ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಭೀಮಸೇನ ಪ್ರಾರ್ಥನೆ) ಭೀಮಸೇನ ಸಕಲಸತ್ವಧಾಮ ರಕ್ಷಿಸೆನ್ನ ಬೇಗ ಸಾಮಗಾನ ಲೋಲ ಕೃಷ್ಣ ಪ್ರೇಮರಸಕೆ ಪಾತ್ರನಾದ ಪ. ಮಂಗಲಾಚರಿತ್ರ ನಿನ್ನ ಅಂಗಸಂಗದಿಂದ ಬಹು ತುಂಗ ಗಿರಿಯು ಒಡೆದು ಶತಶೃಂಗವೆನಿಸಿತು ಅಂಗುಲಿ ಪ್ರಹಾರದಿಂದ ಶಿಂಗತತಿಗಳನ್ನು ಬಹಳ ಭಂಗಬಡಿಸಿ ಬಾಲಲೀಲ ರಂಗದಲ್ಲಿ ಬಲುಹ ತೋರ್ಪ 1 ಹಸಿದ ವೇಳೆಯಲ್ಲಿ ಮೆದ್ದ ವಿಷದ ಭಕ್ಷ್ಯ ಜೀರ್ಣಗೊಳಿಸಿ ಉಶನ ಮಂತ್ರದಿಂದ ಹಲ್ಲ ಮಸೆಯುತಾ ಬಂದ ಅಸುರ ವೇಶದಷ್ಟಾಕ್ಷಿಗಳ ಮಶಕದಂತೆ ಬಡಿದು ಕೆಡಹಿ ಕುಶಲದಿಂದ ನಿದ್ರೆಗೈದ ಅಸಮಶಕ್ತಿ ಪೂರ್ಣಮೂರ್ತಿ 2 ನಗಗಳ ಮೇಲೇರುತ್ತ ಹಣ್ಣುಗಳನೊಂದೊಂದಾಗಿ ಕರದಿ ತೆಗೆದು ತಿಂಬ ಕೌರವರನು ನಗುತ ನೋಡುತಾ ನೆಗೆದು ಬೀಳ್ವ ತೆರದಿ ತರುಮೂಲಗಳಾ ತುಳಿದು ಕೆಡಹಿ ದೇವಾ- ಕೊಂಡ 3 ಗೂಗೆಯಂತೆ ನಿನ್ನ ಬಳಿಗೆ ಸಾಗಿ ಬಂದು ಶಕುನಿಮುಖರು ಯೋಗನಿದ್ರೆ ತಿಳಿಯದೆ ಚೆನ್ನಾಗಿ ಬಂಧಿಸಿ ಭಾಗೀರಥಿಯ ಜಲದಿ ದೂಡೆ ವೇಗದಿ ಪಾತಾಳವೈದಿ ನಾಗಕನ್ಯೆರಿತ್ತ ರಸವ ಬೇಗ ಸವಿದು ತಿರುಗಿ ಬಂದ 4 ದುರುಳರಿಂದ ರಚಿತವಾದ ಅರಗಿನ ಮನೆಗೆ ಹೋಗಿ ಕಾಲ ನಿರುತಕಿನಿಸಿಲಿ ಇರುಳಿನಲ್ಲಿ ತಾನೆ ಅಗ್ನಿ ಇರಿಸಿ ಬೇಗಲೆದ್ದು ಸಹೋ ದರರನೆತ್ತಿ ಬಹು ಯೋಜನಕೆ ಸರಿದು ಪೋದ ಶಕ್ತರರಸ 5 ಡೊಂಬಿಮಾಳ್ಪನೆಂದು ಬಹಳ ಡಂಬರದಿಂದಿದಿರಾ ಹಿ- ಕದಂಬ ವೈರಿಯ ಅಂಬರದೊಳಗೈದಿ ವಜ್ರಕಂಬದಂತೆ ಹೊಳವ ಬಹು ಸ್ತಂಭದಿಂದ ಕೆಡಹುತ ಹೈಡಿಂಬನೆಂಬ ಮಗುವ ಪಡೆದ 6 ನಗರ ದೊಳ್ವೈದಿಕರಂತೆ ವಾಸವಾಗಿ ಪೋಕ ಬಕನ ಬಾಧೆಯಿಂದ ಶೋಕಗೊಳುವರ ಸಾಕುವೆನೆಂದೆದ್ದು ನಾನಾ ಶಾಖ ಭಕ್ಷಾನ್ನಗಳ ತಾನೆ ಸ್ವೀಕರಗೊಂಡಸುರನನ್ನು ಸೋಕಿ ಸೀಳಿ ಬಿಸುಟ ದೊರೆಯೆ 7 ವಿಪ್ರ ವೇಷದಿಂದ ದ್ರುಪದಸುತೆಯನೊಲಿಸಿ ಕೃದ್ಧ ನೃಪರ ಗೆದ್ದು ರುಕ್ಮಿಣೀಶ ಕೃಪೆಯಾ ಬಲಕೊಂಡು ಅಪರಿಗಣ್ಯ ಪೌರುಷಕಿಂನುಪಮೆಯಿಲ್ಲವೆಂದು ಸರ್ವ ಖಪತಿವರರು ಪೊಗಳುತಿರಲು ತ್ರಿಪುರವೈರಿಯಂತೆ ಮೆರೆದ 8 ಅಂಧ ನೃಪನ ಮಾತ ಕೇಳಿ ಇಂದ್ರಪ್ರಸ್ಥ ಪುರಕೆ ರಾಜ ನೆಂದು ನಿಂದು ಮಗಧಾದಿಗಳ ನೊಂದೆ ನಿಮಿಷದಿ ಕೊಂದು ರಾಜಸೂಯಮೇಧದಿಂದ ಸಕಲಯಜ್ಞೇಶಗೋ- ಕೊಂಡ 9 ದ್ಯೂತ ನೆವದಿ ಸಕಲ ರಾಜ್ಯ ಸೋತು ವನಕೆ ಪೋಗಿ ಲಕ್ಷ್ಮೀ- ನಾಥ ಕರುಣ ಬಲದಿಂದ ಸುರವ್ರಾತವಡಗಿಸಿ ಭೂತನಾಥನೋರದಿ ಬಹಳ ಖ್ಯಾತ ಕೀಚಕಾದಿಗಳನು ಘಾತಿಸಿ ಗಂಧರ್ವನೆಂದಜ್ಞಾತವಾಸ ಕಳದ ಧೀರ 10 ದುರುಳ ಕೌರವರನು ಗದೆಯ ತಿರುಹಿ ಕೆಡಹಿ ಧರಣಿಭರವ ಸುರಪಸೂನು ಸಹಿತಲ್ಲಿಳುಹಿ ಪರಮ ಹರುಷದಿ ಹರಿಯ ನೇಮದಿಂದ ನಾಗಪುರವನಾಳಿ ವಿಷ್ಣುಭಕ್ತಿ ಸುಜನ ತತಿಯ ಪೊರೆದು ಪದ್ಮಜಾತನಾಹ11 ದುಷ್ಟವೈರಿ ಜನರ ಗೆದ್ದು ಅಷ್ಟ ಭಾಗ್ಯ ಸಹಿತ ದೇಹ ಪುಷ್ಟಿ ಜ್ಞಾನ ದೃಷ್ಟಿಗಳನು ಕೊಟ್ಟು ಕರುಣಿಪಾ ಸೃಷ್ಟಿಗೊಡೆಯ ಸರ್ಪರಾಜ ಬೆಟ್ಟದಲ್ಲಿ ನಿಂದು ಭಕ್ತ- ಭೀಷ್ಟವರದನೊಲಿಪ ತೆರದಿ ಸುಷ್ಠುಪ್ರೇಮವಿಟ್ಟು ಕಾಯೊ 12
--------------
ತುಪಾಕಿ ವೆಂಕಟರಮಣಾಚಾರ್ಯ
ದಯ ಬಾರದ್ಯಾಕೊ ರಾಘವಾ ಪ ಕಾಯಬೇಕು ಯೆಂದು ಕೊರಗಿ ಮೊರೆಯಿಡೆ ನ್ಯಾಯವೇನು ಯೆನ್ನ ಮರತುಬಿಡುವದು ಅ.ಪ ಅಂದು ಅಜಮಿಳನು ಅಂತ್ಯಕಾಲದಲ್ಲಿ ಕಂದ ನಾರ ಬಾಯೆಂದು ಕರಿಯಲು ಅಂದ ಮಾತುಗಳಿಗೆ ಅತಿ ಹರುಷಿಸಿ ಬಂದ ಯಮನ ಬಾಧೆ ಬಿಡಿಸಲಿಲ್ಲವೇನೊ 1 ಹರಿಯೆ ಗತಿಯೆಂದು ಹೊಗಳು ಕಂದನ ಹರುಷವಿಲ್ಲದೆ ಪಿತ ಕಷ್ಟಪಡಿಸಲು ಊರು ತೋರದಂತಾ ಸ್ತಂಭದಿಂದ ಬಂದು ಮೂರು ಜಗವು ಅರಿಯೆ ಮನ್ನಿಸಲಿಲ್ಲವೇನೊ 2 ಸರ್ಪಶಯನನೆ ಸಾರ್ವಭೌಮನೆ ನಾಸಿಕ ಶ್ರೋತ್ರವಳಿದನೇ ಅಪ್ಪ ಗುರುವರ ವಿಜಯವಿಠ್ಠಲನೇ ಒಪ್ಪದಿಂದ ವಲಿವ ವರದರಾಜನೇ 3
