ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಿ ಶ್ರೀ ಗುರುವಿನ ದಯದೊಲವಿಹುದು | ದುರಿತ ಭಯ ಮುಟ್ಟ ಲರಿಯದು 1 ದಿವಸಾಧಿಪನಾ ಮಂಡಲವನು ಸಾರಿಹಗ | ಜವದಿ ಕತ್ತಲೆಯು ಮುಸುಕುವದೇನವಗ 2 ಸಕಲ ಗಜಗಳು ಮುದದಲಿ ಒಂದಾಗಿ | ಶಕ್ತಿ ಸಿಂಹನ ಮುಂದೆ ನಿಲ್ಲುವವೇ ಪೋಗಿ 3 ಪ್ರತ್ಯಕ್ಷದಲಿ ಅನಳನಿಹು ಸ್ಥಳದಲಿ | ಮತ್ತೆದೋರುದೇ ಮುಖ ಹಿಮವು ಇದಿರಲಿ 4 ಕಂದನ ಪ್ರಿಯ ಮಹಿಪತಿಯ | ಸ್ಮರಿಸದೇ | ಅಂಧಕನಂತೆ ಬಾಳುತಿಹಾವರಿಗಲ್ಲದೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಏನುಗತಿ ಏನುಗತಿ ಇನಕುಲೇಶ ಹೀನ ವಿಷಯದಿ ಮನ ಶ್ವಾನನಂತಿಟ್ಟ ಎನಗೇನು ಪ ಮೂರು ಗುಣಗಳಿಂದ ಮೂರು ತಾಪಗಳಿಂದ ಮೂರು ಈರೆರಡೊಂದು ಮದಗಳಿಂದ ಮೂರು ಐದಾರಿಂದ ಮರೆತು ತನು ಮೂಲಗಳ ಸ್ಮರಿಸದೇ ನರಹರಿಯ ನರಕಕ್ಕೆ ಗುರಿಯಾದ ಎನಗೆ 1 ಅತಿಥಿಗಳಿಗನ್ನ ಬಲು ಹಿತದಿ ಕೊಡದೆಲೆ ಪರ ಸತಿಯ ಸಂಗದಿ ನೆಲಸಿ ಹಿತವ ಮರೆದು ರತಿಪತಿಪಿತ ನಿನ್ನ ಸ್ತುತಿಸದೆ ಮತಿಗೆಟ್ಟು ಕ್ಷಿತಿಯೊಳಗೆ ನಾನೊಬ್ಬ ಯತಿಯಂತೆ ಚರಿಪ 2 ಇನ್ನಾದರೆನ್ನ ಪಾವನ್ನ ಮಾಡಲು ನಿನ್ನ ಘನ್ನ ಉಪಕೃತಿ ಮರಿಯೆ ಶ್ರೀ ನರಹರಿಯೆ ನಿನ್ನ ಪೊರತನ್ಯರನು ಮನ್ನಿಸುವರ ಕಾಣೆ ಬೆನ್ನ ಬಿದ್ದೆನೊ ದಯವನ್ನು ಮಾಡೆಲೋ ಬೇಗ3
--------------
ಪ್ರದ್ಯುಮ್ನತೀರ್ಥರು
ಭಕ್ತಿಯಲಿ ನಡೆವರಿವರೇ ಸುಗುಣರೊ ಮುಕ್ತಿಯನು ಬಯಸಿ ಮುರಾರಾತಿಯ ಚರಣದಲ್ಲಿ ಪ ಉದಯದಲೆದ್ದು ಉನ್ನತ ಸ್ವರದಿಂದ ಹರಿ ಪದವೇ ಗತಿ ಎನುತಾ ಎಲ್ಲ ಕಾಲಕೆ ಉದರ ಚಿಂತಿಯ ಮರೆದು ಮನ ಉಬ್ಬಿ ಉತ್ಸವದಿ ಪದೋಪದಿಗೆ ಮಂಗಳಾವಾರ್ತಿ ಪೇಳುತ ನಿತ್ಯಾ 1 ಭಾಗವತ ಮಿಕ್ಕ ಪುರಾಣಾದಿ ನುಡಿಗೆ ಕಿವಿಗೊಟ್ಟು ಹಾಹಾ ಎನತಲಿ ಒಡನೊಡನೆ ಹರಿ ಮಹಿಮೆಯಲಿ ಇದ್ದು ಮಾರಿಗಳ ಅಡಿಮಾಡಿ ಆದ್ಯಂತಕಾಲ ಸುಖಿಸುವ ನಿತ್ಯಾ 2 ಈ ದೇಹ ತ್ಯಾಗ ಮಾಡದೆ ಆಗಲಿ ಪಂಚ ಭೇದ ಪೇಳುವದು ಬಿಡೆನೆಂಬೊ ಸೊಲ್ಲು ಆದಿತ್ಯ ಲೋಕಕ್ಕೆ ಮುಟ್ಟುವಂತೆ ಕೂಗಿ ಸಾಧನ ಮಾಡುತಲಿಪ್ಪ ಶುಭಮಾರ್ಗದಲಿ ನಿತ್ಯಾ 3 ಅವಾವ ಮೋಹಕವು ಶಾಸ್ತ್ರದಲ್ಲಿದ್ದರೂ ಭಾವದಲಿ ಗುಣಿಸದೆ ನಿಕ್ಕರಿಸೀ ದೇವದೇವೇಶನೆ ಬ್ರಹ್ಮಾದಿಗಳು ವಂಚಿಪ ಕಾವ ಕೊಲ್ಲುವನೀತನೆಂದು ತಿಳಿದು ನಿತ್ಯಾ 4 ಅನ್ಯಶಬ್ದವು ಅನ್ಯಸ್ಪರಿಶ ರೂಪಕ ರಸಾ ಅನ್ಯಗಂಧಗಳಿಗೆ ಇಂಬುಗೊಡದೇ ಧನ್ಯರಾಗಿದ್ದವರ ಕರುಣ ಸಂಪಾದಿಸಿ ಪುಣ್ಯಭೂಮಿಯನು ಹಾರೈಸುವ ನಿತ್ಯಾ 5 ಅವೈಷ್ಣವನು ಹರಿ ಎಂದು ನುಡಿವಡೆ ತಾನು ಅವನಂತೆ ಸ್ಮರಿಸದೇ ಸುಮ್ಮನಿದ್ದೂ ಭವವದ್ದು ಭಾಗ್ಯವನು ಅಪೇಕ್ಷಿಸದೇ ಮುಂದೆ ನಿತ್ಯ 6 ಭೂಸುರರ ಪಾದದಲಿ ವಿಶ್ವಾಸ ಇಟ್ಟು ದು ರಾಶೆಯನು ಮಾಡಿ ನರರಾಶ್ರೈಸದೆ ಏಸೇಸು ವಿಪತ್ತು ಗುಣ ಮೇಲಟ್ಟಿದರು ನಿತ್ಯ 7 ಕಾಲ ಮೃತ್ಯು ಬಂದು ಹುಂಕರಿಸಿ ನಿಂದು ಮಹ ಜ್ವಾಲೆಯನು ತೋರಿ ಕಠಿಣೋಕ್ತಿಯಲ್ಲೀ ಏಳೇಳು ಎನುತ ಎಬ್ಬಿಸಿದ ಕಾಲಕೆ ತನ್ನ ನಾಲಿಗೆಲಿ ಹರಿ ಕೃಷ್ಣ ಕೇಶವನೆನುತ ನಿತ್ಯಾ 8 ಸಕಲ ಚೇಷ್ಟಾದಿಗಳು ಹರಿಮಾಡಿಸಲು ಉಂಟು ಮುಕುತಿ ನರಕವೆಂಬ ಯೋಚನ್ಯಾಕೆ ಸಿರಿ ವಿಠ್ಠಲನಲ್ಲಿ ಸುಖ ದು:ಖವಿತ್ತದು ಸಮ್ಮತವೆನುತ ನಿತ್ಯಾ 9
--------------
ವಿಜಯದಾಸ
ಮರೆತು ಹೋದೆನೊ ದೇವ ರಂಗಯ್ಯ ರಂಗ ಸಿರಿದೇವಿ ರಮಣನೆ ಪರನೆಂದು ತಿಳಿಯದೆ ಪ ನೀರೊಳು ಮುಳುಗುತ್ತ ಮೀನಮತ್ಸ್ಯನು ಎಂದು ವೇದವ ತಂದಿತ್ತೆ ದೇವೇಶನೆ ವಾರಿಧಿಶಯನನೆ ವಾರಿಜಾಕ್ಷನು ಎಂದು ಸಾರಸಾಕ್ಷನ ಗುಣ ಸ್ಮರಿಸದೇ ಮನದಲಿ 1 ಬೆಟ್ಟ ಬೆನ್ನಿಲಿ ಪೊತ್ತು ಪೊಕ್ಕು ನೀರೊಳು ಬೇಗ ಭಕ್ತರನುದ್ಧರಿಸಿದ ದೇವನ ಪೃಥ್ವಿಯ ಕೋರೆಯಿಂದೆತ್ತಿ ಅಸುರನ ಕೊಂದ ಸಿಸ್ತು ತೋರಿದ ಪರವಸ್ತುವ ಸ್ಮರಿಸದೆ 2 ಘುಡು ಘುಡಿಸುತ ಬಂದು ಒಡಲ ಸೀಳಲು ಖಳನ ಅಡವಿ ಮೃಗವು ಎಂದು ಬೆರಗಾದೆನೊ ಹುಡುಗನಂದದಿ ಪೋಗಿ ಪೊಡವಿಪಾಲಕನ ಬೇಡಿ ಕೊಡಲಿಯ ಪಿಡಿಯುತ್ತ ತಾಯತರಿದನ ಸ್ಮರಿಸದೆ 3 ನಾರಿಯನರಸುತ ವನವ ಚರಿಸಿದಿ ನಾರಿಚೋರನ ಕೊಂದೆ ವಾನರ ಸಹಿತ ನವನೀತ ಚೋರನೆ ಮನೆಮನೆಗಳ ಪೊಕ್ಕು ಗಾರು ಮಾಡಿದ ಕೃಷ್ಣ ಹರಿಯೆಂದು ಸ್ಮರಿಸದೆ 4 ಬೆತ್ತಲೆ ನಿಂತರು ಉತ್ತಮ ನೆನಿಸಿದಿ ಸತ್ಯಮೂರುತಿ ಪುರುಷೋತ್ತಮನೆ ಕತ್ತಿ ಕಯ್ಯಲಿ ಪಿಡಿದು ಮತ್ತೆರಾವುತನಾಗಿ ಸುತ್ತಿ ಸುತ್ತಿದ ಸರ್ವೋತ್ತಮನರಿಯದೆ 5 ಭಕ್ತವತ್ಸಲಸ್ವಾಮಿ ಭಯನಿವಾರಣನೆಂದು ಭೃತ್ಯರು ನೃತ್ಯದಿ ಕುಣಿಯುವರೊ ಸತ್ಯ ಸಂಕಲ್ಪನೆ ಸತ್ಯಭಾಮೆಯ ಪ್ರಿಯ ಭಕ್ತರೊಡೆಯ ಪರವಸ್ತುವ ಸ್ಮರಿಸದೆ6 ಕರುಣವಾರಿಧಿಯೆಂದು ಸ್ಮರಿಸುವ ಭಕುತರ ಪರಿ ಅಘಗಳು ಪರಿಹಾರವೊ ಪತಿ ಕಮಲನಾಭ ವಿಠ್ಠಲ ಸ್ಮರಿಸದೆ ಅಪರಾಧ ಸಲಹೆಂದು ಸ್ಮರಿಸದೆ 7
--------------
ನಿಡಗುರುಕಿ ಜೀವೂಬಾಯಿ
ಮರೆವಾರೇನೋ ನಿನ್ನ ನೀನು ಗುರುತಾ ನೆಲೆ ಮಾಡದೆ | ಸಿರಿಯರಸನಸಿರಿ ಚರಣವ ಸ್ಮರಿಸದೇ | ನರದೇಹ ಬರಡವ ಮಾಡುವರೆ ಜಾಣಾ ಪ ಹಲವು ಪುಣ್ಯದಿಂದಲ್ಲದೇ ಸುಲಭದಲ್ಲಿ ಜನ್ಮವು | ಇಳೆಯೊಳಗುದಯಿಸಿ ತಿಳಿಯದೆ ಸ್ವಹಿತದ | ಬಳಿಕೆಯ ನೆರೆಭವ ಬಲಿಯೊಳು ಸಿಲುಕಿ | ತೊಳಲುತ ನಿಶಿದಿನ ಬಳಲುವೆ ಜಾಣಾ 1 ಅವಗತಿಯೋ ಎನಗೆ ಮುಂದಾ | ಆವ ಜನಮ ವಿಹುದೋ | ವಿವೇಕದಿಂದ ವಿಚಾರಿಸಿ ಮನದೊಳು | ಭಾವಿಸಿ ಗುರುವಿನ ಪಾವನ ಪಾದಾ | ಭಾವಭಕುತಿಯಲಿ ಸಾವಧನನಾಗದೆ | ಹ್ಯಾವಹೆಮ್ಮೆಲೆ ದಿನಗಳೆದೇ ಜಾಣಾ 2 ಬದಿಯಲ್ಲಿದ್ದಾ ವಸ್ತುವನು | ಸದಗಾನಾದ್ಯೋ ಕಾಣದೆ | ಸಾಧುರ ಕೈಯಲಿ ಹಾದಿಯ ಕೇಳೆಲೋ | ಸಾದರದಲಿ ನಿಜ ಸಾಧನ ಬಲಿದು | ಭೇದಿಸು ಮಹಿಪತಿನಂದನ ಸಾರಿದಾ | ಗಾದಿಯನ್ನದೆ ಗತಿ ಸಾಧಿಸೋ ಜಾಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವ್ಯರ್ಥಕಳೆವರೇನೊ ಕಾಲವ ಹೇ ಪ್ರಾಣಿ ನೀನು ಪ ಕೀರ್ತಿಸದೆ ಕುವಾರ್ತೆಯಿಂದ ಅ.ಪ. ನೇಸರನುದಯಿಸದ ಮುನ್ನ ಕರ್ಮ ನಾಮ ಬೇಸರದಲೇ ಸ್ಮರಿಸದೇ ಗ್ರಾಸದ್ಹರಟೆಗಳನು ಹರಟಿ 1 ಪವನ ಮತವನವಲಂಬಿಸಿದ ಸ್ಥವಿರ ಕವಿಗಳಿಂದ ಕಥಾ ಶ್ರವಣ ರಸವ ಕಿವಿಯ ದಣಿಯೆ ಸವಿದು ಸುಖಿಸಿ ಪ್ರವರನಾಗದೆ 2 ಕ್ಷಿತಿ ಜಲಾಗ್ನಿ ವಾಯು ಖಂ ಅತುಳ ಬುದ್ಧಿ ಅಹಂಕಾರಗಳು ಕೃತಿರಮಣನ ವಿಮಲ ಭಿನ್ನ ಪ್ರತಿಮೆಯೆಂದರಿದು ಭಜಿಸದೆ 3 ಶ್ರೀಪಯೋಜ ಪೀಠ ಶೈಲ ಚಾಪ ಗೋಪಮುಖರು ದ್ವಿತೀಯ ರೂಪರೆಂದು ಹರಿಗೆ ನೀ ಪ ದೇ ಪದೇ ನಮಸ್ಕರಿಸದೆ 4 ಪುತ್ರ ಜನನಿ ಜನಕ ವಿತ್ತ ಕರ್ತ ಜಗನ್ನಾಥವಿಠಲ ಕರ್ಮ ಕಠಿಣ ಕ್ರಿಯಾ ಭೋಕ್ತನು ಮಿತ್ರನೆಂದರಿಯದೆ 5
--------------
ಜಗನ್ನಾಥದಾಸರು
ಹ್ಯಾಂಗೆ ಉದ್ಧಾರ ಮಾಡ್ಯಾನೋ ಶ್ರೀಹರಿ ಹೀಗೆ ದಿನಗಳಿವಂಗನಿಗೆ ಪ ಬ್ಯಾಗ ಪತಿಗೆ ತಾ ಬಾಗದನುಕೂಲವಾಗಿರದೆ ತಿಳಿದ್ಹಾಗೆ ನಡೆವಳ ಅ.