ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ದರುಶನಕೆ ಬಂದವನಲ್ಲವೊ ಪುಣ್ಯವಂತರ ದಿವ್ಯ ಚರಣ ನೋಡಲಿ ಬಂದೆ ಪ ಎಲ್ಲೆಲ್ಲಿ ನಿನ್ನ ವ್ಯಾಪ್ತತನವಿರಲಿಕ್ಕೆ ಇಲ್ಲಿಗೆ ಬರುವ ಕಾರಣವಾವುದೊ ಸೊಲ್ಲಿಗೆ ಕಂಭದಲಿ ತೋರಿದ ಮಹಾಮಹಿಮ ಅಲ್ಲಿ ಇಲ್ಲೇನಯ್ಯ ಬಲ್ಲ ಭಜಕರಿಗೆ1 ಕರೆದಾಗಲೆ ಓಡಿ ಬಂದೊದಗುವ ಸ್ವಾಮಿ ಮರಳಿ ಗಾವುದ ಎಣಿಸಿ ಬರಲ್ಯಾತಕೊ ನೆರೆ ನಂಬಿದವರಿಗೆ ಆವಲ್ಲಾದರೇನು ಅರಿದವರ ಮನದೊಳಗೆ ನಿಂದಾಡುವ ಚಂದವಾ 2 ಕಠಿನವೊ ನಿನ್ನ ಭಕುತರನ ನೋಡುವ ಲಾಭ ಸಟೆಯಲ್ಲಾ ವೇದಗಳು ಸಾರುತಿವಕೊ ವಟು ಮೊದಲಾದ ವೈಷ್ಣವಾಗ್ರೇಸರಂಘ್ರಿ ತ್ರಿಟಿಯಾದರೂ ಎನಗೆ ಸೋಕಲು ಗತಿಗೆ ದಾರಿ3 ಧ್ಯಾನಕ್ಕೆ ಸಿಲುಕುವನೆ ನಿನ್ನ ಕಾಣಲಿಬಹುದು ಜ್ಞಾನಿಗಳು ಎಂತು ಬರುವರೊ ಅಲ್ಲಿಗೆ ಅನಂತ ಜನುಮದಲ್ಲಿ ಜಪ ತಪ ಹೋಮ ವ್ರತ ಏನೇನು ಮಾಡಿದರು ಇಷ್ಟು ಜನ ಕೂಡುವದೇ4 ನೀನಿದ್ದ ಸ್ಥಾನದಲಿ ಸಕಲ ಪುಣ್ಯಕ್ಷೇತ್ರ ನೀನಿದ್ದ ಸ್ಥಾನದಲಿ ಸರ್ವತೀರ್ಥ ನೀನಿದ್ದ ಸ್ಥಾನದಲಿ ಸಮಸ್ತ ತಾತ್ವಿಕರು ನಾನಿತ್ತ ಬರುವುದು ನಿನಗೆ ತಿಳಿಯದೆ ಸ್ವಾಮಿ5 ಇದನೆ ಲಾಲಿಸು ಜೀಯಾ ನಿನ್ನದೊಂದೇ ಮೂರ್ತಿ ನಿದರುಶನವಲ್ಲದೆ ಮಿಗಿಲಾವುದೊ ಪದೋಪದಿಗೆ ಮಧ್ವಮತ ಹೊಂದಿದ ಸುಜನರ ಹೃದಯದೊಳಗಾನಂತಪರಿ ನಿನ್ನ ರೂಪಗಳು 6 ಭಳಿರೆ ತಿರುಮಲರಾಯ ನಿನ್ನ ಕರುಣಾ ರಸಕೆ ವೊಲಿದು ಭಕುತರಿಗಾಗಿ ಮದುವೆ ಹಮ್ಮಿಕೊಂಡೆ ಸುಲಭ ದೇವರದೇವ ವಿಜಯವಿಠ್ಠಲ ವೆಂಕಟಾ7
--------------
ವಿಜಯದಾಸ