ಒಟ್ಟು 23 ಕಡೆಗಳಲ್ಲಿ , 13 ದಾಸರು , 23 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ನೋಡಿದೆ ನಂದತೀರ್ಥ ಮು - ನೀಂದ್ರವಂದಿತ ಚರಣನಾ ಪ ವಂದಿಸುವ ಭಕುತರಿಗೆ ನಿತ್ಯಾ - ನಂದಫಲದ ಮುಕುಂದನಾಅ.ಪ ತಮನವೈರಿಯ ಮಂದರಧರ ಕಮಠರೂಪವ ಪೊತ್ತನಾ ಕಮಲಸಂಭವಭವನಕಶಿಪು ದಮನ, ವಾಮನಮೂರ್ತಿಯಾ 1 ಭೂಮಿಪರ ಸಂಹಾರಿ, ದಶರಥ ರಾಮನಾಮದಿ ಮೆರೆದನಾ ಸೋಮಪಾಧಿಪಸುತಗೆ ಒಲಿದು ಸಂ - ಗ್ರಾಮದಲಿ ರಕ್ಷಿಸಿದನಾ 2 ಬುದ್ಧರೂಪದಿ ತ್ರಿಪುರಸತಿಯರ ಬುಧ್ಧಿ ಭೇದವ ಮಾಳ್ದನಾ ಬುದ್ಧರಲಿ ಕಲಿಮುಖ್ಯಯವನರ ಗೆದ್ದ ಗಾನವಿಲೋಲನಾ 3 ದೇವಕೀವಸುದೇವತನಯನ ದೇವಗಣ ಸಂಸೇವ್ಯನಾ ಈ ವಸುಂಧರೆಯೊಳಗೆ ಮಧ್ವಸ - ರೋವರದಲಾವಾಸನಾ 4 ಪೋತವೇಷನ ವೀತಶೋಕನ ಪೂತನಾದಿವಿಘಾತನಾ ಮಾತರಿಶ್ವಪ್ರಿಯಾ ಗುರುಜಗ ನ್ನಾಥವಿಠಲರಾಯನಾ 5
--------------
ಗುರುಜಗನ್ನಾಥದಾಸರು
ಎಂದೆಂದಿಗೂ ನಾ ಬಿಡೆ ನಿನ್ನ ಚರಣಾ ಬಂದೆನ್ನ ಕಾಯೊ ಶ್ರೀ ವೇಂಕಟರಮಣಾ ಪ ಪಟ್ಟಿ ಪೀತಾಂಬರ ತೊಟ್ಟ ಮುತ್ತಿನ ಹಾರಾ ವೈಜಯಂತಿ ಸುಂದರ ವದನ ಶುಭಾಂಗ ಮನೋಹರಾ ಮಕರ ಕುಂಡಲಧರ ಮೋಹನ ರೂಪಾ1 ನಿತ್ಯ ಕಲ್ಯಾಣನೆ ನಿಗಮ ಗೋಚರನೆ ಅಕಳಂಕ ಚರಿತನೆ ಸಕಲರಪಾಲಿಪ ಅನಂತ ರೂಪಾ ಶ್ರೀ ವೆಂಕಟೇಶಾ2 ಪರಮ ಕಲ್ಯಾಣ ಗುಣಾರ್ಣವನೇ ದುರಿತ ವಿದೂರನೆ ಪರಮದಯಾ ನಿಧೆ ವರಗಿರಿವಾಸಾ 3 ಘಾಸಿ ಗೊಂಡಿಹೆ ಭರದಿ ಕ್ಲೇಶ ಪಾಶಂಗಳ ಪರಿಹರಿಸಯ್ಯಾ ವಾಸುದೇವನೆ ನಿಮ್ಮ ನಾಮ ಸ್ಮರಿಸುವಂತೆ ನಿತ್ಯ ಪಾಲಿಸು ಪ್ರಭುವೆ4 ಸುರಮುನಿ ವಂದ್ಯನೇ ಸುರನರ ಸೇವ್ಯನೇ ಶರಣರ ಪಾಲಿಪ ಸರ್ವೋತ್ತಮನೇ ತಿರುಪತಿವಾಸನೆ ತಿರುಮಲೆ ಶ್ರೀಶನೇ ಶೇಶಗಿರೀಶನೆ ಶ್ರೀ ವೇಂಕಟವಿಠಲನೇ 5
--------------
ರಾಧಾಬಾಯಿ
ಏಕೆ ನಿರ್ಧಯವೊ ಓ ರಾಮ ಶ್ರೀ ರಘುರಾಮ ಪ ಸ್ಮರಿಸಿ ಸ್ಮರಿಸಿ ನಾನು ಕರಗಿ ಬೆಂಡಾದೆನೊ ಕರುಣವಿಲ್ಲವೆ ನಿನಗೆ 1 ಪಾವನ ಚರಿತನೆ ಪಾವನ ಮಹಿಮನೆ ಪಾವನ ರೂಪನೆ ಬಾ 2 ಮಾನವ ಸೇವ್ಯನೆ ಧೇನುಪುರೀಶನೆ ಬಾ ಶ್ರೀ ರಘುರಾಮ ಧೇನುಪುರೀಶನೆ 3
--------------
ಬೇಟೆರಾಯ ದೀಕ್ಷಿತರು
ಕರ್ಕಿ ಚೆನ್ನಕೇಶವ ಸ್ತುತಿ ಅನ್ಯರನು ಬೇಡೆನು ಚನ್ನಕೇಶವನೇ ಸೇವ್ಯ ಸರ್ವಾತ್ಮನೇ ಪ ತರಳ ಧೃವನನು ಕಾಯ್ದು ಧರಣಿಯನ್ನವಗಿತ್ತ ಸುರಸೇವ್ಯನಾಕೇಶವಂದ್ಯ ಹರಿ ಜೊರತು 1 ದುರುಳ ಕುರುಪತಿಯನುರೆಜೆ ಭಾಮೆ ದ್ರೌಪದಿಮಾನ ತರಿಯತಿಣಿಸಲ್ಕವಳ ಕಾಯ್ದ ಹೊರತು 2 ದುಷ್ಟ ಕಂಸನ ಬಾಧೆಯಿಂ ಲೋಕ ತತ್ತರಿಸೆ ಭ್ರಷ್ಟನನು ಕೊಂದ ಜಗ ಪೊರೆದ ಹರಿ ಹೊರತು 3
--------------
ಕರ್ಕಿ ಕೇಶವದಾಸ
ಗಾಡಿಪಂಥ ಮಾಡಬೇಡೆಲೈ ಪ. ಮಾರುತಿಸೇವ್ಯನೆ ಧೀರ ದಾತಾರನೆ ಕೋರಿ ಭಜಿಪೆ ಬೇಗ ಬಾರೈ ಸುಂದರ 1 ನಾರಿಯರ್ನಿನ್ನನು ಸಾರಿಕರೆವರೈ ಧಾರಣಿಜಾತೇಸಹ ಸಾರಿ ಬಾಬಾ ಬೇಗ 2 ಭವಭಯದೂರನೆ ಭಕ್ತಮಂದಾರನೆ ಭಾವಜ ಜನಕನೆ ದೇವಾದಿದೇವನೆ3 ಶೇಷಗಿರೀಶನೆ ದಾಸಜನಾಶ್ರಯನೆ ವಾಸವವಂದಿತನೆ ಶ್ರೀ ವಾಸುದೇವನೆ 4
--------------
ನಂಜನಗೂಡು ತಿರುಮಲಾಂಬಾ
ತುಂಗಾತೀರದಿ ನೆಲಸಿಹಗೆ | ಮಂಗಳ ಗುರು ರಾಘವೇಂದ್ರನಿಗೆ | ಗಂಗಾಜನಕನ ಭಕುತ ಶ್ರೇಷ್ಠ ಯತಿ | ಪುಂಗವನೆನಿಸುತೆ ಮೆರೆವವಗೆ ||ಮಂಗಳಂ ಜಯ ಮಂಗಳಂ|| ಪ ದಾವಣಗೆರೆಯೊಳು ನಿಂದವಗೆ| ಕೋವಿದ ಭೂಸುರ ಸೇವ್ಯನಿಗೆ| ಧಾವಿಸಿ ಬರುತಿಹ ದೀನಜನಾಳಿಗೆ| ದೇವ ತರುವಿನಂತೀವನಿಗೆ ||ಮಂಗಳಂ ಜಯ ಮಂಗಳಂ|| 1 ಶುದ್ಧ ಟೀಕೆಗಳ ರಚಿಸಿದಗೆ| ಪರಿ | ಮೂರ್ತಿ ರಾಘವೇಂದ್ರನಿಗೆ ||ಮಂಗಳಂ ಜಯ ಮಂಗಳಂ|| 2 ಭಾಸುರ ರಘುವೀರಾರ್ಚಿಪಗೆ| ಶ್ರೀಶಕೇಶವ ಪಾದಾರಾಧಕಗೆ ಸುರ| ರೀಶನೆನಿಪ ರಂಗನಾಥನಿಗೆ | ಮಂಗಳಂ ಜಯ ಮಂಗಳಂ||3
--------------
ಶ್ರೀಶ ಕೇಶವದಾಸರು
ದಾಸರ ಮೊರೆ ಲಾಲಿಸೋ ವೆಂಕಟಾಚಲ ವಾಸ ಬಿನ್ನಪ ಲಾಲಿಸೊ ಪ ಲೇಸು ಭಕುತಿಯು ಮಾಡದಲೆ ಬಲು ಘಾಸಿಯಾಗುತ ಮನದಿ ನೊಂದು ದಾಸನಾಗದೆ ಕ್ಲೇಶಪಟ್ಟೆನೊ ಈಸುದಿನಗಳ ಕಳೆದೆನೊ ವೃಥಾ1 ತಳಿರು ಪೋಲುವ ನಿನ್ನಯ ಪಾದ- ಕ್ಕೆರಗದೆನ್ನಯ ಸಿರವು ದಣಿಯನೋಡದೆ ನಿನ್ನನು ಮಹಾಪಾಪ ಗಳನೆ ಮಾಡುತ ನೊಂದೆನು 2 ಅನಿಮಿಷೇಶನೆ ನಿನ್ನ ಮಹಿಮೆಯ ಕ್ಷಣಬಿಡದೆ ಧ್ಯಾನವನೆ ಮಾಡುವ ಅನಲಸಖತನಯನಿಗೆ ನಮಿಸುವೆ ಕ್ಷಣ ಬಿಡದೆ ಎನ್ನ ಪೊರೆವ ಕರುಣಿ3 ಕಟಿಯ ಕಾಂಜಿಯ ದಾಮವು ನವರತ್ನದ ಸ್ಫ್ಪಟಿಕ ಮುತ್ತಿನ ಹಾರವು ಲಕುಮಿ ಧರಿಸಿದ ವಕ್ಷ ಕೌಸ್ತುಭಹಾರ ಸ್ಫುಟದಿ ಶೋಭಿಪ ಉರವು 4 ವಟುವಿನಂದದಿ ಪ್ರಕಟನಾಗುತ ಕುಟಿಲ ದಿತಿಜರಿಗಖಿಳ ವಿಧ ಸಂ- ಕಟಗಳನೆ ಸಂಘಟನೆ ಮಾಡುವ ನಟನ ತೆರ ವಟಪತ್ರಶಾಯಿ 5 ನೊಸಲ ಕಸ್ತೂರಿ ತಿಲಕ ರಂಜಿಸುವ ಚಂ- ಪಕವ ಪೋಲುವ ನಾಸಿಕ ಎಸೆದು ಶೋಭಿಪ ಮೌಕ್ತಿಕ ಪೋಲುವ ದಂತ ನಸುನಗುತಿಹ ಹಸನ್ಮುಖ6 ಶಶಿಯ ಧರಿಸಿದ ಅಸಮ ಭಕುತನು ನಿಶಿಹಗಲು ತನ್ನ ಸತಿಗೆ ಬೆಸಸಿದ ಅತಿಶಯದ ಮಹಿಮೆಯನೆ ಕೇಳುವ ಮತಿಯ ಕೊಡು ಮನ್ಮಥನ ಪಿತನೆ 7 ಚಿತ್ತದೊಳಗೆ ನಿನ್ನಯ ಪಾದಾಂಬುಜ ಭಕ್ತಿಯಿಂದಲಿ ಕಾಂಬುವ ಭಕ್ತಜನರ ವೃಂದವ ಕರುಣದಿ ಕಾಯ್ವ ವಿಷ್ಣು ಮೂರುತಿ ಕೇಶವ 8 ಎತ್ತನೋಡಿದರಿಲ್ಲ ನಿನ್ನ ಸಮ ಉತ್ತಮರ ಕಾಣುವುದೆ ಮಿಥ್ಯವೊ ಸತ್ಯವಿದು ಪುರುಷೋತ್ತಮನೆ ಎನ್ನ ಚಿತ್ತದಲಿ ನಲಿನಲಿದು ಶ್ರೀಶ 9 ಕಮಲಸಂಭವ ಪಿತನೆ ಪ್ರಾರ್ಥಿಸುವೆ ಶ್ರೀ- ರಮೆಧರೆಯರಿಂ ಸೇವ್ಯನೆ ಕ್ಷಣಬಿಡದಲೆ ನಿನ್ನನೆ ಚಿಂತನೆ ಮಾಳ್ಪ ಸುಜನರಿಗೊಲಿಯುವನೆ 10 ಶ್ರವಣ ಮನನಕೆ ಒಲಿವ ದೇವನೆ ದಿನದಿನದಿ ನಿನ್ನ ಮಹಿಮೆ ತೋರು ಶ್ರೀ- ಕಮಲನಾಭ ವಿಠ್ಠಲನೆ ಕರುಣದಿ ಶ್ರಮವ ಹರಿಸುಸುಧಾಮ ಸಖನೆ11
--------------
ನಿಡಗುರುಕಿ ಜೀವೂಬಾಯಿ
ಪಾಲಿಸೆನ್ನ ಪಾವ9ತೀಶನೆ | ಮಹಾನುಭಾವ | ನೀಲಕಂಠ ರುಂಡಮಾಲನೆ ಪ ಪಾಲಿಸೆನ್ನ ಭವದೊಳಿಂದು | ಬಾಲಚಂದ್ರಧರನೆ ಬಂದು | ಕಾಲಕಾಲ ದುರಿತಜಾಲ | ಮೂಲನಾಶಗೈದುವೊಲಿದು ಅ.ಪ. ಅಂತರಾತ್ಮನಖಿಲ ಪೋಷಣ | ಕಪಾಲಧರ ದು-| ರಂತ ಮಹಿಮ ತ್ರಿಗುಣ ಕಾರಣ || ಸಂತಸುಜನ ಚಿಂತಿತಾಥ9 | ಭವಾಬ್ಧಿ ಪೋತ | ಅಂತಕಾಂತನಖಿಲ ಭುವನ | ಕ್ರಾಂತಾನಂತ ಮಹಿಮ ದೇವ 1 ಭುಜಗಾಭರಣ ಅಜಸುರಾಚಿ9ತ | ತ್ರಿಶೂಲಧಾರ| ಸುಜನ ಬಂಧು ಮುಕ್ತಿದಾಯಕ || ತ್ರಿಜಗದೀಶ ತ್ರಿಪುರನಾಶ | ರಜತಶೈಲವಾಸ ಭಕ್ತ | ನಿಜಮನೋರಥಾಬ್ಧಿ ಚಂದ್ರ | ಭಜಿಸುವೆ ಚರಣಾರವಿಂದ 2 ಆದಿಮಧ್ಯಾಂತರಾತ್ಮನೆ | ಜಗನ್ನಿವಾಸ | ವೇದವೇದ್ಯ ಸುಜನಸೇವ್ಯನೆ || ಆದಿಮಾಯೆಯಾದಿಮೂಲ | ಆದಿಪುರುಷ ಶ್ರೀನಿವಾಸ | ಸಾದರದೊಳೆನ್ನ ಕಾಯ್ದು | ಮೋದದಿಂದ ಸಲಹೊ ದೇವ 3
--------------
ಸದಾನಂದರು
