ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದು ಥರವೇ ಥರವೇ ದೇವಾ ಥರವೇ ನಿನ್ನವರ ವಂಚಿಸಿ ನೀ ಮರೆಯಲ್ಲಿ ಇರುವುದು ಥರವೆ ಪ. ಪರಿಪರಿಯಲಿ ಸ್ತುತಿಗೈಯುತಲಿ ನಿನ್ನ ಪರಮ ಮಂಗಳ ಪಾದಗಾಣದೆ ಮರುಗುತಿರುವಾ ವರ ಭಕುತರಿಗೆ ಕರುಣದೋರದೆ ಇರುವೆ ವೆಂಕಟ ಅ.ಪ. ಅಜಭವಾದಿಗಳು ಸ್ತುತಿಸಿ ಪೂಜಿಸಿದ ಪಾದ ತ್ರಿಜಗವಂದಿತ ಕೃಷ್ಣ ನಿನ್ನಪಾದ ಭಜನೆಯನು ಮಾಡುತ ನಿನ್ನ ತ್ಯಜಿಸದನುದಿನ ಸುಜನರೆಲ್ಲರು ಸ್ತುತಿಸಿ ಪಾಡುತಿರೇ ತ್ರಿಜಗ ಪೂಜಿತನಾಗಿ ಭಕುತರ ಭಜನೆ ನಿನಗರಿವಿಲ್ಲೇ ದೇವನೆ ಸ್ವಜನರನು ಪಾಲಿಸುವ ಬಿರುದನು ತ್ಯಜಿಸುವರೆ ಸಿರಿಯರಸ ವೆಂಕಟ 1 ಮಚ್ಛಕೂರ್ಮವರಾಹನಾಗಿ ದೈತ್ಯರ ಸ್ವಚ್ಛಭಕುತರ ಸಲಹೆ ಸಂಹರಿಸಿ ಅಚ್ಛಪ್ರಲ್ಹಾದನಿಗೊಲಿದ ನರಹರಿಯಾಗಿ ಅಚ್ಛವಾಮನನಾಗಿ ಬಲಿಯತಲೆಯತುಳಿದು ಸ್ವಚ್ಛಗಂಗೆಯ ಇಂಬಿಡದೇ ದುಷ್ಟ ರಾಜರನಳಿದ ಭಾರ್ಗವ ದುಷ್ಟ ತಾಟಕಿ ಸಂಹರಿಸಿದನೆ ಕೃಷ್ಣರೂಪದಿ ಗೋಪೆರಿಗ್ವಲಿದನೆ ಉತ್ಕøಷ್ಟ ಬೌದ್ಧ ಕಲ್ಕಿ ವೆಂಕಟ 2 ಪರಮಪುರುಷ ಬಾ ವರದ ಮೂರುತಿ ಬಾ ಪರಿಪರಿ ಸ್ತುತಿಸಿ ವಂದಿಪೆ ಸಿರಿವರದ ಬಾ ಶರಧಿಶಯನ ನಿನ್ನ ಚರಣ ಸ್ಮರಣೆಯೀಯೆ ಶರಣಾಗತ ರಕ್ಷಾಮಣಿ ಬೇಗ ಬಾ ಸಿರಿಗೆ ಪೇಳದೆ ಬಂದು ಕರಿಯ ಪೊರೆದ ದೊರೆ ಶ್ರೀ ಶ್ರೀನಿವಾಸ ಬಾ ಗರುಡ ಗಮನನೆ ಶರಣಜನರನು ಮರೆಯದಲಿ ನೀ ಕರುಣ ವೆಂಕಟ 3
--------------
ಸರಸ್ವತಿ ಬಾಯಿ
ದೇವ ಫಣಿಭೂಷಣನೆ ಬಾ ಸಕಲ ಜನ ಜೀವಚೈತನ್ಯ ಬಾರೈ ದೇವತೆಗಳುಯ್ಯಲೆಯನು ಭಯಭಕ್ತಿ ಭಾವದಿಂ ತೂಗತಿಹರು ಪ ಅವನಿಯೊಳಗಯನವೆರಡು ಸರಪಣಿಗೆ ಭುವನವೇಳರ ಪೀಠವು ಶಿವನೆ ತೊಡಿಸಿರಲು ಮೇಲೆ ಕುಣಿಕೆ ತಾ ಧ್ರುವನ ಕೈಲಿಹುದುಯ್ಯಲೆ 1 ಧರಣಿಯಿದು ಮೇಲುಮಣೆಯು ಗಗನದಿ ಸ್ಫುರಿಸುತಿಹ ಶಶಿಸೂರ್ಯರು ದೀಪವಾ ಗಿರಲೊಪ್ಪುತಿಹದುಯ್ಯಲೆ 2 ಇಂದ್ರಾದಿ ದಿಕ್ಪಾಲಕರು ಮಿಕ್ಕಾದ ಗಂಧರ್ವ ಸುರ ಸಿದ್ಧರು ವಂದಿಸುತ ಸ್ತುತಿಗೈಯುತ ಸಂದಣಿಸಿ ಮುಂದೆ ನಿಂದಿಹರು ಮುದದಿ 3 ಕುಸುಮಮಾಲೆಗಳಾಗಿವೆ ನಕ್ಷತ್ರ ವೆಸೆದು ಗಗನದಲೊಪ್ಪುತ ಅಸಮತೇಜೋರಾಶಿಯೆ ಮದನಹರ ನಸುನಗುತ ಬಂದು ನೆಲೆಸು 4 ಮಂಗಳ ಮಹಾಮಹಿಮನೆ ಶಿವಗಂಗೆ ಗಂಗಾಧರೇಶ ನೀನೆ ಲಿಂಗವೆಂದೆನಿಸುತಿಲ್ಲಿ ತಿರುಪತಿಯ ರಂಗ ವೆಂಕಟನೆನಿಸುವೆ 5
--------------
ತಿಮ್ಮಪ್ಪದಾಸರು
ಧೀರೇಂದ್ರ ಧೀರೇಂದ್ರ ಪ. ಧೀರ ಮೂಲರಾಮನ ಪದಕಮಲವ ತೋರು ಮನದಿ ನೀ ಕುಣೀಕುಣಿದಾಡುವೆ ಅ.ಪ. ವರದಾ ತೀರದಿ ವರಗಳ ಕೊಡುತಲಿ ಮರುತಮತಾಂಬುಧಿ ಚಂದಿರನೆನಿಸಿದ 1 ಕುಷ್ಟಾದಿ ಬಹು ದುಷ್ಟ ಗ್ರಹಗಳ ಕುಟ್ಯೋಡಿಸುತ ಅಭೀಷ್ಟವಗರೆಯುವ 2 ಮುನಿ ಮೌಳಿಯೆ ನಿನ್ನನು ಸ್ತುತಿಗೈಯುತ ಘನ ಭಕ್ತಿಯೊಳಾಂ ಕುಣಿಕುಣಿದಾಡುವೆ 3 ಅರ್ಥಿಯಿಂದ ನಾ ನರ್ತನಗೈಯುವೆ ಸುತ್ತಿ ಸುತ್ತಿ ದಾಸತ್ವದ ನೇಮದಿ 4 ಶ್ರೇಷ್ಠ ಶ್ರೀ ಗೋಪಾಲಕೃಷ್ಣವಿಠ್ಠಲಪ್ರಿಯ ಕೃಷ್ಣನ ಚರಣವ ಥಟ್ಟನೆ ತೋರಿಸೋ 5
--------------
ಅಂಬಾಬಾಯಿ
ಲಾಲಿಸಿ ರಘುವರನ ಚರಿತೆಯ ಸಾರ ಪೇಳುವೆ ಸುಖನಾಥನ ಪ ಶ್ರೀ ಲಲಾಮನು ಸುರರ ಮೊರೆಯನು ಭಾರ ಹರಿಸಲು ಲೀಲೆಯಲು ದಶರಥ ನೃಪಾಲನ ಬಾಲನೆನಿಸುತ ಅವತರಿಸಿದನು ಅ.ಪ. ಕುಶಿಸುತನ ಯಜ್ಞವ ರಕ್ಷಿಸಿ ಪಥದಿ ಋಷಿ ಪತ್ನಿಯ ಶಿಲಾರೂಪವ ಬಿಡಿಸಿದ ದೇವ ಪಶುಪತಿಯ ಕೋದಂಡ ಖಂಡಿಸಿ ಶಶಿವದನೆ ಜಾನಕಿಯ ಕರವನು ಕುಶಲದಲಿ ಪರಿಗ್ರಹಿಸಿ ಲೀಲೆಯ ನಸಮ ಭಾರ್ಗವನೊಡನೆ ತೋರಿದ 1 ತಂದೆ ವಾಕ್ಯವ ಪಾಲಿಸೆ ತಾ ಧರಣಿಗೆ ಬಂದ ಕಾರ್ಯವ ಸಲ್ಲಿಸೆ ಋಷಿಗಳಾಸೆ ತಂದು ತಾ ಮನಕಂಡು ವನಕೆ ಸತಿ ಸೋದರರ ಸಹಿತದಿ ಮುಂದೆ ಗಂಗೆಯ ದಾಟಿ ಭರದ್ವಾಜ ನಿಂದ ಸತ್ಕಾರವನು ಕೊಂಡನು2 ಚಿತ್ರಕೂಟದಲಿರಲು ವಿನಯದಿ ಬಂದು ಭಕ್ತ ಭರತನು ಬೇಡಲು ಪಾದುಕೆಯಿತು ಮತ್ತೆ ದಂಡಕವನ ಪ್ರವೇಶಿಸಿ ದೈತ್ಯರನು ಸಂಹರಿಸಿ ಶರಭಂಗ ಗಿತ್ತು ಮುಕ್ತಿಯ ಕುಂಭಸಂಭವ ನಿತ್ತ ದಿವ್ಯಾಸ್ತ್ರಗಳ ಪಡೆದನು 3 ವರಪಂಚವಟಿಯೊಳಗೆ ಶೂರ್ಪನಖಿಯು ದುರುಳ ಬುದ್ಧಿಯೊಳು ಬರೆ ಕಿವಿಮೂಗ ಕೊಯ್ಸಿ ಹರಿಣರೂಪದಿ ಬಂದ ದೈತ್ಯನ ಹರಣಗೈದಾಶ್ರಮಕೆ ತಿರುಗಲು | ಧರಣಿಸುತೆಯನು ಕಾಣದೆಲೆ ತಾ ನರರ ಪರಿಯಲಿ ಹಂಬಲಿಸಿದನು 4 ವನಜಾಕ್ಷಿ ವೈದೇಹಿಯ ಪುಡುಕುತ ಪಂಪಾ ಸನಿಹಕ್ಕೈತಂದು ವಾಲಿಯ ಸಂಹರಿಸ್ಯವನ ಅನುಜ ಸುಗ್ರೀವನಿಗೆ ಹರುಷದಿ ವಿನುತ ವಾನರ ರಾಜ್ಯದೊಡೆತನ ವನು ಕರುಣಿಸಿದ ಬಳಿಕ ಜಾನಕಿ ಯನು ಪುಡುಕೆ ಕಳುಹಿದನು ಕಪಿಗಳ 5 ಸ್ವಾಮಿಯ ಸ್ತುತಿಗೈಯುತ ಶ್ರೀ ಹನುಮಂತ ಆ ಮಹೋದದಿಯ ದಾಟುತ ಲಂಕೆಯ ಪೊಕ್ಕು ಭೂಮಿಜಾತೆಯ ಕಂಡು ರಾಮನ ಕ್ಷೇಮ ವಾರ್ತೆಯ ತಿಳುಹಿ ಬಹುಜನ ತಾಮಸರ ಸದೆಬಡಿದು ರಾವಣ ನಾ ಮಹಾ ನಗರಿಯನು ದಹಿಸಿದ 6 ಮರಳಿ ರಾಮನ ಬಳಿಗೆ ಬೇಗದಿ ಬಂದು ಮರುತ ಸುತನು ರಾಮಗೆ ಸೀತೆಯ ಕ್ಷೇಮ ವರುಹಿ ಚೂಡಾಮಣಿಯ ನೀಡಲು ಕರದಿ ಕೈಕೊಂಡದನು ನೋಡುತ ನರರ ಪರಿಯಲಿ ಹರುಷಬಾಷ್ಪವ ಸುರಿಸಿದನು ಶ್ರೀ ಕರಿಗಿರೀಶನು 7
--------------
ವರಾವಾಣಿರಾಮರಾಯದಾಸರು