ಒಟ್ಟು 9 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀವೇಂಕಟೇಶ ಸುಪ್ರಭಾತ ಶ್ರೀವೆಂಕಟೇಶಂಗೆ ಜಯ ಸುಪ್ರಭಾತ ದೇವಾದಿದೇವಂಗೆ ನವಸುಪ್ರಭಾತ ಪ ಪಾವನ ಶರೀರಂಗೆ ಜಯ ಸುಪ್ರಭಾತ ದೇವಪರಮಾತ್ಮಂಗೆ ನವಸುಪ್ರಭಾತ ಅ.ಪ ಅಂದು ಕೌಸಲ್ಯೆಯಣುಗ ರಾಮಾ ಏಳು ಎಂದಿನಂತೆ ಆಹ್ನಿಕವ ಮಾಡೆಂದು ನುಡಿಯಾ ಮುಂದೆ ವಿಶ್ವಾಮಿತ್ರ ಮುನಿ ರಾಮಭದ್ರಂಗೆ ಮಂದಹಾಸದಿ ಪೇಳ್ದ ಸರಯೂಬಳಿಯಲ್ಲಿ 1 ಎದ್ದೇಳು ಗೊವಿಂದ ಗರುಡಧ್ವಜಸ್ವಾಮಿ ಉದ್ಧರಿಸ ಬೇಕಯ್ಯ ಕರುಣಾಂತರಂಗ ಎದ್ದೇಳು ಚೈತನ್ಯ ಪುಣ್ಯದಾತ [ಎದ್ದೇಳು ಕಮಲಾಕಾಂತರಂಗ] 2 ಮಧುಕೈಟಭಾರಿಯಾ ವಕ್ಷಸ್ಥಲದಲಿ ನಿಂದ ಹದಿನಾಲ್ಕು ಲೋಕಗಳ ಮಾತೆಯೆನಿಸಿ ಪದುಮಾಕ್ಷಿ ಲಕ್ಷ್ಮೀಗೆ ಜಯಸುಪ್ರಭಾತ 3 ಸರ್ವಭುವನೇಶ್ವರಿ ಸರ್ವ ಭಕ್ತಂಕರಿ ಸರ್ವಲೋಕ ವಿಖ್ಯಾತೆ ಜಾತೆ ವಿನೀತೇ ಸರ್ವಲೋಕೇಶನ ರಾಣಿ ಕಲ್ಯಾಣಿ ಸರ್ವಸನ್ನುತೆ ನಿನಗೆ ಸುಪ್ರಭಾತ 4 ಸಪ್ತರ್ಷಿ ಮಂಡಲವು ಔಪಾಸನೆಯಾಗೆ ತೃಪ್ತರಾಗಿರುತಿಹರು ನಭದ ನದಿಯೊಳು ವ್ಯಾಪ್ತವಾದಖಿಳ ಕರಪುಷ್ಪಗಳ ಅರ್ಪಿಸಿ ಒಪ್ಪಿರ್ಪರೇಳೇಳು ವೆಂಕಟೇಶ 5 ಅಜ ನಿರಂಜನ ಸ್ಮರಿಸಿ ತ್ರೈವಿಕ್ರಮನ ಚರಿತೆಗೇಳು ಶಿರಬಾಗಿ ವಂದಿಪರು ಗುರು ಶುಭವ ಪೇಳುವನು ವರದರಾಜ ಏಳು ವೇಂಕಟೇಶ 6 ಈಗ ವಿಕಸಿತವಾದ ಕಮಲಸೌರಭದೊಡನೆ ರಾಗ ರಸ ತಂಪಿಂಪು ಮಿಳಿತಮಾಗಿ ಸಾಗುತಿದೆ ತಂಗಾಳಿ ಉಲ್ಲಾಸಮಂ ಬೀರಿ ತ್ಯಾಗಿ ನೀನೇಳಯ್ಯ ವೇಂಕಟೇಶ 7 ಕದಳಿ ಖರ್ಜೂರಗಳ ರಸಯುಕ್ತ ಪಾಯಸ ಮುದದಿ ಸಂಸೇವಿಸುತ ಉತ್ಸಾಹದೀ ಮಧುರ ಗಾನವ ಪಾಡಿ ಶುಕಪಿಕಗಳುಲಿಯುತಿವೆ ಪದುಮನಾಭ ಏಳು ವೇಂಕಟೇಶ 8 ದೇವರ್ಷಿನಾರದನು ಮಹತಿ ವೀಣೆಯ ನುಡಿಸಿ ದೇವದೇವನೆ ನಿನ್ನ ನುತಿಸುತಿಹನು ಭಾವರಸಯುತವಾದ ಗಾನಕೇಳುತಿಹುದು ಪಾವನಾತ್ಮನೇ ಏಳು ವೇಂಕಟೇಶ 9 ಸುರಿವ ಮಕರಂದವನು ಹೀರಿ ಹೀರಿ ಅರುಣನುದಯವ ತಿಳಿದು ಅರಳುತಿಹ ಕಮಲದಿಂ ಸರಸರನೆ ಝೇಂಕರಿಸಿ ಬರುತಿರ್ಪುವೈ ಸಿರಿಯ ದುಂಬಿಗಳೇಳು ವೆಂಕಟೇಶ 10 ಮಡದಿಯರು ಕೆನೆಮೊಸರನಾಂತ ಭಾಂಡಗಳಲ್ಲಿ ಕಡೆಗೋಲಿನಿಂ ಮಥಿಸಿ ಹಾಡುತಿಹರು ಅಡಿಗಡಿಗೆ ಜಯ ಘೋಷ ಕೇಳುತಿದೆಯಯ್ಯ ಪೊಡವೀಶ ನೀನೇಳು ವೇಂಕಟೇಶ 11 ಕಮಲದಿಂದೈತಂದ ದುಂಬಿಗಳು ಸುತ್ತಲಿನ ಕುಮುದಗಳ ಮೈಗಪ್ಪಿ ಝರಿಝರಿ ಗರ್ವದಿ ಅಮರ ದುಂದುಭಿಯಂತೆ ಝೇಂಕರಿಸುತಿವೆಯಿದೋ ವಿಮಲಾಂಗ ನೀನೇಳು ವೇಂಕಟೇಶ 12 ಶ್ರೀರಮೆಯ ನಿತ್ಯಯೋಗಸ್ಥಾನ ಹೇಸ್ವಾಮಿ ಭೂರಿಭಕ್ತರ ಕಾಯ್ವ ಕರುಣಾನಿಧೇ ಸ್ವಾಮಿ ಮೂರು ಲೋಕವನಳೆದು ಪಾಲಿಸುವ ಸ್ವಾಮಿ ಮಾರಮಣ ನೀನೇಳು ವೇಂಕಟೇಶ 13 ಅಜ ರುದ್ರ ಸನಕಾದಿ ಪರಮ ಭಕ್ತರ ಬಂಧು ಭಜಿಸಿ ತವ ದರ್ಶನವ ಕಾಯುತಿಹರು ವಿಜಯ ಜಯರೀರ್ವರು ತಡೆಯುತ್ತಲಿಹರಯ್ಯ ಗಜವಿನುತ ನೀನೇಳು ವೇಂಕಟೇಶ 14 ಶೌರಿ ನಿನ್ನಾವಾಸ ತಾಣ ವೈಕುಂಠದಿಂದ ನಾರಾಯಣಾದ್ರಿ ಗರುಡಾದ್ರಿ ಎಂತೆಂಬ ಆರೇಳು ನಾಮಗಳ ಪೇಳ್ವರಿದು ಶೇಷಾದ್ರಿ ಸಾರತರ ನಾಮವೈ ವೇಂಕಟೇಶ 15 ಭುವಿಯ ಗೋಪಾಲಕರು ಅನುಮತಿಯ ಬೇಡುವರು ರವಿಯಗ್ನಿಯುಕ್ತ ನವಗ್ರಹಗಳು ಕಾದಿಹರು ಭವದೂರನೇ ನಿನಗೆ ಸುಪ್ರಭಾತ 16 ದಿವಿಮೋಕ್ಷ ಬೇಡ ತವದರ್ಶನವು ಸಾಕೆಂದು ನವಭಕ್ತಿಯಿಂ ತಳೆದು ಭಜನೆ ಮಾಡುತಿಹರು ಪವಮಾನನುತ ನಿನಗೆ ಸುಪ್ರಭಾತ 17 ನಿನ್ನ ಧಾಮದ ಶಿಖರ ವೀಕ್ಷಣೆಯೊಳಾನಂದ ವನ್ನು ಪಡುತಿಹರೆಲ್ಲ ಶರಣ ಜನರು ನಿನ್ನ ದರ್ಶನವೊಂದೆ ಪರಮ ಪದವದನು ಸನ್ನುತಾಂಗನೆ [ತೋರೇಳು]ಸುಪ್ರಭಾತ 18 ಭೂಮಿಪತಿ ಕರುಣಾಂಬುಸಾಗರನೆ| ಧೀರ ಶೂರಾನಂತ ಗರುಡ ವಿಷ್ವಕ್ಸೇನ ರಾರಾಜಿಸುತ್ತಿಹರು ನಿನ್ನ ದರ್ಶನಕಾಗಿ ನಾರಾಯಣಾ ನಿನಗೆ ಸುಪ್ರಭಾತ|| 19 ಕಮಲನಾಭ ದೇವ ಪುರುಷೋತ್ತಮಾ ಸ್ವಾಮಿ ಅಮಲಸದ್ಗುಣಧಾಮ ಕೃಷ್ಣ ವೈಕುಂಠ ಸುಮಬಾಣಕೋಟಿ ಸೌಂದರ್ಯನುತ ಮಾರಮಣ ಕಮಲನಯನಾ ನಿನಗೆ ಸುಪ್ರಭಾತ|| 20 ದೀನರಕ್ಷಣೆಗಾಗಿ ಹತ್ತುಜನ್ಮದಿ ಬಂದೆ ಮಾನವ ಶ್ರೇಷ್ಠರೂ ಆಕಾಶಗಂಗೆಯಲಿ ನಾನಾ ಸುಗಂಧಗಳ ಬೆರೆಸಿ ಕಾಯುತ್ತಿಹರು ಭಾನುತೇಜನೆ ನಿನಗೆ ಸುಪ್ರಭಾತ 21 ದಿನಪನುದಯಿಸುತ್ತಿಹನು ಕಮಲವರಳುತ್ತಿಹುದು ಬನದ ಪಕ್ಷಿಗಳೆಲ್ಲ ಹಾಡುತ್ತಲಿಹವು ಘನವೈಷ್ಣವರು ಮಂಗಳಂಗಳಂ ಪಾಡುವರು ಮನುಜಪುಂಗವ ನಿನಗೆ ಸುಪ್ರಭಾತ 22 ಕಮಲಜಾದ್ಯಮರರೂ ಸಪ್ತರ್ಷಿಯೋಗಿಗಳು ವಿಮಲ ಮಾನಸರಾಗಿ ನಿನಗಾಗಿ ಕಾದಿಹರು ತಿಮಿರಸಾಗರವನ್ನು ದಾಟಿಸುವ ಪರಮಾತ್ಮ ಕಮನೀಯಗುಣ ನಿನಗೆ ಸುಪ್ರಭಾತ|| 23 ಭಾವನೆಯೊಳೀಯದ್ರಿ ವೈಕುಂಠವಾಗಿಹುದು ಮಾವನಿತೆಯುಪಚಾರದಭ್ಯರ್ಥಿಯಾಗಿಹಳು ಶ್ರೀವೈಷ್ಣವ ಕೇಳು ಕೈಮುಗಿದು ಕಾದಿಹರು ಕಾವಕಾರುಣ್ಯನಿಧಿ [ನಿನಗೆ ಸುಪ್ರಭಾತ] 24 ಅರುಣೋದಯದೊಳೆದ್ದು ಈ ಸುಪ್ರಭಾತವನು ಪರಮ ಭಕ್ತಿಯೊಳೊಮ್ಮೆ ಪಾಡುವರಿಗೆ ಪರಮಪುರುಷನು ದಿವ್ಯತಾಣವನು ನೀಡುವನು ಹಿರಿಯರಾ ವಚನವಿದು ಪರಮ ಚರಿತಾರ್ಥ25 ಶರಣಾಗತಿ ಒಂದೆರಡು ಮೂರು ನಾಲ್ಕೈದಾರು ಮೊಗದವರು ಬಂದು ವಂದಿಸುತಿಹರು ಪುರುಷೋತ್ತಮ ಬಂಧುರ ಶರೀರನೀ ಪಾಲಿಸೆಮ್ಮ ವೆಂಕಟೇಶ 26 ನಾನಾಪರಾಧಗಳ ಮಾಡಿರುವೆನಯ್ಯ ನೀನೆಲ್ಲವನು ಕ್ಷಮಿಸಿ ಪರಿಪಾಲಿಸಯ್ಯ ನೀನೇ ಸರ್ವಾಧಾರ ಕರುಣಾಂತರಂಗನು ದಾನಶೀಲಾ ಸ್ವಾಮಿ ಶ್ರೀವೇಂಕಟೇಶ 27 ಗೋಪಿಕಾ ಪರಿವೃತನೆ ಪರವಾಸುದೇವನೆ ಗೋಪಿಕಾ ಗೀತಗುಣ ಸಂಪೂಜ್ಯ ದೇವನೆ ಗೋಪಿಕಾ ಮನ್ಮಥನೆ ದೈತ್ಯಾರಿ ಶ್ರೀಕೃಷ್ಣ ನೀ ಪೊರತು ಬೇರೆ ದೇವರ ಕಾಣೆ ವೆಂಕಟೇಶ28 ದಶರಥನ ಸುತನಾಗಿ ಜಾನಕಿಯ ಕರವಿಡಿದು ದಶಮುಖಾದ್ಯಸುರರನು ಸಂಹರಿಸಿದಾತ ಶಶಿಮೌಳಿ ವಂದ್ಯನೆ ಲೋಕಮೋಹನ ಸ್ವಾಮಿ ಕ್ಲೇಶಗಳ ಸಹಿಸಿ ಶಾಶ್ವತ ಸುಖವ ನೀಡಯ್ಯ ವೆಂಕಟೇಶ 29 ಕಂಜಾಯತಾಕ್ಷಿಯೆ ಸರ್ವಲೋಕ ಶರಣೇ ಕಂಜವದನೆಯೆ ಸರ್ವವಾತ್ಸಲ್ಯ ಪೂರ್ಣೇ ಕಂಜನಾಭನ ದಿವ್ಯ ವಕ್ಷಸ್ಥಲಾವಾಸಿ ಕಂಜಸರ್ವಾಂಗಿ ಪೊರೆ ಪುಣ್ಯಚರಿತೆ ಶ್ರೀಯೆ 30 ಸರ್ವಲೋಕ ಶರಣ್ಯ ಸರ್ವಗುಣ ಸಂಪೂರ್ಣ ಸರ್ವದೇವರದೇವ ವೇದವಂದಿತ ಸರ್ವಕಾರುಣ್ಯನಿಧಿ ಸರ್ವಾತ್ಮ ಸಂಚಾರಿ ಸರ್ವಪೂಜಿತ ನಿನಗೆ ಶರಣು ವೆಂಕಟೇಶ 31 ರಕ್ಷಿಸು ಜಗನ್ಮಯ ರಕ್ಷಿಸು ದಯಾಮಯ ರಕ್ಷಿಸು ಮನೋಮಯಾ ಮಾಯ ನಿರ್ಮಾಯ ರಕ್ಷಿಸೈ ಸರ್ವಜ್ಞ ಸರ್ವಲೋಕಾಧ್ಯಕ್ಷ ರಕ್ಷಸೈ ಹರಿ ನಿನ್ನ ಚರಣ ವೆಂಕಟೇಶ 32 ಆವನಾದಿಯನಂತನೆಂದೆನಿಪನೊ ವರವ ಈವ ಕರುಣಾಳುವೋ ಜೀವರಾಶಿಯನೆಲ್ಲ ಕಾವನೋ ಸಹಸ್ರಾಕ್ಷನೆಂದೆನಿಪ ದೇವನಾ ಶ್ರೀವನಜ ಪದವೆನಗೆ ಶರಣು ವೆಂಕಟೇಶ 33 ವೇದಗಳ ತಂದು ಮಂದರವೆತ್ತಿ ಹರಿಯ ಮೇದಿನಿಯ ನಳೆದ ಭಾರ್ಗವನಾದ ರಾಮನೀ ನಾದೆ ಕಂಸನಕೊಂದೆ ಗೋಪಾಲಕೃಷ್ಣ ನಾದ ಕಲ್ಕೀ ನಿನ್ನ ಚರಣ ವೆಂಕಟೇಶ34 ಮೂರು ವೇಣಿಗಳುಳ್ಳ ಗಂಗೆ ಪುಟ್ಟಿದ ಪಾದ ಮೂರು ಲೋಕವನಳೆದ ಸುಪ್ರಸಿದ್ಧದ ಪಾದ ಮೂರು ಕಣ್ಣಾಂತವನು ಜಪಿಸುತಿರುವ ಪಾದ ಚಾರುತರ ಪದವೆನಗೆ ಶರಣು ವೆಂಕಟೇಶ 35 ಕಾಳಿಂಗನಾ ಹೆಡೆಯ ತುಳಿದು ಕುಣಿದಾ ಪಾದ ಖೂಳ ಶಕಟನನೊದ್ದು ಕೊಂದ ಪಾದ ಚೋಳರಾಯನು ತೊಳೆದು ವಂದಿಸಿದ ಪಾದ ನಾಳೀಕ ಪದವೆನಗೆ ಶರಣು ವೆಂಕಟೇಶ36 ಕ್ಷೀರವಾರಿಧಿತನುಜೆಯೊಪ್ಪಿ ವೊತ್ತುವ ಪಾದ ನಾರದಾದಿಗಳೆಲ್ಲ ಪಿಡಿದು ನಲಿವಾ ಪಾದ ಶ್ರೀರಮಣಿ ಮುದದಿಂದ ಕಣ್ಗೊತ್ತುವ ಪಾದ ಮಾರಮೋಹಕ ನಿನ್ನ ಚರಣ ವೆಂಕಟೇಶ37 ಮಂಗಳ ಕಲ್ಯಾಣ ರೂಪಂಗೆ ಅದ್ಭುತಾಕಾರಂಗೆ ಮಾಲ್ಯಪೀತಾಂಬರಾಂಗದ ಶೋಭಿತಂಗೆ ಶಾಲ್ಯನ್ನ ಸಂಪ್ರೀತ ಶ್ರೀ ವೇಂಕಟೇಶಂಗೆ ಬಾಲ್ಯಕುಂದದವಂಗೆ ಜಯಮಂಗಳ 38 ಭಕ್ತಪರಿಪಾಲಂಗೆ ಜಗದಾದಿ ಮೂಲಂಗೆ ಭಕ್ತಿದಾತಾರಂಗೆ ರಮೆಯರಸಂಗೆ ಮುಕ್ತಿ ಸೌಖ್ಯವನೀವ ಶ್ರೀವೇಂಕಟೇಶಂಗೆ ಶಕ್ತಿ ಸ್ವರೂಪಂಗೆ ಶುಭಮಂಗಳ 39 ಶೇಷಾದ್ರಿ ವಾಸಂಗೆ ದಿನಕರ್ತ ಭಾಸಂಗೆ ಕ್ಲೇಷದಾರಿದ್ರ್ಯಾದಿ ಪರಿಹಾರ ಕರ್ತಂಗೆ ಶೇಷ ಪಂiÀರ್iಂಕಂಗೆ ಶ್ರೀ ಶ್ರೀನಿವಾಸಂಗೆ ದೋಷಾಪಹಾರಂಗೆ ಜಯಮಂಗಳ 40 ಅರವಿಂದ ವದನಂಗೆ ಅರವಿಂದ ಲೋಚನಗೆ ಅರವಿಂದನಾಭನಿಗೆ ಅರವಿಂದ ಗಾತ್ರಗೆ ಅರವಿಂದ ಪಾದನಿಗೆ ಅರವಿಂದ ಭೂಷನಿಗೆ ಅರವಿಂದ ಹಸ್ತಂಗೆ ಶುಭಮಂಗಳಂ 41 ಹಿಂದಿನಾಚಾರ್ಯರಿಗೆ ಮುನಿಮುಖ್ಯಭಕ್ತರಿಗೆ ಇಂದಿನಾ ಭೂದೇವಿ ನೀಳಾದಿ ವಧುಗಳಿಗೆ ಮಂದಾಕಿನೀಧರಗೆ ಇಂದ್ರ ದಿಕ್ಪಾಲರಿಗೆ ವಂದಿಪೆನು ಮಂಗಳಾಚರಣೆ ಮಾಡಿ 42 ಫಲಶ್ರುತಿ ಹನ್ನೆರಡು ಮಾಸವು ತಪ್ಪದೆ ಹಾಡಿದರೆ ಮುನ್ನಮಾಡಿದ ಪಾಪವೆಲ್ಲ ಕಳೆಯುವುದು ಪನ್ನಗಾರಿಧ್ವಜನ ಕರುಣೆಯೊದಗುವುದು ಬನ್ನಗುಡುವನರಕಬಾಧೆ ತಪ್ಪುವುದು 43 ಶ್ರಾವಣಾಶ್ವೀಜದಲಿ ಮಾರ್ಗಶಿರ ಮಾಸದಲಿ ಭಾವಭಕ್ತಿಯಲಿಂತು ಹಾಡುವರಿಗೆ ನೋವು ಕಾಲನಭಟರ ಕಾಟನಶಿಪುದು ಹರಿಯ ಭಾವುಕರು ಸತ್ಕರಿಸಿ ಕರೆದೊಯ್ವರು 44 ಅಪ್ಪ ಮಾಂಗಿರಿರಂಗನಪ್ಪಣೆ ಪಡೆದಿದನು ಒಪ್ಪಿಸುವೆನೈ ನಿನಗೆ ವೇಂಕಟೇಶ| ತಪ್ಪು ನೆಪ್ಪುಗಳನ್ನು ಮನ್ನಿಸೈ ಜಗದೀಶ ಒಪ್ಪದಿಂ ಸಕಲರನು ಪೊರೆ ವೇಂಕಟೇಶ|| 45
