ಒಟ್ಟು 3404 ಕಡೆಗಳಲ್ಲಿ , 117 ದಾಸರು , 2499 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾತುಮಾತಿಗೆ ಮರೆಯಬೇಡ ಸೀತಾರಾಮನ ಪ ಮಾತರಿಶ್ವನಾಥನು ಪ್ರೀತನಾಗುವ ಅ.ಪ. ಹನುಮ ತಾನು ಭಕ್ತಿಯಿಂದ ನೆನೆದು ಸುಖಿಸುತ ವನಜ ಸಂಭವ ಪದವಿ ಪೊಂದಿದ ಘನತರನ ಮಾತ 1 ಅಬಲೆಯನ್ನು ಕುಲಕೆ ತಂದ ಪ್ರಬಲನ ಮಾತ ಶಬರಿಯೆಂಬ ಭಕ್ತಳಿಗೆ ಅಭಯವಿತ್ತನ ಮಾತ 2 ಅಂಗಜವೈರಿ ಶ್ರೀ ಶಿವನು ಹಿಂಗದೆ ಭಜಿಪ ರಂಗೇಶವಿಠಲನೆಂಬುವ ಮಂಗಳನ ಮಾತ 3
--------------
ರಂಗೇಶವಿಠಲದಾಸರು
(2) ರಾಮಾನುಜರು ಬೇಡಿಕೊಂಬುವೆನು ನಿಮ್ಮ ರಾಮಾನುಜರೆ ಬೇಡಿಕೊಂಬುವೆನು ನಿಮ್ಮಾ ಪ ಪಾಡಿ ಹಿಗ್ಗುವ ಸುಖವ ಸಂತತ ಕಮಲ ಮಧ್ಯದೊ ಳಾಡುತೆನ್ನನು ರಕ್ಷಿಸೆನುತಲಿ ಅ.ಪ ಚರಮ ಶ್ಲೋಕವ ಬೋಧಿಸಿ ಅಷ್ಟಾಕ್ಷರಿಯೊ ಳಿರುವ ಗೋಪ್ಯವ ತೋರಿಸಿ ಗೈವುತ ಪ್ರಣವ ಶಬ್ದದಿ ಬೆರಸಿ ನಿನ್ನನೆ ಭಜಿಸಿ ಸ್ಮರಿಸುತ ಪರಮನಾಗುವ ಮತಿಯ ತ್ವರಿತದಿ 1 ಅಷ್ಟಮದಗಳು ಎನ್ನನೂ ಬಂಧಿಸಿ ಮಾಯಾ ಅಷ್ಟಪಾಶದಿ ನೊಂದೆನೊ ದುಷ್ಟಕಾಮಾದಿಗಳ ಭ್ರಾಂತಿಯು ಕಟ್ಟ ನರಕದಿ ಕೆಡಹಿ ಸುಡುತಿದೆ ಭ್ರಷ್ಟಗುಣಗಳ ದೂರಸೇರಿಸಿ ಶ್ರೇಷ್ಠಮುಕ್ತಿಯ ಪಡೆವ ವಿರತಿಯ 2 ಜ್ಯೋತಿ ಜ್ಯೋತಿಯ ನಿಲ್ಲಿಸಿ ಹೂಬಳ್ಳಿಯೊಳ್ ಜ್ಯೋತಿನೋಡು ಪೂಜಿಸಿ ಮಾತೆ ಮಾತುಳ ಪಾಲಕಾನುಜ- ಸತಿ ಸುತ ಬಂಧು ಮಿತ್ರ ವ್ರಾತ ಸಂಗಡಬಂಧಬಿಟ್ಟು ಪು ನೀತನಾಗಲಿಬೇಕು ಎನುತಲಿ 3 ಯಾದವಾದ್ರಿಯ ವಾಸನೆ ಭಕ್ತರನೆಲ್ಲ- ಮೋದದಿಂದಲಿಯಾಳ್ವನೇ ಮೇದಿನೀಮಹದೇವಪುರವರ ನಾದಶ್ರೀಗುರುರಂಗ ನಿನ್ನ ಸು- ಪಾದನಂಬಿದ ರಂಗದಾಸನ ಪರಮಯೋಗಿಯು ಎನ್ನಿಸೆನುತಲಿ 4 ಅಷ್ಟಾಕ್ಷರದ್ವಯದರ್ಥದಿ ನಿಷ್ಠಾಪರನಾಗಿ ಮನದಿ ನಿರುತಂ ಜಪಿಸಲ್ ಇಷ್ಟಾರ್ಥವು ಸಿದ್ಧಿಸುತಂ ಅಷ್ಟಮನೋಳ್ಬೆರದುನಿಲ್ವನಿದು ಸಿದ್ಧಾಂತಂ ಕಂದ
--------------
ರಂಗದಾಸರು
ಇಂದಿಗೆ ಇರುತಿಹ ಮಂದನ ಶÀ್ರಮ ಬಹು ಬಂಧನ ಬಿಡಿಸೊ ಗೋವಿಂದ ಎನ್ನನು ಕಾಯೊ ಮುಕುಂದ ಪ ಹಿಂದಿನ ಕಾಲದೊಳಾದ ಪ್ರತೀಕಾರ ದಿಂದ ಬಾಧಿಪನಿವನೆನ್ನ ಕಾಯ ಬೇಕೈಯ್ಯಾ ನೀ ಎನ್ನ 1 ನಿಂದ್ರಾದೆ ಗ್ರಾಮದಿ ಪೊಂದಾದೆ ಜನರನ್ನು ಕುಂದುತ ಬಂದೆನಾರಣ್ಯ ವಾಸವಮಾಡುತ ಇನ್ನಾ 2 ಇಂದಿರಪತಿಪಾದದ್ವಂದ್ವವು ಮನ್ಮನ ಮಂದಿರದಲಿ ತೋರಿನ್ನಾ ಐದುವೆ ನಿಜಸುಖವನ್ನಾ 3 ಪೊಂದಿಸು ನಿನ್ನಯ ವಂದಿಸುವಾ ಜನ ಸಂದಣಿಯೊಳು ಮುಂದೆನ್ನಾ ಐದುವೆ ನಾ ನಿನ್ನಾ 4 ಇಷ್ಟುಶ್ರಮವ ನಾ ತಪ್ಟಿಸಿ ಪೇಳಿದೆ ಧಿಟ್ಟಗುರುಜಗನ್ನಾಥಾ ವಿಠ್ಠಲ ನಿಜಜನಪ್ರೀತಾ
--------------
ಗುರುಜಗನ್ನಾಥದಾಸರು
