ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಉಣಲೊಲ್ಲೆ ಯಾಕೋ ಅಣ್ಣಯ್ಯ ಉಣದೆ ಹೀಗೇಕೆ ಹಟ ಮಾಡುವಯ್ಯ ಪ ಉಣದಿರೆ ನನ್ನೆದೆ ತಳಮಳಗೊಳುವುದು ತಣಿಸೋ ಮನವನು ಉಂಡು ಕಂದಯ್ಯ ಅ.ಪ ನೀನನುದಿನವೂ ಉಣದಿದ್ದರೂ ಹೀಗೆ ಏನೂ ಹಸಿವಿಲ್ಲದೆ ಆಟವಾಡುವೆ ಹೇಗೆ ಏನಿದರ ಗುಟ್ಟು ಎಲ್ಲೂಟ ಮಾಡುವೆ ನಾನೇನ ಮಾಡಿಹೆನು ಉಣದಿರಲು ಹೀಗೆ 1 ಗೋಪಾಲಿಕೆಯರಲಿ ಆಕಳ ಹಾಲುಂಡು ಗೋಪಾಲಕರ ಕೂಡೆ ಬೆಣ್ಣೆಯ ಕದ್ದುಂಡು ಪಾಪಿಷ್ಠ ಬಲನೊಡನೆ ಮಣ್ಣನಾದರು ತಿಂದು ಅಪಾಟಿ ಹೊಟ್ಟೆಯ ತುಂಬಿಕೊಂಡಿಹೆಯೇನೊ 2 ಪೂತನಿಯ ಮೊಲೆಯುಂಡು ಜಡಗಟ್ಟಿತೊ ಪ್ರೀತಿಯಲಿ ಆ ಗೋಪಿಯರ ದಿಟ್ಟಿ ತಾಕಿತೊ ಆತುಕೊಂಡಾವ ಗೋಪಿಯು ಕೊಟ್ಟಳೆದೆಹಾಲ ಸೋತು ಹೋದೆನಯ್ಯ ನಿನಗುಣಿಸಲಾಗದೆ 3 ಅಣ್ಣಯ್ಯ ಕುಚೇಲ ನೀಡಿದ ಅವಲಕ್ಕಿಯುಂಡು ಕೃಷ್ಣೆ ಕೊಟ್ಟುಳಿದ ಅಗುಳನ್ನವುಂಡು ಚಿಣ್ಣ ಕಡುಭಕ್ತ ವಿದುರನ ಮನೆಯಲಿ ಹಾಲುಂಡು ಸಣ್ಣ ಹೊಟ್ಟೆ ತುಂಬಿತೆ ಕಂದ ಉಣಲೊಲ್ಲೆ ಯಾಕೊ4 ವಸುಧೆಯೊಳಗೆ ದಾಸರು ನಿನ್ನ ಪೂಜಿಸೆ ಏಸು ಪರಿಯಲಿ ನೈವೇದ್ಯ ನೀಡುವರೊ ಬಿಸಿಬಿಸಿ ಪರಮಾನ್ನ ಸಣ್ಣಕ್ಕಿಯೋಗರವು ಹಸಿದ ನಿನಗೆ ಬಲು ಇಷ್ಟವಾಯಿತೆ ಕೃಷ್ಣ 5 ವರಮಹಾಋಷಿಗಳ ವೇದ ಮಂತ್ರಗಳ ಪರಮ ಭಾಗವತರ ಪಲ್ಲಾಂಡುಗಳು ವರಜಾಜಿಪುರಿವಾಸ ನಿನ್ನ ಸೇವಿಸುತಿರಲು ನಿರುತ ಸಂತುಷ್ಟ ನೀ ಚೆನ್ನಕೇಶವನೆ 6
--------------
ನಾರಾಯಣಶರ್ಮರು
