ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಕ್ಕಿವಾಹನ ದಯಸಿಂದು ನೀ ಎನ್ನ ಚಿಕ್ಕ ಮನತುರಗವನ್ನು ನೀನೆ ತಿದ್ದೊ ಪ ಕತ್ತಲೆಯೊಳು ಬಲು ಕಾಲಕಳದೆಯಾಗಿ ಮತ್ತೆ ಬೆಳಕು ಕಂಡು ಬೆದರುತಿದೆ ಕತ್ತಲಂಜಿಕೆ ತೋರಿ ಬೆಳಕಿನ ರುಚಿಯನು ಇತ್ತು ಕುಶಲಗತಿ ಕಲಿಸಯ್ಯ 1 ಹಿಂದಕ್ಕೆ ತಿರಗದೆ ತಾನಾಗಿ ಬ್ಯಾಗನೆ ಮುಂದಕೆ ನಡೆದು ಪರರ ಬೆಳಸುಗಳ ಒಂದನ್ನ ಬಯಸದೆ ಪದ್ಧತಿ ಬಿಡದಂತೆ ಒಂದಾಗಿ ಗಮ್ಯಸ್ಥಾನವ ಸೇರಿಸಯ್ಯ 2 ವಿಧಿನಿಷೇಧಗಳೆಂಬ ಗಿಲಕಿಯ ದನಿಗೈಸಿ ಹೆದರಿಸೊ ಸನ್ಯಾಯ ಕಶದಿಂದಲೀ ಮುದದಿ ಭಕುತಿ ಗುಣವ ಕೊರಳು ಕಟ್ಟಿ ಬಿಗಿದು ಪದುಮಾಕ್ಷ ನಿನ್ನ ಪಾದವ ಸ್ತುತಿಸಯ್ಯ 3 ಉತ್ತಮ ಗುಣವುಳ್ಳ ವಾಜಿಯಿದನೆ ಮಾಡಿ ವಸ್ತು ಎನ್ನದು ಮಾತ್ರವೆಂದೆನಿಸಿ ಚಿತ್ತಕೆ ಬಂದಂತೆ ಇದಿರಾರು ನೀ ನಿತ್ಯ ಹತ್ತಿ ಹರಿಸುವನು ಸನ್ಮತವೆನಗೆ 4 ಲೇಸಾದಾ ಹಯಗಳೊಳು ನೀನೆವೆ ಜಗದೊಳು ಲೇಸು ಮಾಡಿದೆಯೆಂಬ ವಾರ್ತಿ ಕೇಳಿ ವಾಸುದೇವವಿಠಲ ನಿನಗೆ ಬಿನ್ನೈಸಿದೆ ದಾಸನ ಮಾತು ಲಾಲಿಸೆ ಕಾಯೋ ಸರ್ವೇಶ5
--------------
ವ್ಯಾಸತತ್ವಜ್ಞದಾಸರು
ಭಕ್ತಿಯೆಂಬ ಹೆಣ್ಣ ಶಕ್ತಿಯನ್ನು ನೋಡಿ ಮುಕ್ತಾಶ್ರಯ ಲಕ್ಷ್ಮೀಪತಿಯನ್ನು ಪಾಡಿ ಪ. ಸ್ವಾನಂದ ಪರಿಪೂರ್ಣ ಪರಮ ಮಂಗಲಮೂರ್ತಿ ಶ್ರೀನಿವಾಸಗೆ ಸರ್ವ ಸಂಗವ ಬಿಡಿಸಿ ತಾನಿರುವಲ್ಲಿಗೆ ಹಿಡಿದೆಳತರಿಸಿ ಸಾನುರಾಗದಿ ತನ್ನ ಸಂಗಡಲಿರಿಸಿ 1 ಅಣುರೇಣು ತೃಣಕಾಷ್ಠ ಪರಿಪೂರ್ಣ ಸರ್ವೇಶ ಗಣನೆಯಿಲ್ಲದ ದಿವ್ಯ ಗುಣಗಳುಳ್ಳವನು ಎಣಿಸಲು ಇವಳ ಜನರ ದೋಷಗಳನು ಕ್ಷಣ ಬಿಟ್ಟಗಲದೆ ಇವಳ ಕೂಡಿಹನು 2 ಭೂಧರ ಗಿರಿವರ ಶೋಭಿತ ಮೂರ್ತಿ ಮಾಧವ ಪರಿಹರಿಸುವನು ಭವಾರ್ತಿ ಪಾದ ಪಲ್ಲವಗಳ ನಂಬಿದವರಿಗರ್ಥಿ ಸಾಧಿಪ ಕರುಣಾಳು ಹರಿಯ ಶ್ರೀಕೀರ್ತಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಮುಂಜಾನೆ ಎದ್ದು ಮುರಹರನ ಸ್ಮರಿಸೆಲೆ ಮನವೆ ಅಂಜುವ ಭವದುರಿತ ಹಿಂಗಿಸುವನು ಧ್ರುವ ಕ್ಲೇಶ ಪರಿಹರಿಸುವನು ಭವ ನಾರಾಯಣೆನಲು ಮೀಸಲು ಮನದಲೊಮ್ಮೊ ಮಾಧವೆಂದೆನಲು ತಾ ಭಾವಿಸುವ ಹೃದಯದೊಳು ಗೋವಿಂದನು ವಾಸನೆಯ ಪೂರಿಸುವ ವಿಷ್ಣು ಯೆಂದೆನಲು ತಾ ದೋಷ ಛೇದಿಸುವ ಮಧುಸೂದನೆನಲು ಲೇಸುಗೈಸುವ ಜನುಮ ವಾಮನೆನಲು 1 ಸಿರಿ ಸಕಲ ಪದವೀವ ಶ್ರೀಧರಂದೆನಲು ತಾ ಹರುಷಗತಿನೀವ ಹೃಷೀ ಕೇಶನೆನಲು ಪಾತಕ ದೂರ ಪದ್ಮಾನಾಭೆಂದೆನಲು ಭಂಜನ ದಾಮೋದರೆನಲು ಸುರಿಸುವ ಅಮೃತವ ಸಂಕರುಷಣೆಂದೆನಲು ಹೊರೆವ ಧರೆಯೊಳು ವಾಸುದೇವೆನಲು ಪರಿಪರಿಯ ಸಲುಹುವ ಪ್ರದ್ಯುಮ್ನನೆಂದೆನಲು ಅರಹುಗತಿನೀವ ಅನಿರುದ್ದನೆನಲು 2 ಪೂರಿಸುವ ಭಾವ ಪರುಷೋತ್ತಮೆಂದೆನಲು ತಾ ತಾರಿಸುವ ಜನುಮ ಅಧೋಕ್ಷಜೆನಲು ನರಜನ್ಮುದ್ಧರಿಸುವ ನಾರಸಿಂಹೆಂದೆನಲು ಕರುಣ ದಯ ಬೀರುವ ಅಚ್ಯುತನೆನಲು ಜರಿಸುವ ದುವ್ರ್ಯಸನ ಜನಾರ್ದನೆನಲು ಊರ್ಜಿತಾಗುವುದು ಉಪೇಂದ್ರ ಎನಲು ತರಳ ಮಹಿಪತಿ ಪ್ರಾಣದೊಡೆಯ ಶ್ರೀಹರಿಯೆನಲು ಕರುಣದಿಂದದೊಗುವ ಗುರುಕೃಷ್ಣನು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಲೋಕನೀತಿ ಇತ್ತಿತ್ತ ಬಾರೆಂದು ಕರೆಯುವವರಿಲ್ಲದಿರೆ ವ್ಯರ್ಥವಲ್ಲವೆ ಜನ್ಮವು ಪ. ಅತ್ತತ್ತ ಹೋಗೆಂಬ ನುಡಿ ಕೇಳಿ ಜಗದೊಳಗೆ ಮತ್ತೆ ಇರಬಹುದೆ ಹರಿಯೆ ಅ.ಪ. ಆರಿಗಾರಾಗುವರೊ ಪ್ರಾರಬ್ಧ ನೀಗದಲೆ ಶೌರಿ ದಾರಿಯ ತೋರನು ಈ ರೀತಿಯರಿತು ಹೇ ದುರ್ಮನವೆ ನರಹರಿಯ ಆರಾಧನೆಯನೆ ಮಾಡೊ 1 ಏಕಾದಶ್ರೇಂದ್ರಿಯವ ಶ್ರೀ ಕಳತ್ರನೊಳಿಟ್ಟು ಏಕ ಮನದಲ್ಲಿ ಭಜಿಸು ಏಕೆ ತಲ್ಲಣಿಸುವೆ ಶೋಕಕ್ಕೆ ಒಳಗಾಗಿ ನೂಕು ಭವತಾಪ ಜಗದಿ 2 ಗೋಪಾಲಕೃಷ್ಣವಿಠ್ಠಲನೆ ಗತಿ ಎಂತೆಂದು ಈ ಪರಿಯಿಂದ ಭಜಿಸು ಶ್ರೀ ಪರಮ ಕಾರುಣ್ಯ ಗುರುಗಳಂತರ್ಯಾಮಿ ತಾಪ ಹರಿಸುವನು ಭವದಿ 3
--------------
ಅಂಬಾಬಾಯಿ
ಸ್ಮರಿಸಿರೊ ನಮ್ಮ ನರನ ಸಾರಥಿಯ ಪರಿಹರಿಸುವನು ತಾಪತ್ರಯ ವ್ಯಥೆಯ ಪ. ರಣಮಂಡಲದಲ್ಲಿ ಗುಣಗುವ ಕುಂತಿಯ ತನುಜನ ನೋಡುತ ವಿನಯದಿಂದ ಘನತತ್ವವನು ಪೇಳಿ ಅಣುಮಹದ್ಗತ ವಿಶ್ವ- ತನುವ ತೋರಿದ ಸತ್ಯ ವಿನಯ ಶ್ರೀ ಕೃಷ್ಣನ 1 ಸುರನದೀ ತನುಜನ ಶರದಿಂದ ರಕ್ತವ ಸುರಿವಂದ ತೋರಿ ಶ್ರೀಕರ ಚಕ್ರವ ಧರಿಸಿ ಓಡುತ ತನ್ನ ಚರಣ ಸೇವಕನೆಂಬ ಹರುಷ ತಾಳಿ ಬೇಗ ತಿರುಗಿ ಬಂದವನ 2 ವಿಜಯ ಸಾರಥಿಯಂದು ಭಜಿಸುವ ದಾಸರ ವಿಜಯ ಪೊಂದಿಸುವನಂಡಜ ರಾಜಗಮನ ಅಜ ಭವವರದ ಕಂಬುಜನಾಭ ಕಮಲೇಶ ಭುಜಗ ಧರಾಧೀಶ ಭಜನೀಯಪಾದನ 3
--------------
ತುಪಾಕಿ ವೆಂಕಟರಮಣಾಚಾರ್ಯ