ಒಟ್ಟು 41 ಕಡೆಗಳಲ್ಲಿ , 18 ದಾಸರು , 33 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಹೆಬ್ಬುರಿ ಶ್ರೀ ಅನಂತಪದ್ಮನಾಭ) ಹೆಬ್ಬುರಿ ಪದ್ಮನಾಭಾ ನಂಬಿದೆನು ಪದಾಬ್ಜವ ಪೂರ್ವಶೋಭಾ ಕೊಬ್ಬಿದ ಶತ್ರು ಪುಂಜಗಳನ್ನು ದೂರದಿ ದಬ್ಬಿ ದಯಾರಸ ಉಬ್ಬಿಪಾಲಿಸು ದೇವಾ ಪ. ಯೋಗಿ ಹೃನ್ಮಂಡಲದಿ ನಿತ್ತಂದದಿ ಸಾಗಿ ಬಂದಿರುವಿಯಲ್ಲಿ ನಾಗಶಯನ ನಿನ್ನ ನೆಲೆಯರಿಯದ ತಪ್ಪ ನೀ ಪಾಲಿಪುದೆಂದು ಬಾಗಿ ಬೇಡುವೆ ನಿಂದು 1 ಈ ಕ್ಷಮೆ ಮೇಲಿಲ್ಲದಾ ಲೋಕೋತ್ತರ- ದಾಶ್ಚರ್ಯ ತೋರುವುದು ಪಕ್ಷಿಧ್ವಜ ನಿನ್ನ ಪಾದಪದ್ಮಗಳಲ್ಲಿ ನಕ್ಷತ್ರ ಮಾಲೆಗಳುರುಳುವದೇನಿದು 2 ಪಾಂಡವ ಸಾರಥಿಯೆ ನಿನ್ನಯ ಮೂರ್ತಿ ಕಂಡೆನು ಶ್ರೀಪತಿಯೆ ಕೌಂಡಿಣ್ಯ ಮುನಿಯನು ಕಾಪಾಡಿದಖಿಳ ಬ್ರ- ಹ್ಮಾಂಡ ನಾಯಕ ನಿನ್ನ ದಾಸ್ಯವ ದಯಮಾಡು 3 ಹೆಬ್ಬುಲಿಯಂತಿರುವ ಹೂಣ ಭೂಪ ನಬ್ಬರವಡಗಿಸುತ ಭಾರ ನಿನ್ನದಯ್ಯ ವಾರಿಧಿ ಕೃಷ್ಣ 4 ನೀನೆ ಸದ್ಗತಿಯೆಂಬರ ಕಾವುದಕನು- ಮಾನವ್ಯಾತಕೊ ಭೂವರ ದೀನ ಬಂಧು ಶೇಷಗಿರಿನಾಥ ದಯದಿಂದ ಮಾನಸ ಫಲವ ಪೂರಣಗೈಸು ಗೋವಿಂದ 5
--------------
ತುಪಾಕಿ ವೆಂಕಟರಮಣಾಚಾರ್ಯ
ಅನುದಿನವು ಶ್ರವಣಮನನಾದಿ ಸಾಧನ ಮಾಡು ಇನ್ನು ಸಂಶಯವ್ಯಾತಕೊ ಪ. ಏನು ಶಪಥವ ಮಾಡಲಿ ಮತವು ಹಿರಿದೆಂದು ಜ್ಞಾನಿಗಳ ಸಮ್ಮತವೊ ಅ.ಪ. ಗುರುಮಧ್ವಶಾಸ್ತ್ರವೆ ಸಕಲ ಶಾಸ್ತ್ರಧಿಕೆಂದು ಶಿರವರಿದು ಮುಂದಿರಿಸಲೆ ಪರಮತಜಾಲವೆಲ್ಲ ವೇದವಿರುದ್ಧವೆಂದು ಶರಧಿಯನು ನಾ ದಾಟಲೆ1 ಭಾಗವತಶಾಸ್ತ್ರವೆ ಬಹು ಭಾಗ್ಯವೆಂತೆಂದು ನೆಗಹಿ ಪರ್ವತವ [ನಿಲಿಸಲೆ] ಭಾಗವತ ನಿಂದಕಗೆ ಬಹು ನರಕವೆಂತೆಂದು ಪರ್ವ- ತಾಗ್ರದಿಂ ಧುಮುಕಲೆ 2 ವಿದಿತ ದೈವರೊಳಗೆ ವಿಷ್ಣು ಉತ್ತಮನೆಂದು ವೇದಂಗಳ ಒಡನುಡಿಸಲೆ ಅಧಿಕಾರಿಗಳೊಳಗೆ ಅಂಬುಜಸಂಭವನೆಂದು [ಕಾದೆಣ್ಣೆ]ಯೊಳು ಮುಣುಗ [ಲೆ] 3 ಪರಲೋಕಸಾಧನಕೆ ತಾರತಮ್ಯಮತವೆಂದು ಗರಳವನು ಕುಡಿಯಲೆ ಹರಿದಿನಕೆ ಮರುದಿನಕೆ ಸರಿಯಿಲ್ಲವೆಂತೆಂದು ಹರಿವ ಹಾವನು ಹಿಡಿಯಲೆ 4 ಗುರುಮಧ್ವರಾಯರೆ ಆತ್ಮರಕ್ಷಕರೆಂದು ಅನಲವ ಕೈ ಪಿಡಿಯಲೆ ಅಮಿತ ಗುಣಪೂರ್ಣನೆಂದು ಅ- ಶರೀರವನು ನುಡಿಸಲೆ 5
--------------
ವಾದಿರಾಜ
ಆಸೆ ತೋರಿಸಿ ಈಶ ನಿರಾಸೆಮಾಳ್ಪರೆ ಲೇಸೋ ನಿನಗೆ ಶೇಷಶಾಯಿ ಶ್ರೀಶ ಅಭಿಲಾಷಿಗಳಿಗೆ ಪ ಬಡಜನರ ಪರ್ವತ ಒಡಲ ಆಸೆಯ ಕೊಡುವೆನೆಂದು ನುಡಿಯಲವರು ಎಡೆಬಿಡದೆ ಬೇಡಿ ಬೇಡಿ ಕಾಡಿ ಕಾಡಿ ಕಡೆಗೆ ನೋಯ್ವರು 1 ಆಡಿದ್ಯಾತಕೊ ವಾಕ್ಯ ಸುಳ್ಳು ಮಾಡಿದ್ಯಾತಕೊ ಖೋಡಿದೈವಿನಾ ಬೇಡುವಂತೆ ನಿನ್ನ ಬೇಡಿಕೊಂಬೆ ಗಾಢಮಹಿಮ ನೋಡದಿರೊಳಿತಿತ್ತಾಡಿದ್ಯಾಕ 2 ರೂಢಿಗಧಿಕನೆ ದಯವ ಮಾಡು ಎನ್ನೊಳು ಮೂಢತನದಿ ನಾ ಮಾಡಿದಂಥ ಕೇಡುಗುಣಗಳೆಣೆಸದೆನ್ನೊ ಳಾಡಿದ್ವಾಕ್ಯ ನೀಡು ಶ್ರೀರಾಮ 3
--------------
ರಾಮದಾಸರು
ಇದೇ ಹೌದು ಭವತರಿಯುವ ಶಸ್ತ್ರ ಪದೇ ಪದೇ ಸಿರಿವರನ ಸ್ತೋತ್ರ ಪ ಅಧಮಮತಿಯ ಬಿಟ್ಟು ಸದಮಲ ಮನದಿಂ ವಿಧವಿಧ ಹರಿಯೆಂದೊದುರುತ ಕಾಣುವುದೆ ಅ.ಪ ದಾನಧರ್ಮಯಜ್ಞ ಇವು ಯಾಕೊ ಸ್ನಾನ ಮೌನ ಜಪ ಮತ್ತ್ಯಾಕೊ ನಾನಾ ಮಂತ್ರ ತಂತ್ರ ಗೋಜ್ಯಾಕೆಬೇಕೊ ಕ್ಷೋಣಿ ತಿರುಗಿ ಬಹು ದಣಿಲ್ಯಾಕೊ ನಾನಾಪರಿಯಲಿಂದ ದೀನದಯಾಪರ ಗಾನಲೋಲನ ಭಜನಾನಂದ ಪಡೆವುದೆ1 ವೇದಪುರಾಣ ಪುಣ್ಯ ಶಾಸ್ತ್ರಗಳ್ಯಾತಕೊ ಸಾಧನಸಿದ್ಧಿಗಳ ಬಲವ್ಯಾಕೋ ಭೇಧಯೋಗದ ಬಹು ಬೋಧಗಳ್ಯಾತಕೊ ಓದಿಓದಿ ದಿನಗಳಿಲ್ಯಾಕೊ ವೇದಗಮ್ಯದಾದಿ ಮೂರುತಿ ಶ್ರೀ ಪಾದವರಿತು ಆರಾಧಿಸುತಿರುವುದೆ 2 ಕಾಶಿ ಕಂಚಿ ಕಾಳಹಸ್ತಿ ತಿರುಗಲ್ಯಾಕೊ ಸಾಸಿರದೈವಕೆ ಬಾಗುವುದ್ಯಾಕೊ ಮಾಸಪಕ್ಷ ವ್ರತ ನೇಮಗಳ್ಯಾತಕೊ ಘಾಸಿಯಾಗಿ ದೇಹ ದಂಡಿಸಲ್ಯಾಕೊ ಶೇಷಶಯನ ನಮ್ಮ ಶ್ರೀಶ ಶ್ರೀರಾಮನ ಲೇಸಾದ ನಾಮವೊಂದೆ ಧ್ಯಾಸದಿಟ್ಟು ನುಡಿ 3
--------------
ರಾಮದಾಸರು
ಕಂಗಳಿದ್ಯಾತಕೊ ಕಾವೇರಿ ರಂಗನ ನೋಡದ ಪ. ರಂಗನ ಶ್ರೀಪಾದಂಗಳ ನೋಡದ ಅ.ಪ ಎಂದಿಗಾದರೊಮ್ಮೆ ಜನರುಬಂದು ಭೂಮಿಯಲ್ಲಿ ನಿಂದುಚಂದ್ರ ಪುಷ್ಕರಣಿ ಸ್ನಾನವ ಮಾಡಿ ಆ-ನಂದದಿಂದಲಿ ರಂಗನ ನೋಡದ 1 ಹರಿ ಪಾದೋದಕ ಸಮ ಕಾವೇರಿವಿರಜಾನದಿಯ ಸ್ನಾನವ ಮಾಡಿಪರಮ ವೈಕುಂಠ ರಂಗಮಂದಿರಪರವಾಸುದೇವನ ನೋಡದ 2 ಹಾರ ಹೀರ ವೈಜಯಂತಿತೋರ ಮುತ್ತಿನ ಹಾರ ಧರಿಸಿತೇರನೇರಿ ಬೀದಿಲಿಮೆರೆವ ರಂಗವಿಠಲನ್ನ ನೋಡದ 3
--------------
ಶ್ರೀಪಾದರಾಜರು
ಕರುಣಿಸೆನ್ನ ಗುರು ಮಂತ್ರಾಲಯ ನಿಲಯಾ ಶ್ರೀ ನರಹರಿ ಗತಿ ಪ್ರೀಯಾ ಪ. ಹರಿಶಯ ಮರುತರ ಆವೇಶಕೆ ನಿಲಯಾ ನಂಬಿದೆ ಶುಭಕಾಯಾ ಅ.ಪ. ತರಳತನದಿ ಶ್ರೀ ನೃಹರಿ ಶಾಂತನಾಗೇ ಸುರರೆಲ್ಲರು ನಿಮಗೇ ಎರದÀು ಕೀರ್ತಿ ಹಿರೆತನವಹಿಸಿದ ರಾಗೇ ಅದರಂದದಿ ಈಗೇ ವರ ಯತಿಗಳು ಹರಿದಾಸರು ವಂದಾಗೇ ಅಘ ನೀಗೇ ಧರೆ ಕಲ್ಪ ಧ್ರುಮವೆಂದು ನಿಮ್ಮ ಬಳಿಗೇ ವಪ್ಪಿಸುವರು ಅಡಿಗೇ 1 ಎಮ್ಮ ಗುರುಗಳಿಂದ್ಹೇಳಿದ ನುಡಿ ಮರೆದೇ ನಿಮ್ಮಡಿಗೆರವಾದೇ ಸಮ್ಮತದಲಿ ಮೃತ್ತಿಕೆಯನು ಸೇವಿಸದೇ ಹಮ್ಮಿನಲಿ ಮೈಮರೆದೇ ನಿಮ್ಮ ಸುಕೀರ್ತಿಯ ತಿಳಿಸು ತಿಳಿಯದಾದೇ ಅತಿ ಭಕ್ತಿಯ ಜರಿದೇ ನಿಮ್ಮ ಕರುಣವಿರಲದರಿಂದೀಗರಿದೇ ತನುಮನವಪ್ಪಿಸಿದೇ 2 ಕೃತಿ ದ್ವಿದಳಾತ್ಮಕದಪರಾಧ ಪಡಿಸಿತು ಬಹು ಬಾಧ ಸಂದಿತು ಕಾಲವು ಮುಂದರಿಯುವ ಮೋದ ಸಂದಿಸಿತುತ್ಸಹದಾ ನಂದಕೆ ಕಲಿ ಮಲ ತೊಳೆಯಲು ಮೌನದಾ ಪರಿ ಅರಿತೆ ಸುಭೋಧಾ ಕುಂದೆಣಿಸದೆ ಪೊರೆದೆನ್ನ ನಿಮ್ಮಗಾಧಾ ಕೃಪೆತೋರಲು ಬಹು ಮೋದಾ 3 ಎಲ್ಲಿ ನೋಡಲಲ್ಲಲ್ಲಿ ನಿಮ್ಮ ವಾಸಾ ಪುರಗಳು ಜನ ತೋಷಾ ಸೊಲ್ಲು ಸೊಲ್ಲಿಗೇ ನುತಿಪ ಗಾನ ಘೋಷಾ ಮಹಿಮೆಗಳ ಪ್ರಕಾಶ ವಲ್ಲದಾಯಿತ್ಯಾತಕೊ ಎನಗಭಿಲಾಷಾ ಬಲ್ಲವರೀಪರಿ ಮಾಡುವರೇ ಮೋಸಾ ಸದ್ಭಕ್ತರಲಾಭಾಸಾ 4 ಒಂದು ದಿನದ ಮೃತ್ತಿಕೆ ಜಲ ಸೇವಿಂದ ಪೊಂದಿದೆ ನಿಮ್ಮ ಪದಾ ಒಂದಾಗಲಿ ಗುರುವೆನಿಸಿದರೆಲ್ಲರದಾ ಮನವಮ್ಮನ ವಾದಾ ನಂದವು ಶ್ರೀ ನರಹರಿ ತಾ ಪರಿಕಿಸಿದಾ ನಂದವು ಬಹು ಮೋದಾ ಸಂದಲಿ ಗೋಪಾಲಕೃಷ್ಣವಿಠಲನಿಂದಾ ಎಣಿಸದೆ ಬಹು ಕುಂದಾ 5
