ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇರಬೇಕು ನಿಂದಕರು ಸಜ್ಜನರಿಗೆ ಪ ದುರಿತ ರಾಶಿಗಳ ಪರಿಹರಿಸಲೋಸುಗ ಅ.ಪ. ಕಲುಷ ಕರ್ಮವ ಮಾಡೆ ಕಳೆವರಿನ್ನಾರೆಂದು ಕಮಲಭವನು ತಿಳಿದು ನಿರ್ಮಿಸಿದವನಿಯೊಳಗೆ ನಿಂದಕರ ಕಲುಷರನ ಮಾಡಿ ತನ್ನವರ ಸಲಹುವ 1 ದಿವಿಜರಿಳೆಯೊಳಗೆ ಜನ್ಮಗಳೊಲ್ಲೆವೆಂದಬ್ಜ ಭವಗೆ ಮೊರೆಯಿಡಲು ವರವಿತ್ತನಂದು ಕರ್ಮ ಮಾಡಿದರು ಸರಿಯೆತ ನ್ನವನೆನಿಸದವಗೆ ತಜ್ಜನ್ಯ ಫಲ ಬರಲೆಂದು 2 ಮಾನವಾಧಮ ಜನರು ನೋಡಿ ಸಹಿಸದಲೆ ಹೀನ ಮತಿಯಿಂದ ಮಾತುಗಳಾಡಲು ಭಾನು ಮಂಡಲಕೆ ಮೊಗವೆತ್ತಿ ಉಗುಳಿದರೆ ನ್ನಾನನವೆ ತೊಯ್ವುದಲ್ಲದರ್ಕಗೇನಪಮಾನ 3 ಮಲವ ತೊಳೆವಳು ತಾಯಿ ಕೈಗಳಿಂದಲಿ ನಿತ್ಯ ತೊಳೆವ ನಿಂದಕ ತನ್ನ ನಾಲಗಿಂದ ಬಲು ಮಿತ್ರನಿವನೆಂದು ಕರೆದು ಮನ್ನಿಸಬೇಕು ಹಲವು ಮಹ ಪಾಪಗಳ ಕಳೆದು ಪುಣ್ಯವನೀವ 4 ಅನುಭವಿಪ ದುಷ್ಕರ್ಮಗಳ ಜನ್ಯ ಫಲವು ತ ನ್ನಣುಗರಿಗೆ ಅಪವಾದ ರೂಪದಿಂದ ಉಣಿಸಿ ಮುಕ್ತರ ಮಾಡಿ ಸಂತೈಪ ನರಕ ಯಾ ತನೆಗಳವರಿಗೆ ಇಲ್ಲದುದರಿಂದ ಎಂದೆಂದೂ 5 ಮನುಜಾಧಮರಿಗೆ ಹರಿದಾಸರಲಿ ದ್ವೇಷ ವೆನಿಪ ಸಾಧನವೆ ನಿಸ್ಸಂದೇಹವು ಅನುತಾಪ ಬಿಡದೆ ಹರುಷಿತರಾಗಿ ನಿಷ್ಪ್ರಯೋ ಜನದಿ ಹರಿಪದಾಬ್ಜ ಭಜಿಪ ಭಜಕರಿಗೆ 6 ಲೋಕದೊಳು ನಿರ್ಮಿಸಿದನಿರ್ವರನು ಹರಿ ತಾನು ಭೂ ಕೋವಿದರ ಮಲವು ಪೋಗಲೆಂದು ಶ್ರೀ ಕರಾರ್ಚಿತ ಜಗನ್ನಾಥವಿಠಲ ಗ್ರಾಮ ಸೂಕರರು ನಿಂದಕರು ಕರುಣಾಳು ಇಳೆಯೊಳಗೆ 7
--------------
ಜಗನ್ನಾಥದಾಸರು
ನೀನೆ ನಾನೆಂಬುವ ಮಾನವಾಧಮನನ್ನು ಏನು ಮಾಡಲು ಬೇಕು ನಾನರಿಯೆನೊ ರಂಗ ಪ ದಾನವಾರಿಯೆ ಎನ್ನನೇನೆಂದರೂ ಅನಲಿ ನಾ ನಿನ್ನ ನಿಂದಿಸುವರಾನನವ ನೋಡೆನೋಅ.