ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಾನ್ದಳದ ಬುಡವೆನಗೆ ಅತಿದೂರ ಬೆಳಕೇ ಮನ್ದಿರವು ಶುದ್ಧವಿದೆ ಬಾ ಇದರತಳಕೆ ಪ ಸುಂದರದ ಕಾಂತಿಯನು ಚೆಲ್ಲು ಈ ಮನೆಗೆ ಇಂದು ಬಾ ನಾಳೆಯೆನಬೇಡ ನನ್ನೆಡೆಗೆ ಅ.ಪ ಜನುಮದಂಚಿನ ಬೆಳಕು ನಿನ್ನದೇ ಗೊತ್ತು ನಲಿದು ಬಂದಿಹೆನೊಳಗೆ ನಾ ನಿನ್ನ ಸೊತ್ತು ನಿಲುಕದೆಡೆ ನಿಲಬೇಡ ಬಾ ನನ್ನ ಮುಪ್ಪೆ ಬಲಯುತನ ಮಾಡೆನ್ನ ಸುಜ್ಞಾನಚಿತ್ತೆ 1 ನೀ ಮಾತ್ರವಿತ್ತಲಿರೆ ನನ್ನೈದು ಗೆಳೆಯರು ನೇಮಯುತರಾಗುವರು ಸೊಗಬಾಳ್ವರು ನಾ ಮಾಳ್ಪುದೆಲ್ಲವೂ ನಿನ್ನದೇ ಆಗುವುದು ರಾಮಕೃಷ್ಣರ ನೆನಪು ನನಗೆ ದೊರಕುವುದು 2 ನೀನಿರದ ನನ್ನ ಮನೆ ಕಡುಕತ್ತಲೆಯ ಕೋಣೆ ನೀನಿರದೆ ನಾನಿರಲು ಫಲವೇನು ಕಾಣೆ ಕಾನನದ ಹೂವಿನಂತಿದ್ದೇನು ಫಲವಿಲ್ಲ ಜ್ಞಾನ ಹೊಂಬೆಳಕೆ ಮಾಂಗಿರಿರಂಗ ನೋಡೆ ಭಯವಿಲ್ಲ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಲೌಕಿಕ ಏತಕ್ಕೆ ನಮಗೆ ಪ ಲೋಕೇಶ ಕೃಷ್ಣನ್ನ ಮರಿಸಿ ಕೆಡಿಸುವಂಥ ಅ.ಪ. ಸುಳ್ಳು ಹೇಳಲಿಬೇಕು ಕಳ್ಳನಾಗಲಿಬೇಕು ಮೆಲ್ಲನೆ ಸವಿಮಾತು ಆಡಿನಟಿಸಬೇಕು ಪುಲ್ಲನಾಭನ ಬಿಟ್ಟು ಹುಲ್ಲುಮಾನವನನ್ನು ಕಾಲ ಕಳಿಸುವಂಥ 1 ಗಡ್ಡ ಬೋಳಿಸಬೇಕು ದುಡ್ಡುಗಳಿಸಬೇಕು ಬಡ್ಡಿಗೆ ಕೊಡಬೇಕು ದೊಡ್ಡ ಮನೆಯ ಕಟ್ಟಿ ಅಡ್ಡಿಯಿಲ್ಲದೆ ಮೆರೆದು ದೊಡ್ಡವನಾಗಬೇಕು ಹೆಡ್ಡಮಂದಿಯಲಿರಿಸಿ ಗೊಡ್ಡು ದೇಹವ ಮಾಳ್ವ 2 ಸತಿಸುತ ಧನಗಳನೆ ಗತಿ ದೈವನೆನಬೇಕು ಹಿತದಿಂದ ದುಡಿಯುತ ಸತಿಯರಿಗಿಡಬೇಕು ಗತಿದಾಯಕ ನಮ್ಮ “ಶ್ರೀ ಕೃಷ್ಣವಿಠಲ”ನ್ನ ಶಾಸ್ತ್ರನೇತ್ರದಿ ನೋಡೆ ಪುರಸೊತ್ತು ಕೊಡದಂಥ 3
--------------
ಕೃಷ್ಣವಿಠಲದಾಸರು
