ತ್ರಿಮೂರ್ತಿಗಳ ಲಾಲಿ
ಜೋಜೋ ಬಾಲಕೃಷ್ಣ ಜೋಗುಳವ ಹಾಡುತ್ತ ತೂಗುವೆ ನಾ ಪ.
ನವರತ್ನ ಖಚಿತದ ತೊಟ್ಟಿಲ ಕಟ್ಟಿ
ನಾಗಸಂಪಿಗೆ ಜಾಜಿ ಮಾಲೆಯನ್ಹಾಕಿ
ನಾಲ್ಕುವೇದದ ಸರಪಣಿ ಬಿಗಿದು
ನಾಗಶಯನನ ಮಲಗಿಸಿ ಬೇಗ
ರಾಗದಿ ಅನುಸೂಯ ಪಾಡಿ ತೂಗಿದಳು ಜೋ 1
ಮುತ್ತು ಮಾಣಿಕ್ಯದ ತೊಟ್ಟಿಲ ಕಟ್ಟಿ
ಮುತ್ತು ಪವಳದ ಸರಪಣಿ ಬಿಗಿದು
ಮುದದಿ ಮಲ್ಲಿಗೆ ಜಾಜಿ ಪುಷ್ಪವ ಕಟ್ಟಿ
ಮುಕ್ತ ಬ್ರಹ್ಮನ ಮಲಗಿಸಿ ಬೇಗ
ಅರ್ತಿಲಿ ಅನಸೂಯ ತೂಗಿದಳಾಗ 2
ನೀಲ ಮಾಣಿಕ್ಯದ್ವಜ್ರತೊಟ್ಟಿಲ ಕಟ್ಟಿ
ಮೇಲೆ ಕೆಂಪಿನ ಸರಪಳಿ ಬಿಗಿದು
ಮಾಲತಿ ಮಲ್ಲಿಗೆ ಮಾಲೆಯ ಕಟ್ಟಿ
ನೀಲಕಂಠನ ಮಲಗಿಸಿ ಬೇಗ
ಬಾಲನ ಅನಸೂಯ ತೂಗಿದಳಾಗ 3
ಈ ಪರಿಯಿಂದಲಿ ತೂಗುತಿರೆ
ತಾಪಸ ಅತ್ರಿಋಷಿಯಾಗ ಬರೆ
ಭೂಪರ ತೊಟ್ಟಿಲು ಕಾಣ ಬರೆ
ಪರಿ ಶಿಶುಗಳು ಯಾರೆನ್ನುತಾ
ಶ್ಚರ್ಯದಲಿ ಸತಿಯ ಕೇಳುತಾ 4
ನಮ್ಮ ಪುಣ್ಯದ ಫಲ ವದಗಿತೆಂದು
ಮುನ್ನ ತ್ರಿಮೂರ್ತಿಗಳು ಶಿಶುರೂಪದಿ ಬಂದು
ತನ್ನ ಪತಿಯ ಕೂಡ ಅರುಹುತಲೆ
ಚಿನ್ನರ ತೂಗುತ್ತ ಹರುಷದಿ
ಚೆನ್ನ ಶ್ರೀ ಶ್ರೀನಿವಾಸನ್ನ ತೂಗಿದಳು 5