ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಕಲವೆಲ್ಲವು ಶಿವನ ಲಿಂಗದೊಳಗಡಗಿದುದು ಲಿಂಗವೆ ಮಾಲಿಂಗವಾಗಿ ತೋರುವುದು ಪ ಭಕುತಿಕರು ಮಮತೆಯೊಳು ಸ್ಥಾಪಿಸಿಯೆ ಅರ್ಚಿಸಲು ಸುಕೃತಫಲವನು ಅಳೆವ ಕೊಳಗವನು ಕಾಣೆ ಅ.ಪ ಆ ಮಹಾ ಸಹಸ್ರನಾಮದೊಳಗತ್ಯದಿಕ ಸೊಮೇಶನೆಂದೆಂಬ ಸ್ವಾಮಿಯನು ಕಂಡು ಸೋಮವಾರದ ದಿವಸ ಸಾಮರುದ್ರವ ಜಪಿಸಿ ನೇಮದಿಂ ಪೂಜಿಸಲು ಕಾಮಿತದ ಫಲವು 1 ಇನ್ನೇನ ವರ್ಣಿಸುವೆ ಈಶ ನಿನ್ನಯ ಮಹಿಮೆ ಉನ್ನಂತವಾಗಿ ಜಗದೊಳು ಚರಿಸಿತು ಪನ್ನಗೇಶನ ಬಲದ ಪಶ್ಚಿಮದ ದೆಸೆಯೊಳ್ ಪ್ರ- ಸನ್ನವಾದನು ಸೋಮನಾಥನೆಂದೆನುತ2 ಪಾದ ಪ್ರತ್ಯಕ್ಷವಾಗಿಯೆ ಸೋಮೇಶನೆಂದೀಗ ತಾ ಮೆರೆದುದು ಭುಕ್ತಿ ಮುಕ್ತಿಯನಿತ್ತು ಪ್ರೇಮದಿಂ ಸಲಹುತ್ತ ಕಾಮಿತಾರ್ಥವನೀವ 3 ಲೋಕೋಪಕಾರಕ್ಕೆ ಸೋಮೇಶ ನೀ ಬಂದೆ ಗೋಕರ್ಣ ಶ್ರೀಶೈಲ ಕಾಶಿ ರಾಮೇಶ್ವರವು ಬೇಕೆಂಬುದಿಲ್ಲಿನ್ನು ಎನ್ನ ಭೀತಿಯ ಗಿರಿಯ ಕುಲಿಶ ನೀನು ಜಗದೀಶ 4 ಜೋಕೆಯೊಳು ಮನದೊಳಗೆ ಅಡಗಿಸಿಯೆ ಭಜಿಸಿದರೆ ಯಾಕೆ ಮನದೊಳು ಬಿಡುವೆ ಶಿವನಾಮವನು ನೀನು ಏಕೆ ಕಡೆಯಲಿ ಕೆಡುವೆ ಮರುಳು ಜೀವನವೆ 5 ಸಡಗರದಿ ಸರ್ವವೂ ನಿನ್ನಲ್ಲಿ ಅಡಗಿದುದು ಜಡೆಯೊಳಗೆ ಅಡಗಿದುದು ಪೊಡವಿಗುತ್ತಮ ನದಿಯು ಉಡುಪತಿಯು ಅಡಗಿದನು ಊಧ್ರ್ವ ಫಣೆಯೊಳಗೆ ಪಿಡಿಯೊಳಗೆ ಅಡಗಿದುದು ವೇದ ಮೃಗರೂಪಾಗಿ 6 ಕಿಚ್ಚು ಅಡಗಿತು ಅವನ ಅಚ್ಚ ಹಣೆಗಣ್ಣಿನೊಳು ಮುಚ್ಚಿ ತೆರೆವಕ್ಷಿಯೊಳು ಮೂಜಗದ ಬೆಳಕು ಬಿಚ್ಚಿಟ್ಟಿ ವಿಷಕಂಠದೊಳು ಲೋಕವನು ಎಚ್ಚರಿಪ ಮಂತ್ರಗಳು ಬಾಯೊಳಗಡಗಿದುದು 7 ಶುದ್ಧ ಸ್ಫಟಿಕ ಥರದ ಕಾಯಕಾಂತಿಗಳುಳ್ಳ ಬದ್ಧುಗೆಯ ದಾರದಂದದಿ ಉರಗನೊಪ್ಪುಗಳು ಉದ್ದಿಶ್ಯವಾಗಿ ಭಜಿಸಿದ ಭಕ್ತರುಂಡಗಳು ತಿದ್ದಿಟ್ಟಿ ಆಭರಣ ತಿರಿಶೂಲಧರಣ 8 ಪುಲಿಕರಿಯ ಪೊಳವುಗಳು ನಳನಳಿಪ ವಸನಗಳು ಹೊಳೆವ ಮುಖತೇಜಗಳು ನಳಿನನೇತ್ರಗಳು ನಲಿವಗಣ ಕೋಟಿಗಳ ಮಧ್ಯದೊಳು ಕೈಲಾಸ ಇಳಿದು ಬಂದನು ನಮ್ಮ ಬಳಿಗೆ ಸೋಮೇಶ 9 ನಾಸಿಕದಿ ಕೌಮಾರಿಗವಧಿಯಾಗಿಹ ಸ್ಥಳ ವಿ- ಶೇಷವಾಗಿಹ ಶುದ್ಧ ರೌಪ್ಯಪುರದೊಳಗೆ ಭೂಸುರೋತ್ತಮಗೊಲಿದು ಭೂರಿಭಾಗ್ಯವನಳೆದು ವಾಸವಾದೆಯೊ ಜಗದೀಶ ಸೋಮೇಶ 10 ಭಾಳನೇತ್ರನೆ ನೀಲಕಂಠ ಶೂಲಾಸ್ಥಿಧರ ಕಾಲರುದ್ರ ವ್ಯಾಳಭೂಷ ಸರ್ವೇಶ ಲಾಲಿಸೈ ಬಿನ್ನಪವ ಪಾಲಿಸೆನ್ನನು ಬೇಗ ಬಾಲಕನು ಅಲ್ಲವೇ ಭಕ್ತಸುರಧೇನು 11 ಸಾರಿ ನೋಡಿರೊ ಮೂರು ಲಿಂಗವನು ನೀವೀಗ ಧಾರುಣಿಯಳೊಂದು ಶಿವಲಿಂಗವನು ಬೇಗ ಮೇರುವಿಗೆ ಸಮವಾದ ಹೇಮವನು ವಿಪ್ರರಿಗೆ ಧಾರೆಪೂರ್ವಕವಾಗಿ ಇತ್ತ ಫಲ ಒದಗುವುದು 12 ಶಿವನ ಪೂಜೆಯೆ ಭಕ್ತಿ ಶಿವನ ಪೂಜೆಯೆ ಮುಕ್ತಿ ಶಿವಮಂತ್ರವೆ ಶಕ್ತಿ ಶಿವನೆ ಪರಶಕ್ತಿ ಶಿವನಾಮವನು ಭಜಿಸಿ ಸಿರಿಯ ಪಡೆದನು ಹರಿಯು ಶಿವನ ಮರೆಯದೆ ಭಜಿಸು ಇಹಪರವ ಸೃಜಿಸು13 ನಿನ್ನನೇ ನಂಬಿದೆನು ಉನ್ನತಾನಂತೇಶ ಮನ್ನಿಸಿ ದಯದೋರು ಚಂದ್ರಮೌಳೀಶ ಇನ್ನು ಭಯವಿಲ್ಲೆನೆಗೆ ಹರಸೆನ್ನ ಸೋಮೇಶ ಎನ್ನೊಡೆಯ ಶ್ರೀಕೃಷ್ಣ ವರಾಹತಿಮ್ಮಪ್ಪ 14
