ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಷೋಡಶೋಪಚಾರ ಪೂಜಾ ಕೀರ್ತನೆಗಳು) ಧ್ಯಾನಿಸಲರಿಯೆ ನಿನ್ನ ಶ್ರೀನಿವಾಸ ಪ ಧ್ಯಾನಿಸಲರಿಯೆನು ದೀನಮಂದಾರ ನಿ- ತ್ಯಾನಂದ ಮೂರ್ತಿಯಂದರಿತು ಹೃದಯದೊಳು ಅ.ಪ ಕ್ರಮದಿ ಪ್ರತ್ಯಾಹಾರದಿ ಭ್ರಮಗೊಳಿಸುವ ಮನವ ನಿಲಿಸಿಧಾರಣೆಯನು- ಪಮ ಸಮಾಧಿಯಲಿ ಹಂಮಮಯಂಬುವದು ಬಿಟ್ಟು 1 ಪರಿಪರಿಶಾಸ್ತ್ರ ವೇದ ಪುರಾಣಗಳ ತರತಮ ಭೇದಾಭೇದದರುವಿಗೆ ಸಾಕ್ಷಿಯಾ- ಚರಣಕಮಲವರಿತು 2 ಮದಮತ್ಸರಾದಿಗಳು ಕೂಡಿಯನ್ನನು ಬಾಧಿಸುತಿಪ್ಪವು ಅನುದಿನವು ಸದಮಲಾತ್ಮಕ ಶ್ರವಣ ಮನನಗಳರಿಯೆ ಮೋ- ಹದ ಕೂಪದಲ್ಲಿ ಬಿದ್ದೆ ಗುರುರಾಮ ವಿಠಲನೆ 3
--------------
ಗುರುರಾಮವಿಠಲ
ಕಷ್ಟ ಕಷ್ಟವೋ ಕೃಷ್ಣ ದೃಷ್ಟಿಯಲಿ ನೋಡದಿರೆ ತುಷ್ಟಿಪಡಿಸಲು ನಿನ್ನ ನಾನೆಷ್ಟರವನಯ್ಯ ಪ ಭ್ರಷ್ಟನಾಗಿಹೆ ನಾ ಅಷ್ಟಾಂಗಯೋಗವ ತಿಳಿಯೆ ಒಂ- ದಿಷ್ಟು ಭಕುತಿಯ ಕೊಟ್ಟು ಕಡೆಹಾಯಿಸಯ್ಯ ಅ.ಪ ಸತ್ಯ ಅಸ್ತೇಯ ಬ್ರಹ್ಮಚರ್ಯ ಅಹಿಂಸಾ ಧೃತಿ ದಯಾ ಕ್ಷಮಾರ್ಜಿತ ಮಿತಭುಕ್ತವು ನಿತ್ಯ ಬಾಹ್ಯಾಂತರ ಶೌಚಾದಿ ದಶಗುಣ ಯುತವಾದಯಮ ಉಪಾಸನೆಗಳಿನಿತಿಲ್ಲವೋ ದೇವಾ 1 ನಿಯಮ ಮೊದಲಿಲ್ಲ ಜಪತಪ ಸಂತೃಪ್ತಿ ನಿಯತ ಸಿದ್ಧಾಂತ ಶ್ರವಣ ಲಜ್ಜಮತಿಯು ಶ್ರೀಯಃಪತಿಯ ಪೂಜನ ಆಸ್ತಿಕ್ಯವ್ರತ ದಾನೋ- ಪಾಯವಿಲ್ಲದೇ ಕಡೆ ಹಾಯ್ವುದೆಂತಯ್ಯ 2 ಘಾಸಿಯಾಗಿಹುದಯ್ಯ ಷಡ್ವಿಧಾಸನಗಳೂ ಸ್ವಸ್ತಿಕ ಭದ್ರಪದ್ಮ ಅರ್ಧಾಂಗಾಸನದಿ ಸಿದ್ಧ ಪರ್ಯಂಕಗಳೆಂಬ ಆಸನದಿ ಕುಳಿತು ನಾ ಧೇನಿಸಲರಿಯೆ ಹರಿಯೇ 3 ಪ್ರಾಣಾಯಾಮವ ಕ್ರಮವು ರೇಚಕ ಪೂರಕವು ದಣಿವಿಲ್ಲದೆ ಕುಂಭಕದ ಕ್ರಮವಿಲ್ಲ ತ್ರಾಣವಿಲ್ಲವೋ ವಾಯುಬಂಧ ಮಾಡಲರಿಯೆ ಪ್ರಾಣಪತಿ ನಿನ್ನ ಕರುಣವಿಲ್ಲದಾತನಕ 