ಒಟ್ಟು 80 ಕಡೆಗಳಲ್ಲಿ , 37 ದಾಸರು , 70 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಮಧ್ವನಾಮ ಜಯ ಜಯ ಜಗತ್ರಾಣ ಜಗದೊಳಗೆ ಸುತ್ರಾಣಅಖಿಳ ಗುಣ ಸದ್ಧಾಮ ಮಧ್ವನಾಮ ಪ ಆವ ಕಚ್ಚಪ ರೂಪದಿಂದ ಲಂಡೋದಕವಓವಿ ಧರಿಸಿದ ಶೇಷಮೂರುತಿಯನುಆವವನ ಬಳಿವಿಡಿದು ಹರಿಯ ಸುರರೆಯ್ದುವರುಆ ವಾಯು ನಮ್ಮ ಕುಲಗುರುರಾಯನು 1 ಆವವನು ದೇಹದೊಳಗಿರಲು ಹರಿ ನೆಲಸಿಹನುಆವವನು ತೊಲಗೆ ಹರಿ ತಾ ತೊಲಗುವಆವವನು ದೇಹದ ಒಳ ಹೊರಗೆ ನಿಯಾಮಕನುಆ ವಾಯು ನಮ್ಮ ಕುಲಗುರುರಾಯನು 2 ಸುರರು ಮುಖ್ಯಪ್ರಾಣ ತೊಲಗಲಾ ದೇಹವನುಅರಿತು ಪೆಣವೆಂದು ಪೇಳುವರು ಬುಧಜನ 3 ಸುರರೊಳಗೆ ನರರೊಳಗೆ ಸರ್ವ ಭೂತಗಳೊಳಗೆಪರತರನೆನಿಸಿ ನಿಯಾಮಿಸಿ ನೆಲಸಿಹಹರಿಯನಲ್ಲದೆ ಬಗೆಯ ಅನ್ಯರನು ಲೋಕದೊಳುಗುರು ಕುಲತಿಲಕ ಮುಖ್ಯ ಪವಮಾನನು 4 ತರಣಿ ಬಿಂಬಕ್ಕೆ ಲಂಘಿಸಿದಈತಗೆಣೆಯಾರು ಮೂರ್ಲೋಕದೊಳಗೆ 5 ತರಣಿಗಭಿಮುಖನಾಗಿ ಶಬ್ದ ಶಾಸ್ತ್ರವ ರಚಿಸಿಉರವಣಿಸಿ ಹಿಂದು ಮುಂದಾಗಿ ನಡೆದಪರಮ ಪವಮಾನಸುತ ಉದಯಾಸ್ತ ಶೈಲಗಳಭರದಿಯೈದಿದಗೀತಗುಪಮೆ ಉಂಟೇ 6 ಅಖಿಳ ವೇದಗಳ ಸಾರಪಠಿಸಿದನು ಮುನ್ನಲ್ಲಿನಿಖಿಳ ವ್ಯಾಕರಣಗಳ ಇವ ಪಠಿಸಿದಮುಖದಲ್ಲಿ ಕಿಂಚಿದಪಶಬ್ದ ಇವಗಿಲ್ಲೆಂದುಮುಖ್ಯಪ್ರಾಣನನು ರಾಮನನುಕರಿಸಿದ 7 ತರಣಿಸುತನನು ಕಾಯ್ದು ಶರಧಿಯನು ನೆರೆದಾಟಿಧರಣಿಸುತೆಯಳ ಕಂಡು ದನುಜರೊಡನೆಭರದಿ ರಣವನೆ ಮಾಡಿ ಗೆಲಿದು ದಿವ್ಯಾಸ್ತ್ರಗಳಉರುಹಿ ಲಂಕೆಯ ಬಂದ ಹನುಮಂತನು 8 ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿಶರಧಿಯನು ಕಟ್ಟಿ ಬಲು ರಕ್ಕಸರನುಒರಸಿ ರಣದಲಿ ದಶಶಿರನ ಹುಡಿಗುಟ್ಟಿದಮೆರೆದ ಹನುಮಂತ ಬಲವಂತ ಧೀರ 9 ಉರಗ ಬಂಧಕೆ ಸಿಲುಕಿ ಕಪಿವರರು ಮೈಮರೆಯೆತರಣಿ ಕುಲತಿಲಕನಾಜ್ಞೆಯ ತಾಳಿದಗಿರಿಸಹಿತ ಸಂಜೀವನವ ಕಿತ್ತು ತಂದಿತ್ತಹರಿವರಗೆ ಸರಿಯುಂಟೆ ಹನುಮಂತಗೆ 10 ವಿಜಯ ರಘುಪತಿ ಮೆಚ್ಚಿ ಧರಣಿಸುತೆಯಳಿಗೀಯೆಭಜಿಸಿ ಮೌಕ್ತಿಕದ ಹಾರವನು ಪಡೆದಅಜಪದವಿಯನು ರಾಮ ಕೊಡುವೆನೆನೆ ಹನುಮಂತನಿಜಭಕುತಿಯನೆ ಬೇಡಿ ವರವ ಪಡೆದ 11 ಆ ಮಾರುತನೆ ಭೀಮನೆನಿಸಿ ದ್ವಾಪರದಲ್ಲಿ ಸೋಮಕುಲದಲಿ ಜನಿಸಿ ಪಾರ್ಥನೊಡನೆ ಭೀಮ ವಿಕ್ರಮ ರಕ್ಕಸರ ಮುರಿದೊಟ್ಟಿದಆ ಮಹಿಮನಮ್ಮ ಕುಲಗುರು ರಾಯನು 12 ಕರದಿಂದಶಿಶುಭಾವನಾದ ಭೀಮನ ಬಿಡಲುಗಿರಿವಡೆದುಶತಶೃಂಗವೆಂದೆನಿಸಿತುಹರಿಗಳ ಹರಿಗಳಿಂ ಕರಿಗಳ ಕರಿಗಳಿಂಅರೆವ ವೀರನಿಗೆ ಸುರ ನರರು ಸರಿಯೇ 13 ಕುರುಪ ಗರಳವನಿಕ್ಕೆ ನೆರೆ ಉಂಡು ತೇಗಿಹಸಿದುರಗಗಳ ಮ್ಯಾಲೆ ಬಿಡಲದನೊರಸಿದಅರಗಿನರಮನೆಯಲ್ಲಿ ಉರಿಯನಿಕ್ಕಲು ವೀರಧರಿಸಿ ಜಾಹ್ನವಿಗೊಯ್ದ ತನ್ನನುಜರ14 ಅಲ್ಲಿರ್ದ ಬಕ ಹಿಡಿಂಬಕರೆಂಬ ರಕ್ಕಸರನಿಲ್ಲದೊರಸಿದ ಲೋಕಕಂಟಕರನುಬಲ್ಲಿದಸುರರ ಗೆಲಿದು ದ್ರೌಪದಿಯ ಕೈವಿಡಿದುಎಲ್ಲ ಸುಜನರಿಗೆ ಹರುಷವ ತೋರಿದ 15 ರಾಜಕುಲ ವಜ್ರನೆನಿಸಿದ ಮಾಗಧನ ಸೀಳಿರಾಜಸೂಯ ಯಾಗವನು ಮಾಡಿಸಿದನುಆಜಿಯೊಳು ಕೌರವರ ಬಲವ ಸವರುವೆನೆಂದುಮೂಜಗವರಿಯೆ ಕಂಕಣ ಕಟ್ಟಿದ 16 ಮಾನನಿಧಿ ದ್ರೌಪದಿಯ ಮನದಿಂಗಿತವನರಿತುದಾನವರ ಸವರಬೇಕೆಂದು ಬ್ಯಾಗಕಾನನವ ಪೊಕ್ಕು ಕಿಮ್ಮೀರಾದಿಗಳ ತರಿದುಮಾನಿನಿಗೆ ಸೌಗಂಧಿಕವನೆ ತಂದ 17 ದುರುಳ ಕೀಚಕನು ತಾಂ ದ್ರೌಪದಿಯ ಚಲುವಿಕೆಗೆಮರುಳಾಗಿ ಕರೆÀಕರೆಯ ಮಾಡಲವನಾಗರಡಿ ಮನೆಯಲ್ಲಿ ವರೆಸಿ ಅವನನ್ವಯದಕುರುಪನಟ್ಟಿದ ಮಲ್ಲಕುಲವ ಸದೆದ 18 ಕೌರವರ ಬಲ ಸವರಿ ವೈರಿಗಳ ನೆಗ್ಗೊತ್ತಿಓರಂತೆ ಕೌರವನ ಮುರಿದು ಮೆರೆದವೈರಿ ದುಶ್ಯಾಸನ್ನ ರಣದಲ್ಲಿ ಎಡೆಗೆಡಹಿವೀರ ನರಹರಿಯ ಲೀಲೆಯ ತೋರಿದ 19 ಗುರುಸುತನು ಸಂಗರದಿ ನಾರಾಯಣಾಸ್ತ್ರವನುಉರವಣಿಸಿ ಬಿಡಲು ಶಸ್ತ್ರವ ಬಿಸುಟರುಹರಿಕೃಪೆಯ ಪಡೆದಿರ್ದ ಭೀಮ ಹುಂಕಾರದಲಿಹರಿಯ ದಿವ್ಯಾಸ್ತ್ರವನು ನೆರೆ ಅಟ್ಟಿದ 20 ಚಂಡ ವಿಕ್ರಮನು ಗದೆಗೊಂಡು ರಣದಿ ಭೂಮಂಡಲದೊಳಿದಿರಾಂತ ಖಳರನೆಲ್ಲಾಹಿಂಡಿ ಬಿಸುಟಿಹ ವೃಕೋದರನ ಪ್ರತಾಪವನುಕಂಡುನಿಲ್ಲುವರಾರು ತ್ರಿಭುವನದೊಳು21 ದಾನವರು ಕಲಿಯುಗದೊಳವತರಿಸಿ ವಿಬುಧರೊಳುವೇನನ ಮತವನರುಹಲದನರಿತುಜ್ಞಾನಿ ತಾ ಪವÀಮಾನ ಭೂತಳದೊಳವತರಿಸಿಮಾನನಿಧಿ ಮಧ್ವಾಖ್ಯನೆಂದೆನಿಸಿದ 22 ಅರ್ಭಕತನದೊಳೈದಿ ಬದರಿಯಲಿ ಮಧ್ವಮುನಿನಿರ್ಭಯದಿ ಸಕಳ ಶಾಸ್ತ್ರವ ಪಠಿಸಿದಉರ್ವಿಯೊಳು ಮಾಯೆ ಬೀರಲು ತತ್ವಮಾರ್ಗವನುಓರ್ವ ಮಧ್ವಮುನಿ ತೋರ್ದ ಸುಜನರ್ಗೆ23 ವಿಶ್ವ ವಿಶ್ವ ಗೀರ್ವಾಣ ಸಂತತಿಯಲಿ 24 ಅಖಿಳ ವೇದಾರ್ಥಗಳನುಪದುಮನಾಭನ ಮುಖದಿ ತಿಳಿದು ಬ್ರಹ್ಮತ್ವಯ್ಯೆದಿದ ಮಧ್ವಮುನಿರಾಯಗಭಿವಂದಿಪೆ 25 ಜಯಜಯತು ದುರ್ವಾದಿಮತತಿಮಿರ ಮಾರ್ತಾಂಡಜಯಜಯತು ವಾದಿಗಜ ಪಂಚಾನನಜಯಜಯತು ಚಾರ್ವಾಕಗರ್ವಪರ್ವತ ಕುಲಿಶಜಯ ಜಯ ಜಗನ್ನಾಥ ಮಧ್ವನಾಥ26 ತುಂಗಕುಲ ಗುರುವರನ ಹೃತ್ಕಮಲದಲಿ ನಿಲಿಸಿಭಂಗವಿಲ್ಲದೆ ಸುಖದ ಸುಜನಕೆಲ್ಲಹಿಂಗದೆ ಕೊಡುವ ನಮ್ಮ ಮಧ್ವಾಂತರಾತ್ಮಕರಂಗವಿಠಲನೆಂದು ನೆರೆ ಸಾರಿರೈ 27 “ಮಧ್ವನಾಮ” ಕೃತಿಗೆ ಶ್ರೀ ಜಗನ್ನಾಥದಾಸರ ಫಲಶ್ರುತಿ ಸೋಮ ಸೂರ್ಯೋಪರಾಗದಿ ಗೋಸಹಸ್ರಗಳಭೂಮಿದೇವರಿಗೆ ಸುರನದಿಯ ತೀರದಿಶ್ರೀಮುಕುಂದಾರ್ಪಣವೆನುತ ಕೊಟ್ಟ ಫಲಮಕ್ಕುಈ ಮಧ್ವನಾಮ ಬರೆದೋದಿದರ್ಗೆ 1 ಪುತ್ರರಿಲ್ಲದವರು ಸತ್ಪುತ್ರರೈದುವರುಸರ್ವತ್ರದಲಿ ದಿಗ್ವಿಜಯವಹುದು ಸಕಲಶತ್ರುಗಳು ಕೆಡುವರಪಮೃತ್ಯು ಬರಲಂಜವುದುಸೂತ್ರನಾಮಕನ ಸಂಸ್ತುತಿ ಮಾತ್ರದಿ 2 ಶ್ರೀಪಾದರಾಯ ಪೇಳಿದ ಮಧ್ವನಾಮ ಸಂತಾಪಕಳೆದಖಿಳ ಸೌಖ್ಯವನೀವುದುಶ್ರೀಪತಿ ಜಗನ್ನಾಥವಿಠಲನ ತೋರಿ ಭವಕೂಪಾರದಿಂದ ಕಡೆ ಹಾಯಿಸುವುದು 3