ಇಂದಿರಾನಂದ ಉದಧಿವರ್ಧನನೆಂದು ಪ ಕಂದರ್ಪಕೋಟಿ ಲಾವಣ್ಯನಿಧಿ ಮನಪೊಂದು ಅ.ಪ ನಾನು ನನ್ನದು ಎಂಬ ಜ್ಞಾನ ಸಂತತಿಯಿಂದ ನಾನಾ ಯಾತನೆ ಭಾವ ಬಲೆಯ ಕಟ್ಟಿ ಹೀನಗೋಜಿಲಿ ಸಿಕ್ಕಿ ಬಲುನೊಂದೆ ಗೋವಿಂದ ನೀನು ನಿನ್ನದು ಎಂಬ ಅಮೃತಗಾನದಿ ನಿಲಿಸು 1 ದರ್ವಿಯಂದದಿ ನಾನು ನೀ ಸರ್ವ ಸ್ವಾತಂತ್ರ ನಿರ್ವಾಹ ನಿನ್ನಿಂದ ಸರ್ವ ಜಗಕೆ ದೂರ್ವ ಏರಿಸೆ ಸಕಲ ದುರಿತವಳಿಸಿ ಮುಕ್ತಿಸುಖ ತೋರ್ವಂಥ ಗುಣನಿಧಿ ಸರ್ವಾತ್ಮ ಹೊರೆ ಹೊರೆಯೊ 2 ನಿನ್ನ ದರುಶನ ಬಿಟ್ಟು ಅನ್ಯತ್ರ ನಿರ್ಭೀತಿ ಎನ್ನಲಿ ಎಂದೆಂದು ವೇದವೇದ್ಯ ನಿನ್ನ ದರುಶನ ಫಲಕೆ ನಿನ್ನ ಮಹಕರುಣ ಇನ್ನು ಕಾರಣದೇವ ಧನ್ಯರಲಿ ಇಡು ಎನ್ನ 3 ಮನೋವಿಕಾರಗಳೆಂಬ ದುಃಖಾರ್ಣದಿ ಬಿದ್ದು ಅನುಮಾನ ಮಾಡಿದೆನೊ ನಿನ್ನ ಅಮೃತ ತನುಧ್ಯಾನ ಮನಕಿಡಿಯದೇನುಗತಿ ಯದುವರ್ಯ ತೃಣಕೆ ಕೈವಲ್ಲೀವ ತ್ರ್ಯಧೀಶಮನಪೊಂದು 4 ಜ್ಞಾನಮನ ಬಿಡದಿರು ದೀನ ಬಾಂಧವ ಕೃಷ್ಣ ಇನ್ನು ಮಾಯವನು ತೆಗೆದೆನ್ನ ಬೆರೆಯೊ ಜ್ಞಾನನಿಧಿ ಜಯೇಶವಿಠಲನೆ ವಿಧಿವಂದ್ಯ ಪ್ರಾಣಾಧಾರಕ ಶುಕನ ಆನಂದನಿಧಿ ಪಾಹಿ 5
--------------
ಜಯೇಶವಿಠಲ
ಈ ಮುದ್ದು ಕೃಷ್ಣನೀಕ್ಷಣದ ಸುಖವೆ ಸಾಕು ಪ. ಶ್ರೀಮಧ್ವಮುನಿಯ ಮನೆದೈವ ಉಡುಪಿನ ಕೃಷ್ಣ[ನ]ಅ.ಪ. ನಾಸಿಕ ಕರ್ಣಸುಳಿಗುರುಳು ಮಸ್ತಕದ ನಳಿನನಾಭನ ಸೊಬಗು1 ಕುಂಡಲ ಪ್ರಭೆಯಸಿರಿನಾಮ ಮಕುಟ ನಾಸಿಕದ ವರಮಣಿಯ 2 ಸಕಲ ದೇವೋತ್ತಮನೆ ಸರ್ವಗುಣ ಪೂರ್ಣನೆಅಕಳಂಕ ಅಖಿಳಾಗಮಸ್ತುತನೆ ಅಪ್ರಾಕೃತನೆಅಖಿಳ ಜೀವೋತ್ತಮರ ಭಿನ್ನ ಹಯವದನನೆಮುಕುರ ಕಡೆಗೋಲು ನೇಣುಗಳ ಪಿಡಿದಿಪ್ಪನೆ 3
--------------
ವಾದಿರಾಜ
ಎಂದಾದರೊಂದು ದಿನ ನಿಂದು ನೋಡುವೆ ನಿನ್ನ ಸುಂದರ ಪದಾಂಬುಜವ ಇಂದಿರೇಶ ಪ ಬಂದ ಸುಖ ದು:ಖಗಳ ಒಂದಾಗಿ ತಿಳಿಯುತಲಿ ತಂದೆ ಗೋವಿಂದ ಸಲಹೆಂದು ನಂಬಿರುವಾಗ ಅ.ಪ ಮಾ ಮನೋಹರಾ ನಿನ್ನ ನಾಮ ಭಜನೆಯ ಗೈದು ಕಾಮಿತಾರ್ಥಂಗಳನು ನಾ ಮರೆಯುತೇ ನಾಮಾಳ್ಪ ಕರ್ಮಗಳ ನೇಮದಿಂದಲಿ ಗೈದು ರಾಮಾರ್ಪಣಾ ಎಂದು ಪ್ರೇಮದಿಂದರ್ಪಿಸಲು 1 ಬಂದ ಅಭ್ಯಾಗತರಿಗೊಂದು ಪಿಡಿ ಅನ್ನವನು ಎಂದೀಯಲೀವೆಯೋ ಅಂದು ಹರಿದಿವಸ ಎಂದೀಯಲಾರೆಯೋ ಅಂದೆನಗುಪೋಷ್ಯವನು ಸಂದೇಹವಿಲ್ಲದೀಯೆಂದು ನಂಬಿರುವಾಗ2 ದೊರೆಯದಿಹ ವಸ್ತುಗಳು ಹರಿಸಮರ್ಪಣವೆಂಬೆ ದೊರೆತ ವಸ್ತುಗಳೆಲ್ಲ ಹರಿಕರುಣವೆಂಬೆ ಗರುಡವಾಹನ ನಿನ್ನ ಶರಣು ಹೊಕ್ಕಿರುವಾಗ ಕೊರತೆ ಏನಿಲ್ಲ ಮಾಂಗಿರಿ ರಂಗವಿಠಲ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಎನ್ನ ಗುರುವು ಬಂದನೆ ಏನಂತ ಅಂದನೆನಿನ್ನ ನೀನು ತಿಳಿದು ನೋಡೆನೀನೆ ನಾನು ಎಂದನೆ ಪ ಒತ್ತು ಮಡವನೆಂದನೆ ವಾಯು ಪೀಕೆಂದನೆಎತ್ತು ಸ್ವರವನೆಂದನೆ ಏರು ಮಾಳಿಗೆಂದನೆ 1 ಕೆರೆಯ ಮುಳುಗು ಎಂದನೆ ಕಾಣುಜ್ಯೋತಿ ಎಂದನೆಸುರಿವ ಸುಖವು ಎಂದನೆ ಸೂರೆ ಪ್ರಪಂಚೆಂದನೆ2 ಹಗರಣದಿಂದಂದನೆ ಹಮ್ಮಿನಿಂದಂದನೆಬಗೆಬಗೆಯಿಂ ಚಿದಾನಂದ ನೀನೇ ಬ್ರಹ್ಮ ಎಂದನೆ 3
--------------
ಚಿದಾನಂದ ಅವಧೂತರು