--------------
ವಿಜಯದಾಸ
ಬಾಗೀನಮಿಪೆ ಬೇಗಬಾರೋ ಶ್ರೀ ನರಹರಿಯೇ ಪ ಭಾಗವತರು ನಿನ್ನ ಕೂಗಿ ಕರೆವರಯ್ಯ ಅ.ಪ ನಾಗಶಯನೆ ನಿನ್ನ ನಾಗರಾಜನು ಸ್ತುತಿಸೆ ಬೇಗಸಲಹಿದಿ ಬಂದು ನಾಗಾರಿವಾಹನ 1 ಸ್ತಂಭದಿಂದಲಿ ಬಂದು ಡಿಂಭಗೊಲಿದವನೆಂದು ನಂಬಿದ ಭಕುತರ ಹಂಬಲ ಪೂರ್ತಿಸಲು2 ಕಾರ್ಪರ ಋಷಿ ತಪಕೆ ಒಪ್ಪಿ ಭುವಿಯೊಳ್ ಬಂದು ಪಿಪ್ಪಲ ತರುವಿನೊಳ್ ಇಪ್ಪ 'ಶ್ರೀನರಹರಿಯೇ' 3
--------------
ಕಾರ್ಪರ ನರಹರಿದಾಸರು
ಬಾರೋ ಗುರು ರಾಘವೇಂದ್ರ ಸದ್ಗುಣಸಾಂದ್ರ ಪ ಬಾರೋ ಸದ್ಗುರುವರ ಸಾರಿದ ಸುಜನರ ಘೋರ ದುರಿತವ ತರಿದು ಕರುಣದಿ ಸಾರ ಸೌಖ್ಯವಗರಿದು ಪೊರಿಯಲು ಅ.ಪ ಸೂರಿಜನಾಲಂಕೃತ ಸುರಪುರದಿ ವಿಠ್ಠ ಲಾರ್ಯರಿಂದಲಿ ಪೂಜಿತ ಯದುಗಿರಿಯ ಕ್ಷೇತ್ರಾಗಾರನೆಂದೆನಿಸಿ ನಿರುತ ಭಜಕರನು ಪೊರೆಯುತ ಸೇವೆಯನುಕೊಳ್ಳುತ ತುರಗವನೇರಿ ಮೆರೆಯುತ1 ಭಕ್ತ್ಯಾದಿ ಫಲವೀವಂಥ ಗುರುವರನೆ ನಿಮ್ಮಯ ಸ್ತೋತ್ರ ಪಠಣವ ಮಾಡುತ್ತ ಅನವರತ ಭಜ- ನಾಸಕ್ತ ಜನರ ಕಾಮಿತ ನಾ ಕೊಡುವೆನೆನುತ ಮತ್ತೆ ಎಡಬಲದಲ್ಲಿ ದ್ವಿಜಕೃತ ಛತ್ರಚಾಮರ ವ್ಯಜನ ಸೇವಾ ನೃತ್ಯಗಾಯನ ವೈಭವದಿ ವರ ಹಸ್ತಿವಾಹನ ವೇರಿ ಮೆರೆಯುತ 2 ಇಳಿಸುರರೊಳು ಪ್ರಖ್ಯಾತ ಲಿಂಗೇರಿ ಭೀಮಾ ಹೊಳಿಯ ಸ್ಥಾನಕೆ ಬಂದಂಥ ಯದುಗಿರಿಯ ದ್ವಿಜವರ ಗೊಲಿದರ್ಚನಿಯ ಗೊಂಬಂಥ ಶರ್ವಾದಿವಿನುತ ಚಲುವ ಪ್ರಾಣನಾಥನ ಜಲಜಯುಗ ಸನ್ನಿಧಿ ಯೊಳನುದಿನ ಪೊಳೆವ ವೃಂದಾವನದಿ ಭಕುತರಿ ಗೊಲಿದು ಪೊರೆಯಲು ಕುಳಿತ ಯತಿವರ 3 ನಂದತೀರ್ಥರ ಸುಮತ ಸಿಂಧುವಿಗೆ ಪೂರ್ಣ ಚಂದ್ರರೆಂದೆನಿಸಿ ದಂಥಾ ಕರ್ಮಂದಿವರ್ಯನೆ ದುರಿತ ಘನಮಾರುತ ವಂದೆ ಮನದಲಿ ಬಂದು ನಿಮ್ಮಡಿ ದ್ವಂದ್ವವನು ಶೇವಿಸುವ ಶರಣರ ವೃಂದವನು ಪಾಲಿಸಲು ಸುಂದರಸ್ಯಂದನ- ವೇರುತಲಿ ವಿಭವದಿ 4 ನೀರಜಾಸನ ವರಬಲದಿ ಸಮರಾರೆನುತ ಬಂ- ಗಾರ ಕಶ್ಯಪ ಪೂರ್ವದಿ ಪ್ರಹ್ಲಾದ ರಾಜಕು ಮಾರ ನಿನ್ನೊಳು ವೈರದಿ ಹರಿಯನ್ನು ಜವದಿ ಚಾರು ಕೃಷ್ಣಾ ತೀರಕಾರ್ಪರ ನಾರಸಿಂಹನ ಸ್ತಂಭದಿಂದಲಿ ತೋರಿಸಿದ ಗುರು ಸಾರ್ವಭೌಮನೆ 5
--------------
ಕಾರ್ಪರ ನರಹರಿದಾಸರು
ಶ್ರೀ ರಾಘವೇಂದ್ರರು (4) ಈತನೆ ಶ್ರೀ ಪ್ರಲ್ಹಾದನು ಆಹ್ಲಾದಕರನು ಪ ಈತನೆ ಪ್ರಲ್ಹಾದ ಜಗನ್ಮಾತಾಲಕುಮಿಪತಿಯ ಗುಣವಭೂತಳದಲ್ಲಿ ತೋರಿ ಬಹು ನಿರ್ಭಿತಿಯಿಂದ ಮೆರೆದ ಗುರು ಅ.ಪ. ದುಷ್ಟ ಹಿರಣ್ಯಕ ಬಹುವಿಧದಲ್ಲಿ ನಿಷ್ಕರುಣಿಯಾಗೆಕಷ್ಟ ಬಡಿಸೆ ಸುತಗೆ ಜವದಲಿಸೃಷ್ಟಿಗೊಡೆಯ ಸ್ತಂಭದಿಂದ ದೃಷ್ಟನಾಗಿ ಅಸುರನಂದನಶ್ರೇಷ್ಠ ನಖದಿಂ ಬಗೆಯ ನಿಷ್ಠೆಯಿಂದ ನಮಿಸಿದ ಗುರು 1 ಶೂರ ಬಾಲ್ಹೀಕನೆನಿಸಿದ ಬ್ರಹ್ಮಣಮುನಿ ಪಾದಾರವಿಂದ ದಯದಿ ಭಜಿಸಿದಘೋರ ಮಾಯಾವಾದಿಗಳನು ವಿದಾರಣ ಮಾಡಿ ಸುಧಾಸಾರಪಾನ ಮಾಡಿ ವಿಭುದಚಾರು ಚಂದ್ರಿಕಾ ರಚಿಸಿದ ಗುರು 2 ಸಿಂಧುಶಯನ ಶ್ರೀ ರಮಾಪತಿ ವಿಠ್ಠಲನ ಭಕುತಿಯಿಂದ ಭಜಿಪ ರಾಘವೇಂದ್ರಯತಿಎಂದೆನಿಸುತ ಮಂತ್ರನಿಲಯ ಮಂದಿರವನು ಮಾಡಿ ಭಕುತವೃಂದದ ಪುರುಷಾರ್ಥಗಳನು ತಂದು ಕೊಡುವ ಕಲ್ಪದ್ರುಮನು 3
--------------
ರಮಾಪತಿವಿಠಲರು
ಸಿರಿ ಚರಣದಲ- ಪಾರ ಭಕುತಿಯನೀಯೋ ತವ ಸೇವಕನೆನಿಸಿ ಕೀರುತಿಯನು ಪಡೆಯೋ ಭವಕ್ಲೇಶ ಕಳೆಯೊ ಪ ಸೂರಿ ಸುಬ್ಬಣಾಚಾರ್ಯಕರಸ- ರೋರು ಹಗಲಲಿ ಪೂಜೆಗೊಳುತಲಿ ಚಾರುತರ ಶ್ರೀ ಜಯಮಂಗಳಿಯ ತೀರದೊಳಿರುವ ವೀರ ಮಾರುತಿ ಅ.ಪ. ಪ್ರತಿ ವರುಷ ಮಾಘಸಿತ | ನವಮಿ ದಿನದೊಳು ನೀ- ನತಿವಿಭವದೊಳು ನಗುತ | ಭಕುತರಿಷ್ಟವ ಸಲಿಸೆ ರಥದೊಳಗೆ ಕುಳ್ಳಿರುತ | ವಿಧ ವಿಧ ವಾದ್ಯಗಳ ತತಿಯನಾಲೈಸುತ | ಅತಿ ಮೋದಬಡುತ ಪರಿ ಸಂ- ಸ್ತುತಿಸೆ ಹಿಗ್ಗುತಲವರ ಸ್ವಮನೋ- ರಥಗಳ ನೀ ಸಲಿಸುವೆನೆನುತಲಿ ಅತುಳ ವಿಕ್ರಮದಭಯ ಹಸ್ತದಿ ಕೃತಿರಮಣ ಸಿರಿವರ ಹರಿಯನನು ಮತವ ಪಡೆಯುತ ರಥವ ನಡೆಸಿ ಚತುರ ದಿಕ್ಕಲಿ ಬಿಜಯ ಮಾಡುತ ಸತತ ಹರುಷವಗರೆವ ದೇವ 1 ರಕ್ಕಸಕುಲ ತಮ ಭಾನು | ತಾಮಸರ ಧ್ಯಾನಕೆ ಸಿಕ್ಕುವನಲ್ಲ ನೀನು | ಸುಜನರ ಹೃದಯದೊಳು ಅರ್ಕನೊಲು ಪೊಳೆವನು | ಹರಿಸಿರಿಗಾಳುಳಿದು ಬಕ್ಕ ದಿವಿಜರಿಗಿನ್ನು | ಗುರುಬಲ್ಲೆ ನಾನು ಚಿಕ್ಕ ರೂಪವಗೊಂಡು ಲಂಕೆಯ ಪೊಕ್ಕು ರಾಮನ ಸತಿಯ ಕಂಡು ತುಕ್ಕಿ ವನವನು ಸೂರೆ ಮಾಡಿ ಉಕ್ಕಿನ ಧ್ವಜಸ್ತಂಭದಿಂದ ಸೊಕ್ಕಿ ಬಂದ ದನುಜವ್ರಾತವ ಕುಕ್ಕಿ ಕೆಡಹಿ ಪುರವನುರಹಿ ಅಕ್ಕರದ ಮಣಿಸಹಿತ ಬಂದು ಪಕ್ಕಿದೇರನಿಗೆರಗಿ ನಿಂದೆ 2 ತುತಿಸ ಬಲ್ಲೆನೆ ನಾನು | ನಿನ್ನಯ ಸುಗುಣಗಳ ತತಿಗಳೆಲ್ಲವನು | ತ್ರಿಪುರ ಸುಂದರಿ ಪಾ- ರ್ವತಿ ಪತಿಯ ಪಡೆದವನು | ರಂಗೇಶವಿಠಲಗೆ ಅತಿಪ್ರೀತಿಸುತ ನೀನು | ನಿಷ್ಕಾಮಯುತನು ಪತಿತರನುದ್ಧರಿಸಲು ನೀ ಸಿರಿ ಪತಿಯ ಮತದೊಳು ಹನುಮ ಭೀಮ ಯತಿಯ ರೂಪವ ತಾಳಿ ಹರುಷದಿ ಕ್ಷಿತಿಯ ಭಾರವ ಹರಸಿ ಸಲಹಿದೆ ಅತುಳ ಮಹಿಮ ನಿನ್ನಪರಿಮಿತ ಶ ಕುತಿಗೆ ನಮೊ ನಮೊ ವಾಯುತನಯನೆ ಸತತ ಮುದದೊಳು ನಿನ್ನ ಸ್ಮರಿಸುವ ಮತಿಯ ಪಾಲಿಸು ಪತಿತ ಪಾವನ 3
--------------
ರಂಗೇಶವಿಠಲದಾಸರು