ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಈಶನೀನೆ ದಯಾಸಿಂಧು ದಾಸಜನರ ಪ್ರೇಮಬಂಧು ಪ ಹೇವವಿಲ್ಲದೆ ಕಾಸಾರಕೈದಿ ಬೋವನಾಗಿ ಬಂಡಿ ಹೊಡಿದಿ ಕೇವಲ ಮಾನಕಾಯ್ದಿ ಸತಿಯ ಸೇವಕಜನರ ಬೆಂಬಲನೆ 1 ನಿನ್ನ ಭಜಿಸಿ ಬೇಡುವವರ ಭಿನ್ನವಿಲ್ಲದೆ ದಯದಿ ಒದಗಿ ಸಾವುಹುಟ್ಟು ಬಂಧಗೆಲ್ಲಿಸಿ ಧನ್ಯರೆನಿಸಿ ಸಲಹುವಿ 2 ಕಾಮಿತಾರ್ಥಪೂರ್ಣ ಭಕ್ತ ಕಾಮಧೇನು ಕಲ್ಪತರು ಸ್ವಾಮಿ ಶ್ರೀರಾಮ ನಿಮ್ಮ ವಿಮಲ ನಾಮ ಎನ್ನ ಜಿಹ್ವೆಗೆ ನೀಡೊ 3
--------------
ರಾಮದಾಸರು
ಎಲ್ಲಿಗೆ ಪೋದಪೆ ಮಲ್ಲಿಮರ್ಧನ ಕೃಷ್ಣ ಗೊಲ್ಲಗೋಪಾಲನೀ ಬಲ್ಲೆನಾನಿದನು ಪ. ದೇವಕಿಯುದರದಿ ಜನಿಸಿ ಯಶೋದೆಯ ಕುವರನೆಂದೆನಿಸಿ ಮೆರೆದಂಥ ಸಾಹಸಿ 1 ಮಧುರೆಯೊಳುದಿಸಿ ನಂದವ್ರಜದಿ ಗೋವ್ಗಳ ಕಾಯ್ದು ಮದಿಸಿದಸುರರ ಸದೆವಡೆದ ಧೀರ 2 ಮಾತೆಯ ಮನಕಂದು ಪ್ರೀತಿಪಡಿಸಲೆಂದು ಮಾತುಲನನೆ ಕೊಂದು ತಾತಗೆ ನೆಲವಿತ್ತ 3 ರುಕ್ಮನ ಭಂಗಿಸಿ ರುಕ್ಮಿಣಿಯನುವರಿಸಿ ಚಕ್ರಧರ ಕೃಷ್ಣ 4 ತರುಣಿಯ ಮಾನಕಾಯ್ದು ನರಗೆ ಸಾರಥಿಯಾಗಿ ಧರೆಯಭಾರವೆಲ್ಲ ಪರಿದುಬಂದ ಮಲ್ಲ 5 ವರಶೇಷಗಿರಿದೊರೆ ನಿನಗೆ ನಾ ಹೊರೆಯೆ ಕರಿ ಧ್ರುವರನೆ ಪೊರೆದ ವರದನೆಂಬುದ ಮರೆಯೆ 6
--------------
ನಂಜನಗೂಡು ತಿರುಮಲಾಂಬಾ
