ಒಟ್ಟು 24 ಕಡೆಗಳಲ್ಲಿ , 16 ದಾಸರು , 24 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನ ಬೇಡಲೊ ನಿನ್ನ ದೇವಾಧಿ ದೇವ ಪ ಏನಹುದೊ ನಿನ್ನೊಳಗೆ ಮಹಾನುಭಾವ ಅ.ಪ ವನಧಿ ಹಾಸಿಗೆಯು ವಟಪತ್ರವನಿತೆಯರ ಬೇಡಲೆ ಬ್ರಹ್ಮಚಾರಿಘನ ಸಖ್ಯವನು ಬಯಸೆ ನೆನೆಯುವರ ಮನದಲಿಹೆತಿನುವುದಕೆ ಕೇಳುವೆನೆ ನವನೀತಚೋರ 1 ಒಡವೆಗಳ ಬಯಸೆ ಶಿಖಿಪಿಂಛ ತುಳಸಿ ಪತ್ರಕಡು ಸೈನ್ಯವನೆ ಬಯಸೆ ಗೋಪಾಲನುಬಿಡದೆ ರೂಪವÀ ಬಯಸೆ ನೀಲಮೇಘಶ್ಯಾಮಉಡುವುದಕೆ ಕೇಳುವೆನೆ ಸ್ತ್ರೀವಸನ ಚೋರ 2 ಶಕ್ತಿಯನು ಗೋಪಿಕಾ ಸ್ತ್ರೀಯರಲಿ ವ್ರಯಗೈದೆಭಕ್ತಿಯನು ಸತ್ಯವಂತರಿಗಿತ್ತಿಹೆಭಕ್ತರನು ವಂಚಿಸುತ ನೀನು ಬಚ್ಚಿಟ್ಟಿರುವಮುಕ್ತಿ ಕಾಂತೆಯ ಕೊಡು ಸುಖಿಪೆನೊ ಶ್ರೀಕೃಷ್ಣ3
--------------
ವ್ಯಾಸರಾಯರು
ಏನನಿತ್ತಪೆ ನಿನಗೆ ಶ್ರೀನಿವಾಸ ಶ್ರೀನಿಧಿಯು ನೀನಾಗಿರಲು ಸರ್ವೇಶ ಪ. ಅನುದಿನದಿ ನಿನ್ನ ಪದ ಅನುವಿನಲಿ ಸ್ತುತಿಪೆನೆನೆ ಅನುದಿನದಿ ನಿನ್ನಾದಿಶೇಷ ಸ್ತುತಿಪ ಘನಮಹಿಮ ನಿನ್ನನರ್ಚಿಪೆನೆಂದೊಡೆ ಆ ಘನ ಮಹಾ ಶ್ರೀದೇವಿ ನಿನ್ನರ್ಚಿಸಿ ಮೆಚ್ಚಿಸಿಹಳರಿಯೆ 1 ಭಕ್ತಿರಸವನು ಭಕ್ತ ಪ್ರಹ್ಲಾದ ನಿನಗಿಂತಧಿಕ ಭಕ್ತಿಯನು ಮಾಡಲರಿಯನೋ ದೇವ ದೇವ ಯುಕ್ತಿಯಲಿ ನಿನ್ನ ಸ್ತುತಿ ಮಾಳ್ಪೆನೆಂದರೆ ನಿನ್ನ ಭಕ್ತ ನಾರದ ಮಾಳ್ಪ ಸ್ತುತಿಗಧಿಕವೇ ಕೃಷ್ಣ 2 ನಿನ್ನ ಪದ ಸೇವಿಪೆನೆನೆ ನಿನ್ನ ಭಕ್ತ ಹನುಮ ಇನ್ನು ನಿನ್ನಡಿ ಬಿಡನೊ ನಿನ್ನರಿವತನಕ ಪನ್ನಗಾದ್ರಿನಿವಾಸ ಸಂಪನÀ್ನ ಶ್ರೀ ಶ್ರೀನಿವಾಸ ನಿನ್ನ ಕೃಪೆಯನೆ ತೋರೋ ಶ್ರೀ ರಮೇಶ 3
--------------
ಸರಸ್ವತಿ ಬಾಯಿ
