ಭವ ಬಿಡಿಸಯ್ಯ ಹರಿ ನಿನ್ನ ನಾಮ
ದೃಢವಾಗಿ ನುಡಿಸಯ್ಯ ಬಿಡದೆ ಸನ್ಮಾರ್ಗದಿ
ನಡೆಸಯ್ಯ ದೇವ ಗಡ ನಿನ್ನ ಕೃಪಾಕವಚ ತೊಡಿಸಯ್ಯ ಪ
ಹಾಳು ಭ್ರಾಂತಿಗಳೆಲ್ಲ ಕೆಡಿಸಯ್ಯ ಎನ್ನ
ಕೀಳುಯೋಚನೆ ಸರ್ವ ಕಡಿಸಯ್ಯ
ಜಾಳು ಪ್ರಪಂಚದಾಸೆ ತಿಳಿಸಯ್ಯ ಸ್ವಾಮಿ
ಮೂಳಮಾನವರ ಮಾತು ಮರೆಸಯ್ಯ 1
ನಿತ್ಯ ಸುಜನರೊಳಿರಿಸಯ್ಯ ಎನ್ನ
ಸತ್ಯ ಶರಣರೊಳಾಡಿಸಯ್ಯ
ಅರ್ತಿಯಿಂ ತತ್ವರ್ಥ ತಿಳಿಸಯ್ಯ ಎನ್ನ
ಮಿಥ್ಯಗುಣಂಗಳನ್ನು ಹರಿಸಯ್ಯ 2
ಕೋಪತಾಪಂಗಳ ವಧಿಸಯ್ಯ ಎನ್ನ
ಪಾಪ ಮಾಫಿಗೊಳಿಸೆನ್ನಯ್ಯ
ಕೋಪಿ ಪಾಪಿಗಳಿಂದುಳಿಸಯ್ಯ ನಿನ್ನ
ಗೌಪ್ಯದ ಧ್ಯಾನ ಮುನ್ನ ತಿಳಿಸಯ್ಯ 3
ಭೂತಪ್ರೇತದಂಜಿಕ್ಹರಿಸಯ್ಯ ತಂದೆ
ಜಾತಿಭೀತಿ ಮೊದಲ್ಹಾರಿಸಯ್ಯ
ನೀತಿಶಾಂತಿ ಸ್ಥಿರ ನಿಲ್ಲಿಸಯ್ಯ ಎನ್ನ
ತಾತ ಮಾತೆ ನೀನೆ ನಿಜವಯ್ಯ 4
ನರರಿಗೆ ಎರಗಿಸದಿರಯ್ಯ ಎನ್ನ
ಶಿರ ನಿನ್ನ ಚರಣದಿ ಇರಿಸಯ್ಯ
ಪರಲೋಕಸಾಧನ ತೋರಿಸಯ್ಯ ಎನ್ನ
ಶರಣ ನೀನಾಗು ಶ್ರೀರಾಮಯ್ಯ 5