ಒಟ್ಟು 29 ಕಡೆಗಳಲ್ಲಿ , 15 ದಾಸರು , 26 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರೇ ಸುಳಿದವನಿಂದು|ನೀರೇ ತಂದುವನ ತೋರೇ ಪ ನೀಲಮೇಘದ ಕಾಂತಿಮೈಯ್ಯಾ|ನೋಡೇಮದನಯ್ಯಾ| ಕಾಲಲುಂದಿಗೆ ಹೆಜ್ಜೆಘಿಲು ಘಲುಕೆನುವಾ| ಮೇಲು ಪಿತಾಂಬರ ಝಳ ಝಳಿಸುವ ನವನಾರೇ 1 ಮೆರೆವ ವಡ್ಯಾಣ ಘಂಟೆಸಿರಿಯಾ|ಕವಿಹೊಗಳಲರಿಯಾ| ಬೆರಳುಂಗುರ ಕಡಗ ಕೇಯೂರಾ| ಕೌಸ್ತುಭ ಮಾಲೆಯ ಹೊರವನಾರೇ 2 ಕಡೆಗಣ್ಣನೋಟ ಪದುಮದೆಲಿಯೋ|ಮೋಹನದಾಬಲೆಯಾ| ಕುಂಡಲ ಹೊಳೆವ ಕಪೋಲಾ| ಇಡಿದನೇ ನಗೆಯ ಸುನಾಶಿಕ ಸರಳವನಾರೇ 3 ಮೃಗದ ಪಣಿಯಾಲುಂಗುರ ಗುರುಳೋ|ಕಾವನಸರಳೋ| ಝಗಝಗಿಸುವ ರನ್ನ ಮುಕುಟದ ಚೆಲುವಾ| ಬಗೆ ಬಗೆ ಸೊಬಗಿನ ನವರಸಗರೆವನಾರೇ 4 ತರುಣೀ ಮುನ್ನಿನಸುಕೃತಬಂದು|ವದಗಿ ತಾ ಇಂದು| ಗುರು ಮಹಿಪತಿ ಪ್ರಭು ಚರಣವದೋರಿ|ಮರುಳೆನ್ನಾ ಮಾಡಿದ ದೀನೋದ್ಧಾರಿವನಾರೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಚಂಡನಾಡಿದ ಹರಿ ಚಂಡನಾಡಿದ ಪ ಪುಂಡರೀಕ ಕುಸುಮಮಯದ ಅ.ಪ. ಸಾರ ಸೊಬಗಿನಿಂದ ನೋಡಿ ಕರವ ನೀಡಿ ಪಾರಿಜಾತ ಕುಸುಮಮಯದ 1 ಸೊಂಪಿನಿಂದ ಮಂದಹಾಸ ಪೆಂಪುದೋರೆ ಸಿರಿಯಮ್ಮೆ ಗಂಪಿನಿಂದ ರಮೆಯು ಸಹಿತ ಚಂಪಕದ ಕುಸುಮಮಯದ 2 ಪುಲ್ಲನಯನ ಪರಿಮಳವ ಚೆಲ್ವ ಚಂದ್ರ ಕಿರಣದಂತೆ ಚೆಲ್ವನಾಂತ ಸರಸಮಾನ ಮಲ್ಲಿಗೆಯ ಕುಸುಮಮಯದ 3 ದಿವ್ಯ ಮಾಧುಪ ಝೇಂಕೃತಿಯು ಭವ್ಯಮಾಗೆ ದಿವಿಜರೆಲ್ಲ ದಿವ್ಯಮೆಂದು ಪೊಗಳೆ ಸುಖದಿ ನವ್ಯ ಜಾಜಿ ಕುಸುಮಮಯದ 4 ಶ್ರೀನಿವಾಸ ಸಕಲ ಹೃದಯ ಶ್ರೀನಿವಾಸ ಧೇನುನಗರಶ್ರೀನಿವಾಸ ವೆಂಕಟೇಶ ಶ್ರೀನಿವಾಸ ಕುಸುಮಮಯದ 5
--------------
ಬೇಟೆರಾಯ ದೀಕ್ಷಿತರು
ತುಪಾಕಿ ಬಾರೊ ಮಾಡೊ ಮನುಜ ತುಪಾಕಿ ಬಾರೊ ಮಾಡೊ ಪ ತುಪಾಕಿ ಬಾರೊ ಮಾಡೊ ಸೊಬಗಿನಿಂದ ನೀ ಭುಜಗಶಯನ ಶ್ರೀಹರಿಯ ಧ್ಯಾನವೆಂಬ ಅ.ಪ ಚಿತ್ತಶುದ್ಧಿಯೆಂಬ ಮದ್ದು ತುಂಬಿ ಭರ್ತಿಮಾಡಿಕೊಳವೆಯ ಸತ್ಯಗುಣವೆಂಬ ಛಡಿ ಪಿಡಿ ದೊತ್ತಿ ಜಡಿಯೊ ಭಕ್ತಿ ಬಾಹ್ವಿನಿಂದ ಎತ್ತಿ ಸಾಮಥ್ರ್ಯದಿ ಮಿಥ್ಯದೇಹವನು ಹತ್ತಿ ಬೇಂಟೆನಾಡೊ 1 ಅಂಟಿಕೊಂಡು ಬರುವ ಬೇಗ ತಿಳಿ ಎಂಟು ಕೋಣನ ಸುಳಿವ ಗಂಟಲಕ್ಕೆ ಹಾರುತಿರುವ ಆರುಹುಲಿ ಬಂಟನಾಗಿ ತರಿಯೆಲವೊ ವೈ ಕುಂಠನ ಕೃಪೆಯೆಂಬ ಬಂಟಬಲವು ಕೂಡಿ ಬೇಂಟೆನಾಡೆಲೊ 2 ಮೂರುಮಂದಿರವ ಕಟ್ಟಿಕೊಂಡು ಧೀರನಾಗಿ ನಲಿಯೊ ಸಾರಿಬರುವ ಏಳು ಕೊಳ್ಳಗಳ ಹಾರಿ ಮುಂದಕೆ ನಡೆಯೊ ಘೋರ ದುರ್ಗುಣ ಮೃಗ ಸೂರೆಮಾಡಿ ಮಹಧೀರ ಶ್ರೀರಾಮನ ಚಾರುಚರಣ ಸೇರು 3
--------------
ರಾಮದಾಸರು
ತೇಜಿಯೇರಿ ಮೆರೆದು ಬಂದ ರಾಜಬೀದಿಯೊಳಗಿಂದ ಕಸ್ತೂರಿ ರಂಗ ಪ. ಸುತ್ತಮುತ್ತ ಸಾವಿರಾರು ಸಾಲುದೀವಟಿಗೆ ಹತ್ತುದಿಕ್ಕಿಲಿ ಬೆಳಗುತಿಹ ಹಗಲುಬತ್ತಿಗಳು ಇತ್ತೆರಪು ಭೂಸುರರು ಸಾಲುಗಟ್ಟಿ ನಿಂತಿರಲು ಮತ್ತೆ ಸಭಾದಿಂದ ತೇಜಿ ಮೆಲ್ಲನೆ ನಡೆಸುತ್ತ ಜಾಣ1 ತಾಳ ಶಂಖ ಭೇರಿ ತಮ್ಮಟೆ ತಂಬೂರಿ ಮೊದಲಾದ ಮೇಲು ಪಂಚಕಂಗಳೆಲ್ಲ[ಮಿಗೆ] ಪೊಗಳಲು ಗಾಳಿ ಗೋಪುರದ ಮುಂದೆ ರಾಯಬಿಡದಂತೆ ಸುತ್ತ ಧೂಳುಗಳೆಬ್ಬಿಸಿ [ವೈಹಾಳಿ] ನಿಕ್ಕುತ ಜಾಣ 2 ಮುತ್ತಿನ ತುರಾಯಿ ಅಂಗಿ ಮುಂಡಾಸು ತತ್ಥಳಿಪ ವಜ್ರಕೆಂಪಿನ ತಾಳಿ ಚೌಕಳಿ ಮುತ್ತಿನ ಕುಂಡಲವಿಟ್ಟು ಮೋಹಿಸುತ ಬೀದಿಯೊಳು ಕತ್ತಿಯ ಉಡಿಯಲ್ಲಿ ಕಟ್ಟಿ ಕೈಯಲಿ [ತೇಜಿಯ] ಪಿಡಿದು 3 ರಂಭೆ ಮೊದಲಾದ ದೇವರಮಣಿಯರು ಕುಂಭದ ಆರತಿಯೆತ್ತಿ ಕೂಡಿ ಪಾಡಲು ಶಂಭು ಮುಖ್ಯ ನಿರ್ಜರರೆಲ್ಲ ಸ್ವಾಮಿ ಪರಾಕೆಂದೆನುತ ಅಂಬುಜಭವಾದಿಗಳ ಆಳಿದ ಶ್ರೀರಂಗಧಾಮ 4 ವೇದಘೋಷದಿಂದ ವಿಪ್ರರು ಸ್ತುತಿಸಲು ಮೋದದಿಂದ ಗಾಯಕರು ಹಾಡಿ ಪಾಡಲು ಹಾದಿ ಬೀದಿಯಲಿ ನಿಂತು ಸಜ್ಜನರಿಗೆಲ್ಲ ದೇವ ಆದರದಿಂದಿಷ್ಟಾರ್ಥವಿತ್ತು ಮೋದದಿಂದ ಮನ್ನಿಸುವ 5 ಹಚ್ಚನೆ ಹೆಸರುಬೇಳೆ ಹಾಲುಕೆನೆಗಳು ಮುಚ್ಚಿತಂದ ಕೆನೆಮೊಸರು ಮೀಸಲು ಬೆಣ್ಣೆಯು ಅಚ್ಚ ತುಪ್ಪದಿ ಪಕ್ವವಾದ ಅತಿರಸ ಹುಗ್ಗಿಗಳು ಮೆಚ್ಚಿವುಂಡು ಪಾನಕ ನೀರುಮಜ್ಜಿಗೆಗಳನೆ ಕುಡಿದು 6 ಸಣ್ಣಮುತ್ತು [ತೆತ್ತಿಸಿದ] ಸಕಲಾತಿ ಗೊಂಡ್ಯ ಹೊನ್ನ [ತೆತ್ತಿಸಿದ ಹೊಸ] ಹೊಳೆವ ಸೊಬಗಿನ ಉನ್ನಂತ ಗುಣರಾಯ ಉತ್ತಮರಾಜಾಶ್ವವೇರಿ ಎನ್ನ ಹಯವದನ ರಂಗ ಎಲ್ಲರಿಗಿಷ್ಟಾರ್ಥಕೊಡುವ 7