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಏಕಾದಶಿ ಉತ್ಸವಗೀತೆ ಲೋಕನಾಯಕನ ಏಕಾದಶಿಯ ಉತ್ಸವಕೆ ಅ ನೇಕ ವಿಧದಿಂದ ಪಟ್ಟಣವ ಸಿಂಗರಿಸಿ 1 ಸುಣ್ಣ ಕೆಮ್ಮಣ್ಣಿಂದ ಕಾರಣೆಯನು ರಚಿಸಿ ಚೀಣೆ ಚೀಣಾಂಬರದ ಮೇಲುಕಟ್ಟುಗಳು 2 ಕದಳಿಯ ಕಂಬಗಳು ಗೊನೆಸಹಿತ ನಿಲ್ಲಿಸಿ ತೆಂಗು ಕ್ರಮುಕದ ಫಲವ ತಂದು ಸಿಂಗರಿಸಿ 3 ವಿಧ ವಿಧವಾದ ಪುಷ್ಪಗಳನು ತರಿಸಿ ಮದನನಯ್ಯನ ಮಂಟಪವ ಸಿಂಗರಿಸಿ 4 ಶುದ್ಧ ಪಾಡ್ಯದ ದಿವಸ ಮುದ್ದು ಶ್ರೀರಂಗ ಅಧ್ಯಯನೋತ್ಸವಕೆಂದು ಪೊರಟು ತಾ ಬಂದ 5 ಭಟ್ಟರು ವೇದಾಂತಿ ಜಯಿಸಿದರ್ಥವನು [ನಟ್ಟ]ಮಾವಾಸೆರಾತ್ರಿಯಲಿ ಅರೆಯರ್ಪಾಡಿದರು 6 ಸಂಧ್ಯಾರಾಗವ ಪೋಲ್ವ ಅಂಗಿಕುಲಾವಿ ಛಂದ ಛಂದದ ಆಭರಣವನು ಧರಿಸಿ 7 ಸಿಂಹನಡೆಯಿಂದ ಮೂರಡಿಯಲಿ ನಿಂದು ಮಹಾಶ್ರೀವೈಷ್ಣವರಿಗೆ ಶ್ರೀಪಾದವಿತ್ತು 8 ಮಂತ್ರಿ ಎದುರಲಿ ನಿಂತು ಮಾಲೆಗಳನಿತ್ತು ಕಂತುಪಿತ ಬಂದ ನಾಗಿಣಿಯ ಮಂಟಪಕೆ 9 ವಾಸುಕೀಶಯನಮಂಟಪದಲಿ ನಿಂತು ದಾಸಿ ವರವನು ಸಲಿಸಿದ ಕ್ಲೇಶನಾಶಕನ 10 ಸುರರಿಗೊಡೆಯನು ಸುಂದರಾಂಗ ತಾ ಬಂದು [ವರ]ಸುಲ್ತಾನಿ ಎದುರಲಿ ನಲಿನಲಿದು ನಿಂದು 11 ಕುಂದಣದ ಛತ್ರಿ ಚಾಮರಗಳಲುಗಾಡೆ ಇಂದಿರಾರಮಣ ಸತಿಯಿದುರೆ ನಲಿದಾಡೆ 12 ಆದಿಮೂರುತಿ ಮಂಟಪದೊಳು ನಿಂತು ಆದಿ ಆಳ್ವಾರುಗಳಿಗೆಲ್ಲ ಆಸ್ಥಾನವಿತ್ತು 13 ವಿಷ್ಣುಚಿತ್ತರು ಮಾಡಿದರ್ಥಂಗಳನ್ನು [ವಿಶೇಷ]ದಭಿನಯದಿಂದ ಪೇಳಿದರು14 ಅರೆಯರು ಬಂದು ತಾವೆದುರಲ್ಲಿ ಪಾಡೆ ಭೂ ಸುರೋತ್ತಮರೆಲ್ಲ ಹರುಷದಿಂ ನೋಡೆ 15 ಮಂಟಪದಲ್ಲಿ ನೇವೇದ್ಯವನ್ನು ಗ್ರಹಿಸಿ ವೈ ಕುಂಠವಾಸನು ಬಂದ ವೈಯ್ಯಾರದಿಂದ16 ದರ್ಪಣದೆದುರಲ್ಲಿ ನಿಂತು ಶ್ರೀರಂಗ ಕಂ ದರ್ಪನಾಪಿತ ಬಂದ ಆನಂದದಿಂದ 17 ಮದಗಜದಂತೆ ಮೆಲ್ಲಡಿಯಿಟ್ಟು ಬಂದು ಒದಗಿ ಮೂರಡಿಯಲ್ಲಿ ತಿರಿಗುತಾ ನಿಂದು 18 ಅಡಿಗೊಂದು ಉಭಯವನ ಗ್ರಹಿಸಿ ಶ್ರೀರಂಗ ಬೆಡಗಿನಿಂದಲೆ ಬಂದ ಮಂಟಪಕೆ ಭವಭಂಗ 19 ಶ್ರೀಧರನು ಮಂಟಪದಲ್ಲಿ ತಾ ನಿಂತು ಮ ರ್ಯಾದೆಯನಿತ್ತು ಶ್ರೀವೈಷ್ಣವರಿಗೆ 20 ವೈಯ್ಯಾರ ನಡೆಯಿಂದ ಒಲಿದೊಲಿದು ಬಂದು [ನಯ] ಸೋಪಾನದೆದುರಲಿ ನಲಿನಲಿದು ನಿಂದು 21 ಕರ್ಪೂರ ಪುಷ್ಪವನು ಬೆರೆಸಿ ತಾವ್ತಂದು ಅಪ್ರಮೇಯನ ಶಿರದೊಳೆರೆಚಿದರು [ಅ]ಂದು 22 ಇಂದಿರಾರಮಣ ಗುಂಭಾರತಿಯ ಗ್ರಹಿಸಿ ಎಂದಿನಂದದಿ ತನ್ನ ಮಂದಿರಕೆ ನಡೆದ 23 ಬಿದಿಗೆ ತದಿಗೆಯು ಚೌತಿ ಪಂಚಮಿಯಲ್ಲಿ ವಿಧವಿಧದ ಆಭರಣಮನೆ ಧರಿಸಿ 24 ಷಷ್ಠಿ ಸಪ್ತಮಿ ಅಷ್ಟಮಿ ನೌಮಿಯಲ್ಲಿ ಸೃಷ್ಟಿಯೊಳಗುಳ್ಳ ಶೃಂಗಾರವನೆ ಮಾಡಿ 25 ದಶಮಿಯ ದಿವಸದಲಿ ಕುಸುಮನಾಭನಿಗೆ ಶಶಿಮುಖಿಯ ಅಲಂಕಾರವನ್ನು ಮಾಡಿದರು 26 ಸುರರು ಅಸುರರು ಕೂಡಿ ಶರಧಿಯನು ಮಥಿಸೆ ಭರದಿ ಅಮೃತವು ಬರಲು ಅಸುರರಪಹರಿಸೆ 27 ಸುರರೆಲ್ಲರು ಬಂದು ಶ್ರೀಹರಿಗೆ ಇಡಲು ಮೊರೆ ಸಾಧಿಸುವೆನೆಂದೆನುತ ವರಗಳನು ಕೊಡಲು 28 ಎನಗೆ ತನಗೆಂದು ಹೋರಾಡುವ ಸಮಯದಿ ವನಜನಾಭನು ಮೋಹಿನಿಯ ರೂಪಿನಲಿ 29 ವಾರೆಗೊಂಡೆಯವನು ವೈಯ್ಯಾರದಿಂದ ಧರಿಸಿ ತೋರಮುತ್ತಿನ ಕುಚ್ಚುಗಳ ಅಳವಡಿಸಿ 30 ಹೆರಳು ರಾಗಟೆಯು ಬಂಗಾರಗೊಂಡ್ಯಗಳು ಅರಳುಮಲ್ಲಿಗೆ ಹೂವ ದಂಡೆಗಳ ಮುಡಿದು 31 ಪಾನಪಟ್ಟಿಯು ಸೂರ್ಯಚಂದ್ರಮರನಿಟ್ಟು ಫಣೆಯಲ್ಲಿ ತಿದ್ದಿದ ಕಸ್ತೂರಿ ಬಟ್ಟು 32 ಚಾಪವನು ಪೋಲುವಾ ಪುಬ್ಬಿನಾ ಮಾಯ ಆಪ್ತಭಕ್ತರನು ಕರುಣದಿಂ ನೋಡುವ ನೋಟ 33 ತಿಲಕುಸುಮವನು ಪೋಲ್ವ ನಾಸಿಕದ ಚಂದ ಥಳಥಳಿಸೆ ಮುತ್ತಿನ ಮುಕುರದ ಅಂದ 34 ಕುಂದಕುಸುಮವ ಪೋಲ್ವ ದಂತಪಂಕ್ತಿಗಳು ಕೆಂ[ದ]ವಳಲತೆಯಂತಿರುವ ಅಧರಕಾಂತಿಗಳು 35 ಚಳತುಂಬು ಬುಗುಡಿ ಬಾವುಲಿಗಳನಿಟ್ಟು ಥಳಥಳಿಪ ವಜ್ರದ ಓಲೆ ಅಳವಟ್ಟು 36 ಗಲ್ಲದಲಿ ಪೊಳೆಯುವ ದೃಷ್ಟಿಯ ಬೊಟ್ಟು ಮೊಗ ದಲ್ಲಿ ಮಂದಹಾಸದ ಕಾಂತಿ ಇನ್ನಷ್ಟು 37 ಕೊರಳೊಳಗೆ ಹಾರ ಪದಕವನು ತಾನಿಟ್ಟು [ಉರದಿ] ದುಂಡುಮುತ್ತಿನ ದಿವ್ಯಸರಗಳಳವಟ್ಟು 38 ಧರಿಸಿ ನಾನಾವಿಧ ಪುಷ್ಪ ಗಿಣಿಮಾಲೆಯನು ಅರಳುಮಲ್ಲಿಗೆ ಹೂವಸರಗಳಲಂಕರಿಸಿ 39 ಉಂಗುರ ವಂಕಿ ಬಾಜಿಯ ಬಂದುದ್ವಾರ್ಯ(?) ಕೈಕಟ್ಟು ಮುಂಗೈ ಮುರಾರಿಯನ್ನು ಇಟ್ಟು 40 ಬಿಳಿಯ ಪೀತಾಂಬರವ ನಿರಿಹಿಡಿದುಟ್ಟು ಥಳಥಳಿಪ ಕುಂದಣದ ವಡ್ಯಾಣವಿಟ್ಟು 41 ಅಂದುಗೆ ಗೆಜ್ಜೆಗಳ ಚಂದದಿಂದಿಟ್ಟು ಕುಂದಣದ ಪಾಡಗವನ್ನು ಅಳವಟ್ಟು 42 ಈ ರೂಪಿನಿಂದ ಅಸುರರನು ಮೋಹಿಸುತ ಸುರರಿಗೆ ಅಮೃತವನು ಎರೆದು ಪಾಲಿಸುತ 43 ಮೂರುಕಣ್ಣುಳ್ಳವನು ಮೋಹಿಸಿದ ರೂಪ ಈ[ರೇಳು]ಲೋಕದವರಿಗೆ ತೋರಿದನು ಭೂಪ 44 ಗರುಡಮಂಟಪದಲ್ಲಿ ನಿಂತು ಶ್ರೀರಂಗ ಬೆರಗಿನಿಂದೆಲ್ಲರಿಗೆ ಬಿಡದೆ ಸೇವೆಯನಿತ್ತು 45 ಆಳ್ವಾರುಗಳಿಗೆಲ್ಲ ವಸ್ತ್ರಗಂಧವನಿತ್ತು ಅವರವರ ಆಸ್ಥಾನಕ್ಕವರ ಕಳುಹಿಸುತ 46 ಬಂದು ಬಾಗಿಲ ಹಾಕಿ ಇಂದಿರಾರಮಣ ನಿಂದ ವೆಂಕಟರಂಗ ಆನಂದದಿಂದ 47
