ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ಮಾತುರ ನೀಯದಿದ್ದರೆ ನಿನ್ನ | ಧಾಮದಲ್ಲಿಗೆ ಪೋಗಿ ಸೇರಿ ಸುಖಿಪದೆಂತೋ ಪ ಹುಟ್ಟಿದಾರಭ್ಯದಿ ಹೊಟ್ಟಿ ಬಟ್ಟಿಯಲಿಂದ | ಕಷ್ಟ ಬಟ್ಟೆನೆಂದು ಹೇಳಲಿಲ್ಲಾ | ಸೃಷ್ಟೇಶ ಕಾಡುವ ಅಷ್ಟ್ಟ ಮಹಾಮದಗಳ ನಷ್ಟಗೊಳಿಸಿ ನಿನ್ನ | ನಿಷ್ಟಿಲಿಡೆಂದೆಲ್ಲದೆ 1 ಸತಿ ಸುತರಿಗೆ ಯೇನೋ | ಗತಿ ಗೋತ್ರವಿಲ್ಲೆಂದು | ಸತತ ನಿನ್ನ ಕೇಳಿ ದಣಿಸಿಲಿಲ್ಲಾ | ಪತಿತ ಪಾವನ ಎನಗೆ ಗತಿಯಾಗುವುದಕೆ | ಸುಪಥವನೆ ತೋರುವ | ಮತಿಕೊಡೆಂದೆನಲ್ಲದೆ2 ಕರುಣಿ ಬೇಡಿಕೊಂಬೆ | ಉರು ಕಾಲದಲಿ ನಿನ್ನ | ಶರಣರ ಸಂಗತಿಲೆನ್ನ ಇಟ್ಟು | ಪರಮ ಶುದ್ಧನ ಮಾಡಿ ವಿಜಯವಿಠ್ಠಲ ನಿನ್ನ | ಚರಣಸೇವೆ ನಿರಂತರ ಕೊಡೆಂದೆನಲ್ಲದೆ3
--------------
ವಿಜಯದಾಸ
ತಲೆ ಬೆಳಗಾಯಿತು ತಲೆ ಬೆಳಗಾಯಿತು ಎನ್ನ ಬೆಳಗದೊಳು ಕೂಡಿ ಧ್ರುವ ಹಿಂದೆ ಗೋವಿಂದನು ಮುಂದೆ ಮುಕುಂದನು ಅಂದಿಗಿಂದಿಗೆ ಅನಿರುದ್ಧ ತಂದೆ ತಾಯಿಯ ವೃಂದಾವನ ಪತಿಯು ಮಂದರಧರ ಬಂಧು ಬಳಗ 1 ಕುಂದ ನೋಡದೆ ಸಲಹುವ ಸಂಕರುಷಣಾ ನಂದ ಮೂರುತಿ ತ್ರಿ ವಿಕ್ರಮನ ದುರಿತ ದೂರಮಾಡಿ ದಾಮೋದರ ಚಂದ ಮಾಡುವ ಜನಾರ್ದನನು 2 ಎಡಕ ಯಾದವ ನಾರಾಯಣ ಕೃಷ್ಣನು ಬಲಕ ಬಾಲಮುಕುಂದ ಎತ್ತ ನೋಡಿದರತ್ತ ಸುತ್ತ ಪುರುಷೋತ್ತಮ ಚಿತ್ತ ಮನದೊಳು ಅಚ್ಯುತನು 3 ಪ್ರಾಣಪತಿಕರಿಸಿಹ್ಯ ಪ್ರದ್ಯುಮ್ನ ಆಭಯನಿತ್ತಿಹ ಪದ್ಮನಾಭ ಮಾಧವ ಮಧುಸೂದನ ಯದು ಕುಲೋತ್ತಮ ಶ್ರೀಧರನು 4 ತುಂಬಿ ಹೃಷಿಕೇಶ ದೃಷ್ಟಿಮೂರುತಿ ನರಸಿಂಹ ದೃಷ್ಟಿಯೊಳಗೆ ಹರಿ ವಿಷ್ಣು ವಾಸುದೇವ ಸೃಷ್ಟೇಶ ಗುರು ಕೇಶವನು 5 ಲಕ್ಷ್ಮಿಯೊಳಗೆ ಗುರು ಲಕ್ಷುಮಿಕಾಂತನು ರಕ್ಷಿಸುವ ಅಭೋಕ್ಷಜನು ಉಪೇಕ್ಷವಿಲ್ಲದೆ ಹೊರೆವ ಉಪೇಂದ್ರನು ಮೂರ್ತಿ ವಾಮನನು 6 ತುಂಬಿದ ಬಳಗವು ಕಂಡ ಮೇದಿನಿಯೊಳು ಕಂದ ಮಹಿಪತಿ ಸ್ತುತಿಸಿದನು ಬಂದ ಜನ್ಮವು ಕಡೆ ಆಯಿತೆಂದು ಮನದೊಳು ತ್ರಾಹಿ ತ್ರಾಹಿ ಎಂದ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಭಕ್ತವತ್ಸಲನೀತ ಶಕ್ತ ಸದ್ಗುರುನಾಥ ಸಕಲ ಸಮ್ಮತ ಏಕೋದೇವನೀತ ಧ್ರುವ ಬಲಿಯಬಾಗಿಲ ಕಾಯ್ದು ಒಲಿದ ಫಲುಗುಣಗೀತ ತಲೆಗಾಯ್ದು ಪ್ರಹ್ಲಾದನ ಪ್ರಾಣಪಡದಾತ ಸಲಹಿ ಪಾಂಡವರ ರಕ್ಷಿಸಿದಾತ 1 ದಿಟ್ಟ ಧ್ರುವಗೊಲಿದು ನಿಜಪಟ್ಟಗಟ್ಟಿದಾತ ನಷ್ಟಾಜಮಿಳನ ನಿಷ್ಠೆಮಾಡಿದಾತ ಕೊಟ್ಟು ವಿಭೀಷಣಗೆ ಇಟ್ಟ ಲಂಕೆಯ ಲೀತ ಶಿಷ್ಟಜನಪಾಲಕ ಸೃಷ್ಟೇಶ 2 ಶಿಲೆಗೆ ಉದ್ಧರಗತಿಯ ಇಳಿಯೊಳಗೆ ಇತ್ತಾತ ಮೂಲೋಕದೊಡೆಯ ಶ್ರೀಹರಿಯು ಈತ ಪಾಲಿಸುವ ಮಹಿಪತಿಯ ಲೋಲಲಕ್ಷ್ಮೀಕಾಂತ ಕುಲಕೋಟಿ ಬಂಧು ತಾ ಬಳಗವೀತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು