ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಿದ್ದರೇನಯ್ಯಾ ಜ್ಞಾನವಿಲ್ಲದ ಮೇಲೆ ಪ ದೀನರಕ್ಷಕ ನಿನ್ನ ಧ್ಯಾನ ಮಾಡದವನೆ ಅ.ಪ. ಸತಿಸುತ ಬಾಂಧವರು ಬಹಳಿದ್ದರೇನು ಗತಿ ಕಾಣಿಸುವರೇನೋ ದೇವರ ದೇವ ಪತಿತಪಾವನ ನಿನ್ನ ಅತಿಭಕುತಿಯಿಂದ ಸ್ತುತಿಸಿ ಹಿಗ್ಗದಂಥ ಪಾಮರ ಮನಿಜನೆ 1 ಕ್ಷೇತ್ರಮಾನ್ಯಗಳೇಸಿದ್ದರೇನು ಪಾತ್ರೆ ಪದಾರ್ಥಗಳ್ ಗೃಹದಿ ತುಂಬಿದ್ದರೇನು ಪಾತ್ರಂಗಳ ನೋಡಿ ದಾನಧರ್ಮಂಗಳ ಮಾಡಿ ಮಹ ಯಾತ್ರೆಗಳ ಚರಿಸದೆ ಗಾತ್ರವ ಪೋಷಿಪಗೆ 2 ರಾಶಿ ವಿದ್ಯವಿರಲು ಅದರಿಂದ ಫಲವೇನು ಕೋಶವು ಕೊರೆಯಿಲ್ಲದೆ ಇರುತಿರ್ದರೇನೊ ವಿನುತ ಶ್ರೀ ರಂಗೇಶವಿಠಲನೊಳು ಲೇಶ ಭಕುತಿಯಿಲ್ಲದ ಹೇಸೀಕೆ ಮನದವನೆ 3
--------------
ರಂಗೇಶವಿಠಲದಾಸರು
ನೀನೆ ನಾನೆಂಬುವ ಮಾನವಾಧಮನನ್ನು ಏನು ಮಾಡಲು ಬೇಕು ನಾನರಿಯೆನೊ ರಂಗ ಪ ದಾನವಾರಿಯೆ ಎನ್ನನೇನೆಂದರೂ ಅನಲಿ ನಾ ನಿನ್ನ ನಿಂದಿಸುವರಾನನವ ನೋಡೆನೋಅ.ಪ. ಆನೆಕಾಲಿಗೆ ಕಟ್ಟಿ ಬೀದಿಯೊಳೆಳೆಸಲೆ ಕಾನನಕೆ ಕೊಂಡೊಯ್ದು ಕೈಕಾಲು ಕಡಿಸಲೆ ಮೀನು ಮೊಸಳೆಗಳಿರುವ ಮಡುವೀಲಿ ನೂಕಿಸಲೆ ನೇಣುಗಳಿಂದಲಿ ಬಿಗಿದು ಶೂಲಕೇರಿಸಲೆ 1 ಜೀವದೊರಸೆ ಅವನ ಹೂಳಿಸಿರೆಂದ್ಹೇಳಲೆ ಹಾವುಗಳ ಹಿಂಡಿನೊಳು ನೂಕಿರೆಂದ್ಹೇಳಲೆ ನೋವು ಬಹಳಾಗಲು ಸೂಜಿಗಳಿಂದಿರಿಸಲೆ ಪಾವಕನೊಳು ಕಾಲ್ಕಟ್ಟಿ ಎತ್ತಿ ಹಾಕಿಸಲೇ 2 ಗಿರಿಯ ತುದಿಯಲಿ ನಿಲಿಸಿ ಜರಿಯೊಳಗೆ ನೂಕಿಸಲೆ ಭರದಿ ಕಣ್ಕಟ್ಟಿ ಕಾದತೈಲದೊಳಿಡಿಸಲೆ ಸಿರಿಹರಿಯೆ ಪೇಳೆಂದು ರಂಗೇಶವಿಠಲನೊಳು ತರಣಿನಂದನ ತಾನು ಬಿನ್ನೈಸಿದನಂದು 3
--------------
ರಂಗೇಶವಿಠಲದಾಸರು