ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರುಣೋದಯಕೆ ಮುಂಚೆ ಬಲು ಕತ್ತಲಂತೆ ಪ ಸಿರಿ ಬರುವುದಕೆ ಮುಂಚೆ ಮುಖ ಸುತ್ತು ಜನಕೆ ಅ.ಪ ಹೊಟ್ಟಿ ಹಸಿದರೆ ಅನ್ನ ಬಹಳ ರುಚಿಯಂತೆ ಕೆಟ್ಟು ಬದುಕುವ ಮನುಜ ಬಲು ಘಟ್ಟಿಯಂತೆ ಸಿಟ್ಟು ಮಾಡುವ ಮನುಜ ಕೊನೆಗೆ ಕುರಿಯಂತೆ ಬಿಟ್ಟಿ ಬಯಸುವ ನರನು ಬಲು ಮೋಸವಂತೆ 1 ಸುಳ್ಳು ಹೇಳುವ ನರಗೆ ಪರದಾಟವಂತೆ ಜಳ್ಳುರಾಶಿಯ ನೋಡೆ ದೊಡ್ಡಗಿರಿಯಂತೆ ಕಳ್ಳ ಒಳಗಿರಲಲ್ಲಿ ಶಾಂತಿಯಿಲ್ಲಂತೆ ಕುಳ್ಳ ಹೋರಾಡಿದರೆ ಜಯವಿಲ್ಲವಂತೆ 2 ಭಾರಿ ಮಳೆ ಸುರಿಯಲಿರೆ ಬಹಳ ಬಿಸಿಲಂತೆ ಊರು ಸೇರುವ ಮುನ್ನ ಬಹಳ ದಣಿಯಂತೆ ಕೀರುತಿಯ ಪಡೆಯುವಗೆ ಬಹು ಶತ್ರುವಂತೆ ಮೂರು ಜ್ಞಾನಿಗಳಿರಲು ಭಾರಿ ಸಭೆಯಂತೆ 3 ಮುಳ್ಳಿರುವ ಗಿಡಗಳಲಿ ಬಹು ಪುಷ್ಪವಂತೆ ಹಳ್ಳದಲಿ ಸಿಗುವ ಜಲ ಬಹಳ ರುಚಿಯಂತೆ ಹಳ್ಳಿಗಾರನ ಸತ್ಯ ಬಹಳ ಒರಟಂತೆ ಎಳ್ಳು ಕಾಳುಗಳು ಶನಿಯ ಓಡಿಸುವುದಂತೆ 4 ಮುಟ್ಟಲಾಗದ ನಾಯಿ ದಾಸಾನುದಾಸ ಶ್ರೇಷ್ಠರೆಂದರಿತಿರುವರೆಲ್ಲ ಬಲು ಮೋಸ ಧಟ್ಟನೆ ಹೊಳೆಯುವಗೆ ಬಲು ಮನವಿಕಾಸ ಬಿಟ್ಟಿರುವ ಮನುಜನಿಗೆ ಜಗದಿ ಸುಖವಾಸ 5 ಮುದಿತನವು ಭೂಷಣವು ಸ್ಥಾನವಿರುವವರಿಗೆ ಕುದಿಯುವುದೆ ಭೂಷಣವು ಕ್ಷೀರಜಲದಲ್ಲಿ ಹೆದರುವುದೆ ಭೂಷಣವು ದುಷ್ಟಸಂಗದಲಿ ಗದಗದವೆ ಭೂಷಣವು ಭಕ್ತಿರಸದಲ್ಲಿ 6 ತನ್ನ ತಾ ಶೋಧಿಸಲು ಬಲು ದುಃಖವಂತೆ ಅನ್ಯರನು ಶೋಧಿಸಲು ಸಂತೋಷವಂತೆ ಕನ್ನಡಿಯ ನೋಡದಿರೆ ಬಲು ಚೆಲುವನಂತೆ ಕನ್ನಡಿಯ ನೋಡಿದರೆ ತಾನಳುವನಂತೆ 7 ನಗರ ಸುಂದರಲ್ಲಂತೆ ಬಚ್ಚಿಟ್ಟ ಧನವು ತಾ ಕದ್ದವನಿಗಂತೆ ಸ್ವಚ್ಛ ಬಡತನದವಗೆ ಬಲು ಭಕುತಿಯಂತೆ ಬಿಚ್ಚೊಲೆ ಗಿರಿಜೆಗತಿ ಪ್ರಿಯವಸ್ತುವಂತೆ 8 ಗುಂಡು ಬ್ರಾಹ್ಮಣ ಬರಲು ಅಪಶಕುನವಂತೆ ಹೆಂಡದಾ ಪೀಪಾಯಿ ಬಲು ಶಕುನವಂತೆ ಮಂಡೆ ಬೋಳಿರುವವಳು ಬರಬಾರದಂತೆ ತೊಂಡು ಸೂಳೆಯು ಬರಲು ಬಹಳ ಶಕುನವಂತೆ 9 ಖ್ಯಾತಿ ಬಾರದು ನರಗೆ ಬದುಕಿರುವ ತನಕ ಗೋತ ಹೊಡೆದವನು ಬಲು ಗುಣಶಾಲಿಯಂತೆ ನೀತಿ ಹೇಳುವ ಸ್ಥಳದಲೊಬ್ಬರಿಲ್ಲಂತೆ ಕೋತಿ ಕುಣಿಯುತಿರಲು ನೂರು ಜನರಂತೆ 10 ಬಹು ಧನಿಕ ಬಲು ಬಲಗೆ ಮಕ್ಕಳಿಲ್ಲಂತೆ ದಹಿಸುತಿಹ ದಾರಿದ್ರಗೆ ವರ್ಷಕೊಂದಂತೆ ಅಮೃತ ಸಮವಂತೆ ಸಿಹಿಯಾದ ಕ್ಷೀರ ಮಕ್ಕಳಿಗೆ ಬೇಡಂತೆ 11 ಸಾಲಿಗ್ರಾಮ ತೊಳೆಯಲತಿ ಬೇಸರಂತೆ ಸಾಲು ಎಮ್ಮೆಯ ತೊಳೆಯಲಿ ಉತ್ಸಾಹವಂತೆ ಶೀಲವಾಡುವ ನುಡಿಗೆ ಸಂದೇಹವಂತೆ ಗಾಳಿ ಸುದ್ದಿಗಳೆಲ್ಲ ಬಲು ಸತ್ಯವಂತೆ 12 ಒಳಿತವನು ಜಗದಲ್ಲಿ ತಲೆ ಎತ್ತನಂತೆ ಕಲಿಪುರುಷನಂಥವನು ಬಲು ಮೇಲೆಯಂತೆ ಹುಲಿ ಚಿರತೆ ಕರಡಿಗಳ ಬಲಿಯ ಕೊಡರಂತೆ ಗೆಳತಿ ಮಾರಿಗೆ ಕುರಿಯ ಬಲಿಯೆ ಬೇಕಂತೆ 13 ಅತಿ ಚೆಲುವೆ ಸತಿಯಲ್ಲಿ ಹಿತವಿಲ್ಲವಂತೆ ಗತಿಗೆಟ್ಟ ನಾರಿಯಲಿ ಅತಿ ಮೋಹವಂತೆ ಇತರ ಜನರೇಳಿಗೆಗೆ ಹೊಟ್ಟಿಯುರಿಯಂತೆ ಪ್ರತಿಕ್ಷಣವು ತನಗಾಗಿ ಹಂಬಲಕೆಯಂತೆ 14 ಭೂಮಿ ಎಲ್ಲವು ಇನ್ನು ಉಳುವಾತಗಂತೆ ಭೂಮಿಯೊಡೆಯಗೆ ದೊಡ್ಡನಾಮ ಬಿತ್ತಂತೆ ರಾಮರಾಜ್ಯದಿ ಕಾರು ಓಡಿಸುವವಗಂತೆ ಆ ಮದುವೆ ಕನ್ಯೆಯು ಪುರೋಹಿತಗಂತೆ 15 ಬಕಳಿಸುವ ನಾಯಕರೆ ಸರಕಾರವಂತೆ ಪ್ರಕೃತಿ ನಡೆನುಡಿ ನೀತಿಗೆ ಧಿಕ್ಕಾರವಂತೆ ಸುಖದ ಅನುಭವ ಜನಕೆ ಕುದುರೆ ಕೊಂಬಂತೆ ಮುಖವಿಲ್ಲ ಕಣ್ಣಿಲ್ಲ ಸುಖರಾಜ್ಯವಂತೆ 16 ಚಂದ್ರಲೋಕಕೆ ಪಯಣ ಕಾದಿರುವುದಂತೆ ಮುಂದಲ್ಲಿ ನೆಲಕೆ ಬಲು ಕಟ್ಟು ನಿಟ್ಟಂತೆ ಮುಂದರಿದ ಜನಕಲ್ಲಿ ಸ್ಥಾನವಿಹುದಂತೆ ಹಿಂದುಳಿದ ಗುಂಪಿಗವಕಾಶವಿಲ್ಲಂತೆ 17 ಪುಷ್ಪಾಕ್ಷತೆಯ ಪೂಜೆ ಗೋಮಾತೆಗಂತೆ ಶುಷ್ಕ ತೃಣವನಕೆಲ್ಲ ಮಳೆಗಳ ಕಂತೆ ನಿಷ್ಫಲದ ಗಿಡಬಳ್ಳಿ ತೋಟದಲ್ಲಂತೆ ಪುಷ್ಕಳದ ಫಲ ವೃಕ್ಷಗಳು ಸೌದೆಗಂತೆ 18 ಬರಿಯ ಪಾತ್ರೆಗಳಲಿ ಬಹಳ ಸದ್ದಂತೆ ಅರಿಯುವಜ್ಞಾನಿಗಳು ತಲೆಹರಟೆಯಂತೆ ಅರಿತವನು ನುರಿತನಾದರು ಬೇಡವಂತೆ ಬದಿಯ ಬಹು ದಡ್ಡನಿಗೆ ಮಾರ್ಯಾದೆಯಂತೆ19 ರೈಲು ಉರುಳಿಸೆ ರಾಜ್ಯಕಧಿಕಾರಿಯಂತೆ ಥೈಲಿಯಿದ್ದರೆ ಖೂನಿ ಮಾಡಬಹುದಂತೆ ಶೈಲವೇರುವ ನರನು ಮೇಧಾವಿಯಂತೆ 20 ನರಬಲಿಯ ಕೊಡುವವರು ಹಿರಿಯ ಜನರಂತೆ ಹಿರಿಯ ಮಾರ್ಗದ ಜನರು ಧರೆ ಭಾರವಂತೆ ಗುರುಗಳಿಗೆ ತಿರುಮಂತ್ರ ಹೇಳಬೇಕಂತೆ ಸುರಿಸುವರು ಧನಧಾನ್ಯ ಸುರಿಮಳೆಗಳಂತೆ21 ಮಂತ್ರವಾದಿಯು ನೋಡಿ ಗ್ರಹಭಯವಿದೆಂದ ಯಂತ್ರದಲಿ ನೋಡಿದವ ಹೃದಯರೋಗೆಂದ ಚಿಂತಿಸುತ ಪಂಡಿತನು ಮೋಹಿನಿಯಿದೆಂದ ಅಂತ್ಯದಲಿ ರೋಗಿ ತನಗೊಂದಿಲ್ಲವೆಂದ 22 ಶಿಂಗಪ್ಪ ಕದ್ದು ತಾ ಜೈಲು ಸೇರಿದನು ಕಾಂಗ್ರಪ್ಪ ಜೈಲಿನಿಂದ ಬಂದು ಕುಳತಿಹನು ಹೇಂಗ್ರಪ್ಪ ಬದುಕುವುದು ಎಂದು ಫಲವೇನು ನುಂಗ್ರಪ್ಪ ಸುಖ ದು:ಖಗಳನು ಸಹಿಸುತಲಿ 23 ವೇದಾಂತಿಯಾಗೆನಲು ಹೊಟ್ಟೆಗಿಲ್ಲಂತೆ ಕಾದಾಡಿ ಬದುಕಲನುಭವವಿಲ್ಲವಂತೆ ಓದು ಬದುಕೆಂದರವಕಾಶವಿಲ್ಲಂತೆ ಆದುದಾಯಿತು ಹರಿಗೆ ಶರಣು ಹೊಡಿ ತಮ್ಮ25 ಯಮನು ತಲ್ಲಣಿಸುವನು ಸ್ಥಳವಿಲ್ಲವಂತೆ ಸುಮನಸರು ಆಳುತಿಹರು ಜನವಿಲ್ಲವಂತೆ ಕಮಲೆರಮಣಗೆ ಬಂತು ಪೀಕ್ಲಾಟವಂತೆ ಎಮಗೆಂಥ ಕಷ್ಟವು ಪ್ರಸನ್ನ ಹರಿಯಿರಲು26
--------------
ವಿದ್ಯಾಪ್ರಸನ್ನತೀರ್ಥರು
ಏಕಾದಶಿ ಉತ್ಸವಗೀತೆ ಲೋಕನಾಯಕನ ಏಕಾದಶಿಯ ಉತ್ಸವಕೆ ಅ ನೇಕ ವಿಧದಿಂದ ಪಟ್ಟಣವ ಸಿಂಗರಿಸಿ 1 ಸುಣ್ಣ ಕೆಮ್ಮಣ್ಣಿಂದ ಕಾರಣೆಯನು ರಚಿಸಿ ಚೀಣೆ ಚೀಣಾಂಬರದ ಮೇಲುಕಟ್ಟುಗಳು 2 ಕದಳಿಯ ಕಂಬಗಳು ಗೊನೆಸಹಿತ ನಿಲ್ಲಿಸಿ ತೆಂಗು ಕ್ರಮುಕದ ಫಲವ ತಂದು ಸಿಂಗರಿಸಿ 3 ವಿಧ ವಿಧವಾದ ಪುಷ್ಪಗಳನು ತರಿಸಿ ಮದನನಯ್ಯನ ಮಂಟಪವ ಸಿಂಗರಿಸಿ 4 ಶುದ್ಧ ಪಾಡ್ಯದ ದಿವಸ ಮುದ್ದು ಶ್ರೀರಂಗ ಅಧ್ಯಯನೋತ್ಸವಕೆಂದು ಪೊರಟು ತಾ ಬಂದ 5 ಭಟ್ಟರು ವೇದಾಂತಿ ಜಯಿಸಿದರ್ಥವನು [ನಟ್ಟ]ಮಾವಾಸೆರಾತ್ರಿಯಲಿ ಅರೆಯರ್ಪಾಡಿದರು 6 ಸಂಧ್ಯಾರಾಗವ ಪೋಲ್ವ ಅಂಗಿಕುಲಾವಿ ಛಂದ ಛಂದದ ಆಭರಣವನು ಧರಿಸಿ 7 ಸಿಂಹನಡೆಯಿಂದ ಮೂರಡಿಯಲಿ ನಿಂದು ಮಹಾಶ್ರೀವೈಷ್ಣವರಿಗೆ ಶ್ರೀಪಾದವಿತ್ತು 8 ಮಂತ್ರಿ ಎದುರಲಿ ನಿಂತು ಮಾಲೆಗಳನಿತ್ತು ಕಂತುಪಿತ ಬಂದ ನಾಗಿಣಿಯ ಮಂಟಪಕೆ 9 ವಾಸುಕೀಶಯನಮಂಟಪದಲಿ ನಿಂತು ದಾಸಿ ವರವನು ಸಲಿಸಿದ ಕ್ಲೇಶನಾಶಕನ 10 ಸುರರಿಗೊಡೆಯನು ಸುಂದರಾಂಗ ತಾ ಬಂದು [ವರ]ಸುಲ್ತಾನಿ ಎದುರಲಿ ನಲಿನಲಿದು ನಿಂದು 11 ಕುಂದಣದ ಛತ್ರಿ ಚಾಮರಗಳಲುಗಾಡೆ ಇಂದಿರಾರಮಣ ಸತಿಯಿದುರೆ ನಲಿದಾಡೆ 12 ಆದಿಮೂರುತಿ ಮಂಟಪದೊಳು ನಿಂತು ಆದಿ ಆಳ್ವಾರುಗಳಿಗೆಲ್ಲ ಆಸ್ಥಾನವಿತ್ತು 