ಪ. ಉದಯದಲೆದ್ದತಿ ಸಜಮಲಳಾಗಿ ತಾ ಮುದದಿ ಪತಿಗೆ ನಮಿಸದವಳಿಗೆ ಪದುಮಾಕ್ಷಿ ತುಳಸಿಯ ಪೂಜಿಸಿ ಮನದಿ ಮಾಧವನ ಭಕ್ತಿಲಿ ಸ್ತುತಿಸದವಳಿಗೆ ಪದುಮನಾಭನೇ ಸರ್ವಪರನೆಂದು ಅರಿಯದೆ ಅಧಮ ಶಾಸ್ತ್ರವ ಕೇಳಿ ಅದರಂತೆ ನಡೆವಳ 1 ಹರಿದಿನದಲಿ ಉಂಡು ಹರಿಯನ್ನದಲೇ ಊರ ತಿರುಗಿ ಹೊತ್ತು ಕಳೆವಳಿಗೆ ಸರಸದಿ ನರಹರಿ ನಾಮ ಸಂಕೀರ್ತನೇ ಇರುಳು ಜ್ಯಾಗರ ಮಾಡದವಳಿಗೆ ದೊರಕಿದಷ್ಟರಲೇ ತಾ ಹರುಷ ಪಡೆದೇ ಧನ ಪತಿ ಹೊರಗ್ಹಾಕ್ವಳ 3 ಗುರು ಹಿರಿಯರ ಅತ್ತೆಮಾವರ ಜರಿದು ತಾ ಹಿರಿಯಳು ಮನಿಗೆ ನಾನೆನುತಿರ್ಪಳು ಪರರ ನಿಂದಿಸಿ ಭೂಸುರರು ಬಂದರೆ ಅನ್ನ ದೊರಕದೆನುತ ಹೇಳಿ ಕಳಹುವಳ ಸರಸ ಮೃಷ್ಟಾನ್ನವ ಹರುಷದಿ ಪತಿದ್ವಾರಾ ಹರಿಗರ್ಪಿಸದಲೇ ತ್ವರದಿ ತಾ ತಿನ್ವಳ 3 ಪತಿ ಅಂತರ್ಯಾಮಿ ಶ್ರೀ ಪತಿಯನರಿದು ತನ್ನ ಪತಿಯ ಸೇವೆ ಮಾಡದಿರುವಳಿಗೆ ಪತಿ ಮುಕ್ತಿ ಪಥವೆಂದು ಪತಿಹಿತದವನೆಂದು ಅರಿಯದೇ ಪತಿ ನೋಡ್ವಳಿಗೆ ಪತಿಯಿಂದಲಂಕೃತವಾಗಿಹ ಮಂಗಳಸೂತ್ರವೇ ಸಕಲ ಭೂಷಣವೆಂದರಿಯದವಳಿಗ್ಹಾಂಗೆ 4 ಪರಮ ಅತ್ತೆಯ ಮಾತು ಶಿರದಿ ಸ್ವೀಕರಿಸಿ ಐವರ ಕೂಡ ಧಾರೆಯರೆಸಿಕೊಂಡಾ ಪರಮ ಪಾವನಳಾದ ಭಾರತೀ ದೇವೇರ ಸ್ಮರಿಸದೇ ಅದರಂತಾಚರಿಸದೆ ಇರುವಳಿಗ್ಹ್ಯಾಂಗೆ 5 ವನವಾಸದಲಿ ಪಾಂಡು ತನಯರ ಕೂಡ ತಾ ಧನ ಸುಖ ಬೇಡದೆÀ ಪೋದವಳು ಘನ ಹಸಿವುತೃಷೆಯಿಂದ ಅನ್ನ ಬೇಡಿದ ದುರ್ವಾಸಾದಿಗಳನು ಆದರಿಸಿದವಳಾ ಆಜನನಿ ದೃಪವ ನಂದನಿಯ ಕೃತ್ಯಗಳನ್ನು ನೆನೆದು ತನ್ನಯ ಮನವನ್ನು ತೊಳೆಯದವಳು 6 ಮರುತಂತರ್ಗತ ಸ್ವಾಮಿ ಸಲಹೆನ್ನದೇ ಪರರಿಗೊಂದೆಡೆ ಇಕ್ಕಿ ಪಂಕ್ತಿ ಭೇದವ ಮಾಡಿ ಕರ್ಮ ಮಾಡ್ವಳಿಗೆ ಪರಮ ಪಾವನನಾದ ಹನುಮೇಶವಿಠಲನ ನೆರೆ ನಂಬದಲೇ ದೇಹ ಸ್ಥಿರವೆಂದು ತಿಳಿವಳಿಗ್ಹ್ಯಾಂಗ 7
--------------
ಹನುಮೇಶವಿಠಲ