ಒಟ್ಟು 129 ಕಡೆಗಳಲ್ಲಿ , 44 ದಾಸರು , 124 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಜಮುಖ ಗಣಪನಂಬುಜಪಾದಕ್ಕೆರಗುವೆ ನಿಜವಾದ ವರವ ನಾ ಬೇಡಿಕೊಂಬೆ ಅಜನರಸಿಗೆ ಅತಿ ಭಕ್ತಿಂದೆ ಭಜಿಸುವೆ ತ್ರಿಜಗವಂದಿತನ ಕತೆಯ ಪೇಳ್ವೆನು 1 ಗೋಕುಲದೊಳಗೆಲ್ಲ ಗೋಪಾಂಗನೇರು ಕೂಡಿ ಏಕವಾಗಿ ಮಾತನಾಡಿಕೊಂಡು ತಾವು ಅ- ನೇಕ ಸಂಭ್ರಮದಿಂದ ಆಡಿ ನೀರಾಟವ ಬೇಕಾದೂಟವನುಂಡು ಬರುವೋಣೆಂದು 2 ಘೃತ ಪರಮಾನ್ನವು ಚಕ್ಕುಲಿ ಗಿಲುಗಂಜಿ ಗುಳ್ಳೋರಿಗೆ ಬುಂದ್ಯ ಭಕ್ಷ್ಯ ಮಂಡಿಗೆ ಫೇಣಿ ಬುತ್ತಿ ಚಿತ್ರಾನ್ನ ಹಪ್ಪಳ ಸಂಡಿಗಂಬೋಡುಪ್ಪಿನಕಾಯಿಗಳು 3 ಕೇಸರಿ ಕುಂಕುಮರಿಷಿಣ ಅಚ್ಚಮಲ್ಲಿಗೆ ಶಾವಂತಿಗೆ ಸರವು ದಿವ್ಯ ಕರ್ಪೂರದಡಿಕೆ ಯಾಲಕ್ಕಿ ಎಲೆಯ ಸುಣ್ಣ ಪತ್ರೆ ಲವಂಗ ತಬಕಿಲೆ ತಂದರು 4 ಹೆರಳು ಬಂಗಾರ ರಾಗಟೆ ಗೊಂಡ್ಯ ಕ್ಯಾದಿಗೆ ಅರಳು ಮಲ್ಲಿಗೆ ಸಂಪಿಗೆ ಮುಡಿದು ದಿವ್ಯ ಕೊರಳ ಕಟ್ಟಾಣಿ ಸರಿಗೆ ಚಂದ್ರಹಾರ ಪು- ತ್ಥಳಿ ಪಚ್ಚಪದಕಗಳ್ಹೊಳೆಯುತಲಿ 5 ಕಡಗ ಕಂಕಣ ದ್ವಾರ್ಯ ನಾಗಮುರಿಗೆ ವಂಕಿ ಬಿಡಿಮುತ್ತಿನ ಗೊಂಡ್ಯ ಬಾಜುಬಂದು ದೊಡ್ಡ ವಾಲೆ ಸರಪಳಿ ಮುತ್ತು ಬು- ಗುಡಿ ಚಂದರ ಬಾಳ್ಯ ಹೊಳೆಯುತಲಿ 6 ಮುದ್ದು ಮೋರೆಗೆ ತಕ್ಕ ಮುಕುರ್ಯ ಬುಲಾಕನಿಟ್ಟ ವ- ಜ್ರದ್ಹರಳು ಬಲಮೂಗಿನಲಿ ದಿವ್ಯ ತಿದ್ದಿ ಮುಂಗುರುಳು ಮುತ್ತಿನ ಬೊಟ್ಟು ಕುಂಕುಮ ಪದ್ಮದ್ಹೂವಿನ ಕುಬುಸಗಳ ತೊಟ್ಟು 7 ಹರದಿಯರೆಲ್ಲರು ಪರಮ ಸುಭ್ರಮದಿಂದ ಜರದ ಪೀತಾಂಬರ್ವಜ್ಜರದ ಪಟ್ಟಿನಿಟ್ಟು ಪರಿ ಬಣ್ಣ ಸೀರೆಗಳುಟ್ಟು ಕಾಲ- ಲಿ ರುಳಿ ಕಾಲುಂಗರ ಗೆಜ್ಜೆ ಪೈಜಣವು 8 ಚೆಲ್ವೆಯರೆಲ್ಲರು ಉಲ್ಲಾಸದಿಂದಲಿ ಘುಲ್ಲು ಘಲ್ಲೆಂದು ಹೆಜ್ಜನಿಡುತ ತಾವು ಮಲ್ಲೆ ಮಲ್ಲಿಗೆ ಪುನ್ನಾಗ ಸಂಪಿಗೆ ತೋಟ ಅಲ್ಲಲ್ಲೆ ನಿಂತು ನೋಡುತ ಬಂದರು 9 ಕುಂದ ಮಂದಾರ ಸುಗಂಧಿಕ ದವನವು ಬಂಗಾರದಂಥ ಕ್ಯಾದಿಗೆಯಮಲ ಚೊಕ್ಕ ದುಂಡುಮಲ್ಲಿಗೆ ಪಾರಿಜಾತ ತಾವರೆಮೊಗ್ಗು ಚೆಂದ ಚೆಂದದ ಶಾವಂತಿಗೆ ವನವು 10 ಹತ್ತಿ ಆಲದ ಮರ ಅಡಕೆ ತೆಂಗಿನ ಮರ ಅ- ಶ್ವತ್ಥ ಕಪಿತ್ಥ ಕಿತ್ತಳೆ ಹಲಸು ನೋಡು- ತ್ತತ್ತಿ ದ್ರಾಕ್ಷಿ ನೀರಲ ನಿಂಬೆ ದಾಳಿಂಬ್ರ ಪಕ್ವಾದ ಜಂಬು ಸೀತಾಫಲವು 11 ಎಲೆದೋಟದೊಳಗೆ ಯಾಲಕ್ಕಿಗೊನೆಯು ನೋಡೆ ಕಳಿತ ಮಾವಿನ ಹಣ್ಣು ಕದಳೀ ಫಲ ಬೋರೆ ಶ್ರೀತುಳಸಿ ವನಗಳಲ್ಲೆ ಅರಿಷಿಣಂಜೂರಿ ಔದುಂಬ್ರ ಫಲ 12 ಚಕೋರ ಚಾತಕ ಗಿಳಿ ಚಕ್ರವಾಕ ಪಕ್ಷಿ ಗಿಳಿಹಿಂಡು ಗಂಡೆರಳೆ ಗರುಡ ಹಂಸವು ನೋಡೆ ಹರಿ ಬ್ರಹ್ಮ ತಂದೆ ಮಕ್ಕಳು ಏರೋವಾಹನವು 13 ಕಸ್ತೂರಿಮೃಗ ಪುನುಗಿನ ಬೆಕ್ಕು ಪಾರ್ವಾಳ ಜಕ್ವಕ್ಕಿ ಕೊಳಲ್ಹಕ್ಕಿ ಸಾರಂಗವು ಚಾರಿ ಕುಕ್ಕುಟ ಭೈರುಂಡ ಎಡಖಗ ಬಲಕ್ಕಾಗಿ ಕೊಟ್ಟವು ಶಕುನ ಜಲಕ್ರೀಡೆಗೆ 14 ಕಾಳಿಮರ್ದನ ಕೃಷ್ಣ ಹಾರಿದ ಮಡುವಿದು ಕಾಳಿಂಗನೋಡಿಸಿ ಕಳೆದ ವಿಷ ಕೆಟ್ಟ ನೋಡೆ ಅಮೃತಕೆ ಮಿಗಿಲಾಗಿದೆ ಈ ಜಲ ಏನು ಪುಣ್ಯ ಮಾಡಿದ್ದಳೊ ಯಮುನಾ 15 ನೀಲ ಮಾಣಿಕ್ಯ ಮುತ್ತು ಕೂಡಿಸಿದಂತೆ ತ್ರಿವೇಣಿ ಆ- ದಳು ತಾ ಪ್ರಯಾಗದಲಿ ತ್ರಿವೇಣಿ ಭಾಗೀರಥಿ ಸರಸ್ವತಿ ಕೂಡಿ ಸಂಗಮಳಾಗಿ ಪೋಗೋಳು ಕಾಶಿ ಪಟ್ಟಣಕೆ 16 ಕಮಲಸಖನ ಪುತ್ರಿ ಕಾಮಿತ ಫಲಕೊಟ್ಟು ವರುಣನರ್ಧಾಂಗಿ ನೀ ವರವ ಕೊಡೆ ತಾಯೆ ಯಮಧರ್ಮರಾಯನ ಭಗಿನಿ ನಿಮ್ಮ ಸ್ನಾನ- ಫಲಕೊಟ್ಟು ಪಾಲಿಸೀಗೆಂದೆನುತ 17 ನೋಡುತ ನಗುತ ಮಾತಾಡುತ ನಿಂತರು ಓಡುತಾವೆ ಜಲ ಸೆಳವಿನಿಂದ ಆಹ ಮಾಡುವೋಣ್ಹ್ಯಾಗೆ ಸ್ನಾನವ ನಾವು ಎನುತಲಿ ಜೋಡಿಸಿ ತಮ್ಮ ್ಹಸ್ತ ಮುಗಿದರಾಗ 18 ಉಟ್ಟ ಸೀರೆಗಳನು ಬಿಟ್ಟು ಕುಪ್ಪಸ ಕಟ್ಟಿ ಇಟ್ಟರು ಉಸುಕಿನ ಮಿಟ್ಟಿಯಲ್ಲೇ ತಾವು ಮಿತ್ರೆಯರೆಲ್ಲ ತಮ್ಮ ಸ್ತನಗಳ್ಹಿಡಕೊಂಡು ಥಟ್ಟನೆ ಇಳಿದರು ನದಿಯೊಳಗೆ 19 ವಾರಿಗೆ ಗೆಳೆತೇರು ವರ ಮೋಹನಾಂಗೇರು ಮೋರೆಗೆ ಅರಿಷಿಣ ಕುಂಕುಮ್ಹಚ್ಚಿ ತಮ್ಮ ನೀರಜಾಕ್ಷಿಯರೆಲ್ಲ ನಿರ್ಮಲವಾಗಿದ್ದ ನೀರೊಳು ನಿಂತು ಮೈ ತೊಳೆದರಾಗ 20 ಭಾರಿ ಸೆಳವಿನೊಳು ಬತ್ತಲೋಲ್ಯಾಡುತ ಸಾರಸಮುಖಿಯರು ಸರಸದಿಂದ ಚೆಲ್ಲೆ ದ್ವಾರ್ಯ ಕಂಕಣಕರ ಬೊಗಸೆಲಿಂದ ನೀರು ತುಂಬಿ ಚೆಲ್ಲ್ಯಾಡುತಲಿ 21 ಸರ್ಪನಂಥ ಹೆರಳೊಲಿವುತ ನೀರೊಳು ಮುತ್ತಿನ ಸರಪದಕ್ಹೊಳೆಯುತಲಿ ಬುಕ್ಕ್ಹಿಟ್ಟು ಗಂಧ ಮಲ್ಲಿಗೆ ಪಾರಿಜಾತವು ತೆಪ್ಪದಂದದಲಿ ತೇಲಾಡುತಿರೆ22 ಅಂಬುಜಮುಖಿಯರು ಸಂಭ್ರಮದಿಂದಲಿ
--------------
ಹರಪನಹಳ್ಳಿಭೀಮವ್ವ
ಕಥನಾತ್ಮಕ ಬಾಗಿಲಿಕ್ಕಿದ ಬಗಿಯೇನೆ | ಬೇಗ ಬ್ಯಾಗದಿಂದ ಪೇಳೆ ನೀನೆ | ನಾಗವೇಣಿಯೆನ್ನ ಕೂಡ ಜಾಗುಬ್ಯಾಡ ಬಾಗಿಲುತೆಗೆಯೆ ಪ (ಬಂದೆಯಾದರಿಂದಿನದಿನದಿ) | ಛಂದದಿಂದ ಪೇಳೊ ಮದದಿ ನಾಮವುಸಾರೊ ಮುದದಿ 1 ಅಚ್ಯುತಾನ ಇಚ್ಛೆಯಿಂದ | ಸ್ವೇಚ್ಛ ದೈತ್ಯರಾಳಿದೇನೆ ಮತ್ಸ್ಯರೂಪಗೈದುನಾನೆ | ಭೀಭತ್ಸು ರಾಯ ನಲ್ಲವೇನೆ 2 ಯೇಸು ಪೇಳಿದ್ರಿಗುಣವನ್ನು | ಈಸು ಮಂದಿಯೊಳು ನೀನು ಬೂಸುರಾಗೆ ಭಾಷೆಕೊಟ್ಟು | ಕೂಸೀನ ಕೊಡದಾವ ನೀನು 3 ಪಾರ್ವತಿಯ ಪತಿಯನೊಲಿಸಿ | ಪಾಶು ಪತಾಸ್ತ್ರವ ಗೆಲಿಸಿ ಪಾರ್ಥರಾಯನೆ ಪಾಂಚಾಲಿ 4 ಪಾರ್ಥರಾಯ ನೀನಾದರೇನು, ಕೀರ್ತಿಯೆಲ್ಲಾ ಬಲ್ಲೆನಾನು ಸ್ತೋತ್ರ ಮೂರುತಿ ತಂಗಿಗೀಗ | ತೀರ್ಥಯಾತ್ರೆಲಿ ಗೆಲಿಹೋಗೊ 5 ಫುಂಡತೊರೆವ ಗಂಡನಾನೆ | ಖಾಂಡವನ ದಹಿಸಿದೆನೆ ಗಂಡುಗಲಿ ವರಹನ ದಾಸಾ | ಗಾಂಡೀವರ್ಜುನ ನಲ್ಲವೇನೆ 6 ಧೀರ ನೀನಾದರೆ ಏನು ಭಾರಿ ಗುಣವೆಲ್ಲಾ ಬಲ್ಲೆನಾನು ಯತಿಯಾಗಿರು ಹೋಗೋ 7 ವಟುರೂಪನ್ನ ವಲಿಸಿದೆನೆ ಕಿರೀಟಿ ಅಲ್ಲವೆ ಕೃಷ್ಣಿನಾನೆ 8 ಕೋಟಿರಾಯಗೆ ಮೇಟಿ ನೀನು | ಮಾಟವಾದ ಮುಖದವನು | ಬೂಟಿತನದಿ ವಿರಾಟನಲ್ಲಿ | ಆಟವಾ ಕಲಿ ಸ್ಹೋಗೊ ನೀನು 9 ಘಾತುಕ ಕರ್ಮಗಳನ | ಖ್ಯಾತಿಯಿಂದ ಚೈಸಿದ್ದೇನೆ ಮಾತೆ ಅಳಿದಗೆ ದೂತನಾನು ಶ್ವೇತವಾಹನ ದ್ರೌಪದಿನಾ 10 ವಾಹನ ನೀನಾದರೇನು | ಖ್ಯಾತಿಯೆಲ್ಲ ಬಲ್ಲೆ ನಾನು ಜೂತದಲ್ಲಿ ಸೋತವ ನೀ | ಅಗ್ನಾತವಾಸದಲ್ಲಿರು ಹೋಗೋ 11 ವಿಪಿನಾವಾಸದಿಯುದ್ಧ | ವಿಪರೀತ ಮಾಡಿದೇನೇ ಶ್ರೀ ಪತಿ ಶ್ರೀ ರಾಮದೂತ, ಭೂಪ ವಿಜಯನಾ ವಿಮಲಾಂಗೀ 12 ಭಾಳ ಪೇಳಿದಿ ಗುಣವನ್ನು ಕೇಳಲಿಕೆ ಅಶಕ್ಯವಿನ್ನು ಭಾಳ ಹರುಷದಿಗೆಲಿ ಹೋಗೋ 13 ಮೀನು ಫಕ್ಕನೆ ಖಂಡಿಸಿದೆನೇ ಪತಿ ಶ್ಯಾಲ ನಾನು | ಹೆಚ್ಚಿನ ಸವ್ಯಸಾಚಿ ನಾನು 14 ದುಷ್ಟ ಕುರುಪಕಿಗೆ ಭಯವ ಬಿಟ್ಟು | ಶ್ರೇಷ್ಟ ಸ್ತ್ರೀ ವೇಷ ಬಿಟ್ಟು ಅಷ್ಟು ಜನರೊಳು ಗುಟ್ಟುತೋರದೆ | ಧಿಟ್ಟದ್ವಿಜನಾಗಿ ಹೋಗೊ 15 ಬೌದ್ದ ರೂಪಗೆ ಬಂಧು ನಾನು | ಪ್ರಸಿದ್ಧ ಕೃಷ್ಣ ನಾನಲ್ಲವೇನು 16 ಯುದ್ಧದಲ್ಲಿ ಪ್ರಸಿದ್ದನೆಂದು | ಸಿದ್ದಿಗಳನು ಹೇಳಿದಿಂದು ಮುದ್ದು ಬಬ್ರುವಾಹನನಲ್ಲಿ | ಬಿದ್ದ ಸುದ್ದಿಯ ಪೇಳೊ ಇಲ್ಲಿ 17 ಕಂಜ ಮುಖಿಕಲಿ ಭಂಜನಾನ ಮಾಯಾ ಕೇಳೆ ನಾರಾಯಣನಲ್ಲವೇನೆ 18 ವಜ್ರದಬಾಗಿಲು ತೆಗೆದು | ಅರ್ಜುನನಪ್ಪಿದಳ್ ಬಿಗಿದು ದೊಡೆಯಗೆ ಕೈಮುಗಿದು 19 ನಿರುತವೀ ಸಂವಾದ ಪಠಿಸಲು ಭರಿತವಾದ ಸುಖವೀವೊದು ವಿಠಲನ್ನ ನೆನೆಯೋದು 20
--------------
ಓರಬಾಯಿ ಲಕ್ಷ್ಮೀದೇವಮ್ಮ
ಪಾರ್ವತಿರಮಣನಾ ನೋಡಿದೆನು | ನೋಡಿದೆನು | ಪರ್ವತ ಮಲ್ಲೇಶನಾ 1 ಆಟವಾಡುತ ಪಾಟ ಪಾಡುತ | ಕೋಟಿ ಜನರ ಸಹಿತಾಗಿ ಸಾಟಿಯಿಲ್ಲದ ಪರ್ವತ | ನಾಗಾ ಲೋಟಿಯನೆ ನಾ ನೋಡಿದೆ 2 ಅಲ್ಲಿದ್ದ ಜನರ ಸಹಿತಾಗಿ ಪೆದ್ದ ಚೆರುವನ್ನೆದಾಟಿದೆ | ಪುಟ್ಟ ಬೆಟ್ಟಗಳೇರಿ ಇಳಿಯುತ ಕೃಷ್ಣಧ್ಯಾನವ ಮಾಡುತ ದಿಟ್ಟ ಮಲ್ಲಿಕಾರ್ಜುನನ ಮನ ಮುಟ್ಟಿ ಸ್ನರಣೆಯ ಮಾಡುತ 3 ಶ್ರೀಭೌಮನ ಕೊಳ್ಳ ನೇಮದಿಂದಲಿ ದಾಟಿದೆ4 ಆ ಶೈಲ ಕೈಲಾಸ ಧಾಮರೆ | ಸೋಂಪಿನಿಂದಲಿ ಬಂದೆನೂ ಸಾಕ್ಷಿಗಣಪಗೆ ಕೈಯ ಮುಗಿದೂ | ಶ್ರೀ ಶೈಲಶಿಖರವ ಕಂಡೆನು5 ಭಂಗಾರ ಗೋಪುರದ ಮ್ಯಾಲೆ | ಶೃಂಗಾರವನು ನಾ ನೋಡಿದೆ ನಂದಿ ಭೃಂಗಿ ಮೊದಲು ಮಾಡಿ ಸಕಲ ತೀರ್ಥವ ನೋಡಿದೆ6 ಅಲ್ಲಿ ಸ್ನಾನವ ಮಾಡಿನಾನು | ಬಲ್ಲಿದನ ಬಲದಿಂದಲಿ ಎಲ್ಲ ಫಲ ಪುಷ್ಪಧರಿಸಿದ ಮಲ್ಲಿಕಾರ್ಜುನನ ನೋಡಿದೆ 7 ಪಂಚಾಮೃತವ ಮಾಡಿನಾನು | ಸಂಚಿತಾಗಮ ಕರ್ಮವು ವಂಚನಿಲ್ಲದೆ ಕರೆದು | ನಿಶ್ಚಿಂತೆ ಮನವನು ಮಾಡಿದೆ 8 ಜನಿತ ಪಾತಾಳಗಂಗಿ ಉದಕವು ತಂದು ಗಂಗಾಧರಗೆ ಎರೆದು ನಾನು | ಕಂಗಳಿಂದಲಿ ನೋಡಿದೆ 9 ಥೂಪ-ದೀಪ-ನೈವೇದ್ಯದಾರುತಿ | ಅನೇಕ ಭಕ್ತಿಲಿ ಮಾಡಿದೆ ಪ್ರೀತಿಯ ತೋರೆಂದು ಶಿವಗೆ | ಪ್ರೀತಿಲಿ ಕರಮುಗಿದೆನು 10 ಮುದ್ದು ಕೋಟಿಲಿಂಗಗೆ ನಾನು | ವಿಧ್ಯುಕ್ತದಿ ನಮಿಸಿದೆ ವೃದ್ಧ ಮಲ್ಲೇಶ್ವರನ ನೋಡಿ | ಅಲ್ಲಿದ್ದದೇವರ ಭಜಿಸಿದೆ 11 ಅಮರರಿಂದರ್ಚಿಸಿಗೊಂಬ | ಭ್ರಮರಾಂಬನ ನೋಡಿದೆ ಭ್ರಮೆಯು ಬ್ಯಾಡೆಂದು ಸಂಸಾರದ | ಬ್ಯಾಗದಿಂದಲಿ ಬೇಡಿದೆ 12 ಥಟ್ಟನೇ ಪಂಚಾ ಮಠವನೋಡಿ | ಅಟಕೇಶ್ವರಕೆ ಬಂದೆನು ಶಿಖರೇಶ್ವರನ ದರ್ಶನ ಮಾಡಿ | ಹಾಟಕೇಶ ಪುರ ನೋಡಿದೆ13 ಭಾರತಿಯ ಶೈಲಿ ವಿಸ್ತಾರ ಪತ್ರಿ ಪುಷ್ಪಗಳ ಫಲಗಳ ನಾರಸಿಂಹ ವಿಠಲಗರ್ಪಿಸಿ | ಧಾರೆ ಎರೆದು ಬಂದೆನು 14
--------------
ಓರಬಾಯಿ ಲಕ್ಷ್ಮೀದೇವಮ್ಮ
(41ನೇ ವರ್ಷದ ವರ್ಧಂತಿ) ಸತ್ಯ ಸಂಕಲ್ಪಾನುಸಾರದಿ ನಡೆಸುವುದುತ್ತಮ ಬಿರುದಾದರು ಭೃತ್ಯನ ಬಿಟ್ಟನೆಂಬಪಕೀರ್ತಿ ಬರದಂತೆ ಚಿತ್ತದಲ್ಲಿರಲಾದರು ಪ. ಕಳೆದಿತು ಐದೆಂಟು ಮೇಲೊಂದು ವತ್ಸರ ಬೆಳೆದಿತು ಬಲು ಮತ್ಸರ ನೆಲನ ಮೇಲಡಿಯಿಡಲಿಲ್ಲ ಶಕ್ತಿಯು ಇಂಥ ಛಲದಿ ತೋರುವಿ ತಾತ್ಸಾರ ಬಳುಕಿ ಬಾಡಿದ ದೇಹವುಳುಹಲುತ ಸೇವಾ ಫಲಕೆ ಕಾರಣವೆಂಬೆನು ನಳಿನನಾಭನೆ ನಿನ್ನ ಮನವೆಂತಿರುವುದೆಂದು ತಿಳಿಯದೆ ಬಳಲುವೆನು 1 ವಯಿನು ತಪ್ಪಿದ ಬಳಿ- ಕ್ಯಾತರಗುಣವಪ್ಪುದು ಭೂತಪಂಚಕ ಸನ್ನಿಪಾತ ಸೂಚಿಸುವಂತೆ ಕಾತರತೆಯು ತಪ್ಪದು ಈ ತೆರದಲಿ ದೇಹ ರೀತಿಯಾಗಿರುವುದ ನೀ ತಿಳಿದಿರಲೆನ್ನಯ ಮಾತ ಕೇಳದೆ ಲಕ್ಷ್ಮೀನಾಥ ತಾತ್ಸಾರವಿಂತು ನೀತಿಯಾಗದು ಚಿನ್ಮಯ 2 ಜನನ ಮರಣ ಜೋಡಾಗಿರುವುದೆಂಬ ಸಿದ್ಧ ನಿನಗಿದು ಸುಲಭಸಾಧ್ಯ ಮನೆವಾರ್ತೆ ಮಡದಿ ಮಕ್ಕಳು ಮುಂತಾದುದಕೆಲ್ಲ ವನಜಾಕ್ಷ ನೀನೆ ಬಾಧ್ಯ ಕನಸಿಲಾದರು ನಿನ್ನ ನೆನವ ತಪ್ಪಿಸದಿರು ವಿನಯ ವೆಂಕಟರಾಯನೆ ನಿನಗಿಲ್ಲದಪಕೀರ್ತಿ ಎನಗಿಲ್ಲ ಮಹದಾರ್ತಿ ಘನಕಲ್ಪ ಸುರಭೂಜನೆ 3
--------------
ತುಪಾಕಿ ವೆಂಕಟರಮಣಾಚಾರ್ಯ
ಅರಿ ನಿನ್ನಯ ನಿಜವನು ಜೀವಾ ಅರಿವಿಂದೆ ನೀನೆ ಆ ದೇವಾ ಪ ಸಾರಿ ಪೇಳಿತು ಈ ನುಡಿ ಶಾಸ್ತ್ರ ಅರಿತು ನೋಡಲು ನೀನೆ ಕೃತಾರ್ಥ ದೇಹಮನಗಳ ತ್ಯಾಗದಿಂದೆ ಉಳಿವುದಾ ನಿಜವೊಂದೇ 1 ಈ ಬೋಧಾದಾ ಅನುಭವ ಪಡೆಯೈ ನಾಶಮಾಡು ಈ ಮನವಾ ಈಶಜೀವರಾ ಐಕ್ಯದ ನಿಜವಾ ಪೇಳ್ದ ಶಂಕರದೇವಾ 2
--------------
ಶಂಕರಭಟ್ಟ ಅಗ್ನಿಹೋತ್ರಿ