--------------
ಶ್ರೀಪಾದರಾಜರು
ಅಥ ಹನುಮದ್ವ್ರತ ಕಥಾ ಸುಳಾದಿ ಧ್ರುವ ತಾಳ ವೃತವೆ ಉತ್ತಮ ವೃತವೆಂದು ಪೇಳಿಹರು ಅತುಳ ಜ್ಞಾನನಿಧಿ ವಿಜಯಾಖ್ಯ ಗುರುಗಳು | ಸತತ ಅಧ್ಯಾತುಮ ಅನಂತ ವೃತವೆಂದು | ಕ್ಷಿತಿಯೊಳು ಈ ವೃತಕೆÀ ಸರಿಗಾಣೆನೊ | ಪತಿತ ಮಾನವರ ಉದ್ಧಾರಗೋಸುಗವಾಗಿ ದ್ವಿತಿಯ ಉತ್ತಮ ವೃತವು ಹನುಮದ್ಪ್ರತವೂ | ಯತನ ಜ್ಞಾನೇಚ್ಛಾ ಶಕ್ತ್ಯಾದಿಗಳಿಗೆ ನಿರುತ | ಜತೆಯಾಗಿ ಕಾರ್ಯ ಮಾಳ್ಪ ಜ್ಞಾನಾಖ್ಯವೃತವೊ | ಅತಿಶಯವಾದ ಜ್ಞಾನ ಭಕ್ತಿ ವಿರಕ್ತಿವೀವುದು | ಮತಿವಂತರು ಮನಕೆ ತಂದು ತಿಳಿದು | ಕ್ಷಿತಿಪತಿ ಧರ್ಮರಾಜನೆಸಗಿದ ಮಹಾ ವೃತವೊ | ಪತಿಭಕುತಿಯುಕುತಳಾದ ದ್ರೌಪದಿಯು | ಪತಿ ಮೂರ್ಲೋಕದ ಶ್ರೀ ಕೃಷ್ಣನುಪದೇಶದಂತ್ಯೆ | ಮಿತ ಜ್ಯಾನದಿಂದ ಚರಿತ ವ್ರತವೊ | ಹಿತವಂತ ಹನುಮಂತ ಪಿತ ರಾಮನಿಗೆ ಪೇಳೆ ಆ | ಚ್ಯುತನಾದ ರಾಮನುಮತಿವಾನ್ ಹನು | ಮಂತನ ಭಕುತಿಗೊಲಿದು ಮಾಡ್ಡ ವೃತವೊ | ಸತತ ಸೂತರು ಶೌನಕಾದ್ಯರಿಗಿದರ ಮಹಿಮೆ | ಮಿತಿ ಇಲ್ಲದೇ ಪೇಳಿ ಮಾಡಿಸಿದ ವೃತವೊ | ವೃತತಿಜಾಸನ ಪ್ರಿಯ ಸುತ ಸುಂದರ ವಿಠಲನ ಭ | ಕುತಿ ಜ್ಞಾನವೀವ ಮಹಾ ಶ್ರೇಷ್ಠ ವೃತವೊ 1 ಮಟ್ಟತಾಳ ಜಾನ್ಹವೀ ತೀರದಲಿ ಶೌನಕಾದ್ಯ ಮುನಿಗಳು | ಧ್ಯಾನಿ ಸೂತರ ಕುರಿತು ಸಾನುರಾಗದಿ ನಮಿಸಿ | ಮೇಣು ಭಕುತಿಯಿಂದ ಙÁ್ಞನವಂತರೆ ನಿಮ್ಮಿಂ | ನಿತ್ಯ | ಧೇನಿಸುವೆವು ಹರಿಯಾ ಪುನೀತರ ಮಾಡುವಾ | ಕಾಣೋವನ್ಯ ವೃತವು ಆವುದುಪೇಳೆನಲು | ನಿತ್ಯ ಶೂದ್ರಾದಿ ನಾಲ್ಕು | ಜಾಣ ವರ್ಣರಿಂದ ಮಾಡ್ವದಕ್ಕೆ ಯೋಗ್ಯವೊ | ಏನು ಬೇಡಿದರೆ ತಡಿಯದೆ ಕೊಡುವುದೊ | ಜ್ಞಾನಿ ಜನಗಳಿಗೆಲ್ಲ ಮಂಗಳತಮ ವೃತವು | ಪುತ್ರಾದಿಗಳೀವುದು ಶ್ರೇಣಿ ದಿನ ಪ್ರತಿ ದಿನದಲ್ಲಿ ವರವಿದ್ಯ ಪ್ರದವೊ ಹಾನಿ ಲಾಭಗಳಲ್ಲಿ ಹನುಮಂತನ ನೆನಸೆ | ಮಾನನಿಧಿ ಸುತ ಸುಂದರ ವಿಠಲನ | ಧ್ಯಾನ ಧಾರಣವೀವ ಉತ್ತುಮಾಮಹವೃತವೊ 1 ರೂಪಕ ತಾಳ ಒಂದಾನೊಂದು ಸಮಯದಲ್ಲಿ ಶ್ರೀ ವ್ಯಾಸ ಶಿಷ್ಯ | ವೃಂದದಿಂದೊಡಗೂಡಿ ಯುಧಿಷ್ಠರನ ನೋಡಲು | ಅಂದುಳ್ಳ ದ್ವೈತ ವನಕೆ ನಡೆತಂದರು ಏನಂಬೆ | ಚಂದಾದ ನಿರ್ವೈರ ಮೃಗವೃಂದಗಳಿಂ ಕೂಡಿರುವ | ಕುಂದ ಮಂದಾರಾದಿ ಪುಷ್ಪಫಲ ವೃಕ್ಷಗಳಿಂ ಶೋಭಿಪ | ಕುಂದು ದೂರೋಡಿಸಿದ ಜ್ಞಾನಿಗಳ ಸಮೂಹವು | ಛಂದದಲಿ ಕಾವ್ಯಷಡಂಘ್ರಿ ನಿರತರಾಗಿ | ಮುಂದೆ ಅಧ್ಯಯನ ಶ್ರುತಸಂಪನ್ನರಾದವರು | ಒಂದೊಂದು ವೇದ ಋಗು ಯಜು:ಸಾಮಾಥರ್ವಣ ಒಂದೋಂದು ಶಾಖಾಶಾಸ್ತ್ರದಿ ಪ್ರವಚನಾಸಕ್ತರು | ಮಿಂದು ಹರಿಪದಜಲದಿ ಚತುರ ವೇದ ಘೋಷದಿ | ಸಂದೇಹವಿಲ್ಲದಲೇ ಭಗವದ್ಗೀತಾ ಲೀಲಾ | ಎಂದೆಂಬುವ ಹರಿಕಥಾಮೃತ ಪಾನ ಮಾಡುವ | ಸಂದೋಹ ಮುನಿಗಳಿಗೆ ನಿತ್ಯನ್ನದಾನವ ಮಾಡಿ | ಬಂಧುಗಳಿಂ ಸಹಿತ ಇರುವ ಯುಧಿಷ್ಟರನನ್ನು | ಸುಂದರ ವಿಠಲಾತ್ಮಕ ವ್ಯಾಸದೇವನು | ಅಂದು ದ್ವೈತವನದಲ್ಲಿ ಕೃಪಾ ದೃಷ್ಟಿಯಿಂದ ನೋಡಿದನು 3 ಕೃಷ್ಣದ್ವೈಪಾಯನಾ ಮುನಿಗಳಾಗಮ ಕೇಳಿ | ಕೃಷ್ಣೆ ಸಹಿತಾ ಅನುಜರೊಡನೆ ಕೂಡಿ | ಜೇಷ್ಠನಾದ ಯುಧಿಷ್ಠರನು ತಾ ದೂರ ನಡೆತಂದುವಾ | ಸಿಷ್ಟ ಕೃಷ್ಣಗೆ ಸಾಷ್ಟಾಂಗ ಪ್ರಣಾಮಗಳ ಮಾಡಿ ನಿ | ರ್ದಿಷ್ಟವಾದೆಕಾಂತ ಸ್ಥಳಕೆ ಕರೆತಂದು | ಶ್ರೇಷ್ಠವಾದಾಸನದ ಮೇಲೆ ಕುಳ್ಳಿರಿಸಿ | ಜೇಷ್ಟಾದಿಕೃಷ್ಣೇಯೊಡನೆ ಉತ್ಕøಷ್ಠ ಪೂಜೆಯ ಮಾಡೆ ಪರ ಮೇಷ್ಠಿ ಜನಕನು ತಾನು ತುಷ್ಟ ನಾಹೆ | ಶಿಷ್ಟಾಚಾರದಂತೆ ಕುಶಲ ಪ್ರಶ್ನೆಯು ಮಾಡ್ದ ನಿ | ರ್ದುಷ್ಟ ಭೀಮಾರ್ಜುನರೆ ಅಶ್ವಿನಿಯರೇ ಮನ | ಮುಟ್ಟಿ ಹರಿಪಾದ ಭಜನೆಯ ಮಾಡಿ ಸುಖಿಗಳಾಗಿಹ್ಯರೇ? ಧಿಟ್ಟತನದಲೆ ತಪವನೆಸಗಿ ಕಿರಿಟಯು | ನಿಷ್ಠಿಯಲಿ ಮಹರುದ್ರನೊಲಿಸಿ ಪಾಶುಪತವೆಂಬು | ತ್ಕøಷ್ಟಾಸ್ತ್ರ ಸಂಪಾದನೆಯ ಮಾಡಿದದು ಕೇಳಿ | ಹೃಷ್ಟನಾದೆನೊ ನಾನು ನಿಮ್ಮಿಂದಲಿ ಕೂಡಿ | ಕಷ್ಟಬಡುತಿರುವ ನಿನ ದುಃಖ ಶಾಂತ್ಯರ್ಥ | ಇಷ್ಟವೀವುದಕಾಗಿ ಬಂದಿಹನು ರಾಜಾಯು | ದ್ಯಿಷ್ಟರನೆ ಕೇಳುತ್ತಮ ವೃತವು ನಿನಗೋಸುಗ | ನಿಷ್ಠಿಯಿಂದಲಿ ಧರ್ಮತನಯ ನುಡಿದನು 4 ತ್ರಿವಿಡಿ ತಾಳ ನಮೊ ನಮೊ ತಾತ ಮಹಾ ಖ್ಯಾತವಂತರೆ ನಿಮಗೆ | ನಮೊ ನಮೊ ನಮೊ ಎಂದು ಬಿನ್ನೈಸುವೆ | ಶ್ರಮ ಪರಿಹರವೃತವಾವುದದÀರ ಮಹಿಮೆ | ಸುಮನಸರೊಡೆಯನೆ ಪೇಳಯ್ಯಾ ಜೀಯ್ಯಾ | ಕುಮತಿ ಪರಿಹರಿಸುವ ದೇವತೆ ಆರು ಉ | ತ್ತಮ ನಿಯಮ ಆವುದು ಪೂಜಾ ಕ್ರಮವು | ಶಮೆ ದಮೆವೀವ ನಿಯಮ ತಿಥಿ ಆವುದು | ರಮೆ ರಮಣನೆÉ ಆವ ಮಾಸದಲಿ ಮಾಡೋದು | ಶಮಲ ವಿವರ್ಜಿತ ವ್ಯಾಸದೇವನೆ ನಿಮ್ಮಾ | ಗಮನವು ಎಮ್ಮಯ ಕಷ್ಟ ದೊರೋಡಿಸಲು | ಸಮೀಚೀನ ಮತಿಯಿತ್ತು ಭಕ್ತರ ಪಾಲಿಪುದೆನುತ | ಸಮಚಿತ್ತ ಉಳ್ಳ ಮುನಿಗಳ ಕೂಡ ನಮಿಸಲು | ಭ್ರಮಣ ಮತಿಯ ಕಳೆವ ಹನುಮಾನ್ ಹ ನುಮನ್ನಾಮ ಪುನಃ ಪುನಃ ಸ್ಮರಿಸಿ ಶ್ರೀವ್ಯಾಸರು | ಆಮಮ ಪೇಳಲೇನೊ ಹನುಮದ್ವ್ರತವೋ | ಧೀಮಂತ ಹನುಮಂತನ ನಾಮೋಚ್ಚಾರಣೆಯಿಂದ | ಸಮಸ್ತ ಕಾರ್ಯ ಸಿದ್ದಿಪದು ಸಂಶಯ ಬ್ಯಾಡಿ | ಆ ಮಹಾ ದುಷ್ಟ ಗ್ರಹೋಚ್ಛಾಟನ ಜ್ವರಾದಿ | ತಾಮಸ ರೋಗ ನಿವರಣವಾಗುವದು | ಪ್ರೇಮದಿಂದಲಿ ಕೇಳು ಬಹು ವಾಕ್ಯಗಳಿಂದೇನು ? ಸೀಮೆಗಾಣದ ಅಭೀಷ್ಟಪ್ರದಾಯಕವೊ ನೀ ಮರೆಯದಿರು ಹಿಂದೆ ದ್ವಾರಕಿಯಲ್ಲಿ ಶ್ರೀ ಮದ್ವಿಷ್ಣುವೆ ಕೃಷ್ಣ ಪಾಂಚಾಲಿಯನಿ ಸ್ಸೀಮ ಭಕುತಿಗೆ ವೊಲಿದು ಈ ಮಹಾ ಹ ನುಮದ್ವ್ರತವನ್ನು ಉಪದೇಶಿಸಿ | ನೇಮದಿಂದಲೀ ವ್ರತವು ಮಾಡಿರೆನಲು ಕಾಮಿತಫಲವೀವಾ ವ್ರತದ ಮಹಿಮೆ ಆ | ಸ್ವಾಮಿ ಅನುಗ್ರಹದಿ ಸಂಪದೈಶ್ವರ್ಯದಿ ಆ ಮಹಾ ಸ್ತೋಮಗಳು ಪ್ರಾಪ್ತವಾಗಲು ನಿಮಗೆ | ಈ ಮಹಾ ವೃತ ಮಹಿಮೆ ತಿಳಿಯದ ಪಾರ್ಥನು ಪ್ರೇಮದಿಂ ದ್ರೌಪದಿ ಧರಿಸಿದ ದೋರವ ನೋಡಿ ಹೇ ಮಹಿಷಿಯೆ ಇದೆನೆನ್ನಲಾಗಿ | ತಾಮರಸನಯನೆ ಶ್ರೀ ಹನುಮದ್ದೋರವನ್ನೆ | ಆ ಮಹಾ ಐಶ್ವರ್ಯ ಗರ್ವಿಕೆ ಕ್ರೋಧಾದಿ ನಿ ಸ್ಸೀಮ ಪರಾಕ್ರಮಿ ನುಡಿದ ಅರ್ಜುನನು ಕಾಮಿನಿಯೆ ಕೇಳು ಆ ಹನುಮನೆಂಬೊ ಕಪಿ ನಾ ಮುದದಿ ಧ್ವಜದಲ್ಲಿ ಧರಿಸಿರುವೆನು ಈ | ಮರ್ಮವನು ತಿಳಿಯದೆ ಆ ವನಚರ ಶಾಖಾಮೃಗ | ಕಾಮಿತ ಫಲ ಕೊಡಬಲ್ಲದೆ ಕೇಳಿನ್ನು ಪಾಮರ ವ್ರತದಿಂದ ವಂಚಿಸಿದೆಲ್ಲದೇ ನೀನು ಕಾಮಿ ಜನರ ತೆರದಿಂದಲಿ ಅರ್ಜುನನು ಭಾಮೆ ದ್ರೌಪದಿ ಧರಿಸಿದ ತ್ರಯೋದಶ ಗ್ರಂಥಿಯುಕ್ತ ಆ ಮುದದ ದೋರವನು ಹರಿದು ಬಿಸಾಟಲು ಹೇಮಾದಿ ಸಕಲ ಸಂಪದೈಶ್ವರ್ಯ ರಾಜ್ಯವು ಭೂಮಿ ಸಹಿತ ಪ್ರಾಪ್ತವಾದುದೆಲ್ಲ ಪೋಗೆ | ಶ್ರಿಮದಾಂಧದಿಂದ ಪ್ರಾಪ್ತವ್ಯ ದುಃಖ ಫಲವು | ಪರಿಯಂತ | ರಾಮ ಮನೊರಮನು ಇನಿತು ನುಡಿಯೆ | ಸ್ವಾಮಿ ಆಜ್ಞವ ತಿಳಿದ ದ್ರೌಪದಿ ದೇವಿಯು | ಹೇ ಮಹತ್ಮರೆ ಶ್ರೀವ್ಯಾಸರ ನುಡಿ ನಿಜವೋ ನೇಮಗಳೆಲ್ಲಾ ತಿಳಿಯಲೋಶವೆ ಎಂದಿಗು 5 ಧ್ರುವ ತಾಳ ಕೇಳಯ್ಯಾ ಧರ್ಮರಾಜ ಆಲಸ ಮಾಡದೆ | ಪೇಳುವೆ ನಿನಗೊಂದು ಪುರಾತನ ಕಥೆಯು | ಆಲಿಸಿ ಮನಕೆ ತಂದು ಬಾಳು ಚನ್ನಾಗಿ ನೀನು | ಶೀಲೆ ಸೀತೆಯ ನೋಡುವ ಇಚ್ಛಾಉಳ್ಳ ಮಾ ನಿತ್ಯ ಲಕ್ಷ್ಮಣನೊಡಗೂಡಿ | ಮೇಲಾದ ಋಷ್ಯಮೂಕ ಗಿರಿಯ ಮಧ್ಯದಲ್ಲಿ ಶೀಲ ಭಕುತಿಯುಳ್ಳ ಹನುಮಂತನ ದರ್ಶನಾಗೆ ಆಳುವ ಕಪಿ ರಾಜ್ಯ ಸುಗ್ರೀವನ ಸಖ್ಯವನು ಬ ಹಾಳ ಮತಿಯುಳ್ಳ ವಾಯುಜ ಮಾಡಿಸೆ | ಮಾಸ ಮಳೆಗಾಲವು ವಾಸ ಮಾಡ್ಡ | ಕಾಲದಲಿ ಹನುಮನು ರಾಮದೇವಗೆ ನಮಿಸಿ | ನೀಲ ಮೇಘ ಶ್ಯಾಮ ಶ್ರೀ ರಾಮ ನೀನಿನ್ನ | ಬಾಲನ ಬಿನ್ನಪ ಮನಕೆ ತರಲು | ಪೇಳುವೆ ನಿಮ್ಮ ಸನ್ನಿಧಾನದಲೆನ್ನ ನಾಮ ಮಹಿಮೆ ಮೇಲುಸಿಲೆಯನದ್ಧರಿಸಿದ ಶ್ರೀರಾಮ ನೀನಙ್ಞನೆ | ಕಾಲ ಜನನದಲಿ ಇಂದ್ರನಿಂದಲಿ ಎನ್ನ ಮೇಲಾದ ವಜ್ರಾಯುಧದಿಂದ ಹನುಘಾತಿಸಲು ಭೂಲೋಕದಲ್ಲಿ ಅಂದಿನಾರಭ್ಯ ಹನುಮನೆಂದು ಖ್ಯಾತನಾಗಿ | ಕೇಳಯ್ಯಾ ಅಂಜನಾದ್ರಿಯಲ್ಲಿ ಸೂರ್ಯೋದಯ | ಕಾಲಕೆ ಪ್ರಕಟನಾದ ಬಾಲ ರವಿಯ ನೋಡಿ ಹಣ್ಣೆಂದು | ಮೇಲಾಗಿ ಭಕ್ಷಿಪುದಕೆ ಉಡ್ಡಾಣ ಮಾಡಲಾಗಿ | ಈ ಲೀಲೆಯ ತಿಳಿದು ಲೋಕ ಶಿಕ್ಷಣ ಗೋಸುಗ | ಕಾಲವಜ್ರಾಯುಧದಿಂದ ಹೊಡೆಯಲು ಮೂರ್ಛಿತ | ಬಾಲನಂತೆ ಬಿದ್ದವನೆನ್ನ ನೋಡಿ ಸ್ವಾಹಾ | ಲೋಲನ ಸಖನಾದ ವಾಯುದೇವನು ಎನ್ನ | ಮೇಲಿನ ಪ್ರೀತಿಯಿಂದ ಸರ್ವಜೀವರ ಶ್ವಾಸ | ಕಾಲನಾಮಕ ಭಗವಾನಿಚ್ಛೆಯಂತ ತೃಟಿ | ಕಾಲಬಿಡದೆ ಮಾಡ್ವ ಶ್ವಾಸ ನಿರೋಧಿಸೆ ಶಚಿ | ಲೋಲನಿಂದನ್ನ ಪುತ್ರನ ಕೆಡಹಿರಲವನನ್ನು ಈ | ಕಾಲಲವದಲ್ಲಿ ಕೆಡಹೆನೆನಲು ಆ | ಕಾಲದಲಿ ಬ್ರಹ್ಮಾದಿ ದೇವತೆಗಳು ಸಾಕ್ಷಾತ್ಕಾರರಾಗಿ | ಓಲೈಸಿ ಪೆಳ್ದ ಮಾತು ಎನಗೋಸುಗ ಆಂಜನೇಯಾ | ಬಾಲನೆ ಚಿರಜೀವಿಯಾಗು ನೀನೆ ಪರಾಕ್ರಮಿ | ಮೇಲೆನಿಪ ಶ್ರೀರಾಮನ ಕಾರ್ಯಸಾಧಕನಾಗೆನುತ | ಬಾಲ ಹನುಮನ ಪೂಜೆ ಮಾಡ್ಡರು ದೇವತೆಗಳು | ಮೇಲಾದ ಮಾರ್ಗಶಿರ ಶುದ್ಧ ತ್ರಯೋದಶಿ | ಕಾಲ ಅಭಿಜಿನ್ ಮೂಹೂರ್ತದಲ್ಲಿ ಆರು ಪೂಜಿಪರೊ | ಆಲಸವಿಲ್ಲದೆ ಪುರುಷಾರ್ಥ ಹೊಂದುವರೆಂದು | ತಾಳ ಮ್ಯಾಳರೊಡನೆ ವರವ ನೀಡಿ ಪೋದರು | ಆಲಯಾ ಸ್ವರ್ಗ ಸತ್ಯಾದಿ ಲೋಕಕೆ ಅಂದು ಹೀಗೆ | ಪೇಳೆ ಸುಂದರ ವಿಠಲ ರಘುರಾಮನು ನಸುನಗೆ | ಯಾಲಿ ಒಲಿದು ಹನುಮಗೆ ಹಸನ್ಮುಖನಾಗಿ ಇರಲು 6 ಮಟ್ಟತಾಳ ಭಕುತ ವತ್ಸಲ ನೀನು ಭಕುತರಿಚ್ಛವ ನೀನು | ಭಕುತ ಭಾಂಧವ ನೀನು ಭಕುತರೊಡಿಯ ನೀನು | ಭಕುತ ಪಾಲಕನೆಂಬ ಬಿರುದುಳ್ಳವ ನೀನು | ಭಕುತರಿಂದಲಿ ನೀನು ನಿನ್ನಿಂದಲೆ ಭಕುತರು | ಅಕಳಂಕ ಐಶ್ವರ್ಯ ಸತು ಚಿತು ಆನಂದಾತ್ಮಾ | ಮುಕುತಿ ಪ್ರದಾತನೆ ಸರ್ವ ಸ್ವಾಮಿ ನೀನು | ಸಕಲ ಲೋಕಗಳೊಡೆಯ ನಿನ್ನಿಂದಲೆ ಸರ್ವ ವ್ಯಕುತವಾಗ್ವದು ಸತ್ಯ ಸರ್ವಙ್ಞನು ನೀನು | ಭಕುತರ ಮನದಿಂಗಿತ ತಿಳಿಯದವನೆ ನೀನು | ಅಖಿಳ ಬ್ರಹ್ಮಾಂಡÀರಸನೆ ನಮೊ ನಮೊ ನಮೊ ನಮೊ | ಭಕುತರಿಂದಲೇ ನಿನ್ನ ಖ್ಯಾತಿ ಮೂರ್ಲೋಕಕ್ಕೆ ಭಕುತರೇ ನಿನ್ನಯಾ ಮಹಿಮೆಯ ಹೊಗಳುವರು | ಭಕುತರು ನಿನ್ನಿಂದಲೆ ಕೀರ್ತಿವಂತರÀಹರು | ಅಕುಟಿಲ ಪ್ರಭೋ ನೀನು ನಾ ನಿನ ನಿಜ ಭಕ್ತ | ಸಕಲ ಕಾಲದಲ್ಲಿ ನಿನ್ನನಾ ಮರೆಯದಲೇ | ಮಾಳ್ಪದು ನಿಜವಾಗೆ | ಶಕುತನೆ ಎನ ಕೀರ್ತಿ ನಿನ್ನಿಂದಾಗಲಿ ವಿಭೋ | ಉಕುತಿ ಲಾಲಿಸು ಪ್ರಭೋ ತವಚಿತ್ತವ ಧಾರೆ | ಭಕುತ ಹನುಮಂತ ಇನಿತು ವಿಙÁ್ಞಪಿಸಿ ನಿಲಲು | ಪ್ರಕಟಿತ ಅಶರೀರ ವಾಕ್ಯವು ಬಿಡದಲೆ | ಸಕಲ ನುಡಿ ಹನುಮಾ ಸತ್ಯನಾಡಿದನೆನಲು | ಸುಕರ ಏಕಮೇವ ದ್ವಿತಿಯ ಸುಂದರವಿಠಲ ತುಷ್ಟನಾಹೆ 7 ಝಂಪಿತಾಳ ಮಾಸಮಾರ್ಗಶೀರ್ಷ ಶುದ್ಧ ತ್ರೊಯೋದಶಿ | ಆ ಸುಮುಹೂರ್ತ ಜಯಾ ಅಭಿಜಿನ್ ಕಾಲಕೆ | ಶ್ರೀಶರಾಮನು ಹನುಮದ್ವ್ರತವ ಮಾಡ್ಡ ತ್ರಯೋ | ದಶ ಗ್ರಂಥಿüಯುತ ಹರಿದ್ರಾದೋರಗಳಲಿ | ಭಾಸುರಾಮತಿವೀವ ಹನುಮನಾವ್ಹಾನಿಸಿ | ಪೇಶಲಾಪೀತಗಂಧ ವಸ್ತ್ರ ಪುಷ್ಟಿಗಳಿಂದಲೀ | ಶ್ರೀಸೀತೆವಕ್ಷಸ್ಥಳದಿಪ್ಪ ನಿತ್ಯಾವಿಯೋಗಿನಿ | ಆ ಸುಗ್ರೀವ ಲಕ್ಷ್ಮಣಾದಿಗಳೊಡನೆ ನೆಸಗಿದನೇನೆಂಬೆ | ಲೇಶಬಿಡದೇ “ಓಂ ನಮೋಭಗವತೇ ವಾಯುನಂದನಾಯ” | ಈ ಸುಮಂತ್ರವ ಜಪಿಸಿ ತಾ ಸಹಸದಿ ಮಾಡ್ಡನೋ | ದೇಶಪರಿಮಿತ ಪ್ರಸ್ಥತ್ರಯೋಶಗೋಧೂಮವನು | ಆ ಸುದಕ್ಷಣೆ ತಾಂಬೂಲ ಸಹ ದ್ವಿಜರಿಗಿತ್ತದಾನ | ಮೀಸಲಾ ಮನದಿ ಈ ಸತ್ಕಥೆಯನು ಕೇಳಿ | ಭೇಶಮುಖಿ ಸೀತಿಯಳ ಕೊಡ್ದನೆಂಬದು ಖ್ಯಾತಿ | ಆ ಸತ್ಯಲೋಕರಿಗೆ ಆದುದು ಅಚ್ಚರವೆ ಪೂರ್ಣಕಾಮನಿಗೆ | ಕ್ಲೇಶನಾಶನವು ಸುಗ್ರೀವನಿಗೆ ವಿಶೇಷವಾದುದು ಸತ್ಯವೆನ್ನಿ | ತೋಷದಲಿ ವಿಭೀಷಣ ಶ್ರೀರಾಮನಾಙÉ್ಞಯಿಂ ಮಾಡ್ಡು | ದೇಶಲಂಕೆಯ ರಾಜ್ಯವನು ಪಡೆದನು | ಹೇ ಸುಮತಿಯೇ ಕೇಳಂದಿನಾರಭ್ಯ ಭೂಲೋಕಕೆ | ಲೇಸುವಿಶ್ರುತವಾದಿತೈ ಹನುಮದ್ವ್ರತವೂ | ಪರಿಯಂತ ಮಾಡ್ಡುದ ಕೀಸು ಉದ್ಯಾಪನೆಯಯ್ಯಾ ಆದಿ ಮಧ್ಯಾಂತಕೆ | “ಮಾಸಾನಾಂ ಮಾರ್ಗಶೀರ್ಷೋಹಂ” ಎಂದು ಗೀತೆÀಯಲಿ ಆ ಸ್ವಾಮಿ ದಿವ್ಯನುಡಿಯುಂಟು ಕೇಳ್ ಧರ್ಮಜನೆ | ಸ್ತ್ರೀಸಹಿತ ಅನುಜರೊಡನೇ ಈ ವ್ರತವನು | ಮೇಶನಾಜ್ಞೆಯಿದೆಂದು ಮಾಡಲು ನಿನಗೆ ರಾಜ್ಯ | ಕೋಶ ಭಾಂಡಾರಪ್ರಾಪ್ತಿಯಾಗುವದು | ಲೇಶ ಸಂಶಯ ಬ್ಯಾಡೆನಲು ಶ್ರೀ ವ್ಯಾಸ | ಆ ಸುಂದರ ವಿಠಲನ ಭಕುತರು ಮುದಭರಿತರಾಗೆ 8 ರೂಪತಾಳ ರವಿಯು ವೃಶ್ಚಿಕ ರಾಶಿಗೆ ಬರಲಾಗಿ | ಸವೆಯಾದ ಪದವೀವ ವ್ರತವಮಾಡುವದಕ್ಕೆ | ಕವಳಾ ಅಜ್ಞಾನಾಖ್ಯ ರಾತ್ರಿಕಳೆದು | ಸುವಿಮಲಾಜ್ಞಾನಾಖ್ಯ ಪ್ರಾತಃ ಕಾಲದಲೆದ್ದು | ಕವಿವ್ಯಾಸರ ಮುಂದೆ ಮಾಡಿ ಧರ್ಮಜನು | ಸುವಿವೇಕಬುದ್ಧಿಯಿಂ ಸ್ನಾನಾದಿಗಳ ಮಾಡಿ | ಹವಿಷಾದಿ ದ್ರÀ್ರವ್ಯಗಳಲಿ ಹರಿಯಚಿಂತಿಸಿ ಮಾ | ಧವÀನಾಜ್ಞೆಯಂತೆ ಉದ್ಯಾಪನವಂಗೈದು | ಕವ್ಯವಾಹನನಲ್ಲಿ ಮೂಲಮಂತ್ರದಿಂದ | ಲವಕಾಲ ಬಿಡದಲೆ ವೇದಸೂಕ್ತಗಳಿಂ ಹೋಮಿಸಿ | ನವಭಕುತಿಯಲಿ ಹನುಮಂತನ ವ್ರತಾಚರಿಸಲು | ಹವಣಿಸಿ ಸಂವತ್ಸರವು ಪೋಗಲು ಪಾಂಡವರು | ಬವರದಲ್ಲಿ ಕೌರವರಗೆ
--------------
ಸುಂದರವಿಠಲ
ಅಧ್ಯಾಯ ಮೂರು ಪದ ಸಾವಿರ ಬುಧರÀರನೆಲ್ಲ ಮೀರಿ ಪರಮೇಶ್ವರಗೆ ಹಾರ ಹಾಕುವೆನೆಂದು ಪಾರಿಜಾತದ ಕುಸುಮ ಪಾರ್ವತಿಯು ತಾತರಿಸಿ ಪೂರ್ವದಲಿ ಮಾಡಿದಳ ಪೂರ್ವ ಮಾಲೆಯ ಭಕ್ತಿಪೂರ್ವಕವಾಗಿ ಚಾರುತರವಾಗಿಹ ಅಲಂಕಾರಗಳ ನಿಟ್ಟು ಶೃಂಗಾರ ಭರಿತಳು ಆಗಿ ಪಾರಿಜಾತದ ಹೂವಿನ ಹಾರಕೈಯಲಿ ಪಿಡಿದು ಚಾರು ಸಖಿಯಲ್ಲಿ 1 ಚಂದ್ರವದನೆಯ ಬಹಳ ಛಂದಾದ ಮುಖನೋಡಿ ಚಂದ್ರಮನು ಇದುಕಾಂತಿ ನಂದು ಒಯ್ದಳು ಈಕೆ ಮುಂದಿವಳನೊಯ್ಯಬೇಕೆಂದು ಕುಚಗಳ ಕಂಡು ಇಂದ್ರ ತಾ ಯನ ನಾ ಗೇಂದ್ರನ ಶಿರವೆಂದ ಮುಂದದರ ಸೊಂಡೆ ಇದು ಯೆಂದು ಕರಗಳಿಗೆಂದಾ ಮಂದಗತಿ ಮತ್ತಾದರರಿಂದ ನಡಗಿಯ ಕಂಡು ಸುಂದರಿಯ ಆಹುಬ್ಬು ಕರಿದರ್ಪ ತಾ ಕಂಡು 2 ಎರಳೆ ನೋಟವ ಕಂಡು ಎರಳೆವಾಹನ ನುಡಿದ ಯರವಿಂದವಯವಕ್ಹಿಗ್ಗಿ ಹೊರಳು ವಳು ಯಂತೆಂದು ಕೊರಳವನು ಕಂಡು ಹರಿ ಕರದಲೊಪ್ಪುವಯೆನ್ನ ವರಪಾಂಚಜನ್ಯವಿದು ಸರಿಯೆಂದು ನುಡಿದಾ ಗುರುಳು ಗೂದಲದವಳ ಹೆರಳವನು ನೋಡಿಹರಿ ಇರುಳ ಮಲಗುವಯನ್ನ ಸರಳ ಹಾಸಿಗೆಯೆಂದು ಸುರರು ಎಲ್ಲರು ಪರಿ ಪರಿಯಿಂದ ನುಡಿದರನುಸರಿಸಿಯಿದರಂತೆ 3 ಪದ ಮುಂದೆ ಆ ಪಾರ್ವತಿ ಬಂದು ಕುಳಿತಳಲ್ಲೆ ಬಂದ ಶಿವನು ತಾ ಬಾಲಕನಾಗಿ 1 ಲೀಲೆಯಿಂದಲಿ ತೊಡೆಯ ಮೇಲೆ ಮಲಗಿದನಾಗ ಬಾಲೆ ಹೀಗೆಂದಳು ಎಲ್ಲರಿಗೆ 2 ಮುನ್ನೆತ್ತಿದವರಿಗ್ಹಾಕುವೆ ಮಾಲೆ 3 ಅಂದಮಾತನು ಕೇಳಿ ಇಂದ್ರ ಬಂದನು ಆಗ ಮುಂದೆ ಆ ಬಾಲನೆತ್ತುವೆನೆಂದು4 ಚನ್ನಿಗನಂತಾದ್ರೀಶನ ಹಿಂದಕೆ ಮಾಡಿ ಸಣ್ಣ ಬಾಲನ ತಾ ಮುಂದಕೆ ಕರೆದಾ 5 ಪದ ಸಣ್ಣಬಾಲನೇ ಬಾರೋ ಹಣ್ಣು ಕೊಡುವೆ ನಿನಗಿನ್ನು ಕೈತಾರೋ ಪ ಚಂಡು ಬೊಗರಿ ಗೋಲಿಗುಂಡು ನಾ ಕೊಡುವೆ ಬೆಂಡು ಬತ್ತಾಸವ ಕೊಂಡು ನಾ ಕೊಡುವೆ 1 ಚಿಣಿಕೋಲು ಮತ್ತೆ ಈಕ್ಷಣ ತಂದು ಕೊಡುವೆ ಮನಸಿಗೊಪ್ಪುವ ಚಿಂತಾಮಣಿ ತಂದು ಕೊಡುವೆ 2 ನಡಿಯೋ ನಿನಗೆ ದೊಡ್ಡ ಗುಡಿಯ ತೋರಿಸುವೆ ಒಡೆಯ ನಂತಾದ್ರೀಶನಡಿಯ ತೋರಿಸುವೆ 3 ಪದ್ಯ ಮತ್ತೇ ಮತ್ತೀಪರಿಯ ಒತ್ತಿ ಒದರಿದರೇನು ವ್ಯರ್ಥ ಬಾಲನು ಕಣ್ಣೆತ್ತಿ ನೋಡಲುವಲ್ಲ ಒತ್ತಿ ತೋಳುಗಳ್ಹಿಡಿದು ಎತ್ತಿನೋಡಿದನಾಗ ಯತ್ನದಿಂದಲ್ಲಿಯೆ ತಿತ್ತಿದಮ್ಮನೆ ದಣಿದು ಮತ್ತ ದೇವೇಂದ್ರ ಬಲು ಮೆತ್ತಗಾದ ವ್ಯರ್ಥ ಈ ಬಾಲಕನ ಎತ್ತಿ ನಗೆಗೀಡು ಈವತ್ತು ಆಯಿತು ಎಂದು ವೃತ್ರಾರಿ ತಾ ಮುಂದೆ ಅತ್ಯಂತ ಕೋಪದಲಿ ಎತ್ತಿದನು ವಜ್ರವನು ಎತ್ತಿದಾ ಕೈಬರದೆ ಮತ್ತಲ್ಲಿ ನಿಂತಿಹುದು ಚಿತ್ರದಲ್ಲಿಯ ಗೊಂಬೆ ಹಸ್ತದಂತೆ 1 ಪದ ಆಯಿತು ಈ ಪರಿಯು ದೇಹಕೆ ಆಯಾಸವೇ ಸರಿಯ ಪ ಮತ್ತೆ ಅಗ್ನಿಯು ಅಲ್ಲೆ ಬಾಲನ ಎತ್ತದೆ ದಣಿವುತಲೆ ಶಕ್ತಿ ಎತ್ತಿದ ಮೇಲೆ ಮತ್ತಾ ಶಕ್ತಿ ನಿಂತಿತು ಅಲ್ಲೆ1 ದಂಡಧರನು ಆಗ ಯೆತ್ತದೆ ಭಂಡಾದನು ಬೇಗ ದಂಡ ನೆತ್ತಿದನಾಗ ಎತ್ತಿದ ದಂಡ ನಿಂತಿತುಹಾಗೆ 2 ಮತ್ತೆ ನೈರತಿ ಅಲ್ಲೆ ಬಾಲನ ಎತ್ತದೆ ದಣಿವುತಲೆ ಕತ್ತಿಯೆತ್ತಿದ ಮೇಲೆ ಮುಂದಾ ಕತ್ತಿನಿಂತಿತು ಅಲ್ಲೆ 3 ಪಾಶಧರನು ಆಗ ಬಹು ಕಾಸೋಸಿ ಬಿಟ್ಟು ಬೇಗ ಪಾಶವೆತ್ತಿದನಾಗ ಮುಂದಾ ಪಾಶನಿಂತಿತು ಹಾಗೆ 4 ವಾಯು ಬಂದನಲ್ಲೆ ಬಳಲಿದ ಕಾಯಕ್ಲೇಶದಲ್ಲೆ ಕಯ್ಯನೆತ್ತಿದ ಮೇಲೆ ಮತ್ತಾಕೈಯು ನಿಂತಿತು ಅಲ್ಲೆ 5 ಸತ್ವರ ಬರವುತಲೆ ಕುಬೇರ ನಿಸ್ಸತ್ವನಾದನಲ್ಲೆ ಶಸ್ತ್ರಯೆತ್ತಿದ ಮೇಲೆ ಮುಂದಾ ಶಸ್ತ್ರ ನಿಂತಿತು ಅಲ್ಲೆ 6 ಶೂಲಧರನು ಅಲ್ಲೆ ಮತ್ತಾ ಬಾಲನಯೆತ್ತದಲೆ ಶೂಲನೆತ್ತಿದ ಮೇಲೆ ಮುಂದಾಶೂಲ ನಿಂತಿತು ಅಲ್ಲೆ7 ಬುಧಜನಕನು ಅಲ್ಲೆಬರವುತ ಗದಗದ ನಡುಗುತಲೆ ಗದೆಯನೆತ್ತಿದ ಮೇಲೆ ಮುಂದಾಗದೆಯು ನಿಂತಿತು ಅಲ್ಲೆ8 ಗೋಣನಲ್ಲಾಡುವ ತಲೆಯತ್ತಿದ ಹರಿ ತಾನು ಚಕ್ರವು ಮೇಲೆಖೂನದಿ ಅದು ಅಲ್ಲೆ ಆಯಿತು ಗೋಣವು ತಿರುವುತಲೆ 9 ಅಲ್ಲೆ ಪೂಷಣ ಬೇಗ ಕರಕರ ಹಲ್ಲು ತಿಂದನಾಗ ಹಲ್ಲು ಬಿದ್ದವಾಗ ತೋರಿದ ಎಲ್ಲ ದೇವತೆಗಳಿಗೆ 10 ಕೂಸನೆತ್ತದಾಗಿ ಎಲ್ಲರು ಮೋಸವಾದರು ಹೋಗಿ ಆ ಸ್ವಯಂವರಕಾಗಿ ಅನಂತಾದ್ರೀಶನ ಸಹಿತಾಗಿ 11 ಪದ್ಯ ಅಂಬುಜೋದ್ಭವ ತಾನು ಸ್ತಂಭಿತಾಗಿಸುರ ಕ ದಂಬವನು ಕಾಣುತಲೆ ಸಾಂಬನ ಮಹಿಮೆಯಿದು ಅಂಬಿಕೆಯ ತೊಡೆಯ ತಲೆಗಿಂಬು ಮಾಡಿಹ ಬಾಲ ಸಾಂಬನಿವನಹದೆಂದು ಸಂಭವಿಸಿದಾಗ ನಂಬಿ ಸ್ತುತಿ ಮಾಡಿದನು ಸ್ತಂಭೀತರು ಎಂದೆನಿಸಿ ಕೊಂಬುವರು ಎಲ್ಲಾರು ನಂಬಿ ಸ್ತುತಿಸಿದರು ಆ ಸಾಂಬಗೀಪರಿಯು ಪದ ಸಾಂಬಸದಾಸಿವನೆ ರಕ್ಷಿಸು ಬಾಲಕನೇ ಸಾಂಬಸದಾಶಿವನೆಂಬುವ ಬಾಲಕ ನೆಂಬುವದರಿಯದೆ ಸ್ತಂಭಿತರಾದೆವು ನಂಬಿಗೆ ತಿಳಿಯದೆ ನಂಬಿದೆವೋ ಜಗ ದಂಬೆಯ ತೊಡೆ ತಲೆ ಗಿಂಬು ಇಟ್ಟವನೆ ಪ ಪಟುತರನಾದಂಥವನೆ ತಿಳಿಯದೋ ನಿನ್ನ ಘಟಿತ ಘಟನೆ ಹರನೆ ಸ್ಫಟಿಕ ಸನ್ನಿಭ ಧೂರ್ಜಟಿಯೆ ನಿನಗೆ ಸಂ ಘಟಿತಳಾದ ಈ ಕುಟಿಲ ಕುಂತಳೆಯು ಹಟದಲಿ ಗೆಲವುದುವ ಹಟವೊಂದಿದು ಈ ಸ್ಪುಟವಾಯಿತು ಸಂಕಟ ಪರಿಹರಿಸು 1 ಸರ್ವರನೆಲ್ಲಾ ತರಿಸಿ ಸರಸ ಮಾಡಿದೆಯೊ ಗರ್ವವ ಪರಿಹರಿಸಿ ಉರ್ವಿಯೊಳಗೆ ನಿನಗಿರ್ವರಾರು ಸರಿ ಸರ್ವರನ್ನು ಮೀರಿರುವ ದೇವನೆ ಸರ್ವಪ್ರಕಾರದಿ ಸರ್ವರ ಅವಯವ ಪೂರ್ವದಂತಾಗಲಿ ಪಾರ್ವತಿಪ್ರಿಯನೇ 2 ಭೋ ಶಿಶುವರ ರೂಪ ಬೇಗನೆ ಬಿಡು ಈ ಸಮಯಕ್ಕೆ ಕೋಪ ಈ ಶಶಿವದನೆಯ ಆಶೆಗೆ ವ್ಯರ್ಥದಿ ಮೋಸಹೋಗಿ ಕಾಸೋಸಿ ಬಟ್ಟೆವು ಘಾತಿ ಮಾಡಬೇಡಾಸೆಯ ಪೂರಿಸು ಶ್ರೀ ಅನಂತಾದ್ರೀಶ ಪ್ರಿಯನೆ 3 ಪದ್ಯ ವಿರಳಾಟ ಈ ಸ್ತುತಿಗೆ ಮರುಳಾಗಿ ತಾನು ಗರಳ ಗೊರಲಿಸಾ ಮೂರುತಿಯ ಸರಳ ಮಾಡೆಲ್ಲವರು ಗುರುಳು ಗೂದಲದವ ಸರಳಾದವ ತೊಡೆಯಲ್ಲಿ ಹೊರಳೆದ್ದು ತೋರಿಸಿದ ಸರಳ ನಿಜರೂಪ ವಿರಳೆ ನೋಟದಲಿರುವ ತರಳೆ ಆ ಪಾರ್ವತಿಯು ಹೊರಳಿ ನೋಡುತಲೆದ್ದು ಹರಳಿನುಂಗರ ಕೈಯ್ಯ ಹೆರಳಿನೊಳಗಿರುವಂಥ ಅರಳಿದ್ಹೂವಿನ ದಿವ್ಯ ಸರಳ ಮಾಲೆಯ ಅವನ ಕೊರಳಿಗ್ಹಾಕಿದಳು 1 ಗಂಭೀರ ವಾದ್ಯಗಳೇಳು ಸಾರಿ ನುಡಿದವು ಆಗ ಸಾವಿರಬುಧರ ಎಲ್ಲ ವೃಷ್ಟಿಸೂರಿಮಾಡಿದರು ಚಾರ್ವನಂತಾದ್ರಿಯಲ್ಲಿರುವ ದೇವನ ಬಿಟ್ಟು ಸಾರ ಪರಮೇಶ್ವರಗೆ ಹಾರ ಹಾಕುವೆನೆಂಬ ಪಾರ್ವತಿಯ ಅಭಿಲಾಷೆ ಪೂರ್ಣವಾದಲ್ಲೆ ಸಂಪೂರ್ಣ ಸಾಂಬ ಮೂರುತಿಯ ದಯೆಯಿಂದ ಮೂರು ಅಧ್ಯಾಯ
--------------
ಅನಂತಾದ್ರೀಶ - ಕಥನಕಾವ್ಯಗಳು
ಆದಿಕೇಶವಗರ್ಥಿಯಲಿ ನಾನಾರ್ತಿ ಮಾಡುವೆನು ಆರ್ತಿ ಮಾಡುವೆ ನಾ ಮಂಗಲಾರ್ತಿ ಮಾಡುವೆನು ಪ ಶೀಳಿ ದೈತ್ಯನ ಲೀಲೆಯಲಿ ಮಂಗಳೋಲೆ ತಂದವಗೆ ವ್ಯಾಲತಪ್ಪಿದ ಶೈಲವನು ಬೆನಮ್ಯಾಲೆ ಪಿಡಿದವಗೆ ಖೂಳಗೆ ತೋರಿದ ... ಪದಗೋಲ ತಂದವಗೆ ಬಾಲಗೆ ಪಿತ ಗೋಳು ಮಾಡಿದ ಕೇಳಿ ಆ ದೈತ್ಯನ ಶೀಳ್ದವಗೆ 1 ಭೂಮಿಯ ಬೇಡಿ ನಿಸ್ಸೀಮ ಬಲಿನೃಪನಾ ಹಮ್ಮು ಕರಗಿಸಿ ಪಾತಾಳಕಟ್ಟಿದವಗೆ ನೇಮದಲಿ ಕ್ಷಾತ್ರಸ್ತೋಮವ ನಿರ್‍ನಾಮ ಮಾಡ್ದವಗೆ ದಶಶಿರ ನಾಮವಳಿದ ಶ್ರೀರಾಮ ಚಂದಿರಗೆ ಸೋಮಕುಲದ ಸುನಾಮಿ ವರ್ಗಕೆ ಪ್ರೇಮರಸ ಸತ್ಯಭಾಮಾವರಗೆ 2 ಹರನ ಬಲಪಿಡಿದರೀ ತ್ರಿಪುರಸಂಹರೀಸಿದ ಶಿರಿವರಗೆ ಹರಿಯನೇರಿ ದನುಜಾರನ್ನೆಲ್ಲ ಸವರೀದ ಭೂವರಗೆ ಶರಣಜನರೊಳು ಕರುಣವಿರಿಸಿ ನಿರುತ ಪೊರೆದವಗೆ ಶ್ರೀ ನರಸಿಂಹವಿಠಲನಿಗೆ 3
--------------
ನರಸಿಂಹವಿಠಲರು
ಆರತಿಯೆತ್ತುವೆ ಆತ್ಮೇಶ್ವರಗೆ ಪ ಮಾರ ಕೋಟಿ ಲಾವಣ್ಯ ಮತ್ಪ್ರಿಯ ಸ್ವಾಮಿಗೆ ಅ.ಪ ಮನಕೊಡೆಯನೆನ್ನಿಸಿ ಮಮತೆಯ ವಿಸ್ತರಿಸಿ ಅನುದಿನ ಬೇಡಿದಿಷ್ಟಾರ್ಥವನೀವಗೆ 1 ಶುಭದಾಯಕನಾಗಿ ಶೋಭಿಸುತಿರ್ಪಗೆ2 ಗುರುರಾಮವಿಠ್ಠಲ ಕರುಣಾನಿಧಿಗೇ 3
--------------
ಗುರುರಾಮವಿಠಲ
ಆರುತಿ ಮಾಡೆವೆವು ನಾವು ಆನಂದನಿಲಯಗೆ ಆನಂದದಿಂದಲಿ ಪ ಗೋಕುಲದಲಿ ಪುಟ್ಟಿ | ಗೋವುಗಳನೆ ಕಾಯ್ದ ಗೋಪಾಲಕೃಷ್ಣನಿಗೆ 1 ನಂದಕುವರಗೆ | ಸಿಂಧುಶಯನಗೆ | ಇಂದೀವರಾಕ್ಷನಿಗೆ ನಾವು 2 ಶಾಮಸುಂದರಗೆ ದಾಮೋದರನಿಗೆ | ಪ್ರೇಮದಿಂದಲಿ ಶ್ರೀ ಕಮಲಾಕ್ಷಗೆ 3
--------------
ಶಾಮಸುಂದರ ವಿಠಲ
ಆರುತೀಯ ತಾರೆ ಶ್ರೀಹರಿಗೆ ಸುರಸಾರ್ವಭೌಮಗೆ ಪ ಬೇಗನೆ ಸಾರಸಾಂಬಕಿಅ.ಪ ಮಾರಜನಕಗೆ ವಾರಿಜಭವ ಕು- ಮಾರ ಜನಕ ಮುಖಾಮರೇಡ್ಯಗೆ ಚಾಪ ಮುರಿದ ಸುಕು- ಮಾರ ಶರೀರ ಸೀತಾರಾಮ ಚಂದ್ರಗೆ 1 ಇಂದಿರವರಗೆ ಮಂದರಧರ ಪು- ರಂದರಾನುಜ ಸಿಂಧುಶಯನಗೆ ಮಂದಯಾನೆ ಛಂದದಿಂದ ಬಂದೀಗ ವಂದೀಶ್ಯಾನಂದಾದಿ ಬೆಳಗಲು 2 ವಾರಣಭಯ ನಿವಾರಣ ಜಗ- ತ್ಕಾರಣಗೆ ಸುಖಪೂರ್ಣದೇಹಗೆ ಸೇರಿ ತನ್ನ ಸೇವಿಪರಘ ದೂರ ಕೊಪ್ಪರ ಶ್ರೀ ನಾರಸಿಂಹನಿಗೆ 3
--------------
ಕಾರ್ಪರ ನರಹರಿದಾಸರು
ಇಂದು ಆರತಿ ತಂದು ಬೆಳಗಿರೆ ಇಂದಿರಾವರಗೆ ಮಂದರಧರಗಿಂದು ಪ ಸಿಂಧು ಶಯನಗೆ ಕುಂದರದನೆ ಅ.ಪ ವಾಹನ ವಂದಿತ ದಶ ಕಂಧರಾಂತಗೆ ಕುಂದರದನೆ ವಂದಿಸುವರ ಬಂಧ ಬಿಡಿಶ್ಯಾ ನಂದಗರಿವಗೆ ಮಂದಗಮನೆ 1 ಅಂಗನೆಯರು ಶೃಂಗಾರದಲಿ ಸಂಗೀತ ಪ್ರಿಯಗೆ ಭೃಂಗಾಲಕಿ ಗಂಗಾಪಿತ ಮಂಗಳಾಂಗ ವಿ- ಹರಿಗ ವಾಹನಗೇ ತಿಂಗಳಮುಖಿ 2 ನಾರಿಯಳ ನುದ್ಧಾರ ಮಾಡಿದ ಚಾರು ಚರಣಗೆ ನಾರಿ ಮಣಿಯೆ ಸೇರಿದವರ ಪೊರೆವ ಕಾರ್ಪರ ನಾರಶಿಂಹಗೆ ಭೂರಿಮಹಿಮಗಿಂದು 3
--------------
ಕಾರ್ಪರ ನರಹರಿದಾಸರು
ಇನ್ನೇನು ಭಯವಿಲ್ಲನಿನಗೆ ಪಾದ ಭಜಿಸೊ ಮನದೊಳಗೆ ಪ ಬನ್ನಗೊಳಿಸುವಾ ವ್ಯಾಧಿ ಮುನ್ನೆ ಬಾರದೋ ಮಗುವೇ ಅ.ಪ ಕರ್ಮ ಶೇಷದಲಿಂದ ಈ ವಿಧದ ವ್ಯಾಧಿ ಸಂಭವಿಸಿತಲ್ಲಾ ಪಾದ ಸೇವೆ ಸತ್ಕಾರದಿಂದಲೇ ತಾವಕÀನು ನೀನೆಂದು ಗುರುರಾಯ ಪೊರೆವಾ 1 ಏನು ಕರುಣವೊ ಗುರುವರಗೆ ನಿನ್ನಲಿ ನೀನೇನು ಧನ್ಯನೋ ಈ ಲೋಕದಲ್ಲೀ ದೀನಭಾವವನೋಡಿ ದೀನವತ್ಸಲಬಂದು ತಾನೆ ಕರುಣದಿ ಪೊರೆದಮೇಲೇ2 ಅರಿಯದಿಹ ನರರಿಗಾಶ್ಚರ್ಯ ತೋರಲೋಸುಗದಿ ಮರೆಯದಂತೆ ಮನಕೆ ಕುರುಹು ಮಾಡಿ ಧರೆಯೊಳಗೀ ಗುರುವರಗೆ ಸರಿಯಿಲ್ಲ ಗುರುಜಗನ್ನಾಥ ವಿಠಲ ತಾನೇ ಬಲ್ಲಾ 3
--------------
ಗುರುಜಗನ್ನಾಥದಾಸರು
