ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಮಲಕಮಲಾಧರನೆ ಕಮಲಭವ ವಂದಿತನೆ ಕಮಲ (?) ನುತನೇ ಕಮಲಶತ ಹಿತಕರನೆ ಪ ಕಮಲಬಾಣನ ಪಿತನೇ ಕಮಲದಳ ಲೋಚನನೇ ಕಮನೀಯನುಪ್ಪವಡಿಸಾ ಹರಿಯೇ ಅ.ಪ ಸಲಹಲೀ ಲೋಕಗಳ ಬಹುವೆನಿಪ ದಾನವರ ಗೆಲಿದು ಪಾಲ್ಗಡಲ ನಡುವಲದ ನೆಲೆವನೆಯ ತಲೆವಣಿಯ ಕಾಂತಿಗಳ ಮಿಗೆ ಜ್ವಲಿಪ ಬೆಳಗುಗಳಿಂದ ಫಲಿತ ಪುಳಕಗಳು ಮಿಗೆ ಬಲಿದ ನಿದ್ರೆಗಳ ಶ್ರೀಲಲನೇಶನುಪ್ಪವಡಿಸ1 ಸಿರಿ ಮುರಿಯುತಿದೆ ಶರಧಿಯೇಳ್ಗೇ ಉದಯಕೆ ಕರೆಯುತಿದೆ ಗಿಳಿವಿಂಡು ಕೊರುಗುತಿವೆ ಕೋಕಗ ಗರೆಯುತಿದೆ ಕೋರಕಂ ವೋಲಗಕೆ ಕರುಣಾಳು ಉಪ್ಪವಡಿಸಾ 2 ತೋರುತಿದೆ ಇನಬಿಂಬ ದೂರುತಿದೆ ಕುಮುದ ಸೊಂ ಪೇರುತಿದೆ ವನರುಹಂ ಬೀರುತಿದೆ ಕಡು ಚೆಲ್ವ ಸೋರುತಿದೆ ಮಕರಂದ ತೋರುತಿದೆ ತನಿಗಂಪ ಪಾರುತಿವೆÉ ಭ್ರಮರಂಗಳೂ ಚೀರುತಿವೆ ಪಕ್ಷಿಗಳು ಮೀರುತಿವೆ ಜನರವಂ ಪೂರ್ಣಧನು ಉಪ್ಪವಡಿಸಾ3 ಆಡುವರೆ ನರ್ತನವ ಪಾಡುವರೆ ಗಾನಗಳ ನೀಡುವರೆ ಪನ್ನೀರ ತೀಡುವರೆ ಸುರಭಿಗಳ ಮಾಡುವರೆ ಸಿಂಗರವ ಪೂಡುವರೆ ಹಾರಗಳನೂ ಕೋಡುವರೆ ಕಾಣಿಕೆಯ ಬೇಡುವರೆ ಸಂಪದವ ಸೂಡುವರೆ ಕುಸುಮಗಳ ನೋಡುವರೆ ಸಮಯಗಳ ಗಾಡಿಮಿಗಲುಪ್ಪವಡಿಸಾ 4 ದೇವ ಸಂಸ್ತುತಲೀಲ ದೇವ ಮುನಿನುತ ಶೀಲ ದೇವತತಿಗನುಕೂಲ ದೇವರಿಪುವನಜಾಲ ಚೇಲ ದೇವ ಗುಣಗಣಜಾಲ ದೇವಪುರಿ ಶ್ರೀಲೋಲ ದೇವ ನಲಿದುಪ್ಪವಡಿಸಾ 5
--------------
ಕವಿ ಲಕ್ಷ್ಮೀಶ
ನಿಜ ಭಕ್ತಿ ತೋರಿದನು ಜಗಕೆ ಕೃಷ್ಣ್ಣಾ ವಿಜಯನಾ ಸತಿಯರಿಬ್ಬರ ನೆವದಿ ಮುದದೀ ಪ. ಹಸ್ತಿವರದನು ತಂಗಿಯರ ನೋಡಬೇಕೆಂದು ಹಸ್ತಿನಾಪುರಕೆ ಬಂದ್ಹರುಷದಿಂದ ಚಿತ್ತ ನಿರ್ಮಲದಿ ಪಾಂಡವರು ಪೂಜೆಸೆ ನಲಿದು ಭಕ್ತಿ ಭಾವಕೆ ಮೆಚ್ಚಿ ದ್ರೌಪತಿಗೆ ವಲಿದೂ 1 ಅಣ್ಣನೆಂಬುವ ಭಾವದಲಿ ಸುಭದ್ರೆಯು ಇರಲು ಘನ್ನ ಮಹಿಮನು ಎಂದು ದ್ರೌಪತಿಯು ತಿಳಿದೂ ಸ್ವರ್ಣಗರ್ಭನ ಪಿತನು ಈರೇಳು ಜಗದೊಡೆಯ ಎನ್ನ ಭಾಗದ ದೈವ ಸಲಹೆಂದು ನುತಿಸೇ 2 ಅಂತರಂಗದ ಭಕ್ತಿ ಆನಂದಮಯ ತಿಳಿದು ಕಂತುಪಿತ ಕರಗಿದಾ ಮಮತೆ ಪ್ರೇಮದಲಿ ಶಾಂತಚಿತ್ತಳೆ ತಂಗಿ ದ್ರೌಪತಿಯೆ ಬಾರೆನುತ ಇಂತು ನುಡಿನುಡಿಗೆ ಆಡಲು ಕರುಣೆಯಿಂದ 3 ಕೇಳಿ ಇದನು ಸುಭದ್ರೆ ತಾಳಲಾರದೆ ಅಜ್ಞ ಬಾಲೆ ನಿಜ ತಂಗಿ ನಾನಿರಲು ಐವರಿಗೆ ಲೋಲೆಯಾದವಳೆ ಬಲು ಮೇಲಾದವಳೆ ಎಂದು ಬಾಲಚಂದ್ರನ ಪೋಲ್ವ ಮುಖ ಬಾಡಿಸಿರಿಲೂ 4 ಕಂಡು ಕಮಲಾಕಾಂತ ವಡಹುಟ್ಟಿದಳ ಬೆಂಡಾದ ತೆರವ ಪೇಳೆನಲು ಖತಿಯಿಂದಾ ಪುಂಡರೀಕಾಕ್ಷ ಎನ್ನುಳಿದು ನಿಜ ಭಾವದಲಿ ಕಂಡವರ ಸುತೆ ನಿನಗೆ ಮಿಗಿಲಾದಳೆನಲೂ 5 ಸಚ್ಚಿದಾನಂದ ವಿಗ್ರಹ ನಗುತ ನೆನೆದನೊಂ ದಚ್ಚರಿಯ ಕೌತುಕವ ತೋರ್ವೆನೆಂದೂ ಅಚ್ಛಿದ್ರ ಅಕ್ಲೇಶ ಆನಂದಮಯ ತಾನು ಕ್ಲೇಶ ಪಡುತ ವರಲಿದನೂ 6 ಬಾರಮ್ಮಾ ತಂಗಿ ಸುಭದ್ರೆ ಬೆರಳಲಿ ರಕ್ತ ಸೋರುತಿದೆ ಬೇಗೊಂದು ಚಿಂದಿ ತಾರೆ ತಾರೆನಲು ಗಡಬಡಿಸಿ ಮನೆಯಲ್ಲ ಹುಡುಕತಲಿ ಬಟ್ಟೆ ಕಂಗೆಡುತಾ 7 ಎತ್ತ ನೋಡಿದರತ್ತ ಪಟ್ಟೆ ಪೀತಾಂಬರವು ಕಂಚುಕ ಮಕುಟ ಮೆರೆಯೇ ಚಿತ್ರದಾ ವಸನ ಅರಮನೆಯಲ್ಲಿ ತುಂಬಿರಲು ಮತ್ತದರ ಮಮತೆ ಅಣ್ಣನಿಗೆ ಅಧಿಕವಾಗೆ 8 ಬರಲಿಲ್ಲ ಸುಭದ್ರೆ ಬಾರಮ್ಮ ದೌಪದಿಯೆ ವರ ತಂಗಿ ಬೇಗ ಕೊಡೆ ಹರಕು ಬಟ್ಟೆ ಸುರಿಯುತಿದೆ ರಕ್ತ ಬೆರಳಿಂದ ನೋಡೆಂದನಲು ಕಿರುನಗೆಯ ನಗುತ ಶರಗ್ಹರಿದು ಕಟ್ಟಿದಳೂ 9 ಬಂದಳಾ ವೇಳೆಯಲಿ ಸುಂದರಾಂಗಿ ಸುಭದ್ರೆ ನಿಂದು ನೋಡಿದಳೂ ದ್ರೌಪತಿಯ ಕೃತಿಯಾ ಮಂದಗಮನೆಯು ನಾಚಿ ಮೊಗವ ತಗ್ಗಿಸಿ ನಿಲಲು ಇಂದಿರೇಶನು ಇದರ ವಿವರ ತೋರಿದನು 10 ಬೆರಗಾದ ಪರಿತೋರಿ ಸಿರಿಕೃಷ್ಣ ಕೇಳಿದನು ಜರತಾರಿ ಸೆರಗ್ಹರಿದು ಕಿರುನಗೆಯ ನಕ್ಕಾ ಪರಿ ಏನೆ ಎಲೆ ತಂಗಿ ನರಳುವೋ ಎನ ನೋಡಿ ಪರಿಹಾಸ್ಯವಾಯಿತೆ ನಿನಗೆ ಎಂತೆಂದಾ 11 ಅಣ್ಣಯ್ಯ ನಿನಗೆ ಮಿಗಿಲಾಯಿತೇ ಈ ಶೆರಗು ಎನ್ನ ಅಭಿಮಾನ ಕಾಯುವ ದೈವ ನೀನೂ ಘನ್ನ ಮಹಿಮಾಂಗ ನಿನಗಿನ್ನು ಕ್ಲೇಶಗಳುಂಟೆ ನಿನ್ನ ಲೀಲೆಗೆ ಹರುಷ ಉಕ್ಕಿತೆಂದನಲೂ 12 ಹೇ ನಾರಿ ನಾನನಾಥರಿಗೆ ನಾಥನು ಮುಂದೆ ನೀನಿತ್ತ ವಸನ ಅಕ್ಷಯವಾಗಲೆಂದು ಶ್ರೀನಾಥ ದ್ರೌಪದಿ ಸುಭದ್ರೆಯ ಮನ್ನಿಸಿ ಮೆರೆದಜ್ಞಾನಿ ಜನಪ್ರಿಯನು ಗೋಪಾಲಕೃಷ್ಣವಿಠಲಾ13
--------------
ಅಂಬಾಬಾಯಿ
ಯಾರು ಇಕ್ಕುವರೆಂದು ಹಾರೈಸುವೈ ಆತ್ಮ ಸೋರುತಿದೆ ಮನೆಯೆಲ್ಲ ನಾರುತಿದೆ ಸ್ಥಳವು ಪ ಒಲೆಯೊಳಗೆ ಉರಿಯಿಲ್ಲ ಜಲವಿಲ್ಲ ಬಾವಿಯೊಳು ಕಲಹ ಮಾಳ್ಪಳು ತನ್ನ ಕುಲವನಿತೆಯು ಹೊಲುಬುದಪ್ಪಿಯೆ ಇಲ್ಲಿ ಬರಬಹುದೆ ನೀನೀಗ ಫಲವುಳ್ಳ ಮನೆಗಳನು ಸೇರೆಲವೊ ಆತ್ಮ 1 ಬಾಗಿಲಿಲ್ಲದ ಮನೆಯು ಬಹಳ ಕಗ್ಗತ್ತಲೆಯು ಕೂಗುವುದು ಹುಲಿ ಕರಡಿ ಇದಿರಿನೊಳಗೆ ಬೇಗದೊಳು