ಹಿಂಗಾಯಿತಲ್ಲಾ ಏನಿದು ಹರಿಹರಿಪ ಮಂಗನ ತೆರ ಈ ಅಂಗವ ವಿಷಯತ ರಂಗೆ ವಡ್ಡುತ ರಂಗನ ಮರೆತಿಹೆ ಅ.ಪ. ಬರಿದೆಯೆ ಹೋಗುತ್ತಿರುವುದು ಹೊತ್ತು ಹರಿಧ್ಯಾನಕೆ ಸಾಲದು ಪುರಸೊತ್ತು ತಿರುಗಲು ಮನೆಮನೆ ಸಾಲದು ಹೊತ್ತು ಸರಸಿಜನಾಭನೆ ಇದಕ್ಕೇನು ಮದ್ದು 1 ಶ್ರೀ ಕಮಲೇಶನ ಪೂಜೆಯ ಮಾಡನೆ ಆಕಳಿಸುತ ಮೈ ಕೈ ಮುರಿಯುವೆನು ಸ್ವೀಕರಿಸಲು ಸವಿ ಪಾನೀಯಂಗಳ ಮುಖಸಹತೊಳೆಯದೆನೂಕುತ ಮುಖ ಪ್ರಕ್ಷಾಳನೆ ಬಿಡುವೆ2 ಸ್ನಾನವ ಮಾಡೆನು ಸಂಧ್ಯಾ ತಿಳಿಯೆನು ಧ್ಯಾನವು ಯೆಂತೆನೆ ಕೂಳಿನ ಚಿಂತೆಯು ಆನನ ಮುಸುಕುತ ಬರಿಪಿಚಿಯೆಂದು ನಿ ಧಾನದಿ ಜಪಸರ ನೂಕುವೆನಲ್ಲಾ 3 ಮಂತ್ರವು ಬಾರದು ಸ್ತ್ರೋತವು ಬಾರದು ತಂತ್ರದಿ ನೂಕುವೆ ದೇವರ ಪೂಜೆಯ ವಿಧಿಗಳ ಮೌನದಿ ಕರ್ಮಗಳೆಲ್ಲವ ಮಂತ್ರಿಯ ಮಡಿದಿಯು ಪೇಳಿದ ತೆರದೂಳು ಯಂತ್ರ ವಿಧಾನದಿ ನುಡಿಯುವೆ ದಿನವಹಿ4 ಹೀನಕ ವೃತ್ತಿಗಳಿಂದಲಿ ಜೀವನ ವರ್ಣವಿವೇಕವ ನಡಿಸಲಸಾಧ್ಯವು ಜನ್ಮದಿ ವಿಪ್ರನು ನಾನಿಹೆ ಬರಿಸರಿ ತಿನ್ನುತ ಕುಡಿಯುತ ತಳ್ಳುವೆ ಆಯುಷ್ಯ5 ಊಟದ ಚಪಲವು ತಿಂಡಿಯ ಚಪಲವು ನೋಟದ ಚಪಲವು ಚಪಲ ಕಂದರ್ಪನ ಕಾಟದಿ ಸಿಲುಕಿಹೆ ಕೈಟಭಮರ್ದನ ದಾಟುವೆದೆಂತೋ ಭವವನು ಕಾಣೇ 6 ಏರಿದೆ ಬಹುನಿತ್ರಾಣವು ಗಾತ್ರದಿ ಮೀರಿದವಯ ಶಾಸ್ತ್ರಾಭ್ಯಾಸಕೆ ಕಾರುವರೈ ವಿಷ ಬಾಂಧವರೆಲ್ಲರು ಆ ರವಿಸುತನಾಳ್ಗಳಗು ನಾನಿಹೆ 7 ಮಡದೀ ಮಕ್ಕಳ ಪಾಶದಿ ಬಿದ್ದಿಹೆ ದುಡಿಯದ ಕಾರಣ ದುಗುಡವ ತೋರ್ಪರು ನಡೆಯದು ತುಸನನ್ನ ಮಾತೇನಿಲ್ಲ ಮಿಡುಕುತ ಮಿಡುಕುವೆ ಮುಪ್ಪಿನ ಹಿಡಿತದಿ 8 ತೋಡಿದರೂ ಎದೆ ಕಾಣೆನು ಭಕ್ತಿಯ ಕಾಡನು ಸೇರಲೊ ಬಾವಿಗೆ ಬೀಳಲೋ ಜೋಡಿಯು ಆಗಲೊ ಜೋಳಿಗೆ ಪಿಡಿಯಲೊ ಓಡದು ಬುದ್ಧಿಯು ತೋರಿಸು ಹಾದಿ 9 ಕರುಣಾಮಯ ನೀನೆಂಬುವ ಬಿರುದನು ಹಿರಿಯರ ಮುಖದಿಂ ಕೇಳಿಹೆ ಸ್ವಾಮಿಯೆ ಭರವಸೆ ಎನಗಿಹದೊಂದೇ ನಿಶ್ಚಯ ಶರಣನ ಬಿಡದಿರು ಆಪದ್ಬಾಂಧವ 10 ಪಾಮರ ನಿಹೆಬಹು ಕಲುಷಿತ ಚಿತ್ತನು ಭೀಮಾರ್ಚಿತ ಪದಯಗ ನಂಬಿಹೆ ಪ್ರೇಮವ ಸುರಿಸುತ ಕಾಯೈ ಬೇಗನೆ ಸಾಮನೆ ಶರಣೈ “ಶ್ರೀ ಕೃಷ್ಣವಿಠಲಾ” 11
--------------
ಕೃಷ್ಣವಿಠಲದಾಸರು