ಒಟ್ಟು 6 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಇ) ಆತ್ಮನಿವೇದನೆ ಏನು ಮಾಡಲಿ ವೆಂಕಟೇಶ ಈ ಬೆಳೆಯು ಸೋನೆಯಿಲ್ಲದೆ ಉರಿದುದು ಪ ನಾನಾ ಪ್ರಕಾರದೊಳು ಹಾನಿಯಾಯಿತು ಇರವು ಹೀನರಾದೆವು ನಾವು ಶ್ರೀನಿವಾಸನೆ ಕೇಳು ಅ.ಪ ಮೂಡದೆಸೆಯಳು ಬಂದುದು, ಆ ಮಳೆಯು ಬಡಗದೆಸೆಯಳು ಸುರಿದುದು ಎಡಬಿಡದೆ ತೆಂಕ ಕಡೆಯಲಿ ಹೊಡೆದ ಮಳೆಯು ತಾ ನಡುವೆ ಬಿಡುವುದು ಯಾತಕೆ 1 ಕಟ್ಟುಕಡು ಮದಗ ಸಹಿತ, ಈ ಊರ ತಲೆ ಗಟ್ಟಿನೊಳು ನಾ ಕಾಣೆನು ಕೆಟ್ಟು ಹೋಯಿತು ಮಳೆಯು ಹೊಟ್ಟೆಯನು ಉರಿಸುತ್ತ ದೃಷ್ಟಿಯಲಿ ನೋಡು ನೀನು 2 ಮಳೆಯಿಲ್ಲದಿಳೆಯಾರಿತು, ನಟ್ಟಿರ್ದ ಫಲವೆಲ್ಲ ಬೆಳೆ ಕೆಟ್ಟಿತು ಸ್ಥಳದ ತೆರಿಗೆಯ ಬಿಟ್ಟು ಕಳುಹುವನೆ ದೊರೆ ತಾನು ಎಳೆದೆಳೆದು ಕೊಲುವನಲ್ಲ 3 ಕಷ್ಟ ಬಂದುದು ನಮ್ಮ ಕಡೆಗೆ, ಈ ವೃಷ್ಟಿ ಬಿಟ್ಟು ಪೋದುದು ಇಳೆಯನು ಸುಟ್ಟ ಊರೆಲ್ಲವನು ತಟ್ಟಿನಾರಿದ ಮೇಲೆ ಮುಟ್ಟಿ ನೋಡುವರಿಲ್ಲವೊ 4 ಹದಿನಾಲ್ಕು ಲೋಕವನು ನೀ ನಿನ್ನ ಉದರದೊಳಗಳವಟ್ಟಿಹೆ ಬೆದರುತಿದೆ ಈ ಲೋಕ ಒದರುವುದು ಜನರೆಲ್ಲ ಉದುರದೇತಕೆ ಇಳೆಗೆ ಮಳೆಯು 5 ಎಲ್ಲ ಬೇಡಿಯೆ ಕೊಂಬರು, ಈ ಹರಕೆ ಯಲ್ಲಿ ಅಂತರಬಾರದು ಹಲ್ಲು ಬಾಯಾರಿರ್ದ ಮಕ್ಕಳಿಗೆ ಎಳೆನೀರು ಬೆಲ್ಲವಾಗಿಹ ಮಳೆಯನೆರೆಯೊ 6 ನೀಲಮೇಘಶಾಮ ವರ್ಣ, ಕಾಣಲಾ ಮೂಲೋಕದೊಡೆಯಾ ನಿನ್ನ ಕಾಲಮೇಘವು ನಿನಗೆ ದೂರವಾಗುವುದುಂಟೆ ಆಲಸ್ಯ ಮಾಡಬೇಡ 7 ಬಡವರೆಲ್ಲರು ಕೂಡಿಯೇ, ಒಪ್ಪು ಕೈ ವಿಡಿದು ಬೇಡಿಯೇ ಕೊಂಡೆವು ಸಿಡಿಲು ಮಳೆ ಮಿಂಚುಗಳು ಹೊಡಕರಿಸಿ ಬರುವಂತೆ ಒಡೆಯ ದಯದೋರೊ ನೀನು 8 ಸ್ವಾಮಿ ನಿನ್ನಯ ನಾಮವು, ಜನರಿಂಗೆ ಕಾಮಿತಾರ್ಥವನೀವುದು ಪ್ರೇಮವಾಗಿಹ ಮಳೆಯ ಭೂಮಿಯಲಿ ಇಳಿಬಿಟ್ಟು ನಾಮವಾಗೆವು ಸ್ವಾಮಿ ವರಾಹತಿಮ್ಮಪ್ಪ 9
--------------
ವರಹತಿಮ್ಮಪ್ಪ
(ರುದ್ರದೇವರು) ಬಾರೋ ಬ್ಯಾಗನೆ ಗಿರಿಜಾರಮಣನೆ ಪ ನಾರದನುತ ಪಾದಾರವಿಂದ ತೋರಲು ಅ.ಪ ಭಕುತರ ವೃಂದಕೆ ಭಕುತಿ ಮುಕುತಿಯಿತ್ತು ಯುಕುತಿಲೆÉ ಪೊರೆಯುವ ಶಕುತಿಯ ತೋರಲು 1 ಭೂಮಿಯೊಳಿಹ ಸರ್ವ ಪಾಮರ ಜನರಿಗೆ ಕಾಮಿತಫಲವೆಲ್ಲ ಪ್ರೇಮದಿ ಈಯಲು 2 ಮಡದಿಯ ನುಡಿಗೆ ನಿನ್ನಡಿಗೆ ಬಂದಂಥ ಬಡವನ ಪೋದಂತೆ ತಡವ ಮಾಡದೆ ಈಗ 3 ಶಿರಿವತ್ಸಾಂಕಿತನೆಂದು ವರಶ್ರುತಿಗಳು ನಿನ್ನ ಕರೆದು ತ್ರಿಜಗದ ನರಪನೆ ಈಗಲೆ 4
--------------
ಸಿರಿವತ್ಸಾಂಕಿತರು
ಇದೇ ಪರಮಾರ್ಥ ಪ್ರಾಪ್ತಿಗೆ ಸೋಪಾನ ತಿಳಿ ಇದರಲ್ಲಿ ಬೇಡಿನ್ನು ಅನುಮಾನ ಇದೇ ಬಕುತಿಮಾರ್ಗವೇ ಸುಲಭ ಸೋಪಾನ ತಿಳಿ ವೈರಾಗ್ಯಜ್ಞಾನಾದಿಗಳ ತಾಣಾ ಪ ಸಂಸಾರದೊಳಗಿರ್ದ ಜೀವಂಗೆ ಸುಖದುಃಖದಿ ಬಳಲುವ ಮನುಜಂಗೆ ಕಂಸಾರಿ ಶ್ರೀ ಕೃಷ್ಣನಾಮವೊಂದೇ ಪಾಪ ಸಂಹಾರಿ ಪರಶಿವನಾಮವೊಂದೇ ಈ ಸಂಸಾರ ದಾಂಟುವಾ ನಿಜತಾಣಾ1 ನಿಷ್ಕಾಮ ಮನದಿಂದ ಭಜಿಸಲ್ಕೆ ಬಹು ದುಷ್ಕರ್ಮ ಫಲವೆಲ್ಲ ತೊಲಗಲ್ಕೆ ಶ್ರೇಷ್ಠ ವೈರಾಗ್ಯವು ನೆಲೆಸಲ್ಕೆ ಬಲು ಜಿಜ್ಞಾಸೆ ಮನದಲ್ಲಿ ಜನಿಸಲ್ಕೆ ಈ ಪರಮಾತ್ಮಧ್ಯಾನ ಮಹಾಸಾಧನಾ 2 ಆತ್ಮಜ್ಞಾನದ ಬೋಧನೆಗೊಂಡು ಪರಮಾತ್ಮನ ರೂಪವೆ ತಾನೆಂದೂ ಬರಿ ತೋರ್ಕೆ ಜಗವೆಲ್ಲ ಪುಸಿ ಎಂದೂ ಪರಮಾತ್ಮನೆ ನಿತ್ಯನು ನಿಜವೆಂದೂ ಪರಜ್ಞಾನವ ನೀಡಲ್ಕೆ ಈ ಸಾಧನ 3 ಪರಮಾರ್ಥನುಭವಿಗಳ ಸಂಗ ನೆರೆದೊರಕುತಲಿರುತಿರೆ ಭವಭಂಗ ವರ ಭಕ್ತಿ ಮಾರ್ಗದಿ ದೊರಕುವದೆಂದ ಇದೆ ಪರಮಾರ್ಥ ಪ್ರಾಪ್ತಿಗೆ ಮೂಲವೆಂದ ಇದೆ ಗುರುಶಂಕರಾನಂದಕೃಪೆಯಿಂದ 4
--------------
ಶಂಕರಭಟ್ಟ ಅಗ್ನಿಹೋತ್ರಿ
ಎಂದು ಕಾಂಬೆನು ನಾನುಗೋ- ವಿಂದ ನಿನ್ನಯ ಪಾವನ್ನ ಪಾದವನ್ನು ನಾ ಪೊಂದಿಸೇವಿಸಿ ಆನಂದಪಡುವುದಕಿನ್ನು ಕರುಣಿಸೈ ಮುನ್ನ ಪ ಪೊಂದಿ ಮಹದಾನಂದ ಪಡೆಯಲು ಕಂದಿಕುಂದಿತು ತನುಮನೇಂದ್ರಿಯ ಇಂದೆ ತೋರಿಸೊ ಪಾದಕಮಲವ ಅ.ಪ ಬಾಲತನದಲಿ ನಾನು ಶ್ರೀಲೋಲ ನಿನ್ನಿಂದ ಪಾಲಿತನಾದೆನೊ ಬೆಲೆಯುಳ್ಳ ಆಯುವನೆಲ್ಲ ಕಳೆದು ಬಿಟ್ಟೆನು ನಾನು ಕೆಲಕಾಲದಲಿ ನಾ ಕಲುಶಕ್ರಿಯೆಗಳನ್ನು ಫಲವಿಲ್ಲದೆಸಗಿದೆನು ಎಲ್ಲರೊಳು ನೀ ನೆಲಸಿ ಜೀವರ ಎಲ್ಲಕರ್ಮವ ಮಾಡಿಸಿ ಫಲವೆಲ್ಲ ಅವರಿಗೆ ಇತ್ತು ನೀ ನಿರ್ಲಿಪ್ತನೆಂದು ತಿಳಿಯದಲೆ ಖುಲ್ಲಮಾನವರೊಡನೆ ಬೆರೆತು ಪುಲ್ಲಲೋಚನ ನಿನ್ನ ಮರೆದು ಇಲ್ಲ ಎನಗೆ ಎಣೆಯೆನುತ ನಾ ಬಲುಹೆಮ್ಮೆಯಿಂದಲಿ ದಿನಗಳ ಕಳೆದೇ ಇಲ್ಲನಿನಗೆಸರಿಯಿಲ್ಲ ನೀ ನಿಲ್ಲದಾಸ್ಥಳವಿಲ್ಲ ಜಗದಾ ಎಲ್ಲ ಕಾಲಗಳಲ್ಲಿ ಇಹ ಶ್ರೀನಲ್ಲ ನೀನೆಲ್ಲ ಬಲ್ಲೆಯೊ 1 ಬರಿದೇ ಕಾಲವ ಕಳೆದೇ ಶ್ರೀಹರಿಯೆ ನಿನ್ನಯ ಸ್ಮರಣೆಯನ್ನು ಮಾಡದೇ ಪರಿಪರಿಯ ತನುಮನ ಕ್ಲೇಶಗಳಿಗೊಳಗಾದೆ ನಾಮಸ್ಮರಣೆಯೊಂದಲ್ಲದೇ ಇನ್ನೆಲ್ಲಾ ಬರಿದೇ ಪರಮಕರುಣಾಶರಧಿ ಎಂಬುವ ಕರಿಧ್ರುವಬಲಿಮುಖ್ಯರೆಲ್ಲರ ಪೊರೆದ ಕೀರುತಿ ಕೇಳಿ ನಂಬಿದೆ ಶರಣಜನಮಂದಾರನೆಂದು ಅರಿಯೆ ನಾನವರಂತೆ ಸಾಧನ ಅರಿತು ಮಾಡುವ ಪರಿಯು ತಿಳಿಯದು ಬಿರುದು ಭಕ್ತಾಧೀನನೆಂದು ಹರಿಯೆ ನಿನ್ನಯ ಮರೆಯಹೊಕ್ಕೆನು ದುರಿತಶರಧಿಯೊಳಾಡುತಿರುವನ ಉ- ತ್ತರಿಸಲೊಂದೇ ನಾವೆಯಂತಿಹ ಚರಣಸ್ಮರಣೆಯಕೊಟ್ಟು ರಕ್ಷಿಸು ಪುರುಷಸೂಕ್ತಸುಮೆಯ ಜೀಯಾ2 ಶೇಷಗಿರಿಯವಾಸ ಶ್ರೀ ಶ್ರೀನಿವಾಸ ದೋಷರಹಿತ ಸರ್ವೇಶ ಮನೋ- ಕಾಶದಲಿ ಅನವರತ ನಿಲ್ಲೊ ಶ್ರೀಶಾ ಬಿಡಿಸೆನ್ನ ಭವಬಂಧ ಗ್ರಂಥಿಯ ಪಾಶಾ ಹರಿಸುವುದು ಕ್ಲೇಶಾ ಶ್ರೀಶ ನಿಗಗತಿಶಯವೆ ಎನ್ನಯ ವಿಷಯದಭಿಲಾಷೆಗಳ ಬಿಡಿಸೀ ದೋಷರಹಿತನ ಮಾಡಿಸೀ ಎನ್ನ ಪೋಷಿಸೋ ನಿನ್ನಸ್ಮರಣೆಯಿತ್ತು ದ್ವಾಸುಪ- ರ್ಣ ಶ್ರುತಿಗಳಿಂದಲಿ ಈಶ ದಾಸರ ಭಾವ ತಿಳಿಯದೆ ಮೋಸಹೋದೆನೊ ಬೋಧೆ ಇಲ್ಲದೆ ವಾಸುದೇವನೆ ರಕ್ಷಿಸೆನ್ನನು ಏಸುಕಾಲಕು ನೀನೆ ಗತಿ ಎಂದು ಆಸೆ ಮಾಡುವೆ ನಿನ್ನ ಕರುಣಕೆ ಬೇಸರದಲೆ ಮೊರೆಯ ಲಾಲಿಸಿ ಶ್ರೀಶ ಶ್ರೀ ವೆಂಕಟೇಶನೆ 3
--------------
ಉರಗಾದ್ರಿವಾಸವಿಠಲದಾಸರು
ಕಷ್ಟಹರಿಸೊ ಪರಮೇಷ್ಟಿಪಿತನೆ ನೀ ಕೈ ಬಿಟ್ಟರೆ ಸೃಷ್ಟಿಯೊಳು ಪಾರುಗಾಣುವುದೆಂತೂ ಪ ಇಷ್ಟದಿಂದಲೋ ಅನಿಷ್ಟದಿಂದಲೋ ನಾನೇ ಹುಟ್ಟಿಬಂದೆನೆ ದೇವ-ನಿನ್ನಿಷ್ಟದಿಂದಲ್ಲವೇ ಅ.