ಕೈತುತ್ತ ಹಾಕುವೆ ಬಾರೋ ರಂಗ ಮೈತುಂಬಾ ಒಡವೆಯ ಇಡುವೆನು ಬಾರೋ ಪ ಬೈತಲೆ ಬಾಚಿ ಹೂ ಮುಡಿಸುವೆ ಬಾರೋ ತೈ ತೈ ತೈ ಎಂದು ಕುಣಿದಾಡು ಬಾರೋ ಅ.ಪ ಬಿಸಿ ಬಿಸಿಯನ್ನವ ಮೊಸರಲಿ ಕಲಸಿ ಹಸುವಿನ ಬೆಣ್ಣೆಯ ಅದರ ಮೇಲಿರಿಸಿ ಕೇಸರಿ ಬೆರೆಸಿ ತುಸು ಏಲಕ್ಕಿಯ ಪುಡಿಮಾಡಿರಿಸಿ 1 ಬಸಿರಲ್ಲಿ ಜಗಂಗಳ ತುಂಬಿಹೆನೆಂದು ಹಸಿವಿಲ್ಲವೆನಬೇಡ ಅಸುರರಕೊಂದು ಬಿಸದ ಕಾಳಿಂಗನ ತುಳಿದೆದ್ದುನಿಂದು ಬಸವಳಿದಿರ್ಪೆನೀನಮರರ ಬಂಧು 2 ಹೊಸ ಪೀತಾಂಬರ ಕಟಿಬಂಧವಿಡುವೆ ವಿಸರವ ಪಸರಿಪ ಹೂಗಳ ಮುಡಿವೆ ರಸಸವಿನಾದದ ಕೊಳಲನು ಕುಡುವೆ ನಸುನಗೆ ತೋರೋ ಮಾಂಗಿರಿರಂಗ ನಲಿವೆ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಾ ನೋಡಿ ಬಂದೆ ಕೇಳಮ್ಮ ಗೆಳತಿ ಪ ನಾನಿಲ್ಲ ನೀನಿಲ್ಲ ಏನಂದರೇನಿಲ್ಲ ಕಾಣುವ ಮಾತಲ್ಲ ಜಾಣೆ ಸುಳ್ಳಲ್ಲ ಅ.ಪ ಹಸುರಿಲ್ಲ ಕೆಂಪಿಲ್ಲ ಪಶುವಿಲ್ಲ ಪಕ್ಷಿಲ್ಲ ವಸುಧಿಲ್ಲ ಉದಧಿಲ್ಲ ವ್ಯಸನಿಲ್ಲ ಬಂಧವಿಲ್ಲ ಹಸಿವಿಲ್ಲ ತೃಷೆಯಿಲ್ಲ ದೆಸೆಯಿಲ್ಲ ದಿಕ್ಕಿಲ್ಲ ನಿಶೆಯಿಲ್ಲ ದಿವಯಿಲ್ಲ ಕುಸುಮಾಕ್ಷಿ ಸುಳ್ಳಲ್ಲ 1 ಜಲವಿಲ್ಲ ಗಗನಿಲ್ಲ ನೆಲವಿಲ್ಲ ಗಿರಿಯಿಲ್ಲ ಕುಲವಿಲ್ಲ ಚಲವಿಲ್ಲ ಮಲಿನಿಲ್ಲ ಶೀಲಿಲ್ಲ ಜಳಕಿಲ್ಲ ಊಟಿಲ್ಲ ಬೆಳಕಿಲ್ಲ ಕಾಳಿಲ್ಲ ತಳಿಯಿಲ್ಲ ತಮಯಿಲ್ಲ ಲಲನೆ ಸುಳ್ಳಲ್ಲ 2 ಕೃಪೆಯಿಲ್ಲ ಕಪಟಿಲ್ಲ ಜಪವಿಲ್ಲ ತಪವಿಲ್ಲ ಗುಪಿತಿಲ್ಲ ಬೈಲಿಲ್ಲ ನೆಪ್ಪಿಲ್ಲ ಮರೆವಿಲ್ಲ ವಿಪಿನಿಲ್ಲ ಸದನಿಲ್ಲ ರಿಪುವಿಲ್ಲ ಸ್ನೇಹವಿಲ್ಲ ಅಪ್ಪಯಿಲ್ಲ ಅವ್ವಯಿಲ್ಲ ನಿಪುಣೆ ಸುಳ್ಳಲ್ಲ 3 ರಾಗಿಲ್ಲ ರಚನಿಲ್ಲ ಯಾಗಿಲ್ಲ ಯಜ್ಞಿಲ್ಲ ತ್ಯಾಗಿಲ್ಲ ತ್ಯಜನಿಲ್ಲ ಭೋಗಿಲ್ಲ ಭಾಗ್ಗ್ಯಿಲ್ಲ ರೋಗಿಲ್ಲ ಶ್ರಮವಿಲ್ಲ ಬೈಗಿಲ್ಲ ಬೆಳಗಿಲ್ಲ ಯಾಗಿಲ್ಲ ಪಾಪವಿಲ್ಲ ಭಗಿನಿ ಸುಳ್ಳಲ್ಲ 4 ಹೋಮವಿಲ್ಲ ವಿಪ್ರಿಲ್ಲ ಧೂಮವಿಲ್ಲ ಧೂಳಿಲ್ಲ ಭೂಮಿಲ್ಲ ಜನನಿಲ್ಲ ಕಾಮಿಲ್ಲ ಮರಣಿಲ್ಲ ನೇಮಿಲ್ಲ ಕ್ರಿಯವಿಲ್ಲ ನಾಮಿಲ್ಲ ರೂಪಿಲ್ಲ ಸ್ವಾಮಿ ಶ್ರೀರಾಮ ಬಲ್ಲ ಭಾಮೆ ಸುಳ್ಳಲ್ಲ 5