ಆದಿದೇವ ನಿನ್ನೊಲುಮೆಯೊಂದಾದರೆ ಮೇದಿನಿ ವೈಕುಂಠ ಎನ್ನಿಸದೆ ಪ ವೇದವೇದ್ಯ ನಿನ್ನಾದರವಿರದಲೆ ಮೇದನಿ ಬೂದಿಯಾಗದಿಹುದೇ ಅ.ಪ ಹೂವಿಗೆ ಗಂಧವ ಎರೆದವರಾರೋ ಬೇವಿಗೆ ಕಹಿಯನು ಕೊಟ್ಟವರಾರೋ ಜೀವಿಗಳೆಲ್ಲಾ ಸಲಹುವರಾರೋ ಸಾವು ನೋವುಗಳ ಬಿಡಿಸುವನಾರೋ 1 ದೇವರಿಗಮೃತವ ಕೊಟ್ಟವನಾರೋ ಹಾವಿನ ಹಾಸನು ಪಡೆದವನಾರೋ ಭಾವದನೆಲೆಯ ಮಾಂಗಿರಿಪತಿಯೆಲೆ ಕಾವನು ಕೊಲ್ವನು ನೀನಲ್ಲದಾರೋ 2
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಆನಂದ ಗಿರಿ ರಾಯನೆ ಪಿಡಿಕೈಯ್ಯಾ | ನಾ ನಿನ್ನ ಪಾದಕ್ಕಾನಮಿಸುವೆ ಶರಣರ ಪ್ರಿಯ | ಭಕುತರ ಭವಣೆಯನೀ ನೋಡುತಲಿಹುದೊಳಿತೇನಯ್ಯ | ಬಂಧನ ಬಿಡಿಸಯ್ಯ ಪ ಮಾನದ ಮಾನ್ಯ ಭೂದಾನವ ಬೇಡ್ವನೆಕಾಣಿಸೊ ಮನದೊಳು ದೀನನ ಮೊರೆಗೇಅ.ಪ. ಕಲ್ಯಾಣ ಪುರಿಯಿಂದಲಿ ಪೋಗೀ | ಸಜ್ಜನರವೆರಸೇ ಕಲ್ಯಾದಿಗಳೆಲ್ಲ ದೂರಿದೆ ಸಾಗೀ | ಪೋಗುತ್ತಲಿರಲೂ ಬಲ್ಯಾದಿಗಳೊಡೆಯನ ಪುರಕಾಗೀ | ಮೂಡಬಾಗಿಲಲಿರುವಾ ವೇಳ್ಯಾದರು ನರಹರಿತೀರ್ಥವ |ಓಲೈಸುತ ಸರಿ ನಿರ್ಮಾಲ್ಯ ಪಡೆದೆವು 1 ನಿಟಲಾಕ್ಷನ ಬಿಂಬನು ನೆಲೆಸಿರುವಲ್ಲಿ | ಮತ್ತೊಂದು ಬೆಟ್ಟದಿ ಪಟು ಭಟ ತಾ ಯೋಗಾಸನದಲ್ಲಿ | ಕುಳಿತಿಹನಲ್ಲಿ ಚಟುಲ ವಿಕ್ರಮನ ಧ್ಯಾನಿಸುತಲ್ಲಿ | ಹನುಮಂತನಲ್ಲಿ ಘಟಕಾಚಲದೊಳು ಸೇವಿಸಿ ಭಕುತರ |ತಟಕ ಪೊರಟಿತು ವೆಂಕಟಗಿರಿಗೆ 2 ಹದಿನಾಲ್ಕು ಲೋಕಾಧಿಪನರಸಿ | ಪುರದೊಳು ಪೋಗಿಪದುಮ ಸರಸೋದಕ ಪ್ರೋಕ್ಷಿಸಿ | ಅಲ್ಲಿಂದ ಬಂದುಪದುಮಾವತಿ ಪಾದಾಬ್ಜಕೆ ನಮಿಸಿ | ಕುಂಕುಮಾರ್ಚಿಸಿ ||ಪದುಮೆ ಮನೋಹರ ಗೋವಿಂದ ಪುರಿಯಲಿವದಗಿ ವಸಿಸಿ ನಾವ್ ನಿಶಿಯನೆ ಕಳೆದೆವು 3 ಉದಯವಾಗದ ಮುಂದೇಳುತಲಾಗ | ಮಜ್ಜನವ ಗೈದೂಪದಚಾರಿಗಳಾಗುತಲೀ ಬೇಗಾ | ಒಡಗೂಡಿ ಗಿರಿಯಮುದದಿಂದಲೇರುವ ಯೋಗಾ | ಕೈ ಸೇರಲು ಬೇಗಾ ||ಪದತಲದಲಿ ಪಾಪತ್ಮಕ ತನು ಕ-ಳೆದಾತನ ನೆನೆದು ಸೋಪಾನವ ಕ್ರಮಿಸಿದೆ 4 ಗೋವಿಂದ ಗೋವಿಂದನೆಂಬುವ ನಾಮ | ಅಂಬರವು ತುಂಬೆಅವುಗಳ ಕಾವವನ ಗುಣ ನಾಮಾ | ಕೀರ್ತಿಸಿ ಮುದದಿಭಾವದೊಳ್ ಮೈಮರೆದು ಬ್ರಹ್ಮಾ | ಭವಸುರ ಪಾದ್ಯಾರ ||ಅವಾಗಲು ಅವರವಗುಣವೆಣಿಸದೆಕಾವನು ಎನುತಲಿ ಪಾವಟಿಗೇರೋ 5 ಪರಿ ತಿಳಿದೂತುಳಿದೂ ತುಳಿಯಲಿಲ್ಲವು ನೋಡಾ | ಸಲ್ಲುವುದೀದುತಿಳಿ ವಾದಿರಾಜರಿಗೆ ಗೂಢಾ| ನಾ ಬಲು ಮೂಢಾ |ಮಲವನು ಕಳೆಯುತ ಹುಲು ಮನುಜನ ಭವವಳಿದು ಸಲಹೊ ಹೇ ತಿರುಪತಿ ನಿಲಯ 6 ಮೆಟ್ಟಲು ಮೆಟ್ಟಲುಗಳನೇರುತ್ತಾ | ತಾಳಂಗಳನುತಟ್ಟಿ ಹರಿ ಹರಿ ಎಂದೊದರುತ್ತಾ | ಪಾಪಂಗಳ ತಲೆಮೆಟ್ಟಿ ತಂಬೂರಿಯ ಮೀಟುತ್ತಾ | ಕಾಲೊಳು ಗೆಜ್ಜೆಗಳ ||ಕಟ್ಟುತ ಘಲು ಘಲು ಘಲಿರೆನ್ನುತ ಜಗಜಟ್ಟಿ ಹನುಮನ ನೆನೆಯಲೊ ಮನವೆ 7 ಮೃಗ ಪಕ್ಷಿಗಳ ದಿವ್ಯಾ | ರೂಪಂಗಳ ಧರಿಸಿನಿರುತ ಗೈವರು ತವ ಸೇವೆಯು ಭವ್ಯಾ | ಅವುಗಳ ವರ್ಣಿಸಲು || ಉರಗರಾಜ ತನ್ನ ಸಾಸಿರ ನಾಲಿಗೆಸರಿಯಾಗದು ಎನೆ ಶಿರವನೆ ತೂಗುವ 8 ಏರೋ ಪಾವಟಿಗೆಗಳನು ಏರೋ | ಮೊಳಕಾಲು ಮುರಿಯನೇರೋ ಕುಳಿತೊಮ್ಮೆ ತುತಿಸುತ ಸಾರೋ | ಹರಿಯ ಮಹಿಮೆಯಸಾರೋ ಬಾರಿ ಬಾರಿಗೆ ನೀ ಸಾರೋ | ಗಾಳಿ ಗೋಪುರವ ||ಮೀರಿ ಬರಲು ದಿವ್ಯ ಗೋಪುರ ಕಾಣುತ |ಚೀರೊ ಚೀರೊ ಹರಿ ಗೋವಿಂದನೆನ್ನುತ 9 ಸ್ವಾಮಿ ಪುಷ್ಕರಣಿಯಲೀ ಮಿಂದೂ | ಶ್ರೀ ಭೂವರಹಾಸ್ವಾಮೀಯನೆ ಪ್ರಾರ್ಥಿಸಿ ಬಂದೂ | ಪ್ರಾಕಾರದೊಳಗಿಹವಿಮಾನ ಶ್ರೀನಿವಾಸನ ಕಂಡಂದೂ | ನಮಿಸುತ ಬಂದೂ |ಭೂಮಿಜೆವಲ್ಲಭ ವೆಂಕಟನನು ಕಂಡುಕಾಮಿಸೊ ಜ್ಞಾನ ವೈರಾಗ್ಯ ಭಕುತಿಯ 10 ದೇವಾದಿದೇವಾ ಜಗದ್ಭರ್ತಾ | ವೆಂಕಟನೆ ನಾನಾನಾಜನುಮದ ಸುಕೃತಾ | ಪೊಂದುತಲಿ ನಿನ್ನಸೇವಾ ದೊರಕಿದುದೆ ಪುರುಷಾರ್ಥಾ | ಹರಿಪುದು ಸುಜನಾರ್ತಾ | ಭಾವನ ಕಾಯ್ದ ಸದ್ಭಾವಕೆ ವಲಿವನೆಕಾವುದೆನ್ನ ಗುರು ಗೋವಿಂದ ವಿಠ್ಠಲ 11
--------------
ಗುರುಗೋವಿಂದವಿಠಲರು
ಆವ ರೋಗವೊ ಎನಗೆ ದೇವಧನ್ವಂತ್ರಿ ಪ. ಸಾವಧಾನದಿ ಕೈಯ ಪಿಡಿದು ನೀ ನೋಡಯ್ಯ ಅ.ಪ. ಹರಿಮೂರ್ತಿಗಳು ಕಾಣಿಸವು ಎನ್ನ ಕಂಗಳಿಗೆಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆಹರಿ ಮಂತ್ರ ಸ್ತೋತ್ರ ಬಾರದು ಎನ್ನ ನಾಲಿಗೆಗೆಹರಿ ಪ್ರಸಾದವು ಜಿಹ್ವೆಗೆ ಸವಿಯಾಗದಯ್ಯ 1 ಹರಿಪಾದ ಸೇವೆಗೆನ್ನ ಹಸ್ತಗಳು ಚಲಿಸವುಗುರುಹಿರಿಯರಂಘ್ರಿಗೆ ಶಿರ ಬಾಗದುಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವುಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ 2 ಅನಾಥಬಂಧು ಗೋಪಾಲವಿಠಲರೇಯಎನ್ನ ಭಾಗದ ವೈದ್ಯ ನೀನೆಯಾದೆಅನಾದಿ ಕಾಲದ ಭವರೋಗ ಕಳೆಯಯ್ಯನಾನೆಂದಿಗು ಮರೆಯೆ ನೀ ಮಾಡಿದುಪಕಾರ 3
--------------
ಗೋಪಾಲದಾಸರು
ಆವರೋಗವೆ ಯೆನಗೆ ದೇವ ಧನ್ವಂತ್ರೀ ಪ ಸಾವಧಾನದಿಯೆನ್ನ ಕೈಪಿಡಿದು ನೋಡೋ ಅ ಪ ಹರಿಮೂರ್ತಿ ಕಾಣಿಸದು ಎನ್ನ ಕಂಗಳಿಗೆ ಹರಿಕೀರ್ತನೆ ಕೇಳದೆನ್ನ ಕಿವಿಗಳಿಗೆ ಹರಿಯ ಶ್ರೀಗಂಧವಾಘ್ರಾಣಿಸದೆನ್ನ ನಾಸಿಕವು ಹರಿಯಪ್ರಸಾದ ಜಿಹ್ವೆಗೆ ಸವಿಯಾಗದು 1 ಹರಿಪಾದ ಪೂಜಿಸೆ ಹಸ್ತಗಳು ಚರಿಸದು ಹರಿಗುರುಗಳಂಘ್ರಿಗೆ ಶಿರ ಬಾಗದು ಹರಿಯ ಸೇವೆಗೆ ಯೆನ್ನ ಅಂಗಗಳು ಚಲಿಸದು ಹರಿಯಾತ್ರೆಗೆನ್ನ ಕಾಲುಗಳೇಳದೋ 2 ಅನಾಥಬಂಧು ಶ್ರೀವಿಜಯವಿಠ್ಠಲರೇಯ ಯೆನ್ನ ಭಾಗ್ಯದ ಸ್ವಾಮಿಯಾಗಿ ನೀನೊ ಅನಾದಿಕಾಲದ ಘನರೋಗವನೆ ಬಿಡಿಸು ನಿನ್ನ ಉಪಕಾರವ ನಾನೆಂದಿಗೂ ಮರೆಯೇ 3
--------------
ವಿಜಯದಾಸ
ಇಂದು ಕಂಡೇ ಪ ಪಾದ ಭಜನೆ ಮಾಡುವದೊಂದೆ ಅ.ಪ. ಪುಟ್ಟಿದಾರಾಭ್ಯ ಬಹುದಿಟ್ಟನಾಗಿಯೆ ಬಾಳು ಅಟ್ಟಿಮೆರೆಯುವ ಬಯಕೆ ವಿಟ್ಟು ಮನದಲಿ ಬಹಳ ಕಷ್ಟಪಟ್ಟೆನು ಘಳಿಸೆ ವಿತ್ತರಾಶಿಯ ವಿಪ್ರ ಶ್ರೇಷ್ಟಧರ್ಮವ ಬಿಟ್ಟು ವ್ಯರ್ಥ ವಿದ್ಯೆಯ ನೋದಿನೋದಿ ಅಷ್ಟಕರ್ತನು ಬಯಕೆ ಬಟ್ಟಬಯಲನು ಗೈದು ಕೊಟ್ಟು ಜ್ಞಾನದ ಕಣ್ಣು ನೆಟ್ಟನೆ ನೊಡೆನಲು ಬಟ್ಟು ಸುಖವನೆ ಮೆಲ್ವ ಜಟ್ಟಿ ಜಗದಲಿ ಕಾಣೆ ಭವ ಸುಖಕೆ 1 ಹೆಂಡತಿಯ ಸುಖವೆಂದೆ ಕೆಂಡಬಡತನ ಸೋಕೆ ಗಂಡು ಬಯಕೆಗಳೆಲ್ಲ ಉಂಡುದಣಿಯಲಿಲ್ಲ ಮಂಡೆ ಚಚ್ಚುತ ನಿತ್ಯ ತುಂಡು ಆದಳು ಅವಳು ಬೆಂಡು ಆದೆನುನಾನು ಹಿಂಡು ಬಳಗಗಳೆಲ್ಲ ಉಂಡು ದಣಿದರು ನಗೆಯ ಹಿಂಡಿ ಪರಜನ ಪ್ರಾಣ ಉಂಡು ಬದುಕಿಹೆ ಸ್ವಾಮಿ ಮುಂಡೆ ಗಿಂತಲು ಹೀನ ಷಂಡನಾಗಿಹೆ ಸ್ವಾಮಿ ಪಾಂಡುರಂಗನೆ ನಿನ್ನ ತೊಂಡನಾದರೆ ಧನ್ಯ 2 ವಿತ್ತ ಗಂಟು ಇಲ್ಲದಮೇಲೆ ಗಂಟುಮೋರೆಯ ನೇಮ ಒಂಟಿಗನೆ ಜೀವನಿಹ ನೆಂಟ ಬಿಂಬನೆ ಒಬ್ಬ ಭಂಟನೆಂದರೆ ಪಿಡಿವ ಶುಂಠ ಬಿಟ್ಟವ ಸತ್ಯ ಕಂಟಕವು ವಿಷಯತತಿ ಕಜ್ಜಿತಿನಸಿನ ತೆರದಿ ಎಷ್ಟು ಸೇವಿಸಲಷ್ಟು ತಂಟೆನೀಡುವವೇನೆ ಕುಂಠವಾದರು ಕರುಣ ಅಂಟಿಮನಸಿಗೆ ಭಾಧೆ ಉಂಟುಮಾಡುವವು ವೈಕುಂಠ ನಾಯಕಕಾಯೊ 3 ಬಾಡಿಗೆಯ ಮನೆಯಂತೆ ಗಾತ್ರವಿದು ಜೀವನಿಗೆ ಹೂಡಿಹನು ಭವಯಾತ್ರೆ ಓಡಿಹೊಹುದು ತಾನೆ ಆಗಿ ಮುಗಿಯಲು ಆಟ ಪ್ರೌಡ ಹರಿಪುರ ದಾರಿ ನೋಡಿಕೊಂಡವ ಜಾಣ ಕೇಡು ಮತ್ತಗೆ ಸಿದ್ಧ ಮಾಡುತಲಿ ವಿಧಿಗಳನು ದೂಡುತಲಿನಿಜೀವ ಕೂಡುತಲಿ ಸಜ್ಜನರ ಹಾಡುತಲಿ ಹರಿಗಾನ ಜೋಡಿಸುತ ಹರಿಭಕ್ತಿ ಬೇಡದಲೆ ಏನೊಂದು ಬಾಡದಿರೆ ದುಃಖ ಬರೆ ನೋಡುವನು ನಿಜ ಸುಖವ 4 ಹೆಂಡತಿಯು ಸುಗುಣಿ ಇರೆ ಗಂಡನಿಹ ದುರ್ಮಾರ್ಗ ಗಂಡ ಮೃದು ತರವೆನ್ನೆ ಹೆಂಡತಿಯು ಕರ್ಕಸಿಯು ಕುಂಡಲಿಯ ಸಿರಿಯೆನ್ನೆ ಮಂಡೆಯಲಿ ಮೆದುಳಿಲ್ಲ ಹೆಂಡ ಕುಡುಕರು ಸುತರು ಉಂಡುಸುಖಿಸೆ ರೋಗ ಮುಂಡೆಯರ ಚಲುವಿಕೆಯು ಶಂಡಸಹ ಸಂಸಾರ ಭಂಡ ಮಕ್ಕಳ ಬಾಳು ಪುಂಡಜನ ಸಹವಾಸ ಕಂಡು ಸಹಿಸದ ನೆಂಟ ಉಂಡು ದೂರುವ ಬಳಗ ದಂಡವಲ್ಲವೆ ಮತ್ತೆ ಕೊಂಡು ಮಾಡುವದೇನು 5 ಭವ ನಿಜಗುಣವೆ ಕ್ಲೇಶದಾಯಕ ವಿರಲು ಲೇಸು ದೊರಕುವದುಂಟೇ ಏಸು ಕಾಲವು ಕಳಿಯೆ ಏಸು ಕಡಿಯಲು ನೀರ ಸೂಸುವುದೆ ನವನೀತ ಹೇಸಿಗೆಯ ದುರ್ಗಂಧ ನಾಶವಾಗುವುದುಂಟೇ ಕ್ಲೇಶ ತೊಲಗದು ಎಂದು ದಾಶರಥಿಯ ಮನಮುಟ್ಟಿ ದಾಸ ನಾಗದ ತನಕ ಭಾಸವಾಗದು ಜ್ಞಾನ ಶ್ರೀಶ ಕಾಣಿಸ ತನ್ನ ದೋಷಿಯಾಗದೆ ಹರಿಗೆ ಮೀಸಲೆನ್ನಿರಿ ಎಲ್ಲ 6 ನಂಬಿ ಮತಿಮತ ತತ್ವ ವಿಷಯ ಹಂಬಲವಳಿದು ಡಿಂಬಗತ ಹರಿ ಬಿಂಬ ಧ್ಯಾನ ಮಾರ್ಗವ ಕಂಡು ಅಂಬುಜಾಕ್ಷ ನಮ್ಮ “ಶ್ರೀ ಕೃಷ್ಣವಿಠಲ”ನ್ನ ತುಂಬಿ ಹೃದಯದದಿ ಸತತ ಪರಮ ಸಂಭ್ರಮದಿಂದ ತಂಬೂರಿ ಮೀಟುತ್ತ ಗೆಜ್ಜೆ ಸಹ ಕುಣಿಕುಣಿದು ಅಂಬಕದಿ ಸುಖ ಬಾಷ್ಪ ಸುರಿಸುತ್ತಹರಿನೆನೆದು ಅಂಬುಜಾಸನ ಸುರಕದಂಬ ಕರುಣವ ಗಳಿಸಿ ಅಂಬೆ ಸಿರಿಪತಿ ಚರಣದಿಂಬು ಬೇಡುವದೊಂದೇ 7
--------------
ಕೃಷ್ಣವಿಠಲದಾಸರು
ಇದೇ ಸಾಧಿಸಿನೋಡಿ ಮನ ಉನ್ಮನÀಮಾಡಿ ಘನಸುಖ ಭೇಧಿಸಿದರ ಭಾಸುತದೆ ತನ್ನೊಳು ತಾನೆ ಕೌತುಕಧ್ರುವ ನೋಡಿ ನೋಡಿ ಖೂನ ಅರುಹು ಇಲ್ಲದೆ ಜನದೊಳು ಬರುದೆ ಹೇಳ್ಯಾಡುದೇನ ನಿರ್ವಿಕಲ್ಪನ ನಿಜನೆಲೆನಿಭವರಿತು ನೋಡಿ ಸ್ಥಾನ ಸರ್ವಸಾಕ್ಷಿ ಸರ್ವಾತೀತವೆಂಬ ವಸ್ತು ನೋಡಿ ಪೂರ್ಣ 1 ಕಣ್ಣಿನ ಕೊನೆ ಮುಟ್ಟಿ ಕರಗಿ ಮನವು ನೋಡಿ ಪೂರ್ಣ ಬೊಧ ಸಣ್ಣ ದೊಡ್ಡವರೊಳಗಿದೆ ಒಂದು ಸಾರುತಿದೆ ವೇದ ಧನ್ಯ ಧನ್ಯಗೈಸುವ ನಿಜ ಪುಣ್ಯ ಗುರುಪಾದ ಚನ್ನಾಗ್ಯನುಭವದಿಂದ ನೋಡಲಿಕ್ಯಾಗದು ಸ್ವಾದ 2 ಸುರಿಮಳಿಗರೆವುತಲ್ಯದೆ ಸ್ವಸುಖದಾನಂದೊ ಬ್ರಹ್ಮ ತೆರೆತಿಳಿಯಲಿಕ್ಕೆ ಗುರು ಶರಣ ಹೋಗಬೇಕು ಇದೇ ವರ್ಮ ಹರುಷಗೈಸಿದ ನೋಡಿ ಪತಿತಪಾವನ ಸದ್ಗುರು ನಮ್ಮ ತರಳ ಮಹಿಪತಿಗಿದೆ ನಿತ್ಯಭಿನವದ ನೋಡಿ ಸಂಭ್ರಮ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಈ ಸೊಬಗನಿನ್ನ್ಯಾವ ದೇವರೊಳು ಕಾಣೆ ಈಶ ಪರಮೇಶ ಜಗದೀಶ ಶ್ರೀ ಶಿವನ ಪ ಸುಂದರತ್ವದಿ ನೋಡೆ ತ್ರಿಪುರಸುಂದರಿಯರಸ ಬಂಧುತ್ವದಲಿ ವಿಷ್ಣು ಸೋದರಿಯ ರಮಣ ಅಂದ ಚಂದದಿ ನೋಡೆ ಸುಂದರೇಶ್ವರನಿವನು ಚಂದ್ರ ನಾಗಾಭರಣ ಲೋಕ ಶಂಕರನು 1 ಭೋಗದಲಿ ನೋಡೆ ತಾಂ ಮೋಹಿನಿಯನಾಳ್ದವನು ಯೋಗದಲಿ ಯೋಗೇಶ ಯೋಗ ಭಾವಿತನು ತ್ಯಾಗದಲಿ ನೋಡೆ ತಾಂ ಸರ್ವಸಂಗ ತ್ಯಾಗಿ ನಿಗಮ ಗೋಚರನು 2 ವೀರತನದೊಳಗಿವನು ತ್ರಿಪುರ ಸಂಹಾರಕನು ಧೀರತನದೊಳಗಿವನು ಮದನವಿಧ್ವಂಸಿ ಸಾರತನದೊಳಗಿವನು ಶ್ರೀ ಮಹಾದೇವನು ಕಾರಣಕೆ ಕಾರಣನು ಜಗದಾದಿ ಗುರುವು 3 ಹುಟ್ಟು ಸಾವುಗಳೆಲ್ಲ ಎಷ್ಟಾರ್ಥದಾಯಕನು ಪಟ್ಟಣವು ರತ್ನ ರಜತಾದ್ರಿಯಾಗಿಹುದು ಪುಟ್ಟ ಬಾಲನಿಗೊಲಿದು ಕಟ್ಟು ಮಾಡಿದ ಯಮನ ಅಷ್ಟ ಮೂರ್ತಿಯು ಲೋಕ ಸೃಷ್ಟಿ ಕಾರಣನು 4 ಎಲ್ಲಿ ನೋಡಿದರಲ್ಲಿ ವಿಶ್ವರೂಪದೊಳಿಹನು ಎಲ್ಲಿ ನೋಡಿದರಲ್ಲಿ ಸೂಕ್ಷ್ಮದಿಂದಿಹನು ಎಲ್ಲಿ ನೋಡಿದರಲ್ಲಿ ಸರ್ವಾತ್ಮನಾಗಿಹನು ಎಲ್ಲಿ ನೋಡಲು ಧೇನುಪುರನಾಥ ಶಿವನು 5
--------------
ಬೇಟೆರಾಯ ದೀಕ್ಷಿತರು