13 ವಿಷ್ಣುಚಿತ್ತರು ಮಾಡಿದರ್ಥಂಗಳನ್ನು [ವಿಶೇಷ]ದಭಿನಯದಿಂದ ಪೇಳಿದರು14 ಅರೆಯರು ಬಂದು ತಾವೆದುರಲ್ಲಿ ಪಾಡೆ ಭೂ ಸುರೋತ್ತಮರೆಲ್ಲ ಹರುಷದಿಂ ನೋಡೆ 15 ಮಂಟಪದಲ್ಲಿ ನೇವೇದ್ಯವನ್ನು ಗ್ರಹಿಸಿ ವೈ ಕುಂಠವಾಸನು ಬಂದ ವೈಯ್ಯಾರದಿಂದ16 ದರ್ಪಣದೆದುರಲ್ಲಿ ನಿಂತು ಶ್ರೀರಂಗ ಕಂ ದರ್ಪನಾಪಿತ ಬಂದ ಆನಂದದಿಂದ 17 ಮದಗಜದಂತೆ ಮೆಲ್ಲಡಿಯಿಟ್ಟು ಬಂದು ಒದಗಿ ಮೂರಡಿಯಲ್ಲಿ ತಿರಿಗುತಾ ನಿಂದು 18 ಅಡಿಗೊಂದು ಉಭಯವನ ಗ್ರಹಿಸಿ ಶ್ರೀರಂಗ ಬೆಡಗಿನಿಂದಲೆ ಬಂದ ಮಂಟಪಕೆ ಭವಭಂಗ 19 ಶ್ರೀಧರನು ಮಂಟಪದಲ್ಲಿ ತಾ ನಿಂತು ಮ ರ್ಯಾದೆಯನಿತ್ತು ಶ್ರೀವೈಷ್ಣವರಿಗೆ 20 ವೈಯ್ಯಾರ ನಡೆಯಿಂದ ಒಲಿದೊಲಿದು ಬಂದು [ನಯ] ಸೋಪಾನದೆದುರಲಿ ನಲಿನಲಿದು ನಿಂದು 21 ಕರ್ಪೂರ ಪುಷ್ಪವನು ಬೆರೆಸಿ ತಾವ್ತಂದು ಅಪ್ರಮೇಯನ ಶಿರದೊಳೆರೆಚಿದರು [ಅ]ಂದು 22 ಇಂದಿರಾರಮಣ ಗುಂಭಾರತಿಯ ಗ್ರಹಿಸಿ ಎಂದಿನಂದದಿ ತನ್ನ ಮಂದಿರಕೆ ನಡೆದ 23 ಬಿದಿಗೆ ತದಿಗೆಯು ಚೌತಿ ಪಂಚಮಿಯಲ್ಲಿ ವಿಧವಿಧದ ಆಭರಣಮನೆ ಧರಿಸಿ 24 ಷಷ್ಠಿ ಸಪ್ತಮಿ ಅಷ್ಟಮಿ ನೌಮಿಯಲ್ಲಿ ಸೃಷ್ಟಿಯೊಳಗುಳ್ಳ ಶೃಂಗಾರವನೆ ಮಾಡಿ 25 ದಶಮಿಯ ದಿವಸದಲಿ ಕುಸುಮನಾಭನಿಗೆ ಶಶಿಮುಖಿಯ ಅಲಂಕಾರವನ್ನು ಮಾಡಿದರು 26 ಸುರರು ಅಸುರರು ಕೂಡಿ ಶರಧಿಯನು ಮಥಿಸೆ ಭರದಿ ಅಮೃತವು ಬರಲು ಅಸುರರಪಹರಿಸೆ 27 ಸುರರೆಲ್ಲರು ಬಂದು ಶ್ರೀಹರಿಗೆ ಇಡಲು ಮೊರೆ ಸಾಧಿಸುವೆನೆಂದೆನುತ ವರಗಳನು ಕೊಡಲು 28 ಎನಗೆ ತನಗೆಂದು ಹೋರಾಡುವ ಸಮಯದಿ ವನಜನಾಭನು ಮೋಹಿನಿಯ ರೂಪಿನಲಿ 29 ವಾರೆಗೊಂಡೆಯವನು ವೈಯ್ಯಾರದಿಂದ ಧರಿಸಿ ತೋರಮುತ್ತಿನ ಕುಚ್ಚುಗಳ ಅಳವಡಿಸಿ 30 ಹೆರಳು ರಾಗಟೆಯು ಬಂಗಾರಗೊಂಡ್ಯಗಳು ಅರಳುಮಲ್ಲಿಗೆ ಹೂವ ದಂಡೆಗಳ ಮುಡಿದು 31 ಪಾನಪಟ್ಟಿಯು ಸೂರ್ಯಚಂದ್ರಮರನಿಟ್ಟು ಫಣೆಯಲ್ಲಿ ತಿದ್ದಿದ ಕಸ್ತೂರಿ ಬಟ್ಟು 32 ಚಾಪವನು ಪೋಲುವಾ ಪುಬ್ಬಿನಾ ಮಾಯ ಆಪ್ತಭಕ್ತರನು ಕರುಣದಿಂ ನೋಡುವ ನೋಟ 33 ತಿಲಕುಸುಮವನು ಪೋಲ್ವ ನಾಸಿಕದ ಚಂದ ಥಳಥಳಿಸೆ ಮುತ್ತಿನ ಮುಕುರದ ಅಂದ 34 ಕುಂದಕುಸುಮವ ಪೋಲ್ವ ದಂತಪಂಕ್ತಿಗಳು ಕೆಂ[ದ]ವಳಲತೆಯಂತಿರುವ ಅಧರಕಾಂತಿಗಳು 35 ಚಳತುಂಬು ಬುಗುಡಿ ಬಾವುಲಿಗಳನಿಟ್ಟು ಥಳಥಳಿಪ ವಜ್ರದ ಓಲೆ ಅಳವಟ್ಟು 36 ಗಲ್ಲದಲಿ ಪೊಳೆಯುವ ದೃಷ್ಟಿಯ ಬೊಟ್ಟು ಮೊಗ ದಲ್ಲಿ ಮಂದಹಾಸದ ಕಾಂತಿ ಇನ್ನಷ್ಟು 37 ಕೊರಳೊಳಗೆ ಹಾರ ಪದಕವನು ತಾನಿಟ್ಟು [ಉರದಿ] ದುಂಡುಮುತ್ತಿನ ದಿವ್ಯಸರಗಳಳವಟ್ಟು 38 ಧರಿಸಿ ನಾನಾವಿಧ ಪುಷ್ಪ ಗಿಣಿಮಾಲೆಯನು ಅರಳುಮಲ್ಲಿಗೆ ಹೂವಸರಗಳಲಂಕರಿಸಿ 39 ಉಂಗುರ ವಂಕಿ ಬಾಜಿಯ ಬಂದುದ್ವಾರ್ಯ(?) ಕೈಕಟ್ಟು ಮುಂಗೈ ಮುರಾರಿಯನ್ನು ಇಟ್ಟು 40 ಬಿಳಿಯ ಪೀತಾಂಬರವ ನಿರಿಹಿಡಿದುಟ್ಟು ಥಳಥಳಿಪ ಕುಂದಣದ ವಡ್ಯಾಣವಿಟ್ಟು 41 ಅಂದುಗೆ ಗೆಜ್ಜೆಗಳ ಚಂದದಿಂದಿಟ್ಟು ಕುಂದಣದ ಪಾಡಗವನ್ನು ಅಳವಟ್ಟು 42 ಈ ರೂಪಿನಿಂದ ಅಸುರರನು ಮೋಹಿಸುತ ಸುರರಿಗೆ ಅಮೃತವನು ಎರೆದು ಪಾಲಿಸುತ 43 ಮೂರುಕಣ್ಣುಳ್ಳವನು ಮೋಹಿಸಿದ ರೂಪ ಈ[ರೇಳು]ಲೋಕದವರಿಗೆ ತೋರಿದನು ಭೂಪ 44 ಗರುಡಮಂಟಪದಲ್ಲಿ ನಿಂತು ಶ್ರೀರಂಗ ಬೆರಗಿನಿಂದೆಲ್ಲರಿಗೆ ಬಿಡದೆ ಸೇವೆಯನಿತ್ತು 45 ಆಳ್ವಾರುಗಳಿಗೆಲ್ಲ ವಸ್ತ್ರಗಂಧವನಿತ್ತು ಅವರವರ ಆಸ್ಥಾನಕ್ಕವರ ಕಳುಹಿಸುತ 46 ಬಂದು ಬಾಗಿಲ ಹಾಕಿ ಇಂದಿರಾರಮಣ ನಿಂದ ವೆಂಕಟರಂಗ ಆನಂದದಿಂದ 47