ಕರುಣದಿ ಕಾಯೋ ಗೋವಿಂದಾ ಯಂವ ದುರಿತಗಳಿಂದ ನೀನೀಗೊ ಮುಕುಂದ ಪ ಹರಿಸೇವೆ ಮಾಡುತ್ತ ಬಂದೆ ಮುಂದೆ ಚಿರ ಸಾಯುಜ್ಯವನ್ನು ನೀಡೋ ಶರಣಂದೆ ಅ.ಪ. ಲಕ್ಷಯೆಂಬತನಾಲ್ಕು ಜನ್ಮಯೆತ್ತಿ ಭಕ್ಷಿಸಿ ಬಂದೆನು ಕೋಟಿ ದುಃಖಗಳಾ 1 ಸಾಕ್ಷಿಯಾಗಿರುವಂಥ ಜೀವಾತ್ಮನನು ಲಕ್ಷಕೆ ತಂದೆ ಮನುಜ ಜನ್ಮದಲೀ 2 ಪಾಪ ಪುಣ್ಯಕೆ ಕರ್ತೃವಾಗಿ ಭವದಿ ಕೂಪದಿ ನಿಂದೆನು ಬೋಕ್ತøವು ಆಗೀ 3 ಪಾಪವ ಕ್ಷಮಿಸೋ ಸರ್ವಾತ್ಮಯಂನ ತಾಪವ ನೀಗುತ್ತ ಜನ್ಮ ಪರಿಪರಿಸೋ4 ಜನ್ಮ ತಾಳಲಾರೆ ಹರಿಯೇ ತಾಳಿ ಜನ್ಮದಿ ಹರಿಪಾದ ನಾ ಬಿಡಲಾರೆ 5 ಸನ್ನುತವರ ದೂರ್ವಾಪುರದ ನಂಮ ಚನ್ನಕೇಶವನೇ ಭಕ್ತಿಯನು ನೀ ಕೊಡೆಲೋ6
--------------
ಕರ್ಕಿ ಕೇಶವದಾಸ
ಕರುಣಿಸು ಕರುಣಿಸು ಚನ್ನಕೇಶವನೇ ಕರುಣಿಸು ನಾ ನಿನ್ನ ದಾಸನೆಂತೆಂದು ಪ ಸಹÀಸ್ರನಾಮಗಳೀಶ ಬೇಗ ಮುಕ್ತಿಯನು 1 ನಂಬಿದೆ ಹರಿ ನಿನ್ನ ಚರಣವ ದೇವಾ ಅಂಬುಜ ನಯನನೆ ನಿನ್ನ ಭಕ್ತಿಯನು 2 ಬಹಳ ನೊಂದೆನು ಸಂಸಾರ ಜಾಲದಲೀ ಇಹ ಯಾತ್ರೆ ಮುಗಿಸುತ್ತ ಪರಗತಿಯನ್ನು 3 ವರ ದೂರ್ವಾಪುರದಲ್ಲಿ ನಿರುತನಾಗಿದ್ದು ಸರಸದಿ ಭಕ್ತರ ಪೊರೆವ ಶ್ರೀ ಹರಿಯೇ 4
--------------
ಕರ್ಕಿ ಕೇಶವದಾಸ
ಕಾವ ದೇವರು ನೀನೆ ಎನ್ನ ಕೈ ಪಿಡಿಯೋ ದೇವ ಹರಿ ತವಪಾದ ಮರೆಹೊಕ್ಕೆ ಕಾಯೊ ಪ ತರಳ ಪ್ರಹ್ಲಾದನಂ ಸಂಕಟದಿ ರಕ್ಷಿಸಿದಿ ಮರೆ ಬಿದ್ದ ಅಸುರನಿಗೆ ಸ್ಥಿರಪಟ್ಟ ಕೊಟ್ಟಿ ಕಂಟಕ ಭರದಿ ನೆರವಾಗಿ ತರಿದಯ್ಯ ತರುಣಿಯ ಮೊರೆ ಕೇಳಿ ಅಕ್ಷಯವನಿತ್ತಿ 1 ಶಿಲೆಯರೂಪದಿ ಬಿದ್ದ ಸತಿಯನುದ್ಧರಿಸಿದಿ ಕುಲಗೆಟ್ಟ ಅಜಮಿಳನ ಅಂತ್ಯದಲಿ ಕಾಯ್ದಿ ಒಲಿದು ನಭೋರಾಜನಂ ಶಾಪದಿಂದುಳಿಸಿದಿ ಅಳಿಯದ ಪದವಿ ನೀಡಿ ಧ್ರುವರಾಜನ್ಪೊರೆದಿ 2 ಭಕ್ತವತ್ಸಲನೆಂಬ ಬಿರುದಗಳ ಪೊತ್ತಿರುವಿ ಭಕ್ತನಿಗೆ ಬರುವ ನಿಖಿಲಾಪತ್ತುಗಳನು ಕತ್ತರಿಸಿ ಹಿತವಾದಭಕ್ತಿಯನು ಕರುಣಿಸಿ ನಿತ್ಯನಿರ್ಮಲಸುಖವ ನೀಡು ಶ್ರೀರಾಮ 3
--------------
ರಾಮದಾಸರು
ಗುರು ಸಾರ್ವ _ ಭೌಮಾ ದೊರಕಿಸುತ ಹರಿಕರುಣ ಪೊರೆ ರಾಘವೇಂದ್ರಾ ಪ ಅಂದು ಹರಿ ತವಶರದಿ ಕರ ಪೊರೆದಂತೆ ನಂದಿ ಸುತ ದುರಿತೌಘ ಇಂದೆನಗೆ _ ಮೈದೊರು ಗುರುವೇ ಕುಂದು ಮಯ ಕಲಿಯೊಳಗೆ ಕಂದುತಿಹ ಕಂದರನು ತಂದೆ ಗುರು ಕಾಯದಿರೆ ಮುಂದು ಬರೆ ಆಗುವದೆ ಸ್ವಾಮೀ 1 ಕತ್ತಲೆಯು ಸುತ್ತಿಹುದು ಮುತ್ತಿಹವು ಕುತ್ತುಗಳು ಬತ್ತಿಹವು ಶಕ್ತಿಗಳು ಹತ್ತವೈ ಚಿತ್ತದೊಳು ಏನೂ ಎತ್ತುಗಳ ತೆರದಂತೆ ಸುತ್ತುತಲಿ ಭವದಲ್ಲಿ ಭಕ್ತಿಯನು ಕಾಣದಲೆ ಮೃತ್ಯುವಿಗೆ ತುತ್ತಾಹೆ ನಲ್ಲೋ 2 ಪರಿಪರಿಯ ಹರಕೆಗಳ ಪೂರೈಸಿ ಭಕುತರಿಗೆ ನಿರುತದಲಿ ಪೊರೆವವಗೆ ಭಾರವೇ ನಾ ನೊಬ್ಬ ಧೊರೆಯೇ ಗುರು ಸೇವೆ ಮಾಡರಿಯೆ ಬರಿ ಮೂಢ ಕಡು ಪಾಪಿ ಶಿರವಿಡುವೆ ಚರಣದಲಿ ಕರುಣಾಳು ಭರವಸೆಯೆ ನನಗೇ 3 ಪ್ರಹ್ಲಾದ ಬಲಿತಾತ ಬಾಹ್ಲೀಕ ಕುರುಪೋಷ ಶ್ರೀ ಹರಿಯು ಗುರುಭಕ್ತಿ ವಾಹಿನಿಯ ಹರಿಸೈಯ ಸತ್ಯಸಂಧಾ ದೇಹದಲಿ ಬಲವಿಲ್ಲ ಈಹಗಳು ಬಿಡದಲ್ಲ ಬಾಹಿರನು ನಿನಗಲ್ಲ ತ್ರಾಹಿ ಗುರು ನೀ ಬಲ್ಲೆ ಎಲ್ಲಾ4 ಶ್ರೀ ಮಧ್ವ ಗುರು ಚೇಲ ತಾಮಸರ ನಿರ್ಮೂಲ ಶ್ರೀಮಂತ ಗುಣಮಾಲ ಶ್ರೀ ಮನೋಹರ ಕೃಷ್ಣವಿಠಲ ಯಜಕಾ ಕಾಮಿತಾ ಫಲದಾತ ನೇಮದಲಿ ಹರಿನಾಮ ನುಡಿಸೆಂಬೆ ಸತತಾ 5
--------------
ಕೃಷ್ಣವಿಠಲದಾಸರು
ತಪ್ಪುಗಳೆಲ್ಲವು ಒಪ್ಪುಗೊಳ್ಳಯ್ಯ ಶ್ರೀ ಚಪ್ಪರ ಶ್ರೀನಿವಾಸಪ. ಸರ್ಪರಾಜಗಿರಿಯಪ್ಪ ತಿಮ್ಮಪ್ಪನೆ ದರ್ಪಕತಾತನೆ ತಾ ಸಜ್ಜನಪ್ರೀತಅ.ಪ. ಮಾಧವ ನಿನ್ನಯ ಮಹಿಮೆ ತಿಳಿಯದಪ- ರಾಧವ ಮಾಡಿದೆ ದಾರಿದ್ರ್ಯದ ಪಾದ ದರುಶನದ ಗಾದಿಯ ಕಾಣದಾದೆ ನಾ ದ್ರೋಹಿಯಾದೆ1 ತ್ರಾಣವಿರುವಾಗ ಕಾಣಿಕೆ ಹಾಕಿದೆ ದೀನದಾರಿದ್ರ್ಯದ ಹೊತ್ತಿನಲಿ ಮೇಣದರಿಂದಲಿ ತೆಗೆದು ತೆಗೆದು ಪಂಚ ಪ್ರಾಣಕ್ಕಾಹುತಿಯ ಕೊಟ್ಟೆ ಅಪರಾಧ ಪಟ್ಟೆ2 ಮಂದವಾರದಿಕ್ಕೊಂದೂಟವ ಸತ್ತ್ವ ದಿಂದಿರುವಾಗ ನಾ ನೇಮಗೈದೆ ಮಂದಭಾಗ್ಯ ಜ್ವರದಿಂದ ಪೀಡಿತನಾದ- ರಿಂದೆರಡೂಟವನೂ ಮಾಡಿದೆ ನಾನು3 ಶನಿವಾರಕ್ಕೊಂದಾಣೆ ಕಾಣಿಕೆ ಹಾಕುತ್ತ ಮಿನುಗುವ ಡಬ್ಬಿಯ ನಾ ಮಾಡಿದೆ ಎನಗೆ ದಾರಿದ್ರ್ಯವ ಕೊಟ್ಟ ಕಾರಣದಿಂದ ಹಣವೆಲ್ಲ ಗುಣ ನುಂಗಿತು ಪಾದಕೆ ಗೊತ್ತು4 ದೊಡ್ಡದಾರಿದ್ರ್ಯದ ಗುಡ್ಡೆ ಬಿದ್ದುದರಿಂದ ದುಡ್ಡೆಲ್ಲ ತೆಗೆದೆ ನಾ ದಡ್ಡನಾಗಿ ಅಡ್ಡಬಿದ್ದು ಕೈಯೊಡ್ಡಿ ಬೇಡುವೆ ಸ್ವರ್ಣ ಗುಡ್ಡೆಯ ಮೇಲಿರುವ ಮಹಾನುಭಾವ5 ಭಂಡಾರದ್ರೋಹ ಬ್ರಹ್ಮಾಂಡಪಾಪಾಗ್ನಿಯು ಮಂಡೆಯೊಳುರಿವುದು ಖಂಡಿತದಿ ಪುಂಡರೀಕಾಕ್ಷನೆ ಕರುಣಾಮೃತರಸ ಕುಂಡದೊಳ್ ಮೀಯಿಸಯ್ಯ ವೆಂಕಟರಾಯ6 ದೃಢಭಕ್ತಿಯನು ಕೊಟ್ಟು ಸಲಹಬೇಕಲ್ಲದೆ ಕೆಡುಕು ಮಾಡುವುದೇನು ಜಡಜನಾಭ ಕಡಲಶಯನ ಲಕ್ಷ್ಮೀನಾರಾಯಣ ನ- ಮ್ಮೊಡೆಯ ಪಡುತಿರುಪತೀಶ ರವಿಕೋಟಿಭಾಸ7
--------------
ತುಪಾಕಿ ವೆಂಕಟರಮಣಾಚಾರ್ಯ
ದಯಮಾಡು ಬಡವಗೆ ಮಹರಾಯ ದಯಾಕರ ವಿಜಯವಿಠಲರಾಯ ಪ ದೃಢದಿಂದಲಿ ನಂಬಿ ಬೇಡುವೆನು ಕೊಡುಗಡ ನಿನ್ನಡಿಭಕ್ತಿಯನು ಕಡುಪೀಡಿಪ ಈ ಜಡಬಡತನದಿಂ ಕಡೆಹಾಯ್ಸೆನ್ನನು ಕಡುದಯದಿಂ ಪೊರೆ 1 ಸೆರೆಗೊಡ್ಡಿ ಬೇಡುವೆ ಮಾಧವ ಕರುಣದಿ ಕರುಣಿಸು ವರವ ಪರಿಭವ ದು:ಖವ ಪರಿಹರಿಸಿ ನಿಮ್ಮ ಸ್ಮರಣೆಯೊಳಿರಿಸೆನ್ನ 2 ಸತ್ಯಭಾಮೆರಮಾಕಾಂತನೆ ಭಕ್ತರ ಕಕ್ಕುಲಾತಿದೇವನೆ ನಿತ್ಯನಿರಂಜನ ಮುಕ್ತಿದಾಯಕ ಉತ್ತಮಮತಿಕೊಡು ನಿತ್ಯಾತ್ಮ ಶ್ರೀರಾಮ 3
