ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಸುಕೃತದ ಫಲವೋ ಶ್ರೀನಿವಾಸನೆ ಹೇಳು ಹಾನಿಯಾಗಿಯೆ ಅವಮಾನ ತೋರುತಿದೆ ಪ ವಾಸುದೇವನೆ ಎನ್ನ ಈಸು ದಿನ ಪರಿಯಂತ ಬೇಸರಿಲ್ಲದೆ ಕಾಯ್ದೆ ಲೇಸ ಕರುಣಿಸಿದೆ ಈಸಾಡಿದೆನು ನಾನು ಈ ಗೃಹದೊಳೀಗೇನು- ದಾಸಿನವು ನಿನಗಾಯಿತು ಮೋಸ ಯೋಚಿಪರೆ 1 ಹಗಲುಗತ್ತಲೆಯಾಗಿ ಮೊಗವು ಕಾಣದೆ ಎನಗೆ ಜಗದುದರ ನಿನ್ನಾಣೆ ನಗೆಯಾಯ್ತು ಜಗಕೆ ಹಗಯ ಮಧ್ಯದಿ ಸಿಲುಕಿ ಮೃಗವು ಬಾಯ್ಬಿಟ್ಟಂತೆ ಮಿಗ ಕ್ಲೇಶಬಟ್ಟು ನರಮೃಗವು ತಾನಾದೆ 2 ಆರು ಹಿತವರು ಇಲ್ಲ ಧಾರುಣಿಯ ಬಲವಿಲ್ಲ ಪಾರಾಗಿ ನಾಚಿಕೆಯು ಬೇರೂರಿತು ಘೋರ ಅಡವಿಯೊಳಗೆ ಗಾರುಗತ್ತಲೆ ಸುತ್ತಿ ಮಾರಿದೆಯ ಚೋರರಿಗೆ ದಾರಿಗಾಣಿಸದೆ 3 ದೊರೆಯು ಮನ್ನಿಸಿ ಕೊಡಲು ನೆರೆಹೊರೆಯ ಕರೆಕರೆಯು ಹರದಿಯೊಳು ನಂಬಿಗೆಯು ಕಿರಿದಾಯಿತು ನೆರವಾಗಿ ತೋರುತಿದೆ ಬರಿಯ ವೃಕ್ಷದ ತೆರದಿ ಮರುಳು ಕಣ್ಣಿಗೆ ಇರುವೆ ಕರಿಯ ತೆರನಂತೆ 4 ಇನ್ನು ಬಂಧಿಸಬೇಡ ಎನ್ನಿಂದ ಅಳವಲ್ಲ ಬನ್ನಬಡುವುದು ಎಲ್ಲ ನಿನ್ನ ಮನಕರುಹು ಕರ್ಮ ಬೆನ್ನು ಬಿಡುವಂದದಲಿ ಪನ್ನಗಾದ್ರಿನಿವಾಸ ಪಾಲಿಸೈ ಲೇಸ 5 ದಾಸ ಬಳಲಿದನೆಂಬ ಹೇಸಿಕೆಯ ಮಾತುಗಳ ಕಾಸಕೊಟ್ಟೇಕೆ ನಿರಾಸೆ ಮಾಡುವಿಯೊ ಬೇಸರಾಗದೆ ಪಂಥವಾಸಿಯಿಲ್ಲವೆ ನಿನಗೆ ಸಾಸಿರಾಕ್ಷನೆ ಎನಗೆ ಲೇಸಿತ್ತು ಸಲಹೊ 6 ಪಡೆದ ತಂದೆಯು ನೀನೆ ಕೊಡುವ ಒಡೆಯನು ನೀನೆ ಕಡೆಗೆ ಕೈವಿಡಿದು ಎನ್ನ ರಕ್ಷಿಪನು ನೀನೆ ಮಡದಿ ಮಕ್ಕಳನೆಲ್ಲ ಬಿಡದೆ ಸಲಹುವ ನೀನೆ ಪೊಡವಿಗಧಿಪತಿಯಾದ ವರಾಹತಿಮ್ಮಪ್ಪ 7
--------------
ವರಹತಿಮ್ಮಪ್ಪ
ನಿನಗೇನು ಘನವೇನು ವನಜಾಕ್ಷ ವೆಂಕಟೇಶ ಮನಕೆ ಬೇಕಾದುದ ಇತ್ತು ರಕ್ಷಿಸುವರೆ ಪ ದೇಶ ನಿನ್ನದು ಬಹುಕೋಶ ನಿನ್ನದು ಜಗ ದೀಶ ನಿನ್ನನು ಭಾಗ್ಯಲಕುಮಿ ಸೇವಿಸುವಳು ಆಸೆಯಿಂದಲಿ ನಿನ್ನ ಚರಣವ ಮೊರೆಹೊಕ್ಕೆ ದೋಷವ ಕಳೆದು ಎನ್ನ ಲೇಸಿತ್ತು ಸಲಹಯ್ಯ 1 ಅಣುವಾಗಲೂ ಬಲ್ಲೆ ಮಹತ್ತಾಗಲೂ ಬಲ್ಲೆ ಅಣುಮಹತ್ತಿನೊಳಗೆ ಗುಣವ ತೋರಲು ಬಲ್ಲೆ ಕ್ಷಣಕೆ ಮುನಿಯ ಬಲ್ಲೆ ಆ ಕ್ಷಣಕೆ ರಕ್ಷಿಸಬಲ್ಲೆ ಗುಣಗಳವಗುಣಗಳ ನೋಡದೆ ಸಲಹಯ್ಯ 2 ಬಟ್ಟೆನು ಕೈಯ ಮುಟ್ಟಿ ರಕ್ಷಿಪರಿಲ್ಲ ಬೆಟ್ಟದೊಡೆಯ ಮನದಭೀಷ್ಟವೆಲ್ಲವನಿತ್ತು ದೃಷ್ಟಿಯಿಂದಲೆ ನೋಡಿ ಒಟ್ಟೈಸಿ ಸಲಹಯ್ಯ 3 ತಂದೆ ತಾಯಿಗಳಿಲ್ಲ ಬಂಧು ಬಾಂಧವರಿಲ್ಲ ಕುಂದು ಹೆಚ್ಚಿಯೆ ನಿರ್ಬಂಧ ಬಡಿಸುತಿದೆ ಮಂದರಾದ್ರಿಯ ಗೋವಿಂದ ನಿನ್ನಯ ಪಾದ ದ್ವಂದ್ವವ ತೋರಿಸಿ ಚಂದದಿ ಸಲಹಯ್ಯ 4 ಮನದ ಸಂಕಲ್ಪಕೆ ಅನುಗುಣವಾಗಿಯೆ ಘನವಿತ್ತು ಕರೆದೊಯ್ದು ವಿನಯದಿ ಮನ್ನಿಸಿ ಮನೆಗೆ ಕಳುಹು ನಮ್ಮ ವರಾಹತಿಮ್ಮಪ್ಪನೆ ತನು ಮನದೊಳಗನುದಿನದಿನ ಸಲಹಯ್ಯ 5
--------------
ವರಹತಿಮ್ಮಪ್ಪ