ನೀನೆ ದಯಾಸಿಂಧು ದೀನಜನರ ಬಂಧು ಧ್ಯಾನಿಪ ಭಕುತರ ಪ್ರಾಣಪದಕನೆ ರಂಗ ಪ ತೊಳಲಿಬಳಲುವ ಮಾನರಕ್ಷಿಸು ಜಾನಕೀಶ ಅ.ಪ ಎಷ್ಟುಪರಿ ಅನೃತವನಾಡಿದೆ ಈ ಹೊಟ್ಟೆಗಾಗಿ ಕೆಟ್ಟ ಕೃತ್ಯಮಾಡಿ ನಾ ದಣಿದೆ ಇ ನ್ನೆಷ್ಟುದಿನ ಈ ದುಷ್ಟ ಬವಣೆ ಎನಗೆ ಸ್ಥಿರವಿದೇ ಭ್ರಷ್ಟನಾಗುಳಿದೆ ಕೊಟ್ಟ ಒಡೆಯರು ಬಿಡದೆ ಕಟ್ಟಿಕಾಡ್ವರು ನಿಲ್ಲಗೊಡದೆ ಇಷ್ಟ ಸತಿಸುತರ್ಹೊಟ್ಟೆಗಿಲ್ಲೆಂದಟ್ಟಿ ಬಡಿವರು ಬಿಟ್ಟುಬಿಡದೆ ಬಿಟ್ಟಿದುಡಿದೆಷ್ಟು ಬಳಲಲಿ ಸೃಷ್ಟಿಗೀಶ ದಯಾದೃಷ್ಟಿಯಿಂ ನೋಡೋ ಕೃಷ್ಣ 1 ಮೋಸಹೋದೆ ಬಲು ಭ್ರಮಿಸದ್ದನು ಭ್ರಮಿಸಿ ತುಸು ಕರುಣವಿಲ್ಲದೆ ಘಾಸಿಯಾದೆ ಮಾತೆಪಿತರ ಮನ ನೋಯ್ಸಿ ವ್ಯಸನಕೂಪದಿ ವಾಸಮಾಡಿದೆ ಕಾಸುಹಣಬಯಸಿ ಅಧಮಸುಖನೆನೆಸಿ ಆಸೆÀಯೆಂಬುವ ಪಾಶ ಎನ್ನನು ನಾಶಮಾಡಿತು ಮುಸುರೆಯನು ಕಟ್ಟಿ ಭಾಷೆ ಕೆಡಿಸಿ ದೋಷಕೆಳಸಿತು ದೋಷ ಗಣಿಸದೆ ಶ್ರೀನಿವಾಸ ಜಗದೀಶ ಕೇಶ 2 ಪಾಪಲೋಪನೆ ಶ್ರೀಶ ಶ್ರೀರಾಮ ಕೃಪೆಯಿಂದ ನೋಡೊ ಪಾಪಿಯಿವನೆಂದು ಮರೆಯದಿರು ಪ್ರೇಮ ಹೇ ಪರಮನೆನ್ನಯ ಪಾಪರಾಶಿಯ ಕಳೆದುಕೊಡಲಿ ಕ್ಷೇಮ ಹೇ ಪರಬ್ರಹ್ಮ ಸ್ಥಾಪಿಸೆನ್ನಯ ಉದರಕಮಲದಿ ಶ್ರೀಪತಿಯೆ ನಿಮ್ಮ ನಾಮ ಅಮೃತ ತಾಪಬಿಡಿಸದೆ ಗಜವ ಸಲಹಿದೆ ಶಾಪದಿಂ ಪೊರೆದಂಬರೀಷನ ದ್ರುಪದನುಜಳ ಮಾನಕಾಯ್ದಾಪತ್ತು ಬಾಂಧವ ಭಕ್ತವತ್ಸಲ ದೇವ 3
--------------
ರಾಮದಾಸರು
ಮಂಡೆಬಾಗಿಕರವಮುಗಿವೆ ಕಾಯೊ ಹರಿಹರಿ |ಪುಂಡರೀಕನಯನ ಮರೆಯಬೇಡವೊ ಹರಿಹರಿ ಪಕರಿವರದನೆ ಸರ್ವಾಂತರ್ಯಾಮಿ ಹರಿಹರಿ |ಕರುಣಾಸಾಂದ್ರ ತರುಣಿ ಮಾನಕಾಯ್ದ ಹರಿಹರಿ ||ಶರಧಿಸುತೆಯ ರಮಣ ದೀನಬಂಧು ಹರಿಹರಿ |ಅರಿಯೆ ನಿನ್ನನುಳಿದು ಕಾಯ್ವರನ್ನು ಹರಿಹರಿ 1ಮೀನನಾಗಿ ವೇದಗಳನು ತಂದೆಹರಿಹರಿ|ಆ ನಗವನು ಪೊತ್ತು ಅಮೃತವೆರೆದೆಹರಿಹರಿ||ನೀನೇ ವರಾಹನಾಗಿಯವನಿಯ ತಂದೆಹರಿಹರಿ|ದಾನವನುದರವ ಬಗೆದು ಅಂದುಹರಿಹರಿ 2ಚಿಕ್ಕ ರೂಪದಿಂದ ಬಲಿಯ ತುಳಿದೆಹರಿಹರಿ|ಸೊಕ್ಕಿದರಸುಗಳನು ಸವರಿಬಿಟ್ಟೆಹರಿಹರಿ||ರಕ್ಕಸರನು ಕೊಂದು ಸತಿಯ ತಂದೆಹರಿಹರಿ|ಅಕ್ಕರದಲಿ ಪಾರಿಜಾತ ತಂದೆಹರಿಹರಿ3ಅಂಬರವನು ತೊರೆದೆ ಬೌದ್ಧನಾಗಿ ಹರಿಹರಿ |ಕುಂಭಿಣಿಯೊಳು ಕುದುರೆಯೇರಿ ಮೆರೆದೆಹರಿಹರಿ||ಶಂಬರಾಂ ಜನಕ ಧರ್ಮತನಯಹರಿಹರಿ|ಅಂಬುಜಾಸನಾದಿ ದಿವಿಜವಂದ್ಯಹರಿಹರಿ4ಶೌರಿರಘುಜ ಮುನಿಜ ಪ್ರಾಣೇಶ ವಿಠಲಹರಿಹರಿ|ಸಾರಿದ ಶರಣರಿಗೆ ಕಲ್ಪತರುವೆಹರಿಹರಿ||ಘೋರದುರಿತವನಕೆ ಧನಂಜಯನೆ ಹರಿಹರಿ |ಭಾರನಿನ್ನದೆವೆ ಹೇಳಲ್ಯಾಕೆಹರಿಹರಿ 5
--------------
ಪ್ರಾಣೇಶದಾಸರು
ರಂಗನೊಲಿದ ನಮ್ಮ ಕೃಷ್ಣನೊಲಿದ |ಅಂಗನೆ ದ್ರೌಪದಿಗೆ ಅಕ್ಷಯವಸ್ತ್ರವನಿತ್ತುಪಕರಿಯಪುರದ ನಗರದಲ್ಲಿ ಕೌರವರು ಪಾಂಡವರು |ಧರೆಯನೊಡ್ಡಿ ಲೆತ್ತವಿಡಿದು ಜೂಜನಾಡಲು ||ಪರಮಪಾಪಿ ಶಕುನಿ ತಾನು ಪಾಸಿನೊಳಗೆ ಪೊಕ್ಕಿರಲು |ಧರುಮರಾಯ ಧಾರಿಣಿ - ದ್ರೌಪದಿಯ ಸೋತನು 1ಮುದ್ದುಮೊಗದ ದ್ರೌಪದಿಯ ಮುಂದೆಮಾಡಿ ತನ್ನಿರೆಂದು |ತಿದ್ದಿ ತನ್ನ ಮನ್ನೆಯರಿಗೆ ತಿಳಿಯಹೇಳಿದ ||ಮುದ್ರೆಮನ್ನೆಯರು ಬಂದು ದ್ರೌಪದಿಯ ಮುಂದೆ ನಿಂತು |ಬುದ್ಧಿಯಿಂದಲೆಲ್ಲವನು ಬಿನ್ನಹಮಾಡಲು 2ಅಮ್ಮ ಕೇಳೆ ಅರಸುಗಳು ಅಚ್ಚ ಪಗಡೆ ಪಂಥವಾಡಿ |ಹೆಮ್ಮೆಯಿಂದ ಜೂಜಿಗಿಟ್ಟು ಲೆತ್ತವಾಡಲು ||ಧರ್ಮರಾಯ ಸೋತನೆಂದು ಸತ್ಯವಚನಿ ಕೌರವಂಗೆ |ನಿಮ್ಮ ನಿಜದಿ ಸೇರಿ ಆಗ ಕೊಟ್ಟರೆಂದರು 3ಪಟ್ಟಪದವಿ ಅವರಿಗಾಗಿ ಬಡವರಾಗಿ ಇರುವೆವೆಂದರೆ |ಕಿಟ್ಟ ಪಗಡೆ ಪಂಥ ಜೂಜಿದೆಲ್ಲಿ ಒದಗಿತು ? ||ದುಷ್ಟ ಕೌರವನು ಎನ್ನ ಲಜ್ಜೆ - ನಾಚಿಕೆಯ ಕೊಂಡು |ಭ್ರಷ್ಟ ಮಾಡುವನು ಎಂದು ಬಳಲಿ ದ್ರೌಪದಿ 4ಬಾಗಿ ಬಳುಕಿ ಬೆದರಿ ಬಿಕ್ಕಿ ಕಣ್ಣ ನೀರನುದುರಿಸುತಲಿ |ಮಾಗಿಯ ಕೋಗಿಲೆಯಂತೆಕಾಯ ಒಲೆಯುತ ||ಆಗ ಕೃಷ್ಣನಂಘ್ರಿಗಳನು ಅಂತರಂಗದಲಿ ನೆನೆದು |ಸಾಗಿಸಾಗಿ ಹೆಜ್ಜೆ ಇಡುತ ಸಭೆಗೆ ಬಂದಳು 5ವೀರಕರ್ಣ ಅಶ್ವತ್ಥಾಮ ವಿದುರ ಶಲ್ಯ ಭಗದತ್ತರು |ಕ್ರೂರ ಕೌರವ ದುಃಶಾಸನ ಗುರುಹಿರಿಯರು ||ಸಾರುತಿಪ್ಪ ಭಟರು ಪರಿವಾರ ರಾವುತರ ಕಂಡು |ಧಾರಿಣಿಗೆ ಮುಖವ ಮಾಡಿ ನಾಚಿನಿಂತಳು 6ಚೆಂದದಿಂದ ದುರ್ಯೋಧನ ಚದುರಿ ದ್ರೌಪದಿಯ ಕಂಡು |ಮುಂದರಿಯದೆ ಮುಗುಳುನಗೆಯ ಮಾತನಾಡಿದ ||ಅಂದು ಸ್ವಯಂವರದಲ್ಲಿ ಐವರಿಗೆ ಆದ ಬಾಲೆ |ಇಂದು ಎನ್ನ ಪಟ್ಟದರಸಿಗೊಪ್ಪಿದೆಯೆಂದನು7ಮಲ್ಲಿಗೆಯನು ಮುಡಿಯೆ ನಾರಿ ಮುದ್ದುಮೊಗದ ಒಯ್ಯಾರಿಚೆಲ್ಲೆಗಂಗಳ ದ್ರೌಪದಿಯೇ ಬಾರೆ ಎಂದನು ||ಬಿಲ್ಲು ಎತ್ತಲಾರದವನೆ ಬಂಡಣ ಕಾದದಿದ್ದವನೇ |ಹಲ್ಲುಕೀಳುವರೈವರು ಬೇಡವೆಂದಳು 8ಬಟ್ಟೆಬಡಕರೈವರಿಗೆ ಮಿತ್ರೆಯಾಗುವುದು ಸಲ್ಲ |ಪಟ್ಟಿಮಂಚಕೊಪ್ಪುವಂತ ಬಾರೆ ಎಂದನು ||ಕೆಟ್ಟಮಾತನಾಡದಿರೊ ಕ್ರೋಧದಿಂದ ನೋಡದಿರೊ |ರಟ್ಟೆಕೀಳುವರೈವರು ಬೇಡವೆಂದಳು 9ಅಡವಿತಿರುಕರೈವರಿಗೆ ಮಡದಿಯಾಗುವುದು ಸಲ್ಲ |ತೊಡೆಯ ಮೇಲೆ ಒಪ್ಪುವಂತೆ ಬಾರೆ ಎಂದನು ||ಬೆಡಗುಮಾತನಾಡದಿರೊ ಭೀಮಸೇನನ ಗದೆಯು ನಿನ್ನ |ತೊಡೆಯ ಮೇಲೆ ಒಪ್ಪುವದು ಬೇಡವೆಂದಳು 10ಅಚ್ಚ ಪೊಂಬಣ್ಣದ ಬೊಂಬೆ ಆನೆಯಂತೆ ನಡೆವ ರಂಭೆ |ಅಚ್ಚ ಮುತ್ತಿನಂತೆ ಬಿಂಬೆ ಬಾರೆ ಎಂದನು ||ಹೆಚ್ಚು - ಕುಂದನಾಡದಿರೊ ಪರರ ಹೆಣ್ಣ ನೋಡಿದಿರೊ |ಚುಚ್ಚಿ ಹಾಕುವರೈವರು ಬೇಡವೆಂದಳು 11ಎಷ್ಟುಬಿಂಕ - ಬಡಿವಾರವು ಹೆಣ್ಣ ಬಾಲೆಗಿವಳಿಗೆಂದು |ಸಿಟ್ಟಿನಿಂದ ದುರ್ಯೋಧನ ಸಾರಿ ಕೋಪಿಸಿ ||ಉಟ್ಟ ಸೀರೆ ಸೆಳೆಯಿರಿವಳಉಬ್ಬು ಕೊಬ್ಬು ತಗ್ಗಲೆಂದು |ದೃಷ್ಟಿಯಿಂದ ದುಃಶಾಸಗೆ ಸನ್ನೆ ಮಾಡಿದ 12ದುರುಳ ದುಃಶಾಸನ ಬಂದು ದ್ರೌಪದಿಯ ಮುಂದೆ ನಿಂತು |ಕರವ ಪಿಡಿದು ಸೆರಗಹಿಡಿದು ನಿರಿಯ ಸೆಳೆಯಲು ||ಮರುಳು ಆಗದಿರೋ ನಿನ್ನ ರಕ್ತದೊಳಗೆ ಮುಡಿಯನದ್ದಿ |ಕರುಳ ದಂಡೆಯನ್ನೆ ಮಾಡಿ ಮುಡಿವೆನೆಂದಳು 13ಗುಲ್ಲುಗಂಟಿ ಹೆಣ್ಣೆ ನಿನ್ನ ಕಾಡಿ ಬಳಲಿಸುವೆನು ಎಂದು |ಗಲ್ಲದಲ್ಲಿ ಕೈಯನಿಕ್ಕಿ ನಿರಿಯ ಸೆಳೆಯಲು ||ನಿಲ್ಲೊ ನಿಲ್ಲೊ ಪಾಪಿ ನಿನ್ನ ನಾಲಗೆ ಎರಡಾಗಿ ಸೀಳಿ |ಪಲ್ಲಿನಲ್ಲಿ ಕೇಶ ಹಿಕ್ಕಿಕೊಂಬೆನೆಂದಳು 14ಬೆನ್ನಿನಲಿ ಪೆಟ್ಟನಿಕ್ಕಿ ಭಂಡುಮಾಡುವೆನು ಎಂದು |ಕೆನ್ನೆಯಲಿ ಕೈಯನಿಕ್ಕಿ ನಿರಿಯ ಸೆಳೆಯಲು ||ರನ್ನೆ ವೀರಬೊಬ್ಬೆಯಿಕ್ಕಿ ರಭಸದಿಂದ ಸಾರುತಲಿ |ಪನ್ನಗಶಯನ ಕೃಷ್ಣ ಕೃಷ್ಣ ಕಾಯೊ ಎಂದಳು 15ಮಚ್ಚ ಕೂರ್ಮವರಹ ಕಾಯೊ, ಮುದ್ದು ನಾರಸಿಂಹ ಕಾಯೊ |ಹೆಚ್ಚಿನ ವಾಮನನೆ ಕಾಯೊಭಾರ್ಗವ ಕಾಯೊ ||ಅಚ್ಯುತ ರಾಮಕೃಷ್ಣ ಕಾಯೊ ಬೌದ್ಧ ಕಲ್ಕಿರೂಪ ಕಾಯೊ |ಸಚ್ಚಿದಾನಂದ ಸ್ವಾಮಿ ಕಾಯೊ ಎಂದಳು16ಸಜ್ಜನರ ಪ್ರಿಯನೆ ಕಾಯೊ ಸಾಧುರಕ್ಷಕನೆ ಕಾಯೊ |ನಿರ್ಜರವಂದಿತನೆ ಕಾಯೊ ನರಹರಿ ಕಾಯೊ |ಅರ್ಜುನನ ಸಖನೆ ಕಾಯೊ ಆನತಪಾಲಕನೆ ಕಾಯೊ |ಲಜ್ಜೆ - ನಾಚಿಕೆಯ ಕಾಯೊ ಸ್ವಾಮಿ ಎಂದಳು 17ಸಿಂಧು ಸಾಗರದ ಶಯನ ದ್ರೌಪದಿಯ ಮೊರೆಯಕೇಳಿ |ಅಂದು ಉಟ್ಟ ವಸ್ತ್ರಗಳುಅಕ್ಷಯ ವೆಂದನು||ಒಂದು ಎರಡು ಮೂರು ನಾಲ್ಕು ಕೋಟ್ಯಸಂಖ್ಯ ಸೀರೆಗಳು |ನೊಂದು ಬೆಂದು ದುಃಶಾಸನು ನಾಚಿಕುಳಿತನು 18ನೋಡಿದರು ದ್ರೌಪದಿಯ ಮಾನರಕ್ಷ ಲೀಲೆಗಳನು |ಮಾಡಿದರು ಮಾಧವನ ಮುದ್ದು ಸ್ತೋತ್ರವ ||ಮೂಢ ಕೌರವನ ಕೂಡಮಾನಿನಿ ದ್ರೌಪದಿಯು ಪಂಥ - |ವಾಡಿ ತನ್ನ ಪತಿಗಳೈವರನ್ನು ಗೆಲಿದಳು19ಕೇಶಮುಡಿಗಳನ್ನಕಟ್ಟಿ ಕ್ಯೆಯಕಾಲಮಣ್ಣನೊರಸಿ |ಸಾಸಿರನಾಮದ ಕೃಷ್ಣನು ಸುರರ ಪಾಲಿಪ |ವಾಸಿಯುಳ್ಳ ಕೃಷ್ಣ ಎನ್ನ ವಹಿಸಿ ಮಾನಕಾಯ್ದನೆಂದು | ಸಂತೋಷದಿಂದ ದ್ರೌಪದಿಯು ಮನೆಗೆ ಬಂದಳು 20ಇಂತು ಆ ದ್ರೌಪದಿಯ ಮಾನರಕ್ಷ ಲೀಲೆಗಳನು |ಸಂತತದಲಿ ಹಾಕಿಕೇಳಿ ನಲಿವ ಜನರಿಗೆ |ಸಂತಾನ ಸೌಭಾಗ್ಯ ಸಕಲಭೀಷ್ಟೆಗಳನು ಕೊಡುವ |ಕಂತು ಜನಕ ನಮ್ಮ ಪುರಂದರವಿಠಲನು21
--------------
ಪುರಂದರದಾಸರು