--------------
ರಾಮದಾಸರು
ದಾಸನಾಗುವೆ ಭಜಿಪ ಭಕ್ತಿಯನು ನೀಡೆನ್ನ ನಾನೇನೂ ಮಾಡಲಾರೆ ರಂಗಯ್ಯ ನೀನೆನ್ನ ಸಲಹ ಬೇಕು ಪ ಗಾನಲೋಲನ ನಾಮ ಭಜನೆಯೊಂದುಳಿದು ನಾ ನನ್ಯರೀತಿಯ ಕಾಣೆ ಸಲಹಯ್ಯ ಹರಿಯೇ ಅ.ಪ. ತರಳಾ ಧ್ರವನಂತೆ ತಪನ ನಾನರಿಯನು ಸರಳೆ ದ್ರೌಪದಿಯಂತೆ ಸ್ತೋತ್ರವನರಿಯೇ ಹರಿದಾಸರಂತೆ ದಾಸತ್ವ ನಾನರಿಯೆನು ಪರಮ ಸೇವಕರಂತೆ ಸೇವೆಯ ನರಿಯೇ 1 ಅಸುರನಂದನನಂತೆ ಕೀರ್ತನೆಯರಿಯೆನು ವಸುಧೀಶನಂತೆ ನಾ ವ್ರತಗಳನರಿಯೇ ವಸುಮತಿಯಂತೆ ನಾ ಯಾಚನೆಯರಿಯೆನು ಋಷಿ ವೃಂದದಂತೆ ನಾ ಭಕ್ತಿಯನರಿಯೇ 2 ಸಿರಿಯಂತೆ ನಿನ್ನನು ಸೇವಿಸಲರಿಯನು ಕರಿಯಂತೆ ಸ್ಮರಣೆಯ ಮೊದಲು ನಾನರಿಯೆ ಸುರಮುನಿಯಂತೆ ನಾ ಗಾಯನವರಿಯೆನು ಸಿರಿ ಚನ್ನಕೇಶವ ಭಜನೆಯನರಿವೇ 3
--------------
ಕರ್ಕಿ ಕೇಶವದಾಸ
ಧನ್ಯನಾಗೆಲೊ ಮುನ್ನ ಹರಿಯ ಕಾ ರುಣ್ಯವನೆ ಪಡೆದು ಮಾನವನೆ ಪ ಬನ್ನ ಬಿಡಿಸುವ ಪನ್ನಗಾರಿ ಧ್ವಜನನ್ನು ಧ್ಯಾನಿಸುತ ಅ.ಪ ಕಣ್ಣಿನಿಂದಲಿ ನೋಡು ಹರಿಯಲಾವಣ್ಯ ಮೂರ್ತಿಯನು ಕರ್ಣದಿಂದಲಿ ಕೇಳು ಹರಿಯ ಪಾವನ್ನ ಕೀರ್ತಿಯನು ಅನ್ಯವಾರ್ತೆಗಳಾಡದೆ ವದನದಿ ಘನ್ನ ಹರಿಯಗಣಗಳನ್ನೇ ಬಣ್ಣಿಸುತ 1 ಹಸ್ತವೆರಡು ಹರಿಮಂದಿರ ಮಾರ್ಜನಕೃತ್ಯ ಮಾಡುತಿರಲಿ ಮತ್ತೆ ಪಾದಗಳು ಚಿತ್ತಜನಯ್ಯನ ಕ್ಷೇತ್ರ ತಿರುಗುತಿರಲಿ ಭೃತ್ಯನಾಗಿ ಬಲು 2 ಇಂತು ಪಡಿಯೊ ಶಿರಿಕಾಂತನಲ್ಲಿ ಏಕಾಂತ ಭಕ್ತಿಯನು ಭ್ರಾಂತಿಯ ಬಿಡು ನೀನು ಪೇಳುವ ಮಹಂತರ ಸೇವಿಸಿ 3 ಸಾರ್ಥವಿದೆ ತಿಳಿ ಪಾರ್ಥಸಖನು ಸರ್ವತ್ರ ಇಹನೆಂದು ಗಾತ್ರದೊಳು ಪ್ರತ್ಯಗಾತ್ಮನಲ್ಲಿ ಸದ್ಭಕ್ತಿಮಾಡು ತಿಳಿದು ಮತ್ರ್ಯ ಜನ್ಮಕಿದು