ಒಟ್ಟು 7 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀವೇಂಕಟೇಶ ಸುಪ್ರಭಾತ ಶ್ರೀವೆಂಕಟೇಶಂಗೆ ಜಯ ಸುಪ್ರಭಾತ ದೇವಾದಿದೇವಂಗೆ ನವಸುಪ್ರಭಾತ ಪ ಪಾವನ ಶರೀರಂಗೆ ಜಯ ಸುಪ್ರಭಾತ ದೇವಪರಮಾತ್ಮಂಗೆ ನವಸುಪ್ರಭಾತ ಅ.ಪ ಅಂದು ಕೌಸಲ್ಯೆಯಣುಗ ರಾಮಾ ಏಳು ಎಂದಿನಂತೆ ಆಹ್ನಿಕವ ಮಾಡೆಂದು ನುಡಿಯಾ ಮುಂದೆ ವಿಶ್ವಾಮಿತ್ರ ಮುನಿ ರಾಮಭದ್ರಂಗೆ ಮಂದಹಾಸದಿ ಪೇಳ್ದ ಸರಯೂಬಳಿಯಲ್ಲಿ 1 ಎದ್ದೇಳು ಗೊವಿಂದ ಗರುಡಧ್ವಜಸ್ವಾಮಿ ಉದ್ಧರಿಸ ಬೇಕಯ್ಯ ಕರುಣಾಂತರಂಗ ಎದ್ದೇಳು ಚೈತನ್ಯ ಪುಣ್ಯದಾತ [ಎದ್ದೇಳು ಕಮಲಾಕಾಂತರಂಗ] 2 ಮಧುಕೈಟಭಾರಿಯಾ ವಕ್ಷಸ್ಥಲದಲಿ ನಿಂದ ಹದಿನಾಲ್ಕು ಲೋಕಗಳ ಮಾತೆಯೆನಿಸಿ ಪದುಮಾಕ್ಷಿ ಲಕ್ಷ್ಮೀಗೆ ಜಯಸುಪ್ರಭಾತ 3 ಸರ್ವಭುವನೇಶ್ವರಿ ಸರ್ವ ಭಕ್ತಂಕರಿ ಸರ್ವಲೋಕ ವಿಖ್ಯಾತೆ ಜಾತೆ ವಿನೀತೇ ಸರ್ವಲೋಕೇಶನ ರಾಣಿ ಕಲ್ಯಾಣಿ ಸರ್ವಸನ್ನುತೆ ನಿನಗೆ ಸುಪ್ರಭಾತ 4 ಸಪ್ತರ್ಷಿ ಮಂಡಲವು ಔಪಾಸನೆಯಾಗೆ ತೃಪ್ತರಾಗಿರುತಿಹರು ನಭದ ನದಿಯೊಳು ವ್ಯಾಪ್ತವಾದಖಿಳ ಕರಪುಷ್ಪಗಳ ಅರ್ಪಿಸಿ ಒಪ್ಪಿರ್ಪರೇಳೇಳು ವೆಂಕಟೇಶ 5 ಅಜ ನಿರಂಜನ ಸ್ಮರಿಸಿ ತ್ರೈವಿಕ್ರಮನ ಚರಿತೆಗೇಳು ಶಿರಬಾಗಿ ವಂದಿಪರು ಗುರು ಶುಭವ ಪೇಳುವನು ವರದರಾಜ ಏಳು ವೇಂಕಟೇಶ 6 ಈಗ ವಿಕಸಿತವಾದ ಕಮಲಸೌರಭದೊಡನೆ ರಾಗ ರಸ ತಂಪಿಂಪು ಮಿಳಿತಮಾಗಿ ಸಾಗುತಿದೆ ತಂಗಾಳಿ ಉಲ್ಲಾಸಮಂ ಬೀರಿ ತ್ಯಾಗಿ ನೀನೇಳಯ್ಯ ವೇಂಕಟೇಶ 7 ಕದಳಿ ಖರ್ಜೂರಗಳ ರಸಯುಕ್ತ ಪಾಯಸ ಮುದದಿ ಸಂಸೇವಿಸುತ ಉತ್ಸಾಹದೀ ಮಧುರ ಗಾನವ ಪಾಡಿ ಶುಕಪಿಕಗಳುಲಿಯುತಿವೆ ಪದುಮನಾಭ ಏಳು ವೇಂಕಟೇಶ 8 ದೇವರ್ಷಿನಾರದನು ಮಹತಿ ವೀಣೆಯ ನುಡಿಸಿ ದೇವದೇವನೆ ನಿನ್ನ ನುತಿಸುತಿಹನು ಭಾವರಸಯುತವಾದ ಗಾನಕೇಳುತಿಹುದು ಪಾವನಾತ್ಮನೇ ಏಳು ವೇಂಕಟೇಶ 9 ಸುರಿವ ಮಕರಂದವನು ಹೀರಿ ಹೀರಿ ಅರುಣನುದಯವ ತಿಳಿದು ಅರಳುತಿಹ ಕಮಲದಿಂ ಸರಸರನೆ ಝೇಂಕರಿಸಿ ಬರುತಿರ್ಪುವೈ ಸಿರಿಯ ದುಂಬಿಗಳೇಳು ವೆಂಕಟೇಶ 10 ಮಡದಿಯರು ಕೆನೆಮೊಸರನಾಂತ ಭಾಂಡಗಳಲ್ಲಿ ಕಡೆಗೋಲಿನಿಂ ಮಥಿಸಿ ಹಾಡುತಿಹರು ಅಡಿಗಡಿಗೆ ಜಯ ಘೋಷ ಕೇಳುತಿದೆಯಯ್ಯ ಪೊಡವೀಶ ನೀನೇಳು ವೇಂಕಟೇಶ 11 ಕಮಲದಿಂದೈತಂದ ದುಂಬಿಗಳು ಸುತ್ತಲಿನ ಕುಮುದಗಳ ಮೈಗಪ್ಪಿ ಝರಿಝರಿ ಗರ್ವದಿ ಅಮರ ದುಂದುಭಿಯಂತೆ ಝೇಂಕರಿಸುತಿವೆಯಿದೋ ವಿಮಲಾಂಗ ನೀನೇಳು ವೇಂಕಟೇಶ 12 ಶ್ರೀರಮೆಯ ನಿತ್ಯಯೋಗಸ್ಥಾನ ಹೇಸ್ವಾಮಿ ಭೂರಿಭಕ್ತರ ಕಾಯ್ವ ಕರುಣಾನಿಧೇ ಸ್ವಾಮಿ ಮೂರು ಲೋಕವನಳೆದು ಪಾಲಿಸುವ ಸ್ವಾಮಿ ಮಾರಮಣ ನೀನೇಳು ವೇಂಕಟೇಶ 13 ಅಜ ರುದ್ರ ಸನಕಾದಿ ಪರಮ ಭಕ್ತರ ಬಂಧು ಭಜಿಸಿ ತವ ದರ್ಶನವ ಕಾಯುತಿಹರು ವಿಜಯ ಜಯರೀರ್ವರು ತಡೆಯುತ್ತಲಿಹರಯ್ಯ ಗಜವಿನುತ ನೀನೇಳು ವೇಂಕಟೇಶ 14 ಶೌರಿ ನಿನ್ನಾವಾಸ ತಾಣ ವೈಕುಂಠದಿಂದ ನಾರಾಯಣಾದ್ರಿ ಗರುಡಾದ್ರಿ ಎಂತೆಂಬ ಆರೇಳು ನಾಮಗಳ ಪೇಳ್ವರಿದು ಶೇಷಾದ್ರಿ ಸಾರತರ ನಾಮವೈ ವೇಂಕಟೇಶ 15 ಭುವಿಯ ಗೋಪಾಲಕರು ಅನುಮತಿಯ ಬೇಡುವರು ರವಿಯಗ್ನಿಯುಕ್ತ ನವಗ್ರಹಗಳು ಕಾದಿಹರು ಭವದೂರನೇ ನಿನಗೆ ಸುಪ್ರಭಾತ 16 ದಿವಿಮೋಕ್ಷ ಬೇಡ ತವದರ್ಶನವು ಸಾಕೆಂದು ನವಭಕ್ತಿಯಿಂ ತಳೆದು ಭಜನೆ ಮಾಡುತಿಹರು ಪವಮಾನನುತ ನಿನಗೆ ಸುಪ್ರಭಾತ 17 ನಿನ್ನ ಧಾಮದ ಶಿಖರ ವೀಕ್ಷಣೆಯೊಳಾನಂದ ವನ್ನು ಪಡುತಿಹರೆಲ್ಲ ಶರಣ ಜನರು ನಿನ್ನ ದರ್ಶನವೊಂದೆ ಪರಮ ಪದವದನು ಸನ್ನುತಾಂಗನೆ [ತೋರೇಳು]ಸುಪ್ರಭಾತ 18 ಭೂಮಿಪತಿ ಕರುಣಾಂಬುಸಾಗರನೆ| ಧೀರ ಶೂರಾನಂತ ಗರುಡ ವಿಷ್ವಕ್ಸೇನ ರಾರಾಜಿಸುತ್ತಿಹರು ನಿನ್ನ ದರ್ಶನಕಾಗಿ ನಾರಾಯಣಾ ನಿನಗೆ ಸುಪ್ರಭಾತ|| 19 ಕಮಲನಾಭ ದೇವ ಪುರುಷೋತ್ತಮಾ ಸ್ವಾಮಿ ಅಮಲಸದ್ಗುಣಧಾಮ ಕೃಷ್ಣ ವೈಕುಂಠ ಸುಮಬಾಣಕೋಟಿ ಸೌಂದರ್ಯನುತ ಮಾರಮಣ ಕಮಲನಯನಾ ನಿನಗೆ ಸುಪ್ರಭಾತ|| 20 ದೀನರಕ್ಷಣೆಗಾಗಿ ಹತ್ತುಜನ್ಮದಿ ಬಂದೆ ಮಾನವ ಶ್ರೇಷ್ಠರೂ ಆಕಾಶಗಂಗೆಯಲಿ ನಾನಾ ಸುಗಂಧಗಳ ಬೆರೆಸಿ ಕಾಯುತ್ತಿಹರು ಭಾನುತೇಜನೆ ನಿನಗೆ ಸುಪ್ರಭಾತ 21 ದಿನಪನುದಯಿಸುತ್ತಿಹನು ಕಮಲವರಳುತ್ತಿಹುದು ಬನದ ಪಕ್ಷಿಗಳೆಲ್ಲ ಹಾಡುತ್ತಲಿಹವು ಘನವೈಷ್ಣವರು ಮಂಗಳಂಗಳಂ ಪಾಡುವರು