ಮರಗವ್ವ ತಂಗಿ ಮರಗವ್ವ
ದುರುಳ ಗುಣದ ಸವಿ ಸುರಿಯವ್ವ ಪ
ಪರಿಪರಿಯಿಂದಲಿ ಹರಿಹರಿಯೆನ್ನದೆ
ದುರಿತದುರುಲಿನೊಳು ಬಿದ್ದೆವ್ವ ಅ.ಪ
ಗುರುಹಿರಿಯರನು ಜರೆದೆವ್ವ
ಪರಿಪರಿ ಪಾಪ ಕಟ್ಟಿಕೊಂಡೆವ್ವ
ಹರಿಶರಣರ ಸೇವೆ ಅರಿಯವ್ವ
ಹರಿಹ್ಯಾಂಗೊಲಿತಾನು ನಿನಗವ್ವ 1
ಹಿಂದಿನ ಕರ್ಮದು ನೋಡವ್ವ
ಮುಂದೆ ಚಂದಾಗಿ ತಿಳಕೊಂಡುಳಿಯವ್ವ
ಮಂದರಧರ ಗೋವಿಂದನ ಮಾನಸ
ಮಂದಿರದೊಳಗಿಟ್ಟು ಭಜಿಸವ್ವ 2
ಗುರುವರ ಶ್ರೀರಾಮ ಚರಣವ್ವ ತಂಗಿ
ಅನುದಿನ ಸ್ಮರಿಸವ್ವ
ಶರಣ ಜನರ ಪ್ರಿಯ ಕರುಣಾಕರನು ನಿನ್ನ
ಪೊರೆಯದೆ ಎಂದಿಗೆ ಇರನವ್ವ3