ಕಂಡೆ ನಾನೊಂದು ಸುವಸ್ತ ಮಂಡಲದೊಳು ಸದ್ಗುರು ದಯದಲಿ ಸಾಭ್ಯಸ್ತ ಧ್ರುವ ನೆನವಿನ ಕೊನೆಯಲಿ ಅನುವಾಗಿ ದೋರತದೆ ಘನ ದೀಪ್ತಿಯಲಿ ಬೀರುತಿದೆ ಮನದ ಮುಗುಟ 1 ಪ್ರಣವನ ಮೂಲಾಗ್ರಹಲಿ ಪರಿಪೂರ್ಣತಾನಾಗೆÀದ ಘನವೆ ಘನವಾಗ್ಹೊಳೆಯುತದೆ ಪ್ರಾಣಪದಕ 2 ಮಹಿಪತಿ ಬಾಹ್ಯಾಂತ್ರದೊಳು ವಸ್ತು ವಿರಾಜಿಸುತದೆ ಮಹಿಮರೆ ಬಲ್ಲರೀಸುಖ ನಾಮಾಮೃತದ ಸ್ವಾನುಭವದ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಿಸಿ ವೃಷ್ಟಿಗರಿ ಕಮಲನಯನನರರಪರಾಧಗಳ ನೋಡದಲೆ ವೇಗದಲಿ ಪ ತ್ರಿವಿಧ ಸಾಧನ ಪೂರ್ತಿಪದು ||ಅನ್ನದಿಂದಲೆ ಅಭಿವೃಧ್ದಿ ಆಹದರಿಂದ ಪ-ರ್ಜನ್ಯದಿಂದಲಿ ಅನ್ನ ಜನಿಸುವ ಕಾರಣದಿ 1 `ಭೀಷ್ಮಾಸ್ಮಾದ್ವಹತಿ ಪವತಿ` ಎಂಬೋಕ್ತಿಯಲಿಈ ಸಮಸ್ತಮರರೂ ನಿನ್ನ ಭಯದಿ ||ಬ್ಯಾಸರವೆ ತಮ ತಮ್ಮ ವ್ಯಾಪಾರಗಳ ಮಾಡಿಪೋಷಿಸುವರು ಜಗವ ಪ್ರೀತಿಯಿಂದ 2 ಸುರರು ನಿಮಿತ್ಯ ಮಾತ್ರಪರಮ ಗುಣಸಾಂದ್ರ ಹೇ ಕರುಣಾಬ್ಧಿ ಚಂದ್ರ 3 ನರನೊಬ್ಬ ಪ್ರಭು ತನ್ನ ಪರಿಚಾರಿಗಳನ್ನು ಪರಮ ಅಭಿಮಾನದಲಿ ಪರಿಪಾಲಿಪ ||ಸುರರ ಬ್ರಹ್ಮಾದಿಗಳ ದೊರೆಯ ನಿನಗೀ ಮಾತುಸರಿಹೋದರೆ ವಚನ ಸಲಿಸು ಕೃಪೆಯಿಂದ 4 ಆವಾವ ಸಾಧನದಿ ಆವ ಸುಖವೈದುತಿರೆದೇವ ನಿನ್ನಯ ಕೀರ್ತಿ ಬರುವದೆಂತೋ ||ದೇವ ದೇವೇಶ ಗುರು ವಿಜಯ ವಿಠಲರೇಯ ಸಾವಧಾನದಲಿತ್ತು ಪರಿಪಾಲಿಪುದು ಬಿನ್ನಪವ 5
--------------
ಗುರುವಿಜಯವಿಠ್ಠಲರು
ಕ್ಷಿತಿಪರನ ಸ್ಮರಿಸಿ ಜನರು ಕ್ಷಿತಿಪರನ ಸ್ಮರಿಸಿ ನಿಮಗಪವಿಜಯವೆಂದಿಗೆ ಇಲ್ಲ-ಸು ಪುತರಾದ ವರನೆ ಕೃಪವನಧಿ ಹರಿವೊಲಿವಾ ಪ ಬಲಿ ವಿಭೀಷಣ ರಂಧ್ರಗಣ ರಂತಿರೇವತ ಮಲಯಧ್ವಜ ರಾಮಭೋಜಾ ಯದು ಬಲಗಿರಿಕ ಗಾಂಧಾರ ಗಯಸೇತು ಈಶ್ವರ ಕುಲಿಶಧ್ವಜ ಸಗರ ವೀರಾ ಸುರಭ ಶಶಿಬಿಂದು ಮಾಂಧಾತ ಧ್ರುವ ಶಿವಪ್ರಿಯ ಛಲಭರತ ಆಷ್ಮಾಕ ವಾಲಿ ಲೋಹಿತನೃಗಸು ಕುಕ್ಷಿ ಯದು ಭೂಷಣ1 ಅಸಮಂಜ ಸಂಜನಾಭಾ ವಸುದತ್ತ ಸೌಗಂಧಿಮಣಿ ಮುಕ್ತಕೇಸರೆ ನಿಸಿದಮಣಿ ವಾಹನಾ ಮಹವೀರ್ಯ ಕ್ಷೇಮಕ ಹಸ್ತಿ ವಸು ಅರಿಹಹೇಮಗರ್ಭ 2 ಕುಕುಸ್ಥ ಇಕ್ಷ್ವಾಕು ಮರುತ ಮುನಿಚೈತ್ರರಥ ವಿಕುಕ್ಷಿ ಸುರಥ ಆರಾವಾಚಿ ಶೃತಿ ಕೀರ್ತನ ಹುಶದಿಪ್ತಕೇತ ಸುವುತವಿಭಾವ ಸು ಶಕುತಿ ಶಿಖಿ ಸಾರ್ವಭೌಮಾ ಸುಖಸೇನ ಭಗೀರಥ ಅಜಮಾನು ಸ್ವರ್ಭಾನು ರುಕ್ಮಾಂಗದ ವಿರಾಜ 3 ಪುರಮೀಢ ಸುಮೀಢ ಭದ್ರಾಶ್ವ ರಮಣಕಾ ಹರಿಧರ್ಮನೇತ್ರ ಸುನೇತ್ರಕೇತುಮಾಲ ಪುರೋರವ ಮಿತ್ರಮನ ಜಯಸೇನ ಶುಭವರ್ಮ ಧರಯತೀ ಪುಣ್ಯದ್ರವಿಣೌ ಕರವೀರ ಸಾವೀರ ಪೌಷ್ಯಕೇಸರಿ ಸಿಂಗ ಮರುರುಕ್ಷ ಪ್ರದೀಪ ದಿಲೀಪ ಅಷ್ಟಕಕಂಪ ಅರಣಿ ಭೂಮನ್ಯು ಪ್ರಥಮಾಹವೀರ್ಯ ಸುರದತ್ತ ಹರಿವೀರಮನ್ಯು ವಿಶ್ವಾ 4 ಸುಮತಿ ಸುಂಹರ ರಘು ಮುಚಕುಂದ ದಶರಥ ಸುಮನ ದುಷ್ಯಂತ ಸಂಯಾತಿ ಹಂಸಧ್ವಜ ದಮಯಂತ ನೀಲಾಂಗ ಧರ್ಮಾಂಗದ ಶಮಲ ವಿಮರ ರವಿಕಾಂತ ನಹುಷ ದ್ರುಮಿಳ ಪದ್ಮಾಶತಾಯುಧ ಮಯೂರಧ್ವಜ ಪ್ರಮಿಲ ಕೀರ್ತಿವಾನ ತೊಂಡವಾನ ವಿದಗರ್ಭ ಅಮಿತ ಪರಾಕ್ರಮ ನಭಾಗಂಬರೀಷ ಸೌಮಿತ್ರ ಕಾರ್ತವೀರ್ಯಾ 5 ಪರಮೇಷ್ಟಿ ಮಣಿನಾಭ ಚೋಳ ತ್ರಿಶಂಖ ಶಂಖಣ ಶಂಖ ಮಣಿಕೇತ ಪಾಂಚಜನ್ಯ ಧನಂಜಯ ಕಾಶಿ ಸುಕಾಂತಕುಶ ಕುಶನಾಭ ಮಣಿಸೇನ ಪಾಂಡವ ಜಂಬುನದಿ ದಿವ್ಯರಥ ವನ ಕಕ್ಷಸೇನ ಜಾಕ್ಷಿತ ಪರಿಕ್ಷಿತ ದೃಂಹ್ಯ ಅನು ಅನಾಯುಪದಾತೀ 6 ಹರಿಶ್ರವ ಉತ್ತಾನಪಾದ ಕುಂಡಲಗಜ ಯವನಾಶ್ವರಾಜ ನೀಲಧ್ವಜ ಸುರವೃತ್ತ ಕವೇರ ಆಯು ದೃಢಾಯು ವಿಶಾಲ ಪ್ರತಿ ಶ್ರವ ಚಿತ್ರವೀರ್ಯ ಸುಭಗಾ ಕವಿವಂಗ ಅಂಗ ಕೋಶಲ ಹೇಮಗರ್ಭ ಶುಚಿ ವಿಕುಂಠ ಸುರಭೀ ಸೂ ಹವಿ ಅಭಿರಾಜ ಸುಹಿಜಾ 7 ಶಿಂಧು ಶುಭವರ್ನ ಸಿರ್ಯಾತಿ ಯಯಾತಿ ಸತ್ಯ ಸಂಧ ರೋಹಣ ಸಾಹದೇವ ವಾಪೀ ನಂದನ ಸುಮನ್ಯು ಸ್ವರ್ಭಾನು ಪಿಪ್ಪಲರವಿ ಚಂದ್ರಹಾಸ ಅಶ್ವವಂತ ಶಬಲಾಶ್ವ ಅಣು ಚಂದ್ರವರ್ಣ ಚಪನ ಸತ್ಯ ಸಯಾತಿ ಬಲ ವೃಂದ ವಿಷ್ಣುವರ್ಧನ 8 ಸಂತತದಲಲ್ಲೆಣಿಸಿದರೆ ಪಾರಗಂಡವರಾರು ಚಿಂತನೆಗೆ ತೋರಿದುದು ಸಾರಿದೆನು ಚನ್ನಾಗಿ ಸಂತರು ಕೇಳಿ ಲಾಲಿಸೀ ಪಿಂತೆ ಬಲು ಜನನದಾ ದುರಿತೌಘ ಪೋಗುವದು ಸಂತೋಷವಾಗುವುದು ಪರಿಸಿದ ಜನಕೆ ನಿತ್ಯ ಕಂತುಪಿತ ವಿಜಯವಿಠ್ಠಲನ ಚರಣಾಂಬುಜವ ಸಂತತಿ ಸಹಿತ ಕಾಂಬರೂ 9
--------------
ವಿಜಯದಾಸ
ಗುರುವಿನ ಗುಣಂಗಳ ನೆನೆವೆ ಸಿದ್ಧೇಶ ನಾನುಗುರುವಿನ ಪಾದಂಗಳ ನೆನೆವೆ ಸಿದ್ಧೇಶ ಪ ಸುಖವು ಬಂದರೆ ಹಿಗ್ಗದವರು ಸಿದ್ಧೇಶ ನಾನಾದುಃಖವು ಬಂದರೆ ಬಗ್ಗದವರು ಸಿದ್ಧೇಶ ಅಖಿಳವೆಲ್ಲವ ಬ್ರಹ್ಮವೆಂದರು ಸಿದ್ಧೇಶ ಇವರುಮುಕುತ ಗಣಂಗಳು ಈಗ ಸಿದ್ಧೇಶ 1 ಮಾನ ಹಚ್ಚಿಕೊಳ್ಳದವರು ಸಿದ್ಧೇಶ ಅಭಿಮಾನಗಳು ನೀಗಿದವರು ಸಿದ್ಧೇಶತಾನೆ ಎಂದು ತಿಳಿದವರು ಸಿದ್ಧೇಶ ಅವರುಜ್ಞಾನ ಮುಕ್ತಗಣಂಗಳು ಸಿದ್ಧೇಶ 2 ಸಂಸಾರವಿದ್ದರೆ ಬಾಧಕವಿಲ್ಲದವರು ಸಿದ್ಧೇಶಸಿದ್ಧ ಚಿದಾನಂದರಿಹರು ಸಿದ್ಧೇಶ ಇವರುಶುದ್ಧ ಮುಕ್ತ ಗಣಂಗಳು ಸಿದ್ದೇಶ3
--------------
ಚಿದಾನಂದ ಅವಧೂತರು
ದಯಕಿಂತ ಗುಣವಿಲ್ಲ ನರಗೆ ದಯಕೆ ನಿರ್ಬಂಧವಿಲ್ಲಣ್ಣ ಜಗದಿ ಪ ಹೃದಯ ಮಂದಿರದಲಿ ನೆಲೆಸಿಹ ದಯೆಯು ಮೃದು ಮಳೆಹನಿ ತೆರದಲಿ ಸುರಿಯುವುದು ಅ.ಪ ಬಾರಿಯ ಸ್ಥಾನಕೆ ಈ ದಯೆ ಗುಣವು ಭಾರಿಯ ಶಕುತಿಯ ನೀಡುವುದು ಚಾರು ಕಿರೀಟವ ಮೀರಿದ ಕಾಂತಿಯ ಬೀರುವುದೀ ದಯೆ ನರಪತಿಗೆ 1 ರಾಜನ ದಂಡವ ನೋಡುತ ನೋಡುತ ಈ ಜಗವೆಲ್ಲವು ನಡುಗುವುದು ರಾಜನ ಕಾರ್ಯಗಳೆಲ್ಲಕೆ ದೈವಿಕ ತೇಜವ ಕೊಡುವುದು ದಯೆ ಗುಣವು 2 ನಶ್ವರವೆಲ್ಲವು ಪ್ರಾಕೃತವು ಈಶ್ವರ ಧರ್ಮವೆ ಈ ದಯೆಯು ಶಾಶ್ವತ ಧರ್ಮಗಳೆಲ್ಲವು ದಯದಿ ಮಿಶ್ರಿತವಾದರೆ ಸುಖಮಯವು 3 ಪರಮ ಪುರುಷ ದಯೆ ತೋರದಿರೆ ವರಗತಿ ಪಡೆಯಲು ನರಗಳವೆ ಕರುಣೆ ಪ್ರಸನ್ನನ ಮೊರೆ ಹೋಗದೆ ನೀ ಅರಿಯಲು ಸಾಧ್ಯವೆ ಕರುಣೆಯ ಬೆಲೆಯ 4
--------------
ವಿದ್ಯಾಪ್ರಸನ್ನತೀರ್ಥರು
ದೃಷ್ಟ ಅದೃಷ್ಟದ ಬಲವು ನೊಡಿ ವಿಸ್ತಾರ ಸೃಷ್ಟಿಯಲಿ ಮುಟ್ಟಿ ಮುದ್ರಿಸಿದ ವಾಕ್ಯಂಗಳು ಕೇಳಿ ಆತ್ಮನಿಷ್ಠ ಜನರು 1 ದೃಷ್ಟಿ ಪುರುಷನ ಸೈನ್ಯಗಳು ಕೇಳಿ ಚಿತ್ತದಲಿ ಮಾನವರು ಅಜ್ಞಾನವೆಂಬಾಶ ಗತಿಯು ಮಾಯಾಮೋಹಕವೆಂಬ ಸುತರು 2 ಬಂಟ ಜನರು ಪ್ರಪಂಚ ಸೈನ್ಯಾಧಿಪತಿ ಸುಖ ದು:ಖದಳ ಭಾರಗಳು3 ಚಂಚಲವಂಚಲಶ್ವಗಳು ಅಹಂ ಮಮತಾ ಗಜಗಳು ಅವಸ್ಥೆಗಳು ಕಾಲಾಳುಗಳು ಮನ್ನೆವಾರರು ಕರಣಗಳು4 ಮೆರೆಯುತಿಹರು ಪಂಚೇಂದ್ರಿಯಗಳು ಸೂಸುತಲಿಹ ಬೇಹಿನವರು ಮೊದಲಾದ ದಶವಾಯುಗಳು 5 ಸುತ್ತಲಿಹ ಪರಿವಾರಗಳು ಸಪ್ತವ್ಯಸನ ಭೂಷಣಂಗಳು ಪಂಚಾಗ್ನಿಗಳು ಪಂಜಿನವರು ಅಷ್ಟಮದವು ಕಾವಲಿಗಳು 6 ಮೂರು ಪರಿಯ ತ್ರಿಗುಣಗಳು ಸೈನ್ಯದ ಪಾರುಪತ್ಯದವರು ಜಾಗ್ರಸ್ವಪ್ನ ಸುಷುಪ್ತಿಗಳು ಛತ್ರ ಚಾಮರ ಭೂಷಣಗಳು 7 ಸಪ್ತಧಾತುದ ಸುಖಾಸನವು ಪಂಚಾತ್ಮಗಳು ನಿಶ್ಯಾನಿಗಳು ತಾಮಸವೆಂಬ ಭೇರಿಗಳು ಅಹಂಕಾರವು ಕಹಳೆಗಳು 8 ಪರಿ ಚಂದ ಚಂದದಲಿ ಇಳಿದಿಹ ಸೈನ್ಯ ಭಾರಗಳು 9 ಜನನ ಮರಣದ ಮಂಟಪವು ಕಟ್ಟಿಹರು ವಿಸ್ತಾರದಲಿ ಚಿಂತಿ ಮುಪ್ಪಳಿಯು ಭ್ರಾಂತಿಗಳಲಿ ಸ್ಥಿತಿ ಸ್ಥಳಲಿಹ ದ್ವಾರಗಳು 10 ದುರ್ಮೋಹ ಬಲದಲಿ ತನುವೆಂಬ ದುರ್ಗಬಲದಲಿ ಕದನ ಮಾಡುವರನುದಿನದಲಿ 11 ಇನ್ನು ಅದೃಷ್ಟದ ಬಲವು ಕೇಳಿ ಚೆನ್ನಾಗಿ ಮನದಲಿ ಸಮ್ಯಜ್ಞಾನೆಂಬಾಶಗತಿಯ ಜ್ಞಾನ ವೈರಾಗ್ಯಸುತರು 12 ಬಂಟ ಜನರು ಬೋಧ ಸೈನ್ಯಾಧಿಪತಿಯ ದೃಢ ನಿಶ್ಚಯ ದಳ ಭಾರಗಳು 13 ನಿರ್ಮಳ ನಿಶ್ಚಳಶ್ವಗಳು ವಿವೇಕವೆಂಬ ಗಜಗಳು ಮಗುಟ ವರ್ಧನರು 14 ಶೂರತನದ ಪ್ರರಾಕ್ರಮರು ಸ್ಮರಣೆ ಚಿಂತನೆ ಧ್ಯಾನಗಳು ಸೂಸುತಲಿಹ ಬೇಹಿನವರು ಯೋಚನೆ ಅವಲೋಕನೆಗಳು 15 ಸುತ್ತಲಿಹ ಪರಿವಾರಗಳು ರತಿಪ್ರೇಮ ಸದ್ಭಾವನೆಗಳು ಲಯ ಲಕ್ಷ್ಯಗಳು ಪಂಜಿನವರು ಮೌನ್ಯ ಮೋನವೆ ಕಾವಲಿಗಳು 16 ನಾದ ಬಿಂದು ಕಳೆಯಗಳು ಸೈನ್ಯದ ಪಾರುಪತ್ಯವರು ಅನಿಮಿಷ ಛತ್ರ ಚಾಮರವು ಏಕಾಕಾರವೆ ನಿಶ್ಯಾನಿಗಳು 17 ಅನುಭವ ಸುಖಾಸನಗಳು ತೂರ್ಯಾವಸ್ಥೆಯ ಭೂಷಣಗಳು ಆನಂದಮಯವೆ ಭೇರಿಗಳು ನಿಶ್ಚಿಂತವೆ ಕಹಳೆಗಳು 18 ಸುಜ್ಞಾನದ ಮೊದಲಾದ ಅಂಗಡಿಯು ಇಳಿದಿಹ ಸಾಲವರಿಯಲಿ ಚಂದ ಚಂದ ಶೃಂಗಾರದಲಿ ಇಳಿದಿಹ ಸೈನ್ಯ ಭಾರಗಳು 19 ಸದ್ಗತಿ ಮುಕ್ತಿ ಮಂಟಪವು ಹೊಳೆಯುತಿಹದು ಸ್ಯೆನ್ಯದೊಳಲಿ ಶೋಭಿಸುವದು ಶೃಂಗಾರದಲಿ 20 ನಿರಾಶವೆಂಬ ಪ್ಯಾಟಿಯಲಿ ಇಳಿದಿಹದು ಸಂತೋಷದಲಿ ದೃಷ್ಟಿ ಪುರುಷನ ಅಟ್ಟಲೆಯ ಕೇಳಿ ನಡೆಯಿತು ಮಾರ್ಬಲವು 21 ಧಿಮಿ ಧಿಮಿಗುಡುತ ನಾದ ಮಾಡಿದರಾನಂದಲ ಗ್ಹೇಳೆನಿಸುತ್ತ ಕಹಳೆಗಳು ಭೋರ್ಗರೆಯುತಲಿ ನಡೆದರು 22 ನಡೆವರು ಅತಿಶಯ ಶೀಘ್ರದಲಿ ಬಾಣ ಬಾಣಗಳು ಮಾಡುತಲಿ ದಣಿದಣಿಸುತಲಿ ನಡೆದರು 23 ತುಂಬಿದ ಸೈನ್ಯ ಭಾರಗಳು ಉಬ್ಬು ಕೊಬ್ಬಿ ನಡೆದವು ನಗುತ ಗೆಲವಿಂದಶ್ವಗಳು ಏರಿ ಹಾರಿಸುತ ನಡೆದರು 24 ಮಗುಟ ವರ್ಧನರು ನಡೆದರು ಅತಿ ಹರುಷದಲಿ ಕಾಲಾಳುಗಳು ಮುಂದೆ ಮಾಡಿ ನಡೆಯಿತು ದಳ ಭಾರಗಳು 25 ಶೂರತನದ ಪರಾಕ್ರಮರು ಮುಂದಾಗಿ ಬ್ಯಾಗೆ ನಡೆದರು ಅಬ್ಬರಿಸುತಲಿ ಮಾರ್ಬಲವು ನಡೆಯಿತವರ ಸೈನ್ಯ ಮ್ಯಾಲೆ 26 