ಸಾರ್ಥಕವೊ ಸುಖತೀರ್ಥರ ಕರುಣಾ ಪಾತ್ರನಾಗಿ ಬಲು 4 ಈ ತೆರದಿ ಸಂಪ್ರಾರ್ಥಿಪರಿಗಿಷ್ಟಾರ್ಥಗಳ ಕೊಡುವಾ ಭೂತಲದಿ ಪ್ರಖ್ಯಾತ ಕಾರ್ಪರ ಕ್ಷೇತ್ರದಲಿ ಮೆರೆವ ಪಾತಕ ಹರ ಶಿರಿನಾರಶಿಂಹನ ಕೃಪಾತಿಶಯದಿ ನಿ ರ್ಭೀತನಾಗಿ ಬಲು 5
--------------
ಕಾರ್ಪರ ನರಹರಿದಾಸರು
ನಿತ್ಯ ನಿರುಪಮ ಚಿದಾನಂದ ಕರುಣಾಬ್ಧಿ ನೀನೆ ದೊರಕೆ ನಿಲುಕೆ ಅಪಮಂಗಳನೆ ಮಂಗಳವನಿತ್ತೆ ಮನಸಿಗೆ ನೀನು ಅಂಗ ಮಂಗಳವಾುತುಹಿಂಗಿದವು ದುರಿತಗಳು ಸಂಗವಿದ್ದರು ಜಡದ ತೊಂಗವವ ಮನ ಮೀರಿತುನುಂಗುತಿದೆ ದೋಷಗಳ ಬಂದಡೊಡಬನ ತೆರದಿ ಭಂಗವೆಂಬುದು ಹೋುತುಅಂಗ ಲಿಂಗದ ಕಾಂತಿ ಹೊಂಗಿ ಹೊರಹೊಮ್ಮುತಿದೆ ರಂಗ ನಿನ್ನೊಲವಾುತು ುನಿತು 1ಹೊನ್ನಿನೊಳಗಿದ್ದ ಮಲಿನವನಗ್ನಿ ಕಳಚಿದರೆ ಮುನ್ನಿನಂದದಿ ಮಲಿನವೆಹೊನ್ನಾದ ಕಬ್ಬಿನವು ಕಬ್ಬಿನದ ಸಂಗದಲಿುನ್ನು ಕಬ್ಬಿನ ಭಾವವೆಬೆಣ್ಣೆ ಕ್ಷೀರದಿ ಬಂದು ಘೃತವಾದ ಬಳಿಕ ತಾ ಬೆಣ್ಣೆಯಲ್ಲದೆ ಕ್ಷೀರವೆನಿನ್ನ ಕೃಪೆುಂದ ಮಂಗಳನಾಮವನು ಸ್ಮರಿಸೆ ನಿನ್ನವಗೆ ದೋಷ ಬಹವೆ ಇಹವೆ 2ಬಾಳೆಯನು ಬಿತ್ತಿ ಪ್ರತಿ ದಿವಸ ನೋಡಿದಡಲ್ಲಿ ನೀಳವಾಗಿಹುದು ಸುಳಿಯುಕಾಲ ಬಂದರೆ ಗೊನೆಯು ಹಾಯ್ದು ಫಲವಾಗಿರಲು ಮೇಲೊಮ್ಮೆಯುಂಟೆ ಯೆಲೆಯುಕಾಲ ಕರ್ಮಾಧೀನವಾಗಿರುವ ಸಂಸಾರ ಲೋಲ ಮನಸಿನ ವೃತ್ತಿಯುಜಾಲದಿಂದಿರಲಲ್ಲಿ ನಿನ್ನಂಘ್ರಿ ಸ್ಮರಣೆುಂಮೇಲುಂಟೆ ಕರ್ಮಗತಿಯು ಸ್ಥಿತಿಯು 3ವೃತ್ತಿ ಮಾಯಾಕಾರ್ಯ ಮಾಯೆ ನಿನ್ನಾಧೀನ ವೃತ್ತಿ ಮಾಯೆಯು ಕಲ್ಪಿತಸುತ್ತಿ ಸುಳಿಸುಳಿದಾಡಿ ಸತ್ಯದಂದದಿ ತೋರಿ ಮತ್ತೆ ನಿನ್ನೊಳಗರ್ಪಿತಚಿತ್ತು ತಾನೆ ನಾಮರೂಪಾದ ಬಗೆುಂದ ಚಿತ್ತು ಚಿತ್ತಾಹುದುಚಿತಸತ್ಯಸಂಧನು ನೀನು ಚಿತ್ತವನು