ಪ ಬಿಂಬನೆನಿಸಿದೆ ಎನಗೆ ಪ್ರತಿಬಿಂಬ ನಾ ನಿನಗೆ ಬಿಂಬ ಪ್ರತಿಬಿಂಬಕೆ ಉಪಾಧಿಯು ನಿತ್ಯ- ವೆಂಬನ್ವಯಕೆ ಗುಣತ್ರಯಬದ್ಧವೇ ಕಾರಣ- ವೆಂಬ ಗುಣಜೀವಸ್ವರೂಪೋಪಾಧಿಯು ಬೆಂಬಲನೀನಿದ್ದೂ ಗುಣಕಾರ್ಯಕನುವಾಗಿ ಇಂಬುಕೊಡುವೆ ಫಲಭೋಗಿಸಲೀವೇ ಎಂಬನುಡಿ ಶ್ರುತಿಶಾಸ್ತ್ರಸಿದ್ಧವು ನಂಬಿಹುದು ಜಗವೆಲ್ಲ ಸತ್ಯವು ಶಂಬರಾಂತಕ ಪಿತನೆ ಎನ್ನ ಹೃದ- ಯಾಂಬರದಿ ನಿನ್ನ ಬಿಂಬ ತೋರೈ 1 ಕಾಲಕರ್ಮಾದ್ಯಷ್ಟಗುಣಗಳೆಲ್ಲವು ನಿಜ- ವೆಲ್ಲಜಡಗಳು ಮತ್ತು ಅಚೇತನಂಗಳೈ ಶೀಲ ಮೂರುತಿ ನೀ ಪರಮ ಚೇತನನಾಗಿ ಎಲ್ಲ ಕಾಲದಿ ನಿನ್ನ ನಿಯಮನಂಗಳೈ ಕಾಲಕರ್ಮಗುಣಂಗಳೇನಿಹುದೆಲ್ಲ ಫಲಪ್ರದಾನವ ಮಾಡೆ ಶಕ್ತಿ ಜಡಕೆಂತಿಹುದಯ್ಯ ಕಾಲನಾಮಕ ನೀನೆ ಸರ್ವ ಕಾಲದಲಿ ಸ್ವಾತಂತ್ರ್ಯ ನಿನ್ನದೋ ಇಲ್ಲ ಘನ ಸಮರಿಲ್ಲ ಸರ್ವಕರ್ಮ ಫಲವೆಲ್ಲ ನೀನೆ ದಾತೃವೋ 2 ಮರ್ಮವರಿಯೆನೊ ದೇವ ಧರ್ಮಭ್ರಷ್ಟನಾದೆ ಕರ್ಮಫಲಾನುಭವಮಾಡಿ ಬೆಂಡಾದೆನು ಕರ್ಮ ತಾ ಶಿಕ್ಷಿಸಲರಿಯದು ನ್ಯಾಯ ಧರ್ಮಾಧಿಪತಿ ಭೀಕರ ಫಲಕೊಟ್ಟು ಶಿಕ್ಷಿಪಂತೆ ಧರ್ಮಮೂರುತಿ ಶುದ್ಧನಿಷಿದ್ಧಕರ್ಮಂಗಳಿಗೆ ಪೂರ್ಣಫಲವಿತ್ತು ಸಮನೆಂದೆನಿಸಿರುವೆ ಕರ್ಮಮೋಚಕ ನೀನೆ ಸಕಲ ಕರ್ಮಪ್ರದನೆಂದೆನಿಸಿ ಪೂರ್ವ- ಕರ್ಮಫಲ ಭೋಗಿಸಲು ಜನ್ಮವನಿತ್ತು ಕರ್ಮಪ್ರವಹದೊಳಿಡುವೇ 3 ವಿಮುಖನಾಗಿಹೆ ಶ್ರುತಿಸ್ಮøತಿಶಾಸ್ತ್ರಧರ್ಮಕೆ ಪ್ರಮುಖನಾಗಿಹೆ ದುಷ್ಕರ್ಮ ಮಾರ್ಗದಲ್ಲಿ ಕರ್ಮಕಲಾಪದ ಧರ್ಮ ಮರ್ಮವನರಿಯೆ ಹೆಮ್ಮೆಯಿಂದಲಿ ನಾನಾ ಕರ್ಮಕೂಪದಲಿರುವೆ ಪೆರ್ಮೆಗೋಸುಗ ಅಧರ್ಮವೆಷ್ಟೋ ಮಾಡ್ದೆ ಒಮ್ಮೆಗಾದರು ಸದ್ಧರ್ಮಾಚರಿಸಲಿಲ್ಲ ಕರ್ಮ ಅಕರ್ಮ ವಿಕರ್ಮ ಪರಿಚಯವಿಲ್ಲ ಜನ್ಮಕೆ ಧರ್ಮಪುತ್ರನೆ ದ್ವಂದ್ವಕರ್ಮಸಮರ್ಪಿಸಲು ಸನ್ಮತಿಯ ಕೊಟ್ಟಿನ್ನು 4 ಬೆಟ್ಟದೊಡೆಯನೆ ಶ್ರೀ ವೇಂಕಟೇಶ ನೀ ತುಷ್ಟಿಯಾದರೆ ನಿನ್ನಿಷ್ಟದಂತೆ ಫಲವು ಸೃಷ್ಟಿಯೊಳು ಪುಟ್ಟಿಸಿ ದುಷ್ಟಕರ್ಮದ ಪಾಶ ಕಟ್ಟಿನೊಳಿಟ್ಟೆನ್ನ ಕಷ್ಟಪಡಿಸುವರೇ ಸೃಷ್ಟೀಶ ಉರಗಾದ್ರಿವಾಸ ವಿಠಲ ಎನ್ನ ನೀನಿಟ್ಟಿರುವಷ್ಟುಕಾಲ ಧಿಟ್ಟಭಕುತಿಯ ಕೊಟ್ಟು ದಿಟ್ಟ ರಕ್ಷಿಸು ಇಷ್ಟಮೂರುತಿಯೆ ಇಷ್ಟದಾಯಕನೆಂದು ನಾನಿಷ್ಟು ನುಡಿದೆನೋ ನಿನ್ನ ಎನ್ನ ಮನೋಭೀಷ್ಟೆ ಸಲಿಸೆ ನಿನ್ನಿಷ್ಟವಯ್ಯ5
--------------
ಉರಗಾದ್ರಿವಾಸವಿಠಲದಾಸರು
ಭವ ಮುಖ್ಯ ಸುರಗಣ ಮುನಿನಿಕರ ಸಿದ್ಧ ಪರಿವಾರವು 1 ಸರಿತು ಪ್ರವಾಹದಂತೆ ವಾಗ್ವೈಖರಿಯಿಂದ ನಿರುತ ತೃಪ್ತಿಪಡಿಸಲಾರರು ಇನ್ನು 2 ಉರು ಉಗ್ರಜಾತಿ ಅಸುರ ಕುಲದಿ ಪುಟ್ಟಿದ ನಾನು ನೆರೆ ತುತಿಸಿ ತೃಪ್ತಿಪಡಿಸಲಾಪೆನೆ ನಿನ್ನ 3 ಆದೊಡೆ ಕುಲ ರೂಪ ವಯಸ್ಸು ವಿದ್ಯೆಗೆ ನೀನು ಮೋದಪಡುವನಲ್ಲ ಭಕ್ತಿಯೊಂದಕೆ ನಲಿವೆ 4 ಕರಿರಾಜನೇ ಸಾಕ್ಷಿ ಕರುಣಾಮಯನೇ ನಿನ ಗಿರುವುದೇ ವೈಷಮ್ಯ ? ಭಕ್ತಗೆ ವಶ ನೀನು 5 ಅರವಿಂದನಾಭ ನಿನ್ನ ಚರಣಾರವಿಂದವನು ನಿರುತ ಭಜಿಸುವ ಉತ್ತಮನೆನಿಸುವ 6 ಸರುವ ಸ್ವತಂತ್ರ ಪೂರ್ಣಕಾಮ ನಿನ್ನನು ನಾವು ಹಿರಿದಾಗಿ ಆರಾಧಿಸಿ ತೃಪ್ತಿಪಡಿಸುವುದೇನೊ 7 ನಾವು ಮಾಡುವ ಕರ್ಮಸಾಧನದಿಂದ ನಿನಗೆ ಯಾವ ಫಲವೂ ಇಲ್ಲ ! ಫಲವೆಲ್ಲ ನಮಗಯ್ಯಾ 8 ಬಿಂಬವನಲಂಕರಿಸೆ ಕನ್ನಡಿಯೊಳಗೆ ಪ್ರತಿ ಬಿಂಬಕೆ ಅಲಂಕಾರ ಕಾಣುವ ಪರಿಯಲಿ 9 ತರಳನ ಮೊರೆಯನು ಲಾಲಿಸಿ ಪಾಲಿಸೊ 10 ನಮ್ಮ ಸಾಧನೆಗಾಗಿ ನಿನ್ನ ಆರಾಧಿಪೆವು ಬೊಮ್ಮನಯ್ಯನೆ ನಿನ್ನ ಆನುಗ್ರಹದಿಂದಲಿ 11 ಬ್ರಹ್ಮಾದಿ ಸುರರೆಲ್ಲ ನಿನ್ನ ಸೇವಕರಯ್ಯಾ ಹಮ್ಮು ಮತ್ಯಾತಕಯ್ಯಾ ನಮ್ಮಂಥವರಿಗೆಲ್ಲ 12 ನಿನ್ನ ಕೋಪಕೆ ಅಂಜಿ ನಡುಗದವರುಂಟೆ ಮನ್ನಿಸಿ ಕೋಪವ ಉಪಶಮ ಮಾಡೋ ಸ್ವಾಮಿ 13 ನಿನ್ನ ಈ ಉಗ್ರರೂಪ ಧ್ಯಾನವು ಜನರಿಗೆ ಘನ ಭಯವ ಕಳೆಯೆ ಸಾಧನವಾಗಲಿ 14 ದಿಗಿಲು ಪುಟ್ಟಿಸುವಂಥ ಈ ನಿನ್ನ ಮುಖ ಜಿಹ್ವೆ ಭೃಕುಟಿ ಕರಾಳ ದಂಷ್ಟ್ರ 15 ಕೊರಳಲ್ಲಿ ಧರಿಸಿಹ ಕರುಳ ಮಾಲಿಕೆ ರಕ್ತ ಬೆರದ ಕೇಸರ ಮತ್ತೆ ನಿಗುರಿದ ಕರ್ಣಗಳು 16 ಲೋಕ ಭಯಂಕರವಾಗಿವೆ ಆಂದೊಡೆ ಶ್ರೀಕರ ನಿನ್ನ ಕೃಪೆಯಲಿ ನಾನವಕೆ 17 ಅಂಜುವನಲ್ಲ ಕೇಳು ಕಂಜನಾಭನೆಯಿನ್ನು ಅಂಜುವೆನೊಂದಕೆ ಸಂಸಾರ ಚಕ್ರಕೆ 18 ತೊಳಲಿಸÀುವುದು ಜನ ದುಃಖದಿ ಸಂಸಾರ ಬಲು ಪರಿಯಲಿ ಅದು ದುಃಖದಿ ಸಾಗರ 19 ಇಷ್ಟವಾದದ್ದು ಕೊಡದೆ ಇಷ್ಟವಿಲ್ಲದ್ದುಣಿಸಿ ಭವ 20 ಸಂಸಾರ ಸಾಗರ ದಾಟಿಸೋ ಮಹಾಮಹಿಮ ಸಂಶಯವಿಲ್ಲದೆ ಸೇರಿಸೋ ನಿನ್ನ ಬಳಿ 21 ಕರುಣಾಸಾಗರ ನಮ್ಮ ಕರಿಗಿರೀಶನೆ ಸ್ವಾಮಿ ತರಳನ ಮೊರೆಯನು ಲಾಲಿಸಿ ಪಾಲಿಸೊ 22 ( ಪ್ರಹ್ಲಾದ ನರಹರಿಯನ್ನು ಸ್ತುತಿಸಿದ್ದು )
--------------
ವರಾವಾಣಿರಾಮರಾಯದಾಸರು