ಪ. ಆನೆಕಾಲಿಗೆ ಕಟ್ಟಿ ಬೀದಿಯೊಳೆಳೆಸಲೆ ಕಾನನಕೆ ಕೊಂಡೊಯ್ದು ಕೈಕಾಲು ಕಡಿಸಲೆ ಮೀನು ಮೊಸಳೆಗಳಿರುವ ಮಡುವೀಲಿ ನೂಕಿಸಲೆ ನೇಣುಗಳಿಂದಲಿ ಬಿಗಿದು ಶೂಲಕೇರಿಸಲೆ 1 ಜೀವದೊರಸೆ ಅವನ ಹೂಳಿಸಿರೆಂದ್ಹೇಳಲೆ ಹಾವುಗಳ ಹಿಂಡಿನೊಳು ನೂಕಿರೆಂದ್ಹೇಳಲೆ ನೋವು ಬಹಳಾಗಲು ಸೂಜಿಗಳಿಂದಿರಿಸಲೆ ಪಾವಕನೊಳು ಕಾಲ್ಕಟ್ಟಿ ಎತ್ತಿ ಹಾಕಿಸಲೇ 2 ಗಿರಿಯ ತುದಿಯಲಿ ನಿಲಿಸಿ ಜರಿಯೊಳಗೆ ನೂಕಿಸಲೆ ಭರದಿ ಕಣ್ಕಟ್ಟಿ ಕಾದತೈಲದೊಳಿಡಿಸಲೆ ಸಿರಿಹರಿಯೆ ಪೇಳೆಂದು ರಂಗೇಶವಿಠಲನೊಳು ತರಣಿನಂದನ ತಾನು ಬಿನ್ನೈಸಿದನಂದು 3
--------------
ರಂಗೇಶವಿಠಲದಾಸರು
ಶ್ರೀನಿವಾಸ ಸುಜನೋದ್ಧಾರ ಏನು ತಾತ್ಸಾರ ನಾನು ನಿನ್ನ ದಾಸನೆಂದು ಮಾನವರು ನುಡಿದ ಮೇಲೆ ಪ. ಪುಟ್ಟಿದಾಕ್ಷಣಾದಿಯಾಗಿ ದುಷ್ಟಸಂಗಕೊಳಗಾಗಿ ನಷ್ಟಪ್ರಜ್ಞೆಯಿಂದ ಬಹು ಕಷ್ಟಿಯಾದೆನು ಕೃಷ್ಣ ಶಬ್ದ ವಾಚ್ಯಪರಮೇಷ್ಠಿ ಜನಕ ನಿನ್ನ ಮನ ಮುಟ್ಟಿ ಭಜಿಸದೆ ಬಯಲೆಷ್ಟವ ಬಯಸುವೆನಲ್ಲೊ 1 ದಾನಧರ್ಮ ಜಪತಪ ಮೌನ ಮೊದಲಾದ ಸ- ತ್ಸಾಧನ ಹೀನನಾದರು ನಿನ್ನಾನುರಾಗದಿ ಮನಮುಟ್ಟಿ ಕ್ಞಣವಾದರು ಧ್ಯಾನಿಸಲು ಸಕಲವಂದ್ಯ ಮುನಿಗಮ್ಯ ಪದವನೀವಾತನು ನೀನೆಂದೊಂದೆ ತಿಳಿದೆ 2 ಮನವಚನ ಕಾಯಕಾದನುದಿನ ಕೃತವಾದ ಘನ ಪಾಪಂಗಳಿಗೆ ನಾ ಕೊನೆಗಾಣೆನು ದನುಜಾರಿ ರಾಮ ಅನಿಮಿತ್ತಬಂಧು ಎಂಬ ಘನತೆ ತೋರಿಸಿ ನಿನ್ನ ತನಯನೆಂದೆಂನ ಸಲಹೊ 3 ವೀರವೇದೋದ್ಧಾರ ವರಮಂದರಧರ ನರ ಹರಿಕುಬ್ಜಾಕಾರ ಪೃಥ್ವೀಭಾರವಾರಕ ವಾರುಧಿ ಬಂಧಕಯದು ವೀರ ತ್ರಿಪುರ ಸ್ಮರ ಹರನಿಂದ ತರಿಸಿದ ತುರಗವೇರಿದ ಧೀರ 4 ಮಂದಮತಿಯಾದ ಎನ್ನ ಬಂಧುವಾಗಿ ಕೈಯ ಪಿಡಿದು ಮುಂದು ಗಾಣಿಸುವೆನೆಂದು ಹಿಂದೆ ರಕ್ಷಿಸಿ ಇಂದು ಎನ್ನ ಕುಂದನೆಣಿಸಿ ತಂದೆ ನೀನುಪೇಕ್ಷಿಸಲು ಮುಂದೆ ಕಾಯ್ವರಾರೊ ಕರುಣಾಸಿಂಧು ಅನಿಮಿತ್ತ ಬಂಧು 5 ಮಾನಗೇಡಿನಿಂದ ದ್ವೇಷಿ ಮಾನವಾಧಮರ ಮುಂದೆ ಶ್ವಾನಕಿಂತ ಕಡೆಯಾಗಿನ್ನೇನು ಮಾಡಲೊ ನೀನೆ ಗತಿಯೆಂಬ ಮನೋಧ್ಯಾನದಿಂದ ಬಂದೆ ನಿಂದು ಕಾನನದ ಶಿಶುವಿದೆಂದು ಮಾನಿಸಿ ರಕ್ಷಿಸೊ ತಂದೆ 6 ಘಾಸಿಗೊಳಿಸುತೀ ಆಶಾಪಾಶದಿಂದ ಎನ್ನ ಬಿಡಿಸಿ ದಾಸರ ದಾಸ್ಯವನಿತ್ತು ಪೋಷಿಸೆನ್ನುತ ಮೀಸಲಾಗಿಹೆನು ಶ್ರೀನಿವಾಸ ಬೇಗ ಸಲಹೊ ಬಂದು 7
--------------
ತುಪಾಕಿ ವೆಂಕಟರಮಣಾಚಾರ್ಯ