--------------
ಯದುಗಿರಿಯಮ್ಮ
ನೀನೇ ಶ್ರಾದ್ಧದನ್ನವನುಂಡವಾ ನಾನರಿಯದಂತೆ ಯೆನ್ನ ಗೃಹದೊಳು ಶ್ರೀವೈಷ್ಣವನಾಗಿ ಪ ಬಾಣಸಿಗಾದವರು ನೀನೋ ನಾರಾಯಣಿಯೋ ಕ್ಷೋಣಿಯೊ ರವಿಯೋ ಜಾಹ್ನವಿಯೊ ರತಿಯೋ ವಾಣಿಯೋ ಸುರಧೇನುವೋ ಬಂದಾತಧನಂಜಯನೂ ತಾನೆ ಎನ್ನ ಆದ್ದಾಗಾಯ ತೆಲೆದೇವಾ1 ತಿಳಿದೆ ನಾನೀಗ ನಿನ್ನನು ಕೂಡೆ ಬಂದಿದ್ರ್ದ ಬಿಳಿಯ ಚುಟ್ಟಿನ ಯೆಣ್ಣೆಗೆಂಪಿನವನೂ ಕುಳಿತವನು ಕೈಯಪುಸ್ತುಕದವನು ಕಂಕುಳೊಳ ಗಿಳಿದ ಮಡಿಗಡೆಯವರಾರು ಪೇಳೆಲೆ ದೇವಾ 2 ಆವಾವ ಸ್ಥಾನಕಾರಾರ ನೇಮಿಸಿದೆ ನೀ ದೇವಾ ಉಪಾಧ್ಯರಾರಭಿಶ್ರವಣವನು ಪೇಳ್ದ ಕೋವಿದರಾರು ಶ್ರೀವೈಷ್ಣವರಾರೆಲೆದೇವ 3 ಜನನ ಸ್ಥಿತಿಲಯಕೆ ಕಾರಣಭೂತನೋರ್ವ ನೀ ನೆನುತ ವೇದಾಂತಗಳು ಪೊಗಳುತಿರಲೂ ಇನಿತಕ್ಕೆ ಯೆಂದನ್ನದಗಳು ಕುಡಿತೇಪಾಲ್ಗೇ ಮನವ ಸೋತುದ ಬಿಡುವೆಯಾ ನಿತ್ಯತೃಪ್ತಾ 4 ಗುರುಗಳಂದದಲಿ ಶ್ರೀವೈಷ್ಣವ ನೀನಾಗಿ ಶರಣನಾ ಪಿತೃಗಳಿಗೇ ಶ್ರಾಧ್ಧವನುಂಡುದದೂ ಪಿರಿಯದಾಯ್ತು ಎನ್ನ ನೂರೂಂದು ಕುಲಕೆಲ್ಲಾ ಪರಮಪದವಾಯ್ತು ವೈಕುಂಠಚೆನ್ನಿಗರಾಯಾ 5
--------------
ಬೇಲೂರು ವೈಕುಂಠದಾಸರು
ಮೂಲಮಂತ್ರವ ಜಪಿಸು ಅರ್ಹತೆಯಿರುವಂತೆ ನೀನು ಪ ನಮೋನಾರಾಯಣಾಯ ಕಡೆಯಲುಳ್ಳ ಅ.ಪ ವೇದ ಪಾಂಚರಾತ್ರಾಗಮ ಪೌರಾಣಗಳ ನಿರುತ ನುತಿಪ ವೇದದೆ ಶ್ರೀವೈಷ್ಣವರಿಗೆ ತಾರಕಬ್ರಹ್ಮವಾದ ಆದಿಯೊಳಾಚಾರ್ಯರಿಂದ ಪಂಚಸಂಸ್ಕಾರ ಹೊಂದಿ ಬೋಧೆ ಪಡೆದ ಮಹಾಮಂತ್ರರಾಜವೆನಿಸಿ ಮುಕ್ತಿ ಕೊಡುವ 1 ಅಷ್ಟಾಕ್ಷರಿಯಾದ ಮಂತ್ರ ಇಷ್ಟಸಿದ್ಧಿಮಾಳ್ಪ ಮಂತ್ರ ನಿಷ್ಠೆಯಿಂದ ಜಪಿಸುವರಿಗನಿಷ್ಟಹಾರಿಯಾದ ಮಂತ್ರ ಇಷ್ಟುಮಾತ್ರ ಪಠಿಸುವರಿಗೂ ಮೋಕ್ಷವನ್ನೆ ಕೊಡುವ ಮಂತ್ರ ಸೃಷ್ಟೀಶ ಹೆಜ್ಜಾಜಿಯ ಕೇಶವನನ್ನೊಲಿಪ ಮಂತ್ರ 2
--------------
ಶಾಮಶರ್ಮರು
ವಂದಿಪೆ ಶ್ರೀಮನ್ನಾರಾಯಣಗೆ ವಂದಿಪೆ ಅಮ್ಮ ಲಕ್ಷ್ಮೀದೇವಿಗೆ ಪ ವಂದಿಪೆ ವಿಶ್ವಕ್ಸೇನರಿಗೆ ಕುಂದದಿರಲಿ ಎನ್ನ ಸನ್ಮತಿ ಎಂದು ಅ.ಪ ವಂದಿಪೆ ನಾ ಮೊದಲಾಳ್ವಾರರಿಗೆ ಅಂದದಿ ಹರಿಯ ತೋರಿಕೊಟ್ಟರಿಗೆ ಕಂದಮಿಳಲಿ ಸೊಲ್ವ ನುಡಿಗಳಿಗೆ ಪ್ರ- ಬಂಧದಿವ್ಯಗಳ ಬೆಳಗಿಸಿದವರಿಗೆ 1 ವಂದಿಪೆ ವಂದಿಪೆ ಆಚಾರ್ಯರಿಗೆ ಚಂದದಾ ಯತಿತ್ರಯರುಗಳಿಗೆ ಸುಂದರ ಶ್ರೀವೈಷ್ಣವ ತತ್ವಗಳನು ಹೊಂದಿಸಿ ಬಂಧಿಸಿ ಸ್ಥಾಪಿಸಿದವರಿಗೆ 2 ಇನ್ನು ವಂದಿಪೆ ಗುರುಪೀಠಕ್ಕೆ ಚೆನ್ನ ತಿರುನಾರಾಯಣಪುರಕೆ ಉನ್ನತ ರಂಗದಾಸಯತಿವರ್ಯಗೆ ಸನ್ನುತ ಪಿತಾನುಜ ಶಾಮದಾಸರಿಗೆ 3 ಸಾಜದಲೆನ್ನಲಿ ಅರಿವನು ಮೂಡಿಸಿ ಓಜನನಾಗಿಸೆ ಕೇಶವ ನಾಮದಿ ಆರ್ಜಿಸಿ ಉಪಾದಾನದಿ ಬಳಲಿದ ಪೂಜ್ಯಪಿತ ವೆಂಕಟರಂಗಾರ್ಯರಿಗೆ 4 ವಂದಿಪೆ ಕೊನೆ ಮೊದಲಿಲ್ಲದೆ ವಂದಿ- ಪೆಂ ದಾಸನ ಮಾಡಿದ ದೇವನಿಗೆ ತಂದೆ ಜಾಜಿಪುರಾಧೀಶನಿಗೆ ಮುದ- ದಿಂದ ಶ್ರೀ ಚೆನ್ನಕೇಶವಗೆ 5
--------------
ನಾರಾಯಣಶರ್ಮರು
ಶ್ರೀರಂಗ ಯಾತ್ರೆಯನು ಮಾಡಿಬಾರೆಂದೆನ್ನ ಈ ರೀತಿಯನುವ ಮಾಡಿದೆಯ ಸ್ವಾಮಿ ಪ ಕಾರುಣ್ಯನಿಧಿಯೆ ವೇಲಾಪುರಾಧೀಶ್ವರನೆ ಆರುಣ್ಯದೊಳು ಕೆಡಹಿದೆಯ ಸ್ವಾಮಿ ಅ.ಪ ದಾರಿಯನು ತೋರಲೈತಂದ ಶ್ರೀವೈಷ್ಣವನು ಸೇರಿಸಿದ ನೀಯಡವಿಯಸ್ವಾಮಿ ಕಾರುಗತ್ತಲೆ ಸುರಿವ ಮಳೆಯ ಸಿಡಿಲಿನ್ನೆಲ್ಲಿ ಸೇರುವೆನು ಈ ಗಿರಿಯೊಳೂ ಸ್ವಾಮಿ 1 ನಾರಿ ಮಕ್ಕಳು ಭೃತ್ಯರೆಲ್ಲಿ ಪೋದರೋ ಯೇನು ಕಾರಣಬಂದೆನಯ್ಯ ಸ್ವಾಮಿ ಭೂರಮಣ ತ್ರಿಭುವನಾಧಾರ ನೀ ನಲ್ಲದಿ ನ್ನಾರು ಕಾವರೆನ್ನನು ಸ್ವಾಮಿ 2 ಘುಡಿಘುಡಿಸುತಲಿವೆ ಪುಲಿ ಕರಡಿ ಸುತ್ತಲು ಭೋ ರಿಡುತಲಿವೆ ಭಕ್ಷಿಸುವಡೇ ಸ್ವಾಮಿ ಬಿಡದೆ ಕರಿಗಳು ಕೂಗಿ ಕಂಗೆಡಿಸುತಲಿವೆ ಇದೇ ಕಡೆಗಾಲವಾಯಿತೆಲ್ಲೋ ಸ್ವಾಮಿ 3 ನಡೆವರೆಡೆಗಾಣೆ ಇಲ್ಲಿರುವುದಾಗ ದಾಗದು ಕಷ್ಟ ಬಡುವುದಕೆ ಗುರಿಯಾದೆನೇ ಸ್ವಾಮಿ ಎಡಬಲಕ್ಕೊಲೆಯೆ ಕಪ್ಪು ಕಲ್ಲು ಮುಳ್ಳುಗಳಿದೆಕೋ ಒಡೆಯ ಕೈವಿಡದೆ ಸಲಹು ಸಲಹೋ ಸ್ವಾಮಿ 4 ಒಂದೆಸಗಲೇಳಡಸಿತೆಂದು ಪೇಳುವ ನುಡಿಗೆ ಸಂದು ಬಸವಳಿದೆನೆಲೋ ಸ್ವಾಮಿ ಇಂದು ಸಂಧ್ಯಾ ಗಾಯತ್ರಿ ಕರ್ಮವುಳಿದುದರ ವಿಂದಾಕ್ಷ ಸುಮ್ಮನಿಹರೇ ಸ್ವಾಮೀ 5 ಎಂದೆಂದು ಮಾತನಾಡುವನಾಥರಕ್ಷಕನೆ ಬಂದುದೀಗೇನು ಸಿರಿಯು ನಿನಗೇ ಬಂಧನವ ಬಿಡಿಸು ದುರ್ಮರಣದಲಿ ಕೊಲ್ಲದಿರು ತಂದೆ ವೈಕುಂಠ ರಮಣಾ ಸ್ವಾಮೀ 6
--------------
ಬೇಲೂರು ವೈಕುಂಠದಾಸರು