ಎಂಬ ನಾಮವನು ಉಚ್ಚರಿಸೆ ಸಾರುವರು ಭಕುತರಾದವರು ವೈಕುಂಠವನು ಆರಾದರೇನು ಮರೆಯದೆ ಹರಿಯಧ್ಯಾನಿಸಲು ಸಿರಿಯರಸ ಕಾಯ್ದು ಕೊಂಬ ಪ ಅರಸಕೇಳೈ ಬಳೀಕ ಪಾಂಡ್ಯದೇಶದೊಳೋರ್ವ ಪತಿ ಪೆಸರು ಇಂದ್ರ ದ್ಯುಮ್ನಧರಾತ್ಮ ಹರಿ ಪರಾಯಣನೆನಿಸಿ ನಿರುತಸತ್ಯ ಸುಶೀಲ ಕರಿತುರಗದಾಸೇಯ ತೊರೆದು ವಿರತನಾಗಿಯೆ ಪುರವ ಪೊರಟು ಸುಸ್ಥಿರನಾಗಿ ಬರವಾಯ್ತ ಗಸ್ತ ಶಿಷ್ಯವೆರಸಿ 1 ಸದಮಳಾತ್ಮರನ ಚಿಂತೆಯಿಂದ ಭೂಪೇಳದಿರೆ ಮದಮುಖನ ತಪವ ನೋಡುವೆನೆನುತ ಮುನಿ ಮುನಿದು ತದುಬಿಗರ್ಜಿಸಿ ಶಾಪವೀಯಗಜವಾಗೆನುತ ಸದು ಹೃದಯನೆದ್ದು ಬಳಿಕ ಪಾದಕ್ಕೆ ವಂದಿಸಿ ಶಾಪ ವೆಂದು ಬಿಗುಗಡೆಯೆನಲು ಸಾದರದಿಂ ಮುನಿಪನೆಲ ನೆಗಳು ಪಿಡಿಯೆಗತಿನಿನ ಗೆಂದು ಹೋದ ಮುನಿಪತಿ ಇತ್ತಲು 2 ಇಂತು ಭೂಮೀಶ ಶಾಪವ ತಾಳ್ದು ಬಿಸುಸುಯ್ದು ಕಂತು ಜನಕನೆ ಬಲ್ಲನೆಂತು ಗೆಲಿದಪೆನ್‍ನುತ ದಂತಿ ಮುಖವಾಗಿ ಭೂಕಾಂತೆಯೊಳು ಜನಿಸಿ ಸುರ ಸಂತತಿಗಳಲ್ಲು ಮಾ ಇಂತೆಸೆದನು 3 ತರುನಿಕರ ಚೂತಾಮಲಕ ಸುರಹೊನ್ನೆ ಪುನ್ನಾಗ ಮೆರೆವಬಿಲ್ವಶ್ವತ್ಥಮಾ ಕಿರುಗಿಡುವಿನೊಳಗೆ ಚರಿಸುವ ಕರಡಿ ಸೀಳ್ನಾಯಿ ಭೇರುಂಡ ಮುಂತಿರುತಿರಲು ಗರುಡ ಗಂಧರ್ವ ಚಾರಣರು ಸುರಕಿನ್ನರರು ಇರುತಿಹರು ಕಿಂಪುರುಷರು 4 ತ್ರಿಜಗದೊಳಗೆಣೆ ಗಾಣೆ ಭುಜಗಶಯನನೆ ಬಲ್ಲ ಗಜರಾಜ ಬೆಳೆದು ಕುಜನರ ಮಾರ್ಗವಂ ಪಿಡಿದು ಅಜಸೃಷ್ಟಿ ಬಿರಿಯೆ ಒದರಿ ನಿಜಪುತ್ರ ಮಿತ್ರಸ್ತ್ರೀಜನ ಸಹಿತಲೊಡಗೊಂಡು ಬುಜ್ಜಸತ್ವದಿಂದ ವನವನು ಮುರಿದು ಸಂಹರಿಸಿ ಭೂಜಲವ ನರಸಿ ಬಂದ 5 ಗಂಡು ಹೆಣ್ಣಾನೆಗಳ ತಂಡ ಸಹಿತಲೆ ಬಂದು ಕಂಡು ಜಲವನು ಈಂಟಿಗುಂಡಿ ಮಡುವನುಸಾರಿ ಚಂಡಿಗೊಳಿಸುತ ಧರಣಿಯ ಅಂಡೆಲೆವ ಮದದ ಸ್ತ್ರೀಯರ ಕೂಡಿ ನೆಗಳು ಖತಿಗೊಂಡು ಮಡುವಿನೊಳಗೆಳೆಯಲು 6 ನೆಗಳು ಸುತ್ತಲಿಹ ಕರಿಘಟೆಗಳೇನಿದದ್ಬುತವೆಂದು ಮತ್ತೆ ಸತ್ವದಲೆಳೆಯೆ ತೆತ್ತಿಗನು ಬಾರದಿರೆ ತಮ್ಮಗುತ್ತಿಗುಳಿದಿಹ ಹಸ್ತಿ ಇತ್ತ ಗಜರಾಜ ಕಾದುತಿರಲು ಹಲಕಾಲ ಬತ್ತಿ ಅಸುಗುಂದಿ ಚಿತ್ತದಿ ತಿಳಿದು ಧ್ಯಾನಿಸುತ ಮತ್ತಾರು ಕಾಯ್ವರೆನುತ 7 ಇಕ್ಕರ್ತರಿಂತು ಕಾದುತ್ತಿರಲು ಕರಿವರನ ಸೊಕ್ಕು ಮುರಿದುದು ತಮವುಚೊಕ್ಕಿ ಮುಖವನು ನಭಕೆ ಸೊಕ್ಕಿದುದುನೆಗಳು ಬಳಿಕ ಮುಕ್ಕುರು ದಿವ್ಯಸಾಗರ ವರುಷ ಪರಿಯಂತ ಸಿಕ್ಕಿ ನಗಳೊಳು ಕಾದಿ ಕುಕ್ಕುರಿಸಿ ನೀರಿನೊಳು ದಿಕ್ಕನೊಡುತ್ತ ಕಕ್ಕನೆ ಕರಗಿ ಜ್ಞಾನದಲಿ ಭಕ್ತವತ್ಸಲನ ನೆನೆದ 8 ರಕ್ಷಿಸೆನ್ನನು ಬಿಡದೆ ಪಕ್ಷಿವಾಹನಗಮನ ಸೇವ್ಯ ಕುಕ್ಷಿಯೊಳಗಿಂಬಿಟ್ಟು ರಕ್ಷಿಸುವೆ ಭಜಕರನು ಮೋಕ್ಷದಾಯಕನೆ ಕಾಯೋ ಲಕ್ಷ್ಮೀಶ ಕೇಶವ ಉಪೇಕ್ಷಿಸದೆ ನೀ ಬಂದು ಭಕ್ಷಿಸುವ ನೆಗಳನೀ ಶಿಕ್ಷಿಸಲು ಬೇಕು ಅಕ್ಷಿಯನು ಇಟ್ಟುಬಂದು 9 ಸರಸಿರುಹದಳನಯನ ಮೂರ್ತಿ ಪರಿ ಹರಿಸೋ ಕ್ಷೀರಾಬ್ಧಿ ಶಯನನೆಂದು ಪರಿ ಪರಿಯ ಸ್ತುತಿಸಲಾಕ್ಷಣ ಮಹಿಮ ಧ್ವನಿಗೇಳ್ದು ನಾಗಿಕರದಿ ಚಕ್ರವ ಕೊಂಡು ಭರದಿ ಭಕುತನ ಕಂಡು ಕರಿರಾಜಗಭಯವಿತ್ತ 10 ಸಿರಿ ಮೊಗದ ನಳಿನಾಯತೇಕ್ಷಣದ ತೊಳಪ ಕದಪಿನ ಮಿಸುಪ ನವರತ್ನ ಕುಂಡಲದ ಕೌಸ್ತುಭ ಹಾರದುರಸ್ಥಳದ ಹೊಳೆವ ಮಣಿಮಕುಟ ನೇಳಿವದಂತಪಂಕ್ತಿಯ ಚಾರು ಕೋರವಿಸೆ ಕಂಡ 11 ಮೇಲೆ ಕೈವಾರಿಸುವ ಸುರರ ದುಂದುಭಿ ಮೊಳಗೆ ಹೊಳೆಯ ಎತ್ತಿದ ತೋರ ಸತ್ತಿಗೆಯ ತೋರಣದ ಸಾಲುಗಳ ಸಂದಣಿಯ ಸಂಭ್ರಮದ ಜಾಲವನು ಕಂಡುಗಜವು ಪಾಲಿಸೈ ಗೋವಿಂದನಾಥ ಬಂಧು ತ್ರಾಹಿ ಭವಾಬ್ಧಿಸಾರ ತ್ರಾಹಿ ಪಾಲಿಸೈ ತ್ರಾಹಿ ಎನುತ 12 ಗಡಗಡನೆ ನಡುಗತಿರೆ ಕಡಲಶಯನನು ಕಂಡು ಕಡುಕೃಪೆಯೊಳೈ ತಂದು ಮಡುವ ಧುಮುಕಿಯ ಗಜವ ಪಿಡಿದಾಗ ವಾಮಕರದಿಂದಳೆಯನೆಗಳು ಸಹತಡಿಗೆ ಬರಲಾಗಕಂಡು ಘುಡು ಘುಡಿಸಿ ಕೋಪದಿಂ ತುಡುಕಿ ಚಕ್ರವತೆಗೆದು ಪಿಡಿದು ನೆಗಳನು ಕಡಿಯೆ ಒಡನಾಗ ನಿಜರೂಪ ಬಿಡುಗಡೆಯಾಯಿತೆಂದು ನಡೆದು 13 ಹರಿ ಬಳಿಕ ಕರಿವರಗೆ ವಿಶ್ವರೂಪವತೋರಿ ತರಣಿಕೋಟಿ ಸಹಸ್ರತೇಜದಿಲ ರಂಜಿಸಿಯೆ ಪರಿದುಹರಿವೋಲೆಸೆದನು ಬಳಲಿದೆಯಾ ಎಂದು ಕರುಣಾಕಟಾಕ್ಷದಿಂ ಕರಿವರನ ಸಹಿತ ವಾಸ ದೆಡೆಗೆ 14 ಅವನುದಯ ಕಾಲದೊಳೆದ್ದು ಪೇಳುವನು ಆವರಿದ ಭಕ್ತಿ ಭಾವದಲಿದನು ಕೇಳುವರು ಪಾವನರು ಪುಣ್ಯಾತ್ಮರು ಕೋವಿದರು ಧರಗೆ ಗಜರಾಜೇಂದ್ರ ಮೋಕ್ಷವನು ಸಾವದಾನ ದಲಿದನು ನೇಮದಲಿ ಕೇಳ್ವವರ ನೆನೆದವರ ಕಾಯ್ವನೆಂದು 15
--------------
ಕವಿ ಪರಮದೇವದಾಸರು
ಎರಡನೆಯ ಸಂಧಿ ಶ್ರೀಕಾಂತನ ಕರುಣವುಳ್ಳವಗೆ ಕುಂತಳಪುರಕೆ ಕಳುಹಿದನು 1 ಗಂಧಾಕ್ಷತೆ ಫಲಪುಷ್ಪದಿಂದ ಸಾಕ್ಷಾತು ಗಣಪತಿಗರ್ಪಿಸಿ ತರಳನ ಶಿಕ್ಷಾಗುರುವಿಗೆ ಒಪ್ಪಿಸಿದ2 ಮಣ್ಣ ಹರಹಿ ಅಕ್ಷರವ ಬರೆದು ಎನ್ನಣ್ಣನೀ ತಿದ್ದು ಬಾ ಎನಲು ಎನ್ನೊಡೆಯ ಶರಣೆಂದು ಬರೆದ 3 ನಿನ್ನ ಜ್ಞಾನ ಬೇರೆ ಚಿತ್ತ ಬೇರೆ 4 ಎಂದು ಧಿಕ್ಕರಿಸಿ ಹೇಳಿದನು 5 ಚಾತುರ್ಯದ ಬುದ್ಧಿ ಬೇರೆ ತೊಡರು ತಾತಗೆ ಒಯ್ದು ಒಪ್ಪಿಸಿದ 6 ಮುಕುಂದನ ಭಜಕನೆಂದೆನದೆ ಬಂದ ಹಾಂಗಿರಲೆಂದು ಸುತನ 7 ಧ್ರುವ ಪ್ರಹ್ಲಾದ ಅಕ್ರೂರಾಂಬರೀಷ ಮಾಧವ ಮುರಾರಿಯನ್ನು ಭಜಿಸಿ ಭವ ಭಯಾದಿಗಳಿಲ್ಲ ನಮಗೆ 8 ಕಟ್ಟಿಕೊಟ್ಟರು ಕರಲೇಸು ಎನುತ ಕಟ್ಟೆದರ್ ವೇದೋಕ್ತದಲಿ 9 ಓದಿಸಿದರು ಗುರುಮುಖದಿ ಮಾಧವನಲ್ಲದೆ ಅನ್ಯತ್ರರಿಲ್ಲವೆಂದು ಭೇದಾಭೇದವನೆಲ್ಲ ತಿಳಿದು 10 ಹೊಳೆವ ಶ್ರೀ ಮುದ್ರಿಕೆಯಿಟ್ಟು ಗೆಳೆಯರೆಲ್ಲರಿಗೆ ಬೋಧಿಸಿದ 11 ಪತಿತರಾದಪಗತಿ ಕುಮಾರರಿಗೆಲ್ಲ ಸದ್ಗತಿಯಾಗಬೇಕೆಂದೆನುತ ಮಾಡಿಸಿದನಾಜೆÉ್ಞಯಲಿ 12 ದ್ವಾದಶ ನಾಮವ ಹಚ್ಚಿ ಸಾದಿ ಸಾಧಿಸಿರಿ ಏಕಾದಶಿ ವ್ರತವೆಂದು ಬೋಧಿಸಿದನು ಎಲ್ಲರಿಗೆ13 ಜಾಗರ ಮಾಡಿ ಫುಲ್ಲನಾಭನ ಭಜಿಸುವರು ಪರಗೋಷ್ಠಿಯಿಲ್ಲ 14 ಬೆಳೆಸುವ ಹÀರಿಭಕ್ತರೊಡನೆ ಪರಾಕ್ರಮಿಯೆನಿಸಿದನು 15 ಇಮ್ಮಡಿಯನು ಗೆದ್ದು ಹೇರಿಸಿದನು ತನ್ನ ಪುರಕೆ 16 ತಂದು ಆರತಿಗಳನೆತ್ತಿ ಚರಣಕ್ಕೆರಗಿದನು 17 ಜಗದಧಿಪತಿಯಾಗು ಎಂದು ಹರುಷವನೆ ತಾಳಿದಳು 18 ಲೇಸಾದ ಶುಭಲಗ್ನವ ಕಟ್ಟಿ ಸುತನ ಸಿಂಹಾಸನದಲ್ಲಿ ಕುಳ್ಳಿರಿಸಿ ಭೂಸುರ ಬಂಧುಗಳೆಲ್ಲರು ನೆರೆದಿಂದುಹಾಸಗೆ ಪಟ್ಟಗಟ್ಟಿದರು19 ಪರಿ ಪಾಲಿಸುತ್ತ ರಾಜ್ಯನೀತಿಯಿಂದಾಳುತಲಿಹನು 20 ಲಾಲಿಸು ಕುಂತಳೇಶ್ವರಗೆ ಕಾಲಕಾಲಕೆ ಕಪ್ಪವ ಕೊಟ್ಟು ಬಹೆವು ಆಲಸ್ಯವಾಯಿತು ಎಂದ21 ಉದಾರಬುದ್ಧಿಯಲಿಂದುಹಾಸ ವಿಚಾರಿಸಿದನು ತನ್ನಪಿತನ 22 ಜೋಯಿಸ ಪುರೋಹಿತಗೆ ಕಾಂತಿಗೊಡದ ಕನಕಾಭರಣವೆಲ್ಲವ ಅಂತಸ್ಥದಿಂದ ಕಟ್ಟಿದನು23 ಜ್ಞಾನವುಳ್ಳ ಭೃತ್ಯರೊಡನೆ ದಾನವಾಂತಕನ ಕಿಂಕರನು 24 ತೆರಳಿದರಲ್ಲಿಂದ ಮುಂದೆ ಹೆಬ್ಬಾಗಿಲ ಮುಂದೆ 25 ದಿಟ್ಟರಾರೆಂದು ಕೇಳಿದನು ಅಟ್ಟಿದೆನ್ನೊಡೆಯ ಪುಳಿಂದ 26 ಮಂದಿರಕಾಗಿ ಕರೆಸಿದ ಕರವ ಮುಗಿದರು 27 ಕಡೆಗಣ್ಣಲಿ ನೋಡಲಿಲ್ಲವರೊಳು ಮಾತನುಡಿಯದೆ ಸನ್ಮಾನಿಸದೆ ಝೇಂಕರಿಸಿ ಕೇಳಿದನು 28 ಜೀಯ ಹಸಾದ ನಿಮ್ಮಡಿಗೆ ಇಂದಿನ ವಾಯಿದ ಕಟ್ಟಿದ ಧನವು ದೇವರು ಕೈಕೊಂಬುದೆನಲು 29 ನಗ ನಾಣ್ಯ ದೇವಾಂಗವನು ನಗ ನಾಣ್ಯ ದೇವಾಂಗವನು 30 ಸೊಗಸಾಗಿ ಮಾಡಿಸು ಎಂದ ನಗೆಮುಖದಿಂದ ಹೇಳಿದನು 31 ಸಣ್ಣ ರಾಜಾನ್ನದಕ್ಕಿಯನ್ನ ಶಾಕವು ಅಣ್ಣೆವಾಲೆರೆದ ಪಾಯಸವು ಉಣ್ಣೇಳಿರೆಂದು ಕರೆದರು 32 ನಿರಾಹಾರವು ನಮಗೆ ಎಂದು ಕೇಳಿದನು 33 ಎಮ್ಮೊಡೆಯನ ಸುಕುಮಾರ ತಮ್ಮ ರಾಜ್ಯದಲ್ಲಿ ಏಕಾದಶಿವ್ರತ ನಿರ್ಮಾಣವನ್ನೆ ಮಾಡಿದನು34 ಸತಿ ಎಂದೆಲ್ಲರು ಹೇಳುತಲಿಹರು ಎಲ್ಲಿದ್ದ ಆತಗೆ ಸುತನು 35 ಹಿಂದಟ್ಟಿ ಹೋದನು ಪುಳಿಂದ ಅಟ್ಟಡವಿಯೊಳಗಿರಲು 36 ಪೋಷಣೆಯನು ಮಾಡಿದರು ಭೂಸುರರನೆ ಪಾಲಿಸುವನು 37 ನಟ್ಟಂದದಿ ಮನದೊಳು ಮರುಗಿ ಎಂದು ತಾ ಮನದೊಳು ತಿಳಿದ 38 ಅನುಕೂಲವಾದ ಕಾರ್ಯವು ಮನದಲ್ಲಿ ಚಿಂತೆ ಮಾಡಿದನು 39
--------------
ಹೆಳವನಕಟ್ಟೆ ಗಿರಿಯಮ್ಮ
ಎಸೆವ ಸಮುದ್ರವ ಮಥನ ಮಾಡಿತಯ್ಯಾ ನಿನ್ನ ನಾಮ ಹರಿ ಶಶಿಧರ ಶಿವನಿಗೆ ಶಾಂತಿಮಂತ್ರಾಯ್ತಯ್ಯಾ ನಿನ್ನ ನಾಮ ಪ ಚೋರನೆನಿಸಿವನ ಸೇರಿಕೊಂಡವನಿಗೆ ನಿನ್ನ ನಾಮಾ ಪಾರ ಜ್ಞಾನವಿತ್ತು ಮುಂದಕ್ಹಾಕಿತಯ್ಯಾ ನಿನ್ನ ನಾಮ1 ಮೀರಿದ ನಿನ್ನ ಮಾಯೆಗೆ ಸಿಲ್ಕಿದ್ಯೆತಿವರಗೆ ನಿನ್ನ ನಾಮ ಭೂರಿಕರುಣದಿನೆರಗಿ ರಕ್ಷಿಸಿತಯ್ಯಾ ನಿನ್ನ ನಾಮ 2 ಅಮೃತ ಮಾಡುಣಿಸಿ ಪಾಲಿಸಿತಯ್ಯಾ ನಿನ್ನ ನಾಮ 3 ಕಡುರೋಷದೆಸೆದ ವಜ್ರಾಯುಧದೆಚ್ಚೆ ನಿನ್ನ ನಾಮ ಸಿಡಿ ಮುಳ್ಳಿಗಿಂತ ಕಡೆಮಾಡಿಬಿಟ್ಟಿತಯ್ಯಾ ನಿನ್ನ ನಾಮ 4 ನೂರುಯೋಜನದ ವಿಸ್ತೀರ್ಣದ್ವಾರಿಧಿಯ ನಿನ್ನ ನಾಮ ತೋರಿಸಿತೊಂದು ಕಿರಿ ಸರೋವರ ಸಮಮಾಡಿ ನಿನ್ನ ನಾಮ 5 ಮೀರಿದ ದೈತ್ಯರಪಾರಂಗರುವಮಂ ನಿನ್ನ ನಾಮ ಹೀರಿ ಕ್ಷಣದಿ ಸುರಲೋಕ ಸೇರಿಸಿತಯ್ಯಾ ನಿನ್ನ ನಾಮ 6 ತ್ರಿಣಯರ್ಹೊಗಳಲು ಶಕ್ತಿ ಸಾಲದ ಪಟ್ಟಣ ನಿನ್ನ ನಾಮ ಅಣುಗಿಂತ ಅಣುಮಾಡಿ ತೋರಿಸಿತ್ಹನುಮಂಗೆ ನಿನ್ನ ನಾಮ 7 ಅಸಮಪರಾಕ್ರಮ ಅಸುರಕುಲಾಳಿಯಂ ನಿನ್ನ ನಾಮ ನಶಿಸೆ ಶಿವಪುರ ಭಸ್ಮಮಾಡಿತಯ್ಯಾ ನಿನ್ನ ನಾಮ 8 ಪಕ್ಷಿಗಮನ ಪಾಂಡುಪಕ್ಷನೆನಿಸಿತಯ್ಯಾ ನಿನ್ನ ನಾಮ ಅಕ್ಷಯಾಂಬರವಿತ್ತು ಸತಿಯ ರಕ್ಷಿಸಿತಯ್ಯಾ ನಿನ್ನ ನಾಮ 9 ಕಾದು ದಳ್ಳುರಿಹತ್ತಿದೆಣ್ಣೆ ಕೊಪ್ಪರಿಗೆಯ ನಿನ್ನ ನಾಮ ಸುಧನ್ವಂಗನುಪಮ ಶೀತಲವೆನಿಸಿತು ನಿನ್ನ ನಾಮ 10 ಅರಿತು ಭಜಿಪರ ಭವರೋಗಕ್ವೈದ್ಯೆನಿಸಿತು ನಿನ್ನ ನಾಮ ಅರಿದು ಭಜಿಪೆ ನಿನ್ನವರ ಮುಕ್ತಿ ಕರುಣಿಸೋ ಸಿರಿರಾಮ 11
--------------
ರಾಮದಾಸರು
ಏನ ಹೇಳಲಿ ಈತನಿರವ ಭಕ್ತರ ಮನಾ- ಧೀನ ಹೆಳವನಕಟ್ಟೆ ರಂಗ ದೇವೋತ್ತುಂಗನ ಪ. ಹೊಳೆವ ಮೈಯ್ಯವ ಕಲ್ಲಹೊರುವ ಕಡಲೊಳಾಡುವ ತಿಳಿಯ ಎರಡಂಗನೆ ತಿರಿವ ಪರುಶುವಿಡಿವ ಕೋಡಗ ಕುಲವನಾಳುವ ಗೋವಕಾಯ್ವ ಕಾಂತೆಯರ ವ್ರತವ- ನಳಿವ ಅಶ್ವವನೇರಿ ಮೆರೆವನ್ಯಾರೆ ಅಮ್ಮಯ್ಯ ಜಲವಪೊಕ್ಕು ದೈತ್ಯನ ಸಂಹರಿಸಿ ಕಲಕಿ ಸಮುದ್ರವ ಕಾರಣಕಾಗಿ ನೆಲಗಳ್ಳನ ಮರ್ದಿಸಿ ಹಿರಣ್ಯಾಕ್ಷನ ಚಲುವ ಚೆಳ್ಳುಗುರಿಂದೊಡಲನೆ ಬಗಿದು ಸುಲಭನಾಗಿ ಶುಕ್ರನ ಕಣ್ಣಿರಿದು ಬಲುಸಾಹಸದಿ ಕ್ಷತ್ರಿಯರನು ಗೆಲಿದು ಗೆಲವ ತೋರಿ ಗೋಪಿಗೆ ಸುತನಾಗಿ ನಿಲುವ ದಿಗಂಬರಧರ ರಾವುತನಾಗಿ ಇಳೆಯೊಳು ಚರಿಸುವ ಈತ ಕಾಣೆ ಅಮ್ಮಯ್ಯ 1 ನಿಲ್ಲದಾಡುವ ನಗವ ಪೊರುವ ಮಣ್ಣಬಗೆವ ಕಲ್ಲ ಕಂಬವನೊಡೆವ ಇಳೆಯನಳೆವ ಭಾರ್ಗವ ವಲ್ಲಭನವರಗೆಲುವ ಲಜ್ಜೆನಾಚಿಕೆ- ಯಿಲ್ಲದೆ ಅಶ್ವವನೇರಿ ಮೆರೆವನ್ಯಾರೆ ಅಮ್ಮಯ್ಯ ಎಲ್ಲ ವೇದವನುದ್ಧರಿಸ್ಯಂಬುದಿಯ ಜಲ್ಲಿಸಿ ಧಾರುಣಿಯನು ತಂದಿರುಹಿ ತಲ್ಲಣಿಸುವ ಪ್ರಹಲ್ಲಾದನ ಪೊರೆÀದು ಬಲ್ಲಿದ ಬಲಿಯ ಬಂಧಿಸಿ ಪಿತನಾಜ್ಞೆಯ ಸಲ್ಲಿಸಿ ಮಾತೆಯ ಶಿರವ ಚೆಂಡಾಡಿ ಬಿಲ್ಲನ್ನೆತ್ತಿ ಭೂಮಿಜೆಯೊಡಗೂಡಿ ಮಲ್ಲರ ಮಡುಹಿ ಮುಪ್ಪುರದ ಬಾಲೆಯರ ಜಳ್ಳು ಮಾಡಿ ಧರ್ಮವ ಹೋಗ್ಯಾಡಿ ಹಲ್ಲಣಿಸುವ ತೇಜಿಯನೇರಿದ ಶಿರಿ ವಾಸುದೇವ ಕಾಣೆ ಅಮ್ಮಯ್ಯ 2 ಎವೆ ಇಕ್ಕ ಬೆನ್ನಲ್ಹೊತ್ತು ಗಿರಿಯಕೊ- ನೆವಲ್ಲ ಮಸೆವ ಸಮಯದಿ ಬಹವಿಪ್ರ ಮುನಿ ಭವ ಶ್ರೀರಾಘವ ನವನೀತಚೋರ ನಾರಿಯರ ಮೋಹಿಸಿ ತವಕದಿ ತುರಗವನೇರಿ ಮೆರೆವನ್ಯಾರೆ ಪೇಳಮ್ಮಯ್ಯ ತಮನ ಮರ್ದಿಸಿ ಸಾಮವನಜಗಿತ್ತು ಸುಮನಸರಿಗೆ ಸುಧೆಯನು ತಂದೆರದು ಅವನಿಗಳೆದ ಅಸುರನ ಸಂಹರಿಸಿ ಮಮತೆಯಿಂದ ಪುಟ್ಟ ಮಗುವನೆ ಸಲಹಿ ಗಮಕದೊಳಗಿದ್ದ ಬಲಿಯನು ಕೆಡಮೆಟ್ಟಿ ಸಮರಂಗದಿ ಸುರಧೇನುವ ತಂದು ದಿನಕರ ವಂಶೋದ್ಧಾರಕನಾಗಿ ಕಂಸ- ನ ಮಡುಹಿ ಮುಪ್ಪುರದ ಬಾಲೆಯರು ಭ್ರಮಿಸುವಂತೆ ಬೌದ್ಧಾವತಾರನಾದ ಕಲ್ಕಿ ಹೆಳವನಕಟ್ಟೆರಂಗ ದೇವೋತ್ತುಂಗನ 3
--------------
ಹೆಳವನಕಟ್ಟೆ ಗಿರಿಯಮ್ಮ
ಏನೆಂದು ಬಣ್ಣಿಪೆನೆ ಈ ನವ್ಯವಿಗ್ರಹನೆ ಮನದನ್ನನಾದನೆ ವನಜನಯನೆ ತೊಳೆದಕೆಂಡದ ಕಾಂತಿ ಮೊಳದುದ್ದ ಮೋರೆಯು ಕೊಳಗುಳದ ಮನವಿತ್ತು ಮೊಳಗುತಿಹನು ಕತ್ತಿಯನು ಪಿಡಿದೆತ್ತಿ ಉತ್ತಮಾಶ್ವವ ಹತ್ತಿ ಅತ್ಯಂತ ರೋಷದಿಂ ಸುತ್ತುತಿಹನು ಕೊಲೆಗೆ ಹೇಸದ ವÀರನೆ ಪಲಜನರ ಕಡಿದವನೆ ಕಲಿತಾನೆ ಎನುತಿಹನೆ ಕಲ್ಕಿಯಿವನೆ ಇಂತಿರ್ಪ ವರಗೆ ಮನಸೋತು ನಾನು ಕಾಂತನೆಂದಾಡಿದೆನು ಪೇಳ್ವುದೇನು ಶಾಂತಗುಣ ಶೇಷಾದ್ರಿನಿಲಯ ತಾನು ಸಂತತವು ಭಕ್ತರನು ಸಲಹನೇನು
--------------
ನಂಜನಗೂಡು ತಿರುಮಲಾಂಬಾ
ಒಂದು ದಿನ ನಾರದಮುನಿ ಗೋಕುಲದಿ ಇಂದಿರೇಶನ ಲೀಲೆಯಾ ನಿಂದು ನಭದಲಿ ನೋಡುತಾ | ಮೈಯುಬ್ಬಿ ಬಂದನಾ ವೈಕುಂಠಕೆ 1 ಸಿರಿದೇವಿ ಸಖಿಯರೊಡನೆ | ವನದಲ್ಲಿ ಪರಿಪರಿಯ ಕ್ರೀಡೆಯೊಳಿರೇ ಅರವಿಂದ ನಯನೆಯನ್ನೂ | ಕಂಡನಾ ಸುರಮುನಿಯು ಸಂಭ್ರಮದಲೀ 2 ಜಗನ್ಮೋಹನಾಕಾರಳೂ | ಶ್ರೀ ಹರಿಯ ಜಗ ಸೃಷ್ಟಿಗನುಕೂಲಳೂ ಬಗೆ ಬಗೆಯವತಾರಳೂ | ಕ್ಷಣ ಹರಿಯ ಅಗಲದಂತಿರುತಿಪ್ಪಳೂ 3 ಹರಿಗೆ ಗುಣದಿಂ ಕಿರಿಯಳೂ | ಮತ್ತೆಲ್ಲ ಪರಿಯಲ್ಲಿ ಹರಿಗೆ ಸಮಳೂ ಶರಣೆಂದವರ ಕಾಯ್ವಳೂ | ಬೊಮ್ಮಾದಿ ಸುರರ ಸೃಜಿಸುವ ಶಕ್ತಳೂ 4 ನಾಕ ಸ್ತ್ರೀಯರನೆ ಕೂಡೀ | ವನದಲ್ಲಿ ಲೋಕನಾಯಕಿ ರಮಿಸುತಾ ಶ್ರೀಕಾಂತನಗಲದವಳೂ | ಮುನಿಗೆ ತ ನ್ನೇಕರೂಪವ ತೋರ್ದಳೂ 5 ನೊಡಿ ನಮಿಸಿದನು ಸಿರಿಯಾ | ಹರಿಗುಣವ ಹಾಡಿ ಪಾಡಿದನು ಮೈಯ್ಯಾ ಮೂಡೆ ರೋಮಾಂಚ ಕೈಯ್ಯಾ | ಮುಗಿಯುತಲಿ ನೋಡಿದನು ಸಿರಿಯ ದಣಿಯಾ 6 ಪಲ್ಲವಾಧರೆ ನಗುತಲಿ | ತನ್ನ ಕರ ಪಲ್ಲವದಿ ಕೃಪೆಯ ಮಾಡೀ ಎಲ್ಲಿಂದ ಬಂದೆ ಮುನಿಪಾ ವಿಷಯವೇ ನೆಲ್ಲ ಪೇಳೆಂದೆನ್ನಲೂ 7 ಏನ ಪೇಳುವೆನೆ ತಾಯೆ | ನಿನ ಪತಿಯ ನಾನಾ ವಿಧ ಚರ್ಯೆಗಳನೂ ನಾನರಿಯಲಾರೆ ನಮ್ಮಾ | ನವನೀತ ಚೋರನಾಗಿರುವನಮ್ಮಾ 8 ನಾಕ ಭೂಲೋಕ ತಿರುಗೀ | ಭುವಿಯೊಳಗೆ ನಾ ಕಂಡೆ ಗೋಕುಲವನೂ ಹೇ ಕಮಲೆ ಕೇಳು ಅಲ್ಲೀ | ನಿನ ಪತಿಯು ಆಕಳಾ ಕಾಯುತಿಹನೂ 9 ಬಿಟ್ಟು ವೈಕುಂಠವನ್ನೂ | ಪ್ರಾಯ ಸತಿ ದಿಟ್ಟೆ ನಿನ್ನನು ತೊರೆದನೂ ಹುಟ್ಟಿ ಗೊಲ್ಲರ ಕುಲದಲೀ | ಬೆರತನಾ ಕೆಟ್ಟ ಹೆಂಗಳೆಯರಲ್ಲಿ 10 ನಳಿನಜಾಂಡವ ಸಾಕುವಾ | ಜಗದೀಶÀ ಗೋಪಿ ಬೈ ಗಳನು ತಾ ಕೇಳುತಿಹನೂ 11 ಮದನಮೋಹನರೂಪನೂ | ಗೊಲ್ಲತೆರ ಅಧರಾಮೃತವ ಸವಿವನೂ ಎದೆ ಗಂಟು ಪಿಡಿಯುತಿಹನೂ | ಚಂಡೆಂದು ಗದರಿಸಲು ನುಡಿಯುತಿಹನೂ 12 ಸಂಪೂರ್ಣ ಕಾಮ ತಾನು | ವನದಲ್ಲಿ ಗುಂಪು ಸ್ತ್ರೀಯರ ಕೂಡ್ವನೂ ಸಂಪನ್ನ ಭೋಗಿಸುವನೂ | ಕೊಳಲ ಪಿಡಿ ದಿಂಪುಗಾನವ ಗೈವನೂ 13 ವನದ ಸೊಬಗೇನುಸುರುವೇ | ಶ್ರೀರಮಣಿ ದನಕರುವ ಕಾಯುತ್ಹರಿಯಾ ವನವನವ ತಿರುಗುತ್ತಿರೇ | ಕೊಳಲ ಧ್ವನಿ ವನವೆಲ್ಲ ತುಂಬಿರುತಿರೇ 14 ತಿಳಿಯುದಕ ಯಮುನೆ ಮಳಲು | ದಿಣ್ಣೆಯಲಿ ಕೊಳಲೂದೆ ಹರಿ ಕೇಳಲೂ ಮೊಳೆತವಾ ಬಂಜೆ ಮೋಟೂ | ಮೃಗಪಕ್ಷಿ ಕುಳಿತು ಮೈಮರೆತು ಕೇಳೇ 15 ಓಡಿ ಬರುತಲಿ ತುರುಗಳೂ | ಬಾಲವ ಲ್ಲಾಡಿಸದೆ ಕಣ್ಣುಮುಚ್ಚಿ ಮಾಡಿಟ್ಟ ಪ್ರತಿಮೆಯಂತೆ | ಕಾಣುತಿರೆ ಆಡಿಸದೆ ಸರ್ಪ ಹೆಡೆಯಾ 16 ಶೃಂಗಾರ ಕೊಳಲನೂದೆ | ಜಡ ಚೇತ ನಂಗಳಾಗುತ ಚಿಗುರಲೂ ಅಂಗ ಮರೆಯುತ ಜೀವಿಗಳ್ | ಜಡದಂತೆ ಕಂಗಳನುಮುಚ್ಚಿನಿಲ್ಲೆ 17 ಅಷ್ಟ ಐಶ್ವೈರ್ಯದಾತಾ | ನಾರಿಯರ ತುಷ್ಟಿಪಡಿಸುತಲಿ ಖ್ಯಾತಾ ಶಿಷ್ಟ ಜನರನು ಪೊರೆಯುತಾ | ರಕ್ಕಸರÀ ಹುಟ್ಟಡಗಿಸುವನು ವಿಹಿತಾ 18 ಪೇಳಲಳವಲ್ಲವಮ್ಮಾ | ಶ್ರೀ ಹರಿಯ ಲೀಲೆ ಜಾಲಗಳ ಬ್ರಹ್ಮಾ ನೀಲಗಳರರಿಯರಮ್ಮಾ | ಆನಂದ ತಾಳಿದೆನು ಕೇಳೆ ರಮ್ಮಾ 19 ಇಷ್ಟು ಗೋಕುಲದಿ ನೋಡೀ | ಕಾಣದಿ ನ್ನೆಷ್ಟೋ ಎನ್ನುತಲಿ ಪಾಡೀ ಗುಟ್ಟು ಪೇಳಲು ಬಂದೆನೂ | ಸಿರಿದೇವಿ ಸಿಟ್ಟಾಗಬೇಡವಿನ್ನೂ 20 ಪರನಾರಿಯರ ಬೆರೆಯುತಾ | ಶ್ರೀ ಕೃಷ್ಣ ಮರೆತು ನಿನ್ನನು ಸುಖಿಸುತಾ ಪರಿ ಯೊಚಿಸಮ್ಮಾ | ಆಜ್ಞೆ ಕೊಡು ತ್ವರಿತದಲಿ ಪೋಪೆನಮ್ಮಾ 21 ಹರಿಚÀರ್ಯವೆಲ್ಲ ಕೇಳಿ | ಶ್ರೀ ತರುಣಿ ಪರಮ ಆನಂದ ತಾಳೀ ಬೆರಗಾದ ಪರಿತೋರುತಾ | ಮುನಿವರಗೆ ಪರಿ ಏನು ಮುಂದೆ ಎನಲೂ 22 ಸನ್ನುತಾಂಗನ ಕೂಡಲೂ | ಭೂತಳದಿ ಇನ್ನೇನುಪಾಯವೆನಲೂ ಪನ್ನಂಗ ವೇಣಿ ಉದಿಸೂ | ಭೀಷ್ಮಕಗೆ ಇನ್ನು ನೀ ಕುವರಿ ಎನಿಸೂ 23 ಎಂತೆಂತು ಹರಿಯಚರ್ಯೆ | ಸಿರಿಕಾಂತೆ ಅಂತಂತು ನಿನ್ನ ಚರ್ಯೆ ಸಂತೋಷಪಡಿಸಿ ಎಮ್ಮಾ | ಸಲಹಮ್ಮ ಶಾಂತೆ ನಾ ಪೋಪೆನಮ್ಮಾ 24 ಮತ್ತೊಮ್ಮೆ ನೋಳ್ಪೆನೆಂದೂ | ಗೋಕುಲದ ಹತ್ತಿರದಿ ನಭದಿ ನಿಂದೂ ಸುತ್ತು ಮುತ್ತಲೂ ನೊಡಲೂ | ಸಿರಿದೇವಿ ವ್ಯಾಪ್ತಳಾಗಲ್ಲಿ ಇರಲೂ 25 ವನದಿ ಹರಿವಕ್ಷದಲ್ಲೀ | ಸಿರಿದೇವಿ ಘನ ವೇಣೂರೂಪದಲ್ಲೀ ವನಲಕ್ಷ್ಮೀರೂಪದಲ್ಲೀ | ಗೋಪಿಯರ ಪ್ರಣಯ ಪ್ರಕಾಶದಲ್ಲೀ 26 ಎಲ್ಲೆಲ್ಲಿ ಸೌಂದರ್ಯವೋ | ಉಲ್ಲಾಸ ಎಲ್ಲೆಲ್ಲಿ ವೈಭವಗಳೋ ಎಲ್ಲೆಲ್ಲಿ ಹರಿಲೀಲೆಯೋ | ಸಿರಿದೇವಿ ಅಲ್ಲಲ್ಲಿ ತಾನಿರುತಿರೆ 27 ಸಿರಿ ಹರಿಯ ಚರಿಯ ನೊಡಿದ ಪ್ರತಾಪಾ ಧರೆಗಿಳಿದು ನಮಿಸಿ ನಿಂದಾ | ಕ್ಷಮಿಸೆಂದು ಸಿರಿ ಹರಿಗೆ ಸ್ತೋತ್ರಗೈದಾ 28 ಸಿರಿಹರಿ ವಿಯೋಗವಿಲ್ಲಾ | ಆವಾವÀ ಕಾಲ ದೇಶದಲ್ಲೀ ಅರಿಯದಜ್ಞಾನ ನುಡಿಯಾ | ಮನ್ನಿಸೋ ಮಾಯಾ 29 ಜಯ ಜಯತು ಸುರವಂದ್ಯನೇ ಜಯ ಜಯತು ದುಷ್ಟಹರಣ | ಗುಣ ಪೂರ್ಣ ಜಯ ಜಯತು ಶಿಷ್ಟ ಶರಣಾ30 ಸ್ತುತಿಸುತಂಬರಕಡರಿದಾ | ಸುರಮುನಿಪ ಚ್ಯುತದೂರನತಿ ವಿನೋದಾ ಪತಿತರನು ಕಾಯ್ವ ಮೋದಾ | ಸುಖತೀರ್ಥ ಯತಿಗೊಲಿದು ಉಡುಪಿಲ್ನಿಂದಾ 31 ಆಪಾರ ಮಹಿಮ ಶೀಲಾ | ಸರ್ವೇಶ ಗೋಪಿಕಾ ಜನ ವಿಲೋಲಾ ಆಪನ್ನ ಜನರ ಪಾಲ | ಗುರುಬಿಂಬ ಗೋಪಾಲಕೃಷ್ಣವಿಠಲಾ 32
--------------
ಅಂಬಾಬಾಯಿ