--------------
ಯದುಗಿರಿಯಮ್ಮ
ಕೇಳಿದಾಗಲೇ ಹೇಳಬಹುದೇನೋ ಬ್ರಹ್ಮಾನುಭವಮಿದು ಪ ಹಾಳುವಾದವಲಾ ವಿಚಾರಿಸಲೇಳು ವ್ಯಸನಕೆ ಸಿಲ್ಕಿ ಕುಣಿಯುವ ಅ.ಪ ಖೂಳ ಕಪಟರಿಗೆಂತು ಅನುಭವಶಾಲಿಗಾಗಿಹ ಪರತರಾನ್ವಯ ಸುಳ್ಳಮಳ್ಳರಿಗಾಗದಹುದಣ್ಣ ವೇದಾಂತಸಾರಸ ಮೂಲ ಪ್ರಣವ ವಿಚಾರಕಹುದಣ್ಣ ಯಾರಾದಡಾಗಲೀ ನೀಲಜ್ಯೋತಿಯ ಕಾಣದೆ ಬರಿ ಶೂಲ ಶೀಲಕೆ ಸಿಲ್ಕಿ ಕುಣಿಯುತ ಆಲಿಸೆಂದು ನಮಸ್ಕರಿಸುತಿಹ ಜಾವಿದ್ಯದ ಪೋಲಿ ಜನಗಳು 1 ಪಂಡಿತರಿಗೇನದು ಕಂಡು ತಿಳಿಯಣ್ಣ ದೂರವಿಲ್ಲವು ಅಂಡದೊಳಗಿಹ ಪಿಂಡವೇ ಬ್ರಹ್ಮಾಂಡ ವೇದಾಂತಾರ್ಥ ಸಮ್ಮತಿ ಭಂಡರಿಗೆ ಬಹುಭಾಷೆಗಹುದೇನ ಕುಂಡಲೀಪುರ ತತ್ಪ್ರಯಾಣವು 2 ಓದಿ ವಿಕ್ರಯವನ್ನು ಮಾಡ್ಯಾರು ಓಂಕಾರ ಬೀಜದ ಹಾದಿಯನು ತಾವು ಕಾಣದೋಡ್ಯಾರೊ ರಾ ಜಾಧಿರಾಜರೂ ಕಾವಿ ಜಗಳವ ಕುಂತು ನೋಡ್ಯಾರು ವೇದಾಂತಿಗಳೂ ನಿಜ ಜ್ಞಾನಪುತ್ಥಳಿಯನ್ನು ಕಂಡ್ಯಾರು ಆದಿಮಧ್ಯಾಂತಗಳರಿಯದ ವಾದಿಗಳಿಗೆಂತಕ್ಕು ತತ್ವದ ಬೋಧೆಯೊಳಗಿಹುದು ಆದಿತತ್ವವು 3 ಕವಿಗಳೆಷ್ಟೋ ಕಷ್ಟಪಟ್ಯಾರು ಅವಸಾನಕರಂ ಭವದ ಬಲೆಯೊಳು ಕಟ್ಟಿಕುಟ್ಯಾರು ಆಗಲ್ಲಿ ಸುಜನರು ಜ್ಞಾ ನವೈರಾಗ್ಯವನು ಕೊಟ್ಯಾರು ಶಿವನು ತಾನೆಂತೆಂಬ ಅದ್ವೈತವನು ಆಡಲ್ಕಡಕಲಹುದೇ ಭುವನದೊಳು ಪಂಚಾಕ್ಷರೋ ನಿಜತ್ರಿಣೆಯಸತಿ ಮೋಕ್ಷೆಚ್ಛೆ ಕವಚಂ4 