ಬಿತ್ತರಿಸಿ ವೃತ್ತಿಯಾುತು ಬೆಳೆಯುತಾ ಇರುತಾ 4ಮನದ ಸಂಶಯ ಬಿಡದು ಶ್ರವಣಮನನಾದಿಗಳನನುದಿನವು ಮಾಡುತಿರಲುಮನಕೆ ಸಾಕ್ಷಿಕನಾದ ನೀನು ಘನಮಾಯೆಯನು ಮನಕೆ ಮರೆಮಾಡುತಿರಲುಚಿನುಮಯನೆ ಮಾಯೆಯನು ಕಡೆಗೆ ತೆಗೆಯಲು ಜ್ಞಾನ ಜನಿಸುವುದು ನೀನು ಕೊಡಲುಇನಕೋಟಿಸಂಕಾಶ ಇಭರಾಜದುರಿತಹರ ಎನಲು ನಿಜವಾಗುತಿರಲು ನಿಲಲು 5ತರಣಿಕಿರಣಗಳಿಂದ ಜನಿಸಿದಾ ಮೇಘಗಳು ತರಣಿಯನು ಮುಚ್ಚಲಳವೆತರಣಿ ತಾನೆನದಿವನು ಹರಹಿ ಹಿಂದಕೆ ತೆಗೆಯೆ ನೆರೆ ಹಿಂಗಿ ಹೋಗದಿಹವೆಪರಮಪುರುಷನು ನೀನು ಸ್ಮರಿಸಿ ಮಾಯೆಯ ಬೀಸಿ ತಿರುಗಿಸಲು ಮಾಯೆಗಿರವೆದುರಿತವಾಗಿರೆ ಜನಕೆ ನೆರೆ ಭಕ್ತಿಯನು ನೀನು ಕರುಣಿಸಲು ಮತ್ತೆ ಭವವೆ ಧ್ರುವವೆ 6ಅರಣಿುಂದುದುಭವಿಸಿದನಲ ಮುನ್ನಿನ ತೆರದ ಅರಣಿಯಾಗಿಯೆ ತೋರ್ಪನೆಅರೆದು ತಿಲವನು ತೆಗೆಯೆ ತೈಲವನು ತಿಲ ಬಳಿಕ ಇರುವದೆ ತೈಲದೊಡನೆಬೆರೆದು ಕರ್ಪುರವಗ್ನಿಯೊಡನಾಡಿ ಬೇರ್ಪಟ್ಟು ಮೆರೆವುದೆಂತಗ್ನಿಯೊಡನೆತಿರುಪತಿಯ ವೆಂಕಟನೆ ನಿನ್ನ ಚರಣದೊಳಿಟ್ಟ ಶರಣ ಮುನ್ನಿನ ಮನುಜನೆಯಹನೆ 7ಓಂ ಪುಣ್ಯ ಶ್ಲೋಕಾಯ ನಮಃ
--------------
ತಿಮ್ಮಪ್ಪದಾಸರು
ಪರಮಹಂಸ ಪರಿವ್ರಾಜಕ ಗುರುವರ್ಯ | ಶಿರಬಾಗುವೆ ಆರ್ಯ ಪ ಚರಣಕಮಲ ನೆರೆನಂಬಿಹೆ ನಾನಿನ್ನು | ಭಜಕರ ಸುರಧೇನು ಅ.ಪ ಪುರುಷೋತ್ತಮ ಯತಿಕರ ಸರಸಿಜ ಜಾತ | ಜಗದೊಳಗೆ ಪುನೀತ ಅರಿಷಡ್ವರ್ಗವ ದೂರಗೈದ ಧೀರ | ಶರಣರಿಗಾಧಾರ ತರಣಿ ಸದೃಶ ಸುವಿರಾಜಿತ ಶುಭಗಾತ್ರ | ಪಾವನ ಚರಿತ್ರ ನಿರುತ ನಿಮ್ಮ ಸಂಸ್ಮರಿಸುವ ನರಧನ್ಯ | ಭುವಿಯೊಳು ಸನ್ಮಾನ್ಯ 1 ವ್ಯಾಸರಾಯ ಕರಪೂಜಿತ ಶ್ರೀ ಚರಣ | ನಿಗಮಾಗಮ ನಿಪುಣ ಶ್ರೀ ಸಮೀರಮತ ಸ್ಥಾಪಕ ಧುರೀಣ | ಸುಜ್ಞಾನಿವರೇಣ್ಯ ಭೂಸಿತ ಸದ್ಗುಣ ಸುಮಲಾಭರಣ | ಶರಣ ಸಂಜೀವನ ಭಾಸುರ ಸೂರ್ಯಾಂಶಜ ಯತಿಕುಲರತ್ನ | ಭೂಸುರ ಸನ್ಮಾನ್ಯ 2 ಯೋಗಿವರ್ಯ ಕರುಣಾಕರ ಗುಣನಿಲಯ | ಶುಭನಾಮಧೇಯ ನಾಗಶಯನ ಶ್ರೀ ಕರಿಗಿರಿನಿಲಯನ್ನ | ಪೂಜಿಪ ಗುರುರನ್ನ ಶುಭ ಚರಿತ | ದೂರೀಕೃತದುರಿತ ಬಾಗಿ ದೈನ್ಯದಲಿ ಬೇಡುವೆ ತವಚರಣ | ಭಕ್ತಿಯನುದಿನ 3
--------------
ವರಾವಾಣಿರಾಮರಾಯದಾಸರು
ಪಾಲಯಮಾಂ ಪಾರ್ವತಿಯೆ ಪಾಪ ವಿನಾಶಿನಿ ತಾಯೆ ಶೀಲ ಮೂರುತಿ ಶಿವೆ ಈ ಜಾಲ ಸಂಸಾರದಿ ಪ. ತ್ರಿಜಗ ಪೂಜಿತೆ ನಿನ್ನ ಭಜಿಸೂವಾಮನವಿತ್ತು ಸುಜನರಾಪ್ತೆಯೆ ಎನ್ನಾ 1 ರಾಗ ರಾಗದಿ ನಿನ್ನ ಅನುರಾಗದಿಂ ಪೂಜಿಪೆ ಭಾಗ್ಯವನು ಕೊಟ್ಟು ನೀ ವೈರಾಗ್ಯ ಭಕ್ತಿಯನು 2 ಅರಿಶಿಣ ಕುಂಕುಮವನ್ನು ವರ ಮಾಂಗಲ್ಯದಾ ಭಾಗ್ಯ ನಿರುತದಿ ನೀಡುತ ಪೊರೆಯೆ ಶ್ರೀ ಶ್ರೀನಿವಾಸ ಸಹೋದರಿಯೆ3
--------------
ಸರಸ್ವತಿ ಬಾಯಿ
ಪೊರೆ ಸುರೇಶ ಶ್ರೀಶ ಶ್ರೀನಿವಾಸ ದುರಿತವಿನಾಶ ಪರಮಪ್ರಕಾಶ ಪ ಅನುದಿನ ನಿಮ್ಮಯ ನೆನವಿನಘನಸುಖ ಕರುಣಿಸಿ ಎನ್ನ ಕನಿಕರದೊಡನೆ 1 ಚಿಂತೆನಿವಾರಣ ಚಿಂತೆನೀಗಿಸಿ ಎನ್ನ ಸಂತತದಿಂಪೊರೆ ಸಂತರ ಪ್ರಿಯಕರ 2 ಹರಣಹೋದರು ನಿಮ್ಮ ಚರಣಭಕ್ತಿಯನು ಮರೆಯದದಟ ಮಿಗೆ ಕರುಣಿ ಶ್ರೀರಾಮ 3
--------------
ರಾಮದಾಸರು
ಬಾರಯ್ಯ ಶ್ರೀ ಚನ್ನಕೇಶವ ದೊರಿಯೇ ತೋರಯ್ಯ ನೀಡು ಭಕ್ತಿಯನು ಶ್ರೀ ಹರಿಯೇ ಪ ಸುಜನರ ಪೊರೆವಂಥ ಭಕ್ತಾಭಿಮಾನಿ ಕುಜನರ ತರಿವಂಥ ಸುಗುಣನಿಧಾನೀ 1 ದಶರೂಪ ತಳೆದಂಥ ಸ್ವಾಮಿ ಮುರಾರೀ ದಶರಥ ನಂದನ ದುರ್ಜನರ ವೈರೀ 2 ವರ ದೂರ್ವಾಪುರದಲ್ಲಿ ನಿರುತನಾಗಿರುವೀ ತರಳ ಬಾಲಕರಿಗೆ ನಿತ್ಯದಿ ಸಿಗುವೀ 3
--------------
ಕರ್ಕಿ ಕೇಶವದಾಸ