ಅಂಜನಾದೇವಿ ಹರುಷದಿ ಕೌಸಲ್ಯೆ ಕೈಕೆಸೌಮಿತ್ರೆಯರು ಅರಿಷಿಣೆಣ್ಣೆಯ ಮಾಡಬಂದರಾಗ ಜಯ ಜಯ7 ಅಲ್ಲಲ್ಲಿ ನಡೆವ ನಾಟಕಶಾಲೆ ಬಿಲ್ಲಾಳು ಬೆತ್ತ ಕಾಟನವರು ಸೊಲ್ಲುಸೊಲ್ಲಿಗೆ ಹಿಡಿಹೊನ್ನನು ತ್ಯಾಗವ ಚೆಲ್ಲುತ ದಶರಥ ನಡೆದನಾಗ ಜಯ ಜಯ 8 ಹೊಡೆವ ತಂಬಟೆ ಭೇರಿ ನಿಸ್ಸಾಳೆ ಬಿಡದೆ ಚೀರುವ ಹೆಗ್ಗಾಳೆಗಳು ಸಿಡಿಲು ಗರ್ಜಿಸುವಂತೆ ಪಂಚಮವಾದ್ಯದಿ ನಡೆದರು ಜನಕರಾಯನ ಮನೆಗೆ ಜಯ ಜಯ 9 ಕುಸುಮಬಾಣನ ಮಾರ್ಬಲದಂತೆ ಹಸುರು ಪಚ್ಚೆಯ ಪಲ್ಲಕ್ಕಿಗಳು ಮುಸುಕಿದ ಪರಿಮಳದೊಳಪ[ಸಾ]ತಕೆ ದಶರಥ ಬಂದನೆಂದರೆ ಜನರು ಜಯ ಜಯ 10 ಭರದಿಂದಲೆದ್ದು ಜನಕರಾಯ ತರಿಸಿ ನಿವಾಳಿಗಳನು ಹಾಕಿ ಹರುಷದಿ ಕೈಲಾಗವ ಕೊಟ್ಟಯೋಧ್ಯದ ಅರಸ[ನ] ಮನ್ನಿಸಿ ಒಡಗೊಂಡನಾಗ ಜಯ ಜಯ11 ಬೇಗದಿ ಗದ್ದುಗೆಯನು ಹಾಸಿ ಬೀಗನ ಉಪಚರಿಸಿದ ಜನಕ ಭಾಗೀರಥಿ ಪಾರ್ವತಿ ಗಂಗೆ ಸಹಿತಲಿ ನಾಗಭೂಷಣನು ಕುಳಿತನಾಗ ಜಯ ಜಯ 12 ಸುತ್ತಣ ರಾಯರಾಯರಿಗೆಲ್ಲ ರತ್ನಗಂಬಳಿಗಳ ಹರಹಿದರು ಅರ್ತಿಯಿಂದಲಿ ಸುರರೆಲ್ಲರು ಕುಳಿತರು ವಿಸ್ತರಿಸಿದ ಮಂಟಪದೊಳಗೆ ಜಯ ಜಯ 13 ಮಣಿಮಂಟಪದೊಳು ಹಸೆಹಾಸಿ ಕನಕ ಮಣಿಯ ತಂದಿಳುಹಿದರು ದಿನಕರಕುಲರಾಮ ಹಸೆಗೇಳೆನುತಲಿ ಗುಣಾವಳಿಗ[ಳ] ಕೊಂಡಾಡಿದರು ಜಯ ಜಯ 14 ಪೊಕ್ಕಳೊಳಜನ ಪೆತ್ತವನೇಳು ಅಕ್ರೂರಜನ ಪೆತ್ತವನೇಳು ಮುಕ್ಕಣ್ಣನ ರಿಪುಬಲವ ಸಂಹರಿಸಿದ ಭಕ್ತವತ್ಸಲ ಹಸೆಗೇಳೆಂದರು ಜಯ ಜಯ 15 ದಶರಥರಾಜನಂದನನೇಳು ಅಸುರಸಂಹಾರ ಕಾರಣನೇಳು ವಸುಧೆಗೊಡೆಯ ರಾಮ ಹಸೆಗೇಳೆನುತಲಿ ಋಷಿಗಳೆಲ್ಲರು ಶ್ರುತಿಗರೆದರಾಗ ಜಯ ಜಯ 16 ಋಷಿವಾಲ್ಮೀಕಿ[ಯ]ರೆಲ್ಲರು ಕೂಡಿ ಕುಶಲದ ಬಾಸಿಂಗವ ಪಿಡಿದು ಅಸುರಾರಿಯ ಮಸ್ತಕಕಳವಡಿಸೋರು ವಸುದೇವನಾಗೆಂದು ಹರಸುತಲಿ ಜಯ ಜಯ 17 ತಂಡತಂಡದ ರತ್ನ ಅಡಸಿದಾಗ ಮಣಿ ಬಿಗಿದಿದಾಗ ತೊಂಡಿಲ ಮುತ್ತೈದೇರಳವಡಿಸೋರು ಕೋ- ದಂಡ ಪಾಣಿಸತಿಜಾನಕಿಗೆ ಜಯ ಜಯ 18 ಬೆರಳಿಗೆ ಮುದ್ರೆ ಉಂಗುರವಿಟ್ಟು ಕೊರಳಿಗೆ ಏಕಾವಳಿಯನೆ ಹಾಕೋರು ತರಳಾಕ್ಷಿಯರಾ ಜಾನಕಿಗೆ ಜಯ ಜಯ 19 ಬೊಂಬೆಯ ತೊಂಡಿಲ ಮುಡಿದಿರ್ದು ಕುಂಭಿಣಿಸುತೆ ಕುಳ್ಳಿರಲಾಗಿ ಅಂಬುಜಾಂಬಕ ರಘುರಾಮನ ಹರುಷದಿ ರಂಭೆಯಿದ್ದೆಡೆಗೆ ಬಂದನೆ ನಗುತ [ಜಯ ಜಯ]20 ಬಂದನೆ ಭಾಗ್ಯಲಕ್ಷ್ಮೀರಮಣ ಬಂದನೆ ಭಕ್ತವತ್ಸಲ ಸ್ವಾಮಿ ಬಂದನೆ ಜಾನಕಿಯಡೆ ರಾಮನು ತಾ ಬಂದನೆ ಮಣಿಮಂಟಪದೆಸೆಗೆ [ಜಯ ಜಯ] 21 ಧೂರ್ಜಟಿ ಜಪಿಸುವ ನಾಮವಿಗ್ರಹ ಬಂದ ವಜ್ರಮಾಣಿಕದ್ಹಸೆಯಿದ್ದೆಡೆಗೆ ಜಯ ಜಯ 22 ಕೌಸಲ್ಯಸುತ ಕುಮಾರ ಬಂದ ಹಂಸವಾಹನಪಿತ ರಾಮ ಬಂದ ಕಂಸಾರಿ ದುಃಖವಿ [ನಾಶ] ರವಿಕುಲ ವಂಶೋದ್ಧಾರಕ ಬಂದನಾಗ [ಜಯ ಜಯ] 23 ಭಕ್ತವತ್ಸಲ ರಾಘವ ಬಂದ ಮುಕ್ತಿದಾಯಕ ಶ್ರೀರಾಮ ಬಂದ ಅರ್ಕನು ಶತಕೋಟಿತೇಜನು ಜಗಕತಿ- ಶಕ್ತ ತಾ ಬಂದನೆಂದವೆ ಕಹಳೆ ಜಯ ಜಯ 24 ಸಿಂಧುಬಂಧನ ರಾಘವ ಬಂದ ಪು- ರಂದರವರದ ಶ್ರೀರಾಮ ಬಂದ ಇಂದುವದನೆಪತಿ ರಾಮ ಬಂದನು ರಾಮ- ಚಂದ್ರ ತಾ ಬಂದನೆಂದವೆ ಕಹಳೆ ಜಯ ಜಯ 25 ಯಜ್ಞಶಿಕ್ಷಾಮಿತ್ರ ರಾಮ ಬಂದ ಸುಗ್ರೀವರಕ್ಷಕಾರಣ ಬಂದ ಲಕ್ಷ್ಮ- ಣಾಗ್ರಜ ಬಂದನೆಂದವೆ ಕಹಳೆ ಜಯ ಜಯ 26 ಯಂತ್ರವಾಹಕ ರಾಘವ ಬಂದ ಮಂತ್ರಮೂರುತಿ ರಾಮ ಬಂದ ಕಾಂತೆ ಶ್ರೀ ಜಾನಕಿರಮಣ ಬಂದನು ರಾಮ ತಂತ್ರಿ ತಾ ಬಂದನೆಂದವೆ ಕಹಳೆ ಜಯ ಜಯ 27 ದೂಷಕಹರಣ ಶ್ರೀರಾಮ ಬಂದ ವಿ- ಭೀಷಣವರದ ರಾಘವ ಬಂದ ಭಾಷೆ ಪಾಲಿಪ ರಾಮಚಂದ್ರ ಬಂದನು ಜಗ- ದೀಶ ತಾ ಬಂದನೆಂದವೆ ಕಹಳೆ ಜಯ ಜಯ 28 ತಾಟಕಪ್ರಾಣಾಪಹಾರ ಬಂದ ಜಟÁಯುಮುಕ್ತಿಕಾರಣ ಬಂದ [ತಾಟಂಕ] ಧರ ನಾರಾಯಣ ರವಿಕುಲ ಕೋಟಿ ತಾ ಬಂದನೆಂದವೆ ಕಹಳೆ ಜಯ ಜಯ 29 ವೀರ ವಿಕ್ರಮ ರಾಘವ ಬಂದ ಮಾರೀಚಮರ್ದನ ರಾಮ ಬಂದ ನಾರಿ ಶ್ರೀ ಜಾನಕಿರಮಣ ಬಂದನು ಹರಿ ರಾಮ ತಾ ಬಂದನೆಂದವೆ ಕಹಳೆ ಜಯ ಜಯ 30 ದೇವಕುಮಾರ ರಾಘವ ಬಂದ ದೇವರ ದೇವನು ರಾಮ ಬಂದ ಭಾವೆ ಶ್ರೀ ಜಾನಕಿರಮಣ ಬಂದನು ರಾಮಚಂದ್ರ ತಾ ಬಂದನೆಂದವೆ ಕಹಳೆ ಜಯ ಜಯ 31 ನಿರುಪಮಚರಿತ ರಾಘವ ಬಂದ ದುರಿತದಲ್ಲಣ ರಾಮದೇವ ಬಂದ ಭರತಶತ್ರುಘ್ನರ ಸಹೋದರಯೋಧ್ಯದ ಸುರಪತಿ ಬಂದನೆಂದವೆ ಕಹಳೆ ಜಯ ಜಯ 32 ಹೇಮಖಚಿತ ರತ್ನ ಪೀಠದಲಿ ಭೂಮಿಜೆ ಸಹಿತ ಕುಳಿತ ರಾಮ ವಾಮ ಭಾಗದಿ ಒಪ್ಪಿರ್ದಳು ಜಾನಕಿ ಆ ಮಹಾಸಭೆಯನು ಬೆಳಗುತಲಿ ಜಯ ಜಯ 33 ಕುಂದಣ ರತ್ನದಡ್ಡಿಕೆಯೊಳಗೆ ಹೊಂದಿಸಿ ನವರತ್ನ ಇರುವಂತೆ ಇಂದುವದನೆ ಜಾನಕಿ ಹರುಷದಿ ರಾಮ ಚಂದ್ರನ ಮಧ್ಯದೊಳೊಪ್ಪಿದಳು ಜಯ ಜಯ 34 ಹೇಮದ್ಹರಿವಾಣದೊಳಗ್ನಿಯನು ಕಾಮಿನಿಯರು ತಂದಿಳುಹಿದರು ರಾಮ ಮನ್ನಿಸಿ ಉಡುಗೊರೆಯಿತ್ತು ಅವರಿಗೆ ಹೇಮಾರ್ಚನೆಗಳ ತೊಡಗಿದನು ಜಯ ಜಯ 35 ಲಾಜತೊಂಡಿ[ತಂಡು?]