ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಒಂದು ದಿನದಲಿ ಇಂದಿರೇಶನು ಚಂದದಿಂದಲಿ ವನಕೆ ಬಂದನು ಸುಂದರಾಂಗನು ಗೋಪ ವೃಂದದಿ ನಿಂದು ಕೊಳಲನು ಸ್ವರವಗೈದನು 1 ಕೊಳಲ ಧ್ವನಿಯನು ಕೇಳುತಾಕ್ಷಣ ಖಗಮೃಗಂಗಳು ಮಯ್ಯ ಮರತವು ತರುಣಿ ಮಣಿಯರು ಮನೆಯ ಕೆಲಸಕೆ ಮರತು ಮಯ್ಯನು ತೆರಳಿ ಬಂದರು 2 ಕೊಳಲ ಧ್ವನಿಯನು ಕೇಳಿ ಗೋಪೇರು ನಳಿನನಾಭನ ಬಳಿಗೆ ಬಂದರು ನಳಿನಮುಖಿಯರ ನೋಡಿ ಕೃಷ್ಣನು ಮುಗುಳುನಗೆಯಲಿ ಮಾತನಾಡಿದನು 3 ನಾರಿಮಣಿಯರೆ ರಾತ್ರಿ ವೇಳೆಯು ಈಗ ಇಲ್ಲಿಗೆ ಬಂದಿರೇತಕೆ ಮಾರನಯ್ಯನ ಮಾತುಕೇಳುತ ಮಡದಿ ಮಣಿಯರು ನುಡಿದರಾಗಲೆ4 ಬಾಲಕೃಷ್ಣನೆ ನಿನ್ನ ಕೊಳಲಿನ ಈಗಲೆಮ್ಮಯ ಮನವು ಹರುಷಿಸೆ ಬೇಗ ನಿನ್ನನು ಬೇಡಿಕೊಂಬೆವೊ 5 ಇಂತು ಕೃಷ್ಣನು ಸರಸವಾಡುತ ನಿಂತನವರಿಗೆ ಹರುಷ ತೋರುತ ಚಿಂತೆಯೆಲ್ಲವ ಬಿಟ್ಟು ಗೋಪೇರು ಅಂತರಾತ್ಮನ ಭಜಿಸುತಿದ್ದರು 6 ಏನು ಪುಣ್ಯವೊ ನಮ್ಮದೆನುತಲಿ ದಾನವಾರಿಯ ಸ್ಮರಿಸುತಿದ್ದರು ನಾರೇರೆಲ್ಲರ ನೋಡಿ ಕೃಷ್ಣನು ಬೇಗದಿಂದಲಿ ಅಂತರ್ಧಾನನಾದನು 7 ಸ್ಮರನ ಪಿತನನು ಸ್ಮರಿಸಿಪಾಡುವ ತರುಣಿಯರಿಗೆ ಮೈ ಸ್ಮರಣೆ ಮರೆತಿರೆ ಭರದಿ ಕಂಗಳ ತೆರೆದು ನೋಡಲು ಮುರಳೀಧರನ ಕಾಣದಲೆ ಚಿಂತಿಸಿ 8 ಜಾಜಿ ಸಂಪಿಗೆ ಸೂಜಿ ಮಲ್ಲಿಗೆ ರಾಜೀವಾಕ್ಷನ ಕಾಣಲಿಲ್ಲವೆ ಬಿಳಿಯ ಮಲ್ಲಿಗೆ ಎಳೆಯ ತುಳಸಿಯೆ ನಳಿನನಾಭನ ಸುಳಿವು ಕಾಣಿರಾ 9 ಸರಸದಿಂದಲಿ ಹರಿವ ಯಮುನೆಯೆ ಪಾದ ಕಾಣೆಯಾ ಚಿಗರಿ ಮರಿಗಳೆ ನಿಮ್ಮ ಕಂಗಳು ನಳಿನನಾಭನ ಸುಳವು ಕಾಣವೆ 10 ಯಾರ ಕೇಳಲು ಹರಿಯ ಕಾಣರು