ವಿವೇಕವೆಂಬ ಗಜಗಳು ವಾಲ್ಯಾಡುತಲಿ ನಡೆದರು ರಗಡಿಸುತ ಡೋಲಿಸುತಲಿ ನಡೆದರು ಪರಚಕ್ರ ಮ್ಯಾಲೆ 27 ನಡೆವ ಮಾರ್ಬಲದ ಧೂಳಿಗಳು ಮುಸುಕಿತು ಸುವಾಸನೆಗಳು ಗರ್ಜಿಸುವ ಧ್ವನಿಗೇಳಿ ಹೆದರಿತು ಶತ್ರು ಮಾರ್ಬಲವು 28 ಕಂಡು ದೃಷ್ಟರ ಸೈನ್ಯದವರು ಸಿದ್ದವಾದರು ಸಮಸ್ತದಲಿ ತಮ್ಮ ತಮ್ಮೊಳು ಹಾಕ್ಯಾಡುತಲಿ ನಡೆದುಬಂದರು ಸನ್ಮುಖಕೆ 29 ಚಿಂತಿಸುತಲಿ ಪರಾಕ್ರಮರು ಬಂದರು ವೀರ ಕಾಳಗಕೆ ಕಾಳಿ ಭೇರಿಗಳು ಬಾರಿಸುತ ಬಂದರು ಮಹಾಜನರು 30 ಕೂಗಿ ಚೀರುತ ಒದರುತಲಿ ಬಂದು ನಿಂದರು ಪರಾಕ್ರಮರು ಅಹಂ ಮಮತಾ ಗಜಗಳು ನಡೆದು ಬಂದವು ಎದುರಾಗ 31 ಕಾಲಾಳು ಸಹ ಕೂಡಿಕೊಂಡು ರಚಿಸಿ ಬಂದರಶ್ವಗಳು ಕೂಡಿತು ಉಭಯ ದಳವು 32 ಸುವಾಸನೆ ಧೂಳಿಯೊಳಗೆ ಅಡಗಿತು ದುರ್ವಾಸನೆಯು ಅಹಂ ಮಮತಾ ಗಜಗಳು ಕಂಡು ಓಡಿದವು ಹಿಂದಾಗಿ33 ಬೆನ್ನಟ್ಟಿ ವಿವೇಕ ಗಜವು ಹೊಡೆದು ಕೆಡವಿದವು ಧರೆಗೆ ಅವಸ್ಥೆಗಳು ಕಾಲಾಳುಗಳು ಜಗಳ ಮಾಡಿದವು ನಿಮಿಷವು 34 ವಿಚಾರ ಕಾಲಾಳು ಮುಂದೆ ಓಡಿದರು ದೆಸೆದೆಸೆಗೆ ಚಂಚಳವೆಂಚಳಶ್ವಗಳು ಏರಿ ಬಂದರು ರಾವುತರು 35 ಯುದ್ದಮಾಡಿದರರಗಳಿಗೆಯು ಶುದ್ಧಿ ಇಲ್ಲದೆ ಓಡಿದರು ನಿರ್ಮಳ ನಿಶ್ಚಳಶ್ವಗಳು ಏರಿ ಬೆನ್ನಟ್ಟಿ ನಡೆದರು 36 ಚಂಚಳ ವೆಂಚಳಶ್ವಗಳ್ಹರಿಗಡೆದರು ಕಾಲು ಬಲ ರಾಹುತರ ಸಹವಾಗಿ ಕಡೆದೊಟ್ಟಿದರು ಶಿರಸವನು 37 ವೀರರು ಕಾಮಕ್ರೋಧಗಳು ಬಂದರು ಅತಿಶಯಉಗ್ರದಲಿ ಶಮೆ ದಮೆ ವೀರಗಳೊಡನೆ ಕಾದಿ ಮಡಿದರು ಆ ಕ್ಷಣದಲಿ 38 ಬಂಟ ಜನರು ಬಂದರು ಸಿಟ್ಟು ಕೋಪದಲಿ ಭಾವ ಭಕ್ತಿಯ ಬಂಟರೊಡನೆ ಕಾದಿ ಕಾಲಾಳು ಮಡಿದರು 39 ಪ್ರಪಂಚ ಸೈನ್ಯಾಧಿಪತಿಯ ಕೈಸೆರೆಯಲಿ ಹಿಡಿದರು ಬೋಧ ಸೈನ್ಯಾಧಿಪತಿಯು ನಾದಘೋಷವು ಮಾಡಿಸಿದನು 40 ಉಲ್ಹಾಸವೆಂಬ ಸರವರಿಯು ಹಚ್ಚಿಸಿದರು ಸೈನ್ಯದೊಳಲ್ಲಿ ದಯ ಕರುಣ ಭಾಂಡಾರಗಳು ಒಡೆದು ಧರ್ಮ ಮಾಡಿದರು 41 ಪಂಚೇಂದ್ರಿಯಗಳ ಪರಾಕ್ರಮರ ಹಿಡಿದು ಕಟ್ಟಿದರು ಪಾಶದಲಿ ಸ್ಮರಣಿ ಚಿಂತನೆ ಪರಾಕ್ರಮರು ಉಬ್ಬಿದರು ಹರುಷದಲಿ 42 ದಶವಾಯುಗಳ ಬೇಹಿನವರ ಹಿಡಿದು ಬಂಧನವ ಮಾಡಿದರು ಅವಲೋಕನೆ ಬೇಹಿನವರ ಸದ್ಬ್ರಹ್ಮದಲಿ ಸುಖಿಸಿದರು 43 ಸಪ್ತವ್ಯಸನ ಪರಿವಾರಗಳು ರತಿಪ್ರೇಮರೊಡನೆ ಕೂಡಿದರು ಪಂಚಾಗ್ನಿಗಳು ಪಂಜಿನವರು ಪಂಚ ಪಾಲದಿ ಅಡಗಿದರು 44 ಲಯ ಲಕ್ಷಗಳು ಪಂಜಿನವರು ಸಂಜೀವದಂತೆ ಹೊಳೆವರು ಅಷ್ಟಮದವು ಕಾವಲಿಗಳು ಅಡಗಿದವು ಸ್ಥಳ ಸ್ಥಳಲಿ 45 ಮೌನ್ಯ ಮೋನವೆ ಕಾವಲೆಗಳು ತಾವೆ ತಾವಾಗಿ ದೋರಿದರು ತ್ರಿಗುಣರ ಪಾರುಪತ್ಯದವರು ಒಂದು ಸ್ಥಳದಲಿರಿಸಿದರು 46 ನಾದ ಬಿಂದು ಕಳೆಯಗಳು ಮುಟ್ಟಿ ಪಾರುಪತ್ಯ ಮಾಡುವರು ಶತ್ರುರಾಘನ ಭೂಷಣಗಳು ಸೆಳೆದುಕೊಂಡರು ಗಳಿಗೆಯೊಳು 47 ಅವಿದ್ಯ ಮೊದಲಾದಾಗದರಿಂದ ಚೋಳಿಯು ಮಾಡಿದರು ಜನನ ಮರಣದ ಮಂಪಟವು ಸುಟ್ಟು ಸಂಹಾರ ಮಾಡಿದರು 48 ಚಿಂತೆ ಭ್ರಾಂತಿಯ ದ್ವಾರಗಳು ಕಿತ್ತಿ ಬೀಸಾಟಿದರು