ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಡೆಯಿಲ್ಲದೀ ಭವಾಂಬುಧಿಯ ದಾಂಟುವೊಡೆ ಜಗ ದೊಡೆಯ ಶ್ರೀಕೃಷ್ಣನೊಬ್ಬನ ನಂಬು ಮರುಳೆ ಪ ನೆಲೆಯಾದುದಿಲ್ಲ ತಾಯುದರ ಬಾಲತ್ವವಿದು ನೆಲೆಯಾದುದಿಲ್ಲ ಜವ್ವನವೆಂಬುದೂ ನೆಲೆಯಾದುದಿಲ್ಲ ಜರೆಯು ಚಕ್ಷುರಾಜಿಗಳು ಒಡಲು ನಿನಗೆ ಮರುಳೆ 1 ಹುಟ್ಟಿದನಳಿದನೇಕೆ ಜೀವ ನಿಜ ಜನನಿಯಲಿ ಹೊಟ್ಟೆಯಲಿ ಹೊತ್ತು ಹೆತ್ತುದಕೈಸಲೆ ಕೊಟ್ಟುಕೊಂಡುದಕೆ ಪಡೆದಿತ್ತು ಸುತರೆಂದೆನಿಸಿ ನೆಟ್ಟನೈದುವರು ನಿನಗೇನಹರು ಮರುಳೆ 2 ನೀನಳಿದ ಬಳಿದ ಸತಿಸುತರಿಗೇನ್ಹೇಳುವೆ ಏನಹರು ನಿನಗವರು ಮೃತವಾದ ಬಳಿಕಾ ದೀನನಹೆ ಬಯಲಮಮತೆಗಳೆಂದು ತಿಳಿದುಕೊ ನೀನೆತ್ತಲವರೆತ್ತಲಿಹರವರು ಮರುಳೆ 3 ಮಗನಾವ ತಂದೆಯಾವನು ಜೀವ ಜೀವರಿಗೆ ಮಗನು ತಂದೆಯು ಕರ್ಮವಾಸನೆಗಳಾ ಬಗೆಯಿಂದಲೀಶ್ವರನು ಜೀವಕೋಟಿಗಳ ಸೃಜಿಸೆ ಜಗದೊಳಾಡುವರು ನಿನಗೇನಹರು ಮರುಳೆ 4 ಅತಿಭಕ್ತನೆಂದು ವೈಕುಂಠ ವೇಲಾಪುರದ ಪತಿ ಅರ್ಜುನಗೆ ನಿರೂಪಿಸಿದರ್ಥವ ಮತಿಗೆಟ್ಟು ಬಿಟ್ಟು ನಾನಾ ದೈವದಡಿಗಳಿಗಾ ನತನಾಗಿ ಸಂಸಾರಿಯ[ಹೆ] ಇದೇಕೆ ಮರುಳೆ 5
--------------
ಬೇಲೂರು ವೈಕುಂಠದಾಸರು
ಯೆಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲಾ | ಇಲ್ಲವೋ ಕಾಣೋ ಯೆಂದಿಗಾದರು ಮರುಳೆ ಪ ಹುಲಿ ಇಲಿಯಾಗುವದು ತೋಳ ಕೋಳ್ಯಾಗುವುದು | ಕಲಿ ಬಂದು ಹಿತ್ತಿಲನ್ನೀಗ ಬಳಿವಾ || ಮೂಲ ಮಹಾಚೋರ ಚೊಚ್ಚಿಲ ಗೌಡಿಮಗನಾವಾ | ಜಲಜಾಕ್ಷನ ಕೃಪೆಯ ಪಡೆದ ದಾಸರಿಗೆ 1 ಕರಡಿ ಕರು ಆಗುವದು ಉರಿ ಮಂಜು ಆಗುವದು | ಕರಿ ನಾಯಿ ಆಗುವದು ಕಂಡವರಿಗೆ || ಭರದಿಂದ ಸುರಿವ ಮಳೆ ನಿಲ್ಲೆನಲು ನಿಲುವದು | ನರಹರಿಯ ನಾಮಗಳ ನಂಬಿ ಪಠಿಪರಿಗೆ 2 ಘಣಿ ಸರವೆ ಆಗುವದು ದಣುವಾಗುತಿಹ ಮಾರ್ಗ ಕ್ಷಣದೊಳಗೆ ಪೋದಂತೆ ಕಾಣಿಸುವದು || ಘನ ಪಾಷಾಣಗಳು ತೃಣ ಸಮವು ಯೆನಿಸುವವು ವನಜಾಕ್ಷನ ಕೃಪೆಯ ಪಡದ ದಾಸರಿಗೆ 3 ಕ್ಷುಧೆ ತೃಷೆಯಾಗದು ಕ್ಷುದ್ರ ಸಂಗ ಬಾರದು | ಪದೇ ಪದೆಗೆ ರೋಗಗಳು ಬೆನ್ನಟ್ಟವು || ಉದಯಾಸ್ತಮಾನವೆಂಬೋ ಭಯವು ಸುಳಿಯದು | ಪದುಮನಾಭನ ಕೃಪೆಯ ಪಡೆದ ದಾಸರಿಗೆ4 ಬಾರವು ಭಯಗಳು ಬಂದರು ನಿಲ್ಲವು | ಹಾರಿ ಹೋಗುವವು ದಶದಿಶಗಳಿಗೆ || ಘೋರ ದುರಿತಾರಿ ಶ್ರೀ ವಿಜಯವಿಠಲನಂಘ್ರಿ | ಸೇರಿದಾ ಜನರಿಗೆ ಇನಿತಾಹುದುಂಟೇ 5
--------------
ವಿಜಯದಾಸ