ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಿರುವಲ್ಲಿಕೇಣಿ (ಚೆನ್ನೈ) ದರುಶನ ಮಾಡುವ ಬಾಬಾರೋ ಪ ಪರಮ ಪುರುಷನವ ಪಾರ್ಥನ ಸೂತನು ವರಗೀತಾಮೃತವುಸುರಿದವನು ಅ.ಪ ಶರನಿಧಿಯೊಳು ಮಿಂದು ಐತರುವವರಿಗೆ ವರದಾಭಯಕರ ತೋರುವವನು ಪರಮಾಚಾರ್ಯಗೆ ದರುಶನವಿತ್ತು ಪರಭಕ್ತಿಯ ಸಾರಿದನಿವನು 1 ಚಾರು ವೇದಂಗಳ ತುರಗವ ಗೈದ ಧಾರುಣಿಯನು ರಥಹೂಡಿದನು ಮರುತಾತ್ಮಜನನು ಧ್ವಜಕೇರಿಸಿದನು ದುರುಳ ಕೌರವನ ಧುರದಿ ಸೋಲಿಸಿದನು2 ಹತ್ತವತಾರದಿ ಬಂದವನಿವನೇ ಮತ್ತದೈತ್ಯರನೆಲ್ಲ ಕೊಂದವನಿವನೇ ಉತ್ತಮಭಕ್ತರ ಕಾಯಲು ಮಾಂಗಿರಿ ಅತ್ತ ನಿಂದಾ ರಂಗನಾಥನು ಇವನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ದುರ್ಲಭ ಇದು ಕಲಿಯುಗದೊಳಗೆ ಕಾಣಾ ಎಲ್ಲರಿಗೆ ದೊರಕಬಲ್ಲದೆ ಶ್ರೀ ವಲ್ಲಭನ ಪಾದಸೇವೆ ಮಾಡೋ ನೀ ನಲಿದಾಡೋ ಎಲೆ ಮನುಜಾ ಪ ಗಂಧರ್ವರು ಸಿದ್ಧರು ವಿದ್ಯಾ ದರಸಾಧ್ಯ ಗುಹ್ಯಕ ಸುರಮುನಿಗಣ ಗರುಡಾದ್ಯರೆ ನೆರೆದು ಪುರಹರ ಮೂವನ ಬಲ್ಲಿದರೀ ಇಲ್ಲವೆನುತಲಿ ಬರಿದು ರೇಖೆಯ ಬರಿಸಿದರೊ ಡಂಗುರ ಹೊಯಿಸಿದರೊ ಎಲೆ ಮನುಜಾ 1 ಹರಿಯೆಂತೆಂದವ ಧರ್ಮಕೆ ಸಂದವ ಕರದಲಿ ದಂಡಿಗೆ ಪಿಡಿದವ ಪುಣ್ಯವ ಪಡೆದವ ಚರಣದ್ವಯದಲಿ ಗೆಜ್ಜೆಯ ಕಟ್ಟಿದವ ಅಟ್ಟಿದವ ಯಮ ಭಟರ ಹರಿಹರಿದಾಡುತ ಕುಣಿದವ ಉತ್ತಮ ಗುಣದವ ಹಿರಿದಾಗಿ ಗಾಯನ ಪಾಡಿದವ ಸುರರನ ಗೂಡಿದವ ಮಾಯವ ಬಿಡೋ ಎಲೆ ಮನುಜಾ2 ಭವಾಬ್ಧಿ ದಾಟಿದವ ಇಂಬಾಗಿ ಕಡ್ಡಿ ವಾದ್ಯವ ಹಾಕಿದವ ದುರುತವ ನೂಕಿದವ ಸಂಭ್ರಮ ತಾಳ ಕಟದವ ಊಟದವ ಸುರರೊಡನೆ ತುಂಬಿದ ದಾಸರ ಸಭೆಯೊಳಗಿದ್ದವ ನರಕವನೊದ್ದವ ಕಂಬನಿ ಪುಳಕೋತ್ಸವ ಸುರಿದವ ತತ್ವವನರಿದವ ನೀ ಸುಖದಲಿ ಬಾಳೊ ಎಲೆ ಮನುಜಾ 3 ಬೇಸರದಲೆ ಹೇಳಿ ಏಕಾದಶಿಯ ವಾಸರದಲಿ ಜಾಗರವನು ಗೈದ ಮಾನೀಸನು ಅಘನಾಶನು ಚರಣಕೆ ಏರಿಸಿದನಿವ ಬೆರೆದು ಎಲೆ ಮನುಜಾ4 ಗೋಪಾಳವನು ಬೇಡಿ ನಿತ್ಯಸುಖಿಯಾಗಿ ತಾಪತ್ರೆಯ ಮೊದಲಾದ ದುಷ್ಕರ್ಮ ಪಾಪರಹಿತನಾಗಿ ಸಿರಿ ಪದ್ಮವ ಪೊಂದಿದ ಭಜಕರು ಒಂದೇ ಗೇಣೊ ಎಲೆ ಮನುಜಾ 5
--------------
ವಿಜಯದಾಸ
ಸಕಲ ಭೂತಗಣಕಧಿನಾಥ ನೀನೆ ಪಥ ತೋರುವ ಮಹ ಮಹಿಮ ನೀನೆ ಪ ಗರಳ ಕುಡಿದವ ನೀನೆ ಸರಸಿಜಾಕ್ಷನ ಪರಮ ಸಖನು ನೀನೆ ವರ ಭಗೀರಥನುತಿಸೆ ಸುರನದಿಯನು ನಿಜ ಸಿರಿಮುಡಿಯೊಳ್ಧರಿಸಿದಾತನು ನೀನೆ 1 ಸಿರಿರಾಮ ಮಂತ್ರವನು ಗಿರಿಜೆಗುಸುರಿದವ ನೀನೆ ವರ ಪಾಶುಪತ ಶರವ ನರನಿಗಿತ್ತವನು ನೀನೇ ವರ ಮಾರ್ಕಂಡಗೆ ವರವನಿತ್ತವ ನೀನೆ ಕರಿಚರ್ಮ ಧರಿಸಿರುವ ಪರಮ ವೈರಾಗಿಯೂ ನೀನೆ 2 ಕೋರಿದನು ಕೊಡಲುಳ್ಳ ಕರುಣಪೂರ್ಣನು ನೀನೆ ಶ್ರೀ ರಜತಗಿರಿಯಲಿ ಮೆರೆಯುವಾತನು ನೀನೆ ನೀರಜಾಕ್ಷ ಶ್ರೀ ರಂಗೇಶವಿಠಲ ಪರನೆಂದು ಸಾರುತಲಿ ಪೊಗಳುವ ಪರಮ ಭಾಗವತನು ನೀನೆ 3
--------------
ರಂಗೇಶವಿಠಲದಾಸರು