ಭಜಿಸು ಮಾನಸ ತ್ರಿಜಗದರಸ ಪ. ನಿಜಭಜಕ ಜನಾಶ್ರಯ ಸುಜನಬಾಂಧವ ಅಜಮುಖಾರ್ಚಿತ ಪಾದಪಂಕಜ ಅಜಾಮಿಳವರದನಂಘ್ರಿಯ ಅ.ಪ. ಪವನನಂದನ ಸೇವ್ಯನ ಪದ್ಮಾಕ್ಷನ ಪಾವನಗುಣಶೀಲನ ಪರಮಾತ್ಮನ ಪತಿತಪಾವನ ನಾಮನ ಅಪಾರ ಮಹಿಮನ ಸುರನರೋರುಗ ನಮಿತ ಚರಣನ ತರಣಿವಂಶಾಬ್ಧಿ ಚಂದ್ರಮನ ಪುರವೈರಿ ಪ್ರಿಯಸಖನ ಪರಂತಪ ರಾಘವೇಂದ್ರನ 1 ವಿಕ್ರಮನ ಭಯನಾಶನ ಕಾಕುತ್ಸ್ಧಕುಲದೀಪನ ಸುಗುಣಾ ರಾಮನ ಪಾಕಾರಿವಿನುತ ಸಾಕೇತನಿಲಯನ ರಾಕೇಂದುನಿಭಾಸ್ಯ ಶ್ರೀ ವರನ ಲೋಕಮೋಹನ ಮೇಘ ಶ್ಯಾಮನ ವೈಕುಂಠಪತಿ ಲಕ್ಷ್ಮೀಶ ಕೇಶವನ2 ಪಾಲಲೋಚನನ ಪಂಕಜಾಸನ ಪಾಕಾರಿಮುಖ ನಮಿತ ಚರಣನ ಶ್ರೀಲೋಲ ಶೇಷಾಚಲನಿಲಯ ಶ್ರೀವೇಂಕಟನ3
--------------
ನಂಜನಗೂಡು ತಿರುಮಲಾಂಬಾ
ರಾಮನಾಮ ಕೀರ್ತನೆ ಮಾಡೊ ಮುದಗೊಡೊ ಪ ಹೃತ್ತಾಮರಸದಿ ನೋಡೋ ಕೊಂಡಾಡೊ ಅ.ಪ ವರಋಷಿ ಎನ್ನಿಸಿದಾತನ ಮರುತಾತ್ಮಜಾದಿ ನುತನ ಸುಚರಿತನ 1 ಬ್ರಹ್ಮಾದಿದೇವ ವಂದ್ಯನಾ ರಾಜೇಂದ್ರನಾ 2 ಭರತ ಶತೃಘ್ನ ಲಕ್ಷ್ಮಣ ಸೇವ್ಯನ ಸರಸಿಜಗಾಪ್ತಜ ಭಾವ್ಯನ ನೃಪಾಗ್ರಗಣ್ಯನಾದನ ವಿನೋದನಾ 3
--------------
ಗುರುರಾಮವಿಠಲ
ಲಕುಮೀಶ ನಿನಗಾರತಿ ಭಕುತಿಯಿಂದೆತ್ತುವೆ ಸಕಲರ ಸುಖಕರ ಭಕ್ತರಿಗೊಲಿಯುವ ರುಕ್ಮಿಣಿಯರಸನೆ ಪ. ರಮಾಪತಿ ನಿನ್ನನು ನಮಿಸಿ ನುತಿಸುತ್ತಿರ್ಪೆನು ಕಮಲಾಂಘ್ರಿಯ ಭ್ರಮರವೆಂದಮಲನೆ ಕೈಪಿಡಿ ರಮಣನೆ ನುಡಿ ನುಡಿ1 ಇನಕುಲಮಂಡನ ವನರುಹಲೋಚನ ಜನಕಜಾ ಸುಪ್ರೇಮನೆ ಚಿನ್ಮಯರೂಪನೆ ಮನುಮುನಿ ಸೇವ್ಯನೆ 2 ಸುರನರ ಪೂಜಿತ ಸರಸಿಜ ಭವಪಿತ ಕರುಣಾಕರ ನರಕೇಸಂ ಮರೆಹೊಕ್ಕೆನು ಪೊರೆ ವರಶೇಷಗಿರಿದೊರೆ 3
--------------
ನಂಜನಗೂಡು ತಿರುಮಲಾಂಬಾ
ಶ್ರೀ ಬ್ರಹ್ಮದೇವರ ಸ್ತವನ ಬ್ರಹ್ಮಾ ಮಾಂ ಪಾಲಯಸುಬ್ರಹ್ಮಣ್ಯ ಪಿತನ ಪಿತನೇ ಪ ವಾಕು ಲಾಲಿಸೊ ವರಪ್ರದಾ ಶ್ರೀಕರ ಹರಿಯವ ಲೋಕನ ಮಾರ್ಗವನೀ ಕೊಡುತೆನಗೆ ವಿವೇಕವ ತೋರೋ 1 ಸುಳಿ ನಾಭೀ ಪದುಮ ಭೂ | ಕಲಿಮಲಘ್ನ ಸ್ವಯಂಭೂಅಳಿಕುಲ ದೇಣಿ ವಾಣಿ ಸಂಸೇವ್ಯನೆ |ಅಳಿದ ಅವಿದ್ಯಗಳ ಸಲಹೊ ಸುರಜೇಷ್ಟಾ 2 ಭವ ತವ ಶರ್ವಾವ್ಯಕುತಿಗೈದು ಮುಖ ನಾಲ್ಕರಿಂದಸುಖಿಪೆ ಚತುರ ಮುಖ ಪರಮೇಷ್ಠೀ 3 ದಶದಶಾನಂದಾ ಶೃತ ಧೃತೀ | ಯಶ ಪೊಗಳಲಳವೆ ಸಕಲ ಮತೀವಿಷಧರನುತ ಮಮ ಧೀ ಪ್ರಸರಣವಿಷಯ ವಿರಲಿ ತವ ಮನಸಿನೊಳಗೇ 4 ವಿಶ್ವ ಸೃಜನೇ | ಬುದ್ಧ್ಯಾಭಿಮಾನಿ ವಂದಿತನೆಮಧು ವೈರಿಯ ಪದ ಸೇವಕ ವಿಧಿಮಧುಕರ ತವ ಪದ ಪಲ್ಲವ ತೋರೋ 5 ಸಂಚಿತ ದುರಿತ ಗಮನ ಹರಿಮಂಚ ಯೋಗ್ಯನುತ |ಮುಂಚೆ ಮನವ ಹರಿಚಿಂತನೆಲಿರಸೋ 6 ಋಜುನಿಕರಕ್ಯಧಿಕನೇ | ನಿಜ ವೈಭವದಿ ಮೆರೆವನೇಅಜ ಗುರು ಗೋವಿಂದ ವಿಠಲನ ಪದಬಿಸಜ ಕಾಂಬ ಋಜು ಮಾರ್ಗದಲ್ಲಿಡು 7
--------------
ಗುರುಗೋವಿಂದವಿಠಲರು
ಶ್ರೀ ಶ್ರೀ ವರವಿಠಲದಾಸರು ಶ್ರೀವರ ದಾಸರ್ಯಾ | ತವಗುಣಭಾವದೊಳ್ವರ್ಣಿಸುವಾ ಪ ಭಾವ ಭಕುತಿ ನಿತ್ತು | ನೀವೊಲಿಯೋ ಗುರುದೇವ ತಾಂಶರೆಂದು | ಅವನಿಯೊಳ್ಖ್ಯಾತಾ ಅ.ಪ. ಶ್ರೀನಿವಾಸ ಹರಿಯಾ | ಸೇವಿಸಿಜ್ಞಾನಿಗಳೆನಿಸಿರುವಾ |ಶ್ರೀನಿಧಿ ವಿಠಲನ | ಗಾನವ ಮಾಡುವಜ್ಞಾನಿಶ್ರೇಷ್ಠರಿಂ | ದಂಕಿತ ಪಡೆದ 1 ಇಂದು ಭಾಗ ವಾಸಾ | ಎನಿಸಿಹಚಂದ ಹರಿಯ ರೂಪಾ |ನಂದ ತುತಿಸಿ ಹೃ | ನ್ಮಂದಿರದಲಿ ನೋಡಿಬಂಧ ಕಳೆದೆ ಭೂ | ವೃಂದಾರಕವರ 2 ಗರ್ವ ರಹಿತನಾಗಿ | ಹರಿಯನುಸೇರ್ವ ಮಾರ್ಗ ಪಿಡಿದೀ |ಸರ್ವೋತ್ತಮ ಗುರು ಗೋವಿಂದ ವಿಠಲನು ಶರ್ವ ಮುಖ್ಯರಾ | ದೇವಾ ಸೇವ್ಯನೆಂದೇ 3
--------------
