ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಾಯ್ತು ಹರಿಪಾದ ನೆನೆವಲ್ಲಿ ಮನವೆ ದೀನನೆ ನಿನ್ನ ಬಾಯಿಗ್ಹುಣ್ಣ್ಹುಟ್ಟಿತೇನೋ ಪ ನಿಷ್ಠೆಯಿಂ ಕೈತಾಳವಿಟ್ಟು ಉಲ್ಲಾಸದಿ ಕಷ್ಟಹರನಂಘ್ರಿ ಮನಮುಟ್ಟಿ ಪಾಡುವಲ್ಲಿ ಕೆಟ್ಟಾಸೆಯಿಂ ಪರರಲ್ಹೊಟ್ಟ್ಹೊಟ್ಟ್ಹೊಡಕೊಂಡು ಬೇಡ್ದ ಪೆಟ್ಟಿಗೆ ಕರವರೆಡು ಮುರಿದಿರುವವೇನೋ 1 ವನಜನಾಭನ ದಿವ್ಯ ವನರುಹಂಘ್ರಿಯ ಚರಿತ ಘನವಾಗಿ ಪೊಗಳುತ ಕುಣಿದಾಡವಲ್ಲಿ ಮೊಣಕಾಲು ಕೀಲ್ಮುರಿದು ನೆಲಕಿ ಬಿದ್ದಿಹ್ಯವೆ 2 ನೀಲಶಾಮನ ವಿಮಲಲೀಲೆಗಳು ಶೀಲಮನದಾಲಸಾನಂದೊಳು ಲೋಲ್ಯಾಡವಲ್ಲಿ ಹಾಳು ಸಂಸಾರದ ಗೋಳಾಟ ಕೇಳಿ ಕೇಳಿ ಶೂಲೆಯೆದ್ದೆರಡು ಕಿವಿ ಕಿವುಡಾದವೇನು 3 ಸಾಗರನಿಲಯನ ನೀಗದ ಮಹಿಮೆಗಳ ಜಾಗರದಿಂ ಪಾಡಿ ಭವರೋಗ ಗೆಲಿವಲ್ಲಿ ಸೋಗಿನ ಸೂಳೆಸುದ್ದಿ ರಾಗದ್ಹಾಡ್ಹ್ಯಾಡಿ ಭವ ಜಿಹ್ವೆ ಕಳಕೊಂಡಿದ್ಯೇನೋ 4 ದಾಸನುದಾಸರ ವಾಸದಿಗೂಡಿಯನು ಮೇಷನು ವಿಚಾರದಿಂ ಶ್ರೀಶನ ಚರಣ ಧ್ಯಾಸದೊಳಗಿರ್ದು ಯಮಪಾಶವನು ಗೆಲಿದು ದಯ ಭೂಷ ಶ್ರೀರಾಮನ ಮುಕ್ತಿ ಪಡಿವಲ್ಲಿ 5
--------------
ರಾಮದಾಸರು
ಏನು ಕೆಟ್ಟೆಯಲ್ಲೋ ಮನುಜ ಹಾನಿಯಾದೆಯಲ್ಲೋ ಪ ಕಾಣದೆ ಏನೇನು ಗಾಣದೆತ್ತಿನಂತೆ ನಾನಾ ಯೋನಿಗಳು ಖೂನವಿಲ್ಲದೆ ತಿರುಗಿ ಅ.ಪ ಕಾಲ ಕಳೆದೆಯಲ್ಲ ಕಾಲದ ಮೂಲ ತಿಳಿಯಲಿಲ್ಲ ಮೂಳನಾದೆಯಲ್ಲ ಭವದ ಮಾಲ ಗೆಲಿಯಲಿಲ್ಲ ಕಾಳುಕತ್ತಲೆಂಬ ಹಾಳು ಸಂಸಾರ ಮಾಯಾ ಜಾಲದಿ ಬಿದ್ದೆಮಧಾಳಿಗೀಡಾದೆಯಲ್ಲ 1 ನಾರಿ ನಿನ್ನವಳಲ್ಲ ಹುಟ್ಟಿದ ಪೋರ ನಿನಗಿಲ್ಲ ಯಾರಿಗೆಯಾರಿಲ್ಲ ನಿನ್ನ್ಹಿಂದೆ ಯಾರು ಬರುವುದಿಲ್ಲ ಧಾರುಣಿಸುಖವಿದು ಸಾರಮಯ ಸುವಿ ಚಾರದೆ ನೋಡದೆ ಘೋರನರಕಿಯಾದೆ 2 ಮನೆಮಾರು ನಿನಗಿಲ್ಲ ಗಳಿಸಿದ ಧನವು ನಿನ್ನದಲ್ಲ ಕ್ಷಣಿಕವಾದದ್ದೆಲ್ಲ ಜಗಸುಖ ನಿನಗೊಂದು ಸ್ಥಿರವಿಲ್ಲ ವನಜನಾಭ ನಮ್ಮ ಜನಕ ಶ್ರೀರಾಮನ ವನರುಹಂಘ್ರಿ ನಂಬಿ ಘನಮುಕ್ತಿ ಪಡೀಲಿಲ್ಲ 3
--------------
ರಾಮದಾಸರು
ಸೃಷ್ಟಿಗೀಶ ನಿನಗಿಷ್ಟು ದಯಬಾರದ್ಯಕೊ ಎಷ್ಟು ಬೇಡಲು ಎನ್ನ ಮೊರೆ ಕೇಳದಿರುವಿ ಪ ಕರಿರಾಜನ ಪೊರೆದೆಲೋ ನರಗೆ ಸಾರಥಿಯಾದಿ ತರುಣಿಯನುದ್ಧರಿಸಿ ಪರಿಶುದ್ಧಗೈದಿ ಪರಮಕುರುಣಿಯು ನೀನು ದುರಿತಕಾರ್ಯದಿಂ ನಾನು ನರಕಿಯಾಗ್ವುದನರಿತು ಅರಿಯದಂತಿರುವಿ 1 ಖುಲ್ಲದಾನವರೊದೆದು ಎಲ್ಲ ದೇವತೇರಿಗೆ ನೀ ನುಲ್ಲಾಸವನು ಕೊಟ್ಟು ಪುಲ್ಲನಾಭ ಹರಿಯೆ ಕ್ಷುಲ್ಲಕರ ಸಂಗದಿಂ ನಾ ಸಲ್ಲದಂತಾಗುವೆ ಕ ಣ್ಣಲ್ಲಿ ಕಂಡು ನೀ ಕಂಡಿಲ್ಲದಂತಿರುವಿ 2 ಮುನಿಶಾಪದಿಂ ನೃಪನ ಕನಿಕರದಿ ಕಾಯ್ದಿ ನಿಂ ತನುದಿನದಿ ಬಾಗಿಲವ ಘನವಾಗಿ ಕಾಯ್ದಿ ಶುನಕನಂದದಿ ನಾನು ದಿನದಿನಕೆ ಮತ್ತಿಷ್ಟು ಘನಪಾಪಿಯಾಗ್ವುದನು ಮನಕೆ ತರದಿರುವಿ 3 ವನವಾಸಗೈದಯ್ಯಾ ವಾನರನ ಸಲಹಿದಿ ದನುಜನನು ಸಂಹರಿಸಿ ದನುಜನನುಜಂಗೆ ಮಾಣದ ಪಟ್ಟವನು ಮೆಚ್ಚಿ ನೀ ಕೊಟ್ಟೆಯ್ಯಾ ಎನಗ್ಯಾಕೀದುರ್ಬವಣೆ ದೂರಮಾಡದಿರುವಿ 4 ಇನಿತೆಲ್ಲ ಯೋಚಿಸಲು ಘನ ಕುರಣಾನಿಧಿ ನೀನು ನಿನಗವರೆ ದಾಸರೆ ನಾನಲ್ಲವೇನು ಮನಸಿಜಪಿತ ನಿನ್ನ ವನರುಹಂಘ್ರಿಯ ನಂಬಿ ಮಣಿದು ಬೇಡುವೆ ಕಾಯೊ ತಂದೆ ಶ್ರೀರಾಮ 5
--------------
ರಾಮದಾಸರು