ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನಂತ ನರನೆನ್ನಬೇಕೋ ಜಾನಕೀಶನ ಧ್ಯಾನ ಮನದೊಳಿಲ್ಲದವಗೆ ಪ ಸುಕೃತ ಒಡಗೂಡಿ ಮಾನವನಾದದ್ದು ಖೂನವಿನತಿಲ್ಲದೆ ಜ್ಞಾನಶೂನ್ಯನಾಗಿ ಶ್ವಾನನಂದದಿ ಕೂಗಿ ಹೀನಭವಕೆ ಬಿದ್ದು ನರಕಕ್ಹೋಗುವನಿಗೆ 1 ತಾನಾರೆಂಬ ವಿಚಾರವು ಇಲ್ಲದೆ ಏನೇನು ಸುಖವಿಲ್ಲದ್ಹೇಯಸಂಸಾರದ ಕಾನನದೊಳು ಬಿದ್ದು ಕುನ್ನಿಯಂದದಿ ಮಹ ಜಾಣರ ಜರೆಯುತ ಜವಗೀಡಾಗುವನಿಗೆ 2 ಹೇಸಿಪ್ರಪಂಚದ ವಾಸನ್ಹಿಡಿದು ಹಿಂದ ಕ್ಕೇಸೇಸು ಜನಮದಿ ಘಾಸಿಯಾದಂಥಾದ್ದು ಸೋಸಿಲಿಂ ತಿಳಕೊಂಡು ದಾಸಾನುದಾಸರ ದಾಸನಾಗದೆ ಕಾಲಪಾಶಕ್ಹೋಗುವನಿಗೆ 3 ಮಿಥ್ಯೆ ಕಾಣುವುದೆಲ್ಲ ನಿತ್ಯವಲ್ಲೆನ್ನುತ ಸತ್ಯವೃತ್ತಿ ತನ್ನ ಚಿತ್ತದೋಳ್ಬಲಿಸಲು ನಿತ್ಯ ಸುಖವನೀವ ಉತ್ತಮವಾದಂಥ ಹೊತ್ತನು ಕಳಕೊಂಡು ಮೃತ್ಯುವಶನಾಗುವಗೆ 4 ಸುಮನಸಕಲ್ಪದ್ರುಮ ತಂದೆ ಶ್ರೀರಾಮ ನಮಿತ ಚರಣ ಕಂಡು ನಮಿಸಿ ಪ್ರಾರಬ್ದವ ಕ್ರಮದಿ ಗೆಲಿದು ನಿಜ ವಿಮಲಪದ ಪಡೆವ ಸಮಯವನರಿಯದೆ ಯಮಲೋಕ ಸೇರುವಗೆ 5
--------------
ರಾಮದಾಸರು
ನಾರಾಯಣ ಕೃಷ್ಣ ಬೆಳಗಾಯಿತೇಳಯ್ಯ ಮೂರು ಲೋಕಂಗಳಿಗೆ ಮಂಗಳವ ಬೀರಯ್ಯ ಪ ಹರಿಹರಿ ಶ್ರೀನಿಲಯ ಪರವಾಸುದೇವ ಅ.ಪ ಬಂದಿರುವರೈ ಬ್ರಹ್ಮ ರುದ್ರೇಂದ್ರರು ತಂದೆ ತಂದಿರುವರೈ ಮಹನಿಧಿ ಕನಡಿ ಧೇನುಗಳ ನಿಂದು ಗಾನವಮಾಡುತಿರುವರಾನಂದದಿ ಗಂಧರ್ವರಪ್ಸರೆಯರಿಂದು ಕುಣಿದಾಡಿ ಕೂಡಿ 1 ದಾಸರೊಡೆ ತುಂಬುರರು ನಾರದರು ಜಯಜಯ ಶ್ರೀಶನೇ ಕೇಶವ ಗಜವರದ ಎಂದು ಆಶ್ರಯಿಸಿ ಚರಣಕ್ಕೆ ಶರಣೆಂದು ಮಣಿಯವರು ದೋಷನಾಶನ ಲೋಕಕಲ್ಯಾಣ ತ್ರಾಣ 2 ಪತಿವ್ರತಾ ಸ್ತ್ರೀಯರುಗಳತಿಶಯ ಮಡಿಯುಟ್ಟು ಹಿತವಾದ ಹುಗ್ಗಿ ಸಜ್ಜಿಗೆಯ ಗೈದು ಪತಿತಪಾವನ ನಿನಗೆ ದಧ್ಯನ್ನ ನೀಡುವರೊ ಕ್ಷಿತಿನಾಥ ನೀನವನು ತೋಷದಿಂ ಭುಜಿಸೊ 3 ರೋಗರುಜಿನಗಳಳಿದು ಆಯುವೃದ್ಧಿಯದಾಗಿ ಭಾಗವತ ಸಕುಟುಂಬ ಸಂತೋಷಗೂಡಿ ಭಾಗವತ ಭಾರತ ರಾಮಾಯಣಗಳ ಹಾಡಿ ಆಗಲೈ ಆಗಮಾರ್ಚನೆ ಆಲಯಗಳೊಳಗೆ 4 ಕಮಲಲೋಚನ ಕೆಟ್ಟ ಸ್ವಪ್ನ ಫಲವಳಿಸಿ ಯಮಕಂಟವಂ ಕಳೆದು ಭ್ರಮೆಗಳನು ನೀಗಿ ಸುಮನಸರ ಕೂಡಿ ಶ್ರೀಹರಿಯ ಗುಣಗಾನ ಮಾಡಿ ಅಮಿತ ಅಮೃತವುಣಿಸೈ 5 ಕ್ಷುಧ್ರಪಾಕೀ-ಚೀನ ಕೊಬ್ಬಿ ಛದ್ರಿಸುತು ಭದ್ರತೆಯನಾಡೊಳಗಸ್ಥಿರತೆಗೈಯುತ್ತ ಆದ್ರಿಅಂಬುಧಿ ಮಧ್ಯೆ ಭಾರತಿಯ ನಲಿಸುತ್ತ ಮುದ್ರೆಯುಂ ಧ್ವಜವನುಂ ನಿನ್ನವಾಗಿರಿಸೈ 6 ಕಾಲಕಾಲಗಳಲ್ಲಿ ಮಳೆಬಿಡದೆ ಸುರಿದು ಶಾಲಿಸಂತರ ಧಾನ್ಯ ಎಲ್ಲೆಲ್ಲು ಬೆಳೆದು ಮಹಿಷಿ ಶ್ರೀಲೋಲ ಕರುಣಿಸೈ ಕನಕವೃಷ್ಟಿಯನು 7 ಎದುರು ನೋಡುತ ನದಿಯು ಹರಿವುದು ಸಾಗರಕೆ ಮುದದಿಂದ ತಾವರೆಯು ಸೂರ್ಯನನ್ನು ವಿಧಿವಶದಿ ಪಾಪಿಗಳು ಯಮಲೋಕವನ್ನು ಸುಧೆಸವಿಯೆ ಭಕ್ತರು ಪರಮಪದವನ್ನು 8 ಮಕ್ಕಳಿಲ್ಲದ ಜನರು ಮಕ್ಕಳನು ಹಡೆದು ಲಕ್ಷ್ಮಿಯೊಲವನು ಹಾಡಿ ಜನರೆಲ್ಲ ದುಡಿದು ಭಕ್ತರಾಗುತ ಸರ್ವ ವಣಿಗೆಗಳು ನಡೆದು ಮುಕ್ತರಪ್ಪಂತೆಲ್ಲರ ಮಾಡು ಜಾಜೀಶ 9
--------------
ಶಾಮಶರ್ಮರು
ಯಾಕೆ ಕೆಡುವೆ ಖೋಡಿ ಮನವೆ ಪ ಲೋಕದಿರವ ನೋಡಿ ನೂಕುನುಗ್ಗಾಗಿ ಕಾಕುಗುಣದಿ ಯಮಲೋಕ ಪಡೆವುದವಲೋಕನ ಮಾಡಿ ಅ.ಪ ಭ್ರಮಿಸಬಾರದ ಭ್ರಮಿಸಿ ಮನಸೆ ಕ್ರಮಗೆಟ್ಟಾಚರಿಸಿ ಶಮೆದಮೆ ಅರಿಯದೆ ಸುಮನರ ನೋಡದೆ ಸುಮ್ಮನಳಿವೆ ಈ ಸಮಯ ಸಿಗುವುದೇ1 ತಂತು ತಿಳಿಯದ್ಹೋದಿ ಜಗತ್ತಿನ ಚಿಂತನೆಗೊಳಗಾದಿ ಸಂತಸ ವಹಿಸದೆ ಸಂತರ ತಿಳಿಯದೆ ಅಂತರವರಿಯದೆ ಅಂತ್ಯಕೀಡಾದಿ2 ಪಾಮರ ನೀನಾದಿ ನಾಶನ ತಾಮಸ ಅಳಿದ್ಹೋದಿ ಸ್ವಾಮಿಯೊಳಾಡದೆ ಕ್ಷೇಮವ ಪಡೆಯದೆ ನಾಮಭಜಿಸಿ ಶ್ರೀರಾಮನ ಕೂಡದೆ 3
--------------
ರಾಮದಾಸರು