ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರುಣೋದಯಕೆ ಮುಂಚೆ ಬಲು ಕತ್ತಲಂತೆ ಪ ಸಿರಿ ಬರುವುದಕೆ ಮುಂಚೆ ಮುಖ ಸುತ್ತು ಜನಕೆ ಅ.ಪ ಹೊಟ್ಟಿ ಹಸಿದರೆ ಅನ್ನ ಬಹಳ ರುಚಿಯಂತೆ ಕೆಟ್ಟು ಬದುಕುವ ಮನುಜ ಬಲು ಘಟ್ಟಿಯಂತೆ ಸಿಟ್ಟು ಮಾಡುವ ಮನುಜ ಕೊನೆಗೆ ಕುರಿಯಂತೆ ಬಿಟ್ಟಿ ಬಯಸುವ ನರನು ಬಲು ಮೋಸವಂತೆ 1 ಸುಳ್ಳು ಹೇಳುವ ನರಗೆ ಪರದಾಟವಂತೆ ಜಳ್ಳುರಾಶಿಯ ನೋಡೆ ದೊಡ್ಡಗಿರಿಯಂತೆ ಕಳ್ಳ ಒಳಗಿರಲಲ್ಲಿ ಶಾಂತಿಯಿಲ್ಲಂತೆ ಕುಳ್ಳ ಹೋರಾಡಿದರೆ ಜಯವಿಲ್ಲವಂತೆ 2 ಭಾರಿ ಮಳೆ ಸುರಿಯಲಿರೆ ಬಹಳ ಬಿಸಿಲಂತೆ ಊರು ಸೇರುವ ಮುನ್ನ ಬಹಳ ದಣಿಯಂತೆ ಕೀರುತಿಯ ಪಡೆಯುವಗೆ ಬಹು ಶತ್ರುವಂತೆ ಮೂರು ಜ್ಞಾನಿಗಳಿರಲು ಭಾರಿ ಸಭೆಯಂತೆ 3 ಮುಳ್ಳಿರುವ ಗಿಡಗಳಲಿ ಬಹು ಪುಷ್ಪವಂತೆ ಹಳ್ಳದಲಿ ಸಿಗುವ ಜಲ ಬಹಳ ರುಚಿಯಂತೆ ಹಳ್ಳಿಗಾರನ ಸತ್ಯ ಬಹಳ ಒರಟಂತೆ ಎಳ್ಳು ಕಾಳುಗಳು ಶನಿಯ ಓಡಿಸುವುದಂತೆ 4 ಮುಟ್ಟಲಾಗದ ನಾಯಿ ದಾಸಾನುದಾಸ ಶ್ರೇಷ್ಠರೆಂದರಿತಿರುವರೆಲ್ಲ ಬಲು ಮೋಸ ಧಟ್ಟನೆ ಹೊಳೆಯುವಗೆ ಬಲು ಮನವಿಕಾಸ ಬಿಟ್ಟಿರುವ ಮನುಜನಿಗೆ ಜಗದಿ ಸುಖವಾಸ 5 ಮುದಿತನವು ಭೂಷಣವು ಸ್ಥಾನವಿರುವವರಿಗೆ ಕುದಿಯುವುದೆ ಭೂಷಣವು ಕ್ಷೀರಜಲದಲ್ಲಿ ಹೆದರುವುದೆ ಭೂಷಣವು ದುಷ್ಟಸಂಗದಲಿ ಗದಗದವೆ ಭೂಷಣವು ಭಕ್ತಿರಸದಲ್ಲಿ 6 ತನ್ನ ತಾ ಶೋಧಿಸಲು ಬಲು ದುಃಖವಂತೆ ಅನ್ಯರನು ಶೋಧಿಸಲು ಸಂತೋಷವಂತೆ ಕನ್ನಡಿಯ ನೋಡದಿರೆ ಬಲು ಚೆಲುವನಂತೆ ಕನ್ನಡಿಯ ನೋಡಿದರೆ ತಾನಳುವನಂತೆ 7 ನಗರ ಸುಂದರಲ್ಲಂತೆ ಬಚ್ಚಿಟ್ಟ ಧನವು ತಾ ಕದ್ದವನಿಗಂತೆ ಸ್ವಚ್ಛ ಬಡತನದವಗೆ ಬಲು ಭಕುತಿಯಂತೆ ಬಿಚ್ಚೊಲೆ ಗಿರಿಜೆಗತಿ ಪ್ರಿಯವಸ್ತುವಂತೆ 8 ಗುಂಡು ಬ್ರಾಹ್ಮಣ ಬರಲು ಅಪಶಕುನವಂತೆ ಹೆಂಡದಾ ಪೀಪಾಯಿ ಬಲು ಶಕುನವಂತೆ ಮಂಡೆ ಬೋಳಿರುವವಳು ಬರಬಾರದಂತೆ ತೊಂಡು ಸೂಳೆಯು ಬರಲು ಬಹಳ ಶಕುನವಂತೆ 9 ಖ್ಯಾತಿ ಬಾರದು ನರಗೆ ಬದುಕಿರುವ ತನಕ ಗೋತ ಹೊಡೆದವನು ಬಲು ಗುಣಶಾಲಿಯಂತೆ ನೀತಿ ಹೇಳುವ ಸ್ಥಳದಲೊಬ್ಬರಿಲ್ಲಂತೆ ಕೋತಿ ಕುಣಿಯುತಿರಲು ನೂರು ಜನರಂತೆ 10 ಬಹು ಧನಿಕ ಬಲು ಬಲಗೆ ಮಕ್ಕಳಿಲ್ಲಂತೆ ದಹಿಸುತಿಹ ದಾರಿದ್ರಗೆ ವರ್ಷಕೊಂದಂತೆ ಅಮೃತ ಸಮವಂತೆ ಸಿಹಿಯಾದ ಕ್ಷೀರ ಮಕ್ಕಳಿಗೆ ಬೇಡಂತೆ 11 ಸಾಲಿಗ್ರಾಮ ತೊಳೆಯಲತಿ ಬೇಸರಂತೆ ಸಾಲು ಎಮ್ಮೆಯ ತೊಳೆಯಲಿ ಉತ್ಸಾಹವಂತೆ ಶೀಲವಾಡುವ ನುಡಿಗೆ ಸಂದೇಹವಂತೆ ಗಾಳಿ ಸುದ್ದಿಗಳೆಲ್ಲ ಬಲು ಸತ್ಯವಂತೆ 12 ಒಳಿತವನು ಜಗದಲ್ಲಿ ತಲೆ ಎತ್ತನಂತೆ ಕಲಿಪುರುಷನಂಥವನು ಬಲು ಮೇಲೆಯಂತೆ ಹುಲಿ ಚಿರತೆ ಕರಡಿಗಳ ಬಲಿಯ ಕೊಡರಂತೆ ಗೆಳತಿ ಮಾರಿಗೆ ಕುರಿಯ ಬಲಿಯೆ ಬೇಕಂತೆ 13 ಅತಿ ಚೆಲುವೆ ಸತಿಯಲ್ಲಿ ಹಿತವಿಲ್ಲವಂತೆ ಗತಿಗೆಟ್ಟ ನಾರಿಯಲಿ ಅತಿ ಮೋಹವಂತೆ ಇತರ ಜನರೇಳಿಗೆಗೆ ಹೊಟ್ಟಿಯುರಿಯಂತೆ ಪ್ರತಿಕ್ಷಣವು ತನಗಾಗಿ ಹಂಬಲಕೆಯಂತೆ 14 ಭೂಮಿ ಎಲ್ಲವು ಇನ್ನು ಉಳುವಾತಗಂತೆ ಭೂಮಿಯೊಡೆಯಗೆ ದೊಡ್ಡನಾಮ ಬಿತ್ತಂತೆ ರಾಮರಾಜ್ಯದಿ ಕಾರು ಓಡಿಸುವವಗಂತೆ ಆ ಮದುವೆ ಕನ್ಯೆಯು ಪುರೋಹಿತಗಂತೆ 15 ಬಕಳಿಸುವ ನಾಯಕರೆ ಸರಕಾರವಂತೆ ಪ್ರಕೃತಿ ನಡೆನುಡಿ ನೀತಿಗೆ ಧಿಕ್ಕಾರವಂತೆ ಸುಖದ ಅನುಭವ ಜನಕೆ ಕುದುರೆ ಕೊಂಬಂತೆ ಮುಖವಿಲ್ಲ ಕಣ್ಣಿಲ್ಲ ಸುಖರಾಜ್ಯವಂತೆ 16 ಚಂದ್ರಲೋಕಕೆ ಪಯಣ ಕಾದಿರುವುದಂತೆ ಮುಂದಲ್ಲಿ ನೆಲಕೆ ಬಲು ಕಟ್ಟು ನಿಟ್ಟಂತೆ ಮುಂದರಿದ ಜನಕಲ್ಲಿ ಸ್ಥಾನವಿಹುದಂತೆ ಹಿಂದುಳಿದ ಗುಂಪಿಗವಕಾಶವಿಲ್ಲಂತೆ 17 ಪುಷ್ಪಾಕ್ಷತೆಯ ಪೂಜೆ ಗೋಮಾತೆಗಂತೆ ಶುಷ್ಕ ತೃಣವನಕೆಲ್ಲ ಮಳೆಗಳ ಕಂತೆ ನಿಷ್ಫಲದ ಗಿಡಬಳ್ಳಿ ತೋಟದಲ್ಲಂತೆ ಪುಷ್ಕಳದ ಫಲ ವೃಕ್ಷಗಳು ಸೌದೆಗಂತೆ 18 ಬರಿಯ ಪಾತ್ರೆಗಳಲಿ ಬಹಳ ಸದ್ದಂತೆ ಅರಿಯುವಜ್ಞಾನಿಗಳು ತಲೆಹರಟೆಯಂತೆ ಅರಿತವನು ನುರಿತನಾದರು ಬೇಡವಂತೆ ಬದಿಯ ಬಹು ದಡ್ಡನಿಗೆ ಮಾರ್ಯಾದೆಯಂತೆ19 ರೈಲು ಉರುಳಿಸೆ ರಾಜ್ಯಕಧಿಕಾರಿಯಂತೆ ಥೈಲಿಯಿದ್ದರೆ ಖೂನಿ ಮಾಡಬಹುದಂತೆ ಶೈಲವೇರುವ ನರನು ಮೇಧಾವಿಯಂತೆ 20 ನರಬಲಿಯ ಕೊಡುವವರು ಹಿರಿಯ ಜನರಂತೆ ಹಿರಿಯ ಮಾರ್ಗದ ಜನರು ಧರೆ ಭಾರವಂತೆ ಗುರುಗಳಿಗೆ ತಿರುಮಂತ್ರ ಹೇಳಬೇಕಂತೆ ಸುರಿಸುವರು ಧನಧಾನ್ಯ ಸುರಿಮಳೆಗಳಂತೆ21 ಮಂತ್ರವಾದಿಯು ನೋಡಿ ಗ್ರಹಭಯವಿದೆಂದ ಯಂತ್ರದಲಿ ನೋಡಿದವ ಹೃದಯರೋಗೆಂದ ಚಿಂತಿಸುತ ಪಂಡಿತನು ಮೋಹಿನಿಯಿದೆಂದ ಅಂತ್ಯದಲಿ ರೋಗಿ ತನಗೊಂದಿಲ್ಲವೆಂದ 22 ಶಿಂಗಪ್ಪ ಕದ್ದು ತಾ ಜೈಲು ಸೇರಿದನು ಕಾಂಗ್ರಪ್ಪ ಜೈಲಿನಿಂದ ಬಂದು ಕುಳತಿಹನು ಹೇಂಗ್ರಪ್ಪ ಬದುಕುವುದು ಎಂದು ಫಲವೇನು ನುಂಗ್ರಪ್ಪ ಸುಖ ದು:ಖಗಳನು ಸಹಿಸುತಲಿ 23 ವೇದಾಂತಿಯಾಗೆನಲು ಹೊಟ್ಟೆಗಿಲ್ಲಂತೆ ಕಾದಾಡಿ ಬದುಕಲನುಭವವಿಲ್ಲವಂತೆ ಓದು ಬದುಕೆಂದರವಕಾಶವಿಲ್ಲಂತೆ ಆದುದಾಯಿತು ಹರಿಗೆ ಶರಣು ಹೊಡಿ ತಮ್ಮ25 ಯಮನು ತಲ್ಲಣಿಸುವನು ಸ್ಥಳವಿಲ್ಲವಂತೆ ಸುಮನಸರು ಆಳುತಿಹರು ಜನವಿಲ್ಲವಂತೆ ಕಮಲೆರಮಣಗೆ ಬಂತು ಪೀಕ್ಲಾಟವಂತೆ ಎಮಗೆಂಥ ಕಷ್ಟವು ಪ್ರಸನ್ನ ಹರಿಯಿರಲು26
--------------
ವಿದ್ಯಾಪ್ರಸನ್ನತೀರ್ಥರು
ಎದ್ದರಾಳಲ್ಲೆಂದು ಬಿದ್ದಿರುವೆನೊ ನಾನು ಮಧ್ವರಮಣನೆ ದಯದಿ ಉದ್ಧರಿಸೆಲೊ ಪ ಏನು ಮಾಡಿದರೇನು ಮಾಡದಿದ್ದರೆ ಏನು ಕಾಣಲಾರೆನೊ ನೀನೆ ತಿಳಿಸಿ ಪೊರೆಯೊ ಕಾನನದಿ ತಿರುತಿರುಗಿ ತೊಳಲಿ ಬಳಲುತಲಿ ಬಲು ದೀನನಾದೆನೊ ಶಕುತಿಯುಕುತಿ ಹೋಗಿ1 ನುಡಿದೆ ನಾ ನೂರೆಂಟು ಅಡಿಯಿಡಲು ಬಲು ಕುಂಟು ಕಡೆಗಾಲದರಿವಾಗಿ ಬಳಲುತಿಹೆನೊ ಸಡಲಿತೆನ್ನಯ ದೇಹ ಸಿಡಿಯಿತೆನ್ನಯ ಮೋಹ ನಡೆಯಾಟವೆನಗಿನ್ನು ಸಾಧ್ಯವಿಲ್ಲವು ದೇವ 2 ಕೊಟ್ಟರೆ ಹೊಗಳುವರು ಕೊಡದಿರಲು ಬೊಗಳುವರು ಕೊಟ್ಟೆನ್ನ ಕರವೆರಡು ಬೆಂಡಾದವೊ ಸುಟ್ಟಿತೆನ್ನಯ ಕೋಪ ನಿಷ್ಠುರದಿ ಬೇಸತ್ತು ಇಷ್ಟು ಜೀವನ ಸಾಕೊ ಕೃಷ್ಣ ಮೂರುತಿಯೇ3 ಗುಣವಿಲ್ಲ ಧನವಿಲ್ಲ ತನುವಿಲ್ಲ ಮನವಿಲ್ಲ ಹೊಣೆ ಹೊರೆವುದೆಂತೆಂದು ಕೈ ಬಿಡದಿರೊ ತೃಣ ಗಿರಿಯನೊದೆಯುವುದು ಒನಕೆ ತಾ ಚಿಗುರುವುದು ವನಜನಾಭನೆ ನಿನ್ನ ಮನಕೆ ಬರಲು 4 ನಾನೇನು ಬಲ್ಲೆ ನಿನಗೇನು ರುಚಿಯೆಂಬುದನು ನಾನರಿತರೂ ನಿನಗೆ ಕೊಡಬಲ್ಲನೆ ನಾನೇಕೆ ಜನಿಸಿದೆನೋ ನೀ ಬಲ್ಲೆ ನಾನರಿಯೆ ಏನೆಂದು ಕೋರದೆಲೆ ಪೊರೆಯಬೇಕೊ 5 ಸಾಯುವರ ನೋಡಿ ಮನ ನೋಯುವುದು ಮೂರುಕ್ಷಣ ಮಾಯಾಪಾಶವು ಮುಸುರೆ ಮರೆವುದೆಲ್ಲ ಪ್ರಾಯದವನಂತೆ ಬಲು ಹೇಯ ಕೃತ್ಯಗಳಾಸೆ ನಾಯಿಬಾಲದ ಡೊಂಕು ತಿದ್ದಿ ಪೊರೆಯೊ 6 ನಂಬಿದವರೆಲ್ಲ ಬಲು ಸಂಭ್ರಮದಲಿರುವರೊ ಅಂಬಿಗನ ತೆರನಾದೆ ನದಿ ದಾಟಿಸಿ ತುಂಬಿರುವ ಮನದಾಸೆ ಹಂಬಲಿಕೆ ನೀಡಿ ತಿರಿ ದುಂಬುವನ ಕನಸಿನಂತಾದವೆನಗೆÀ7 ಇಂದು ನಾನಿಟ್ಟಿಲ್ಲ ಮುಂದೆ ಎನಗೇನು ಬೇಕೆಂದರಿಯೆನೊ ಹಿಂದಾದುದಂತಿರಲಿ ಇಂದಿರುವದಿರಲಿ ಮನ ಮಂದಿರದ ದಾನವರ್ಪಿಸುವೆ ನಿನಗೆ 8 ಮನೆಗೆ ತಾ ಯಜಮಾನ ಕೆಣಕೆ ಬದುಕುವರುಂಟೆ ಕುಣಿಯುತಿದ್ದರು ಜನರು ನುಡಿದ ತೆರದಿ ತನುಸಡಲಿ ಬೀಳಲದ ಕೊನೆಗಾಲವೆಂದರಿತು ಮನೆ ಹೊರಗೆ ಕಸದಂತೆ ಬಿಸುಡುವುದ ನೋಡಿ9 ತುಂಬು ಸಂಸಾರದಲಿ ಸಂಭ್ರಮವನೇಕಗಳು ಸಂಭ್ರಮದಿ ನಿನ್ನ ಹಂಬಲವೇತಕೆ ಕಂಬ ಸಡಲಿದ ಮನೆಯ ತೆರದಿ ದೇಹವು ಸಡಲೆ ಡೊಂಬನಾಟವನಾಡಿ ಚಂಬು ಪಿಡಿದಂತೆ 10 ಕೆಲಸವಿರುವಾಗ ಬಲು ಹೊಲಸು ನಿದ್ರೆಯ ಮಾಡಿ ಹೊಲಸು ವಿಷಯದಿ ಬಹಳ ಎಚ್ಚೆತ್ತೆನೊ ಕಲಿಯು ಕರೆದೌತಣವನಿತ್ತೆ ನಾ ಬಹುವಿಧದಿ ಬಲಿಕೊಡುವ ಕುರಿಯಂತೆ ಬಳಲುತಿರುವೆನೊ ದೇವ 11 ಮರೆವು ಜನತೆಗೆ ದೊಡ್ಡವರವೆಂದು ನೀ ಕೊಟ್ಟೆ ಗಿರಿಯಂಥ ಕಷ್ಟಗಳ ಮರೆಯಲಾಯ್ತೊ ಅರಿವು ಕೊಡದಂತೆ ನಾ ಮರೆತೆನೆಂಬಪರಾಧ ಸರಿತೂಗುವುದೆ ಇದಕೆ ಗುರಿ ಯಾರೊ ದೇವ 12 ಸಾಧು ಜನರಿರುವರೊ ಮೇಧಾವಿಗಳು ಇಹರೊ ಮಾದರಿಯ ಜೀವನವ ತೋರ್ಪರಿಹರೊ ಸಾಧುವಲ್ಲವೊ ನಾನು ಮೇಧಾವಿಯಲ್ಲ ಹೊಸ ಮಾದರಿಯ ತಿರುಕನೆಂದರಿತು ಪೊರೆಯೊ13 ಅರೆಕ್ಷಣವು ನಿನ್ನನು ಸ್ಮರಿಸಲಾರದ ಜನರು ಅರಮನೆಗಳಲ್ಲಿ ವಾಸಿಸುವುದೇಕೊ ಕರಚರಣವಿಲ್ಲದ ಕಪೋತಿಕ ನಿನ್ನಯ ನಾಮ ಕಿರಿಚುತಿರುವುದ ನೋಡಿ ಹರುಷವದೇಕೊ 14 ಗಿಣಿಯಂತೆ ರಾಮ ರಾಮ ಎಂದರೇನು ಫಲ ಫಣಿಯಂತೆ ಸಾಷ್ಟಾಂಗ ನಮಿಸಲೇನು ಋಣಿಯಂತೆ ಧನಿಕನಲ್ಲಿ ಹಲ್ಲುಗಳ ಕಿರಿದರೇನು ಮನವಿಟ್ಟು ಕೆಲಸ ಮಾಡುವುದರಿಯದೆ 15 ಮನಕೆ ಬಂದುದನೆಲ್ಲ ಮಾಡÀುವವರಿರುವರೊ ಮನಕೆ ಶಾಂತಿಯ ಮಾಡುವವರ ಕಾಣೆ ಕನಕವೆರಿಚಿದರಿಲ್ಲ ವನವ ಸೇರಿದರಿಲ್ಲ ಮನಮಂದಿರದಲಿ ನೀ ಇಣಿಕಿನೋಡುವ ತನಕ 16 ಲಂಚಗಳ ಕೊಟ್ಟು ಫಲಗಳ ಬೇಡುವವನಲ್ಲ ಸಂಚುಮಾಡಲು ಶಕುತಿ ಯುಕುತಿಯಿಲ್ಲ ವಂಚಕರ ಬಹುಮತ ಪ್ರಪಂಚದಲಿ ನೀನೊಬ್ಬ ಹೊಂಚು ಕಾಯುತಲಿರುವ ಎಂಬುದರಿತು 17 ರೈಲು ಬಂಡಿಗಳಲಿ ಐಲುಪೈಲುಗಳನ್ನು ಮೌಲ್ಯವಿಲ್ಲದೆ ಸಾಗಿಸುವುದನರಿತು ಕಾಲು ಕಣ್ಣೆಲ್ಲದ ಕಪೋತಿಯೊ ನಾನೊಂದು ಮೂಲೆಯಲಿ ಕುಳಿತು ಬರಲವಕಾಶವೀಯೊ 18 ನಿನ್ನ ಗುಣಗಳನರಿಯೆ ನಿನ್ನ ವರ್ಣಿಸಲರಿಯೆ ನಿನ್ನ ಸೇರಲು ಎನಗುಪಾಯವಿಲ್ಲ ಕನ್ನ ಕತ್ತರಿಯ ಕಾಣಿಕೆಯೊಂದೆ ಸಾಧ್ಯವೊ ಇನ್ನು ತಲೆ ಎತ್ತಿನೊ ಪ್ರಸನ್ನನಾಗುವ ತನಕ 19
--------------
ವಿದ್ಯಾಪ್ರಸನ್ನತೀರ್ಥರು