ಗುರುಗೋವಿಂದವಿಠಲರು
ಸಂಕ್ಷೇಪ ರಾಮಾಯಣ ಶ್ರೀಜಾನಕೀಮನೋಹರ ಚರಿತೆಯನು ಮುನಿ ರಾಜವಾಲ್ಮೀಕರಿಗೆ ನಾರದಂಪೇಳ್ದನದು ರಾಜೀವನೇತ್ರ ಪೇಳಿಸಿದಂತೆ ಸಂಕ್ಷೇಪದಿಂ ಪೇಳ್ವೆನಾಲಿಸುವುದು ವರಮುನಿಯಯಾಗಮಂ ಕಾಯ್ದುತಾಟಕಿಯಸಂ ಮುರಿದು ಭೂಸುತೆಯ ಕರಪಿಡಿದಯೋಧ್ಯಾಪುರಿಗೆ ಬರುತ ಭಾರ್ಗವನ ಗರ್ವವಸೆಳೆದು ತಂದೆಯಂ ಹರುಷಪೊಂದಿಸಿದಂರಘುದ್ವಹಂ ರಾಮಚಂದ್ರನು ಬಾಲಕಾಂಡದಲಿ 1 ಮಾತೆಯನುಡಿಗೆ ಪಿತನಭಾಷೆಯಂ ಸಲಿಸಲ್ಕೆ ತಾತಮ್ಮಲಕ್ಷ್ಮಣ ಧರಾತ್ಮಜೆಯರ್ಸಹಿತ ಪ್ರ ಭರತಬಂದು ಜಾತಂಗೆ ಪಾದುಕವನಿತ್ತು ಮನ್ನಿಸಿಮುನಿ ರಘುವರನಯೋಧ್ಯಾಕಾಂಡದಿ 2 ದಂಡಕಾರಣ್ಯದಿ ವಿರಾಧನಂ ಸಂಹರಿಸಿ ಚಂಡಿ ಶೂರ್ಪಣಖಿ ಕಿವಿಮೂಗನಂ ಕೊಯಿಸಿಯು ಮಾಯಾಮೃಗದವ್ಯಾಜದಿಂ ರಾವಣಂ ಕೊಂಡೊಯ್ಯೆಸೀತೆಯಂಅರುಣಸುತನಿಂದಕೋ ದೀಕ್ಷಾಚಾರ್ಯ ಕೇಳ್ದಸತಿವಾರ್ತೆಯಂ ಕಂಡು ಶಬರಿಯನು ಪಂಪಾತಟಕೆಬಂದ ನಾರಣ್ಯಕಾಂಡದೊಳ್ರಾಮನು 3 ಮರುತಾತ್ಮಜನಕಂಡು ಸುಗ್ರೀವಸಖ್ಯವಾ ಚರಿಸಿ ವಾಲಿಯ ಮುರಿದು ಕಪಿರಾಜ್ಯದೋಳ್ ದಿವಾ ಸೀತೆಯಕುಶಳವಂತಹುದೆನೆ ತೆರಳಲು ಚತುರ್ದಿಕ್ಕಿಗಾಗವಾನರರುಮೂ ವರುಬಂದುಪೇಳ್ದರೆಲ್ಲಿಯು ಕಾಣೆವೆಂದು ವನ ಕಿಷ್ಕಿಂಧಕಾಂಡದಲಿ 4 ಶರಧಿಯದಾಟಿ ಲಂಕೆಯ ಪೊಕ್ಕುಲಂಕಿನಿಯ ಮುರಿದು ಪುರವೆಲ್ಲಮುಂ ತಿರುಗಿವನದೊಳಗೆರಘು ವನಭಂಗಮಂಗೈಯ್ಯುತ ಪರಮ ಸಂಭ್ರಮದೊಳಕ್ಷಾದ್ಯರಂಕೊಂದುವಿಧಿ ಶರಕೆ ಮೈಗೊಟ್ಟುಲಮಂಕಾಪುರವಸುಟ್ಟುಬಂ ಪತಿಗೆಸುಂದರಕಾಂಡದಲ್ಲಿ ಹನುಮಾ 5 ವನಧಿಯೊಳ್ಸೇತುವೆಯಗಟ್ಟಿ ಧುರದೊಳಗೆರಾ ವಣ ಕುಂಭಕರ್ಣಾದ್ಯರೆಲ್ಲರಂ ಸದೆದುತ ಪೊಗಳಲು ಜನಕನಂದನೆಯ ಪಾವಕನಿಂ ಪರಿಗ್ರಹಿಸಿ ಘನಪುಷ್ಪಕವನೇರಿಬರುತ ವಹಿಲದಲಿ ಭರ ಯುದ್ಧಕಾಂಡದಲಿ 6 ಪರಮಧರ್ಮದಲಿ ರಾಜ್ಯವಾಳುತಲಿ ಕಲಿರಾಮಭೂ ವರನು ಹನ್ನೊಂದುಸಾವಿರಲವಣನಂ ಪುತ್ರರಿಗೆ ರಾಜ್ಯವಿತ್ತು ಪುರಜನವ ಪಶುಪಕ್ಷಿ ಕೀಟವ್ರಜ ಸಹಿತ ತೆರಳಿದಂದಿವಿಗೆದೇವರ್ಕಳರಳಿನಮಳೆಯ ಸುರಿದು ಜಯಜಯವೆಂದು ಪೊಗಳಿದರುಹರಿ ಯನುತ್ತರಕಾಂಡದಲಿ ತಿಳಿವದು 7 ಇಪ್ಪತ್ತುನಾಲ್ಕುಸಾವಿರ ಶ್ಲೋಕ ಕಾಂಡಗ ಳೊಪ್ಪುವುದು ಸಪ್ತವೈನೂರುಸರ್ಗಗಳೆಂದು ವಾಲ್ಮೀಕಿ ಮುನಿವಿರಚಿಸಿದನು ತಪ್ಪದೇ ಪಠಿಸುವಗಮುದಿನಂ ಗಾಯತ್ರಿ ಇಪ್ಪತ್ತು ನಾಲ್ಕುಲಕ್ಷದ ಜಪದಫಲಬಹುದು ಚರಿತಸಜ್ಜನ ಕಲ್ಪವೃಕ್ಷವಿದುವೆ 8 ಇಂತಪ್ಪ ಮಹಿಮೆಯುಳ್ಳೀಕಥೆಯ ಸಂಕ್ಷೇಪ ದಿಂ ತರಳನಾಂ ಪೇಳ್ದೆತಪ್ಪಿದ್ದಡೆಯು ತಿದ್ದಿ ಸೇವಕಂಸೇವ್ಯನವನು ಎಂತಾದಡೆಯು ಹರಿಯನಾಮಾಮೃತದರುಚಿಮ ಹಾಂತರರಿವರು ದುರ್ಜನರು ನಿಂದಿಸಿದಡೇನು ಸಂಕ್ಷೇಪರಾಮಾಯಣಂ 9
--------------
ಗುರುರಾಮವಿಠಲ
ಸರೋಜಜಾತೆ ಜಗನ್ಮಾತೆ ಪಾಲಿಸು ಜನಕಸುತೆ ಜನನಮರಣರಹಿತೆ ಪ ಬನ್ನಬಡಿಸುವುದೇ ನಮ್ಮ ಸೀತಮ್ಮ ಅ.ಪ ಪತಿಹೃದಯನಿವಾಸಿನಿ ಸುವಾಸಿನಿ ಭ- ವತ್ಪಾದಾಂಬುಜ ಭಜಿಸುವ ಜನರು ಸತತವಿಹಪರದಿ ಸೌಖ್ಯ ಪಡುವರೆಂದು ಸಾ- ರುತಿಹವು ಶೃತಿ ಸ್ಮøತಿ ಪುರಾಣ 1 ಭವ್ಯ ಚರಿತರಾದ ಬ್ರಹ್ಮಾದಿಗಳಿಗಳವೆ ನಿನ್ನ ದಿವ್ಯಾಂಘ್ರಿ ದರ್ಶನವಾಗುವುದು ಸೇವ್ಯನಾದ ಪತಿಚಿತ್ತಾನುಸಾರದಿ ಜೀವನಿಕರವ ಕರುಣದಿ ನೋಡುವ 2 ಕೃತಿ ಶಾಂತಿ ರುಕ್ಮಿಣಿ ಲಕುಮಿ ನಿರುತವು ನೆನೆವರ ದುರಿತಗಳ ಕಳೆದು ಗುರುರಾಮವಿಠಲನ ಚರಣವ ತೋರಿಸೆ 3
--------------
ಗುರುರಾಮವಿಠಲ