--------------
ರಾಮದಾಸರು
ನಾರಾಯಣ ನಿನ್ನ ನಾಮದ ಸ್ಮರಣೆಯ |ಸಾರಮೃತವೆನ್ನ ನಾಲಗೆಗೆ ಬರಲಿ ಪಕೂಡುವಾಗಲು ನಿಂತಾಡುವಾಗಲು ಮತ್ತೆ |ಹಾಡುವಾಗಲು ಹರಿದಾಡುವಾಗ ||ಖೋಡಿವಿನೋದದಿ ನೋಡದೆ ನಾ ಬಲು |ಮಾಡಿದ ಪಾಪ ಬಿಟ್ಟೋಡಿ ಹೋಗುವ ಹಾಗೆ 1ಊರಿಗೆ ಹೋಗಲಿ ಊರೊಳಗಿರಲಿ-|ಕಾರಾಣಾರ್ಥಗಳೆಲ್ಲ ಕಾದಿರಲಿ ||ವಾರಿಜನಾಭನರಸಾರಥಿಸನ್ನುತ|ಸಾರಿಸಾರಿಗೆ ನಾ ಬೇಸರಿಸದ ಹಾಗೆ 2ಹಸಿವು ಇದ್ದಾಗಲಿ ಹಸಿವಿಲ್ಲದಾಗಲಿ |ರಸ-ಕಸವಿರಲಿ ಹರುಷವಿರಲಿ ||ವಸುದೇವಾತ್ಮಜ ಶಿಶುಪಾಲಕ್ಷಯ ||ಅಸುರಾಂತಕ ನಿನ್ನ ಹೆಸರು ಮರೆಯದಂತೆ 3ಕಷ್ಟದಲ್ಲಿರಲಿ ಉತ್ಕøಷ್ಟದಲ್ಲಿರಲಿ-|ಎಷ್ಟಾದರು ಮತಿಗೆಟ್ಟಿರಲಿ ||ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ |ಅಷ್ಟಾಕ್ಷರ ಮಹಾಮಂತ್ರದ ನಾಮದ 4ಕನಸಿನೊಳಾಗಲಿ ಕಳವಳಿಕಾಗಲಿ |ಮನಸುಗೊಟ್ಟಿರಲಿ ಮುನಿದಿರಲಿ ||ಜನಕಜಾಪತಿ ನಿನ್ನ ಚರಣಕಮಲವನು |ಮನಸಿನೊಳಗೆ ಒಮ್ಮೆ ನೆನೆಸಿಕೊಳ್ಳುವ ಹಾಗೆ 5ಜ್ವರ ಬಂದಾಗಲು ಚಳಿ ಬಂದಾಗಲು |ಮರಳಿ ಮರಳಿ ಮತ್ತೆ ನಡೆವಾಗಲು ||ಹರಿನಾರಾಯಣದುರಿತನಿವಾರಣ |ಇರುಳು ಹಗಲು ನಿನ್ನ ಸ್ಮರಣೆ ಮರೆಯದಂತೆ 6ಸಂತತಹರಿನಿನ್ನ ಸಾಸಿರನಾಮವ |ಅಂತರಂಗದಾ ಒಳಗಿರಿಸಿ ||ಎಂತೋ ಪುರಂದರವಿಠಲರಾಯನೆ |ಅಂತ್ಯಕಾಲದಲಿ ಚಿಂತಿಸುವಂತೆ 7
--------------
ಪುರಂದರದಾಸರು