--------------
ಅಂಬಾಬಾಯಿ
ಕುಟಿಲವನು ಕಳಿಯೋ ನಿಟಿಲ ನಯನಾ ಪ ದುರ್ವಿಷಯ ಲಂಪಟದಿ ಮುಳಿಗಿ ಘನ ಸಂಕಟಕೆ ಒಳಗಾದೆನೊ ಪ್ರಭುವೇ ಅ.ಪ. ಪಂಚಭೇದ ಜ್ಞಾನವನು ಪಂಚವಿಧ ತೋರೆಂದು ಬಿನ್ನೈಪೆ ಮಂಚಪದಯೋಗ್ಯಾ ವೈರಾಗ್ಯ 1 ಕಾಮಿನಿಯಳಾ ಇಟಕೊಂಡು ಅನ್ಯಳ ಕಾಮಿಸುವುದುಚಿತವೇ ರಾಯಾ ಕಾಮರೂಪದಿಂದೆನ್ನ ಕಡೆಗೆತ್ತಿ ಕಾಯದಿರೆ ಕಾಮಹರನೆಂಬ ಬಿರುದ್ಯಾತಕೊಕಾಮಪಿತನೇ ಕೇಳು ಕಾಲಕಾಲಕೆ ನಿನ್ನ ಕಾಲಿಗೆರಗುವಂತೆ ಮಾಡಿ 2 ಬಿಲ್ವಭಜಕನೆ ಕೇಳು ಮತ್ತೊಂದು ನಾನೊಲ್ಲೆಶಪಥ ಪೂರ್ವಕ ಪೇಳ್ವೆ ಮಿಥ್ಯಮತವೊಲ್ಲೆನೊಒಲ್ಲದ ಸುರನಿಗೆ ಚೆಲ್ವಿಯಾಗಿತ್ತು ಕಂಗೆಡಿಸಿ ಉಳಿಸಿದೆ ಬಿಲ್ಲುಗಾರನೆ ಮಗನ ಕಾಳಗದಿ ಕೆಡಹಿ ತಂದೆ-ವರದಗೋಪಾಲವಿಠಲನ ನೋಡಿ ತೋರಿದೇ 3
--------------
ತಂದೆವರದಗೋಪಾಲವಿಠಲರು
ಕೋಪವ್ಯಾತಕೊ ಕರುಣಾನಿಧೆ ಭೂಪನೆಂದು ನಿನ್ನ ನಂಬಿದೆ ಶ್ರೀಪತೇ ಶರಣಾಗತ ಮೇಲಾಪದ್ಗಣ ತರಬಾರದು ಬರಿದೆ ಪ. ಆವ ಕಾಲಕು ನಿನ್ನ ಸೇವೆ ಮಾಡುವುದೆನ್ನ ಪಾವನವಂತಿರಲು ನೋವನು ಪೊಂದಿಪುದ್ಯಾವ ಘನತೆ ಭದ್ರನಾವನೆ ನಿನಗೆ 1 ಹಸ್ತಪಾದಾದಿಗಳನಿತ್ತುದೆ ಸೇವನಗೆಂದುತ್ತಮ ಭಾವವಿಡ- ಪರಿ ಚಿತ್ತಜ ಜನಕ 2 ನಿತ್ಯ ನೇಮಂಗಳನು ತಕ್ಕಕಾಲದಿ ನಡೆಸುತ ಶಕ್ತಿಯನಿತ್ತು ಸಲಹು ಪುರುಷೋತ್ತಮ ನಿರುಪದಿ 3 ಮುನ್ನಿನ ಭವಗಳನೆಲ್ಲ ಕಳೆದ ಮ- ಹೋನ್ನತಿಯನು ತವ ಕರುಣದಿ ಸೇರಿದೆ4 ತಪ್ಪುಗಳೆಷ್ಟಿದ್ದರೂ ಒಪ್ಪಿಕೊ ಮುನಿಸದಿರು ಅಪ್ಪ ನೀನೆಂಬುವಶ್ರುತಿ ಕೃತ ಬಿರುದನು ತಪ್ಪಿಸಿಕೊಳದಿರು ಸರ್ಪ ಗಿರೀಶನೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಗಣಪತಿ ಶಾರದೆಗೆರಗಿದೆ ಇಂದೇ | ಇಬ್ಬರ ಹೃದಯದಿ ಕರುಣದಿ ಬಂದೆ | ನುಡಿಸಿದರ್ವಚನವ ಒಂದೊಂದು ತಂದೆ | ಕೇಳಿರಿ ಜನರೆಲ್ಲಾ ಕಿವಿಗೊಟ್ಟು ಬಂದೆ 1 ನರನಾಗಿ ಬಂದು ನೀ ಮಾಡಿದಿ ಏನಾ | ತಿಳಿಯದೆ ಬೊಗಳುವಿಯಾತಕೆ ಶ್ವಾನಾ | ಎಳ್ಳಷ್ಟು ಇಲ್ಲದೆ ಹೋಯಿತು ಜ್ಞಾನಾ | ಇನ್ನಾದರೂ ಮಾಡೊ ಸದ್ಗುರುವಿನ ಧ್ಯಾನಾ2 ಮಾಡಲಿಲ್ಲಾ ಪುಟ್ಟಿ ನೀ ದಾನ ಧರ್ಮಾ | ಮಾಡಿದಿ ತಿಳಿಯದೆ ನೀ ಕೆಟ್ಟ ಕರ್ಮಾ | ಆಡಿದಿ ನೀ ಸಾಧುಸಂತರಿಗೊರ್ಮಾ | ನೋಡಿಕೊ ನಿನಗಿಲ್ಲದಾಯ್ತು ಶರ್ಮಾ 3 ಮಾಡಿದ ಬದುಕನು ಸುಮ್ಮನೆ ಕಳೆದೆ | ಮಾಡುವಾಗ ಬಹು ನಿಜವೆಂದು ತಿಳಿದೆ | ನೋಡದೆ ಪೂರ್ವದ ಸುಕೃತವನಳಿದೆ | ರೂಢಿಯೊಳಗೆ ಪಾಮರನಾಗಿ ಬೆಳೆದೆ 4 ಮಾಡುವ ಕರ್ಮಕೆ ಮನವೇ ಸಾಕ್ಷೀ | ಮಾಡುವಿ ಜಪ ನಿನಗ್ಯಾಕೀ ರುದ್ರಾಕ್ಷೀ | ಮಾಡಿದನೇ ಗುರು ಹೀಗೆಂದು ದೀಕ್ಷಾ | ಆಡಲ್ಯಾತಕೊ ನಾಳೆ ಆದೀತೋ ಶಿಕ್ಷಾ 5 ಹುಣಶಿ ಹಣ್ಣ ಹಚ್ಚಿ ಬೆಳಗಿದಿ ಗಿಂಡೀ | ಎಣಕೀ ಶರಣ ಮಾಡಿ ಅಲ್ಲೇನು ಕಂಡೀ | ಸಂತರ ನಿಂದಾ ಬಲು ಮಾಡಿ ಉಂಡೀ | ಅಂತರಂಗದಿ ಇರು ಛೇ ಹುಚ್ಚ ಮುಂಡೀ 6 ಹಗಲೂ ಇರುಳೂ ಎದ್ದುಂಬುವಿ ಕೂಳೂ | ಕೂಳಿಗೆ ಆದಿ ನೀ ಒಬ್ಬರ ಆಳೂ | ಬಲು ಮಂದಿ ಮನೆಯನು ಮಾಡಿದಿ ಹಾಳೂ |ಏನು ಪುಣ್ಯ ಬಂದದ ಅದನಾರ ಹೇಳು 7 ಹಗಲೂ ಇರುಳೂ ಎದ್ದು ಮಾಡಿದಿ ಬದಕಾ | ಮಾಡುತ ಮಾಡುತ ಆದೆಲ್ಲೊ ಮುದುಕಾ | ಸಾಯುವ ತನಕಾ ಬಿಡಲಿಲ್ಲೊ ಚುದಕಾ | ಸತ್ತಮೇಲೆ ನೀ ಆಗುವಿ ಶುನಕಾ 8 ಏನೇನಿಲ್ಲದೆ ಹೋಯಿತು ಬುದ್ಧೀ | ಶಾಸ್ತ್ರ ಪುರಾಣದಿ ಕೇಳಿಲ್ಲ ಸುದ್ದೀ | ಇರುಳ ಕಂಡ ಕುಣಿ ಹಗಲ್ಯಾಕೆ ಬಿದ್ದೀ | ಮರುಳಾದ್ಯಾ ಯಮ ನಾಳೆ ಕೊಂದಾನೊ ಗುದ್ದೀ 9 ಸಂಸಾರ ನಂಬಿದಿ ನಿಜದಲಿ ಹ್ಯಾಂಗ | ಸದ್ಗುರು ಪಾದವ ನಂಬೋ ನೀ ಹಾಂಗ || ಸಂಶಯಾ ಅದಕಂಜಿ ಬಿಟ್ಟರೆ ಈಗ |ಕಾಂಶಿಲಿ ಬಡಿದಾರು ತಿಳಿದೀತು ಆಗ 10 ಬೆಳಕಿನೊಳಗ ಒಂದು ನೋಡುವ ಕಣ್ಣು | ಕತ್ತಲಿಯೊಳ ಗೊಂದು ಕಾಂಬುವ ಕಣ್ಣು | ಕತ್ತಲಿ ಬೆಳಕನ್ನು ನೋಡುವ ಕಣ್ಣು | ಅದ ಬಿಟ್ಟು ಏನ ನೋಡುತಿ ಮಣ್ಣು 11 ಅನುದಿನ ಶಾಸ್ತ್ರ ಪುರಾಣಾ | ಅದರೊಳಗಿನ ಮಾತ ತಿಳಿಯದೆ ಕೋಣಾ || ಅರ್ಥವ ಹೇಳುವಿ ಮಂದಿಗೆ ಜಾಣಾ | ರುವ್ವಿಯ ಬೇಡಲು ಹೋಯಿತು ಪ್ರಾಣಾ12 ಕಂಡರೆ ನೋಡುವಿ ಹೆರವರ ಹೆಣ್ಣು | ಚೆಲುವೆಂದೂ ಇಟ್ಟೆಲ್ಲೊ ಆಕೆಗೆ ಕಣ್ಣೂ | ಆದರೆ ಹತ್ತ್ಯಾವೊ ಆಕೆಯ ಹುಣ್ಣು | ಕಡೆಯಲಿ ಬಿದ್ದಿತು ಬಾಯಲಿ ಮಣ್ಣು 13 ನಿತ್ಯ ತೆಗೆದುಕೊಳ್ಳುವಿ ದೇವರ ತೀರ್ಥಾ | ಮತ್ತಿನ್ನು ಬಿಡಲಿಲ್ಲ ಮನದ ಸ್ವಾರ್ಥಾ || ಕತ್ತೆಯ ಹಾಂಗ ನೀನೊದರುವಿ ವ್ಯರ್ಥಾ | ಎಂದೆಂದಿಗೂ ದೊರೆಯದು ಆ ಪರಮಾರ್ಥಾ 14 ತನುವು ನಾನೆಂಬುವಿ ತನುವಿದು ತೊಗಲು | ತನುವಿಗೆ ಅವ ನೋಡು ಒಂಬತ್ತು ಹುಗಲು | ಚಿಂತಿ ಮಾಡುವದ್ಯಾಕೊ ಹಗಲೂ ಇರುಳೂ | ನಿನ್ನಾಧೀನವು ಹೀಗೆಂದು ಇರಲು 15 ದೂರ ಹೋಗದಿನ್ನು ಆಗದು ಕಾಶೀ | ದೂರ ಮಾಡಿ ಕಳಿ ನೀನು ಮೂರಾಶಿ | ತೀರದು ಶಿವಯೋಗ ಪುಣ್ಯ ರಾಶಿ | ಸೇರುವಿ ಸಾಯುಜ್ಯದಲಿ ಮಿರಾಶಿ 16 ಮಾಯಾ ಮಾಯಾ ಮಾಯಾ | ದುಡ್ಡಿನಂತೆ ಮಾಡೊ ಮನಕೆ ನಿರ್ಮಾಯಾ 17 ಮೀಶಿಯ ಹುರಿ ಮಾಡಿ ಮೇಲಕೆ ನೋಡಿ | ಕಾಲಾಗ ಸಿಕ್ಕವು ಮೋಹದ ಬೇಡಿ || ಮಾಡಬಾರದಂಥ ಕೆಲ್ಸವ ಮಾಡಿ | ಸಿಕ್ಕಿದೆಲ್ಲೊ ಗಾಂಡೂ ಇನ್ನೆತ್ತ ಓಡೀ 18 ಪಾದ ದೊರೆವುದಿನ್ನೆಲ್ಲಿ 19 ಕಾಮನ ಸುಡುವುದು ನೋಡು ಹೀಂಗಲ್ಲಾ | ಕಾಮನ ಶಿವ ಸುಟ್ಟರವ ಸಾಯಲಿಲ್ಲ || ಕಾಮನು ಸುಡುವ ಮೂರು ಲೋಕವನೆಲ್ಲ | ಕಾಮರಹಿತ ಭವತಾರಕ ಬಲ್ಲ 20 ಕಟ್ಟಿದಿ ಮನೆಯನು ನೀ ಬಲು ಛಂದಾ | ಬಿಟ್ಟು ಹೋಗುತಿ ಇದದಾವಂದಾ || ತೊಟ್ಟಿಲೊಳಗೆ ಇದ್ದ ಹೇಳಿದ ಕಂದಾ | ಎಷ್ಟಂತ ಹೇಳಲಿ ನೀ ಮತಿಮಂದಾ 21 ಪಾತಕ ಬರುವದು ಬಿಡಬ್ಯಾಡ ವಾಜಿ | ನೀತಿಯಿಂದಲಿ ಮಾಡು ನೀ ಗುರು ಪೂಜಿ | ಯಾತನ ಬಡಿಸುವ ನಾಳಿನ ಪಾಜಿ 22 ಒದರುವಿ ಯಾತಕೆ ಬಾಯನು ಕಿಸ್ತು | ಬೆದರ ಬೇಡಾದುದಕೆನ್ನು ಅಸ್ತು || ಚತುರ ತನದಲಿ ಸಾಧಿಸು ನೀ ವಸ್ತು |ಆದರಿಂದಲಾಗುವದು ಆ ಮನ ಸ್ವಸ್ತು 23 ಪಾತಕ ಬರುವದು ತಿಳಿಯದೆ ಕೋಳಿ || ನೀತಿಯಿಂದಲಿ ತತ್ತ್ವ್ವ ಮಾತನು ಕೇಳಿ | ಘಾತಕ ಯಮ ನಾಳೆ ಬರುವನು ದಾಳಿ 24 ಭವ ಬಿಟ್ಟಿ | ಮಾಡದೆ ದಾನ ಧರ್ಮವ ಕೆಟ್ಟೀ || ಮಾಡಿದುದೆಲ್ಲಾ ನೀ ಜೋಕಿಲಿ ಇಟ್ಟಿ | ಮಾಡಲು ಬಾಧೆಯ ನೀ ಬಾಯ ಬಿಟ್ಟಿ 25 ನೆನೆದರೆ ದೃಢದಲಿ ರಾಮ ನಾಮ | ತನುವಿದು ಮುಂದೆ ಬಾರದು ನೇಮ || ಮನದೊಳು ಪುಟ್ಟಿತು ತಾನೆ ನಿಷ್ಕಾಮ | ಘನಸುಖ ತೋರಿತು ಅದು ಸಾರ್ವಭೌಮ 26 ಹುಟ್ಟಿ ಹುಟ್ಟಿ ನೀ ಯಾತಕೆ ಸತ್ತೀ | ಹುಟ್ಟುತ ಸಾವುತ ನಿತ್ಯದಿ ಅತ್ತೀ || ಹುಟ್ಟು ಸಾವನ್ನು ಕಳೆಯಲೊ ಕತ್ತೀ | ಕೆಟ್ಟಿಯೊ ಇನ್ನಾರ ಬೆಳಿ ಧರ್ಮಾ ಬಿತ್ತೀ 27 ಶಾಸ್ತ್ರ ಪುರಾಣವ ಓದುವಿ ಬರಿದೇ | ಉತ್ತಮ ಸ್ತ್ರೀಯರ ಕಂಡು ನೀ ಕರೆದೆ || ನಿನ್ನೊಳು ತಿಳಿದು ನೀ ನೋಡುದು ಮರೆದೇ | ಸಾಧು ಸಂತರುಗಳ ಸೇವೆಗೆ ಮರೆದೆ 28 ಪಡಿ ಜೋಳಕೊಬ್ಬರ ಅಡಿಗಳ ಹಿಡಿವೆ | ಕೊಡುವದಿಲ್ಲೆಂದರೆ ದವಡಿಯ ಕಡಿವೆ || ಕೊಟ್ಟರೆ ಮನದೊಳು ಸಂತೋಷ ಪಡುವೆ | ಕೆಟ್ಟ ಮಾರ್ಗದಿಂದ ಕಡೆ ತನಕಾ ನಡಿವೆ 29 ಭವ ಪರಿಹರಿಸುವದಿದು ಏನು ಅರಿದು || ಭವದೊಳು ಬಿಟ್ಟರು ನಾಮವ ಮರೆದು | ಭವಕಿನ್ನು ಕರಸ್ಯಾರೊ ಆತನ ಬರದು 30 ಮಾಡಿದೆ ಏನು ಬದುಕನು ಹೇಳು | ಮಾಡಿದುದೆಲ್ಲಾ ತಿಂದೆಲ್ಲಾ ಕೂಳು || ಕೂಳಿಗಾಗಿ ಆದಿ ಒಬ್ಬರ ಆಳು | ನೋಡಿ ಏನು ಸದ್ಗತಿಯ ಹೇಳು 31 ಮನದೊಳು ಗಳಿಸಿದಿ ಕೆಂಚೀ ಹೊನ್ನು | ಗಳಿಸಿದವರು ಏನು ಒಯ್ದಾರು ಇನ್ನು || ಬಿಟ್ಟು ಹೋದರು ಹ್ಯಾಂಗ ಬಲ್ಲೆಲ್ಲಾ ನೀನು | ನಿಷ್ಠೆಯಿಂದಲಿ ಒಮ್ಮೆ ಹರಗುರು ಎನ್ನು 32 ಮಾಡಲಿಲ್ಲ ಒಂದು ನರನಾಗಿ ಯೋಗಾ | ಮಾಡುವಿ ಸುಖವೆಂದು ಸ್ತ್ರೀಯರ ಭೋೀಗಾ | ಆಡಲ್ಯಾಕೆ ಆಯುಷ್ಯ ಹಾರಿತು ಬೇಗಾ | ನೋಡಿಕೊಳ್ಳೊ ಇನ್ನು ತಿಳಿದೀತು ಈಗಾ 33 ಪರಿ ಸಂಸಾರ ಯುಕ್ತಿ | ಮಾಡಲು ಒಲ್ಲ್ಯೋ ಶ್ರೀ ಗುರು ಭಕ್ತಿ || ಹೋಯಿತೊ ದೇಹದೋಳ್ ನಿನ್ನ ಶಕ್ತಿ | ಸಾಧಿಸಲರಿಯೊ ನೀ ಜೀವನ್ಮುಕ್ತಿ 34 ಅನುದಿನ ವೇದಾ | ಸಾಧಿಸಿ ತಿಳಿಯದೆ ಜೀವಶಿವ ಭೇದಾ || ಕಾದಾಡಿ ಕೊಂಬುವದು ಸುಮ್ಮನೆ ವಾದಾ |ಬ್ಯಾಡಿನ್ನು ಶೋಧಿಸು ನಿನ್ನೊಳು