ನಾರಿಮಣಿಯರೆ ನಾವೆ ಕರೆಯುವ ಮುದ್ದು ಕೃಷ್ಣನೆ ಪದ್ಮನಾಭನೆ ಶ್ರದ್ಧೆಯಿಂದಲಿ ನಿಮ್ಮ ಭಜಿಪೆವೊ 11 ಜಯತು ಜಯತು ಶ್ರೀ ಲಕ್ಷ್ಮೀ ರಮಣನೆ ಜಯತು ಜಯತು ಶ್ರೀ ಗರುಡಗಮನನೆ ಜಯತು ಜಯತು ಶ್ರೀ ಉರಗಶಯನನೆ ಜಯತು ಜಯತು ಶ್ರೀ ಪರಮ ಪುರುಷನೆ 12 ಜಯತು ಜಾಹ್ನವಿಜನಕÀ ಶ್ರೀಶನೆ ಜಯತು ಭಕ್ತರ ಭಯವಿನಾಶನೆ ಜಯತು ಪಾವನ ಪುಣ್ಯ ಚರಿತನೆ ಜಯತು ಜಯತು ಲಾವಣ್ಯರೂಪನೆ 13 ಎಳೆಯ ಚಿಗುರಿನಂತಿರುವ ಪಾದವು ರುಳಿಯ ಗೆಜ್ಜೆಯು ಕಾಲಪೆಂಡೆಯು ಎಳೆಯ ಪಾದದಿ ಹೊಳೆವ ಪೈಜನಿ ಘಲಿರು ಘಲಿರು ಎಂದೆನುತ ಮೆರೆವುದು 14 ಪುಟ್ಟ ನಡುವಿಗೆ ಪಟ್ಟೆ ಮಡಿಗಳು ಇಟ್ಟ ಚಲ್ಲಣ ಪುಟ್ಟ ಕೃಷ್ಣಗೆ ಉಡುಗೆಜ್ಜೆಯು ಗಂಟೆ ಸರಪಳಿ ಒಪ್ಪಿ ಮೆರೆಯುವ ಕಾಂಚಿಧಾಮವು 15 ಚತುರ ಹಸ್ತದಿ ಶಂಖುಚಕ್ರವು ಗದೆಯು ಪದುಮವು ಹೊಳೆಯುತಿರುವುದು ಕಡಗ ಕಂಕಣ ತೋಳ ಬಾಪುರಿ ವಜ್ರದೊಂಕಿಯು ಮೆರೆಯುತಿರುವುದು 16 ಕೌಸ್ತುಭ ವೈಜಯಂತಿಯು ಸುರಗಿ ಸಂಪಿಗೆ ಸರಗಳೊಲಿಯುತ ಎಳೆಯ ತುಳಸಿಯ ಸರಗಳೊಪ್ಪುತ ಜರದವಲ್ಲಿಯು ಜಾರಿ ಬೀಳಲು 17 ವÀಕ್ಷ ಸ್ಥಳದಿ ಶ್ರೀಲಕ್ಷ್ಮಿ ಒಪ್ಪಿರೆ ರತ್ನ ಪದಕಗಳೆಲ್ಲ ಶೋಭಿಸೆ ಮಕರ ಕುಂಡಲ ರತ್ನದ್ಹಾರಗಳಿಂದ ಒಪ್ಪಿರೆ 18 ಗುರುಳು ಕೂದಲು ಹೊಳೆವೊ ಫಣೆಯಲಿ ತಿಲುಕ ಕಸ್ತೂರಿ ಶೋಭಿಸುತ್ತಿರೆ ಎಳೆಯ ಚಂದ್ರನ ಪೋಲ್ವ ಮುಖದಲಿ ಮುಗುಳು ನಗೆಯು ಬಾಯ್ದಂತ ಪಂಕ್ತಿಯು 19 ಪದ್ಮನೇತ್ರಗಳಿಂದ ಒಪ್ಪುತ ಪದ್ಮ ಕರದಲಿ ಪಿಡಿದು ತಿರುವುತ ಪದ್ಮಲೋಚನೆಯನ್ನು ನೋಡುತ ಪದ್ಮನಾಭನು ಕೊಳಲನೂದುತ 20 ರತ್ನ ಮುತ್ತಿನ ಕಿರೀಟ ಶಿರದಲಿ ಮತ್ತೆ ನವಿಲಿನ ಗರಿಗಳೊಪ್ಪಿರೆ ಹಸ್ತಿ ವರದನು ಎತ್ತಿ ಸ್ವರವನು ಮತ್ತೆ ಕೊಳಲನು ಊದೊ ದೇವನೆ 21 ಸುಂದರಾಂಗನೆ ಮಂದಹಾಸನೆ ಮಂದರೋದ್ಧರ ಬಾರೋ ಬೇಗನೆ ಇಂದಿರೇಶನೆ ಇಭರಾಜವರದನೆ ರಂಗನಾಥನೆ ಬಾರೊ ಬೇಗನೆ22 ಮದನ ಮೋಹನ ಪಾರಮಹಿಮನೆ ಬಾರೊ ಬೇಗನೆ ಶ್ರೀರಮಾಪತೆ ಶ್ರೀ ನಿಕೇತನ ವಾರಿಜಾಕ್ಷನೆ ಬಾರೊ ಬೇಗನೆ 23 ಹೀಗೆ ಗೋಪೇರು ಮೊರೆಯನಿಡುತಿರೆ ಮಂಗಳಾಂಗನು ಬಂದನೆದುರಿಗೆ ಧ್ವಜ ವಜ್ರಾಂಕುಶ ಪದ್ಮ ಪಾದವು ಅಡಿಯನಿಡುತಿರೆ ಧರಣಿ ನಲಿವಳು 24 ಹರಿಯ ನೋಡುತ ಪರಮ ಹರುಷದಿ ತರುಣಿಮಣಿಯರು ಹರುಷ ಪಡುತಲಿ ಪರಮ ಮಂಗಳ ಚರಿತ ದೇವಗೆ ಸ್ವರವನೆತ್ತಿ ಮಂಗಳವ ನುಡಿದರು 25 ಶುಭ ಕಂಬು ಕಂಠಗೆ ಮಂಗಳಂ ಮಹಾ ಮಾರನಯ್ಯಗೆ ಮಂಗಳಂ ಮಹಾ ಮುದ್ದುಕೃಷ್ಣಗೆ ಮಂಗಳಂ ಜಯ ಮಂಗಳಾಂಗಗೆ 26 ಕಮಲ ಮುಖಿಯರು ನಮಿಸಿ ಕೃಷ್ಣಗೆ ಸರಸವಾಡುತ ಹರುಷ ಪಡುತಲಿ ಕಮಲನಾಭ ವಿಠ್ಠಲನ ಕೂಡುತ ಮನದಿ ಸುಖವನು ಪಡುತಲಿದ್ದರು 27
--------------
ನಿಡಗುರುಕಿ ಜೀವೂಬಾಯಿ
ಬಂದನಿದಕೋ ರಂಗ ಬಂದನಿದಕೋ ಸುಂದರಾಂಗನು ನಮ್ಮ ಮಂದಿರಕೆ ಈಗಾ ಪ. ಮುಗಳುನಗೆ ಮುಖದಲ್ಲಿ ಮುಂಗುರುಳು ನವಿಲುಗರಿ ಕಂಬು ಕಂಠಾ ಝಗ ಝಗಿಪ ಕುಂಡಲವು ಕಸ್ತೂರಿ ತಿಲಕ ಫಣಿ ನಗಧರನು ನಮ್ಮ ಮನಸೂರೆಗೊಂಬುದಕೇ 1 ಕರದಲಿ ಕಂಕಣವು ಬೆರಳಲ್ಲಿ ಉಂಗುರವು ಕೊರಳಲ್ಲಿ ನವರತÀ್ನ ಮುತ್ತಿನಹಾರಗಳೂ ಕಿರುಗೆಜ್ಜೆ ನಡುವಿನಲಿ ವಲಿವೋ ಪೀತಾಂಬರವು ವರ ವೇಣು ವಯ್ಯಾರದಿಂದ ಊದುತಲೀ 2 ಸುರರ ವಂಚನೆಗೈದು ವರ ಋಷಿಗಳನೆ ಜರಿದು ಸಿರಿಗಗೋಚರನೆನಿಸಿ ಪರಮ ಪುರುಷಾ ವರಧಾಮತ್ರಯಗಳನೂ ಮರದೆಮ್ಮ ಗೋಕುಲದಿ ಚರಿಯ ತೋರೀ 3 ಇಂದಿರೇಶನು ನಮ್ಮ ವೃಂದಾವನದೊಳಿಪ್ಪ ಮಂದಿಗಳ ಮನ ಸೆಳೆದು ಮಾರಜನಕಾ ಒಂದೊಂದು ರೂಪಿನಲಿ ಗೋಪಿಕಾ ಸ್ತ್ರೀಯರೊಳು ಬಂದು ಬೆರೆಯುವ ಮದನಕಲೆ ನಿಪುಣ ಚೆಲುವಾ 4 ಗೋವರ್ಧನೋದ್ಧಾರ ಗೋವಳರ ವಡಗೂಡಿ ಗೋಪಿ ಬಾಲಾ ಗೋವಿಂದ ಗೋಪಾಲಕೃಷ್ಣವಿಠಲ ನಮ್ಮ ಪೂರ್ವ ಪುಣ್ಯದ ಫಲದಿ ಭೂವನಿತೆ ಪಾಲಾ 5
--------------
ಅಂಬಾಬಾಯಿ
ಬಂದಾ ಬಂದಾ ಉಡುಪಿಲಿ ನಿಂದ ನಿಂದಾ ಪ. ಬಂದ ಗೋಪೇರ ವೃಂದಗಳ ತಾ ನಂದು ದಣಿಸುತ ಸುಂದರಾಂಗನು ಮಂದರೋದ್ಧರ ಬೃಂದೆಯಿಂದಲಿ ಅ. ಮುದ್ದುಸುರಿಸುತ ಗೋಕುಲದೊಳಿರೆ ಕದ್ದು ಬೆಣ್ಣೆಯ ತಿಂದನೆನುತಲಿ ಸುದ್ದಿ ತಾಯಿಗೆ ಪೇಳಿ ಸತಿಯರು ಗದ್ದಲದಿ ತನ್ನ ಗಾರು ಮಾಡಲು ಮುದ್ದು ಯತಿಗಳು ಎದ್ದು ಪೂಜಿಸಿ ಮುದ್ದಿ ಬೆಣ್ಣೆ ನೇವೇದ್ಯವಿಡುತಿರೆ ಸದ್ದು ಇಲ್ಲದೆ ತಿಂದು ಸುಖದಲಿ ಇದ್ದೇನೆಂಬುವ ಬುದ್ಧಿಯಿಂದಲಿ 1 ಭಾರವಿಳುಹಲು ಕೋರೆ ಭೂಮಿಯು ನಾರದಾದ್ಯರ ನುತನು ತಾ ಬರೆ ನಾರಿಯರು ಮನ ಬಂದ ತೆರದಲಿ ಜಾರ ಚೋರನೆನುತ್ತ ಬೈಯ್ಯಲು ಧೀರ ಯತಿಗಳು ಸೇರಿ ಪರಬೊಮ್ಮ ಶ್ರೀರಮಣನೆನ್ನುತ ಸ್ತುತಿಸುವೋ ವಾರುತಿಗೆ ಮೈದೋರಿ ಭಕುತರ ಪಾರಿಗಾಣಿಪೆನೆಂಬ ನೆವದಲಿ 2 ಹಸಿದುಗೋಪರÀ ಯಜ್ಞವಾಟಕೆ ಅಶನ ಬೇಡಲು ಕಳುಹೆ ಗೊಲ್ಲರ ಪಸುಳರಿಗೆ ನೈವೇದ್ಯವಿಲ್ಲದೇ ವಶವೆ ಕೊಡಲೆಂದೆನ್ನೆ ಋಷಿಗಳು ವಸುಧಿಪತಿ ಸರ್ವೇಶನೆಂದರಿ ದಸಮಯತಿಗಳು ಕ್ಷಣ ಕ್ಷಣಕ್ಕೆ ಷ ಡ್ರಸದ ಆರೋಗಣೆಯ ಮಾಡಿಸೆ ಕುಶಲದಲಿ ಮೃಷ್ಟಾನ್ನ ಭುಜಿಸಲು 3 ಬಾಲ ಕಂದಗೆ ತೊಡಿಗೆ ತೊಡಿಸಲು ಲೀಲೆಯಿಂದಲಿ ಗೋಪಿದೇವಿಯು ಕಾಳ ಮಡುವಿಲಿ ಧುಮಿಕಿ ಎಲ್ಲವ ಕಳೆದು ಬರೆ ಆಟಗಳ ಪರೆವೆಲಿ ಶೀಲಯತಿಗಳು ವಾರ ವಾರಕೆ ಬಾಲ ತೊಡಿಗೆ ಶೃಂಗಾರಗೈಯ್ಯಲು ಆಲಯವ ಬಿಟ್ಟೆಲ್ಲಿ ಪೋಗದೆ ಓಲಗವ ಕೈಕೊಳ್ವೆನೆನ್ನುತ 4 ಗೋಪಜನ ಗೋವ್ಗಳನೆ ಕಾಯಲು ಗೋಪಿಯರು ತನ್ನ ಗುಲ್ಲು ಮಾಡಲು ಪಾಪಿ ಕಂಸ ಅಟ್ಟುಳಿಯ ಪಡಿಸಲು ಭೂಪತಿಯ ಪದವಿಲ್ಲದಿರಲು ಈ ಪರಿಯ ಬವಣೆಗಳ ತಾಳದೆ ಗೋಪ್ಯದಿಂದಿಲ್ಲಡಗಿ ನಿಂತು ಗೋಪಾಲಕೃಷ್ಣವಿಠಲ ಯತಿಗಳ ಗೌಪ್ಯಪೂಜೆಯಗೊಂಬ ವಿಭವಕೆ 5
--------------
ಅಂಬಾಬಾಯಿ
ಬಂದಾನು ಬಂದಾನು ಪ ಬಂದನಾಗ ಗೋವಿಂದ ಯದುಕುಲಾ ನಂದ ಮುಕುಂದನು ಮಂದಹಾಸದಲಿ ಅ.ಪ. ಬೀದಿ ಬೀದಿಯೊಳು ಬಲು ಶೃಂಗಾರ ಬಗೆ ಬಗೆ ತೋರಣದಿಂದಲಂಕಾರ ಕಾದುನಿಂತಿಹ ಜನ ಪರಿವಾರ ಮೋದದಿ ಮಾಡುವ ಜಯ ಜಯಕಾರ ಮೇದಿನಿ ಸುರರಾಮ ಮಂತ್ರದ ಉಚ್ಚಾರ ಸೌಧಗಳಲ್ಲಿಹ ಸ್ತ್ರೀಯರಪಾರ ಸಾಧರದಿಂದೀಕ್ಷಿಸೆ ಜನನಿ ಕರವು ಮೋದವೆ ಬೀರುತ ಯಾದವ ಕುಲಮಣಿ 1 ಸುಂದರಿಯರು ನಲವಿಂದ ನಿಂದಿಹರು ಗಂಧ ಪರಿಮಳದ ಜಲವೆರಚಿಹರು ಅಂದದರಳ ಪುಷÀ್ಪಗಳ ವರ್ಷಿಪರು ಕುಂದಣದಾರತಿಗಳ ಪಿಡಿದಿಹರು ವಂದಿಮಾಗಧರು ಪೊಗಳುತಿಹರು ಚಂದದಿ ಮಣಿಮಯ ಸ್ಯಂದನದಲಿ ಅರ ವಿಂದ ನಯನ ಬಲು ಸುಂದರಾಗನು 2 ಬಂಗಾರದ ರಥವೇರಿ ಬರುತಿಹನು ಕಂಗಳಿಗುತ್ಸವ ತಾ ತರುತಿಹನು ಮಂಗಳಕರ ತಿಲಕವನಿಟ್ಟಿಹನು ಬಂಗಾರದ ಮಕುಟ ಧರಿಸಿಹನು ಶೃಂಗಾರದ ಶಿಸ್ತಲಿ ಶೋಭಿಪನು ಅಂಗಜಕೋಟಿ ನಿಭಾಂಗನಾಗಿಹನು ಮಂಗಳಾಂಗ ಶ್ರೀರಂಗ ಕರಿಗಿರಿ ನೃಸಿಂಗನು ಕರುಣಾಪಾಂಗವ ಬೀರುತ 3
--------------
ವರಾವಾಣಿರಾಮರಾಯದಾಸರು