--------------
ವರಹತಿಮ್ಮಪ್ಪ
ಯೆಂದು ಪಿಡಿಯುವಿ ಕೈಯ್ಯ ಇಂದಿರೇಶ ಚಲುವ ಕೃಷ್ಣನೆ ಪ ಮುಂದೆ ಹೋಗಲು ಬಂಧಮಾಡುತ ಕುಂದು ಅಳಿಯುತ ತಂದೆ ದಯೆತೊರಿ ಅ.ಪ ಮಂದ ನಾನಯ್ಯ ಕಂದಿ ಕುಂದಿದೆ ಭವದಿ ಕೇಳಯ್ಯ ಬಂಧು ಬಳಗವು ಯಾರು ಇಲ್ಲಯ್ಯ ನಿಂದು ಮುಂದಿನ ದಾರಿ ನಡೆಸಯ್ಯ ಜೀಯಾ ಅಂದು ಸಭೆಯೊಳು ಮಂದಗಮನೆಯ ಒಂದು ನೊಡದೆ ಬಂದು ಸಲಹಿದ ಸಿಂಧು ಶಯನಾನಂದ ಮೂರುತಿ ನಂದನಂದನ ಶ್ಯಾಮಸುಂದರ ಬಂಧು ಸರ್ವರ ಬಂಧಮೋಚಕ ಮಂದರಾದ್ರಿ ಧರನೆ ಯದುಕುಲ ಚಂದ್ರ ಶೋಭಾಸಾಂದ್ರ ಕೃಷ್ಣನೆ ಬಂದು ಚಂದದಿ ಸಲಹಿ ಎನ್ನನು 1 ಬಾಲತನದಲ್ಲಿ ಲೀಲೆಗೋಷ್ಠಿಲಿ ಮೆರೆದೆ ನಾನಲ್ಲಿ ಮೇಲೆ ಯೌವನ ಒಡನೆ ಬಂತಲ್ಲಿ ಲಲನೆ ಕೇಳಿಲಿ ಮುಳುಗಿ ಹೋದೆನು ಅಲ್ಲಿ ಮೆಲ್ಲಮೆಲ್ಲನೆ ಮುಪ್ಪು ಬಂತಲ್ಲಿ ಕಾಲಕಳೆದೆನು ಪಗಡೆ ಜೂಜಿನಲಿ ಮಲ್ಲಮರ್ದನ ಮಾತುಲಾಂತಕ ಚಲ್ವಸೂಕರ ಪುಲ್ಲಲೊಚನ ಪುಲ್ಲನಾಭನೆನಲ್ಲ ಸರ್ವರ ಬಿಂಬರೂಪನೆ ಎಲ್ಲ ಕಾಲದಿ ಎಲ್ಲಮಾಡುತ ನಿಲ್ಲದೆಜಗ ಸಾರ ಶ್ರೀ ನಲ್ಲ ನಿನ್ನಯ ಎಲ್ಲ ಬಲ್ಲವರಿಲ್ಲ ಎಲ್ಲಿಯೂ ಬುದ್ಧ ಕಲ್ಕಿಯೆ ಸೊಲ್ಲು ಲಾಲಿಸಿ ಒಲಿದು ಬಂದ ನಾರಸಿಂಹನೆ ಇಲ್ಲ ಸಮರು ಅಧಿಕರೈಯ್ಯ ಪೂರ್ಣದೇವನೆ2 ಮೂರು ತಾಪವ ಹರಿಪ ಬಗೆಯೇನೋ ವೈರಿ ಆರರ ಭರದಿ ತರಿ ನೀನೂ ಮೂರು ಋಣಗಳು ಉಳಿಯೆಗತಿಯೇನು ಮೂರು ಕರ್ಮದಿ ಬಿಡಿಸಿ ಹೊರೆಯನ್ನು ಭಕ್ತಸುರಧೇನು ಸಾರಸಜ್ಜನ ಪ್ರಾಪ್ಯ ಶುಭಗುಣ ಸಾರ ಕರುಣಾ ಪೂರ್ಣವಾರಿಧಿ ಮಾರಜನಕನೇ ಋಷಭಮಹಿದಾಸ ತೋರು ಜ್ಞಾನವ ಬಾದರಾಯಣ ಮೀರಲಾರೆನು ವಿಷಯವಾಸನೆ ಭಾರತೀಶನ ಒಡೆಯ ಕೃಷ್ಣನೆ ಭಾರ ನಿನ್ನದು ಎನ್ನ ಪೊರೆವದು ಮತ್ಸ್ಯ ವಾಮನ ಧೀರ ಧೃವನಾ ಪೊರೆದ ವರದನೆ ಬೀರಿ ಭಕ್ತಿ ಜ್ಞಾನ ವೈರಾಗ್ಯ 3 ಎನ್ನ ಯೋಗ್ಯತೆ ನೋಡಿ ಫಲವೇನು ನಿನ್ನ ಘನತೆ ತೋರಿ ಪೊರೆ ನೀನು ನಿನ್ನ ದಾಸನ ಮಾಡು ಎನ್ನನ್ನು ಅನ್ಯಹಾದಿಯ ಕಾಣೆ ನಾ ನಿನ್ನು ಬೆನ್ನು ಬಿದ್ದೆನು ಇನ್ನೂಮುನ್ನೂ ಮಾಧವ ವಿಶ್ವ ತೈಜಸ ಪ್ರಾಜ್ಞತುರಿಯ ಹಂಸ ವಿಷ್ಣುವೇ ಜ್ಞಾನ ಭೋಧಕ ಸನತ್ಕುಮಾರನೇ ಮೌನಿ ದತ್ತಾತ್ರೇಯ ಹಯಮುಖ ದೀನವತ್ಸಲ ಯಜ್ಞ ಧನ್ವಂತ್ರಿ ಶ್ರೀನಿವಾಸ ರಾಮ ಕಪಿಲನೆ ಜ್ಞಾನ ನಿಧಿ ಮುನಿ ನಾರಾಯಣನೆ ನೀನೆ ಅನಿರುದ್ಧಾದಿ ರೂಪನು ಧ್ಯಾನಗೊಚರ ಶಿಂಶುಮಾರನೆ ಸಾನುಕೂಲದಿ ನೀನೆ ವಲಿಯುತ ಕರ್ಮ ಸಂಚಯ4 ಆದಪೊದ ಮಾತು ಏಕ್ಕಯ್ಯ ಮಧ್ವರಾಯರ ಪ್ರೀಯ ಶೃತಿಗೇಯ ಮೋದದಾಯಕ ಮುಂದೆ ಸಲಹೈಯ್ಯ ಪಾದಪದ್ಮದಿ ಶರಣು ಅಲ್ಲದೆ ಏನು ಮಾಡಲಿ ಜೀಯ ಅಯ್ಯ ತಿದ್ದಿ ಮನವನು ಕದ್ದು ಅಘವನು ಒದ್ದು ಲಿಂಗವ ಶುದ್ಧಜ್ಞಾನದ ಸಾಧು ಜಯಮುನಿ ವಾಯುವಂತರ ಮಾಧವ ಶ್ರೀ ಕೃಷ್ಣವಿಠಲನೆ ಪಾದ ಮಧುಪರ ವೃಂದ ಮಧ್ಯದಿ ವೇದ ಸಮ್ಮತ ಗಾನ ಸುಧೆಯನು ಶುದ್ಧಭಕ್ತಿ ಜ್ಞಾನದೊಡಗೂಡಿ ಮೆದ್ದು ಪಾಡುತ ಕುಣಿವ ಭಾಗ್ಯವ ಮುದ್ದು ಕೃಷ್ಣನೆ ನೀನೆ ಎನಗಿತ್ತು 5
--------------
ಕೃಷ್ಣವಿಠಲದಾಸರು