ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈ ದೇಹ ಬಲು ಸಾಧನ ಭೂದೇವ ಜನ್ಮದಲಿ ಬಂದ ಕಾರಣ ನಮಗೆ ಪ ಶ್ವಸನ ಮತವೆ ಪೊಂದಿ | ನಸು ಚಿತ್ತದಲಿ ಯಿದ್ದು | ವಿಷಯಂಗಳೆಲ್ಲ ನಿರಾಕರಿಸಿ | ಋಷಿಮಾರ್ಗದಲಿ ನಡೆದು ವಿಹಿತಾರ್ಥದ ಸತ್ಯ | ನಿತ್ಯ ಸಜ್ಜನರ ಒಡಗೂಡು1 ಬಾಹುದ್ವಯದಲಿ ಶಂಖ ಚಕ್ರ ಧರಿಸಿ ಉ | ತ್ಸಾಹದಲಿ ದ್ವಾದಶ ಪುಂಡ್ರಗಳನಿಟ್ಟು | ಸ್ನೇಹಭಾವದಲಿ ಸತತ ಭಕುತಿಯ ಮಾಡು | ಇಹಲೋಕದಲಿ ಇಷ್ಟಾರ್ಥ ಬೇಡುತಲಿರು 2 ಅನಿಷಿದ್ದ ಕರ್ಮಗಳು ಆಚರಿಸಿ ಭೂತದಯ | ಅನುಗಾಲ ಇರಲಿ | ಬಂಧುಗಳ ಕೂಡಾ | ಮನಮೆಚ್ಚು ನಡೆದು ನೀ ಮಂದಮತಿಯನು ಕಳೆದು | ಘನಜ್ಞಾನದಲಿ ನಡೆದು ಗುಣವಂತನಾಗು 3 ಧರ್ಮೋಪದೇಶವನೆ ಮಾಡುತಲಿರು ನೀನು | ಪೇರ್ಮೆಯುಳ್ಳವನಾಗು ಪೃಥವಿಯೊಳಗೆ | ನಿರ್ಮತ್ಸರನಾಗು ವೈಷ್ಣವ ಜನರ ಕೂಡ | ದುರ್ಮತವ ಪೊಂದದಿರು ಅನಂತ ಜನ್ಮಕ್ಕೆ 4 ಕರ್ಣ ತುಲಸೀ ದಳ | ಬೆರಳಲ್ಲಿ ಪವಿತ್ರದುಂಗರವನಿಟ್ಟು | ಪರಮ ವಿರಕುತಿಯಲಿ ದೇಹವನು ದಂಡಿಸುವ | ಹಿರಿದಾಗಿ ಭಾಗವತನಾಗು ವ್ಯಾಕುಲವ ಬಿಡೋ 5 ವದನದಲಿ ಹರಿಸ್ಮರಣೆ ಮರೆಯದಿರು ಕಂಡಕಡೆ | ಉದರಕ್ಕೆ ಪೋಗಿ ಚಾಲ್ವಯದಿರು ಅಧಿಕರ ಆಪೇಕ್ಷಗಳ ಮಾಡದಿರು ಹರಿಯಿತ್ತ ದದು ಭುಂಜಿಸಿ | ಬಂದ ಕಾಲವನು ಹಿಂಗಳಿಯೊ 6 ತೀರ್ಥಯಾತ್ರೆಯ ಚರಿಸು ಕಥಾಶ್ರವಣವನು ಕೇಳು | ಅರ್ಥವನೆ ಬಯಸದಿರು ಬಾಕಿ ಬಸಿದು ವ್ಯರ್ಥ ನಿನ್ನಾಯುಷ್ಯ ಪೋಯಿತೆಂದೆನಿಸದೆ | ಪ್ರಾರ್ಥನೆಯ ಮಾಡು