ಒಟ್ಟು 4 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ನಾಟಿ ಅಗ್ರಹಾರದ ಶ್ರೀರಾಮ) ಕಂಡಿರೆ ನಾಟಿ ಕೋದಂಡ ರಾಮನ ಪದ್ಮ- ಜಾಂಡದಿ ನಾಯಕನಾ ಕಟಕ ಕಿರೀಟಧಾರಿ ಮಾ- ರ್ತಾಂಡ ಕೋಟಿಪ್ರಭನಾ ಪ. ಭೂತಳದೊಳಗೆ ವಿಖ್ಯಾತರಾಗಿಹ ರಘು- ನಾಥ ಒಡೆಯರ ಮೇಲೆ ಪ್ರೀತಿಯಿಂದಲಿ ಬಂದ ಪವಮಾನವಂದಿತ- ನೀತನು ನಿಜ ಜನರ ಬೀತಿಯ ಬಿಡಿಸುವೆನೆಂದು ಬಿಲ್ಲಂಬುಗ- ಳಾಂತು ಕರಾಬ್ಜದಲಿ ಪಾತಕಗಳ ಪರಿಹಾರಗೈದರಿಗಳ ಘಾತಿಸುವನು ಜವದಿ 1 ಕಡು ಪರಾಕ್ರಮಿ ವಾಯಿನು ಧಿಕ್ಕರಿಸಿ ಕೈ ಪಿಡಿದಂತೆ ರವಿಜನಸು ಬಡವರ ಭಕ್ತಿಯ ದೃಢಕೆ ಮೆಚ್ಚುತ ಜಗ- ದೊಡೆಯನು ಸಂತಸದಿ ಒಡೆಯ ನೀ ಸಲಹೆಂದು ವಂದಿಸಿ ತುಲಸಿಯ ಕೊಡುವನು ಕರುಣ ಕಟಾಕ್ಷದಿ ಪುರುಷಾರ್ಥ ತಡೆಯದೆ ತವಕದಲಿ 2 ಎರಡು ಭಾಗದಿ ಭಕ್ತ ಗರುಡ ಮಾರುತಿಯರ- ನಿರಿಸಿ ಕೊಂಡವನುದಿನದಿ ನಿರವಧಿ ಸೇವೆಯ ಕೈಕೊಂಡು ಜಾನಕಿ- ವರನಿಹನೀಪುರದಿ ಸಿರಿವರ ವೆಂಕಟಗಿರಿ ರಾಜನಿವನೆಂದು ನೆರೆ ನಂಬಿ ಸೇವಿಪರಾ ಪರಿಕಿಸಿ ತನ್ನಯ ಚರಣ ಸೇವೆಯನಿತ್ತು ಪೊರೆವನು ಕರುಣಾಕರ 3
--------------
ತುಪಾಕಿ ವೆಂಕಟರಮಣಾಚಾರ್ಯ
ಕರುಣಾನಿಧಿ ನೀ ಶ್ರೀರಾಮ ನಿನ್ನ ಚರಣ ಸೇವಿಪರಾನತ ಪ್ರೇಮ ಪ. ಕರುಣ ತೋರುತ್ತೆನ್ನ ಪೊರೆ ರಾಮ ನಿನ್ನ ಸ್ಮರಣೆ ನಿರುತ ನೀಡೆಲೊ ಶ್ರೀರಾಮ ಅ.ಪ. ಆಶ್ರಿತ ಜನರಿಗೆ ನೀನಲ್ಲದೆ ನಿ ನ್ನಾಶ್ರಯಗೊಡದಿರೆ ಗತಿ ಕಾಣೆ ಸ್ತೋತ್ರದಿ ಸ್ತುತಿಸುವೆ ನಿನ್ನಾಣೆ ಜಗತ್ರಯ ಸಲಹೊ ಕೋದಂಡಪಾಣಿ 1 ಭವಭಯಭಂಜನ ಶ್ರೀರಾಮ ಎನ್ನ ಭಯವ ಬಿಡಿಸೊ ಜಾನಕಿ ರಾಮ ಕವಿಗೇಯ ನೀನೆ ಜಗದಭಿರಾಮ ಎನಗೆ ಜವನ ಬಾಧೆಯ ಬಿಡಿಸೊ ರಘುರಾಮ 2 ತಂದೆ ಶ್ರೀ ಶ್ರೀನಿವಾಸ ನೀನೆ ಎನಗೆ ಬಂದ ಕಷ್ಟದಿ ಸಲಹುವ ನೀನೆ ಮುಂದೋರಿ ಸಲಹೋ ತಾಯಿ ಗುರು ನೀನೆ ಇನ್ನೂ ಸಂದೇಹವಿಲ್ಲ ಕೇಳೆಲೊ ರಾಮ 3
--------------
ಸರಸ್ವತಿ ಬಾಯಿ
ರಾಗಿ ತಂದಿರಾ - ಭಿಕ್ಷಕೆ -ರಾಗಿ ತಂದಿರಾ ಪ.ಯೋಗ್ಯರಾಗಿ ಭೋಗ್ಯರಾಗಿ |ಭಾಗ್ಯವಂತರಾಗಿ ನೀವು ಅಪಅನ್ನದಾನವ ಮಾಡುವರಾಗಿ |ಅನ್ನಛತ್ರವನಿಟ್ಟವ ರಾಗಿ ||ಅನ್ಯವಾರ್ತೆಗಳ ಬಿಟ್ಟವರಾಗಿ |ಅನುದಿನಭಜನೆಯ ಮಾಡುವರಾಗಿ..........1ಮಾತಾಪಿತರನು ಸೇವಿಪರಾಗಿ |ಪಾತಕಕಾರ್ಯವ ಬಿಟ್ಟವರಾಗಿ |ಖ್ಯಾತಿಯಲ್ಲಿ ಮಿಗಿಲಾದವರಾಗಿ |ನೀತಿಮಾರ್ಗದಲಿ ಖ್ಯಾತರಾಗಿ 2ಗುರು ಕಾರುಣ್ಯವ ಪಡೆದವರಾಗಿಗುರುವಿನ ಮರ್ಮವ ತಿಳಿದವರಾಗಿ ||ಗುರುವಿನ ಪಾದವ ಸ್ಮರಿಸುವರಾಗಿ |ಪರಮಪುಣ್ಯವನು ಮಾಡುವರಾಗಿ3ವೇದ ಪುರಾಣವ ತಿಳಿದವರಾಗಿ |ಮೇದಿನಿಯಾಳುವಂಥವರಾಗಿ ||ಸಾಧು ಧರ್ಮವಾಚರಿಸುವರಾಗಿ |ಓದಿ ಗ್ರಂಥಗಳ ಪಂಡಿತರಾಗಿ 4ಆರರ ಮಾರ್ಗವ ಅರಿತವರಾಗಿ |ಮೂರರ ಮಾರ್ಗವ ತಿಳಿದವರಾಗಿ ||ಭೂರಿತತ್ವವನು ಬೆರೆತವರಾಗಿ |ಕ್ರೂರರ ಸಂಗವ ಬಿಟ್ಟವರಾಗಿ 5ಕಾಮಕ್ರೋಧಗಳನಳಿದವರಾಗಿ |ನೇಮನಿಷ್ಠೆಗಳ ಮಾಡುವರಾಗಿ ||ಆ ಮಹಾಪದದಲಿ ಸುಖಿಸುವರಾಗಿ |ಪ್ರೇಮದಿ ಕುಣಿಕುಣಿದಾಡುವರಾಗಿ 6ಸಿರಿರಮಣನ ಸದಾ ಸ್ಮರಿಸುವರಾಗಿ |ಕುರುಹಿಗೆ ಬಾಗುವಂತವರಾಗಿ ||ಕರೆಕರೆಸಂಸಾರ ನೀಗುವರಾಗಿ |ಪುರಂದರವಿಠಲನ ಸೇವಿಪರಾಗಿ 7
--------------
ಪುರಂದರದಾಸರು