ಬೋಧಾ 35 ಭವ ಬೀಜವ ಕೊಂಬೆ 36 ಮಾಯಾ ಮರವನು ತ್ಯಜಿಸು || ಧ್ಯಾನ ಮುದ್ರೆಯೋಳ್ ಮನವನು ನಿಲಿಸು | ಜಗವಿದು ನಿಜವೇ ನೋಡೆಲು ಕನಸು 37 ರೂಪದೊಳಗಿಲ್ಲಾ ಗುಣವೊಂದು ತೃಣವು | ಗುಣದೊಳಗಿಲ್ಲವು ರೂಪದ ಅಣುವು || ರೂಪ ನಾಮಕ್ರಿಯಾ ಆದೀತು ಹೆಣವು | ಆ ಪರಬ್ರಹ್ಮನೆ ತಿಳಿಯಿನ್ನು ಪ್ರಣವು 38 ಪಾದ | ಅರಿತು ಪೂಜಿಸಿದವ ಪರಶಿವನಾದ || ಅನುಭವಿ ಬಲ್ಲನು ಆ ಸುಖ ಸ್ವಾದ | ತನ್ನೊಳು ಆಲಿಸುತಲಿ ನಿಂತ ನಾದ 39
--------------
ಭಾವತರಕರು
ಚಿಂತೆಯಾತಕೊ ಮಾನವಾ ಭಜಿಸು ಶ್ರೀ- ಕಾಂತಾಖ್ಯ ಸುರಕಾಮಧೇನುವಾ ಅಂತಪಾರಗಳಿಲ್ಲದಾಸೆ ಕಡಲೊಳು ಬಿದ್ದು ಭ್ರಾಂತಿಗೊಳಿಸದೆ ಮನವ ಬಳಲಿಸದಿರು ತನುವ ಪ. ಸಂಸಾರವೆಂಬುವುದು ಸುಖ ದುಃಖ ಮಿಶ್ರಿತವು ಕಂಸಾರಿವಶದೊಳಿಹವು ಶೋಣಿತ ಪೂಯ ಕೇಶ ಕ್ರಿಮಿ ದಂಶ ಪೂರಿತ ದೇಹವು ಹಿಂಸೆಯಾಗುವ ಮೊದಲೇ ಹರಿಕೃಪಾಸುಧೆಯ ಲೇ- ಶಾಂಶ ಸಂಪಾದಿಸಿ ನಿಜಾಂಶ ಸುಖವನು ಸೇರು 1 ಹಿಂದಿನನುಭವ ಗ್ರಹಿಸು ಹರಿಯ ಮಹಿಮೆಯ ಸ್ಮರಿಸು ಮಂದ ಭಾವನೆ ವಾರಿಸು ಮುಂದಾಹದೇನೆಂದು ಕುಂದದಿರು ಧೈರ್ಯದಿಂ- ದಿಂದಿರೇಶನ ಪೂಜಿಸು ತಂದೆ ತಾಯಿಗಳು ತಮ್ಮ ಕಂದನನು ಪೊರೆವ ಪರಿ- ಯಿಂದ ಸಲಹೆಂದು ಗೋವಿಂದನಲಿ ಮೊರೆಯಿರಿಸು 2 ದೃಢ ಭಕುತಿಯಿಂದ ತನ್ನಡಿಯ ಸೇರಿದ ಜನರ ಬಿಡನು ಭಕ್ತಾರ್ತಿಹರನು ಪುಡಿಮಾಳ್ಪದುರಿತಗಳ ಪೂರ್ವದಲಿ ಪೊರೆದಂತೆ ಕೊಡವನಖಿಳಾರ್ಥಗಳನು ಮೃಡವಂದ್ಯ ಶೇಷಾದ್ರಿ ಒಡೆಯನಿರಲ್ಯಾಕೆ ಕಂ- ಗೆಡುವಿ ಎಂದಿಗು ನಿನ್ನ ಕಡೆ ಹಾಯಿಸುವ ಹರಿಯು 3
--------------
ತುಪಾಕಿ ವೆಂಕಟರಮಣಾಚಾರ್ಯ
ನಿನ್ನ ದರುಶನಕೆ ಬಂದವನಲ್ಲವೊ ಪುಣ್ಯವಂತರ ದಿವ್ಯ ಚರಣ ನೋಡಲಿ ಬಂದೆ ಪ ಎಲ್ಲೆಲ್ಲಿ ನಿನ್ನ ವ್ಯಾಪ್ತತನವಿರಲಿಕ್ಕೆ ಇಲ್ಲಿಗೆ ಬರುವ ಕಾರಣವಾವುದೊ ಸೊಲ್ಲಿಗೆ ಕಂಭದಲಿ ತೋರಿದ ಮಹಾಮಹಿಮ ಅಲ್ಲಿ ಇಲ್ಲೇನಯ್ಯ ಬಲ್ಲ ಭಜಕರಿಗೆ1 ಕರೆದಾಗಲೆ ಓಡಿ ಬಂದೊದಗುವ ಸ್ವಾಮಿ ಮರಳಿ ಗಾವುದ ಎಣಿಸಿ ಬರಲ್ಯಾತಕೊ ನೆರೆ ನಂಬಿದವರಿಗೆ ಆವಲ್ಲಾದರೇನು ಅರಿದವರ ಮನದೊಳಗೆ ನಿಂದಾಡುವ ಚಂದವಾ 2 ಕಠಿನವೊ ನಿನ್ನ ಭಕುತರನ ನೋಡುವ ಲಾಭ ಸಟೆಯಲ್ಲಾ ವೇದಗಳು ಸಾರುತಿವಕೊ ವಟು ಮೊದಲಾದ ವೈಷ್ಣವಾಗ್ರೇಸರಂಘ್ರಿ ತ್ರಿಟಿಯಾದರೂ ಎನಗೆ ಸೋಕಲು ಗತಿಗೆ ದಾರಿ3 ಧ್ಯಾನಕ್ಕೆ ಸಿಲುಕುವನೆ ನಿನ್ನ ಕಾಣಲಿಬಹುದು ಜ್ಞಾನಿಗಳು ಎಂತು ಬರುವರೊ ಅಲ್ಲಿಗೆ ಅನಂತ ಜನುಮದಲ್ಲಿ ಜಪ ತಪ ಹೋಮ ವ್ರತ ಏನೇನು ಮಾಡಿದರು ಇಷ್ಟು ಜನ ಕೂಡುವದೇ4 ನೀನಿದ್ದ ಸ್ಥಾನದಲಿ ಸಕಲ ಪುಣ್ಯಕ್ಷೇತ್ರ ನೀನಿದ್ದ ಸ್ಥಾನದಲಿ ಸರ್ವತೀರ್ಥ ನೀನಿದ್ದ ಸ್ಥಾನದಲಿ ಸಮಸ್ತ ತಾತ್ವಿಕರು ನಾನಿತ್ತ ಬರುವುದು ನಿನಗೆ ತಿಳಿಯದೆ ಸ್ವಾಮಿ5 ಇದನೆ ಲಾಲಿಸು ಜೀಯಾ ನಿನ್ನದೊಂದೇ ಮೂರ್ತಿ ನಿದರುಶನವಲ್ಲದೆ ಮಿಗಿಲಾವುದೊ ಪದೋಪದಿಗೆ ಮಧ್ವಮತ ಹೊಂದಿದ ಸುಜನರ ಹೃದಯದೊಳಗಾನಂತಪರಿ ನಿನ್ನ ರೂಪಗಳು 6 ಭಳಿರೆ ತಿರುಮಲರಾಯ ನಿನ್ನ ಕರುಣಾ ರಸಕೆ ವೊಲಿದು ಭಕುತರಿಗಾಗಿ ಮದುವೆ ಹಮ್ಮಿಕೊಂಡೆ ಸುಲಭ ದೇವರದೇವ ವಿಜಯವಿಠ್ಠಲ ವೆಂಕಟಾ7