ಪ್ರತಿಕ್ಷಣಕೆ ಶ್ರೀ ಹರಿಚರಣ 7 ಪರಿಯಂತ | ಮಿತ ಆಹಾರ ಮಿತ ನಿದ್ರಿ ಮಿತ ಮಾತನು | ಸತತ ಮೀರದಲಿರು ಶೋಕಕ್ಕೊಳಗಾಗದಿರು | ಸತಿ ಸುತರು ಎಲ್ಲ ಶ್ರೀ ಹರಿಗೆ ಸೇವಕರೆನ್ನು 8 ಜಾಗರ ಗಾಯನ | ಮರಳೆ ಮರಳೆ ಮಂತ್ರ ಪಠನೆಯಿಂದ | ಧರೆಯೊಳಗೆ ಪುಣ್ಯವಂತನಾಗಿ ಸರ್ವದ | ಇರಬೇಕು ಇಹಪರಕೆ ಲೇಸು ಎನಿಸಿಕೊಂಡು9 ಸುಖ ದು:ಖ ಸೈರಿಸುತ ಅರಿಗಳಿಗೆ ಭಯಪಡದೆ | ನಖಶಿಖವಾಗಿ ಆನಂದ ವಿಡಿದೂ | ಮುಖದಲ್ಲಿ ಹರಿನಾಮ ಅಮೃತವೆ ಸುರಿಸುತ್ತ | ಸಖರೊಳಗೆ ಲೋಲಾಡು ಹರಿಗುಣವ ಕೊಂಡಾಡು10 ಸಕಲಾಧಿಷ್ಠಾನದಲಿ ಹರಿಯೆ ಲಕುಮಿ ತತ್ವ | ಕರ ಮುಗಿದು ತಿಳಿದು | ಮುಕುತಿ ಕರದೊಳಗಿಡು ವಿಜಯವಿಠ್ಠಲರೇಯನ | ವಿಕಸಿತ ಮನದಲ್ಲಿ ಭಜಿಸು ಬಲು ವಿಧದಿಂದ11
--------------
ವಿಜಯದಾಸ
ಕೊಳಲನೂದುವ ನಮ್ಮ ಚಲುವ ಕೃಷ್ಣಯ್ಯ ನಳಿನಾಕ್ಷಿಯರ ಮಧ್ಯೆ ಪೊಳೆವ ರಂಗಯ್ಯ ಪ. ಕರದ್ವಯದಲಿ ಶಂಖ ಚಕ್ರಪಿಡಿದಿಹ ಕಿರುನಗೆ ನಗುತ ಸುಲಿಪಲ್ಲಿನ ಚಲುವ ಸ್ವರಗಳ ಪಿಡಿಯುತ ವೇಣು ನುಡಿಸುವ ಸರಸಿಜನಾಭ ಹೃನ್ಮಂದಿರದಿ ಮೆರೆವ 1 ಜಗವ ಮೋಹಿಸುವಂಥ ನಗೆಯ ಮೊಗ ಚೆಲುವ ಹೆಗಲು ಎಡದಲ್ಲಿ ಗಲ್ಲ ತಗುಲಿಸಿ ಇರುವ ಸತಿ ಹೆಗಲಲಿ ಇಡುವ ನಗಧರ ನರ್ತನವಾಡಿ ಮುದವೀವ 2 ಕಾಲಕಡಗ ಗೆಜ್ಜೆ ಪಾಡಗರುಳಿಯು ಮೇಲೆ ಪೀತಾಂಬರ ಜರಿಯ ವೈಭವವು ಸಾಲ ಮುತ್ತಿನಹಾರ ಪದಕದ್ವಜ್ರಗಳು ಓಲಾಡುವ ನೀಲಾಂಬರ ಹೊದ್ದಿಹ ಒಲಪು 3 ಕಂಠ ಕೌಸ್ತುಭಮಣಿ ಅಧರದ ಕೆಂಪು ಕರ್ಣ ಕದಪು ಕನ್ನಡಿಯು ಬಂಟರಾದವರನ್ನು ಪೊರೆಯುವ ದೃಷ್ಟಿ ವೈ - ನಾಸಿಕ ಫಣೆಯ ತಿಲುಕವು 4 ಶ್ರೀಪತಿ ಮುಂಗುರುಳು ಶಿರದಲ್ಲಿ ಮಕುಟ ಪಾಪವ ದಹಿಸುವ ಪಾವನ ವೇಣು ಆಪಾದ ಮೌಳಿಯ ರೂಪದ ಚಲುವ ಗೋಪಾಲಕೃಷ್ಣವಿಠ್ಠಲ ಎನ್ನ ಕಾವ 5
--------------
ಅಂಬಾಬಾಯಿ
ಜಯದೇವ ಜಯದೇವ ಜಯ ಶಂಕರ ಮೂರ್ತಿ ಜಯ ಜಯವೆಂದು ಬೆಳಗುವೆ ಮನದಲಿ ಭಾವಾರ್ತಿ ಪ ಸಾಧನ ಕೆಂಜೆಡೆಯೊಳಗೆ ಜ್ಞಾನಗಂಗೆಯ ನಿಲಿಸಿ ಸಾದರದಲಿ ಚಿಜ್ಯೋತಿಯ ಚಂದ್ರನ ಕಳೆಧರಿಸಿ ನಾದಬಿಂದು ಕಳಾನಯನ ತ್ರಯವೆರಿಸಿ ಮೋದಿಪೆ ಅಪರೋಕ್ಷನುಭವ ಮುಖದೆಳೆ ನಗೆಬಳಿಸಿ 1 ಧವಲಾಂಗದಿ ಸಲೆ ಶುದ್ಧ ಸತ್ವದ ಶೋಧಿಸಲಿ ತವಕದಿ ಶಮದಮವೆಂಬಾ ಬಾಹುದ್ವಯದಲಿ ಅವಯವದಲಿ ನಿಜಭಕ್ತಿ ಶೇಷಾಭರಣದಲಿ ಶಿವತಾನೆಂದು ಬೆಳಗುವೆ ಸಹಜಾನಂದದಲಿ 2 ವಿವೇಕ ವೈರಾಗ್ಯದಾ ಕರಚರ್ಮಾಂಬರಣಾ ಅವನಿಲಿಸುರನರಪೂಜಿತ ಪಾವನಶ್ರೀ ಚರಣಾ ಕುವಲಯ ಲೋಚನ ಶಾಂತಿಯ ಪಾರ್ವತಿ ಸಹಕರುಣಾ ಭವತಾರಕ ಗುರುಮಹಿಪತಿ ಪ್ರಭುದೀನೋದ್ದಾರಣಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದುರ್ಲಭ ಇದು ಕಲಿಯುಗದೊಳಗೆ ಕಾಣಾ ಎಲ್ಲರಿಗೆ ದೊರಕಬಲ್ಲದೆ ಶ್ರೀ ವಲ್ಲಭನ ಪಾದಸೇವೆ ಮಾಡೋ ನೀ ನಲಿದಾಡೋ ಎಲೆ ಮನುಜಾ ಪ ಗಂಧರ್ವರು ಸಿದ್ಧರು ವಿದ್ಯಾ ದರಸಾಧ್ಯ ಗುಹ್ಯಕ ಸುರಮುನಿಗಣ ಗರುಡಾದ್ಯರೆ ನೆರೆದು ಪುರಹರ ಮೂವನ ಬಲ್ಲಿದರೀ ಇಲ್ಲವೆನುತಲಿ ಬರಿದು ರೇಖೆಯ ಬರಿಸಿದರೊ ಡಂಗುರ ಹೊಯಿಸಿದರೊ ಎಲೆ ಮನುಜಾ 1 ಹರಿಯೆಂತೆಂದವ ಧರ್ಮಕೆ ಸಂದವ ಕರದಲಿ ದಂಡಿಗೆ ಪಿಡಿದವ ಪುಣ್ಯವ ಪಡೆದವ ಚರಣದ್ವಯದಲಿ ಗೆಜ್ಜೆಯ ಕಟ್ಟಿದವ ಅಟ್ಟಿದವ ಯಮ ಭಟರ ಹರಿಹರಿದಾಡುತ ಕುಣಿದವ ಉತ್ತಮ ಗುಣದವ ಹಿರಿದಾಗಿ ಗಾಯನ ಪಾಡಿದವ ಸುರರನ ಗೂಡಿದವ ಮಾಯವ ಬಿಡೋ ಎಲೆ ಮನುಜಾ2 ಭವಾಬ್ಧಿ ದಾಟಿದವ ಇಂಬಾಗಿ ಕಡ್ಡಿ ವಾದ್ಯವ ಹಾಕಿದವ ದುರುತವ ನೂಕಿದವ ಸಂಭ್ರಮ ತಾಳ ಕಟದವ ಊಟದವ ಸುರರೊಡನೆ ತುಂಬಿದ ದಾಸರ ಸಭೆಯೊಳಗಿದ್ದವ ನರಕವನೊದ್ದವ ಕಂಬನಿ ಪುಳಕೋತ್ಸವ ಸುರಿದವ ತತ್ವವನರಿದವ ನೀ ಸುಖದಲಿ ಬಾಳೊ ಎಲೆ ಮನುಜಾ 3 ಬೇಸರದಲೆ ಹೇಳಿ ಏಕಾದಶಿಯ ವಾಸರದಲಿ ಜಾಗರವನು ಗೈದ ಮಾನೀಸನು ಅಘನಾಶನು ಚರಣಕೆ ಏರಿಸಿದನಿವ ಬೆರೆದು ಎಲೆ ಮನುಜಾ4 ಗೋಪಾಳವನು ಬೇಡಿ ನಿತ್ಯಸುಖಿಯಾಗಿ ತಾಪತ್ರೆಯ ಮೊದಲಾದ ದುಷ್ಕರ್ಮ ಪಾಪರಹಿತನಾಗಿ ಸಿರಿ ಪದ್ಮವ ಪೊಂದಿದ ಭಜಕರು ಒಂದೇ ಗೇಣೊ ಎಲೆ ಮನುಜಾ 5
--------------
ವಿಜಯದಾಸ
ನಿನ್ನೊಳಗೆ ನೀ ತಿಳಿದುನೋಡು ನಿರ್ಮಲನಾಗಿ ಪ ನಿನ್ನೊಳಗೆ ನೀ ತಿಳಿದುನೋಡು ಚೆನ್ನಾಗಿ ಗುರುಭಕ್ತಿಯ ಮಾಡು ಭಿನ್ನಪದಾರ್ಥಗಳನ್ನು ಬಯಸದೆ ಅನನ್ಯಭಾವದಿ ನಿಜವನ್ನು ನಿತ್ಯಾತ್ಮನ ನರದೇಹದಿಂದಧಿಕವಿಲ್ಲಾ ಸ್ಥಿರವಾಗಿ ನಿಂದಿರುವುದಲ್ಲಾ ಬರಿದೆ ಕೆಡಿಸುವುದು ಸಲ್ಲಾ ಗುರುತಿಗೆ ಬೆರೆಸಲು ಬಲ್ಲಾ ಗುರುನಾಥನಿಂದುಪದೇಶವಾ ಕೈಕೊಂಡು ಇ ತರ ಪರಿಕರಂಗಳ ಆಶಾಪಾಶವಾ ವರ್ಜಿಸಿ ನಿನ್ನ ದುರಿತ ದುಃಖ ವಿನಾಶವಾಮಾಡಲು ಭವ ಶರಧಿಯ ದಾಟುವಾ ಆಯಾಸವಾ ನಿಲ್ಲುವದಿನ್ನು ಕುರಿತುಮನದಲಿ ತಿಳಿದುನೋಡು ಕಾಂಡುವ ಆರು ಅರಿಗಳ ವಿಚ್ಛೇಧನ ಮಾಡು ಅವಿದ್ಯೆಯನ್ನು ಶರಗು ಹಿಡಿದು ಹೊರಗೆ ದೂಡು ಹಮ್ಮಿನಹಲ್ಲು ಮುರಿದು ನಿನ್ನೊಳಗೆ ಕೂಡು ಹರಿಚರಣದೊಳಾಡು ಗುರುಮಂತ್ರವನುಚ್ಚರಿಸಿ ಕರ್ಪೂರವನು ಜಗದೊಳಿರುವುದೆಲ್ಲ ನಶ್ವರಸಂತೆ ನೋಡೆ ಬರುವದೆಲ್ಲ ಬಯಲಿನ ಭ್ರಾಂತಿ ಅರಿತಮಹಾತ್ಮರ ಚರಣನರಸಿಜಕೆ ಎರಗಿ ತತ್ವಾನಂದ ಭರಿತನೆಂದೆನಿಸುವ ನಿನ್ನೊಳಗೆ1 ವಾದಿಸಿ ಶುದ್ಧತತ್ವದ ಹಾದಿಯ ಬಲ್ಲವರಾದ ಸಾದು ಸತ್ಪುರುಷರಪಾದ ಕೊಡಿ ಶ್ರೀ ಗುರುಪ್ರಸಾದ ಸಾಧಿಸಿ ಸವಿಯನು ಬೇಡಿಕೊ ಬ್ರಹ್ಮಾನಂದದ ಬೋಧೆಯಿಂದ ನೀ ಲೋಲಾಡಿಕೊ ನಿತ್ಯನಿರ್ಮಲವಾದ ವಸ್ತು ನೀ ದೃಢಮಾಡಿಕೊ ಅಂತರಾತ್ಮನ ಶೋಧಿಸಿ ಸಜ್ಜಾಗಿ ನೋಡಿಕೊ ಅಷ್ಟರಮೇಲೆ ಹಾ ಧನ್ಯಧನ್ಯನೆನಿಸಿ ಮೆರೆವ ವರ್ಣಾಶ್ರಮದ ಭೇದವಳಿದು ಮಾಯೆಯ ಜರಿವೆ ನಿತ್ಯಾನಂದವಿನೋದಕೆ ಮಹಾತ್ಮರನು ಕರಿವೆ ನೋಡಲು ದ್ವೈತವಾದ ಮಿಥ್ಯವೆಂಬುದನರಿವೆ ಮಧ್ಯಾಂತ ಶ್ರೀ ಗುರುದೇವಾ ಬಹುಆದರವಿಡಿದು ಶಿಷ್ಯರಕಾವಾ ಸಂಪಾದಿಸಿಕೊಡುವಾ ಮುಕ್ತಿಯಠಾವಾ ನಿತ್ಯಾರಾಧಕರಿಗೆ ಸದ್ಗತಿಗಳನೀವಾ ತ್ರಿಮೂರ್ತಿಗಳಾದರೆಂತೆಂಬುದ ನಿನ್ನೊಳಗೆ 2 ನಿತ್ಯನಿರ್ಮಲದೊಳಗಾಡಿ ಪ್ರತ್ಯುಗಾತುಮನ ನೋಡಿ ಇತ್ತಣದ ಹಂಬಲವ ಬಿಡಬೇಕು ತನುಮನಧನ ಜೊತ್ತಾಗಿ ಶ್ರೀ ಗುರುವಿಗೆ ಕೊಡಬೇಕು ಕರುಣದವಜ್ರ ಕೆತ್ತಿದ ಕವಚವನು ತೊಡಬೇಕು ಬಿಡಬೇಕು ಇಂತಾಗಿ ಬಿಡದೆ ಮತ್ತಿ ತಾತ್ವರ್ಥವ ತಿಳಿದು ಕಾಣುಕಾಣದರೊಳು ಪ್ರತ್ಯಕ್ಷ ಹೊಳದಾಡುವ ಚಿದ್ಭಾನು ಪ್ರಕಾಶವನ್ನು ಅತ್ಯಧಿಕತೆಯಿಂದಲೀವನು ಜ್ಞಾನಿಗಳೊಳು ವಿಸ್ತಾರ ವಸ್ತು ವಿಚಾರವನು ಮಾಡಿ ನೋಡಿದರೆ ಕತ್ತಲೆ ಬೆಳಕೆರಡಿಲ್ಲದು ಸ್ವಯದಲಿ ಎತ್ತನೋಡಿದರು ಪ್ರಜ್ವಲಿಸುವುದು ತಾಂ ಉತ್ತಮಾನಂದದಿ ಸಲಿಸುವುದು ಗುರು ಭಕ್ತರ ನಿಜದಲಿ ನಿಲಿಸುವದು ಸುತ್ತು ಮುತ್ತು ಸುಳಿದು ತಾನೆ ಬಯಸುವದು ನೆತ್ತಿಯೊಳಗೆ ಹೊಳೆಯುತ್ತಿಹ ಜ್ಯೋತಿಯು ಎತ್ತಿತೋರಿತು ವಿಮಲಾನಂದ ಬ್ರಹ್ಮನ ನಿನ್ನೊಳಗೆ 3
--------------
ಭಟಕಳ ಅಪ್ಪಯ್ಯ
ಹರಿನಿನ್ನ ಕರುಣವಿರಾಲಾವ ಭಯವು ಸ್ಮರಣಿ ಮಾತ್ರದಿ ಸಕಲದುರಿತಗಳ ಪರಿಹರಿಪ ಪ ಸಣ್ಣ ವಯದಲಿ ಶ್ರೀ ಜಗನ್ನಾಥದಾಸಾರ್ಯ ಬನ್ನ ಬಡುತಿರೆ ವ್ಯಾಧಿ ಪೀಡೆಯಿಂದ ಘನ್ನ ಕರುಣಾಭ್ದಿ ಶ್ರೀ ಗೋಪಾಲದಾಸರಾ - ಬಿನ್ನಪವನಾಲಿಸಿ ರೋಗಮೋಚನ ಗೈದ 1 ದಾಸಕುಲರತ್ನ ಪ್ರಾಣೇಶ ದಾಸಾರ್ಯರ ಆಸುವಂಶದ ತರುಳ ರೋಗದಿಂದಾ ಯಾಸ ಬಡುವದು ಕೇಳಿ, ಆಶೆಯನೆ ತೊರೆದಿಹನು ನೀ ಸಲಹ ಬೇಕಯ್ಯಾ ಕರುಣದಿಂದಲಿ ನೋಡಿ 2 ವರದೇಂದ್ರ ಗುರುವರರ ಸುರುಚಿರಾಲಯದಲ್ಲಿ ಇರಳ್ಹಗಲು ನಿಮ್ಮ ನಾಮ ಸ್ಮರಿಸುವಂಥ ಪರಿ ಪೀಡಿಸುವದುಚಿತವೇನೊ ಶ್ರೀ ಹರಿ ವಿಚಾರಿಸಿ ನೀನೆಸಿದಯದಿಂದ ನೋಡೊ 3 ವಾಸವಾದ್ಯಮರನುತ ವಾಸುದೇವನೆ ನೀನು ಈ ಸಮಯದೊಳಗಿವನ ಕರುಣದಿಂದ ಪೋಷಿಸಲು ನಿನ್ನ ಪೊಂದಿರುವ ಸದ್ಭಕ್ತರ ದಾಸನೆಂದೆನಿಸಿ ಜೀವಿಸಲಿಯನವರತ 4 ನಿನ್ನನೇ ನಂಬಿರುವೆ ನಿನ್ನನೇ ಪ್ರಾರ್ಥಿಸುವೆ ಧನ್ವಂತ್ರಿ ನೀನೆನ್ನ ಮೊರೆಯಾಲಿಸೊ ಬನ್ನ ಬಡಿಸಲು ಸಲ್ಲ ಇನ್ನು ನೀ ಕರುಣಿಪುದು ವರದೇಶವಿಠಲ 5
--------------
ವರದೇಶವಿಠಲ