ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಾನಲೋಲನಾದ ಶ್ರೀನಿವಾಸನಾ ಸರ್ವೇಶನಾ ಗಾನದಿಂ ಭಜನೆ ಮಾಡೋ ಜಾನಕೀ ರಮಣನಾ ಪ ಮಲಗಿ ಪಾಡೇ ಮುರಲೀಧರನು ವಲಿದು ಕುಳಿತು ಕೇಳ್ವನೋ ಕುಳಿತು ಪಾಡೇ ನಿಲುವ ನಿಂದರೆ ನಲಿವನೋ ತಾ ವಲಿವನೋ 1 ಬಾಲನಾ ಗೋಪಾಲನಾ ಸುಶೀಲನಾ ಕೃಪಾಲನಾ ನೀಲಮೇಘ ಲಕುಮೀಲೋಲನಾ ವಿಶಾಲನಾ 2 ನಿತ್ಯನಾ ನಿರ್ಲಿಪ್ತನಾ ಪರಮಾತ್ಮ ಸಕಲವ್ಯಾಪ್ತನಾ ಭಕ್ತರಲ್ಲಿ ನಿರುತ ಪ್ರೀತಿಯುಕ್ತನಾ ಸ್ವಶಕ್ತನಾ 3 ಆನಂದನಾ ದಯಾವೃಂದನಾ ಮುಕುಂದನಾ ಚಂದ್ರಕುಲಕೇ ಇಂದ್ರನಾ ಉಪೇಂದ್ರನಾ ಗೋವಿದನಾ 4 ಧೀರನಾ ಗಂಭೀರನಾ ಯದುವೀರನಾ ದಧಿಚೋರನಾ ಮಾರಜನಕ ವರದ ಶ್ರೀ ಹನುಮೇಶ ವಿಠಲರಾಯನಾ 5
--------------
ಹನುಮೇಶವಿಠಲ
ಜೀವಿಸು ಜಗದಿ ಬಾಲಕನೆ | ಚಿರಂಜೀವಿಯಾಗುತ ಪ ಚಿತ್ತಸುಶಿದ್ಧಿಯಿಂದಲಿ | ನಿತ್ಯಾನುಷ್ಟಾನ ಗೈಯುತಲಿ || ಸತ್ಯಸುಶೀಲನಾಗುತ | ಅತ್ಯಾನಂದವನನುಭವಿಸು 1 ಕ್ರೋಧಾದಿ ಗುಣವ ನಿಗ್ರಹಿಸಿ | ಸಾಧುಸತ್ವಥವಲಂಬಿಸಿ ಭೂದೈವರಾರಾಧಿಸುತ ನೀ | ಸಂಪದಿಸು ಪರಮಸತ್ಕೀರ್ತಿ 2 ಶ್ರೀಮಧ್ವಮತವಲಂಬಿಸಿ | ಪಾಮರ ಮತವ ಧಿಕ್ಕರಿಸಿ | ಈ ಮಹೀಮಂಡಲದಿ ಸುಖಿಸು ಜೀವಿಸು 3
--------------
ಶಾಮಸುಂದರ ವಿಠಲ
ನೀಚಮನಸೆ ನೀ ಯೋಚಿಸಿ ಕೆಡಬೇಡ ಬರಿದೆ ಪ ಸಾರವಿಲ್ಲದ ನಿಸ್ಸಾರ ಸಂಸಾರವೆಂಬುದು ಮಾಯಾಬಜಾರ ತೋರಿ ಅಡಗುತಿಹ್ಯದು ನಿಮಿಷ ನೀರಮೇಲಿನ ಗುರುಳೆತೆರದಿ ಪರಿ ಸ್ಥಿರವಲ್ಲದನರಿದು ನೋಡೋ 1 ಕಾರಣಲ್ಲದ ಕಾಯವಿದು ಮೂರುದಿನದಸುಖವ ಬಯಸಿ ಮೀರಿಸಿ ಗುರುಹಿರಿಯರ್ವಚನ ಪಾರಮಾರ್ಥವಿಚಾರ ಮರೆಸಿ ಸೂರೆಗೈದು ಸ್ವರ್ಗಭೋಗ ಘೋರನರಕಕೆಳಸುತಿಹ್ಯದು 2 ಆಶಾಬದ್ಧನಾಗಿ ಭವಪಾಶದೊಳಗೆ ಸಿಲುಕಬೇಡೆಲೊ ವಾಸನಳಿದು ಐಹಿಕಸುಖದ ಕ್ಲೇಶನೀಗಿ ಸುಶೀಲನಾಗಿ ಬೇಸರಿಲ್ಲದೆ ಶ್ರೀಶಜಗದೀಶ ಶ್ರೀರಾಮನಂಘ್ರಿ ಭಜಿಸು 3
--------------
ರಾಮದಾಸರು