--------------
ವಾದಿರಾಜ
ನಮ್ಮ ರಂಗನ ಕಂಡಿರ್ಯಾ ಹೇಳಿರಿ ನೀವಮ್ಮಾ ಪ ಅರಳೆಲೆ ಮಾಗಾಯಿ ಕಿರಿಗೂದಲು ಮುತ್ತಿನ| ವರಮಕುಟ ಪದಕ ಕೊರಳಿನಾ 1 ಕುಂಡಲ ಕುಡಿ-ಗಂಗಳ ಬೆಳಗಿನ| ಚೆಲುವ ಕದವು ಮುದ್ದು ಸೊಬಗಿನಾ 2 ಬರಿಮುಗುಳ ನೆಗೆಯಾ ಸುದಂತ ಸಾಲಿನ ಸಿರಿವತ್ಸಧರ ಹೇಮಚಸನನಾ3 ಧರೆಯೊಳು ಭಕ್ತರ ಮಾಡುವ ಪಾವನ| ಮಿರುಪರನ್ನದಂಗುರ ಬೆರಳಿನಾ 4 ಕೊಳಲನೂದಿ ಗೋಪ್ಯಾರ ಮೋಹಿಪ ಮನಸಿನಾ| ಒಲಿದು ಪಾಲಿಪ ಮಹಿಪತಿಜನ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಿದ್ಯ ರಂಗೈಯನ ನೋಡಿದ್ಯ ಪ ನೋಡಿದ್ಯ ಮನವೆ ನೀನಿಂದು ಕೊಂ- ಡಾಡಿದ್ಯ ಎದುರಲ್ಲಿ ನಿಂದು ಆಹ ಮಾ- ತಾಡಿದ್ಯ ವರಗಳ ಬೇಡಿದ್ಯ ನಿನ್ನೊಳು ಕೂಡಿ ನಲಿನಲಿದಾಡುವ ಶ್ರೀ ರೂಪ ಅ.ಪ. ಚರಣತಳದಲ್ಲಿ ಕೆಂಪು- ಶುದ್ದ ಅರವಿಂದ ಧ್ವಜ ವಜ್ರಸೊಂಪು- ಸ್ತುತಿ ಪÀರಿಗೆ ಸುರಂಘ್ರಿಪ ತಂಪು- ನೋಡ- ಲರಸಿ ಕಾಣದೊ ವೇದಗುಂಪು, ಆಹ ಹರಡಿ ಹಿಂಬಳೆ ಸಾಲ್ಬೆರಳೈದರ ಮೇಲೆ ಸುರುಚಿರ ರೇಖೆ ಚಂದ್ರಮನ ಸೋಲಿಪ ನಖ1 ಸರಸ ನೂಪುರ ಗೆಜ್ಜೆ ಪೆಂಡ್ಯ - ಹೊನ್ನ ಸರಪಳಿ ಪಾಡಗ ಕಂಡ್ಯ - ಹಿಂದೆ ಧರೆಗೆ ಮುಟ್ಟಿದ ಜಡೆಗೊಂಡ್ಯ - ಇದು ತರುಣಿ ಎನ್ನದಿರು ಕಂಡ್ಯ - ಆಹ ಬೆರಳಲ್ಲಿ ಇಟ್ಟ ಸುಂದರ ಪಿಲ್ಲಿಮೆಂಟಿಕೆ ಕಿರಿಪಿಲ್ಲಿ ಅಡಿಮೆಟ್ಟು ಮೆರೆವ ಕಾಲುಂಗರ2 ಝಣ ಝಣ ಗೆಜ್ಜೆನಾದ - ವನ್ನು ಎಣಿಸಲಾರದು ನೋಡಿ ವೇದಾ - ನಂತ - ಮೋದ - ಇದು ಅಣುರೇಣು ತೃಣಕಾಷ್ಠ ಭೇದ, ಆಹ ಪ್ರಣತಾರ್ತಿ ಹರವಾದ ಮಿನುಗುವ ಜಾನುದ - ರ್ಪಣ ನಾಚಿಪ ಜಂಘೆ ಎಣೆಗಾಣೆ ಸ್ತ್ರೀರೂಪ 3 ಊರುದ್ವಯಂಗಳು ರಂಭಾ - ಸ್ತಂಭ ಚಾರು ಪೊಕ್ಕುಳ ಸುಳಿಗುಂಭ - ತಂತ್ರಾ - ಸಾರೋಕ್ತದಿ ಪೂಜೆಗೊಂಬ - ವಿ ಸ್ತಾರ ಮಹಿಮೆ ಗುಣತುಂಬ, ಆಹ ನಾರಿ ಲಾವಣ್ಯದ ಪಾರ ಮೀರಿದ ಕಾಂತಿ ಆರಾರ ಮನಸಿಗೆ ತೋರದ ಪೆಣ್ಣಿನ4 ಉದಯರಾಗದ ದಿವ್ಯವಸನ - ಮೇಲೆ ಉದರ ತ್ರಿವಳಿ ಬಂದಿ ಹಸನ - ಕೇಳು ಮುದದಿಂದ ವಡ್ಯಾಣ ಬೆಸನ - ನೋಡು ಯದುಕುಲ ಜಾತ ಮಾನಿಸನ, ಆಹ ಮದಕರಿಯಂದದಿ ವಲಿದೊಲಿದಾಡಲು ಮದನಾರಿ ಮರುಳಾದ ಅದುಭುತ ಚರಿಯನ್ನ 5 ದೋರ್ಯ ಹರಡಿ ಕೈಕಟ್ಟು - ಚೂಡ್ಯ ಈರೈದುಂಗುರವುಳ್ಳ ಬೆಟ್ಟು - ಬಂ - ಗೀರು ಗಂಧವು ಗಂಬೂರ ಕರ್ಪೂರ ಕ- ಸ್ತೂರಿ ಲೇಪನ ಶೃಂಗಾರ ತ್ರಿವಳಿಯ 6 ತಾಯಿತು ಮುತ್ತ ಕಟ್ಟಾಣಿ - ತೋಳ ಮಣಿ - ವಂಕಿ ಕೇಯೂರ ಪಲ್ಲವ ಪಾಣಿ - ಉ ಪಾಯದಲ್ಲಿ ಘಟ್ಟಿ ಕಾಣಿ, ಆಹ ನೋಯದೆ ಸುರರಿಗೆ ಪೀಯೂಷ ವುಣಿಸಿ ದೈ- ತೇಯರ ಮಡುಹಿದ ಮಾಯದ ಕನ್ನಿಕೆ 7 ಸರಿಗೆ ಮುತ್ತಿನ ಚಿಂತಾಕ - ಕುಚ- ಕಂಚುಕ - ತೊಟ್ಟ ಭರದಿ ತೂಗುವ ಪಚ್ಚೆಪದಕ - ಕೆಳಗೆ ಹರಿ ನಡುಕಿಂಕಿಣಿ ಕನಕ, ಆಹ ಹರಳು ಕೆತ್ತಿದ ಚಿತ್ತರ ಮಾಟ ಕಟಿಸೂತ್ರ ಧರೆಗೆ ಶೋಭಿಪ ಸೀರೆ ನೆರೆಯ ವೈಭವವನು 8 ರನ್ನ ಪವಳ ಸರ ಥಳಕು - ಜೋಡು ಕನ್ನಡಿ ಹಾಕಿದ ಮಲಕು - ನೋಡು ಅನ್ನಂತ ಸೂರ್ಯರ ಝಳಕು - ಲೋಕ ಚನ್ನಾಗಿ ತುಂಬಿದ ಬೆಳಕು ಹೇಮ ಸಣ್ಣ ಮುತ್ತಿನ ಮೋ ಹನ್ನ ಏಕಾವಳಿ ಚಿನ್ನದ ಸರಗಳು 9 ಸಿರಿವತ್ಸ ಕೌಸ್ತಭ ಹಾರ-ವೊಪ್ಪೆ ವೈಜಯಂತಿ ಮಂದಾರ - ಮೇಲೆ ತರುಣ ತುಲಸಿ ಜನಿವಾರ - ಇಟ್ಟು ವರಭುಜಕೀರ್ತಿ ಕುಂಜರ, ಆಹ ಕರದಂತೆರಡು ತೋಳು ಎರಡೊಂದಾರು ಸಾ- ವಿರ ರೂಪನಾಗಿ ಶರೀರದೊಳಿಪ್ಪನ 10 ಕೂರ್ಮ ಕದಪು - ಕಣ್ಣಿ- ಗಿಕ್ಕಿದ ಸೊಬಗಿನ ಕಪ್ಪು - ತಲೆ - ಹಿಕ್ಕಿ ಬಾಚಿದ ಕೇಶ ಥಳಪು - ಸರ್ವ ಲಕ್ಕುಮಿ ದೇವಿಯ ಲೆಕ್ಕಿಸದೇ ಮಗನ ಪೊಕ್ಕುಳಿಂದಲಿ ವೆತ್ತ ಅಕ್ಕಜದಬಲೆಯ11 ಸೂಸುವ ದಾಡಿಯ ದಂತ - ಪಙÂ್ತ- ನಾಸ ಮೂಗುತಿಯಿಟ್ಟ ಶಾಂತ - ಸುಖ ಲೇಸು ಹಾಸ ಜಗದಂತ - ರಂಗ ಭಾಸ ಮಿಗಿಲು ಚಂದ್ರಕಾಂತ, ಆಹ ಸುಷುಪ್ತಿಯಲ್ಲಿ ಭೂಶ್ವಾಸ ಬಿಡುವರನ್ನು ಲೇಸಾಗಿ ಸಲಹುವ ದೋಷನಾಶನ ರೂಪ12 ಎಸೆವ ಪಂಜರದೋಲೆ ಕಿವಿಯ-ಹೊನ್ನ ಕುಸುಮ ಕೂಡಿದ ಬಾವಲಿಯ - ತಿದ್ದಿ ಕುಸುರಿಯಿಕ್ಕಿದ ಸರಪಣಿಯ - ಚಿನ್ನ ಸೋಸಲು ಕುಂಕುಮ ರ್ಯಾಕಟೆಯ, ಆಹ ಎಸಳು ಕೇದಿಗೆ ಬಹು ಕುಸುಮವ ಮುಡಿದದ್ದು ವಶವಲ್ಲ ಚೌರಿ ಅರಸಿನ ಪೂಸಿದ ಹೆಣ್ಣ13 ಕಪೋಲ - ಪೊಸ- ಮೌಳಿ ಕೈಯಲ್ಲಿ ಕಡೆÀಗೋಲ - ನೇಣು ಪಾಲಯ ಪಿಡಿದ ಸುಶೀಲ - ಧರೆಯ - ಶೂಲಿಯ ನೆಲೆಸಿದ ಖೂಳನ ಸದೆದು ಹಿ- ಯ್ಯಾಳಿಸಿ ಮೆರೆದ ಗೋಪಾಲನೆಂಬ ಹೆಣ್ಣ14 ರಜತ ಪೀಠ ಪುರಾಧೀಶ - ನಂದ ವ್ರಜದೊಳಾಡಿದ ಸರ್ವೇಶ - ನಮ್ಮ ವಿಜಯವಿಠ್ಠಲ ನಾರಿವೇಷ - ತನ್ನ ನಿಜಭಕ್ತ ಮಧ್ವಮುನೀಶ, ಆಹ ತ್ರಿಜಗ ಮಧ್ಯದಲಿ ನಿಜ ಪದವಿಯನಿತ್ತು ಸುಜನರಿಗೊಲಿದನ್ನ15
--------------
ವಿಜಯದಾಸ
ಪಾತಕಮನುಜ ಯಾತಕೆ ಗರುವ ನೀ ತಿಳಿದುಳಿ ಜಗನ್ನಾಥನನನು ಪ ನಿಲುಕದ ಮಾತಿಗೆ ಬಲುಬಿಂಕ ಯಾತಕೊ ಬಲು ಬಲು ಮಹಿಮರು ತಿಳಿಯದೆ ಭವ ಬಲೆಯೊಳಗ್ಹೊಳುವರರಿದು ನಿಜ ತಿಳಕೊ 1 ಸ್ವಾಭಿಮಾನ್ಯಾಕೋ ದೇಶಾಭಿಮಾನವ್ಯಾಕೋ ನಭರಾಜಪಾಲ ಮಹಪ್ರಭುವಿನ ಶ್ರೀಪಾದ ಸೊಬಗಿನಿಂ ಭಜಿಸುವ ಭವಕಡಕೊ 2 ಕೋಪವು ಯಾಕೋ ತಾಪವು ಯಾಕೋ ಆ ಪರಬ್ರಹ್ಮ ಜಗದ್ವ್ಯಾಪಕ ಶ್ರೀರಾಮನಪ ರೂಪನಂಬಿ ಮುಕ್ತಿಸುಖ ಪಡಕೊ 3
--------------
ರಾಮದಾಸರು
ಪ್ರಭುವರ ಮರೆದ್ಯಾ ನಟರಾಜವರದ ಪ ಪ್ರಭುವರ ಮರೆದ್ಯಾ ಸೊಬಗಿನ ಹರಿ ಭಕುತರಭಿಮಾನ ತೊರೆದ್ಯಾ ಅ.ಪ ಭವ ಮಾಯಾಜಾಲದಿ ನಾನು ತೋಯಜಾಕ್ಷನೆ ನಿನ್ನ ಭಾವಿಸಿ ಮೊರೆಯಿಟ್ಟು 1 ಘೋರಸಂಸಾರದೊಳು ಘೋರಬqದೆಯಿನ್ನು ಪಾರಮಹಿಮನೆ ನಿನ್ನ ಸಾರುತ ಮರೆಹೊಕ್ಕೆ 2 ದಾಸರೋಳ್ನಿರ್ದಯ ಭೂಷಣವೆ ನಿನಗಿದು ಪೋಷಿಸು ದಯದಿಂದ ಶ್ರೀಶ ಶ್ರೀರಾಮನೆ 3
--------------
ರಾಮದಾಸರು
ಬಂದಾ ಗೋವಿಂದನು ಗೋಕುಲದಿಂದ ಆನಂದ ಮುಕುಂದನು ಪ ಅಂದಿಗೆ ಕಿರುಗೆಜ್ಜೆಯು ಘಲುಘಲುರೆನೆ ಮಂದಹಾಸನಗೆಯಿಂದಲಿ ಶ್ರೀಹರಿ ಅ.ಪ ಕರದಿ ಕಂಕಣ ವಂಕಿಯು ಹೊಳೆಯುತಲಿ ಸಿರದಿ ಕಿರೀಟ ಮುಂ- ಗುರುಳು ಮುಖ ಬೆವರಿನ ಹೊಸ ಕಾಂತಿಯಲಿ ಬೆರಳುಗಳಲಿ ಉಂಗುರ ಥಳಥಳಥಳ ಹೊಳೆಯುವ ಸೊಬಗಿನಲಿ ಕೊರಳೊಳು ಸರಿಗಿಯ ಸರ ಪರಿ ಸರ ಪದಕಗಳ್ಹೊಳೆಯುತಲಿ ಜರಿ ಪೀತಾಂಬರದ ನಡುವಿಲಿ ಕಿರು ಗೆಜ್ಜೆಗಳ್ಹೊಳೆಯುತಲಿ ತರುತುರು ತರುಣೇರು ಮರುಳಾಗುವ ತೆರ ಪರಿಪರಿ ರಾಗದಿ ಮುರಳಿಯ ನುಡಿಸಲು ಸುರರು ಪುಷ್ಪ ವೃಷ್ಟಿಯ ಸುರಿಸುತಲಿರೆ ತುರುಕರು ಮಧ್ಯದಿ ಪೊಳೆವೊ ಚಂದ್ರಮನಂತೆ1 ತುಂಬುರು ನಾರದರೆಲ್ಲರು ಕೂಡಿ ಅಂಬರದಲಿ ನೆರೆದರು ಗಂಧರ್ವಪ್ಸರ ಸ್ತ್ರೀಯರು ಕುಣಿದಾಡಿ ಪರಮಾತ್ಮನ ಸ್ತುತಿಸುತ ರಂಭೆ ಊರ್ವಶಿ ಮೇನಕೆಯರು ಕೂಡಿ ಆನಂದದಿ ನರ್ತಿಸೆ ಇಂದಿರೆ ರಮಣನ ಗುಣಗಳ ಪಾಡಿ ಅಂಬರದಲಿ ದೇವ ದುಂದುಭಿಗಳು ಮೊಳಗಲು ಕಂದರ್ಪನ ಪಿತ ಕರುಣದಿ ಭಕುತರ ಚಂದದಿ ದುರ್ಮತಿ ನಾಮ ವತ್ಸರದಲಿ ಕುಂದಿಲ್ಲದೆ ಸಲಹುವೆನೆನುತಲಿ ತ್ವರ 2 ಸೃಷ್ಟಿಗೀಶನ ಗುಣಗಳ ಪಾಡುತಲಿ ವ- ಶಿಷ್ಠರು ವಿಶ್ವಾಮಿತ್ರ ಕಶ್ಯಪ ಭಾರದ್ವಾಜ ಮುನಿಗಳು ದೇವೇಶನ ಸ್ತುತಿಸುತ ಅತ್ರಿ ಜಮದಗ್ನಿ ಜಾಬಾಲಿಗಳು ಶ್ರೀಕೃಷ್ಣನೆ ಪರನೆಂದು- ತ್ತಮ ಋಷಿಗಳು ಪೊಗಳುತಲಿರಲು ಪರಮೇಷ್ಠಿ ಪಿತನ ತ- ನ್ನಿಷ್ಟ ಭಕುತರನು ಸಲಹಲು ಕಂಕಣ ಕಟ್ಟಿಹ ಕಮಲನಾಭವಿಠ್ಠಲ ತ್ವರ ಶಿಷ್ಟರ ಸಲಹಲು ಸರಸರ ಓಡುತ 3
--------------
ನಿಡಗುರುಕಿ ಜೀವೂಬಾಯಿ
ಬ್ರಹ್ಮಕೊರವಂಜಿ ಸುರರು ಕಿನ್ನರರು ಸ್ಮರಣೆ ಮಾಡುವ ಪಾದ ಕುರುಪತಿಯ ಗರ್ವವನು ಪರಿಹರಿಸುವ ಪಾದ ಪರಮ ಯೋಗಿಗಳ ಹೃತ್ಕಮಲದಲ್ಲಿಹ ಪಾದ ಪಾದ ಪದ್ಮವನು ನೆನೆವೆ ನಾನು 1 ದಾನವಾರಿಯ ಚೆಲ್ವ ಜಾನು ಜಂಘೆಗಳೆಸೆವ ಮೀನ ಖಂಡಗಳ ಪೆರ್ದೊಡೆಯ ಸೊಬಗಿನ ಭಾನುಕೋಟಿ ಪ್ರಕಾಶದಂತೆ ವರಕಾಂತಿಯಲಿ ಆನಂದದಿಂದಲಿ ಮೆರೆವ ಮೂರುತಿಯ ನೆನೆವೆÀ ನಾನು 2 ಮಿಸುನಿ ಒಡ್ಯಾಣ ಕಾಂಚಿಯದಾಮ ತೆಳ್ವಸುರ ಬಿಸಜನಾಭನ ಬಾಹುಪುರಿಯ ಸೊಬಗಿನ ಎಸೆವ ಗದೆ ಶಂಕಚಕ್ರವು ಪದ್ಮಕರದಿ ಶೋ ಭಿಸುತಿರುವ ಕಂಬುಕಂಧರದ ಮೂರುತಿಯ ನೆನೆವೆ ನಾನು 3 ಕದಪು ಕಂಗಳು ಎಸೆಯೆ ಕರ್ಣಕುಂಡಲದ ಸಂಪಿಗೆಯ ನಾಸಿಕದ ರನ್ನ ತುಟಿ ಝಗಝಗಿಸೆ ಕುಡಿಹುಬ್ಬುಗಳು ಎಳೆಯ ಮನ್ಮಥನ ಚಾಪದಂತೆಸೆವ ಮೂರುತಿಯ ನೆನೆವೆÀ ನಾನು 4 ಅರೆದಿಂಗಳಂತೆಸೆವ ನೊಸಲ ಕಸ್ತೂರಿತಿಲಕ ಹೊಳೆÀವ ಕಿರೀಟ ಮಸ್ತಕದಿ ಢಾಳಿಸುವ ಅಲಸದೀರೇಳ್ಜಗವ ಕರುಣದಲಿ ರಕ್ಷಿಸುವ ಹೆಳವನಕಟ್ಟೆ ಶ್ರೀ ವೆಂಕಟೇಶ್ವರನ ನೆನೆವೆ ನಾನು 5 ಕಂಸಾಸುರನಿಟ್ಟ ಸೆರೆಯ ಮನೆಯೊಳು ಕಷ್ಟಪಡುತಲಿ ದೇವಕಿನಿ- ಮಿಷ ಯುಗವಾಗಿ ಕಳೆಯುತಿದ್ದಳು ನಿತ್ಯಾನಂದನ ನೆನೆಯುತಾ ಕಂಸರಿಪು ನಾರಾಯಣನು ಜನಿಸುವನೆಂದು ಅರುಹುವೆನೆನುತಲಿ ಧರಿಸಿದ ಆದನೆ ಕೊರವಿ 6 ಮಲ್ಲಿಗೆಯ ವನಮಾಲೆಯ ಚಂದ್ರಗಾವಿಯನುಟ್ಟು ಪಣೆಯೊಳು ತಿದ್ದಿತಿಲಕವನಿಟ್ಟನು ಗಂಧ ಕಸ್ತೂರಿ ಪರಿಮಳವನು ಲೇಪಿಸಿ ಸರ್ವಾಂಗದಿ ಭಾಸ್ಕರನಂದದಿ ಆದನೆ ಕೊರವಿ 7 ಗುಂಜಿಯ ದಂಡೆಯು ತೋಳಭಾಪುರಿ ಗಲ್ಲಕೊತ್ತಿದ ವೀಳ್ಯವು ಮಂಜಾಡಿಯಸರ ಹವಳ ಸರ ಹತ್ತೆಸರವಾ ಕೊರಳಲಿ ಹೊಳೆಯಲು ಅಂಜನವನಿಟ್ಟು ಅಲರಗಣ್ಣಿಗೆ ಅತಿಹರುಷದಿಂದ ಬೇಗದಿ ಆದನೆ ಕೊರವಿ 8 ಮುತ್ತು ಮಾಣಿಕ ಹೊನ್ನಗೂಡೆಯ ಪಿಡಿದು ಉತ್ತಮ ಶಿಶುವ ಬೆನ್ನಲಿ ಕಟ್ಟಿ ಚಿತ್ತದೊಳಗೆ ನರಹರಿ ಶರಣೆನುತ ಸತ್ಯಲೋಕದಿಂದಿಳಿದಳೆ ಕೊರವಿ 9 ಮಧುರಾ ಪಟ್ಟಣಕಾಗಿ ಬಂದಳೆ ಕೊರವಿ ಹದಿನಾರು ಬಾಗಿಲ ದಾಟಿ ನಡೆದಳು ಮದಗಜದಂತೆ ಮೆಲ್ಲಡಿಗಳನಿಡುತ ಬೆದರದೆ ಕೇರಿಕೇರಿಯಲಿ ಸ್ವರಗೈದು 10 ಮನೆಮನೆ ಬಾಗಿಲಗಳ ಮುಂದೆ ನಿಂತು ವನದ ಕೋಗಿಲೆಯಂತೆ ಯವ್ವಾ ಯವ್ವಾ ಎನುತ ವಿನಯದಿ ಸ್ವರಗೈವ ಕೊರವಿಯ ಕಂಡು ವನಿತೆ ದೇವಕಿ ಸನ್ನೆಮಾಡಿ ಕರೆದಳು 11 ಸನ್ನೆಮಾಡಿ ಕರದರೆ ಚೆನ್ನಕೊರವಂಜಿ ಬಂದು ಎನ್ನವ್ವ ಎನ್ನಕ್ಕ ಎನ್ನ ತಂದೆಯ ಹೆತ್ತವ್ವ ನಿನ್ನ ಮನದಾಯತವ ಹೇಳೇನು ಬಾರವ್ವ ಎನ್ನ ಕೂಸಿಗೆ ಒಂದಿಷ್ಟನ್ನವನಿಕ್ಕವ್ವ ಸೊಲ್ಲಕೇಳೆ ಸೊಲ್ಲಕೇಳೆ ಸಿರಿವಂತೆ ಬಾರೆ 12 ಮಲೆಯಾಳ ಕೊಂಕಣದೇಶ ಮಹಾರಾಷ್ಟ್ರ ಗುಜ್ಜರದೇಶ ಚೆಲುವ ಕಾಶ್ಮೀರ ಕಳಿಂಗ ಕರ್ನಾಟಕದೇಶ ತುಳುವ ತಿಲುಗ ದೇಶವನ್ನು ತಿರುಗಿ ಸೊಲ್ಲ ಹೇಳಿ ಬಂದೆ ಒಲುಮೆಯ ಕೊರವಂಜಿ ನಾನಲ್ಲವೆಯಮ್ಮ ಸೊಲ್ಲ ಕೇಳೆ ಸೊಲ್ಲ ಕೇಳೆ ಸಿರಿವಂತೆ ಬಾರೆ13 ಛಪ್ಪನ್ನ ದೇಶವನೆಲ್ಲ ಸುತ್ತಿ ಸೊಲ್ಲ ಹೇಳಿಬಂದೆ ತಪ್ಪ ಹೇಳುವ ಕೊರವಿ ನಾನಲ್ಲವೆಯಮ್ಮ ಕರ್ಪೂರ ವೀಳ್ಯವ ತಾರೆ ಕಾಂತೆ ನಿನ್ನ ಕೈಯ ತೋರೆ ಸೊಲ್ಲಕೇಳೆ ಸೊಲ್ಲಕೇಳೆ ಸಿರಿವಂತೆ ಬಾರೆ 14 ವಚನ :ಇತ್ತಿತ್ತ ಬಾರವ್ವ ವಿವರಿಸಿ ಹೇಳೇನು ಮುತ್ತಿನ ಮುಡಿಯವ್ವ ಮುದ್ದುಮುಖವ ತೋರೆ ಮತ್ತಗಜಗಮನೆ ಮಂದಹಾಸವದನೆ ರತ್ನದ ಸೆಳೆಗೋಲ ಪಿಡಿಯೆ ರಾಜೀವನೇತ್ರೆ ನಿನ್ನ ಚಿತ್ತದೊಳಗಣ ಮಾತ ಛಂದವಾಗಿ ಹೇಳ್ವೆನು ಕೇಳೆ ಅಮ್ಮಯ್ಯ ಬರಿಯ ಡಂಬಕದ ಕೊರವಿ ನಾನಲ್ಲ ಅರುಹುವೆನು ಮುಂದಣ ಕಥಾಂತ್ರವೆಲ್ಲವ ಮೊರದ ತುಂಬ ಮುತ್ತು ತಾರೆ ಮಾನಿನಿರನ್ನಳೆ ಕುರುಹ ಹೇಳೇನು ಇಲ್ಲಿ ಕುಳ್ಳಿರು ಬಾರೆಯವ್ವ15 ಎಂದ ಮಾತ ಕೇಳಿ ಹರುಷದಿಂದ ದೇವಕಿ ಮಿಂದು ಮಡಿಯನುಟ್ಟು ಕಾಂತೆ ಬಂದು ಕುಳಿತಳು ಇಂದುಮುಖಿಯು ಮೊರನ ತುಂಬ ಮುತ್ತನಿಟ್ಟಳು ತಂದು ಕೈಯತುಂಬ ಹೊನ್ನ ಕಾಣಿಕಿಟ್ಟಳು 16 ಗುಣಿಸಿ ಮುತ್ತಿನ ಅಕ್ಷತೆಯಿಟ್ಟು ಗುಪಿತದಿಂದಲಿ ನೆನೆದಳು ಮನದಭೀಷ್ಟವೀವ ಕೃಷ್ಣನ ಜನಿಸಿದೆನು ಮಧುರಾಪುರದ ಅರಸನುದರದಿ ಎನ್ನ ಸೋದರನೆಂಬ ಪಾಪಿ ಸೆರೆಯೊಳಿಟ್ಟನು17 ಎನ್ನ ಸುತನು ತನ್ನ ಕೊಲುವನೆಂಬ ಮಾತಿಗೆ ಎನ್ನ ಅಗ್ರಜ ಎನ್ನ ಮೇಲೆ ಖಡ್ಗವೆತ್ತಲು ಎನ್ನ ಪತಿಯು ಎನ್ನ ಮೇಲಣ ಮಮತೆಯಿಂದಲಿ ತನ್ನ ಸುತರ ಕೊಡುವೆನೆಂದು ಕೊಲೆಯನುಳುಹಿದ18 ಒಡನೆ ಹುಟ್ಟಿದ ಅಣ್ಣ ಎನಗೆ ವೈರಿಯಾದನು ಪಡೆದ ಪಡೆದ ಸುತರನರೆಯಲಪ್ಪಳಿಸಿದನು ಒಡೆಯ ಕೃಷ್ಣಸಲಹೊ ಎಂದು ಸ್ತುತಿಸಿ ದೇವಕಿ ಗಡಣದಿಂದ ಕೊರವಿ ತಾನು ಹೇಳ ಕುಳಿತಳು 19 ವಚನ :ತಿರುಪತಿ ತಿಮ್ಮಪ್ಪ ಚಳ್ಳಪಿಳ್ಳೆರಾಯ ಸುರಪುರವಾಸ ಲಕ್ಷ್ಮೀವರ ಕರುಣವಾಗು ವಂದನೆ ಸೊಲ್ಲ ಚಂದಾಗಿ ಹೇಳೇನು ಕೇಳೆಯಮ್ಮಯ್ಯಾ ಉರ್ಬಿಯೊಳತಿ ದಿಟ್ಟನಮ್ಮ ನಿಮ್ಮ ಮಗನು ಗರ್ಭದೊಳಿಹನು ಕಾಣಮ್ಮ ಕೊಬ್ಬಿದ ಕಂಸನ ಹಮ್ಮ ಮುರಿದು ನಿಮ್ಮ ನಿರ್ಬಂಧ ಬಿಡಿಸುವನಮ್ಮ 20 ಎಂಟನೆ ಗರ್ಭವಿದಮ್ಮ ನಿಮ್ಮುದರದಿ ಅಂಟಿಹ ಮಗನು ಕಾಣಮ್ಮ ಗಂಟಲ ಮುರಿವ ಕಾಣಮ್ಮ 21 ನಿಷ್ಕರುಣಿ ನಿಮ್ಮಣ್ಣನಮ್ಮ ನೀ ಪಡೆದಂಥ ಮಕ್ಕಳ ಕೊಲ್ಲುವ ಕಾಣಮ್ಮ ಚಕ್ರಧರನ ಕೈಯೊಳಮ್ಮ ಈ ಕಂಸನು ಸಿಕ್ಕುವುದು ತಡವಿಲ್ಲವಮ್ಮ 22 ವಚನ : ಈ ಮಾತು ಪುಸಿಯಲ್ಲ ಸ್ವಾಮಿಯ ಕರುಣ ಉಂಟು ಕೈಗೂಡಿತು ಕೇಳೆಯಮ್ಮಯ್ಯಾ ಕೈಯ ತೋರೆ ಕೈಯ ತೋರೆ ಕೈಯ ತೋರೆ ಅಮ್ಮಯ್ಯ ಕೈಯ ತೋರೆ ನಿನ್ನ ಮನದ ಕುರುಹ ಹೇಳುವೆ ಸೈಯೆನಿಸಿಕೊಂಬೆ ನಿನಗೆ ಸುಖವಾಕ್ಯವನು ಹೇಳಿ ಭಯ ಬೇಡವೇ ಅಮ್ಮಯ್ಯ ನಿನಗೆ ಭಾಷೆಯ ಕೊಡುವೆ 23 ಸಟೆಯ ಮಾತುಗಳಾಡಿ ಸೆಳೆದುಕೊಂಡು ಹೋಗಿ ಹೊಟ್ಟೆಯ ಹೊರೆವ ಕೊರವಿ ನಾನಲ್ಲವಮ್ಮ ನೆಟ್ಟನೆ ಸದಾಶಿವನ ತಟ್ಟಿ ಬಂದ ಕೊರವಿಯ ಮಾತ ದಿಟ್ಟವೆಂದು ಸೆರಗ ಗಂಟಿಕ್ಕಿಕೊಳ್ಳಮ್ಮ 24 ಅಂಗನೆ ನಿನ್ನ ಮನದ ಆಯಿತವ ಹೇಳೇನು ಮಾನಿನಿ ರನ್ನೆ ಬಂಗಾರದ ಕೈಯ ತೋರೆ ಬೊಗಸೆಗಂಗಳ ನೀರೆ ಹಿಂಗುವದು ನಿನ್ನ ಕಷ್ಟ ಹುಸಿಯಲ್ಲವಮ್ಮ 25 ವಚನ :ಚಂದ್ರವದನೆಯ ಚೆಲ್ವ ವಾಮಹಸ್ತವ ಚಂದದಿಂದಲಿ ಕೊರವಿ ವಿವರಿಸಿ ಹೇಳಿದಳು ಹಿಂದಣ ಕಷ್ಟವೆಲ್ಲ ಪರಿಹಾರವಾಯಿತು ಶುಭ ಶ್ರಾವಣ ಬಹುಳಾಷ್ಟಮಿ ರಾತ್ರೆಯ ನಡುವಿರುಳು ರೋಹಿಣಿ ನಕ್ಷತ್ರದಲ್ಲಿ ನಿಮ್ಮುದರದಿ ಕೃಷ್ಣ ಜನಿಸುವನು ಕಾಣೆ ಕೇಳಮ್ಮಯ್ಯ 26 ಪಂಕಜ ಪೀತಾಂಬರ ಅ- ಲಂಕಾರ ಮೂರುತಿಯಾಗಿ ಪುಟ್ಟುವ ಕೃಷ್ಣ ಶಂಕೆಯಗೊಳದಿರೆ ಕೇಳಮ್ಮಯ್ಯ 27 ಅಮ್ಮಾ ನಿಮ್ಮುದರದಿ ಬ್ರಹ್ಮನಪಿತ ಬಂದು ನಿಮ್ಮ ನಿರ್ಬಂಧವ ಬಿಡಿಸುವನು ಕಾಣೆ ಉಮ್ಮಯಗೊಳಬೇಡವೆ ಕೇಳಮ್ಮಯ್ಯ 28 ಆದಿಮೂರುತಿ ನಿಮ್ಮುದರದೊಳವತರಿಸಿ ಮೇದಿನಿ ಭಾರವನಿಳುಹಲು ಕಂಸನ ಭೇದಿಸುವನು ಕಾಣೆ ಕೇಳುಮ್ಮಯ್ಯ 29 ಏಳು ಮಕ್ಕಳ ಕಂಸ ಅರೆಯಲಪ್ಪಳಿಸಿದನೆ ಚಳ್ಳೆ ಬೀಜದಂತೆ ನುಣಿಚಿ ತಪ್ಪಿಸಿಕೊಂಬ ಕಳ್ಳಮಗನು ಪುಟ್ಟುವ ಕೇಳಮ್ಮಯ್ಯ 30 ವಚನ : ಇಂಥಾ ಮಗನು ನಿಮ್ಮುದರದಿ ಜನಿಸಲು ಕಾಂತ ವಸುದೇವರು ಗೋಕುಲಕೆ ಒಯ್ಯಲು ಸಂತೋಷದಿಂದಲ್ಲಿ ಬೆಳೆವನೆ ಕೃಷ್ಣ ಕೇಳಮ್ಮಯ್ಯ ಗೋಕುಲದೊಳಗೆ ಶ್ರೀ ಕೃಷ್ಣನನಿಟ್ಟು ದುರ್ಗೆಯ ಈ ಕಡೆಗೆ ಕೊಂಡುಬಹ ನಿಮ್ಮ ಪತಿಯು ಕಾಕು ಕಂಸಾಸುರನು ಆಕೆಯ ಪಿಡಿಯೆ ಗಗ- ನಾಕೆ ಹಾರಿ ಹೋಗುವಳು ಮಾಯಾಕಾರಿಯು 31 ಕ್ರೂರ ರಕ್ಕಸ ಎನ್ನ ಕೊಲ್ಲುವದೇತಕೋ ನಿನ್ನ ವೈರಿ ಕೃಷ್ಣ ಹೋಗಿ ಗೋಕುಲದೊಳಗೆ ಧೀರನಾಗಿ ಬೆಳೆದು ಸಂಹಾರವ ಮಾಡುವನೆಂದು ಸಾರಿ ಹಾರಿ ಹೋಗುವಳಂಬರಕೆ ದುರ್ಗಿ 32 ನಂದನ ಗೋಕುಲದಿ ಆನಂದದಿ ಬೆಳೆದಾನು ಕೃಷ್ಣ ಸಂದೇಹ ಬೇಡವವ್ವ ನಿಮ್ಮ ಮನದೊಳಗೆ ಬಂದು ಮz
--------------
ಹೆಳವನಕಟ್ಟೆ ಗಿರಿಯಮ್ಮ
ಭಜಿಸಿರೋ ಮನದಣಿಯ ಸುಜನಾಬ್ಜ ದಿನಮಣಿಯ ಭುಜಗಾರಿಗಮನ ತಿಂಥಿಣಿಯ ಸತ್ಕಣಿಯ ಪ ರಜನೀಕರ ಗುಣಶ್ರೇಣಿ ಅಜಭವ ಸುರಾಗ್ರಣಿಯ ತ್ರಿಜಗಮೋಹನ ಮಣಿಯ ಸೊಬಗಿನ ಕಣಿಯ ಅ.ಪ ಪೊಳೆವ ಮಕುಟದ ಫಣಿಯ ತಿಲಕದಲಿ ರಂಜಿಸುವ ಪ್ರಣವ ಗೋಚರ ಸುಧಾಮಯದ ಕದಪಿನಲಿ ತೊಳಪ ಕುಂಡಲದ ನಾಸಿಕದ ಮೂಗುತಿಯೆಸೆಯೆ ಸುಲಿಪಲ್ಲ ನಗೆಮೊಗದ ಸುಲಭಸೌಂದರÀನ 1 ಪದಕ ಮಣಿಮಯ ಮೌಕ್ತಿಕದ ಹಾರ ತ್ರಿಸರ ಕಂ ಧರ ವೈಜಯಂತಿಯೊಲವಿನ ಬಾವುಲಿ ಮುದದ ಕಂಕಣ ಕರದ ಮುದ್ರೆಯೆಸೆವಾ ಬೆರಳ ಕಂಬು ಮದನಶರಧನು 2 ತರಣಿ ಶತಕೋಟಿ ಕಿರಣತತಿ ಕುಮುದ ವರ್ಣದ ತನುರುಚಿಯಾ ಹರಸುರೇಶ್ವರ ವಿರಿಂಚ್ಯಾದಿ ವಂದಿತಚರಣ ಸರಸಿರುಹ ವರದೇವಪುರದ ಸಿರಿವರನ 3
--------------
ಕವಿ ಲಕ್ಷ್ಮೀಶ
ಭಾಗವತ ದಶಮಸ್ಕಂದ ಕಥೆ ಜಯ ಜಯ ರಾಮಾನುಜ ಪಾಹಿ ಜಯ ಜಯ ಶ್ರೀಕೃಷ್ಣಪಾಹಿ ಜಯ ಪಾಂಡವ ಮಿತ್ರ ಪಾಹಿ ಜಯ ಜಯ ಜಯತು ಪ ಭವ ಪ್ರಮುಖ ಸುರರಿ- ಗಾನಮಿಸುತ ದಶಮಸ್ಕಂದದ ಕಥೆಯ ಪೇಳುವೆ 1 ತಾಮರಸಭವಂಗೆ ಪೋಗಿ ಮೊರೆಯನಿಟ್ಟಳು 2 ಹರಮುಖ ಸುಮನಸರ ಕೂಡಿ ವಿಧಿಯು ಕ್ಷೀರ ಶರಧಿಯೈದಿ ಪರುಷಸೂಕ್ತದಿಂದ ಹರಿಯ ಸ್ತೋತ್ರ ಮಾಡಲು 3 ಸುರರು ಯಾದವರಾಗಿ ನಾನು ಬರುವೆ ದೇವಕಿ ಪುತ್ರನೆನಿಸಿ ತರಿವೆ ನೀಚರನೆಂದಾಕಾಶವಾಣಿಯಾಯಿತು 4 ಕನ್ನಿಕೆಯರು ಭುವಿಯೊಳವತರಿಸುವದೆನ್ನುತ 5 ಮೃಡ ಸಡಗರದಲಿ ತಮ್ಮ ನಿಳಯಗಳನು ಸಾರ್ದರು 6 ಶೂರಸೇನನೆಂಬ ರಾಜ ಪಾರಂಪರ್ಯದಿ ಮಧುರೆಯಲ್ಲಿ ಧಾರುಣಿಯ ಪಾಲಿಸುತೆ ಧರ್ಮದಿಂದಲಿ 7 ದೇವಕನು ದೇವಕಿಯ ವಸುದೇವಗಿತ್ತು ಉತ್ಸವ ಬರೆ ಭಾವ ಮೈದ ಕಂಸ ರಥಕೆ ಸಾರಥಿಯಾದನು8 ನಭವುನುಡಿಯೆ ಜವದಿ ತಂಗಿಯ ಮುಡಿಯ ಪಿಡಿಯೆ ಕಂಸ ಕೋಪದಿ9 ಪುಟ್ಟಿದ ಮಕ್ಕಳನೆಲ್ಲ ನಿನಗೆ ಕೊಟ್ಟುಬಿಡುವೆ ಕೊಲ್ಲದಿರವಳ ಸಿಟ್ಟು ಸೈರಿಸೆನುತ ಪೇಳ್ದ ಶೌರಿಭಾವಗೆ 10 ಕೊಡಲು ಕಂಸ ಹೃದಯದಲಿ ಸತ್ಯಕೆ ಮೆಚ್ಚಿ ಭಾವಗೆಂದನು 11 ಇವನ ಭಯವು ಎನಗೆ ಇಲ್ಲ ಈವುಂದೆಂಟನೆ ಸುತನ ಮಾತ್ರ ತವಕದಿಂದ ಮನೆಗೆ ಪೋಗು ಪುತ್ರ ಸಹಿತದಿ 12 ಸೆರೆಯೊಳಿಡಿಸಿ ಘನವಿಭವದಿ ಭುವಿಯನಾಳುತಿರ್ದ ಕಂಸನು 13 ಸುರ ಋಷಿ ರಹಸ್ಯದಲಿ ಬಂದು ಪೇಳಿದ 14 ಉರಿದ ಕಣ್ಣೊಳು ಕಿಡಿಗಳುದುರೆ ಶೌರಿಯ ಬಂಧನದೊಳಿಟ್ಟು ತರಿದನಾರುಮಂದಿ ಸುತರ ತವಕದಲಿ 15 ಏಳನೆಯ ಗರ್ಭ ಉದರವಿಳಿದೆಂದು ತಿಳಿಯೆ ಜನರು ಶ್ರೀಲತಾಂಗಿಯರಸನಂಶ ಬಳಿಕ ಬೆಳೆದುದು 16 ಅದನು ವಯ್ದು ದುರ್ಗಿ ರೋಹಿಣಿಯುದರದಲ್ಲಿ ಇಟ್ಟೆಶೋದೆ ಯುದರದಲ್ಲಿ ತಾನು ಸೇರಿ ಬೆಳೆಯುತಿರ್ದಳು 17 ಬಳಿಕಯಿಂದಿರೇಶ ತಾನು ಜಲಜಮುಖಿ ದೇವಕಿಯ ಗರ್ಭ ದಲಿ ಪ್ರವಿಷ್ಠನಾಗಿರ್ದ ಮಹಿಮೆಯಿಂದಲಿ 18 ಮುಖದಿ ಕಳೆಯೇರಿರಲ್ಕೆ ಖಳನಿದೇ ಇದೇ ಎನುತ್ತ ಸಕಲ ಭಾಗದಿ ಕಾವಲಿಟ್ಟು ಸಮಯ ನೋಡುತ್ತಿರೆ 19 ಸುರರು ಹರಿಯ ವೇದದಿಂದ ಸ್ತೋತ್ರಮಾಡಿ ಹೋದರು 20 ನಂದನರಸಿಯಲ್ಲಿ ದುರ್ಗಿಯಂದುದಿಸಿರೆ ನಭೋ ಮಾಸದಿ ಅಂದುರಾತ್ರಿಯ ಶಿತಪಕ್ಷಯಷ್ಟಮಿ ದಿನದಲಿ 21 ಸರಸಿಜಾಪ್ತನುದಿಸಿದಂತೆ ಬೆಳಕು ತುಂಬಲು 22 ದರ ಗದಾರಿ ಪದ್ಮ ಪೀತಾಂಬರ ಶ್ರೀವತ್ಸ ಕೌಸ್ತುಭಗಳ ಶೌರಿ ನೋಡಿದ 23 ದಿವ್ಯರೂಪವ ಕಾಣುತ ವಸುದೇವ ಮನದಿ ಹಿಗ್ಗಿ ಮುದದಿ ಗೋವುಗಳನು ಹತ್ತುಸಾವಿರ ಧಾರೆಯೆರೆದನು 24 ತುತಿಸಲಂದು ಸತೀಪತಿಗಳು ಹಿತದಿ ತೇಜವ ಮಾಯಗೈದು ಸುತನು ಮಗುವಿನಂತೆ ತೋರೆ ಸೊಬಗಿನಿಂದಲಿ 25 ಕಾಲಲಿದ್ದ ಸಂಕೋಲೆಗಳು ಕಳಚಿ ಬಿದ್ದುದಾಗ ದೇವಕಿ ಬಾಲನನ್ನು ನೋಡಿ ಮನದಿ ಭಯವ ಪಟ್ಟಳು 26 ಬೀಗಮುದ್ರೆ ಸಹಿತ ಎಲ್ಲ ಬಾಗಿಲು ತನ್ನಿಂತಾನೆ ತೆಗಿಯೆ ಶೌರಿ ನಡೆದನು 27 ಗೋಕುಲವನೈದಿ ಕಮಲನಾಭನಂ ಯಶೋದೆಯ ಬಳಿಯಲಿಟ್ಟನು 28 ಆಕೆ ಪಡೆದ ಹೆಣ್ಣು ಶಿಶುವ ತಾ ಕೈಕೊಂಡು ಮನೆಗೆ ಬಂದು ಜೋಕೆಯಿಂದ ಮೊದಲಿನಂತೆ ತೋರುತಿರ್ದನು 29 ಅಳಲು ಶಿಶವು ಕೇಳಿಯೆಲ್ಲ ಖಳರು ಹೋಗಿ ಕಂಸಗುಸುರೆ ಝಳಪಿಸುತ್ತ ಖಡ್ಗವನ್ನು ಜವದಿ ಬಂದನು 30 ವಂದನಾದರೂ ಬಿಡಬಾರದೆ ಸುಂದರಿ ಇವಳಣ್ಣ ಎನಲು ಮುಂದುಗಾಣದೆ ಯೋಚಿಸುತ್ತ ಮುಗುವನೆತ್ತಿದ 31 ನಭದಿನಿಂತು ಸಾರಿ ಛೀ ದುರಾತ್ಮ ಯಾರ ಕಡಿವೆ ಯೆಂದಳು? 32 ವೈರಿ ಮೀರಿ ಕೊಂದು ಪಾಪಿಯಾದೆ ಛೀ! ಹೋಗೆಂದಳು 33 ಮನದಿ ನೊಂದು ಕಂಸನು ತನ್ನನುಜೆಯನ್ನು ಭಾವನನ್ನು ವಿನಯದಿಂದ ಬೇಡಿಕೊಂಡ ಕ್ಷಮಿಸಿರೆನ್ನುತಾ 34 ನೆರಹಿ ತನ್ನ ಮಂದಿಯಾದ ದುರುಳರಿಗೀ ಸುದ್ದಿಪೇಳೆ ಬರಲಿ ಹರಿಯು ಕೊಲುವೆವವನ ಭಯಬಿಡೆಂದರು 35 ಧರೆಯೊಳು ಪುಟ್ಟಿದ ಶಿಶುಗಳನ್ನು ತರಿವುದೆಂದು ಪೂತನೆಯೆಂಬ ಮರುಳೆಯನ್ನು ಕಳುಹಿ ವಿಸ್ಮಯದಿಂದಲಿರ್ದನು 36 ನಂದಗೋಕುಲದಲ್ಲಿ ಮಹಾನಂದವಾಗಿ ಜನರೆಶೋದೆಯ ಕಂದನನ್ನು ನೋಡಿ ಹಿಗ್ಗಿಯುತ್ಸವಗೈದರು 37 ಪ್ರೀತಿಯಿಂದ ನಂದಗೋಪ ಜಾತಕರ್ಮ ಮಾಡಿಸಲ್ಕೆ ಶ್ರೀ ತರುಣಿಯ ಕಳೆ ದಿನದಿನದಿ ಪೆರ್ಚುತಿಹುದು 38 ಶೌರಿಯ ಮಧುರೆಯಲಿ ನೋಡಿ ಆದರಿಸಿ ಎನ್ನ ಮಗನೆ ಧೀರ ನಿನ್ನ ಮಗನೆನ್ನುತ ಗೋಪ ನುಡಿದನು39 ಏಳನೆಯ ದಿನದಿ ಪೂತನಿ ಬಾಲಕಂಗೆ ಮೊಲೆಯನೊಡೆ ಹಾಲಾಹಲವನೀಂಟಯಸುವನೆಳದು ಕೊಂದನು40 ಬಿಡುಬಿಡೆನ್ನುತಾರ್ಭಟಿಸುತಲೊಡನೆ ಯೋಜನವಾಗಿ ದೇಹ ಪೊಡವಿಗುರುಳೆ ನೋಡಿಗೋಪರು ಭೀತಿಗೊಂಡರು 41 ಜನ್ಮತಾರೆಯುತ್ಸವದಲಿ ಶಕಟನು ಬಂಡಿಯೊಳು ಸೇರಿ ಇರಲು ನನ್ನಿಯಿಂದಲೊದ್ದು ಕೆಡಹಿ ಕೊಂದಿತಾ ಶಿಶು ಪೋರ 42 ಬಾರಿಬಾರಿಗೆ ರಕ್ಷೆಕಟ್ಟಿನಾರಾಯಣ ಕವಚವ ತೊಡಿಸಿ ಪೋರಬಾಲನನ್ನು ಸಲಹೆನುತ ಹರಿಯ ಬೇಡಿದರು43 ಸಾರಿ ನೆಲಕೆ ಕೆಡಹಿ ಮೇಲೆ ಆಡುತಿರ್ದನು 44 ಶೌರಿ ನೇಮದಿಂದ ಗರ್ಗ ಸೇರಿ ಗೋಕುಲವನು ಸಂ ಸ್ಕಾರ ಕ್ಷತ್ರದಿಂದ ಮಾಡಿದ ಶಿಶುಗಳೆರಡಕೆ 45 ರಾಮಕೃಷ್ಣರೆಂದು ಪೆಸರ ಪ್ರೇಮದಿಂದಲಿಡಿಸಿ ನಂದನ ನೇಮಕೊಂಡು ತಾ ತೆರಳಿದ ಗರ್ಗಾಚಾರ್ಯನು46 ಶುಕ್ಲಪಕ್ಷದ ಚಂದ್ರನಂತೆ ಶುಕ್ಲನಾಮಕ ಹರಿಯು ಜನದೊ ಳಕ್ಕರಿಯಲ್ಲಿ ಬಾಲಲೀಲೆ ತೋರುತಿರ್ದನು 47 ಅಂಬೆಗಾಲಿಡುತ್ತ ಕೃಷ್ಣ ಸಂಭ್ರಮದಲಿ ಮನೆಮನೆಗಳೊ ಳಿಂಬಾಗಿ ಪಾಲು ಬೆಣ್ಣೆ ಕದ್ದು ತಿಂಬನು 48 ವಂದು ನೋಡಿ ಕಣ್ಣುಮುಚ್ಚಿ ವಿಸ್ಮಿತಳಾದಳು 49 ಮನೆಮನೆಗಳ ಪೊಕ್ಕೆಶೋದೆತನಯ ಪಾಲುಬೆಣ್ಣೆಸವಿದು ವಿ ನಯದಿಂದ ಅರಿಯದವನಂತಿರುವ ತಾಯಿಗೆ 50 ಗೋಪಿ ವಿಧ ವಿಧ ಗುಣದಿಂದಲೂಖಲಕ್ಕೆ ಕಟ್ಟಿದಳ್ 51 ವರಳ ಸೆಳೆದುಕೊಂಡು ಮತ್ತಿಮರಗಳನ್ನು ಮುರಿಯೆ ಸಿದ್ಧ ಪರುಷರೀರ್ವರಾಬಾಲಗೆ ನಮಿಸಿ ತುತಿಸಿ ಪೋದರು 52 ವನಜನಾಭ ಕೃಷ್ಣನನ್ನು ದೂರುತಿರುವರು 53 ಸೂನು ನಮ್ಮ ಮನೆಗೆ ಬಂದು ಆನಂದದಿ ಯಾರು ಆಡದಾಟ ಆಡುವ 54 ಬಾಯಿಗೊರಸಲತ್ತೆ ಸೊಸೆಯ ಹೊಡೆಯೆ ನಗುತ ಓಡಿ ಬಂದ ತವಸುತ 55 ಲೀಲೆಯಿಂದಲಿವನು ನೆಲುವಿನ ಮೇಲಿಟ್ಟಿರುವ ಭಾಂಡವನ್ನು ಕೋಲಿನಿಂದ ತಿವಿದು ವಡೆದು ಪಾಲ ಸವಿದನು56 ಎತ್ತಿಕೊಳ್ಳೆನುತ್ತ ಮೈಯ್ಯ ಹತ್ತಿ ನೆಲುವಿನ ಭಾಂಡವನ್ನು ಮತ್ತೆ ನಿಲುಕಿಸಿಕೊಂಡು ಪಾಲಕೆನೆಯ ಮೆದ್ದನು 57 ಸತಿಪತಿಗಳ್ ಮಲಗಿರೆ ಮಧ್ಯೆ ಸರ್ಪವನು ಹಾಕಿ ತಾನ- ಗುತ್ತಲಿ ಜುಟ್ಟು ಜಡೆಗೆ ಗಂಟಿಕ್ಕಿ ಓಡಿದ58 ಅಳುತಲಿರುವ ಶಿಶುವಿನ ತಲೆಯ ಕೂದಲು ಕರುವಿನಬಾಲಕೆ ಎಳೆದು ಗಂಟುಹಾಕಿ ಬೀದಿಯಲ್ಲಿ ನೂಕುವ 59 ಬೆಣ್ಣಿಯನ್ನು ಮೆದ್ದು ಮಿಕ್ಕದನ್ನು ಕೋತಿಗಿತ್ತದು ತಿನ್ನತಿರಲು ನಗುತ ನಗುತ ತಿರುಗುತಿರುವನು 60 ಇನಿತು ಎಲ್ಲ ಪೇಳೆ ಗೋಪವನಿತೆ ತಾನು ಮಗನ ಮುದ್ದಿಸಿ ಘನ ಪ್ರಮೋದ ಚಿತ್ತಳಾಗಿ ಕಾಲಕಳೆವಳು 61 ಪ್ರೀತಿಯಿಂದ ಬನ್ನಿ ಎಂದು ಕರೆವ ಬಾಲರ 62 ಮೂರು ವರ್ಷವಾಗೆ ಕೃಷ್ಣ ಮುದದಿ ಕರುಗಳ ಕಾಯುತ್ತ ವಾರಿಗೆಯವರಿಂದ ಕೂಡಿ ಕುಣಿಯುತಿರುವನು 63 ವತ್ಸ ಬಕರ ಮುರಿದು ಕೃಷ್ಣ ಸ್ವೇಚ್ಛೆಯಿಂದಲಣ್ಣನೊಡನೆ ನಿಶ್ಚಲ- ಚಿತ್ತರುಲಿಯಲಾಡುತೆಸೆದ ಮೋದದಿ64 ವೃಂದಾವನಕೆ ಪೋಗಲಲ್ಲಿ ಇಂದಿರೇಶ ವಿಷದ ಮಡುವ ನೊಂದು ದಿನದಿ ಧುಮುಕಿ ಜಲವ ನಿರ್ಮಲಗೈದನು 65 ವನದೊಳಗ್ನಿಯನು ನುಂಗಿ ಜನರ ಸಲಹಿ ರಾತ್ರಿಯಲ್ಲಿ ಮುನಿ ಜನೇಢ್ಯನಾಗಿ ಗೋಕುಲದೊಳೆಸೆದನು 66 ಅಜಗರನಾಗಿದ್ದಸುರನ ನಿಜಶರೀರ ಬೆಳಸಿ ಕೊಂದು ಸ್ವಜನರನ್ನು ಪಾಲಿಸಿದನು ವೃಜಿನದೂರನು 67 ಳನ್ನು ಕಾಯ್ದ ಕೃಷ್ಣ ತಾನು ನನ್ನಿಯಿಂದಲಿ 68 ಕರುಗಳನ್ನು ಹುಡುಗರನ್ನು ಸರಸಿಜಭವ ಬಚ್ಚಿಡಲ್ಕೆ ಹರಿಯುತಾನು ತತ್ವದ್ರೂಪವಾಗಿ ಮೆರೆದನು 69 ನಾನಾಲಂಕಾರದಿ ಗೋವುಗಳ
--------------
ಗುರುರಾಮವಿಠಲ
ಮುರಳಿಯ ನಾದವ ಕೇಳಿ ಬನ್ನಿರಿ ಪ ಮುರಳಿಯ ನಾದವ ಕೇಳಿ ಅ.ಪ ಮದುರಾನಾಥನು ಮುರಳಿಯನೂದಲು ಸುರಿವುದಾನಂದಜಲ ನಯನದಲಿ 1 ಕಂಗೊಳಿಸುವ ಬೆಳದಿಂಗಳ ಸೊಬಗಿನಲಿ ತಂಗಾಳಿಯ ಸುಖದಿ ಶ್ರೀರಂಗನ 2 ಶ್ಯಾಮಲಾಂಗನು ತನ್ನ ಕೋಮಲ ಕರದಲಿ ಪ್ರೇಮವು ತುಂಬುವುದು 3 ಪಂಚಬಾಣನ ಪಿತ ಮುರಳಿಯ ಮಧುರಸ ಹಂಚಲೆಮಗೆ ರೋಮಾಂಚವಾಗುವುದು 4 ರಜನೀಕಾಂತನ ಕುಲದಲಿ ಜನಿಸಿ ವ್ರಜಜನಗಳಿಗಧಿಕ ಪ್ರಸನ್ನನ 5
--------------
ವಿದ್ಯಾಪ್ರಸನ್ನತೀರ್ಥರು
ಮೇಲ್ ಮೇಲ್ ಮೇಲ್ ಮೇಲ್ ಹರಿನಾಮ ಮೇಲು ಮೂಜಗಸೂತ್ರ ಹರಿನಾಮ ಪ ಕಾಲಕುಜನಕುಲ ಹರಿನಾಮ ಪಾಲಸುಜನಗಣ ಹರಿನಾಮ ಜಾಲಮಾಯ ದರ್ಪಣ್ಹರಿನಾಮ ವಿಶ್ವ ಹರಿನಾಮ ಅ.ಪ ಶರನಿಧಿಮಂದಿರ ಹರಿನಾಮ ಶರಧಿಮಥನ ಮುರಹರಿನಾಮ ಪುರತ್ರಯಸಂಹರ ಹರಿನಾಮ ಸುರಗಣಭೋಜನ ಹರಿನಾಮ ಶರಣರ ಸಿರಿತಾನ್ಹರಿನಾಮ ಪರತರ ಪಾವನ ಹರಿನಾಮ1 ಶಾಪವಿಮೋಚನ ಹರಿನಾಮ ತಾಪತ್ರಯಗಳ್ಹರ ಹರಿನಾಮ ಗೋಪೇರಾನಂದ ಲೀಲ ಹರಿನಾಮ ಕಪಾಲಧರನುತ ಹರಿನಾಮ ಗೌಪ್ಯಕೆ ಗೌಪ್ಯದ ಹರಿನಾಮ 2 ದುರಿತ ದಾರಿದ್ರ್ಯ ದೂರ್ಹರಿನಾಮ ಪರಿಹರ ಜರಾಮರಣ್ಹರಿನಾಮ ನರನ ಸಿರಿಯ ಭಾಗ್ಯ ಹರಿನಾಮ ಸುರತರು ಹರಿನಾಮ ಅರಿವಿನ ಅರಮನೆ ಹರಿನಾಮ ಪರಕ ಪರಮಸಿರಿ ಹರಿನಾಮ 3 ನಿಜಮತಿ ಭಂಡಾರ ಹರಿನಾಮ ಕುಜಮತಿ ಖಂಡನ ಹರಿನಾಮ ಭಜಕರನಿಜಧೇನ್ಹರಿನಾಮ ಭುಜಗಾದ್ರಿ ಪರ್ಯಂಕ ಹರಿನಾಮ ದ್ವಿಜರಿಗಮೃತನಿಧಿ ಹರಿನಾಮ ಅಜನಿಗುತ್ಪತ್ತಿ ಮಂತ್ರ ಹರಿನಾಮ 4 ವೇದಗಳಾಧಾರ ಹರಿನಾಮ ಸಾಧುಸಂತ ಪ್ರೇಮ ಹರಿನಾಮ ಭೇದವಾದÀರಹಿತ್ಹರಿನಾಮ ಸಾಧಿಸಲಸದಲ ಹರಿನಾಮ ಆದಿ ಅನಾದಿವಸ್ತು ಹರಿನಾಮ ಭೋಧ ಸ್ವಾದಸಾರ ಹರಿನಾಮ 5 ಕಾಲ ಹರಿನಾಮ ಕೀಳರ ಎದೆಶೂಲ್ಹರಿನಾಮ ಶೀಲರ ಜಪಮಾಲ್ಹರಿನಾಮ ಲೋಲಗಾನಪ್ರಿಯ ಹರಿನಾಮ ಕೀಲಿ ವೇದಾಂತದ ಹರಿನಾಮ ಫಾಲನೇತ್ರಗೆ ಶಾಂತಿ ಹರಿನಾಮ 6 ಪ್ರಳಯಕೆ ಅಳುಕದ ಹರಿನಾಮ ಪ್ರಳಯ ಪ್ರಳಯಗೆಲುವ್ಹರಿನಾಮ ಮಲಿನದಿ ಸಿಲುಕದ ಹರಿನಾಮ ಚಲಿಸದ ನಿರ್ಮಲ ಹರಿನಾಮ ಬೆಳಗಿನ ಬೆಳಗೀ ಹರಿನಾಮ ಕುಲಮುನಿ ಪಾವನ ಹರಿನಾಮ 7 ವಿಷಮಸಂಸಾರಖಡ್ಗ ಹರಿನಾಮ ವ್ಯಸನಕಾಷ್ಠಕಗ್ನಿ ಹರಿನಾಮ ವಿಷಕೆ ಮಹದಮೃತ ಹರಿನಾಮ ಮಸಣಿಮಾರಿಧ್ವಂಸ ಹರಿನಾಮ ಅಸಮಸುಖದ ಋಣಿ ಹರಿನಾಮ ವಸುದೇಜೀವಜೀವಳ್ಹರಿನಾಮ8 ಧರ್ಮಶಾಸ್ತ್ರದ ಗುಟ್ಟು ಹರಿನಾಮ ಮರ್ಮ ತಿಳಿಸುವ ರಟ್ಟು ಹರಿನಾಮ ಕರ್ಮ ಕಡಿಯುವ ಶಸ್ತ್ರ ಹರಿನಾಮ ನಿರ್ಮಲಾನಂದ ಪದವೀ ಹರಿನಾಮ ನಿರ್ಮಾಣ ನಿಜಜ್ಞಾನ ಹರಿನಾಮ ಬ್ರಹ್ಮಕಿಟ್ಟಿಗುರಿ ಹರಿನಾಮ 9 ಭವಗುಣಮರ್ದನ ಹರಿನಾಮ ಭವನಿಧಿ ಸೇತುವೆ ಹರಿನಾಮ ಭವನ ಭೀತಿಹರ ಹರಿನಾಮ ರವಿಕುಲ ಪಾವನ ಹರಿನಾಮ ಬುವಿತ್ರಯ ಪವಿತ್ರ ಹರಿನಾಮ ಸಾಯುಜ್ಯಪದಸ್ಥಾನೀ ಹರಿನಾಮ 10 ಸತ್ಯಕ್ಕೆ ಬಹು ನಿರ್ಕು ಹರಿನಾಮ ಮಿಥ್ಯಕ್ಕೆ ಅನರ್ಥ ಹರಿನಾಮ ನಿತ್ಯಕ್ಕೆ ಮಹಸುರ್ತು ಹರಿನಾಮ ಚಿತ್ತಕ್ಕೆ ಚಿಜ್ಜ್ಯೋತಿ ಹರಿನಾಮ ಅರ್ತವರಿಗೆ ಗುರ್ತು ಹರಿನಾಮ ಭೃತ್ಯಜನರ ಮತ್ತು ಹರಿನಾಮ 11 ಮಾಯಕ್ಕೆ ಪ್ರತಿಮಾಯ ಹರಿನಾಮ ಮಾಯ ಕತ್ತಲುನಾಶ ಹರಿನಾಮ ಕಾಯಕ್ಕೆ ಶೋಭಾಯ ಹರಿನಾಮ ಭಾವಕ್ಕೆ ಪರಿಶುದ್ಧ ಹರಿನಾಮ ತಾಯಿತಂದೆ ಜೀವಕ್ಹರಿನಾಮ ಅಮೃತ ಹರಿನಾಮ 12 ಪುಣ್ಯ ಶರಧಿಗೆ ಚಂದ್ರ್ಹರಿನಾಮ ಮನ್ನಣೆ ಮೂಲೋಕದ್ಹರಿನಾಮ ಧನ್ಯರಿಗೆ ಧನ್ಯ ಹರಿನಾಮ ಉನ್ನತ ಸಾಮ್ರಾಜ್ಯ ಹರಿನಾಮ ಮುನ್ನ ಕೈವಲ್ಯಪದ ಹರಿನಾಮ ಸನ್ನಿಧಿ ವೈಕುಂಠ ಹರಿನಾಮ 13 ನಿಗಮಕೆ ಸೊಬಗಿನ ಹರಿನಾಮ ಸುಗುಣರೊಳ್ನೆಲೆಗೊಂಡು ಹರಿನಾಮ ಅಗೋಚರ ಆಗಮಕ್ಹರಿನಾಮ ಸೊಗಸುವ ಭಕ್ತರಲ್ಹರಿನಾಮ ಅಗಜೇಶ ಪೊಗಳುವ ಹರಿನಾಮ ಅಗಜೆಯು ಒಪ್ಪಿದ ಹರಿನಾಮ 14 ವಿಮಲ ಗುಣಗಣ ಹರಿನಾಮ ದಮೆ ದಯಾನ್ವಿತ ಹರಿನಾಮ ಶಮೆ ಶಾಂತಿಮಂದಿರ ಹರಿನಾಮ ಸುಮನಸ ಕಲ್ಪದ್ರುಮ ಹರಿನಾಮ ನಮಿತ ಸುರಾದ್ಯರಖಿಲ ಹರಿನಾಮ ಅಮಿತ ವಿಶ್ವರೂಪ ಹರಿನಾಮ 15 ಮೂರು ಕಾಲದರಿವದ್ಹರಿನಾಮ ಮೂರಾರಿಕ್ಕಡಿಗೈವುದ್ಹರಿನಾಮ ಪಾರಪಂಚ ಪರುಷ್ಹರಿನಾಮ ಸಾರಸೌಖ್ಯಾಂಬುಧಿ ಹರಿನಾಮ ದಾರಿ ವೈಕುಂಠಕ್ಕೆ ಹರಿನಾಮ ಸೇರಿ ದಾಸರನಗಲದ್ಹರಿನಾಮ 16 ಭಕ್ತವತ್ಸಲ ಜಯ ಹರಿನಾಮ ಮುಕ್ತಿದಾಯಕ ಜಯ ಹರಿನಾಮ ಹತ್ತಾವತಾರ ಜಯ ಹರಿನಾಮ ಸತ್ಯ ಶೀಲ ಜಯ ಹರಿನಾಮ ನಿತ್ಯ ನಿರುಪಮ ಜಯ ಹರಿನಾಮ ಕರ್ತು ಶ್ರೀರಾಮ ಜಯ ಹರಿನಾಮ 17
--------------
ರಾಮದಾಸರು
ಯಾರು ಬಂದರೊನಮ್ಮ ದ್ವಾರಕೆಯೊಳಗಿಂದುಭೋರೆಂಬೊ ಕಾಳಿ ಹಿಡಿಸುತ ರಮಣಿ ಪ. ಮುತ್ತಿನ ತುರಾಯಿಯವರು ಹತ್ತಿವಾಜಿಮ್ಯಾಲೆ ಚಿತ್ತ ಚಲಿಸದಲೆ ಬರತಾರೆಚಿತ್ತ ಚಲಿಸದಲೆ ಬರತಾರೆರುಕ್ಮಿಣಿ ಅಚ್ಯುತನ ನೋಡೊ ಭರದಿಂದ ರಮಣಿ1 ರಥಿಕಾ ರಥಿಕರು ತಮ್ಮ ರಥವ ಮುಂದಕ್ಕೆ ಹಾಕಿ ಅತಿ ವೇಗದಿಂದ ಬರುತಾರೆ ರಮಣಿಅತಿ ವೇಗದಿಂದ ಬರುತಾರೆ ದೇವಕಿಯಸುತ ನಂಘ್ರ್ರಿನೋಡೊ ಭರದಿಂದ ರಮಣಿ2 ನಲ್ಲೆಯರು ಮುತ್ತಿನ ಪಲ್ಲಕ್ಕಿ ಮಂದಕೆ ಹಾಕಿನಿಲ್ಲದಲೆ ಬೇಗ ಬರತಾರೆನಿಲ್ಲದಲೆ ಬೇಗ ಬರತಾರೆ ಲಕ್ಷ್ಮ್ಮಿವಲ್ಲಭನ ನೋಡೊ ಭರದಿಂದ 3 ತೇರಿನ ಬೀದಿಲೆ ಭೋರೆಂಬೊ ರಭಸಿಗೆಊರಜನವೆಲ್ಲ ಬೆರಗಾಗಿಊರಜನವೆಲ್ಲ ಬೆರಗಾಗಿಉಪ್ಪರಗಿ ಏರಿ ನೋಡುವವರು ಕಡೆಯಿಲ್ಲ4 ಬೀಡುಬಿಟ್ಟಿದ್ದ ಬೈಲು ಗಾಡಿ ಏರಿದವರು ಓಡಿಸಿ ಬೇಗ ಬರತಾರೆಓಡಿಸಿ ಬೇಗ ಬರತಾರೆಹರಿಪಾದ ನೋಡಬೇಕೆಂಬ ಭರದಿಂದ5 ಮದ್ದು ಬಾಣಬಿರಸು ರಥಿಣಿರಭಸಿಗೆ ಎದ್ದು ಜನೆರೆಲ್ಲ ಬೆರಗಾಗಿಎದ್ದು ಜನೆರೆಲ್ಲ ಬೆರಗಾಗಿ ಮುಯ್ಯದ ಸುದ್ದಿ ಕೇಳುವರು ಹರುಷದಿ 6 ಮಿತ್ರಿ ತಿಲೋತ್ತಮಾ ಮತ್ತೆಮೇನಕೆಯರುಥೈ ಥೈ ಎಂದು ಕುಣಿಯುತಥೈ ಥೈ ಎಂದು ಕುಣಿಯುತ ಬರುವಾಗಹತ್ತು ದಿಕ್ಕುಗಳು ಬೆಳಗೋವೆ7 ರಂಭೆ ಊರ್ವಸಿಯರು ಸಂಭ್ರಮದಿ ಕುಣಿಯಲುತುಂಬಿತು ನಾದ ಧರೆಯೊಳುತುಂಬಿತು ನಾದ ಧರೆಯೊಳುರುಕ್ಮಿಣಿ ಬಂದವರಾರೆಂದು ಬೆರಗಾಗಿ ರಮಣಿ8 ವಜ್ರ ಹಚ್ಚಿದ ಮನೆಗಳುಜತ್ತು ದೀವಿಗೆಯ ಸೊಬಗಿನ ಜತ್ತು ದೀವಿಗೆಯ ಸೊಬಗಿನ ಮನೆಯೊಳುಮಿತ್ರೆಯರು ನೋಡಿ ಬೆರಗಾಗಿ 9 ಕುಂದಣ ರಚಿಸಿದ ಅಂದಣವನೇರಿಕೊಂಡುಸಂದಣಿಸಿ ಬೇಗ ಬರುತಾರೆಸಂದಣಿಸಿ ಬೇಗ ಬರುತಾರೆ ನಮ್ಮ ಮುಕುಂದನ ಮನೆ ಎದುರಿಗೆ 10 ಧೀರ ಧೀರರು ತಮ್ಮ ತೇರು ವಾಜಿಯ ಇಳಿದುವೀರ ರಾಮೇಶನ ಮನೆ ಮುಂದೆವೀರ ರಾಮೇಶನ ಮನೆ ಮುಂದೆ ಹೇಳಲಿನಾರಿ ಒಬ್ಬಳನ ಕಳುಹೆಂದ ರಮಣಿ 11
--------------
ಗಲಗಲಿಅವ್ವನವರು