ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾದ ಸೇವೆಯಿಂದಲಿ ಸುಖಿಸೋಳೊ ಲಕ್ಷ್ಮೀಲೋಲ ಪಾಡಿ ತೂಗುವಳೊ ಮೋಹದಲಿ ಯಶೋದ ಯೋಗಿ ಜನರು ಕೊಂಡಾಡಲ್ವಿನೋದ 1 ಜಲಧಿ ಭೂದೇವಿ ಪ್ರಜ್ವಲಿಸುವ ಆಲದೆಲೆಯು ತಾನಾಗಿ ನಿದ್ರೆಹಸಿವು ಬಿಟ್ಟು ನಿರುತದಿ ಆತನ- ಲ್ಲಿದ್ದಳಂಭ್ರಣಿ ಸ್ತೋತ್ರದಲಿ ಭೂದೇವಿ 2 ವಟದ ಎಲೆಯ ಮೇಲೆ ವಟುವಾಗಿ ಮಲಗಿ ಉಂ- ಗುಟವ ಬಾಯೊಳಗಿಟ್ಟು ಮುದದಿ ಚಪ್ಪರಿಸೆ ಕಟುತರದಲಿ ನಾಲ್ಕು ವೇದವ ತೋರುತ ಪಟುತರದಲಿ ಯೋಗನಿದ್ರೆ ಮಾಡಿದನು 3 ಹದಿನಾಲ್ಕು ಲೋಕ ತನ್ನುದರದಲ್ಲಿಡುವ ಪದುಮಾಕ್ಷ ಶ್ರೀಕೃಷ್ಣ ಪರಮಾತ್ಮ ಲಾಲಿ ಅಜಭವಸುರರೆಲ್ಲ ಭಜನೆಯ ಗೈವರು ಮುದದಿ ಶಯನವ ಮಾಡೊ ಮಧು ಮುರಾಂತಕನೆ 4 ಕಡಲಶಯನ ಹರಿ(ಯ) ತೊಟ್ಟಿಲೊಳಿಟ್ಟು ಬಿಡದೆ ನಾರಿಯರೆಲ್ಲ ಪಾಡಿ ತೂಗುವರು ಪೊಡವಿಗೊಡೆಯ ನಿನ್ನ ನಾಮ ಕೊಂಡಾಡಲು ಬಿಡದೆ ಭಕ್ತರ ಕಾಯೊ ಭೀಮೇಶಕೃಷ್ಣ 5
--------------
ಹರಪನಹಳ್ಳಿಭೀಮವ್ವ
ಪಾಲಿಸೋ ಗಂಗಾಧರ ಪಾಲಿಸೋ ಪ. ಪಾಲಿಸೊ ಗಂಗಾಧರನೆ | ಮಧ್ಯ ಫಾಲದಿ ನಯನ ಉಳ್ಳವನೆ | ಆಹ ಶ್ರೀಲೋಲನ ಗುಣಜಾಲವ ಸ್ಮರಿಸುತ್ತ ಲೀಲೆಯಿಂ ಭಕ್ತರ ಪಾಲಿಸುತಿಪ್ಪನೆ ಅ.ಪ. ಬ್ರಹ್ಮನ ಭ್ರೂಮಧ್ಯೆ ಜನಿಸಿ | ಬಹು ದುರ್ಮತಿಗಳನೆ ಮೋಹಿಸಿ | ಕು ಧರ್ಮದ ಶಾಸ್ತ್ರವ ರಚಿಸಿ | ಅಂ ಧತಮ್ಮಸಿಗವರ ಕಳಿಸಿ | ಆಹ ನಿರ್ಮಲ ಮನದಲ್ಲಿ ಬೊಮ್ಮನಯ್ಯನ ಭಜಿಸಿ ನಿತ್ಯ ರಮಿಸುತಲಿಪ್ಪನೆ 1 ಕಂಜನಾಭನ ಮೊಮ್ಮಗನೆ | ಖಳರ ಭಂಜಿಸುವಂಥ ಬಲಯುತನೆ | ಮನ ರಂಜನ ರೂಪಾಕೃತನೆ | ಖಳ ಗಂಜಿ ಹರಿಯಿಂದ ರಕ್ಷಿತನೆ | ಆಹ ಅಮೃತ ಮಥಿಸುವಾಗ ನಂಜುದ್ಭವಿಸೆ ಕುಡಿದು ನಂಜುಂಡನೆನಿಸಿದೆ 2 ಕಪಿಲನದಿ ತೀರದಲ್ಲಿ | ಬಹು ತಪಸಿಗಳಿಗೆ ಒಲಿಯುತಲಿ | ಭಕ್ತ ರಪರಿಮಿತ ಬರುತಿಲ್ಲಿ | ನಿತ್ಯ ಜಪಿಸುತ್ತ ನಿನ್ನ ಸ್ತೋತ್ರದಲಿ | ಆಹ ಗುಪಿತದಿಂದ್ಹರಿ ಭಕ್ತರಪವರ್ಗದೊಡೆಯ ನಿನ್ನ ಲ್ಲಿಪ್ಪನೆಂತೆಂದು ಜಪಿಸುತ್ತಲಿಪ್ಪರೊ3 ಗಂಗಾಧರನೆನಿಸಿದನೆ | ಅಂತ ರಂಗದಿ ಹರಿಯ ತೋರುವನೆ | ಉಮೆ ಕಂಗಳಿಗಾನಂದಪ್ರದನೆ | ನಿತ್ಯ ರಂಗನಾಥನ ಪೂಜಿಸುವನೆ | ಆಹ ಜಂಗಮ ಜೀವರ ಮನದಭಿಮಾನಿಯೆ ಲಿಂಗರೂಪದಿ ಜನರ ಕಂಗಳರಂಜನೆ4 ಅಪಾರ ಮಹಿಮನ ಗುಣವ | ಬಹು ರೂಪಗಳನೆ ನೋಡುತಿರುವ | ನಿತ್ಯ ಶ್ರೀಪತಿ ನರಹರಿಯ ನೆನೆವ | ಮುಂದಿ ನಾ ಪದವಿಗೆ ಶೇಷನಾಗ್ವ | ಆಹ ಪರಿ ಪರಿ ಗೋಪಾಲಕೃಷ್ಣವಿಠ್ಠಲನ ಧ್ಯಾನವ ನೀಡೊ5
--------------
ಅಂಬಾಬಾಯಿ
ಸುಂದರ ಮೂರುತಿ ಹರಿಯೆ ಬಾ- ರೆಂದು ಕಶ್ಯಪ ಋಷಿ ಅದಿತಿಯರು ಮಂದಹಾಸದಿ ನಮ್ಮ ಮಂದಿರಕೀಗ ಗೋ- ವಿಂದ ಬಾ ಶ್ರೀಮುಕುಂದ ಬಾ ಯಾದವ ವೃಂದ ಬಾ ಬಲುಮುದದಿಂದ ಬಾ ಬಾ- ರೆಂದು ಕರದಾರು ಶೋಭಾನೆ 1 ಅಚ್ಚುತಾನಂತ ಶ್ರೀಹರಿ ನೀನು ಸಚ್ಚಿದಾನಂತಾತ್ಮನೆ ನೀನು ಮಿತ್ರೆ ಲಕುಮಿ ಒಡಗೂಡುತ ಬಾರೆಂದು ಅತ್ರಿಯರು ಸ್ತುತಿಪರು ಮಿತ್ರೆಯರು ಪಾಡ್ವರು ಕೀರ್ತಿಪರು ಅನಸೂಯಾತ್ರಿಯರು ಬಾರೆಂದು ಕರೆದಾರು ಶೋಭಾನೆ 2 ಭಾಗವತರ ಪ್ರಿಯ ಬಾರೆಂದು ಭಾರದ್ವಾಜರು ಭಕ್ತಿಯಲಿ ಸತಿ ಸುಶೀಲೆ- ಯರು ಸುಂದರ ನಾರಿಯರು ಕರೆವರು ಕಂಸಾರಿ ಬಾರೆಂದು ಕರದಾರು ಶೋಭಾನೆ 3 ಹಸ್ತಿವರದ ಹರಿ ಬಾರೆಂದು ವಿಶ್ವಾಮಿತ್ರರು ಹರುಷದಲಿ ಸತಿ ಸಹಿತದಿ ಕರೆವರು ಭಕ್ತಿಯಲಿ ಪರಮಾಸಕ್ತಿಯಲಿ ಹರಿಯನು ಸ್ತೋತ್ರದಲಿ ಭೂ ರಮಾ ಪಾರ್ಥಸಾರಥಿಯ ಕರದಾರು ಶೋಭಾನೆ 4 ಕೌಶಿಕ ಯಜ್ಞಪಾಲನೆ ಬಾ ಕಂಸನ ಸಭೆಯಲಿ ಸೆಳೆದನೆ ಬಾ ಹಂಸವಾಹನಪಿತ ಬಾರೆಂದು ಕರೆವರು ಗೌತಮರು ಪತ್ನಿ ಅಹಲ್ಯೆಯರು ಪಾಡುತ ಪ್ರಾರ್ಥಿಪರು ಮುರಹರಿ ಗೋಪಾಲ ಬಾರೆಂದು ಕರದಾರು ಶೋಭಾನೆ 5 ಜಗದುದರನೆ ಶ್ರೀ ಹರಿಯೆ ಬಾ ನಿಗಮತಂದು ಸುತಗಿತ್ತನೆ ಬಾ ಝಗಿಝಗಿಸುವ ಆಭರಣಗಳ್ಹೊಳೆಯುತ ಬಾರೆಂದು ಜಯ ಜಯವೆನ್ನುವರು ಋಷಿ ಜಗದಗ್ನಿಯರು ರೇಣುಕ ಸಹಿತ ಶ್ರೀಶನ ಕರದಾರು ಶೋಭಾನೆ 6 ಮದನ ಗೋಪಾಲನಿಗೆ ಮಂಗಳ ಯದುಕುಲ ತಿಲಕನಿಗೆ ಮಂಗಳ ಕಮಲಾನಾಭ ವಿಠ್ಠಲನಿಗೆ ಸತಿ ಅ- ರುಂಧತಿಯರು ಜಯ ಜಯ ಮಂಗಳವೆಂದು ಕರದಾರು ಶೋಭಾನೆ7 ಶೋಭನವೆನ್ನಿರೆ ಶ್ರೀಹರಿಗೆ ಶೋಭನವೆನ್ನಿರೆ ಮಾಧವಗೆ ಶೋಭನವೆನ್ನಿರಿ ಸೊಬಗುಳ್ಳ ದೇವಗೆ ಶೋಭಾನೆ ಸಿರಿಯರಸಗೆ ದಿವ್ಯ ಶೋಭಾನೆ ಪರಮಪುರುಷನಿಗೆ ಶೋಭಾನೆ ಶೋಭನ ಗರುಡಗಮನಗÉಶೋಭನವೆನ್ನಿರೆ ಶೋಭಾನೆ 8
--------------
ನಿಡಗುರುಕಿ ಜೀವೂಬಾಯಿ