ಮನುಜಪುಂಗವ ನಿನಗೆ ಸುಪ್ರಭಾತ 22 ಕಮಲಜಾದ್ಯಮರರೂ ಸಪ್ತರ್ಷಿಯೋಗಿಗಳು ವಿಮಲ ಮಾನಸರಾಗಿ ನಿನಗಾಗಿ ಕಾದಿಹರು ತಿಮಿರಸಾಗರವನ್ನು ದಾಟಿಸುವ ಪರಮಾತ್ಮ ಕಮನೀಯಗುಣ ನಿನಗೆ ಸುಪ್ರಭಾತ|| 23 ಭಾವನೆಯೊಳೀಯದ್ರಿ ವೈಕುಂಠವಾಗಿಹುದು ಮಾವನಿತೆಯುಪಚಾರದಭ್ಯರ್ಥಿಯಾಗಿಹಳು ಶ್ರೀವೈಷ್ಣವ ಕೇಳು ಕೈಮುಗಿದು ಕಾದಿಹರು ಕಾವಕಾರುಣ್ಯನಿಧಿ [ನಿನಗೆ ಸುಪ್ರಭಾತ] 24 ಅರುಣೋದಯದೊಳೆದ್ದು ಈ ಸುಪ್ರಭಾತವನು ಪರಮ ಭಕ್ತಿಯೊಳೊಮ್ಮೆ ಪಾಡುವರಿಗೆ ಪರಮಪುರುಷನು ದಿವ್ಯತಾಣವನು ನೀಡುವನು ಹಿರಿಯರಾ ವಚನವಿದು ಪರಮ ಚರಿತಾರ್ಥ25 ಶರಣಾಗತಿ ಒಂದೆರಡು ಮೂರು ನಾಲ್ಕೈದಾರು ಮೊಗದವರು ಬಂದು ವಂದಿಸುತಿಹರು ಪುರುಷೋತ್ತಮ ಬಂಧುರ ಶರೀರನೀ ಪಾಲಿಸೆಮ್ಮ ವೆಂಕಟೇಶ 26 ನಾನಾಪರಾಧಗಳ ಮಾಡಿರುವೆನಯ್ಯ ನೀನೆಲ್ಲವನು ಕ್ಷಮಿಸಿ ಪರಿಪಾಲಿಸಯ್ಯ ನೀನೇ ಸರ್ವಾಧಾರ ಕರುಣಾಂತರಂಗನು ದಾನಶೀಲಾ ಸ್ವಾಮಿ ಶ್ರೀವೇಂಕಟೇಶ 27 ಗೋಪಿಕಾ ಪರಿವೃತನೆ ಪರವಾಸುದೇವನೆ ಗೋಪಿಕಾ ಗೀತಗುಣ ಸಂಪೂಜ್ಯ ದೇವನೆ ಗೋಪಿಕಾ ಮನ್ಮಥನೆ ದೈತ್ಯಾರಿ ಶ್ರೀಕೃಷ್ಣ ನೀ ಪೊರತು ಬೇರೆ ದೇವರ ಕಾಣೆ ವೆಂಕಟೇಶ28 ದಶರಥನ ಸುತನಾಗಿ ಜಾನಕಿಯ ಕರವಿಡಿದು ದಶಮುಖಾದ್ಯಸುರರನು ಸಂಹರಿಸಿದಾತ ಶಶಿಮೌಳಿ ವಂದ್ಯನೆ ಲೋಕಮೋಹನ ಸ್ವಾಮಿ ಕ್ಲೇಶಗಳ ಸಹಿಸಿ ಶಾಶ್ವತ ಸುಖವ ನೀಡಯ್ಯ ವೆಂಕಟೇಶ 29 ಕಂಜಾಯತಾಕ್ಷಿಯೆ ಸರ್ವಲೋಕ ಶರಣೇ ಕಂಜವದನೆಯೆ ಸರ್ವವಾತ್ಸಲ್ಯ ಪೂರ್ಣೇ ಕಂಜನಾಭನ ದಿವ್ಯ ವಕ್ಷಸ್ಥಲಾವಾಸಿ ಕಂಜಸರ್ವಾಂಗಿ ಪೊರೆ ಪುಣ್ಯಚರಿತೆ ಶ್ರೀಯೆ 30 ಸರ್ವಲೋಕ ಶರಣ್ಯ ಸರ್ವಗುಣ ಸಂಪೂರ್ಣ ಸರ್ವದೇವರದೇವ ವೇದವಂದಿತ ಸರ್ವಕಾರುಣ್ಯನಿಧಿ ಸರ್ವಾತ್ಮ ಸಂಚಾರಿ ಸರ್ವಪೂಜಿತ ನಿನಗೆ ಶರಣು ವೆಂಕಟೇಶ 31 ರಕ್ಷಿಸು ಜಗನ್ಮಯ ರಕ್ಷಿಸು ದಯಾಮಯ ರಕ್ಷಿಸು ಮನೋಮಯಾ ಮಾಯ ನಿರ್ಮಾಯ ರಕ್ಷಿಸೈ ಸರ್ವಜ್ಞ ಸರ್ವಲೋಕಾಧ್ಯಕ್ಷ ರಕ್ಷಸೈ ಹರಿ ನಿನ್ನ ಚರಣ ವೆಂಕಟೇಶ 32 ಆವನಾದಿಯನಂತನೆಂದೆನಿಪನೊ ವರವ ಈವ ಕರುಣಾಳುವೋ ಜೀವರಾಶಿಯನೆಲ್ಲ ಕಾವನೋ ಸಹಸ್ರಾಕ್ಷನೆಂದೆನಿಪ ದೇವನಾ ಶ್ರೀವನಜ ಪದವೆನಗೆ ಶರಣು ವೆಂಕಟೇಶ 33 ವೇದಗಳ ತಂದು ಮಂದರವೆತ್ತಿ ಹರಿಯ ಮೇದಿನಿಯ ನಳೆದ ಭಾರ್ಗವನಾದ ರಾಮನೀ ನಾದೆ ಕಂಸನಕೊಂದೆ ಗೋಪಾಲಕೃಷ್ಣ ನಾದ ಕಲ್ಕೀ ನಿನ್ನ ಚರಣ ವೆಂಕಟೇಶ34 ಮೂರು ವೇಣಿಗಳುಳ್ಳ ಗಂಗೆ ಪುಟ್ಟಿದ ಪಾದ ಮೂರು ಲೋಕವನಳೆದ ಸುಪ್ರಸಿದ್ಧದ ಪಾದ ಮೂರು ಕಣ್ಣಾಂತವನು ಜಪಿಸುತಿರುವ ಪಾದ ಚಾರುತರ ಪದವೆನಗೆ ಶರಣು ವೆಂಕಟೇಶ 35 ಕಾಳಿಂಗನಾ ಹೆಡೆಯ ತುಳಿದು ಕುಣಿದಾ ಪಾದ ಖೂಳ ಶಕಟನನೊದ್ದು ಕೊಂದ ಪಾದ ಚೋಳರಾಯನು ತೊಳೆದು ವಂದಿಸಿದ ಪಾದ ನಾಳೀಕ ಪದವೆನಗೆ ಶರಣು ವೆಂಕಟೇಶ36 ಕ್ಷೀರವಾರಿಧಿತನುಜೆಯೊಪ್ಪಿ ವೊತ್ತುವ ಪಾದ ನಾರದಾದಿಗಳೆಲ್ಲ ಪಿಡಿದು ನಲಿವಾ ಪಾದ ಶ್ರೀರಮಣಿ ಮುದದಿಂದ ಕಣ್ಗೊತ್ತುವ ಪಾದ ಮಾರಮೋಹಕ ನಿನ್ನ ಚರಣ ವೆಂಕಟೇಶ37 ಮಂಗಳ ಕಲ್ಯಾಣ ರೂಪಂಗೆ ಅದ್ಭುತಾಕಾರಂಗೆ ಮಾಲ್ಯಪೀತಾಂಬರಾಂಗದ ಶೋಭಿತಂಗೆ ಶಾಲ್ಯನ್ನ ಸಂಪ್ರೀತ ಶ್ರೀ ವೇಂಕಟೇಶಂಗೆ ಬಾಲ್ಯಕುಂದದವಂಗೆ ಜಯಮಂಗಳ 38 ಭಕ್ತಪರಿಪಾಲಂಗೆ ಜಗದಾದಿ ಮೂಲಂಗೆ ಭಕ್ತಿದಾತಾರಂಗೆ ರಮೆಯರಸಂಗೆ ಮುಕ್ತಿ ಸೌಖ್ಯವನೀವ ಶ್ರೀವೇಂಕಟೇಶಂಗೆ ಶಕ್ತಿ ಸ್ವರೂಪಂಗೆ ಶುಭಮಂಗಳ 39 ಶೇಷಾದ್ರಿ ವಾಸಂಗೆ ದಿನಕರ್ತ ಭಾಸಂಗೆ ಕ್ಲೇಷದಾರಿದ್ರ್ಯಾದಿ ಪರಿಹಾರ ಕರ್ತಂಗೆ ಶೇಷ ಪಂiÀರ್iಂಕಂಗೆ ಶ್ರೀ ಶ್ರೀನಿವಾಸಂಗೆ ದೋಷಾಪಹಾರಂಗೆ ಜಯಮಂಗಳ 40 ಅರವಿಂದ ವದನಂಗೆ ಅರವಿಂದ ಲೋಚನಗೆ ಅರವಿಂದನಾಭನಿಗೆ ಅರವಿಂದ ಗಾತ್ರಗೆ ಅರವಿಂದ ಪಾದನಿಗೆ ಅರವಿಂದ ಭೂಷನಿಗೆ ಅರವಿಂದ ಹಸ್ತಂಗೆ ಶುಭಮಂಗಳಂ 41 ಹಿಂದಿನಾಚಾರ್ಯರಿಗೆ ಮುನಿಮುಖ್ಯಭಕ್ತರಿಗೆ ಇಂದಿನಾ ಭೂದೇವಿ ನೀಳಾದಿ ವಧುಗಳಿಗೆ ಮಂದಾಕಿನೀಧರಗೆ ಇಂದ್ರ ದಿಕ್ಪಾಲರಿಗೆ ವಂದಿಪೆನು ಮಂಗಳಾಚರಣೆ ಮಾಡಿ 42 ಫಲಶ್ರುತಿ ಹನ್ನೆರಡು ಮಾಸವು ತಪ್ಪದೆ ಹಾಡಿದರೆ ಮುನ್ನಮಾಡಿದ ಪಾಪವೆಲ್ಲ ಕಳೆಯುವುದು ಪನ್ನಗಾರಿಧ್ವಜನ ಕರುಣೆಯೊದಗುವುದು ಬನ್ನಗುಡುವನರಕಬಾಧೆ ತಪ್ಪುವುದು 43 ಶ್ರಾವಣಾಶ್ವೀಜದಲಿ ಮಾರ್ಗಶಿರ ಮಾಸದಲಿ ಭಾವಭಕ್ತಿಯಲಿಂತು ಹಾಡುವರಿಗೆ ನೋವು ಕಾಲನಭಟರ ಕಾಟನಶಿಪುದು ಹರಿಯ ಭಾವುಕರು ಸತ್ಕರಿಸಿ ಕರೆದೊಯ್ವರು 44 ಅಪ್ಪ ಮಾಂಗಿರಿರಂಗನಪ್ಪಣೆ ಪಡೆದಿದನು ಒಪ್ಪಿಸುವೆನೈ ನಿನಗೆ ವೇಂಕಟೇಶ| ತಪ್ಪು ನೆಪ್ಪುಗಳನ್ನು ಮನ್ನಿಸೈ ಜಗದೀಶ ಒಪ್ಪದಿಂ ಸಕಲರನು ಪೊರೆ ವೇಂಕಟೇಶ|| 45
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಎಂಥ ಪಾಪವನು ಮಾಡಿರುವೆನೋ ಶ್ರೀಹರಿಯೇಇಂಥ ದುರ್ದೆಸೆಗೆನ್ನ ಎಳೆತಂದು ಬಿಡಲಿಕ್ಕೆ ಪ ಉದಯ ಕಾಲದೊಳೆದ್ದು ಉದರ ಪೋಷಣೆಗಾಗಿಹದವನರಿಯದೆ ಬಳಲಿ ಅಂತಿಂತು ಬಡೆದಾಡಿಬದುಕು ತಂದೊಡಲ ಹೊರಕೊಂಡು ಸಲೆನನ್ನಪದವ ನೆನೆಯಲು ಸ್ವಲ್ಪ ಸಹ ವೇಳೆ ಸಿಗದಂತೆ 1 ಹಿಡಿದ ಕಾರ್ಯಗಳೆಲ್ಲ ಬಿಡದೆ ನಿಷ್ಫಲವಾಗಿಒಡವೆ ಇಲ್ಲದ ಬರಿಯ ಒಡೆತನಕೆ ಅಣಿಮಾಡಿಮಡದಿ ಮಕ್ಕಳ ಬಿರುಸು ನುಡಿಗೇಳಿ ಮನನೊಂದುಸುಡುಬಾಳ್ವೆ ಇದನೆಂದು ಮುಡುಕುವಂದದು ಗೈಸಿ 2 ನಂಬಿದವರನು ಹರಿಯು ಬೆಂಬಿಡನು ಎಂದೆಂದುಎಂಬ ಬಿರುದನು ತೊರೆದು ಇಂಬುಗೊಡದಿರಲಿಕ್ಕೆಅಂಬುಜಾಕ್ಷನೆ ನಿನಗೆ ಸಂಬಂಧವಿರದೇನುಹಂಬಲಿಪ ದುಃಸ್ಥಿತಿಗೆ ತುಂಬ ತಂದಿಡಲಿಕ್ಕೆ 3 ಅಣುಗರಿಗೆ ಉಣಿಸಲಿಕೆ ಹಣವೆತ್ತ ಗಳಿಸಲಿಫಣಿಶಯನ ನಿನಗಿನ್ನು ಗುಣವೆತ್ತ ತೋರಿಸಲಿಮಣಿಗಳನು ಎಣಿಸುತ್ತ ಪ್ರಣವೆತ್ತ ಧೇನಿಸಲಿಹಣಿವ ಭವದೊಳು ಸಿಲುಕಿ ಕ್ಷಣವು ಸಹ ಸಿಗದಾಯ್ತು 4 ಬಾಳಿನೊಳು ಸೌಖ್ಯವೇ ಆಳವೈಶ್ವರ್ಯವೆತೋಳಿನೊಳು ದಾಢ್ರ್ಯವೆ ಚಿತ್ತದೊಳು ಸ್ಥೈರ್ಯವೆಹೇಳು ಗದುಗಿನ ವೀರನಾರಾಯಣನೆ ಮಣಿವೆ 5
--------------
ವೀರನಾರಾಯಣ
ಜೋಕೆ ಎನ್ನ ವಿಚಾರ ನಾಕು ಜನರಂತಲ್ಲ ಸ್ವೀಕರಿಸಬೇಕು ಕ್ಷಣದಿ ಪ ನಾಕಾರು ವಿಧಗಳಲಿ ನೀಪೇಳಿದುದನೆಲ್ಲ ಏಕಮನದಲಿ ಮಾಡಿದೆ ಕೃಷ್ಣ ಅ.ಪ ಬಾಲತನದಲಿ ಬಹಳ ಲೋಲನಾಗಿರು ಎಂದು ಪೇಳಲಿಲ್ಲವೆ ಯೋಚಿಸು ಕೀಳುಜೀವನದಲ್ಲಿ ಕಾಲವನು ಕಳೆ ಎಂದು ಪೇಳಿದುದ ನೀ ಮರೆತೆಯಾ ಶ್ರೀ ಲಕುಮಿಪತಿ ನಿನ್ನ ಕೀಲುಗೊಂಬೆಯ ತೆರದಿ ಪೇಳಿದುದ ಮಾಡಿರುವೆನೊ 1 ಶ್ರೀಪತಿಯೆ ನಿನ್ನ ಪ್ರೇರಣೆಯಲ್ಲವೆ ಸರ್ವ ಪಾಪ ಪುಣ್ಯಕೆ ಕಾರಣ ಈ ಪರಿಯ ನಿನ್ನ ಸಂಕಲ್ಪವನು ಮೀರಲು ತಾಪಸೋತ್ತಮರಿಗಳವೆ ಆಪತ್ತು ಸಂಪತ್ತು ನಿನ್ನಧೀನಗಳೆಂದು ತಾಪತ್ರಯವ ಸಹಿಸಿದೆ 2 ಇಂದಿರಾಪತಿ ನಿನ್ನ ಒಂದೊಂದು ದಿನದಲಾ ನಂದ ಪೂಜೆಗೈಯಲು ಹಿಂದಿನಾ ಲೆಕ್ಕವು ಸಂದಿಲ್ಲವೆಂದು ನೀ ಇಂದು ಮಾಡುವರ್ಯಾರು ಸಂದೇಹವಿಲ್ಲವೆನಗೆ 3 ಇಂತಹುದು ಬೇಕೆಂಬ ಚಿಂತೆಯಿಲ್ಲದೆ ಬಹಳ ಸಂತಸದಿ ಮುಳುಗಿರುವೆನೊ ಕಂತುಜನಕ ಎನಗೆ ಭ್ರಾಂತಿ ನೀಡದೆ ಮನಕೆ ಶಾಂತಿಯನು ದಯಮಾಡೆಲೊ ಸಂತತ ನೀನು ಎನ್ನಂತರಂಗದಲಿರಲು ಕಂತೆಯಂದದಿ ಕಾಂಬೆನೊ ಜಗವ 4 ಧೋರಣೆಯ ನುಡಿಗಳಿಗೆ ಕಾರಣನು ನೀನಿರಲು ಯಾರ ಭಯವೆನಗಿಲ್ಲವೊ ನೀರಜಾಕ್ಷನೆÉ ನಿನ್ನ ಪ್ರೇರಣೆಯನೆಳ್ಳಷ್ಟು ಮೀರಿ ನಡೆಯುವುದಿಲ್ಲವೊ ಸಾರಗುಣ ಸಂಪನ್ನ ಧೀರಭಕ್ತ ಪ್ರಸನ್ನ ಯಾರಿರುವರೊ ಜಗದಲಿ ನಿನ್ಹೊರತು 5
--------------
ವಿದ್ಯಾಪ್ರಸನ್ನತೀರ್ಥರು
ಬನ್ನಿರಿ ದಾಸರೇ ಪೋಗುವಾ ನಮ್ಮ ಚನ್ನಕೇಶವನೆಂಬ ಹರಿಮಂದಿರಕೇ ಪ ಬನ್ನಿರಿ ಪೋಗುವಾ ಗುಡಿಯೊಳು ತಿನ್ನುವಾ ಚನ್ನಗೆ ಅರ್ಪಿಸಿ ತಂದ ಪಕ್ವಗಳ ಅ.ಪ. ನಾ ತಂದಿರುವೆನು ಪರಮಾನ್ನವನ್ನು ತಾತನ ನಾಮಕ್ಕೆ ಬೆರಿಸಿ ಮಾಡಿದೆನು ನೀತಿಯೊಳಾಭಕ್ತಿ ಮಧುಕ್ಷೀರವನ್ನು ಸತ್ಯದಿ ಕೂಡಿಸಿ ಸೇವಿಸುವಾ 1 ಪರಹಿತವೆನ್ನುವ ಸಕ್ಕರೆ ತಂದು ನಾ ಬೆರಿಸುವೆ ಧರ್ಮಗಳೆಂಬ ಪಾಯಸಕೇ ಹರಿಯ ಕೀರ್ತನೆಗಳ ಅಮೃತವ ಸೇರಿಸಿ ಪರಮಾನ್ನವೀ ರೀತಿ ಮಾಡಿರುವೆನಯ್ಯ 2 ಹರಿಭಕ್ತಿಯೆಂಬುವ ತಂಡುಲವನೆ ತಂದು ಹರಿಯ ಸ್ಮರಣೆಯೆಂಬ ವುದಕದಿ ತೊಳೆದು ಹರಿಯ ಭಜನೆಯೆಂಬ ಬೆಂಕಿಯ ಮೇಲಿಟ್ಟು ಸರಸದಿ ನಾ ಪಾಕವ ಮಾಡಿರುವೆ 3 ಸನ್ನುತ ದೂರ್ವಾಪಟ್ಟಣದಿ ನಿತ್ತಿರುವಂಥ ಪನ್ನಗಶಯನ ಶ್ರೀ ಹರಿಯ ನೆನೆಯುತ್ತ ಉನ್ನತ ಸೇವೆಯಿಂದಾತನ ಮೆಚ್ಚಿಸಿ ತಿನ್ನುವಾ ಕೇಶವ ನೀಯುವ ವರವಾ 4
--------------
ಕರ್ಕಿ ಕೇಶವದಾಸ