ನಾಗನಗರಿಪುರೀಶ ಕಾಣಣ್ಣ ಆಧ್ಯಾತ್ಮದನುಭವ ಕಾಗಿ ನಿನ್ನೊಳ ಹುಡುಕಬೇಕಣ್ಣ ಹಂಸಾಶ್ರಯದಿ ನಿನ್ನೊ ಳಗಿದೆಲ್ಲವು ಹುಡುಕಿ ನೋಡಣ್ಣ ಭೋಗಿಶಯನ ಶ್ರೀ ತುಲಸೀರಾಮನ ರಾಗವಿರಹಿತನಾಗಿ ಭಜಿಸಿದಡಾಗ ನಿನ್ನೊಳಗಂಕುರಿಪುದ 5
--------------
ಚನ್ನಪಟ್ಟಣದ ಅಹೋಬಲದಾಸರು
ಜಾತಿ ಕುಲಗೋತ್ರಗಳ ಖ್ಯಾತಿ ಹಿರಿದಲ್ಲಯ್ಯ ಪ ನೀತಿ ನಯ ಭಕುತಿಗಳು ಹಿರಿಯವಯ್ಯ ಅ.ಪ ಸ್ನಾನ ಸಂಧ್ಯಾ ಹೋಮ ಧ್ಯಾನ ದಿನಚರ್ಯೆಗಳ ತಾನಲಕ್ಷ್ಯವ ಗೈವ ಮಾನವನು ದ್ವಿಜನೇ ಶ್ರೀನಿವಾಸಾ ರಂಗ ದಾನವಾರಿ ಎಂದು ಜಾನಿಸುವ ಹರಿಜನರು ಹೀನರಹರೇ1 ಬೂದಿ ನಾಮವ ಬಳಿದು ವೇದಾಂತಿ ತಾನೆಂದು ಮೇದಿನಿಯ ಜನರಲ್ಲಿ ಕ್ರೋಧ ತೋರಿ ಮಾಧವನ ಭಕುತರಲ್ಲಿ ಭೇದ ವೈರವ ತಾಳಿ ವಾದ ಮಾಡುವ ನರಗೆ ಹರಿಯ ಕೃಪೆಯುಂಟೆ 2 ವನಜನಾಭನ ನೆನೆದು ತನುಮನವನರ್ಪಿಸದೆ ಧನದಾಸೆದೋರುವನು ಹರಿಭಕುತನೆ ಕನಸುಮನಸಿನೊಳೆಲ್ಲ ಮಾಂಗಿರೀಶನ ಭಜಿಸಿ ದಿನಪೂಜೆಗೈವವನು ಕುಲಹೀನನೇ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಹೊಂದಿಲ್ಲದೆ ನೀ ಕುಂತೀ ಪ ಪರಮನು ಕೇಳಿದರೇನಂತೀ ಕೆಟ್ಟ ನರಕದೊಳಗೆ ಯಮಬಾದಂತೀ ಅ.ಪ ಅಜನನು ಬೆರೆಯಲು ಬೇಕಂತೀ ಆದು ಭಜನೆಗೆ ಬಾರದು ಯಾಕಂತೀ ನಿಜವೊಂದಿಲ್ಲದೆ ನೀಕುಂತೀ ಆದ ಭಜಿಸಿ ನೋಡದೆ ಸುಮ್ಮನ್ಯಾಕ್ಕುಂತೀ 1 ಸಾಧನೆ ಮಾಡುವೆ ಹೀಗಂತೀ ನಿಜ ಬೋಧೆಯಿಲ್ಲದೆ ಯಾಕೀ ಭ್ರಾಂತೀ ಭೇದಿಸುವನು ಸೂರ್ಯನಕಾಂತಿ ನಿಜ [ದಿಂದ]ತುಲಸಿರಾಮನೆ ಗುರು ವೇದಾಂತಿ 2
--------------
ಚನ್ನಪಟ್ಟಣದ ಅಹೋಬಲದಾಸರು