ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಶವಾಚ್ಯುತ ಮಾಧವಾನಂತ|ಶ್ರೀ ಶಕಮಲದಳೇಕ್ಷಣಾ| ವಾಸುದೇವ ಮುಕುಂದ ಮುರಹರ ಕ್ಲೇಶಹರಣ ಜನಾರ್ಧನಾ|| ವಾಸುಕಿಯ ಪರಿಯಂಕನೆನುತಲಿ|ನೆನೆವನಾವ ನರೋತ್ತಮಾ| ಮೋಸಹೋಗದಿರವರೊಳೆಂದು|ಚರರಿಗ್ಹೇಳಿದನೈಯಮಾ 1 ರಾಮರಾಘವ ರಾಜಶೇಖರ|ರಾವಣಾಸುರಮರ್ದನಾ| ಶಾಮಸುಂದರ ಸಕಲ ಗುಣನಿಧಿ|ಶಬರಿಪೂರಿತ ವಾಸನಾ ಭೂಮಿಜಾಪತಿ ಭೂತನಾಥ|ಪ್ರಿಯನೆಂಬ ನರೋತ್ತಮಾ| ಪ್ರೇಮಿಕನ ನುಡಿಸದಿರಿಯೆಂದು|ಚರರಿಗ್ಹೇಳಿದನೈಯಮಾ 2 ಬಾಲಲೀಲವಿನೋದ ಶ್ರೀ ಗೋಪಾಲ ಗೋಕುಲ ಲಾಲನಾ| ಕಾಲಜಲಧರ ನೀಲಮುರಲೀ ಲೋಲಸುರವರ ಪಾಲನಾ| ಕಾಲಕಾಲನೆ ಕಂಸಹರನನು ತಾವ ನೆನೆವ ನರೋತ್ತುಮಾ| ಕಾಲಿಗೆರಗಿರಿ ಅವರಿಗೆಂದು|ಚರರಿಗ್ಹೇಳಿದನೈಯಮಾ 3 ಮಕರಕುಂಡಲ ಕಿರೀಟ ಕೌಸ್ತುಭ|ಕಟಕಕೇಯೂರ ಭೂಷಣಾ| ಅಖಿಲ ಜಗನುತ ಚರಣಪೀತಾಂಬರನೆ ಶ್ರೀವತ್ಸಲಾಂಭನಾ| ಪ್ರಕಟಿತಾಯುಧ ಶಂಖಚಕ್ರಗದಾಬ್ಜ ನೆನೆವನರೋತ್ತಮಾ| ಸುಖಿಸುವವರನು ತ್ಯಜಿಸಿರೆಂದು ಚರರಿಗ್ಹೇಳಿದನೈಯಮಾ 4 ಶ್ರವಣಪೂಜನೆ ಸ್ಮರಣಕೀರ್ತನೆ ವಂದನೆದಾಸ್ಯದಿ ಸಖ್ಯವಾ| ಬಿಡದನಾವನರೋತ್ತುಮಾ| ಅವನ ಸೀಮೆಯ ಹೋಗದಿರೆಂದು ಚರರಿಗ್ಹೇಳಿದನೈಯಮಾ 5 ಯಾರಮನೆಯಲಿ ತುಲಸಿವೃಂದಾವನದಿ ಶಾಲಿಗ್ರಾಮವು| ಚಾರುದ್ವಾದಶನಾಮ ಹರಿಚಕ್ರಾಂಕಿತದ ಶುಭಕಾಯವು| ಮೀರದಲೆ ಹರಿದಿನದ ವ್ರತದಲಿ ನಡೆವನಾವನರೋತ್ತಮಾ| ದಾರಿ ಮೆಟ್ಟದಿರೆಂದು ತನ್ನಯ ಚರರಿಗ್ಹೇಳಿದನೈಯಮಾ 6 ಸಾಧುಸಂತರು ಬಂದರೆರಗುತ ಪಾದೋದಕದಲಿ ಮೀವನು| ಆದಿನವಯುಗ ವಾದಿಚತುರ್ದಶ ಪರ್ವಕಾಲಗಳೆಂಬನು| ಸಾದರದಿ ಹರಿಪೂಜೆಯಿಂದರ್ಚಿಸುವ ನಾವನರೋತ್ತಮಾ| ಮೋದದಿಂದಲಿ ಬಾಗಿರೆಂದು