ಮಾರ್ಗದರ್ಶಕೆ ದೇವಿ ಮಾರ್ಗ ತೋರಮ್ಮ |ಸರ್ವ ಪೂರ್ವದಿ ಕವ್ಯ ಬಾಲನೆಂಬನ ಮಗಳೇ ಪ ಹರಿದೀಕ್ಷೆ ಹರಿತತ್ವ ನಿರ್ಣಯಾದಿಗಳಿರುವನರರು ಕಲಿಯುಗದಲ್ಲಿ ದುರ್ಲಭರು ಎಂದು |ಪರಿಪರಿಯ ಚಿತ್ರಿಸುತ ಸದ್ಬೋಧ ಮಾಡಿರುವೆಹರಿ ಪದಾಬ್ಜದಿ ಭಕುತಿ ಎಷ್ಟಿಹುದೊ ನಿನ್ನಲ್ಲಿ 1 ಶೇಷಾಚಲಕೆ ಬಂದು ಆ ಸುತೀರ್ಥವು ಕಪಿಲಲೇಸಾಗಿ ಮಜ್ಜನವಗೈದು ತಪವಾ |ಸಾಸಿರೊರ್ಷವು ದಿವ್ಯ ಏಕ ಚಿತ್ತದಿ ಗೈದುಭಾಸುರ ಸ್ತೋತ್ರದಿ ಹರಿಯ ತೋಷಿಸಿದೇ 2 ತಂದೆ ತಾಯಿಯು ನೀನು ಬಂಧು ಬಳಗವು ನೀನುಎಂದೆಂದಿU5ಭ್ರಾತ ವಲ್ಲಭನು ನೀನೇ |ಇಂದಿರೇಶನ ಹೊರತು ಮಂದಿ ಬೇರಿಲ್ಲೆನಗೆಎಂದು ನೀತುತಿಸಿ ಹರಿ ಸಂದರ್ಶನವ ಪಡೆದೇ 3 ದ್ವಾಪರದಲಾ ಕವ್ಯ 5À್ನಜಿತು ನೃಪನಾಗೆರೂಪಲಾವಣ್ಯಾತಿಶಯಗಳಿ5 |ಭೂಪ ಕುವರಿಯು ಆಗಿ ನೀಲಾಖ್ಯೆ ಎನಿಸುತ್ತಶ್ರೀ ಪತಿಯ ಕೈ ಪಿಡಿಯೆ ಮನವ ನೀ ಮಾಡ್ಡೇ 4 ದೈತ್ಯ ಸಪ್ತಕರೇವೆ ಗೂಳಿಗಳು ತಾವಾಗಿಸತ್ಯ ಹರಿ ದ್ವೇಷವನೆ ಸಾಧಿಸುವೆವೆಂದೂನಿತ್ಯ ಪುಷ್ಟಾಂಗದಲಿ ಬೆಳೆಯುತ್ತ ನೃಪನಲ್ಲಿಕೃತ್ಯ ಸ್ವಯಂವರ ಕೇಳಿ ಹರ್ಷಿತರು ಆಗೀ 5 ವಿಪರೀತ ಮತಿಯುಳ್ಳ ಅಪರಿಮಿತ ಬಲತೋರ್ವಸಪುತ ಗೂಳಿಗಳನ್ನೆ ಆರು ಬಂಧಿಪರೋ |ನೃಪನೆಂದ ಸುತೆ ನೀಲೆ ಕನ್ಯೆ ಕೊಡುವೆನು ಅವಗೆನೃಪ ನಿಂತು ಪಣತೊಟ್ಟ ಕೌತುಕವ ಕೇಳೀ 6 ಆರು ಬಂದವರೆಲ್ಲ ಹೋರಿಗಳ ಪಿಡಿಯಲ್ಕೆವೀರ್ಯ ಸಾಲದೆ ಮರಳಿ ಹೋಗುತಿರಲೂ |ಮಾರ ಪಿತ ಶಿರಿ ಕೃಷ್ಣ ಹೋರಿ ನಾಸಿಕಗಳಿಗೆದಾರಗಳ ಬಿಗಿಯುತ್ತೆ ಬಂಧವನ ಗೈದಾ 7 ದೇವಿ ಸುಂದರಿ ನೀಲೆ ದಿವ್ಯ ಹಾರವ ಪಿಡಿದು ದೇವ ದೇವೇಶ ಶಿರಿ ಕೃಷ್ಣ ಕಂಠದಲೀಹಾವ ಭಾವದಿ ಬಂದು ಅರ್ಪಿಸಲು ತಕ್ಷಣದಿದೇವ ವಾದ್ಯವು ಮೊರೆಯೆ ಪೂವ ಮಳೆ ಬಿತ್ತು8 ಕೃಷ್ಣ ಮಡದಿಯರಾರು ಮಂದಿಯೊಳು ನೀಲಾಖ್ಯೆಲಗ್ನದುತ್ಸವ ಕೇಳ್ದ ಭಕುತ ಜನರಾ |ಭಗ್ನ ಗೈಸುತ ಪಾಪ ಮಗ್ನವಾಹುದು ಮನವುಕೃಷ್ಣ ಗುರು ಗೋವಿಂದ ವಿಠಲ ಪದದಲ್ಲೀ 9
--------------
ಗುರುಗೋವಿಂದವಿಠಲರು
