ಒಟ್ಟು 6 ಕಡೆಗಳಲ್ಲಿ , 4 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಎನ್ನ ಜನುಮ ಸಾಫಲ್ಯವಾಯಿತು | ಬಂದು ಎನ್ನ ಮೊದಲೆ ಪುಣ್ಯ ಕೈಗೂಡಿತು ಧ್ರುವ ಭಾನುಕೋಟಿ ತೇಜವಾಗಿ ರೂಪದೋರಿತು ತಾನೆ ತನ್ನಿಂದೊಲಿದು ದಯವು ಬೀರಿತು ಜ್ಞಾನ ಭಕುತಿ ವೈರಾಗ್ಯವನ್ನು ಅರುಹಿತು ನಾನು ನೀನು ಎಂಬ ಅಹಂಭಾವ ಹರಿಯಿತು 1 ಎಂದು ಇಂದಿರೇಶನ ಕಾಣದ ಕಣ್ಣದೆರೆಯಿತು ಬಂದು ಬೀಳುವ ಭವಪಾಶದ ಬಲಿಯು ಹರಿಯಿತು ಚಂದವಾಗಿ ಸದ್ಗುರು ಕರುಣ ಮಳೆಯು ಗರೆಯಿತು ಹೊಂದಿ ಹರುಷ ಪಡುವಾನಂದ ಪಥವು ದೋರಿತು 2 ಕಣ್ಣು ಕಂಡು ಪಾವನವಾಯಿತು ವಾಸುದೇವನ ಎನ್ನ ಮನಸಿನಂತಾಯಿತು ಪುಣ್ಯಸಾಧನೆ ಧನ್ಯಗೈಸಿತು ಮಹಿಪತಿ ಪ್ರಾಣಜೀವನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಇಂದೆನ್ನ ಜನ್ಮ ಪಾವನವಾಯಿತು ತಂದೆ ಶ್ರೀಗುರು ನಿಮ್ಮ ಚರಣ ದರುಶನದಿ ಧ್ರುವ ಅರ್ಕ ಮಂಡಲಗಳು ರವಿಶಶಿ ಕಿರಣವು ಝಳಝಳಿಸುವ ಪ್ರಭೆ ನೋಡಿ ಅನಿಮಿಷದಾದೃಷ್ಟಿಲೆನ್ನ ಲಕ್ಷಿಯೊಳು ಸಾಕ್ಷಾತ್ವಸ್ತು ಗತಿಯು ನಿಮ್ಮ ಪ್ರಕಾಶವನು ಕಂಡಾಂಧತ್ವಗಳದಿನ್ನು 1 ಓಂಕಾರ ಮೊದಲಾದ ದ್ವಾದಶ ನಾದದಾ ಭೇದದಾ ಘೋಷವನು ಕೇಳಿನ್ನೀ ದೃಶ್ಯದಾ ಕರ್ಣಲೆನ್ನಾ ಲಯಲೀಲೆಯೊಳು ಸಾದೃಶ್ಯ ಮೂರ್ತಿಯು ನಿಮ್ಮ ಶ್ರುತಿಗಳು ಕೇಳಿ ಬಧಿರತ್ವವಾಗಳಿದಿನ್ನು 2 ಜಪವನ್ನು ತಿಳಿದು ಪ್ರಣಮ್ಯಲೆನ್ನ ಮೂರ್ತಿ ನಿಮ್ಮ ಮಂತ್ರವನು ತಿಳಿದು ಪಿಶಾಚತ್ವ ಕಳೆದಿನ್ನು 3 ಸ್ತುತಿ ಸ್ತೌತ್ಯ ಸ್ಮರಿಸುವ ದಿವ್ಯನಾಮಾಮೃತವ ನುಡಿದು ಪಯಸ್ವನೀ ಜಿಹ್ವೆಲೆನ್ನ ಮೂರ್ತಿ ನಿಮ್ಮ ಸ್ಮರಿತ ಗತಿವರಿತು ಮೂಕತ್ವ ಕಳೆದಿನ್ನು 4 ಚಿನ್ಮಯ ಚಿದ್ರೂಪ ಕಂಡು ಬೆರಗಾಗಿ ಮನ ಭ್ರಾಂತಿ ಅಜ್ಞಾನವನ್ನು ಜರಿಯಲೆನ್ನ ಏಕೋದೇವ ಈತ ವಿಶ್ವಾತ್ಮ ಹಂಸನೆಂದು ಸಂದೇಹ ಸಂಕಲ್ಪ ಬಾಧೆಯಾಗಳದಿನ್ನು 5 ಭಕ್ತಿ ಮುಕ್ತಿ ಉದಾರಿ ಆತ್ಮದಲಿ ಸಾರಿದೋರಿ ನಿಜ ಬೋಧಾಮೃತ ಬೆರೆದು ತಾರಿಸಲೆನ್ನ ಗರ್ಭಪಾಶದ ಬಲಿಯು ಹರಿದು ಧರೆಯೊಳಿನ್ನು ಉತ್ಪತ್ತಿ ಸ್ಥಿತಿ ಲಯದ ಬೀಜವನ್ನು ಹುರಿದಿನ್ನು 6 ಭಾಸ್ಕರಸ್ವಾಮಿಯ ಕರುಣಾಳು ಮೂರ್ತಿಯ ಮೂಢ ಮಹಿಪತಿಯ ಕೃಪಾಂಬುಧಿಯು ಕರುಣದಭಯ ಹಸ್ತವನು ಶಿರಸದಲ್ಲಿಡಲಾಗಿ ಧನ್ಯನಾದೆನು ಸತಿಪತಿ ಸಹಿತವಾಗಿನ್ನು 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರು ಸತ್ಯಜ್ಞಾನರ ಚರಣ ದರುಶನದಿ ನೂರಾರು ಜನ್ಮ ಪಾವನವಾಯಿತು ಮುದದಿ ಪ ಗುರುಗಳುಪದೇಶದಿಂ ಪರಮ ಪಾವನನಾದೆ ನರಹರಿಯ ಭಜಿಸುವ ಅಧಿಕಾರಿಯಾದೆ ಗುರುಮಧ್ವರಾಯರಾ ಗ್ರಂಥಶ್ರವಣಾದಿಗಳ ನಿರುತದಲಿ ಮಾಡುವುದಕರ್ಹನಾದೆ 1 ಗುರುಗಳುಪದೇಶವಿಲ್ಲದೆ ಮಾಡುವ ಮಂತ್ರ ಗುರುಗಳುಪದೇಶವಿಲ್ಲದ ಜ್ಞಾನವು ಗುರುಗಳುಪದೇಶವಿಲ್ಲದ ಕರ್ಮಕವನಗಳು ಉರಗವಾಸದಂತೆ ಕಾಣಯ್ಯ 2 ಅಂಕಿತವಿಲ್ಲದಾ ಪದ್ಯಗಳು ಶೋಭಿಸವು ಅಂಕಿತವು ಇಲ್ಲದಿರಬಾರದೆನುತಾ ಪಂಕಜನಾಭ ಹನುಮೇಶ ವಿಠಲನೆಂಬೊ ಅಂಕಿತವನಿತ್ತಾ ಗುರುವು ಮಾಡಿ ಮಮತಾ 3
--------------
ಹನುಮೇಶವಿಠಲ
ತುಂಗಭದ್ರೆ ಸುತರಂಗಿಣಿ ತೀರಗನ್ಯಾರೇ ಪೇಳಮ್ಮಯ್ಯ ಪ ಮಂಗಳ ಮಹಿಮ ಶುಭಾಂಗ ಮೂರುತಿ | ಶ್ರೀ ಹರಿಹರ ಇವ ಕಾಣಮ್ಮ ಅ.ಪ. ಬಹು ಕಂಟಕಿ ಆ ಗುಹನ ತಪಸಿಗೆ | ಮೆಚ್ಚಿದ ಹರ ನೋಡಮ್ಮಮ್ಮ |ಅಹಿ ಭೂಷಣ ತಾ ವರವನು ಕೊಟ್ಟನು | ಬಹು ಬೇಗನೆ ನೋಡಮ್ಮಮ್ಮ|ವಿಹಗವಾಹ ಹರಿ ಮತ್ತೆ ರುದ್ರನಿಂ | ಇವನ ಜೇಯ ನೋಡಮ್ಮಮ್ಮ |ಮಹಿಯೊಳು ಸುರರಾಹವ ಕೆಡಸುತ | ಬಹು ಹಿಂಸಕ ನೋಡಮ್ಮಮ್ಮ 1 ಸುರಲೋಕಕು ಈ ಅಸುರನ ಬಾಧೆಯು | ತಟ್ಟಿತು ನೋಡಮ್ಮಮ್ಮ |ಸುರ ಭೂಸುರರೆಲ್ಲರು ಮೊರೆಯಿಟ್ಟರು | ಹರಿಯಲಿ ನೋಡಮ್ಮಮ್ಮ |ಸಿರಿಯರಸನು ತಾನಭಯವನಿತ್ತವರನು | ಕಳುಹಿದ ನೋಡಮ್ಮಮ್ಮ | ಕರುಣಾಕರ ತಾ ಹರಿಹರ ರೂಪದಿ | ದುರುಳನ ತರೆದ ನೋಡಮ್ಮಮ್ಮ 2 ಕೃತ್ತಿವಾಸ ತಾ ನಿತ್ತ ವರವ ಹರಿ | ಪಾಲಿಸಿದನು ನೋಡಮ್ಮಮ್ಮ | ದಿತಿಸುತನಾಯುವು ದಶಶತಕಳೆಯಲು | ವತ್ತಿದ ಕೆಳಗವನಮ್ಮಮ್ಮ |ಹಿತದಿಂದಲಿ ತಾ ಭಕುತರ ಪೊರೆಯುವ | ಹರಿಹರನ ನೋಡಮ್ಮಮ್ಮ | ದೈತ್ಯನ ಪೆಸರಿಲಿ ಪಾವನವಾಯಿತು | ಈ ಕ್ಷೇತ್ರವು ಕಾಣಮ್ಮಮ್ಮ 3 ದಕ್ಷಿಣ ಪಾಶ್ರ್ವದಿ ಅಭಯ ಹಸ್ತ | ತ್ರಿಶೂಲ ಧರನ ನೋಡಮ್ಮಮ್ಮ | ಅಕ್ಷಿಯ ಮಾನಿಯು ದಕ್ಷಿಣ ಶಿರದಲಿ | ಮೆರೆಯುವನು ನೋಡಮ್ಮಮ್ಮ | ದಕ್ಷಸುತೆಯು ತಾ ವಿರೂಪಾಕ್ಷನ | ಸೇವಿಪಳೂ ನೋಡಮ್ಮಮ್ಮ |ಪಕ್ಷಿವಾಹಗೆ ತಾನರ ಮೈಯ್ಯಾದನು | ತ್ರ್ಯಕ್ಷನು ಕಾಣಮ್ಮಮ್ಮ 4 ಕಂಬು | ಧರನಾ ನೋಡಮ್ಮಮ್ಮ ಲಕ್ಷ್ಮೀವನಿತೆಯು ಕಾಮನ ಜನಕನ | ಸೇವಿಪಳೂ ನೋಡಮ್ಮಮ್ಮ ಶುಮಲಾಂಗ ವನಮಾಲೆಗಳನು | ಧರಿಸಿಹ ನೋಡಮ್ಮಮ್ಮ |ಸಾಮಸನ್ಮುತ ಗುಣಧಾಮನ ಲೀಲೆ | ಇದೆಲ್ಲವು ಕಾಣಮ್ಮಮ್ಮ 5 ಕ್ರೋಶ ಪಂಚ ನಾಲ್ಕಾರದಿ ಮೀಸಲು | ಸುಕ್ಷೇತ್ರವ ನೋಡಮ್ಮಮ್ಮ | ಭಾಸಿಸುವವು ಇಲ್ಲೆಕಾದಶ ವರ | ತೀರ್ಥಂಗಳು ನೋಡಮ್ಮಮ್ಮ | ಈ ಸುಕ್ಷೇತ್ರವು ಆ ಮಹಕಾಶಿಗೆ | ಸಮವೆನಿಸಿದೆ ನೋಡಮ್ಮಮ್ಮ |ಅಸಮ ಮಹಿಮ ಹರಿ ಅಸುರಗೆ ಕೊಟ್ಟನು | ಈ ಪರಿವರ ಕಾಣಮ್ಮಮ |6| ಕೃತಿ ವಿಧಿ ಜನಕನಿಗೂ | ಭೇದವೆ ಸರಿ ಕೇಳಮ್ಮಮ್ಮ ಮೋದಮಯ ಗುರು ಗೋವಿಂದ ವಿಠಲನ | ಲೀಲೆಗಳಿವು ಕಾಣಮ್ಮಮ್ಮ 7
--------------
ಗುರುಗೋವಿಂದವಿಠಲರು
ತ್ರಾಹಿ ಶ್ರೀ ಗುರುನಾಥ ತ್ರಾಹಿ ಸದ್ಗುರುನಾಥ ತ್ರಾಹಿ ಕರುಣಾಳು ಗುರುಮೂರ್ತಿ ಸದೋದಿತ ತ್ರಾಹಿ ಶ್ರೀನಾಥ ಕರುಣಿಸೆನ್ನನು ತ್ರಾಹಿ ತ್ರಾಹಿ ತ್ರಾಹಿ ತ್ರಾಹಿ ದೀನ ನಾಥ ತ್ರಾಹಿ ಗುರು ಮನ್ನಾಥ ಕಾಯೊ ಎನ್ನನು 1 ಹಿಂದೆ ಅನೇಕ ಜನ್ಮವನು ಸೋಸಿ ಬಂದು ನಾನಾ ಹೀನಯೋನಿ ಮುಖದಲಿ ಜನಿಸಿ ಕಂದಿ ಕುಂದಿದೆ ಗರ್ಭಪಾಶದೊಳು ಅಂದಿಗಿಂದಿಗೆ ನಿಮ್ಮ ಕುರುಹು ಕಾಣದೆ ತಿರುಗಿ ಮುಂದಗಾಣದೆ ಕುರುಡನಂತಾದೆ ಧರೆಯೊಳು ಬಂದೆ ಶ್ರೀಗುರು ಪಾದವನ್ನರಿಯದೆ 2 ಇಂದೆನ್ನ ಜನುಮ ಸಾಫಲ್ಯವಾಯಿತಯ್ಯ ಗುರು ಇಂದು ಮುನ್ನಿನ ಪುಣ್ಯ ಉದಯವಾಯಿತು ಎನಗೆ ಇಂದೆನ್ನ ಜೀವ ಪಾವನವಾಯಿತು ಸಂದು ಹರಿಯಿತು ಜನ್ಮ ಮರಣ ಎನಗಿಂದು ತಾ ಮುಂದೆ ಯಮಬಾಧೆ ಗುರಿಯಾಗುವದ್ಹಿಂಗಿತು ತಂದೆ ಶ್ರೀಗುರು ಚರಣದರುಶನದಲಿ 3 ದೇಶಿಗರ ದೇವನಹುದಯ್ಯ ಶ್ರೀಗುರುಮುನಿಯೆ ಅಶೆಪೂರಿತ ಕಲ್ಪವೃಕ್ಷ ಚಿಂತಾಮಣಿಯೆ ವಿಶ್ವ ವ್ಯಾಪಕ ಆತ್ಮ ಹಂಸಮಣಿಯೆ ಈಶ ದೇವೇಶ ಸರ್ವೇಶ ಸದ್ಗುಣಮಣಿಯೆ ವಾಸುದೇವನು ತ್ರೈಲೋಕ್ಯ ತಾರಕಮಣಿಯೆ ಭಾಸಿ ಪಾಲಿಪ ಭವನಾಶ ಮಣಿಯೆ 4 ಕರುಣ ದಯದಿಂದ ನೋಡೆನ್ನ ಶ್ರೀಗುರುರಾಯ ತರಳ ಮಹಿಪತಿ ಪ್ರಾಣೊಪ್ಪಿಸಿಕೊಂಡು ಈ ದೇಹ ಹೊರೆದು ಸಲಹುವದೆನ್ನ ಇಹಪರವನು ಕರದ್ವಯ ಮುಗಿದು ಎರಗುವೆನು ಸಾಷ್ಟಾಂಗದಲಿ ತಾರಿಸುವದೆಂದು ಸ್ತುತಿಸುವೆ ಅಂತರಾತ್ಮದಲಿ ತ್ರಾಹಿ ತ್ರಾಹಿಯೆಂಬೆನು ಮನದಲಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ವಿಶ್ವಪತಿ ಇಂದುಶೇಖರ ಸುರಮಸ್ತಕಮಣಿ ಮನ್ಮಥರಿಪುವೆ ವಿಸ್ತರಿಪೆನು ನಿಮ್ಮ ಮಹಿಮೆಯ ಜಗದೊಳು ಸ್ವಸ್ಥವಾಗಿ ಪ. ಎಲ್ಲಿ ನೋಡಲು ಲಿಂಗಮಯವು ಅಲ್ಲಿಗಲ್ಲಿಗೆ ತೀರ್ಥಯಾತ್ರೆಯು ಸೊಲ್ಲು ಸೊಲ್ಲಿಗೆ ಹರಮಹಾದೇವಂತೆಲ್ಲರು ಸ್ತುತಿಸುವರು ಬಲ್ಲವರು ಇದು ಭಾವಿಸಿ ಕಾಶಿಗಿಂತ ಮಹಿಮೆ ವೆಗ್ಗಳವಹುದೆನುತ ಸುಲಕ್ಷಣೆ ಶಿವಗಾತ್ರೆ ಶಿವನವಲ್ಲಭೆ ತ್ರಾಸಿನಲಿ ತೂಗುವಳು 1 ನಾಟಕದಿ ನಾನಾಜನ್ಮದಿ ಬಂದು ದಾಟದಂತರವನಳಿದನು ಚಂದ್ರ ಕೋಟಿತೀರ್ಥದಿ ಮಿಂದು ಮೈಯ ಕೋಟಲೆ ಸಂಸಾರಗಳೆಲ್ಲ ದಾಟಿದೆನು ಇನ್ನು ಜನನಮರಣಗಳೆಂಬೋಪಾಯಗಳಿಲ್ಲವು 2 ಕೂಪಾರದಲಿ ಬಂದು ಸೂಸುವ ತೆರೆಗಳು ಅಭ್ರದಿಂದಲಿ ಅಪ್ಪಳಿಸಲು ಉನ್ನತ ಭ್ರಮೆಗೊಂಡಿದ್ದ ಕರ್ಮದ ಬಲಿಗಳು ಮಿಗಿಲಾದವು ಉರ್ವಿಯೊಳಗುಳ್ಳ ಸಕಲನದಿಗಳನು ಗರ್ಭದಲಿ ಇಂಬಿಟ್ಟು ಮೆರೆದಂತಿಹ ಸರ್ಬಗೂಡಿಸುವ ಸಿಂಧುರಾಜನಲಿ ಮಿಂದು ನಿರ್ಭಯಳಾದೆನು 3 ಬಲಿದ ದನುಜನ ಭಾವಕ್ಕೆ ಮೆಚ್ಚಿ ಒಲಿದಷ್ಟವರವಿತ್ತ ಸಿಲುಕಲು ಸುಲಭನೆಂದು ಹೇರಂಬನೊಳಿತ್ತು ನೆಲೆಗೊಳಿಸಿ ಎಳೆದರೆ ಎಳೆಯಲೊಲ್ಲದೆ ಛಲವಿಡಿದ ಲಂಕಾಧಿಪತಿಯ ಅಹಂಕಾರ ವಳಿದು ಇಂದ್ರಾದಿಗಳಿಗೆ ವರವಿತ್ತ ಮಹಾಬಲಲಿಂಗನ ಕಂಡೆ 4 ಅನ್ನದಾ ಶತಶೃಂಗ ಪರ್ವತ ಪಶ್ಚಿಮದಿಂದ ಪಾತಾಳಗಂಗೆ ಸಹಿತಲಿ ಪ್ರ- ಸನ್ನನಾಗಿ ನಿಂದ ಚೆನ್ನ ಹೆಳವನಕಟ್ಟೆರಂಗನ ಪ್ರಿಯ ಪನ್ನಂಗಧರ ಪರಮಪವಿತ್ರ ಗೋಕರ್ಣೇಶನ ಕಂಡೆ ಪಾ- ವನವಾಯಿತು ಎಲ್ಲಾ ಕುಲಕೋಟಿಯು 5
--------------
ಹೆಳವನಕಟ್ಟೆ ಗಿರಿಯಮ್ಮ