ಲ ಆಹುತಿಗೊಟ್ಟು ಪೂಜಿಸಿದನೆ ವಿಘ್ನೇಶ್ವರನ ರಾಜವದನೆಯ ಒಡಗೊಂಡು ರಾಘವ ಪೂಜಿಸಿದನೆ ಋಷಿಮುನಿವರರ ಜಯ ಜಯ 36 ಇಂದ್ರಾದಿ ಮುನಿಗಳು ಕೈಹೊಡೆದು ಚಂದ್ರ ಸೂರ್ಯರು ಉಘೇಉಘೇಯೆನಲು ಮಂದಾರ ಮಲ್ಲಿಗೆ ಮಳೆಗಳ ಕರೆದರು ಅಂದದಿ ಸುರಜನರೆಲ್ಲರಾಗ ಜಯ ಜಯ 37 ಅರಳುವ ಕೆಂದಾವರೆ ಕುಸುಮ ಪರಿಮಳ ಸುರಮ್ಯ ಕಣ್ಗೆಸೆಯೆ ಎರಗುವ ಮರಿದುಂಬಿಗಳಂತೆ ರಾಘವ ಕರಗಳ ಪಿಡಿದೆÀತ್ತಿದ ಸತಿಯ [ಜಯ ಜಯ] 38 ಇಳೆಯ ಜಗಂಗಳನುದರದಲಿ ಅಳವಡಿಸಿದ ಮಹಾತ್ಮಕನು ಇಳೆಯ ಮಗಳನು ಎತ್ತಲಾರದೆ ರಾಮ ಬಳಲಿದನೆಂದು ನಕ್ಕರು ಜನರು ಜಯ ಜಯ 39 ಪರಾಕು ಸ್ವಾಮಿ ಪರಾಕು ದೇವ ಪಾದ ಎಚ್ಚರಿಕೆ ಸೀತಾಪತಿ ರಾಮನೆ<
--------------
ಹೆಳವನಕಟ್ಟೆ ಗಿರಿಯಮ್ಮ
ಸುಕೃತ ಫಲವೋ ದರುಶನ ಏಸು ಪುಣ್ಯಕರವೋ ಪ ಸುಕೃತ ಫಲವೋ ಶ್ರೀ ವ್ಯಾಸರಾಜ ಗುರುವರ್ಯರ ದರುಶನ ಅ.ಪ ವರ ಕರ್ಣಾಟಕ ಸಿಂಹಾಸನದಲಿ ಮೆರೆಯುತಲಿರುವ ಯತೀಂದ್ರರ ದರುಶನ 1 ಚಂದ್ರಿಕ ನ್ಯಾಯಾಮೃತ ತಾಂಡವದಲಿ ನಂದಕುಮಾರನ ಕುಣಿಸುವÀ ದರುಶನ 2 ಹಗಲು ದೀವಟಿಗೆ ಹಸುರು ಛತ್ರಿ ಮುಖ ಬಗೆ ಬಗೆ ಬಿರುದಾವಳಿಗಳ ವೈಭವ 3 ರಾಜನ ಕುಹಯೋಗವನೆ ನಿವಾರಿಸಿ ರಾಜಾಧಿರಾಜ ಸಂಪೂಜ್ಯರ ದರುಶನ 4 ರುಕುಮಿಣಿ ಭಾಮಾರಮಣನ ಪೂಜಿಸಿ ಸುಕೃತ ಸ್ವರೂಪ ಪ್ರಸನ್ನರ ದರುಶನ 5
--------------
ವಿದ್ಯಾಪ್ರಸನ್ನತೀರ್ಥರು