ಈ) ರುದ್ರದೇವರು ವೃಷಭನೇರಿದ ವಿಷಧರನ್ಯಾರೆ ಪೇಳಮ್ಮಯ್ಯ ಪ ಹಸುಳೆ ಪಾರ್ವತಿಯ ತಪಸಿಗೆ ಮೆಚ್ಚಿದಜಟಾಮಂಡಲಧಾರಿ ಕಾಣಮ್ಮ ಅ.ಪ. ಕೈಲಾಸಗಿರಿಯ ದೊರೆಯಿವನಮ್ಮ-ಅದು ಅಲ್ಲದೆ ಕೇಳೆಬೈಲು ಸ್ಮಶಾನದಿ ಮನೆಯಿವಗಮ್ಮ-ಸಂಕರ್ಷಣನೆಂದುಕೇಳೆ ಮಹಿಯೊಳು ಜನ ಪೊಗಳುವರಮ್ಮ-ಇದು ನಿಜವಮ್ಮನಾಲಿಗೆ ಸಾಸಿರ ಫಣಿಭೂಷಣ ನಮ್ಮರಮೆಯರಸಗೆ ಇವ ಮೊಮ್ಮಗನಮ್ಮ 1 ಪತಿ ಇವನಮ್ಮ-ಮಾವನ ಯಾಗದಲಿಬ್ಹಾಳ ಕೃತ್ಯಗಳನು ನಡೆಸಿದನಮ್ಮ-ಸಾಗರದಲಿ ಹುಟ್ಟಿದಕಾಳಕೂಟವ ಭಕ್ಷಿಸಿದನಮ್ಮ-ರಾಮನ ದಯವಮ್ಮಮೇಲೆ ಉಳಿಯಲು ಶೇಷಗರಳವುನೀಲಕಂಠನೆಂದೆನಿಸಿದನಮ್ಮ2 ಹರನೊಂದಿಗೆ ವೈಕುಂಠಕೆ ಬರಲು-ತಾತಗೆ ವಂದಿಸುತತರುಣೀರೂಪವ ನೋಡ್ವೆನೆನಲು-ಹರಿ ತಾ ನಸುನಗುತಕರೆದು ಸೈರಿಸಲಾರೆ ನೀ ಎನಲು-ಹಠದಿ ಕುಳ್ಳಿರಲುಕರುಣೆಗಳರಸನು ಹರನ ಮೊಗವ ನೋಡಿಅರುಣೋದಯಕೆ ಬಾರೆಂದು ಕಳುಹಿದ 3 ಅರುಣೋದಯಕೆ ಗಂಗಾಧರ ಬರಲು-ಹದಿನಾರು ವರುಷದ ತರುಣೀರೂಪದಿ ಹರಿ ವನದೊಳಗಿರಲು-ಚರಣನಖಾಗ್ರದಿಧರಣೀ ಬರೆಯುತ್ತ ನಿಂತಿರಲು-ಸೆರಗ ಪಿಡಿಯೆ ಬರಲುಕರದಿ ಶಂಖ ಗದೆ ಚಕ್ರವ ತೋರಲುಹರನು ನಾಚಿ ತಲೆತಗ್ಗಿಸಿ ನಿಂತ4 ಮಂಗಳಾಂಗನೆ ಮಾರಜನಕ-ನಾ ಮಾಡಿದ ತಪ್ಪಹಿಂಗದೆ ಕ್ಷಮಿಸೊ ಯದುಕುಲ ತಿಲಕ-ವಕ್ಷದಲೊಪ್ಪುವ ನಿನ್ನಂಗನೆ ಅರಿಯಳು ನಖಮಹಿಮಾಂಕ-ಹೀಗೆನುತಲಿ ತವಕರಂಗವಿಠಲನ ಪದಂಗಳ ಪಿಡಿದು ಸಾಷ್ಟಾಂಗವೆರಗಿ ಕೈಲಾಸಕೆ ನಡೆದ 5
--------------
ಶ್ರೀಪಾದರಾಜರು
ಈತನೀಗ ಪ್ರಣವ ಪಾದ್ಯನೊ | ಭೂತ ಪ್ರೇತ ಪ್ರಮಥ ತತಿಗೆ | ನಾಥನೆನಿಪ ನಮಗೆ ನಿರುತ | ವಾಕನೊಳಗೆ ಹರಿಯ ತೋರುವ ಪ ಗಜದನುಜ ವಿನಾಶನೀತ | ಗಜವದನನ ಪೆತ್ತನೀತ | ಗಜನ ಸದದನೀತ ಪೆತ್ತಂ | ಗಜನ ಗೆದ್ದ ಗಂಭೀರನೀತ | ಗಜರಿಪುರಥ ರಮಣನೀತಾ ನಂ | ಗಜಮಾರಗೊಲಿದನೀತ | ಗಜ ವರದನ ಭಕ್ತರಘವೆಂಬೊ | ಗಜಕೆ ಕೇಸರಿಯಾಗಿಪ್ಪನೀತಾ 1 ದ್ವಿಜರಾಜ ಜುಟನೀತಸೋತ್ತಮ | ದ್ವಿಜಗೆ ಪಾಲಿಪನೀತ ಸತತಾ | ದ್ವಿಜ ಪನ್ನಗನ್ನ ಸಮಗುಣನೀತಾ | ದ್ವಿಜ ಕುಲದಲ್ಲಿ ಉದ್ಭವನೀತ | ದ್ವಿಜನ ಶಾಪವ ಕೈಕೊಂಡನೀತ | ದ್ವಿಜ ಭೂಷಣ ಯಾಗದಲಿ ಸೂರ್ಯನ | ಧ್ವಜವ ಕಿತ್ತಿದನೀತ ಕೈಲಾಸ | ದ್ವಿಜವಾಗಿವುಳ್ಳ ಉಗ್ರೇಶನೀತ2 ತ್ರಿಗುಣಾಕಾರ ನೀತ ಮೂರು | ಜಗವದಲ್ಲಣನೀತ ಮೇರು | ನಗಚಾಪನೀತ ನಾರಾಯಣಾಸ್ತ್ರದಿ | ನಗರನುರುಪಿ ಬಿಟ್ಟನೀತ | ಬಗೆಬಗೆಯ ಜೀವಿಗಳಿಗೆ ಬಿಡದೆ | ಅಗಣಿತ ಭೋಗ ಪ್ರದಾತನೀತ | ಮೃಗಲಾಂಛನದ ಮೊಗನಗೆ ಈತ | ನಿಗಮಾಶ್ರವದಗಧಿಕನೀತಾ 3 ಭಸುವ ರಾವಣ ಮಾಗಧ ಕಶ್ಯಪ | ಅಸುರಗಣಕೆ ವರವಿತ್ತನೀತ | ಪಶುವದನ ಪರಮೇಶ್ವರನೀತ | ವಿಷವ ಭಂಜನಭವ ಶಿವನೀತ | ಬಿಸಿಜ ಸಂಭವ ನಂದನನೀತ | ಅಸಮವೀರ ವೈಷ್ಣವನೀತ | ವಸುಧಿಯೊಳಗೆ ಶರಣ ಜನಕೆ | ವಶವಾಗಿಯಿಪ್ಪ ಉಗ್ರೇಶನೀತಾ 4 ಹೇಮಕೂಟಾದ್ರಿ ನಿಲಯನೀತ | ರಾಮದೇವ ವಾಸವಂದ್ಯ | ಸೋಮವರ್ಣನೀತ ಸಕಲ | ಕಾಮಿತಾರ್ಥವ ಕೊಡುವನೀತ | ಯಾಮ ಯಾಮಕೆ ಮನದೊಳು ನಿಂದು | ಕ್ಷೇಮ ಮಾರ್ಗಕ್ಕೆ ಪ್ರೇರಕÀನೀತ | ರಾಮ ವಿಜಯವಿಠ್ಠಲನಂಘ್ರಿ | ನಾಮನೆನಿಸಿ ಕೊಂಡಾಡುವನೀತಾ5
--------------
ವಿಜಯದಾಸ
ಎಂತು ಗತಿ ಎನಗಾಗುವದೊ ಶ್ರೀ | ಕಾಂತ ನಿನ್ನ ಭಕುತಿಯ ಕಾಣೆ ಪ ಸಂಸಾರ ಎಂಬುದು ಸುಖವೆಂದು ನಾನು | ಹಂಸನಂತೆ ನಲಿಯುತ್ತಲಿದ್ದೆ | ಕಂಸಾರಿ ನಿನ್ನ ನಾಮಸ್ಮರಣೆ ಒಳ್ಳೆ | ವಂಶರ ಕೂಡ ನಲಿಯಲಿಲ್ಲಾ 1 ಪಾತ್ರರ ಕಂಡರ ಪರಿಹಾಸ್ಯ ಕು | ಪಾತ್ರರ ನೋಡಲವರ ಶಿಷ್ಯಾ | ಕ್ಲೇಶ ಎನ್ನ | ಗಾತ್ರಗೋಸುಗ ಪೋಗೆ ಬಲು ತೋಷಾ 2 ವಿರಕ್ತಿ ಕೇಳಲು ತಲೆಶೂಲೆ ವಿ | ಹಾರ ಮಾಡುವಲ್ಲಿ ಅನುಕೂಲೆ | ವಾರಿಜಾಕ್ಷ ನಿನ್ನ ಕಥೆ ಬಿಡುವೆ ಬಹು | ಚಾರುವಾಕರ ಕೂಡ ಸುಖಬಡುವೆ 3 ಕಾಸು ಪ್ರಾಪುತವಾಗಿ ಬಚ್ಚಿಡುವೆ ಅದೆ | ಕಾಸು ಬೇಡಿದರೆ ಪ್ರಾಣವ ಕೊಡುವೆ | ಮೋಸ ಬುರುವದು ಕಾಣೆನಲ್ಲಾ ದು | ರಾಶೆಯಿಂದಲಿ ಬಾಳಿದೆನಲ್ಲಾ 4 ವೈಕುಂಠದಾಸರು ಬರೆ ಕುಗ್ಗುವೆನೊ | ಕುಂಟತನಕೆ ಬಹು ನಲಿದಾಟಾ ಗತಿ | ಉಂಟಾದದಕೆ ಉಚ್ಚಾಟ5 ತಂದೆ ತಾಯಿಗಳಲ್ಲಿ ವಂಚನೆ ಹೀನ | ಮಂದಿಕೂಡಾಪ್ತಾಲೋಚನೆ | ಕುಂದು ನುಡಿದೆ ಸಜ್ಜನರಿಗೆ ಆ | ನಂದ ಬಡಿಸುವೆ ದುರ್ಜನರಿಗೆ 6 ಹೆಂಡತಿ ಮುನಿದರೆ ಬೇಡಿಕೊಂಬೆ ಹರಿ | ಕೊಂಡರು ಮುನಿದರೆ ಪೋಗಲೆಂಬೆ | ಕೊಂಡು ಬಾಹ್ಯನೆ ಪರರವಡಿವೆ | ಪರರ ಕಂಡರೆ ಬೇಡವೆಂದು ನುಡಿವೆ 7 ಮಕ್ಕಳು ಹಸ್ತರೆ ಬಳಲುವೆನೊ ಭೂದೇ | ವಕ್ಕಳು ಹಸ್ತರೆ ನಗುವೆನೊ | ಮುಕ್ತಿಗಾಗುವ ನಾನಾ ಶ್ರವಣ ನೀಚ | ಉಕ್ತಿಗೆ ಮಾಡಿದೆ ಅನುದಿನಾ 8 ಜೀವನಕ್ಕೆ ಬೇಕಾದದೆ ಮಾಣಿದು | ಅಭಾವಾ ಮಾಡೆನು ನೀಚರ ಸೊಲ್ಲು9 ಹರಿ ನಿನ್ನ ಶುಚಿಮಾಡೆ ಹೀನ ನರರ ದೊಂಬಲು ತೆಗಿಯದೆ ಬಿಡೆ | ಅಗ್ರೋದಕ ತಾರೆ ನೀರು | ಹೊರುವೆನೊ ಹಣವೆಂದರೆ ಮಾರೆ 10 ಗಂಡಿಕಿಸಿಲಿ ತೊಳೆಯಲಿ ಮಿಡಿಕಿ ನಾನು | ಅಂಡವಲಿವೆ ಅಶನ ಹುಡುಕಿ | ಅಂಡಜವಾಹನ ನಿನ್ನ ಸೇವೆ ಕೈ | ಕೊಂಡು ಮಾಡದೆ ಪೋದೆ ಹೀಗೆವೆ11 ಗಂಧವ ತೆಗೆ ಎಂದರೆ ಅಳುವೆ | ಬಿದ್ದ | ಮಂದಿರಕೆ ಕದಡುತಳುವೆ | ಒಂದು ತುಲಸಿದಳ ತರಲಾರೆನೆಂದು | ಸಂದಿಗೊಂದಿ ಸುತ್ತಿದೆನೊ ದೊರೆ 12 ಧೂಪಾರತಿ ಏಕಾರುತಿ | ಮೂರ್ತಿ | ಪಾಪಾತಿಶಯದಿಂದಾ ನೋಡಲಿಲ್ಲ ಬಹು | ತಾಪತ್ರಯದಿಂದ ನೊಂದೆನಲ್ಲಾ 13 ಸಿರಿ | ದೇವನಿಗೆ ಯಿತ್ತು ಸುಖಬಟ್ಟು | ಆವಾವ ರುಚಿಗಳ ಭುಂಜಿಸದೆ ನಾನು | ಪಾವನಮತಿಯಾಗದೆ ಪೋದೆ 14 ಎಳೆದುಲಸಿ ನಿರ್ಮಾಲ್ಯವಾಸವಾ || ಬಳಿಯಲ್ಲಿಯಿಟ್ಟು ಕೈವಲ್ಯವಾ | ಘಳಿಸಿಕೊಳ್ಳದೆ ಬಲು ದುರ್ಗಂಧ ಬಂದು | ಭವ ಬಂಧಾ 15 ಹರಿಕಥೆಗೆ ಮೊಗ ತಿರುಹುವೆನೊ | ................................................... ಸ್ಮರಣೆ ಮಾಡುವಲ್ಲಿ ಅತಿ ಹೇಯಾ ದುರಾ | ಚರಿತೆಯ ಮಾಡುವಲ್ಲಿ ಬಲು ನ್ಯಾಯಾ 16 ಹರಿದಾಸರನಪ್ಪಿಕೊಳ್ಳದೆ ಪಾ | ಮರ ಸತಿಯೊಳನಪ್ಪ ತಾ ಪೊಳದೆ | ಧರೆಯೊಳು ನಾನು ನಡಿವಂಥ ಇಂಥಾ | ದುರುಳಾಟಕೇನೆಂಬೆ ಗುಣವಂತಾ 17 ನಿನ್ನಂಘ್ರಿಗೆ ಅಡ್ಡಬೀಳದೆ ತುತ್ತು | ಅನ್ನಕೆ ಎರಗುವೆ ಸೋಲದೆ | ಅನ್ಯಾಯ ಮಾಡುವಲ್ಲಿ ಆನಂದಾ ಸತಿಸ | ತ್ಪುಣ್ಯ ಮಾಡುವಲಿ ನಿಭಂಧಾ 18 ಸಾಧುಗಳೊಡನೆ ತಾಳುವೆ ದ್ವೇಷಾನಿತ್ಯ | ಕ್ರೋಧರ ಕಂಡರೆ ಬಲು ಹರುಷಾ | ಓದನಕೆ ವೇದವನೋದಿ ತಂದು | ವಾದಿಸುವೆನು ಸಭೆಯಲಿ ಕಾದಿ 19 ಸತಿಯಳ ಸಂಬಂಧಿಗಳ ಸಾಕುವೆನೊ ಮಾತಾ | ಪಿತರ ಕಡೆಯವರ ನೂಕುವೆನೊ | ಕರ್ಮ ಮಾಡೋರ ನೋಡಿ ಹೀನ | ವಕ್ರದವರು ಕಂಡು ಬಲು ಪಾಡಿ 20 ಪರಿ ಪರಿ ಹೊಸ | ಕೌತುಕ ಪೇಳೂವೆ ನೋಡಿರಿ | ಶ್ರಾತಾದಿಗಳು ಎಲ್ಲಿ ಧಿಕ್ಕರಿಸಿ ಯಿಂಥ | ಭೌತಿಕ ನೆಚ್ಚಿದೆ ಅನುಕರಿಸಿ 21 ಒಡಿವಿ ಮಾಡಿಸಿ ಮಡದಿಗೆ ಇಡದೆ ಅನ್ಯ | ಮಡದಿಯರಿಗೆ ಧನ ಸೂರೆವಿಡಿದೆ | ಬಡವರ ಕಂಡರೆ ಅಣಕಿಸುವ ಭಾಗ್ಯ | ಪಡದವರಿಗೆ ಬಾಗಿ ನಮಿಸುವೆ 22 ಧರ್ಮಕ್ಕೆ ಅಸೂಯಾ ಬಡುವೆ ಅ | ಧರ್ಮಕೆ ಹಿಗ್ಗಿ ಸುಖವ ಬಡುವೆ | ಷ್ಕರ್ಮಿಗಳ ಕೂಡಾಮಾನತನಾ 23 ವಿಧಿ ನಿಷೇದವನೆಣಿಸದಲೆ ನಾನು | ಉದರ ತುಂಬಿದೆ ಭೀತಿ ಗಣಸದಲೆ | ವದಗಿ ಬೀಳುವ ನರಕದ ಬಾಧೆ ಕೇಳಿ | ಹದುಳಕ್ಕೆ ಮನಮಾಡದೆ ಪೋದೆ 24 ಯಜಮಾನ ನಾನೆಂದು ಪೇಳಿಕೊಂಡು ದೋಷ | ವ್ರಜದಲಿ ಚರಿಸದೆ ದು:ಖವುಂಡು | ಇಂದು | ಸಿಂಧು 25
--------------
ವಿಜಯದಾಸ