ಯಾಕೆ ನೀನು ಹೀಗೆ ಮಾಡುವಿ ವೀರ ಹನುಮ ಯಾಕೆ ನೀನು ಹೀಗೆ ಮಾಡುವಿ ಪ. ಯಾಕೆ ನೀನು ಹೀಗೆ ಮಾಡುವಿ ಜೋಕೆಯಿಂದ ಸಲಹೊ ಎಂಬ ವಾಕು ಕೇಳದೇನೋ ನಿನಗೆ ಬಿಂಕ ಅ.ಪ. ಸತ್ಯವಂತನೆಂಬ ವಾಕು ಎತ್ತ ಪೋಯಿತೀಗ ಬಿರುದು ಒತ್ತಿ ಒತ್ತಿ ಕೇಳಿದರೂ ಉತ್ತರವÀ ಕಾಣೆನಲ್ಲೊ 1 ಒಡೆಯ ರಾಮಭಂಟನೆನಿಸಿ ಒಡವೆ ವಸ್ತು ಇಟ್ಟುಕೊಂಡು ಬಡಿವಾರದಲಿ ನಿಂತರೀಗ ಬಡವರೆಮ್ಮ ಗತಿಯದೇನೊ 2 ವೀರ ಉಡುಪು ಧರಿಸಿಕೊಂಡು ವೀರ ಭೀಮನೆನಿಸಿಕೊಂಡು ಮೋರೆ ಎತ್ತಿ ನೋಡದಿರಲು ದಾರಿಯಾವುದೆಮಗೆ ಪೇಳು 3 ಮುನಿಯ ರೂಪ ತಾಳಿ ಮತ್ತೆ ಮೌನಧರಿಸಿ ನಿಂತರೀಗ ಮಾನತನದಿ ತುತಿಸುವೆಮಗೆ ಏನು ಮುಂದೆ ಗತಿಯು ಇನ್ನು 4 ಬೇಡಲಿಲ್ಲೊ ನಿನ್ನ ಒಡವೆ ಬೇಡಲಿಲ್ಲೊ ನಿನ್ನ ಭಾಗ್ಯ ಆಡೊ ಒಂದು ಮಾತು ಎನಲು ಮಾಡಿರುವೆ ಮನವ ಕಲ್ಲು 5 ಏನು ಸೇವೆ ಮಾಡಲೀಗ ಏನು ನಿನ್ನ ಸ್ತುತಿಸಲೀಗ ಏನು ಧ್ಯಾನ ಮಾಡಲೀಗ ಏನು ತಿಳಿಯದಲ್ಲೊ ಎನಗೆ 6 ಶುದ್ಧವಾದ ನಿನ್ನ ಒಂದು ಮುದ್ದು ಮಾತು ಕೇಳೆನೆಂದು ಒದ್ದಾಡುವೆನೊ ಮನದಿ ಬಹಳ ಇದ್ದಿಯಾಕೊ ಸುಮ್ಮನಿನ್ನು 7 ಮನದಿ ಎನಗೆ ದೃಢವು ಇಲ್ಲ ಹನುಮ ನಿನಗೆ ದಯವು ಇಲ್ಲ ಮುನಿಸು ಮಾಡೆ ನೀನು ಸಲ್ಲ ಘನವೆ ನಿನಗೆ ಪೇಳೊ ಸೊಲ್ಲ 8 ನಿನ್ನ ಹೊರತು ಪೊರೆವರಿಲ್ಲ ಮನ್ನಿಸಿನ್ನು ಕಾಳಿನಲ್ಲ ನಿನ್ನ ಕೀರ್ತಿ ಜಗದಿ ಬಹಳ ಉನ್ನತದಲಿ ಮೆರೆಸೊ ಮಲ್ಲ 9 ಅನ್ನಕೊಡಿಸಿ ಇಟ್ಟುಕೊಂಡು ಮನ್ನಿಸುವೆನೆಂಬೋ ಇಂಥ ಭಿನ್ನನಾದ ನುಡಿಗೆ ನಾನು ಇನ್ನು ಒಪ್ಪಲಾರೆ ಕಂಡ್ಯ 10 ಕದರುಮಂಡಲಿಗಿ ಹನುಮ ಹೆದರಲಾರೆ ನಿನಗೆ ಇನ್ನು ಒದಗಿ ಪಾಲಿಸೆಂದು ಬೇಡೆ ಹೃದಯ ಕರಗದಲ್ಲೊ ನಿನಗೆ 11 ನಿರುತ ನಿನ್ನ ದಾಸಳೆನಿಸಿ ಚರಿಸುವಂಥ ಎನಗೆ ಒಲಿದು ಅರುಹದಿರಲು ಒಂದು ವಾಕು ಬಿರುದು ಉಳಿವುದೇನೊ ಇನ್ನು 12 ಇಷ್ಟ ಸಲಿಸದಿರೆ ಗೋಪಾಲ ಕೃಷ್ಣವಿಠ್ಠಲಗ್ಹೇಳಿ ನಾನು ಕಟ್ಟಿ ಹಾಕಿಸುವೆನೊ ಎನ್ನ ಮೂರ್ತಿ 13 ಗುರುಗಳಾಜ್ಞೆಯಿಂದ ನಾನು ಹರುಷದಿಂದ ಬಳಿಗೆ ಬರಲು ಗರುವದಿಂದ ನಿನ್ನ ನೇತ್ರ ತೆರದು ನೋಡದಿರುವರೇನೊ 14 ತಂದೆ ನೀನೆ ಸಲಹೊ ಎಂದು ಬಂದು ನಿನ್ನ ಅಡಿಗೆ ಎರಗೆ ಒಂದು ಮಾತನಾಡದಂಥ ಕುಂದು ಏನು ಪೇಳೊ ಇನ್ನು15 ಬೇಡ ಬೇಡ ಛಲವು ಇನ್ನು ಪಾಡಿಪೊಗಳುವಂತೆ ದಯವ ಮಾಡು ಎನ್ನ ಮೊರೆಯ ಕೇಳಿ 16
--------------
ಅಂಬಾಬಾಯಿ