ಚರರಿಗ್ಹೇಳಿದನೈಯಮಾ 7 ಅಂದು ಹೇಳಿದ ಕಥೆ ರಹಸ್ಯದ ಹರಿಯನಾಮದ ಮಾಲಿಕಾ| ತಂದೆ ಮಹೀಪತಿ ಎನ್ನ ಮುಖದಲಿ ನುಡಿಸಿದನು ಭೋಧಾಷ್ಟಕ| ತಂದು ಮನದಲಿ ಭಕುತಿಯಿಂದಲಿ ನೆನೆವನಾವನರೋತ್ತಮಾ| ಇಂದು ಜೀವನ್ಮುಕ್ತನಮಗಿನ್ನೇನು ಮಾಡುವನೈಯಮಾ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸತತ ಹರಿಯ ನಾಮವನ್ನು ಯತುನದಿಂದ ನುಡಿವ ನರನು ಪ ಅತಿತ್ವರೆಯಲಿ ಸರ್ವಕಾರ್ಯ ಸಿದ್ಧಿಪೊಂದುವ ಅ.ಪ ದುರ್ಗಮಾರ್ಗ ಪಿಡಿದು ಕುರುಕ್ಷೇತ್ರ ಪಯಣವೇಕೆ ಜಿಹ್ವ ಯಗ್ರದಲ್ಲಿ ಹರಿಯನಾಮವಿರುವ ನರನಿಗೆ 1 ಮೂರು ಲೋಕಗಳಲಿ ಇರುವ ಹೇರು ಪುಣ್ಯಲಾಭ ಒಂದು ಸಾರಿ ಹರಿಯನಾಮದಿಂದ ಸಾಧ್ಯವಿರುವುದು 2 ಉಚ್ಚರಿಸಲು ಹರಿ ಎಂದೆರಡು ಅಕ್ಷರಗಳ ನರನು ಕ್ಷಣದಿ ಮೋಕ್ಷ ಪಾಥೇಯವನ್ನು ಸಿದ್ಧಗೊಳಿಸುವ 3 ಹರಿಯನಾಮ ಒಂದೇ ಎನಗೆ ಸರ್ವವಿಧದ ಜೀವನವು ಹರಿಯನಾಮ ಹೊರತು ಕಲಿಯೊಳರಿಯೆ ಗತಿಯನು 4 ಹರಿಯೇ ಗಂಗಾ ಹರಿಯೇ ಗಯಾ ಹರಿಯೇ ಕಾಶಿ ಸೇತು ಪುಷ್ಕರ ಹರಿಯ ನಾಮ ಜಿಹ್ವೆಯಲ್ಲಿ ಇರುವ ನರನಿಗೆ 5 ನೂಕಿ ಕಾಮಕ್ರೋಧಗಳನು ಏಕವಾರ ಹರಿಯೆಂದೆನಲು ನಾಕುವೇದಗಳನು ಓದಲೇಕೆ ಮನುಜನು 6 ಅಶ್ವಮೇಧ ಪುರುಷಮೇಧ ಯಜ್ಞಫಲವು ಲಬ್ಧವಿಹುದು ವಿಶ್ವಾಸದಿ ಹರಿಯನಾಮ ನುಡಿದ ನರನಿಗೆ 7 ಕೋಟಿ ಶತ ಗೋದಾನ ಕನ್ಯಾಭೂಮಿ ದಶಶತಕಗಳ ದಾನ ಸಾಟಿ ಹರಿಯನಾಮ ನುಡಿಯು ಭಕ್ತಜನರಿಗೆ 8 ಸಪ್ತ ಕೋಟಿ ಮಹಾಮಂತ್ರ ಚಿತ್ತ ವಿಭ್ರಮ ಕಾರಕಗಳು ಯುಕ್ತಿಯೊಂದೇ ಹರಿಯನಾಮದಕ್ಷರದ್ವಯ 9 ಮುನ್ನ ವರ ಪ್ರಹ್ಲಾದ ನುಡಿದ ಘನ್ನನಾಮ ಪಠನದಿಂದ ಪ್ರ ಸನ್ನ ಹರಿಯು ತನ್ನ ಪದವನೀವ ಮುದದಲಿ 10
--------------
ವಿದ್ಯಾಪ್ರಸನ್ನತೀರ್ಥರು