ಇಲ್ಲಿಂದ ಸಾಗುವುದೆ ಸೌಖ್ಯಗಳು ನಾಗಶಯನನ ಗುಡಿಯ ಸೇರೆಲವೊ ಆತ್ಮ 2 ಒಟ್ಟೆಗಡಿಗೆಯ ಒಳಗೆ ಇಟ್ಟಿರ್ದ ಬುತ್ತಿಗಳು ಕೆಟ್ಟ ಕ್ರಿಮಿಗಳು ಬಂದು ಬಹಳ ಹಳಸಿದವು ಬಟ್ಟಲಿಡುವವರಿಲ್ಲ ಮುಟ್ಟಿ ಬಳಸುವರಿಲ್ಲ ಹೊಟ್ಟೆ ತುಂಬುವುದುಂಟೆ ದುಷ್ಟರೊಳು ಆತ್ಮ 3 ಹಾಳು ಮನೆಯನು ನಿನಗೆ ತೋರಿಕೊಟ್ಟವರಾರು ಬೀಳುವುದು ಮೇಲೆ ಹದಿನಾರು ಭಿತ್ತಿಗಳು ಏಳು ಇಲ್ಲಿರಬೇಡ ಕಾಳಸರ್ಪನು ಬಂದು ಕಾಲ ಕಚ್ಚ್ಚುವನಲ್ಲೊ ಎಲೆ ದುಷ್ಟ ಆತ್ಮ 4 ಮೂರು ಮಾತನು ಮೇಲೆ ಯಾರ ಕೂಡಾಡಿದೆಯೊ ಆರು ಪಥದಲಿ ನೀನು ಮೀರಿ ನಡೆದೆ ಕೇರಿಯಾಗಿರ್ದ ಹದಿನೆಂಟು ಅಂಗಡಿಯೊಳಗೆ ಆರ ವ್ಯಾಪಾರವನು ಕೇಳಿದೈ ಆತ್ಮ 5 ಹತ್ತು ತಾಸಿನ ಮೇಲೆ ತುತ್ತು ಕೊಡುವವರಾರು ಬತ್ತುವುದು ಕೈಕಾಲು ಬಳಲಿಕೆಯೊಳು ಮತ್ತೇಳು ಮಂದಿ ತಾವತ್ತತ್ತ ಸಾರುವರು ಕರ್ತುಗಳ ನಾ ಕಾಣೆ ನೀ ಕೇಳೊ ಆತ್ಮ 6 ಎಂಟು ಮಂದಿಯು ತನಗೆ ನೆಂಟರೆಂಬಾಶೆಯೊಳು ಗಂಟ ಕಟ್ಟಿಯೆ ಮನದಿ ಮರುಗುತಿರಲು ಗಂಟಲೊಣಗಿಯೆ ವಾಯು ಕಂಠದೊಳು ಪೋಪಾಗ ನಂಟರನು ನಾ ಕಾಣೆ ಆಲಿಸೈ ಆತ್ಮ 7 ಆಯವಿಲ್ಲದ ಮನೆಯು ಛಾಯೆ ಇಲ್ಲದ ಮಡದಿ ದಾಯವಿಲ್ಲದ ಊರು ಕರಕಷ್ಟವು ಬಾಯ ಹೊಯ್ಯೆಂಬರೊಳು ನ್ಯಾಯ ಸೇರುವುದೆ ಉ- ಪಾಯದಲಿ ಸಾರೆಲೆವೊ ಸಾರಿದೆನು ಆತ್ಮ 8 ಮೂಡಗಿರಿವಾಸನೊಳು ಬೇಡಿಕೊಂಡರೆ ನಿನಗೆ ನೀಡುವನು ಧರ್ಮವನು ಧೈರ್ಯನಾಗಿ ಬೀಡುಬಿಟ್ಟಲ್ಲಿಂದ ಓಡುವುದು ಸುಖದೊಳಗೆ ಕೂಡುವುದು ವರಾಹತಿಮ್ಮಪ್ಪನೊಳು ಆತ್ಮ 9
--------------
ವರಹತಿಮ್ಮಪ್ಪ