--------------
ವಿಜಯದಾಸ
ನೋಡಿ ದಣಿಯದೊ ನಯನ ಪಾಡಿ ದಣಿಯದೊ ಜಿಹ್ವೆ ನಾಡಿಗೊಡೆಯನೆ ರಂಗ ದೇವ ದೇವ ಪ. ಬೇಡಲೇನನೊ ಸ್ವಾಮಿ ಕಾಡಲ್ಯಾತಕೊ ದೇವ ನೀಡೊ ನಿನ್ನ ಪದಕಮಲ ಶ್ರೀ ಶ್ರೀನಿವಾಸ ಅ.ಪ. ಶಿರದಲ್ಲಿ ಮಕುಟ ವರ ಫಣೆಯಲ್ಲಿ ತಿಲುಕವು ಉರದಲ್ಲಿ ಸಿರಿವತ್ಸ ಹಾರ ಪದಕಗಳು ಕರ ಶಂಖ ಚಕ್ರಯುತ ನೆರಿಗೆ ಪೀತಾಂಬರವು ಪಾದ ಕಮಲಗಳ 1 ಮಂದಹಾಸ ಮುಖಾರವಿಂದದಲಿ ಕಿರುನಗೆಯು ಬಂದ ಭಕ್ತರಿಗಭಯ ತೋರ್ಪಕರವೊ ನಿಂದು ಸ್ತುತಿಸುವರಿಗಾನಂದ ತೋರುವ ದಿವ್ಯ ಒಂದೊಂದು ಅವಯವದ ಸುಂದರಾಕೃತಿಯ 2 ವೇದವನೆ ತಂದು ಸುತಗಾದರದಿ ಇತ್ತೆ ಕ್ಷೀ- ರೋದಧಿಯ ಮಥಿಸಿ ಸುಧೆಯ ಸುರರಿಗುಣಿಸಿದೆಯೊ ಭೂದೇವಿಯನೆ ಪೊರೆದು ಉದ್ಭವಿಸಿ ಕಂಭದೊಳು ಪಾದದಲಿ ಭೂಮಿಯನು ಅಳೆದ ವಟುರೂಪಿ 3 ದುಷ್ಟ ಕ್ಷತ್ರಿಯರನೆ ಕುಟ್ಟಿ ಕೆಡಹಿದ ಶೌರಿ ದಿಟ್ಟತನದಲಿ ಅನ್ನ ಬಟ್ಟೆಯನೆ ತೊರೆದೆÀ ಕೊಟ್ಟು ಗೋಪಿಗೆ ಮುದವ ಮೆಟ್ಟಿ ಕಾಳಿಂಗನ ಬಿಟ್ಟು ವಸನವ ಕಲಿದುಷ್ಟರನೆ ಕೊಂದೆ 4 ಅಪದ್ರಕ್ಷಕ ನಿನ್ನ ವ್ಯಾಪಾರ ರೂಪಗಳು ತಾಪ ಪರಿಹರಗೈದು ಕಾಪಾಡೆಲೊ ಶ್ರೀಪತಿಯೆ ಅಂತರ್ಬಹಿವ್ರ್ಯಾಪ್ತ ನಿರ್ಲಿಪ್ತನೇ ತಾಪ ಪರಿಹಾರನೆ 5
--------------
ಅಂಬಾಬಾಯಿ
ಪಕ್ಷಿವಾಹನ ಸತ್ಯಭಾಮೆ ಸದನದ್ವಾರದಿ ನಿಂತು ಸದನದ್ವಾರದಿ ಮಿತ್ರೆ ಎನಗೆ ಕದವ ತೆಗೆಯೆ ಬರುವೆ ತೀವ್ರದಿ 1 ಸಾಕೊ ಸಾಕೊ ನಿನ್ನ ಸಂಗ ಯಾಕೊ ಕೃಷ್ಣನೆ ನಮಗಿನ್ಯಾಕೊ ಕೃಷ್ಣನೆ ಅ- ನೇಕ ಸ್ತ್ರೀಯರಿಂದ ರಮಿಸ್ಹೋಗಾದಿ ಪುರುಷನೆ 2 ವಾಕು ವಾಕು ತಿಳಿಯದೊ ವಿ- ವೇಕದಿಂದ ನಿಂತು ಪೇಳೆ ಮಾತುಯೆನ್ನೊಳು 3 ಎನ್ನ ಬಿಟ್ಟು ಅನ್ಯಸ್ತ್ರೀಯರ ಮನೆಗೆ ಪೋಗುವಿ ಸ್ತ್ರೀಯರ ಮನೆಗೆ ಪೋಗುವಿ ಘನ್ನ ಘಾತಕತನದಿಂದಿಲ್ಲಿಗಿನ್ನು ಬರುವರೆ 4 ನಿನ್ನ ಸರಿಯಸವತೇರೆನಗೆ ಸತಿಯರಲ್ಲವೆ 5 ಅತ್ತಸಾಗೊ ರುಕ್ಮಿಣಿ ಒಲವು ಚಿತ್ತವ್ಹಿಡಿಯದೆ ಆಕೆ ಚಿತ್ತವ್ಹಿಡಿಯದೆ ಲೆತ್ತಪಗಡೆನಾಡದ್ಹೀಗೆ ಇತ್ತ ಬರುವರೆ6 ಕಾಳಕತ್ತಲು ಪ್ರಳಯಜಲದಿ ಕಾದುಕೊಂಡೆನ್ನ ಇರುವೋಳು ಕಾದುಕೊಂಡೆನ್ನ ಆದಿಲಕ್ಷ್ಮಿ ಮುನಿದರೆನಗಿನ್ನಾ ್ಹ್ಯಗೆ ಭಾಮಿನಿ 7 ಜಾಂಬುವಂತೇರ್ಹಂಬಲಬಿಟ್ಟು ಬಂದ ಕಾರಣ ನೀನು ಬಂದ ಕಾರಣ ಆ- ನಂದ ಬಡಿಸುತವರ ಗೃಹದಲ್ ಹೊಂದಿಕೊಂಡಿರು 8 ಜಾಂಬುವಂತೇರಿಂದ ಬಂದ ನಿಂದ್ಯ ಕಳೆದನೆ ನಾ ಅಪನಿಂದ್ಯ ಕಳೆದೆನೆ ತಂದು ರತ್ನತೋರಿ ನಿನ್ನ ತಂದೆ ಭಾಮಿನಿ 9 ಕಮಲನಾಭ ಕಾಳಿಂದಿ ಕಳವಳಿಸುವಳೊ ಕಾಣದೆ ಕಳವಳಿಸುವಳೊ ಕಾಣದೆ ಕಾಲಕಳೆಯೊದ್ಯಾ ್ಹಗಿನ್ನಾಕೆ ಆಲಯಕೆ ಪೋಗೊ 10 ಭಾಳ ತಪಸಿಲ್ವಲಿಸಿ ಭಾರ್ಯಳಾದ ಬಗೆ ನೀ ಅರಿಯದೆ 11 ನೀಲವರ್ಣ ನೀಲಾದೇವಿ ನಿನ್ನ ಕಾಣದೆ ಇರುವಳು ನಿನ್ನ ಕಾಣದೆ ಗಮನ ನಿಲ್ಲದೆ ನೀ ಪೋಗೊ 12 ಸಪ್ತಗೂಳಿ ಕಟ್ಟಿ ನಾ ಸಮರ್ಥನೆನಿಸಿದೆ ಬಲು ಸಮರ್ಥನೆನಿಸಿದೆ ನೀಲ ನನಗೆ ಶ್ರೇಷ್ಠಳಲ್ಲವೆ 13 ಎದ್ದು ಪೋಗಾಕಿದ್ದಸ್ಥಳಕಿಲ್ಲಿರಲು ಸಲ್ಲವೊ 14 ಅರಸರಾಕೆ ಅಗ್ರಜರೈವರು ಕರೆಸಿ ಕೇಳೋರೆ ಎನ್ನ ಕರೆಸಿ ಕೇಳೋರೆ ಹೋಗಿ ಹರುಷ ಬಡಿಸದಿರಲು ಆಕೆನ್ನರಸಿ ಅಲ್ಲವೆ 15 ಆಕೆ ಸಿಟ್ಟಿಲಿಂದ ದೃಷ್ಟಿತೆಗೆದು ಎನ್ನ ನೋಡಳೆ 16 ನಿನಗೆ ಇಷ್ಟು ಕ್ರೋಧ ನಿಷ್ಠೂರ್ವಚನ ಬ್ಯಾಡೆ ಭಾಮಿನಿ 17 ಲಕ್ಷಣ ದೇವೇರಲ್ಲಿ ಭಾಳಾಪೇಕ್ಷವಲ್ಲವೆ18 ನಾನು ಲಕ್ಷಣೆಯನೆ ತಂದೆ ಕೇಳೆ ಸತ್ಯಭಾಮೆ ನೀ 19 ಹತ್ತು ಆರು ಸಾವಿರ-ಶತ ಪತ್ನೇರಿಲ್ಲವೆ ನಿನಗೆ ಪತ್ನೇರಿಲ್ಲವೆ ತಿರುಗಿ ಸುತ್ತಿ ಸುತ್ತಿ ಹಾದಿ ಹೀಗೆ ತಪ್ಪಿಬರುವರೆ 20 ದಾರಮನೆಗೆ ಹೋಗಲೆನ್ನ ದೂರು ಮಾಡೋರೇ ಹೀಗೆ ದೂರು ಮಾಡೋರೇ ಸ್ವಾಮಿ ಪಾರಿಜಾತಕೊಟ್ಟ ಸತಿಯಲ್ಲೊ ್ಹೀಗಿರೆಂಬರೆ 21 ಸರಸವಾಡದಿರೊ ಶ್ರೀರಮಣ ಅರಸೇರ್ಯಾತಕೊ ನಿನಗೆ ಅರಸೇರ್ಯಾತಕೊ ಹರುಷದಿಂದ ಎರಗದೆನ್ನ ಶಿರಸಿದ್ಯಾತಕೊ 22 ಶ್ರೀಶ ಎನ್ನ ಮನದಲಿರೊ ಭೀಮೇಶಕೃಷ್ಣನೆ ಇರೊ ಭೀಮೇಶಕೃಷ್ಣನೆ ನಿನ್ನ ವಿಲಾಸ ಬಯಸದಿರುವರ್ಯಾರೊ ಇಂದಿರೇಶನೆ 23
--------------
ಹರಪನಹಳ್ಳಿಭೀಮವ್ವ
ಪಾತಕಮನುಜ ಯಾತಕೆ ಗರುವ ನೀ ತಿಳಿದುಳಿ ಜಗನ್ನಾಥನನನು ಪ ನಿಲುಕದ ಮಾತಿಗೆ ಬಲುಬಿಂಕ ಯಾತಕೊ ಬಲು ಬಲು ಮಹಿಮರು ತಿಳಿಯದೆ ಭವ ಬಲೆಯೊಳಗ್ಹೊಳುವರರಿದು ನಿಜ ತಿಳಕೊ 1 ಸ್ವಾಭಿಮಾನ್ಯಾಕೋ ದೇಶಾಭಿಮಾನವ್ಯಾಕೋ ನಭರಾಜಪಾಲ ಮಹಪ್ರಭುವಿನ ಶ್ರೀಪಾದ ಸೊಬಗಿನಿಂ ಭಜಿಸುವ ಭವಕಡಕೊ 2 ಕೋಪವು ಯಾಕೋ ತಾಪವು ಯಾಕೋ ಆ ಪರಬ್ರಹ್ಮ ಜಗದ್ವ್ಯಾಪಕ ಶ್ರೀರಾಮನಪ ರೂಪನಂಬಿ ಮುಕ್ತಿಸುಖ ಪಡಕೊ 3
--------------
ರಾಮದಾಸರು
ಪಾರ್ವತೀತನಯ ಪಾಲಿಸು ಎನ್ನಾ ಪ. ಪಾರುಗಾಣಿಸುತೆನ್ನ ಮನದಲ್ಲಿನಿಂದು ಅ.ಪ. ರಜತಾದ್ರಿವಾಸನ ರಮಣಿ ಪುತ್ರನೆ ನಿನ್ನ ತ್ರಿಜಗÀ ಪೂಜಿಸುವುದೆಂದರಿತು ನಿನ್ನ ಭುಜಗ ಭೂಷಣ ಸುತನೆÀ ಕದನವ್ಯಾತಕೊ ದೇವಾ ಕಡೆಹಾಯಿಸೊ ಗಣಪಾ 1 ಗಂಗಜನಕÀನ ನಾಮ ಹಿಂಗದಲೆ ನುಡಿಸೆನಗೆ ಭೂ ಜಂಗುಳಿಗೆ ವಿದ್ಯಾಧಿದೇವದೇವಾ ಹಿಂಗಿಸುತಲಜ್ಞಾನ ರಂಗನಾ ಮರಿಮಗನೆ ಕಂಗಳಿಂದಲಿ ನೋಡಿ ಸಲಹೆನ್ನನು ದೇವಾ 2 ಶ್ರೀ ಶ್ರೀನಿವಾಸನ್ನ ತೋರುತ ಮನದಲಿ ಶ್ರೀಕರನೆ ಕರುಣಿಪುದು ಸ್ತುತಿಪ ಮತಿಯಾ ಏಕಭಕುತಿಯಲಿ ಸ್ತುತಿಸುವಾ ನರರಿಗೆ ಶ್ರೀಕಮಲನಾಭನ್ನ ತೋರುವಾ ಗಣಪ 3
--------------
ಸರಸ್ವತಿ ಬಾಯಿ