ಆಶಾಪ್ಯಾಟಿಗೆ ಧಾಳಿನಿಕ್ಕಿ ಲೂಟಿಸಿದರು ನಿಮಿಷದಲಿ 49 ತನು ದುರ್ಗ ವಶಮಾಡಿಕೊಂಡು ಇಳಿಯಿತು ಸೈನ್ಯ ಸುಖದಲಿ ಸದ್ಗತಿ ಮುಕ್ತಿ ಮಂಟಪವು ಕೊಟ್ಟರು ಅಚಲದಲಿ 50 ಯೋಗ ಭೋಗದ ದ್ವಾರದಿಂದ ನಡೆದರು ಮಹಾ ಭಕ್ತಜನರು ಮನ್ನೆವಾರರು ಕರಣಗಳು ಅಭಯವ ಕೊಂಡು ನಡೆದರು 51 ಅಜ್ಞಾನವೆಂಬಾಶಾಗತಿಯು ಮುಕ್ತವಾದಳು ಸುಜ್ಞಾನz ಮಾಯವಾದರು ವೈರಾಗ್ಯದಲಿ52 ದೃಷ್ಟ ಪುರುಷನ ತಂದಿನ್ನು ಇಟ್ಟುಕೊಂಡರು ತಮ್ಮೊಳಲಿ ತನು ದುರ್ಗ ವಶಮಾಡಿಕೊಂಡು ಮುಂದೆನಡೆದರಾನಂದದಲಿ 53 ಅಧಾರ ಪುರ ಬೆನ್ನಮಾಡಿ ನಡೆದರು ಬ್ರಹ್ಮಾಂಡಪುರಕೆ ವಿಘ್ನಹರನ ಬಲಗೊಂಡು ಮ್ಯಾಲೆ ಮಣಿಪುರಕೆ ನಡೆದರು 54 ಅನಾಹತಪುರ ದಾಟಿ ಮುಂದೆ ನಡೆದರು ವಿಶುದ್ಧ ಪುರಕೆ ಸ್ಥಳ ಸ್ಥಳ ಹರುಷ ನೋಡುತಲಿ ನಡೆದರಗ್ನಿ ಚಕ್ರಪುರಕೆ 55 ಮ್ಯಾಲಿಹ ಬ್ರಹ್ಮಾಂಡ ಪುರವು ಹೊಳೆಯುತಿಹದು ಪರಿಪರಿಲಿ ಸಹಸ್ರದಳ ಕಮಲಗಲು ಥಳಥಳಿಸುವದದರೊಳು 56 ಘನ ಬೆಳಗಿನ ಪ್ರಭೆಯುಗಳು ಹೊಳಯುತಿಹುದು ಕಿರಣಗಳು ಹರಿ ಬ್ರಹ್ಮಾದಿಗಳು ವಂದಿಸುವ ಸ್ಥಳ ನೋಡಿ ಗುರು ಕರುಣದಲಿ 57 ಪಿಂಡ ಬ್ರಹ್ಮಾಂಡೈಕ್ಯಪುರದಿ ಒಳಗಿಹ ಹಂಸಾತ್ಮಗತಿಯು ಸಹಸ್ರ ರವಿಕೋಟಿ ತೇಜ ಭಾಸುವಾ ವಸ್ತುಗತಿಯು 58 ವಿಶ್ವ ವ್ಯಾಪಕನೆಂಬ ಸ್ಥಿತಿಯು ಮಹಿಮಾನಂದ ಸ್ಫೂರ್ತಿಯು 59 ದೃಷ್ಟಾದೃಷ್ಟಗತಿಯು ದೋರಿದ ಗುರು ಸದೃಷ್ಟದಲಿ ಗುರು ಕರುಣದ ಕಟಾಕ್ಷದಲಿ ಬೆರೆಯಿತು ಮನ ಹರುಷದಲಿ 60 ಕಂಡು ಮಹಿಪತಿಯ ಜೀವನವು ಧನ್ಯವಾಯಿತು ದೃಷ್ಟದಲಿ ಪರಮಾನಂದ ಸುಪಥದಲಿ ಜೀವನ ಮುಕ್ತ್ಯದರಲ್ಲಿ 61
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನಿಖಿಳ ಗುಣಗಣ ಪೂರ್ಣ ಪ ಅಂಬುಜಾಸನ ಜನಕ ನರಹರಿ ಅಂಭ್ರಣೀ ಜಗನ್ನಾಥ ನಾಯಕ ಬಿಂಬ ವಿಷ್ಣುವೆ ನಿಖಿಳವಿಶ್ವಕೆ ತುಂಬಿ ಭಕ್ತಿಯ ಕಾಯೋ ಕರುಣಿ ಯೇ ಅ.ಪ. ತಂದೆಕಾರಣ ಭವದೀ- ನೀ ಎನ್ನ ಬಂದೆನಲ್ಲದೆ ನಿಜದೀ- ಸುಖಪೂರ್ಣ ನಿಂದು ನಡೆಸದೆ ಭವದೀ- ದಾಟಿನ್ನ ಎಂದಿಗಾದರು ಗೆಲ್ಲುವೆನೆ ಘನ್ನ ಬಂಧನಪ್ರದ ನೀ ಬಂಧಮೋಚಕ ತಂದ ವಿಷ್ಣುವೆ ಮೂಲಕಾರಣ ವೆಂದು ಶೃತಿಗಳವೃಂದ ನುಡಿವುವು ಬಂದು ನಿನಗಿಂತಧಿಕರಾರೈ ನಿಂದು ಹೃದಯದಿ ಸರ್ವಕಾಲದಿ ತಂದು ಉಣಿಸುವೆ ಸಕಲ ವಿಷಯವ ಬಂಧಿ ನಾನಿಹೆ ಜಡವೆ ನೀ ಬಿಡೆ ಮುಂದಿನಾಗತಿ ಬೇಗ ತೋರೈ ಇಂದಿರೇಶ ಮಹೇಂದ್ರ ಸುಖಮಯ ಕಂದರಾಶ್ರಯ ಬ್ರಹ್ಮಮಂದಿರ ನಂದಿವಾಹನ ತಾತ ವಿಭುವರ ಚಂದಗೋಚರ ಸಾರ್ವಭೌಮನೆ ಕೂಂದುನಕ್ರನ ಗಜವ ಸಲಹಿದೆ ನಂದನೀಡಿದೆ ಪಾರ್ಥಮಡದಿಗೆ ತಿಂದು ಎಂಜಲ ಕಾಯ್ದೆ ಶಬರಿಯ ಗಂಧ ಕೊಳ್ಳುತ ಕಾಯ್ದೆ ಕುಬ್ಜೆಯ ಕಂದ ಕೂಗಲ್ ಬಂದೆ ಕಂಭದಿ ಇಂದ್ರ ಗೋಸುಗ ಬಲಿಯ ಬೇಡದೆ ಮಂದರಾದ್ರಿಯ ಪೊತ್ತೆ ಸುರರಡೆ ಸುಂದರಾಂಗಿಯುಆದೆ ಹಾಗೆಯೆ ಹಿಂದೆ ಈತೆರ ನಿತ್ಯತೃಪ್ತನೆ ಬಂದು ಸಲಹಿದ ಭಕ್ತವೃಂದವ ಮಂದನಾದರು ಶರಣುಬಿದ್ದವ ನೆಂದು ಸಲಹೈ ಪೂರ್ಣಕರುಣಿಯೇ1 ಕೂಡಿಸುತ ಮನ ವಿಷಯ ಬಲೆಯಲ್ಲೀ ಮಾಡಿಸುವೆ ಮಾಡಿದ್ದ ದಿನದಿನದೀ ಗೂಢ ನಿನ್ನಯ ಭಕ್ತಿ ಕೊಡಲೊಲ್ಲೀ ಕೇಡುಮೋಹ ಸಜಾಡ್ಯ ಹರಿಸಿಲ್ಲೀ ಓಡಿಓಡಿಸೆ ಜಗವು ನಡೆವುದು ನೋಡಿನೋಡಿಸೆ ನಾವು ನೋಳ್ಪೆವು ಮಾಡಿಮಾಡಿಸೆ ಕರ್ಮವಾಹುದು ಪ್ರೌಢ ನಿನ್ನಯ ಬಲದ ವಿಶ್ವಕೆ ಕಾಡಿಕಾಡಿಪ ವಿಷಯ ಬಿಡಿಸುತ ಹಾಡಿಹಾಡಿಸಿ ನಿಮ್ಮ ಕೀರ್ತನೆ ಆಡಿಆಡಿಸಿ ಸಾಧುಸಂಗದ ಜಾಡುತೋರಿಸೊ ಭಕ್ತಿ ಮಾರ್ಗದ ಕ್ರೋಢನರಹರಿ ಮತ್ಸ್ಯವಾಮನ ಪ್ರೌಢ ಭಾರ್ಗವ ರಾಮಕೃಷ್ಣನೆ ಗಾಡಿಕಾರ ಪರೇಶ ಬುದ್ಧನೆ ದೂಡು ಕಲಿಯನು ಕಲ್ಕಿದೇವನೆ ಕೂಡು ಮನದಲಿ ಬಾದರಾಯಣ ನೀಡು ಜ್ಞಾನವ ಜೀಯ ಹಯಮುಖ ಮಾಡು ದತ್ತಾತ್ರೇಯ ಕೃಪೆಯನು ಈಡುಕಾಣದು ಕಪಿಲಮೂರ್ತಿಯೆ ಬೀಡುಗೈದಿಹ ಬೀಜ ನಿದ್ರೆಯು ನೋಡಗೊಡದೈ ನಿನ್ನತುರ್ಯನೆ ನಾಡುದೈವಗಳನ್ನು ಭಜಿಸಲು ಓಡದದು ಎಂದೆಂದು ಸತ್ಯವು ಮಾಡುತಲಿ ಸಾಷ್ಟಾಂಗ ನತಿಗಳ ಜೋಡಿಸಿಹೆ ಶಿರ ಪಾದಪದ್ಮದಿ ಗಾಢಪ್ರೇಮದಿ ಸಲಹು ಭೂಮನೆ ಮೂಡಿಸುತನಿಜ ಭಕ್ತಿ ಜ್ಞಾನವ 2 ಎನ್ನ ಯೋಗ್ಯತೆ ನೋಡೆ ಫಲವಿಲ್ಲ ನಿನ್ನಕೃಪೆ ತೋರದಿರೆ ಗತಿಯಿಲ್ಲ ಅನ್ಯ ಹಾದಿಯು ಯಾವುದೆನಗಿಲ್ಲ ಘನ್ನಚಿತ್ತಕೆ ಬರಲು ತಡಿಯಿಲ್ಲ _ ಹೇನಲ್ಲ ಪೂರ್ಣಜ್ಞಾನಾನಂದ ಶಾಶ್ವತ ಪೂರ್ಣ ಚಿನ್ಮಯ ಪೂರ್ಣ ಮೂಲದಿ ಪೂರ್ಣ ನಂದದಿ ಪೂರ್ಣ ಅವಯವಿ ಪೂರ್ಣಶಕ್ತನೆ ಪೂರ್ಣಬೋಧ ಮುನೀಂದ್ರ ವಂದಿತ ಶರಧಿ ದೇವನೆ ಪೂರ್ಣನಿತ್ಯಾನಂದ ದಾಯಕ ಪೂರ್ಣಮಾಡೈ ಬಯಕೆ ತೂರ್ಣದಿ ನೀನೆ ಸರ್ವಾಧಾರ ಪ್ರೇರಕ ನೀನೆ ರಕ್ಷಕ ಸರ್ವಶಿಕ್ಷಕ ನೀನೆ ಸೀಮಾಶೂನ್ಯ ನಿಶ್ಚಯ ನೀನೆಪೊಗಳಿತನಿಖಿಳವೇದದಿ ನೀನೆ ವಾಚ್ಯನು ಸರ್ವಶಬ್ದದಿ ನೀನೆ ಮುಕ್ತಾಯಕ್ತ ಸೇವಿತ ನೀನೆ ದೋಷವಿದೂರ ಸ್ಥಾಣುವು ನೀನೆ ಸೃಷ್ಟಾ ದ್ಯಷ್ಟಕರ್ತೃವು ನಿನ್ನಸಮ ಉತ್ಕøಷ್ಟರಿಲ್ಲವು ನಿನ್ನ ದಾಸರು ಸರ್ವಜೀವರು ಭಿನ್ನರೈ ಸರ್ವತ್ರ ಸರ್ವರು ನಿನ್ನ ದಾಸರ ಭಾಗ್ಯಬೇಡುವೆ ಜನ್ಮಜನ್ಮಕು ಇದನೆ ಬಯಸುವೆ ನಿನ್ನ ನಂಬಿಹೆ ನಿನ್ನನಂಬಿಹೆ ಸಿರಿಪತಿ ಕೃಷ್ಣವಿಠಲನೇ 3
--------------
ಕೃಷ್ಣವಿಠಲದಾಸರು
ನಿನ್ನಂಥ ಕರುಣಿಗಳಿನ್ನುಂಟೆ ಭುವಿಯಲ್ಲಿ _ ಧನ್ವಂತರೇ ಪ ಚೆನ್ನ ಪ್ರಸನ್ನ ನೀನಾಗುತ ಇವಗಿನ್ನುಘನ್ನ ರೋಗವ ಕಳೆದುನ್ನುತ ಸುಖವೀಯೋ ಅ.ಪ. ಉಪಟಳ - ಕತ್ತರಿಸು ಶೀಘ್ರದೀಹಸ್ತ ಕಲಶಾಮೃತ - ಸ್ರವಿಸಿ ವೇಗದಿ ಅಪಮೃತ್ಯುವ ಹರಿಸಯ್ಯ - ಭಕ್ತಳ ಭರ್ತುವಿನ1 ಆರ್ತರುದ್ಧಾರಿಯೆ - ಭಕ್ತರ ಪರಿಪಾಲಕರ್ತ ಸಂಹರ್ತ - ಮೂರ್ಜಗಕೆಲ್ಲ ನೀನೇನಿತ್ಯಾನಿತ್ಯದ - ಜಗಕೆಲ್ಲ ಸ್ವಾಮಿಯೆಭೃತ್ಯಳ ಮಾಂಗಲ್ಯ - ಘಟ್ಟಿಯೆಂದೆನಿಸೋ 2 ಪ್ರಾಣ ಗುರು ಜಯ - ವಿಠಲ ದಾಸಿಯಪ್ರಾಣನಾಥನ ಪ್ರಾಣ - ಉಳಿಸುವುದೆನುತಪ್ರಾಣ - ಪ್ರಾಣನೆ ಎನ್ನ - ಬಿನ್ನಪವ ಜಗತ್ರಾಣ ಗುರು ಗೋವಿಂದ ವಿಠಲ - ಸಲ್ಲಿಸೋ 3
--------------
ಗುರುಗೋವಿಂದವಿಠಲರು