4 ವಿಷಯಾಭಿಲಾಷೆಯಿಂದ್ಹರಿದು ಹೋಯಿತು ಮನಸು ವಿಷಮವಾಗಿಹುದಯ್ಯ ಮತ್ಸಾಧನ ಪ್ರತ್ಯಾಹಾರ ಸಾಧನವಿಲ್ಲ ಕೃಷಿಮಾಡಿ ಸ್ಥಿರಮನದಿ ಧೇನಿಸಲು ನಾನರಿಯೆ 5 ಧಾರಣೋಪಾಯದೊಳು ಅಣುಮಾತ್ರ ನಾನರಿಯೆ ನರಕ್ರಿಮಿಯಾಗಿ ನಾ ಧರೆಯೊಳುಳಿದೆ ಅರಿಯೆ ಬಾಹ್ಯಾಂತರದಿ ಭೂತಪಂಚಕವಿರುವ ಪರಿ ತಿಳಿದು ಪ್ರಾಣವಾಯು ಸಡಿಲಬಿಡಲರಿಯೆ 6 ಧ್ಯಾನಿಸಲು ಏಕಾಗ್ರಚಿತ್ತವೇ ಎನಗಿಲ್ಲ ಸಂಸ್ತುತಿಸೆ ಸಂಪ್ರಜ್ಞಾ ಅಸಂಪ್ರಜ್ಞವೆಂಬ ಘನಸಮಾಧಿಯೊಳ್ ಪರಿವಿಲ್ಲದಲೆ ನಿನ್ನ ಕರುಣವೆಂತಾಗುವುದೋ ಶ್ರೀ ವೇಂಕಟೇಶಾ 7 ಶುದ್ಧವಾದ ದ್ವೈತತ್ರಯ ತಿಳಿಯದಲೆ ಮುಗ್ಧನಾಗಿಹೆ ನಾನಪರಿಶುದ್ಧನೊ ಶಬ್ದಗೋಚರ ನಿನ್ನ ಪರಿಶುದ್ಧ ಭಾವದಿಂ ಬುದ್ಧಿಪೂರ್ವಕ ತಿಳಿಯೆ ಬದ್ಧಪಾಮರನಯ್ಯ 8 ಕರಣತ್ರಯದಲಿ ಮಾಳ್ವ ಕ್ರಿಯೆಗಳೆಲ್ಲವು ಸತತ ಹರಿಯೇ ಬಿಂಬಕ್ರಿಯವ ನಾನರಿಯದೇ ಕರುಣಶರಧಿಯೆ ನೀ ಕೃಪೆಮಾಡಿ ಪೊರೆಯದಿರೆ ಉರಗಾದ್ರಿವಾಸವಿಠಲ ನಿನ್ನ್ಹ್ಹೊರತು ಗತಿಯುಂಟೆ 9
--------------
ಉರಗಾದ್ರಿವಾಸವಿಠಲದಾಸರು
ವಂದಿಸುವೆನು ನಿತ್ಯದೊಳು ವಂದಿಸುವೆನು ಪ ವಂದಿಸುವೆ ಗುರುಮಧ್ವರಾಯನಷ್ಟಾಂಗದೊಳು ನಿಂದಿರ್ದ ವೈಷ್ಣವಮತಚಂದ್ರವಾರಿಧಿಗೆ ಅ.ಪ ಕ್ರೋಧವರ್ಜಿತನಾಗಿ ವೈರಾಗ್ಯವನು ತೊಟ್ಟು ಬಾಧಿಸುವ ಇಂದ್ರಿಯಂಗಳನೆಲ್ಲ ಬಲಿದು ಆಧರಿಸಿ ಕ್ಷಮೆ ದಮೆ ಶಾಂತ ಸದ್ಗುಣದಿಂದ ಮಾಧುರ್ಯದೊಳು ಜನರ ಪ್ರೀತಿಕರನಾದವಗೆ 1 ಭಯವಿವರ್ಜಿತನಾಗಿ ಬಹುಲೋಭವನು ತೊರೆದು ಕ್ಷಯ ಮಾಡಿ ಮೋಹವನು ಹಿಂದುಗಳೆದು ನವವಿಧದ ಜ್ಞಾನವನು ದಶಲಕ್ಷಣಗಳಿಂದ ನಿಯತವತಿ ಕೈಕೊಂಡನಕ್ಷರ ತ್ರಯದೊಳು 2 ಏಳು ಕೋಟಿಯ ಮಹಾ ಮಂತ್ರ ಬಾಹ್ಯದ ಕೋಟೆ ನಾಲಿಗೆ ವಶಮಾಡಿ ನವದ್ವಾರಗಳು ಮೂಲಾಗ್ನಿಯಿಂ ಸುಟ್ಟು ದಶವಾಯುಗಳ ಕದವ ಸಾಲು ನಾದಗಳೆಂಬ ಕಹಳೆವಿಡಿದವಗೆ 3 ದಶವಿಧದ ಘೋಷಗಳ ಬಿಂದು ಪ್ರತಾಪದಿಂ ದಶಮನಾಗಿಯೆ ಮುಂದೆ ಡೆಂಕಣಿಯ ಹಾರಿ ಗಸಣಿಯನು ಬಿಟ್ಟು ಕಳೆಯಿಂದೇಳು ಧಾತುಗಳ ಎಸೆವ ದುರ್ಗಾಂತರಕೆ ತಾಗಲಿಟ್ಟವಗೆ 4 ಒಂದು ಮುಹೂರ್ತದಲಿ ವ್ಯಸನಗಳನು ಹೂಳಿ ಬಂಧಿಸಿಯೆ ಚಂದ್ರಾರ್ಕ ವೀಧಿಗಳ ಪ್ರಣವದೊಳು ಮುಂದೆ ಮೂಲಾಧಾರವೆಂಬ ಅರಮನೆ ಪೊಕ್ಕು ನಿಂದು ನಿಯಮದಿ ಸುಲಿದನದಿಷ್ಠಾನದರಮನೆಯ 5 ಪ್ರತ್ಯಾಹಾರದಿಂ ಮಣಿಹಾರಕದ ಮನೆಯ ಕಿತ್ತು ಕಿಚ್ಚಂ ಹಾಕಿ ಧ್ಯಾನ ಯೋಗದಿ ಬಂದ ಮತ್ತೆ ಸಂಶುದ್ಧ್ದವೆಂಬರಮನೆಯ ಕೋಲಾಹಲದಿ ಉತ್ತಮದ ಅಂಬಿಕಾ ಯೋಗದಿಚ್ಛೆಯೊಳು 6 ಜ್ಞಾನ ಮಂಟಪವೆಂಬ ರಾಜ ಮನೆಯೊಳು ನಿಂತು ಮನದೊಳು ಮೂಲ ಬಂಧದಿ ಆರು ಶಕ್ತಿಗಳ ಹೀನವಾಗಿಹ ಗುಣತ್ರಯವೆಂಬ ಗೊಲ್ಲರನು ವ- ಡ್ಯಾಣ ಬಂಧದಿ ಇರಿವುತಲಿ ಕ್ಷಿಪ್ರದಲಿ 7 ಖೇಚರಿಯ ಯೋಗದಿಂ ಕರಣ ಚತುಷ್ಟಯದ ನೀಚ ಪ್ರಧಾನಿಗಳ ನೆಗಳವನಿಕ್ಕಿ ಕಾಲ ಕರ್ಮದ ಕಣ್ಣುಗಳ ಕಿತ್ತು ಯೋಚನೆಯ ಮಾಡಿದನು ವೀರಾಸನದೊಳು 8 ಮಾಯಾ ಪ್ರಪಂಚವೆಂಬನ್ಯಾಯ ನಾಯಕರ ಕಾಯ ಉಳಿಸದೆ ಸವರಿ ವಾಸ್ತಿಯಿಂದನುಗೈದು- ಪಾಯದಿಂದಾರು ವಿಕಾರಗಳ ಕೈಗಟ್ಟಿ ಬಾಯ ಹೊಯ್ದ ಗುರುವಿಗೆರಗುವೆನು ನಾನು 9 ಇಪ್ಪತ್ತೊಂದು ಸಾವಿರವಾರು ನೂರಾದ ಉತ್ಪವನ ಉಶ್ವಾಸ ನಿಶ್ವಾಸಗಳನೆಲ್ಲ ತಪ್ಪಿಸದೆ ಕುಂಭಕದಿಂದ ಬಂಧಿಸಿಕೊಂಡು ಒಪ್ಪುವನು ಅರೆನೇತ್ರದಿಂದ ಬೆಳಗುವನು 10 ಮುನ್ನೂರ ಅರುವತ್ತು ವ್ಯಾಧಿಗಳ ಲವಳಿಯಿಂ ಬೆನ್ನ ಬೆಳೆಸಿ ಕಪಾಲ ಭೌತಿಯಿಂದಷ್ಟಮದ ವರ್ಣಾಶ್ರಮಂಗಳನು ಏಕವನು ಮಾಡಿಯೆ ನಿರ್ಣಯಿಸಿಕೊಂಡು ತಾ ನೋಡುವವಗೆ 11 ನುತಿಕರ್ಮದಿಂದಷ್ಟ ಆತ್ಮಕರ ಆಸನವ ಜೊತೆಗೂಡಿ ಜಾತ ಮಧ್ಯದ ದೃಷ್ಟಿಯಿಂದ ಅತಿವೇಗದೊಳು ನಡೆವ ಅವಸ್ಥಾತ್ರಯವೆಂಬ ಕೃತಿ ಕುದುರೆಗಳ ಯುಕುತಿಯಲ್ಲಿ ಪಿಡಿದವಗೆ 12 ನಾದದಿಂ ಪಂಚಕ್ಲೇಶ ಪ್ರಭುಗಳನು ಹೊಯ್ದು ಕಾದು ಇರುತಿಹ ಹರಿಗಳಾರು ಬಿಂದುವಿನಿಂ ಸಾಧಿಸುತ ಮಂತ್ರಭ್ರಮಣದಿಂದ ಮಲತ್ರಯದ ಆದಿ ಕರಣಿಕನನ್ನು ಹಿಡಿದವನಿಗೆ13 ದಾತೃತ್ವದಿಂ ಸತ್ಯಲೋಕವನು ತಾ ಕಂಡು ಕಾತರದಿ ಆಕಾರದುರ್ಗವನು ಹತ್ತಿ ಓತಿರುವ ತಿರಿಕೂಟವೆಂಬ ಬಾಗಿಲ ದಾಟಿ ಈ ತೆರದ ಮಹಾದುರ್ಗವನು ಕಂಡವಗೆ 14 ಅಣು ಮಾತ್ರ ಸೂಕ್ಷ್ಮದೊಳು ನೋಡಿ ತಾ ಜ್ಞಾನದೊಳು ಕುಣಿಯೊಳಗೆ ಆ ಪರಂಜ್ಯೋತಿ ಆಗಿರುತಿಪ್ಪ ಗುಣನಿಧಿಯು ವರಾಹತಿಮ್ಮಪ್ಪರಾಯನನು ಕಣು ಮನದಿ ದೃಢವಾಗಿ ನೋಡಿ ಸುಖಿಯಾದವಗೆ 15
--------------
ವರಹತಿಮ್ಮಪ್ಪ
ವಿಜಯವಿಠ್ಠಲ ನಾಮ ಭಜಿಸಿದಾ ಮಾನವಗೆ ಸತತ ಸಂಪದವಕ್ಕು ಪ ಕಾಯ ಶುಚಿಯಾಗುವದು ಕಠಿನತನ ಪೋಗುವದು ಆಯು ಹೆಚ್ಚುವುದು ನಿಯೋಗಿ ಯಾಹಾ ನಾಯಿ ಮೊದಲಾದ ಪ್ರಾರಬ್ಧ ಜನುಮಗಳಿರಲು ಬಾಯಿಲಿಂದಾಕ್ಷಣ ತೀರಿ ಪೋಪವು ಕೇಳಿ 1 ದ್ವೇಷಿಗಳು ಎಲ್ಲ ಬಾಂಧವರಾಗಿ ಇಪ್ಪರು ದ್ವೇಷ ಪುಟ್ಟದು ತನಗೇತರ ಮೇಲೆ ದೇಶ ಮಧ್ಯದಲಿ ತಾನೆ ಎಲ್ಲಿ ಇದ್ದರೂ ಕೋಶಾಧಿಪತಿಯಾಗಿ ಸಂಚರಿಸುತಿಪ್ಪರು2 ಹೀನ ವಿಷಯಂಗಳಿಗೆ ಅವನ ಮನವೆರಗಿದರೆ ಕಾಣಿಸುವನು ತಾನೆ ಮುಂದೊಲಿದು ಏನು ಹೇಳಲಿ ಹರಿಯ ಅನುಕಂಪನಾತನಕೆ ಕಾಲ ಕಡೆಗಾಣನು 3 ದೇವಾದಿ ಮುನಿತತಿಯ ಮೊದಲಾದವರು ನೆನೆದು ಆವಾವ ಸೌಖ್ಯದಲಿ ಇಪ್ಪರದಕೋ ಭಾವದಲಿ ತಿಳಿದು ಭಕುತಿಯ ಮಾಡಿರೋ ಜನರು ಕಾವುತಲಿಪ್ಪ ಸರ್ವಾಶ್ರಯನಾಗಿ ಹರಿ4 ಕಂಡವಗೆ ದೊರಕದು ಈ ನಾಮ ಜಪಿಸಿದರು ಕಂಡವಗೆ ಬಲು ಸುಲಭ ಭಯವೆಯಿಲ್ಲಾ ಮಂಡಲವ ಚರಿಸಿ ನಾನಾ ವ್ರತ ಮಾಡದಿರಿ ಕೊಂಡಾಡು ವಿಜಯವಿಠ್ಠಲನ ಆಸರ ಸೇರಿ5
--------------
ವಿಜಯದಾಸ