ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲ ಭಯ ಎಲ್ಲ ಭಯ ಕ್ಷುಲ್ಲಕ ಜನಗಳಿಗೆಲ್ಲ ಭಯ ಪ ತಲ್ಲಣಿಸದೆ ಸಿರಿವಲ್ಲಭನಲಿ ಮನ ನಿಲ್ಲಿಸುವರಿಗೆಲ್ಲ ಜಯ ಅ.ಪ ಇರಲು ಭಯ ಧನವಿರಲು ಭಯ ಇಲ್ಲದಿದ್ದರೆ ತಿರಿದುಂಬೊ ಭಯ ನೆರೆ ಹೊರೆ ಜನಗಳ ಸಿರಿಯನು ನೋಡಲು ಉರಿಯುವ ಜನಗಳಿಗೆಲ್ಲಿ ಜಯ 1 ಎಲ್ಲ ಜಯ ಎಲ್ಲ ಜಯ ಬಲ್ಲ ಸುಜನಗಳಿಗೆಲ್ಲ ಜಯ ಪೊಳ್ಳು ಜೀವನದ ಜಳ್ಳು ಸೌಖ್ಯಗಳ ಒಲ್ಲೆನೆಂಬುವರಿಗೆಲ್ಲ ಜಯ 2 ಸರಳ ಜನರ ನೋಡುವುದೆ ಭಯ ದುರುಳ ಜನಕೆ ತಮ್ಮ ನೆರಳನು ಕಂಡರೆ ಅಧಿಕ ಭಯ 3 ಜ್ಞಾನ ಜಯ ದಿವ್ಯ ಜ್ಞಾನ ಜಯ ಜ್ಞಾನದಿಂದ ಹರಿಸ್ಥಾನ ಜಯ ಹಾನಿಯ ನೀಡುವ ನಾನಾ ಭೋಗವ ಮೌನದಿ ತ್ಯಜಿಪರಿಗೇನು ಭಯ 4 ಒಂದು ಜಯ ನೂರು ಭಯ ದ್ವಂದ್ವಗಳನು ಸಹಿಸದ ನರಗೆ ತಂದೆ ಪ್ರಸನ್ನ ಶ್ರೀಕೃಷ್ಣನ ಚರಣ ದ್ವಂದ್ವ ಸೇವಕರಿಗೆಂದೂ ಜಯ 5
--------------
ವಿದ್ಯಾಪ್ರಸನ್ನತೀರ್ಥರು
ಸಕಲವೆಲ್ಲವು ಹರಿಸೇವೆ ಎನ್ನಿ ಯಕುತಿವಂತರು ಹರಿಭಕುತಿ ಯೆನ್ನಿ ಧ್ರುವ ಹುಟ್ಟಿ ಬಂದಿಹ್ಯದೆ ವಿಠ್ಠಲನ ಸುಸೇವೆಗೆನ್ನಿ ಸೃಷ್ಟಿಯೊಳಿಹ್ಯದೆ ಶ್ರೀ ವಿಷ್ಣು ಸಹವಾಸವೆನ್ನಿ 1 ಬದುಕಿ ಬಾಳುದೇ ಇದು ಶ್ರೀಧರ ಉದ್ದೇಶವೆನ್ನಿ ಸಾಧನ ಸಂಪತ್ತು ಶ್ರೀ ಮಾಧವನದು ಎನ್ನಿ 2 ಉಂಬುಂತಿಂಬುದೆಲ್ಲ ಅಂಬುಜಾಕ್ಷನ ನೈವೇದ್ಯವೆನ್ನಿ ಕೊಂಬುಕೊಡುವ ಹಂಬಲ ಶ್ರೀ ಹರಿಯದೆನ್ನಿ 3 ಇಡುವ ತೊಡುವದೆಲ್ಲ ಪೊಡವಿಧರನಾಭರಣವೆನ್ನಿ ಉಡುವ ಮುಡಿವದೆಲ್ಲ ಹರಿಯ ಸಡಗರವೆನ್ನಿ 4 ನುಡಿವ ನುಡಿಗಳೇ ಹರಿಬಿಡದೆ ಕೊಂಡಾಡುದೆನ್ನಿ ಬಡುವ ಹರುಷವೆಲ್ಲ ವಸ್ತುದೇ ಎನ್ನಿ 5 ನಡೆವ ನಡಿಗೆಯಿಲ್ಲ ಹರಿಯ ಪ್ರದಕ್ಷಿಣಿ ಎನ್ನಿ ಎಡವಿ ಬೀಳುದು ಹರಿನಮವೆನ್ನಿ 6 ಏಳುವ ಕೂಡುವದೆಲ್ಲ ಹರಿಯ ಊಳಿಗವೆನ್ನಿ ಹೇಳಿ ಕೇಳುದೆಲ್ಲ ಹರಿಪುರಾಣವೆನ್ನಿ 7 ನೋಡುವ ನೋಟಗಳೆಲ್ಲ ಹರಿ ಸುಲಕ್ಷಣವೆನ್ನಿ ಮಾಡುವ ಮಾಟಗಳೆಲ್ಲ ಹರಿಯದೆನ್ನಿ 8 ಮಲಗಿ ನಿದ್ರೆಗೈವದೇ ಹರಿಯ ಕಾಲಿಗೆರಗುದೆನ್ನಿ ಬಲಕ ಎಡಕ ಹೊರಳುದೇ ಲೋಟಾಂಗಣ(?) ವೆನ್ನಿ 9 ವನಿತೇರ ಸಂಗವೇ ತಾ ಹರಿಯ ಲೀಲೆಯು ಎನ್ನಿ ತನುಮನವೆಲ್ಲಾ ಹರಿಸ್ಥಾನವೆ ಎನ್ನಿ 10 ಸತಿಸುತ ಮಿತ್ರರೆಲ್ಲ ಹರಿಸೇವೆ ದೂತರೆನ್ನಿ ಮತ್ತೆ ಬಂಧುಬಳಗೆಲ್ಲ ಹರಿಯದೆನ್ನಿ11 ಸುಖದು:ಖವೆಂಬುದೇ ಶ್ರೀಹರಿಯ ಸಂಕಲ್ಪವೆನ್ನಿ ನಕ್ಕು ನುಡುವುದೆಲ್ಲ ಹರಿ ಆಖರವೆನ್ನಿ 12 ಹೆಣ್ಣು ಹೊನ್ನಾರ್ಜಿತವೆಲ್ಲ ಹರಿಯ ಕಾಣಿಕೆ ಎನ್ನಿ ನಾನೀನೆಂಬುದೆಲ್ಲ ಹರಿಚೇತನವೆನ್ನಿ 13 ಸ್ವಾರ್ಥ ಹಿಡಿವದೆಲ್ಲ ಪಾರ್ಥನ ಸ್ವಾಮಿಗೆ ಎನ್ನಿ ಅರ್ತು ಮರ್ತು ನಡೆವ ಹರಿಕರ್ತೃತ್ವವೆನ್ನಿ 14 ಅಂತ್ರಬಾಹ್ಯವೆಲ್ಲ ಹರಿಗುರು ಮಾತೃಪಿತೃವೆನ್ನಿ ಗುರ್ತುವಾದದ್ದೆಲ್ಲ ತೀರ್ಥಕ್ಷೇತ್ರವೆನ್ನಿ 15 ಲಾಭಾಲಾಭವೆಲ್ಲ ಹರಿಪಾದಕರ್ಪಿತವೆನ್ನಿ ಶುಭಾ ಶುಭವೆಲ್ಲ ಹರಿಶೋಭೆಯು ಎನ್ನಿ 16 ಕನಸು ಮನಸುಗಳೆಲ್ಲ ಹರಿಯ ನೆನೆವ ಸೇವೆನ್ನಿ ಧೇನಿಸಿ ಬಯಸುದೇ ಹರಿಧ್ಯಾನವೆನ್ನಿ 17 ನಿತ್ಯಕರ್ಮವೆಲ್ಲ ಹರಿಪಾದಕ ಸಮರ್ಪಣವೆನ್ನಿ ಸತ್ಯಾಸತ್ಯವೆಲ್ಲ ಹರಿ ಅಗತ್ಯವೆನ್ನಿ 18 ಹೆಜ್ಜೆಗೊಮ್ಮೆ ಬೆಜ್ಜರ್ಹಿಡಿದು ರಾಜೀವನಯನನೆನ್ನಿ ಸಜ್ಜನರೊಡೆಯ ಗಜವರದ ಎನ್ನಿ 19 ಸೋಹ್ಯ ಸೂತ್ರವೆಲ್ಲ ಹರಿಯ ಮಹಾಮಹಿಮೆ ಎನ್ನಿ ಗುಹ್ಯಗೂಢವೆಲ್ಲ ಹರಿಯಗುರುತ ಎನ್ನಿ 20 ಇಹಪವೆಲ್ಲ ಹರಿಸೇವೆಗನುಕೂಲ ವೆನ್ನಿ ಸೋಹ್ಯ ಮಾಡುದೆಲ್ಲ ಹರಿಯ ದಯವೆನ್ನಿ 21 ಸಕಲ ಧರ್ಮಗಳೆಲ್ಲ ಹರಿಯ ಶಿಖಾಮಣಿಯೆನ್ನಿ ಪ್ರಕಟವಾಗಿ ದೋರುದೇ ಪ್ರತ್ಯಕ್ಷವೆನ್ನಿ 22 ನೇಮನಿತ್ಯ ಇದೇ ಮಹಿಪತಿಯ ಸ್ವಾಮಿಯದೆನ್ನಿ ಪ್ರೇಮದಿಂದ ಒಪ್ಪಿಸಿಕೊಂಬ ದಯಾಳುವೆನ್ನಿ 23
--------------
ಕಾಖಂಡಕಿ ಶ್ರೀ ಮಹಿಪತಿರಾಯರು